ಗುರುರಾಜ ದೇಸಾಯಿ
“ಡ್ರಗ್ಸ್” ರಾಜಧಾನಿ ಬೆಂಗಳೂರನ್ನು ಬೆಚ್ಚಿ ಬೀಳಿಸುತ್ತಿರುವ ಪದ. ಸೆಲೆಬ್ರಿಟಿಗಳ ಬದುಕಿಗೆ ನೇಣಿನ ಕುಣಿಕೆಯಾಗಿರುವ ಡ್ರಗ್ಸ್ ಮಾಫೀಯಾ ತನ್ನ ಕದಂಬ ಬಾಹುವನ್ನು ಎಲ್ಲಡೆ ಚಾಚಿದೆ. ಐಟಿ ಸಿಟಿ ಎಂಬ ಖ್ಯಾತಿ ಪಡೆದಿದ್ದ ಬೆಂಗಳೂರು ಈಗ ಡ್ರಗ್ಸ್‌ನಿಂದಾಗಿ ಕುಖ್ಯಾತಿ ಪಡೆದಿದೆ.
ದಿನ ನಿತ್ಯ ಪೇಪರ್ ಮೇಲೆ ಕಣ್ಣು ಹಾಯಿಸಿದರೆ, ಟಿವಿಯ ಪರದೆಯ ಮೇಲೆ ದಿನಕ್ಕೆ ಒಂದಾದರೂ ಡ್ರಗ್ಸ್ ಪ್ರಕರಣ ಬೆಳಕಿಗೆ ಬರುತ್ತಲೇ ಇದೆ. ನಟ/ನಟಿ, ಸೆಲೆಬ್ರಿಟಿ, ವಿದೇಶಿ ಪ್ರಜೆ ಹೀಗೆ ಡ್ರಗ್ಸ್ ಮಾಫೀಯಾದಲ್ಲಿ ಸಿಲುಕಿಕೊಂಡವರ ಬಗ್ಗೆ ನಾವು ನೋಡುತ್ತಲೇ ಇದ್ದವೇ. ಡ್ರಗ್ಸ್ ವಿರುದ್ಧ ಪೊಲೀಸ್ ಇಲಾಖೆ ಕಣ್ಣಿಟ್ಟರೂ ಈ ಅಕ್ರಮ ವ್ಯಾಪಕವಾಗಿ ಮುಂದುವರಿದಿದೆ. ಡ್ರಗ್ಸ್ ದಂಧೆಯ ಮೂಲವನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ. ಇನ್ನೂ ನಿಯಂತ್ರಣ ದೂರದ ಮಾತು.
ಒಂದು ಅಂಕಿ ಅಂಶದ ಪ್ರಕಾರ 18 ರಿಂದ 45 ವಯೋಮಾನದವರು ಡ್ರಗ್ಸ್ ವ್ಯಸನಿಗಳಾಗುತ್ತಾದ್ದಾರೆ. ಈ ವಯಸ್ಸು ಮನೆ, ದೇಶ, ಮನಸ್ಸು ಕಟ್ಟುವ ವಯಸ್ಸು ಆದರೆ ಡ್ರಗ್ಸ್ ಎಂಬ ಮಾಯಾಲೋಕಕ್ಕೆ ದಬ್ಬಲ್ಪುಡುತ್ತಿದ್ದಾರೆ. ಯುವಕ,ಯುವತಿಯರು ಅರಿವಿಲ್ಲದೆ ಬಲಿಯಾಗುತ್ತಿದ್ದಾರೆ. ಈ ಜಾಲ ವ್ಯವಸ್ಥಿತವಾಗಿ ಬಹಳ ವರ್ಷದಿಂದ ನಡೆದು ಬರ್ತಿದೆ. ಈ ಡ್ರಗ್ಸ್ ಮಾಫೀಯಾ ಹಲವು ಹಂತದಲ್ಲಿ ಬೆಳೆದು ಸೆಲೆಬ್ರಿಟಿಯವರೆಗೆ ಬಂದು ನಿಂತಿದೆ.
ರಾಜ್ಯದಲ್ಲಿ ಡ್ರಗ್ಸ್ ದಂಧೆ ನಿಯಂತ್ರಣಕ್ಕೆ ಬಾರದ ಪರಿಣಾಮ, ಕಳೆದ ಐದು ವರ್ಷಗಳಲ್ಲಿ 11,718 ಪ್ರಕರಣಗಳು ದಾಖಲಾಗಿವೆ. ಡ್ರಗ್ಸ್ ವಿರುದ್ಧ ಪೊಲೀಸ್ ಇಲಾಖೆ ಕಣ್ಣಿಟ್ಟರೂ ಈ ಅಕ್ರಮ ವ್ಯಾಪಕವಾಗಿ ಮುಂದುವರಿದಿದೆ. ಡ್ರಗ್ಸ್ ದಂಧೆಯಲ್ಲಿ ಸಿನಿಮಾ ನಟ ನಟಿಯರ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಡ್ರಗ್ ನಿಯಂತ್ರಣಕ್ಕೆ ಹೆಚ್ಚಿನ ಒತ್ತು ನೀಡುತ್ತು, ಆದರೂ ಡ್ರಗ್ಸ್ ದಂಧೆಯ ಮೂಲ ನಿಯಂತ್ರಣ ಇನ್ನೂ ಸಾಧ್ಯವಾಗಲಿಲ್ಲ. ಕಳೆದ ಐದು ವರ್ಷ ಅಂಕಿ ಅಂಶಗಳು ಆತಂಕಕಾರಿ ಮಾಹಿತಿಯನ್ನು ಹೊರಹಾಕುತ್ತಿವೆ. 2018 ರಿಂದ ಇಲ್ಲಿಯವರೆಗೆ ಒಟ್ಟು 12, 836 ಪ್ರಕರಣಗಳು ಪತ್ತೆಯಾಗಿದ್ದು, 1997 ಪೆಡ್ಲ್‌ರ್‌ಗಳ ಬಂಧನವಾಗಿದೆ. ಪ್ರಕರಣಗಳ ಸಂಖ್ಯೆಗೂ, ಬಂದಿತ ಪೆಡ್ಲ್‌ರ್ಗಳ ಸಂಖ್ಯಗೂ ಸಾಕಷ್ಟು ವ್ಯತ್ಯಾಸ ಇದೆ. ಪೊಲೀಸ್ ಇಲಖೆಯೇ ಈ ದಂಧೆಯಲ್ಲಿ ತೊಡಗಿದೆಯಾ ಎಂಬ ಅನುಮಾನ ಸಹಜವಾಗಿ ಮೂಡುತ್ತದೆ. ಅನೇಕ ಪ್ರಕರಣಗಳಲ್ಲಿ ಪೊಲೀಸರು ಭಾಗಿಯಾಗಿ ಅಮಾನತ್ತಾದ ಉದಾಹರಣೆಗಳು ಇವೆ.
ಡ್ರಗ್ಸ್ ಮುಕ್ತ ಕರ್ನಾಟಕ : ಮಾದಕ ವ್ಯಸನಗಳ ಸಹವಾಸ ಮಾಡುವವರಿಗೆ ಕಠಿಣ ಶಿಕ್ಷೆ ಕಟ್ಟಿಟ್ಟ ಬುತ್ತಿ. ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಗುರಿ ಎಂದು ಆಳುವ ಸರಕಾರಗಳು ಹೇಳುತ್ತಲೆ ಇವೆ. 1908 ಎಂಬ ಸಹಾಯವಾಣಿಯನ್ನು ಅದಕ್ಕಾಗಿ ನೀಡಲಾಗಿದೆ. ಮಾದಕ ದ್ರವ ಪದಾರ್ಥಗಳ ವಹಿವಾಟನ್ನು ತಡೆಗಟ್ಟಲು ಹಾಗೂ ಪತ್ತೆಮಾಡಲು ಹಾಗೂ ಹದಿಹರೆಯದ ಯುವಕ ಮತ್ತು ಯುವತಿಯರನ್ನು ಇಂತಹ ದುಶ್ಚಟಗಳಿಂದ ತಡೆಗಟ್ಟುವ ಸಲುವಾಗಿ ಎಲ್ಲ ರೀತಿಯ ಸಾಧ್ಯವಿರುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. ಆದರೆ ಅದರಲ್ಲಿ ಎಷ್ಟು ಜಾರಿಯಾಗುತ್ತಿದೆ ಎಂಬುದು ಪ್ರಶ್ನೆ.
ಅಧಿಕಾರಿ, ಸಿಬ್ಬಂದಿಗಳಿಗೆ ಮಾದಕ ದ್ರವ್ಯ (ಡ್ರಗ್)ಗಳ ಮಾರಾಟ ಮತ್ತು ಸೇವಿಸುವವರ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ, ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆಹಚ್ಚಲು ಸೂಚಿಸಲಾಗಿದೆ. ಮಾದಕ ವಸ್ತುಗಳ ಕಾಯ್ದೆ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳ ತನಿಖೆಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಲು ತನಿಖಾಧಿಕಾರಿಗಳಿಗೆ ಆಯೋಜನೆ ಮಾಡಲಾಗಿದೆ. ಆದರೆ ಅಗತ್ಯ ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿಲ್ಲ. ಆದರೆ ಸಿಬ್ಬಂದಿ ಕೊರತೆಯಿಂದಾಗಿ ಪತ್ತೆ ಹಚ್ಚಲು ಮತ್ತು ಡ್ರಗ್ಸ್ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ.
ಬಾರ್ ಮತ್ತು ರೆಸ್ಟೋರೆಂಟ್, ಕಾಫಿ-ಡೇ, ಪಬ್, ಡಾನ್ಸ್‌ಬಾರ್ ಮುಂತಾದ ಯುವಕರು ಹೆಚ್ಚಾಗಿ ಸೇರುವ ಸ್ಥಳಗಳು, ಶಾಲಾ ಕಾಲೇಜು ಆವರಣ, ಬಸ್ ನಿಲ್ದಾಣ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಮಾದಕ ದ್ರವ್ಯ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಕಾನೂನಿನ ರೀತಿ ಕ್ರಮ ಜರುಗಿಸಲು ಅವಕಾಶ ಇದೆ.
ಶಾಲಾ – ಕಾಲೇಜ್ ವಿದ್ಯಾರ್ಥಿಗಳೇ ಟಾರ್ಗೇಟ್ : ಡ್ರಗ್ಸ್ ದಂಧೆಕೋರರ ಜಾಲಕ್ಕೆ ಶಾಲಾ- ಕಾಲೇಜ್ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಕಾರಣಾಂತರಗಳಿಂದ ಶಾಲಾ – ಕಾಲೇಜ್ ತೊರದ ವಿದ್ಯಾರ್ಥಿಗಳು ಡ್ರಗ್ಸ್ ಪೆಡ್ಲರ್‌ಗಳಾಗಿ ಬದಲಾಗುತ್ತಿದ್ದಾರೆ. ಕಬ್ಬನ್ ಪೇಟೆಯಲ್ಲಿ ದಾಖಲಾದ ದೂರಿನ ಪ್ರಕಾರ 9 ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಆನ್‌ಲೈನ್‌ನಲ್ಲಿ ಡ್ರಗ್ಸ್ ತರಿಸಿಕೊಂಡಿದ್ದ ಎಂಬ ದಾಖಲೆ ಇದೆ. ಅನೇಕ ನಟ, ನಟಿಯರು, ಸೆಲೆಬ್ರಿಟಿಗಳು ಡ್ರಗ್ಸ್ ಎಂಬ ಲೋಕವನ್ನು ಹೊಕ್ಕಾಗಿದೆ. ಅನೇಕರನ್ನು ಬಂಧಿಸಲಾಗಿದೆ. ಕೋರ್ಟ್ ನಲ್ಲಿ ಕೆಲಪ್ರಕರಣಗಳು ನಡೆಯುತ್ತಿವೆ.
ಡ್ರಗ್ಸ್ ಮಾಫೀಯಾ ಬಗ್ಗೆ ಜಾಗೃತಿ ಮೂಡಿಸಿದ್ದ ಚಿತ್ರಗಳು : ಮಾದಕವಸ್ತು ಕಥಾಹಂದರ ಹೊಂದಿರುವ ಕನ್ನಡದ ಸಿನಿಮಾಗಳಿಗೆ ಏನೂ ಬರವಿಲ್ಲಕನ್ನಡ ಸಿನಿಮಾ ಎಂಬ ಮಾಯಾಜಾಲದ ಪರದೆ ತೆರೆದಾಗಿನಿಂದ ಮಾದಕವಸ್ತುಗಳ ಅನಾಹುತದ ಕುರಿತಾದ ಹಲವಾರು ಚಲನಚಿತ್ರಗಳು ಬಂದಿವೆ.
ಮಾದಕವಸ್ತುಗಳ ಸೇವನೆಯಿಂದ ಆಗಬಹುದಾದ ಅನಾಹುತಗಳ ಕುರಿತ ಸಂದೇಶ ಇಂದಿನ ಚಲನಚಿತ್ರಗಳಲ್ಲಿ ಇರುತ್ತದಾದರೂ, ಅದನ್ನು ವಿಜೃಂಭಿಸುವ ರೀತಿ ಈ ಸಂದೇಶವನ್ನು ಮರೆಮಾಚಿ ಬಿಡುತ್ತದೆ. ಇತ್ತಿಚೀಗೆ ಬಿಡುಗಡೆಗೊಂಡ ಕೆಲವು ಚಿತ್ರಗಳನ್ನೇ ಗಮನಿಸುವುದಾದರೆ ಈ ವಾದದಲ್ಲಿ ಸತ್ಯಾಂಶವಿದೆ ಅನಿಸದಿರದು. ಆದರೂ ಸಾಮಾಜಿಕ ಪರಿವರ್ತನೆಯ ಜವಾಬ್ದಾರಿ ಹೊತ್ತಿರುವ ಚಲನಚಿತ್ರಗಳು ಮಾದಕವಸ್ತು ಎಂಬ ಸಾಮಾಜಿಕ ಪಿಡುಗಿನ ಕುರಿತು ಬೆಳಕು ಚೆಲ್ಲುತ್ತಿವೆ ಎಂದು ಹೇಳಲು ಅಡ್ಡಿ ಇಲ್ಲ. ಹಾಗಾದರೆ ಮಾದಕವಸ್ತು ಕಥಾಹಂದರ ಉಳ್ಳ ಚಿತ್ರಗಳನ್ನು ನೋಡುವುದಾದರೆ.
ಶಬ್ದವೇಧಿ : ಡಾ. ರಾಜ್‌ಕುಮಾರ್ ನಟನೆಯ ಈ ಸಿನಿಮಾದಲ್ಲಿ ಡ್ರಗ್ಸ್ ಮಾಫಿಯಾಗೆ ಯುವಜನತೆ ಬಲಿಯಾಗುತ್ತಿರುವ ಸಮಸ್ಯೆಯ ವಿರುದ್ಧ ಹೋರಾಡುವ ಪೊಲೀಸ್ ಅಧಿಕಾರಿಯ ಕಥೆಯಿದೆ. ಇಡೀ ಡ್ರಗ್ಸ್ ಮಾಫಿಯಾವನ್ನೇ ಬುಡಸಮೇತ ಕಿತ್ತು ಹಾಕಬೇಕು ಎಂದು ಕಥಾನಾಯಕ ಹೋರಾಡುತ್ತಿದ್ದರೆ, ಮನೆಯಲ್ಲಿ ಆತನ ಪುತ್ರನೇ ಡ್ರಗ್ಸ್ ದಾಸನಾಗಿರುತ್ತಾನೆ. ಡ್ರಗ್ಸ್ ಅನ್ನು ಬೇರೆ ಬೇರೆ ಮಾರ್ಗದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹೇಗೆ ಸರಬರಾಜು ಮಾಡಲಾಗುತ್ತದೆ ಎಂಬುದರ ಬಗ್ಗೆಯೂ ಇದರಲ್ಲಿ ವಿವರವಿದೆ. ಇದರ ಸೇವನೆಯಿಂದ ಯುವಕರಿಗೆ ಆಗುವ ತೊಂದರೆ ಬಗ್ಗೆಯೂ ಪ್ರಸ್ತಾಪವಿದ್ದ ಸಿನಿಮಾವಿದು.
ಲೂಸಿಯಾ : ನೀನಾಸಂ ಸತೀಶ್ ನಟನೆಯ ಈ ಸಿನಿಮಾದಲ್ಲಿ ಕನಸು ಕಾಣಲು ಮಾತ್ರೆಯೊಂದನ್ನು ತೆಗೆದುಕೊಳ್ಳುವ ಕಥೆಯಿತ್ತು. ಇದು ಸಹ ಒಂದು ರೀತಿಯಲ್ಲಿ ಮಾದಕ ದ್ರವ್ಯವೇ. ಕನಸನ್ನೇ ನಿಜ ಎಂದುಕೊಂಡು ಸ್ಟಾರ್ ನಟನೊಬ್ಬ ಅನುಭವಿಸುವ ಮಾನಸಿಕ ಯಾತನೆಯನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ಆ ಮಾತ್ರೆ ತೆಗೆದುಕೊಳ್ಳುವವರ ಮಾನಸಿಕ ಸ್ಥಿತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಈ ಚಿತ್ರದಲ್ಲಿ ತೋರಿಸಲಾಗಿದೆ.
ಕೆಂಡಸಂಪಿಗೆ : ಈ ಚಿತ್ರದಲ್ಲಿಯೂ ಮಾದಕ ದ್ರವ್ಯ ಜಾಲದ ಚರ್ಚೆಯಿದೆ. ಇಡೀ ಸಿನಿಮಾ ಕಥೆಯ ಮೂಲ ಡ್ರಗ್ಸ್ ದಂಧೆಯೇ ಆಗಿರುತ್ತದೆ. ಇದರಲ್ಲಿ ಪೊಲೀಸರು ಡ್ರಗ್ಸ್ ದಂಧೆಯಿಂದ ಹಣ ಹೇಗೆ ಮಾಡುತ್ತಾರೆ, ಅದನ್ನು ಹೇಗೆ ಮುಚ್ಚಿ ಹಾಕುತ್ತಾರೆ ಮತ್ತು ಅಮಾಯಕರನ್ನು ಈ ಹೇಗೆ ಸಿಲುಕಿಸುತ್ತಾರೆ ಎಂಬ ಬಗ್ಗೆ ಕಥೆಯಿದೆ.
ರಿಷಿ : ಶಿವರಾಜ್‌ಕುಮಾರ್ ಮತ್ತು ವಿಜಯ್ ರಾಘವೇಂದ್ರ ನಾಯಕರಾಗಿ ನಟಿಸಿರುವ ಈ ಚಿತ್ರದಲ್ಲಿಯೂ ಮಾದಕ ವಸ್ತು ದಂಧೆಯ ಪ್ರಸ್ತಾಪವಿದೆ. ಇದರಲ್ಲಿ ವಿಜಯ್ ರಾಘವೇಂದ್ರ ಮಾದಕ ದ್ರವ್ಯ ವ್ಯಸನಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ವ್ಯಸನದಿಂದ ಅವರನ್ನು ಹೊರತರಲು ಶಿವರಾಜ್‌ಕುಮಾರ್ ಕಷ್ಟಪಡುತ್ತಾರೆ. ಜತೆಗೆ ಡ್ರಗ್ ಪೆಡ್ಲರ್‌ಗಳನ್ನು ಸಹ ಹಿಡಿದು ಪೊಲೀಸರಿಗೆ ಒಪ್ಪಿಸುತ್ತಾರೆ. ಈ ಚಿತ್ರ ಕನ್ನಡದಲ್ಲಿ ಯಶಸ್ವಿಯಾದ ನಂತರ ತೆಲುಗಿಗೂ ರೀಮೇಕ್ ಆಗಿತ್ತು.
ಹೀಗೆ ಡ್ರಗ್ಸ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಆದರೆ ಸರಕಾರ ಜೇಗೃತಿಗೆ ನೀಡುತ್ತಿರುವಷ್ಟು ಮಹತ್ವವನ್ನು ಮಟ್ಟ ಹಾಕುವುದಕ್ಕೆ ನೀಡುತ್ತಿಲ್ಲ. ಈ ದಂಧೆಯನ್ನು ಹತ್ತಿಕ್ಕಲೇ ಬೇಕು. ಯಾರು ಯಾರು ಇದ್ದಾರೆ ಅನ್ನೋದು ಬಹಿರಂಗವಾಗಬೇಕು. ರಾಜಕಾರಣಿಗಳ, ಚಿತ್ರರಂಗದವರ,ಉದ್ಯಮಿಗಳ ಮಕ್ಕಳ ಡೌಲು ಎಲ್ಲರಿಗೂ ತಿಳಿಯಬೇಕು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು. ಅದಕ್ಕಾಗಿ ಪೊಲೀಸ್ ಇಲಾಖೆಯನ್ನು ಬಲಪಡಿಸಬೇಕು. ಸಿಬ್ಬಂಧಿಗಳ ನೇಮಕ ಭರ್ತಿಯಾಗಬೇಕು. ಪೊಲೀಸರಿಗೆ ಈ ವಿಚಾರದಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು.
ಸಾಮಾಜಿಕ ಬದುಕನ್ನೆ ನಾಶಮಾಡುವ ಭಯಂಕರ ಸಾಂಕ್ರಾಮಿಕ ರೋಗವಾಗಿ ಡ್ರಗ್ಸ್ ಜನರ ನಡುವೆ ಹರಿದಾಡುತ್ತಿದೆ. ಇದನ್ನು ನಿಯಂತ್ರಿಸುವ ಹಾಗೂ ಯುವಜನರನ್ನು ರಕ್ಷಿಸುವ ದೊಡ್ಡ ಜವಾಬ್ದಾರಿ ಸರಕಾರದ ಮೇಲೆ ಇದೆ. ಸರಕಾರಗಳು ಆ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಿ.