“ರೈತರು ತಮ್ಮ ಜೀವನಾಧಾರವನ್ನು ಉಳಿಸಿಕೊಳ್ಳಲು ಮತ್ತು ದೇಶದ ಆಹಾರ ಭದ್ರತೆಯನ್ನು ಸುರಕ್ಷಿತಗೊಳಿಸಲು ಅಗತ್ಯವಾದ ಬೆಂಬಲ ಮತ್ತು ಸಬ್ಸಿಡಿಗಳನ್ನು ಪಡೆಯುವಂತಾಗಬೇಕು”
ಭಾರತ ಸರಕಾರ ಪೋಷಣಾಂಶ ಆಧಾರಿತ ಸಬ್ಸಿಡಿ(ಎನ್‍ಬಿಎಸ್) ಅಡಿಯಲ್ಲಿ ರಸಗೊಬ್ಬರದ ಮೇಲಿನ ಸಬ್ಸಿಡಿಗಳನ್ನು ಗಮನಾರ್ಹವಾಗಿ ಇಳಿಸುವ ನಿರ್ಧಾರವನ್ನು ದಿನಾಂಕ ಅಕ್ಟೋಬರ್ 26, 2023ರ ಅಧಿಸೂಚನೆಯಲ್ಲಿ ಘೋಷಿಸಿದೆ. ರಸಗೊಬ್ಬರ ಸಬ್ಸಿಡಿಗಳಲ್ಲಿ ಈ ಹಠಾತ್ ಮತ್ತು ತೀವ್ರ ಕಡಿತವು ಭಾರತದಾದ್ಯಂತ ರೈತರು ಮುಂಗಾರು ಬೆಳೆ ಋತುವಿಗೆ ಸಜ್ಜಾಗುತ್ತಿರುವ ನಿರ್ಣಾಯಕ ಸಮಯದಲ್ಲಿ ಬರುತ್ತಿದೆ ಎಂದು ಅಖಿಲ ಭಾರತ ಕಿಸಾನ್ ಸಭಾ ಈ ನಿರ್ಧಾರದ ಬಗ್ಗೆ ತನ್ನ ಆಳವಾದ ಕಳವಳ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿದೆ.
ರಸಗೊಬ್ಬರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಅತ್ಯಂತ ಕೆಟ್ಟ ಕಾಲ ಕಳೆದಿದೆ ಎಂದು ನಿರಾಳವಾಗುತ್ತಿರುವಾಗಲೇ , ಬಿಕ್ಕಟ್ಟಿಗೆ ಸ್ಪಂದಿಸಿ ತಂದ ನೀತಿಗಳನ್ನು ಸರ್ಕಾರವು ತ್ವರಿತವಾಗಿ ಹಿಂದಕ್ಕೆ ಪಡೆಯುತ್ತಿದೆ. ರಸಗೊಬ್ಬರಗಳಿಗೆ, ವಿಶೇಷವಾಗಿ ಫಾಸ್ಫೇಟ್ ಮತ್ತು ಪೊಟ್ಯಾಶ್‌ಗಳಿಗೆ ಸಬ್ಸಿಡಿಗಳನ್ನು ತೀವ್ರವಾಗಿ ಕಡಿತಗೊಳಿಸಲಾಗಿದೆ, ಇದು ಭಾರತೀಯ ರೈತರ ದುಃಸ್ಥಿತಿಯನ್ನು ಉಲ್ಬಣಗೊಳಿಸುತ್ತದೆ ಎಂದು ಎಐಕೆಎಸ್ ಹೇಳಿದೆ. ಈ ಪ್ರಮುಖ ರಸಗೊಬ್ಬರಗಳ ಅಂತರರಾಷ್ಟ್ರೀಯ ಬೆಲೆಗಳು ಗಗನಕ್ಕೇರಿರುವ ಸಮಯದಲ್ಲಿ ಸಬ್ಸಿಡಿಗಳಲ್ಲಿನ ಈ ಕಡಿತವು ಭಾರತೀಯ ಕೃಷಿಯನ್ನು ಮಾರುಕಟ್ಟೆಯ ಏರಿಳಿತಗಳಿಗೆ ಈಡು ಮಾಡುತ್ತಿದೆ.
ವಿನಿಮಯ ದರದ ತೀವ್ರ ಸವಕಳಿಯನ್ನು ಲೆಕ್ಕಹಾಕಿದಾಗ, ಅಕ್ಟೋಬರ್ 2023 ರಲ್ಲಿ ಫಾಸ್ಫೇಟ್‌ಗಳ ಮೇಲಿನ ಸಬ್ಸಿಡಿಯು ಜೂನ್ 2020 ರಲ್ಲಿನ ಸಬ್ಸಿಡಿ ದರಕ್ಕಿಂತ ಕೇವಲ 9% ಹೆಚ್ಚಾಗಿದೆ ಎಂದು ದತ್ತಾಂಶಗಳು ಬಹಿರಂಗಪಡಿಸುತ್ತವೆ. ರಾಕ್ ಫಾಸ್ಫೇಟ್‌ನ ಅಂತರರಾಷ್ಟ್ರೀಯ ಬೆಲೆಗಳು ಜೂನ್ 2020 ರ ಬೆಲೆಗಳಿಗಿಂತ ಸರಿಸುಮಾರು 4.6 ಪಟ್ಟು ಹೆಚ್ಚಿವೆ. ಪೊಟ್ಯಾಷ್ ಪರಿಸ್ಥಿತಿಯು ಇನ್ನಷ್ಟು ಭೀಕರವಾಗಿದೆ, ಅಲ್ಲಿ ಸಬ್ಸಿಡಿಯನ್ನು ಬಿಕ್ಕಟ್ಟಿನ ಪೂರ್ವದ ಮಟ್ಟದ 23%ಕ್ಕೆ ಕಡಿತ ಮಾಡಲಾಗಿದೆ. ವಿನಿಮಯ ದರದ ಸವಕಳಿಯನ್ನು ಪರಿಗಣಿಸುವಾಗ ಈ ಕಡಿತ 80 %ದಷ್ಟಾಗುತ್ತದೆ. ತದ್ವಿರುದ್ಧವಾಗಿ, ಪೊಟ್ಯಾಸಿಯಮ್ ಕ್ಲೋರೈಡ್‌ನ ಅಂತರರಾಷ್ಟ್ರೀಯ ಬೆಲೆಗಳು ಜೂನ್ 2020 ನಲ್ಲಿದ್ದಕ್ಕಿಂತ 1.75 ಪಟ್ಟು ಹೆಚ್ಚಾಗಿವೆ. ಈ ತೀವ್ರವಾದ ಸಬ್ಸಿಡಿ ಕಡಿತಗಳು ಅನಿವಾರ್ಯವಾಗಿ ಭಾರತದಲ್ಲಿ ರಸಗೊಬ್ಬರ ಬೆಲೆಗಳಲ್ಲಿ ತೀವ್ರ ಹೆಚ್ಚಳಕ್ಕೆ ಕಾರಣವಾಗುತ್ತವೆ ಎಂದು ಎಐಕೆಸ್ ಆತಂಕ ವ್ಯಕ್ತಪಡಿಸಿದೆ.
ಇದನ್ನೂ ಓದಿ : ರಸಗೊಬ್ಬರ ಕೊರತೆ : ರೈತರಿಗೆ ಸಂಕಷ್ಟ – ಸರಕಾರಕ್ಕೆ ಚಲ್ಲಾಟ
ಭಾರತದ ಆಹಾರ ಭದ್ರತೆ ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆಯ ನಡುವೆ ಆಳವಾದ ಸಂಬಂಧವಿದೆ. ಈ ಬಹುಮಹತ್ವದ ಲಾಗುವಾಡಿನಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಗಳ ಮೇಲೆ ದೇಶದ ಅವಲಂಬನೆಯು ದಶಕಗಳ ನವ ಉದಾರವಾದಿ ನೀತಿಗಳಿಂದ ಉಲ್ಬಣಗೊಂಡಿದೆ. ರಸಗೊಬ್ಬರ ಬಿಕ್ಕಟ್ಟನ್ನು ಎದುರಿಸುವ ಪ್ರಶ್ನೆಗೆ ಭಾರತ ಸರ್ಕಾರದ ಎಡಬಿಡಂಗಿ ಅವ್ಯವಸ್ಥಿತ ಮತ್ತು ವಿಳಂಬವಾದ ಸ್ಪಂದನೆ ಅದರ ಆಂತರಿಕ ಬೆಲೆಗಳ ಮೇಲಿನ ಹಣದುಬ್ಬರದ ಪರಿಣಾಮವನ್ನು ತಗ್ಗಿಸುವಲ್ಲಿ ಮತ್ತು ರಸಗೊಬ್ಬರಗಳ ಸಮರ್ಪಕ ಪೂರೈಕೆಯನ್ನು ಖಾತ್ರಿಪಡಿಸುವಲ್ಲಿ ಏನೇನೂ ಸಾಲದಾಗಿದೆ ಎಂದು ಎಐಕೆಎಸ್ ತೀವ್ರ ನಿರಾಸೆ ವ್ಯಕ್ತಪಡಿಸಿದೆ.
ಈ ಬಿಕ್ಕಟ್ಟಿನಿಂದ ಯಾವುದೇ ಗಣನೀಯ ಪಾಠಗಳನ್ನು ಕಲಿತಿಲ್ಲ ಎಂಬುದು ಸ್ಪಷ್ಟವಾಗಿದೆ. ಕೆಲವು ರಸಗೊಬ್ಬರ ಕಂಪನಿಗಳಿಗೆ ಸಬ್ಸಿಡಿ ನೀಡುವುದನ್ನು ಮುಂದುವರಿಸುತ್ತಲೇ, ಯೂರಿಯಾವನ್ನು ಹೊರತುಪಡಿಸಿ ಇತರ ರಸಗೊಬ್ಬರಗಳ ಬೆಲೆಗಳನ್ನು ನಿಯಂತ್ರಣದಿಂದ ತೆಗೆದುಹಾಕಿರುವ ಪೋಷಣಾಂಶ ಆಧಾರಿತ ಸಬ್ಸಿಡಿ (ಎನ್‍ಬಿಎಸ್) ವ್ಯವಸ್ಥೆಯು ಬದಲಾಗದೆ ಉಳಿದಿದೆ. ಕಳೆದ ಮೂರು ವರ್ಷಗಳಿಂದ, ಗೊಬ್ಬರದ ಬೆಲೆ ಏರಿಕೆ, ರಸಗೊಬ್ಬರಗಳ ಪಡಿತರ ಪೂರೈಕೆ ಮಿತಿ, ವ್ಯಾಪಕವಾದ ಕಾಳಸಂತೆ ಮತ್ತು ರಸಗೊಬ್ಬರ ಕಂಪನಿಗಳು ಮತ್ತು ಡೀಲರ್‌ಗಳ ವಿವಿಧ ರೀತಿಯ ಅವ್ಯವಹಾರಗಳ ಹೊರೆಗಳಿಂದ ರೈತರು ಸಂಕಟಗ್ರಸ್ತರಾಗಿದ್ದಾರೆ. ಈಗಾಗಲೇ ಹಲವಾರು ಸವಾಲುಗಳನ್ನು ಎದುರಿಸುತ್ತಿರುವ ಭಾರತೀಯ ರೈತರ ಭವಿಷ್ಯ ಸರ್ಕಾರವು ಘೋಷಿಸಿರುವ ಈ ತೀವ್ರ ಸಬ್ಸಿಡಿ ಕಡಿತದಿಂದಾಗಿ ಮತ್ತಷ್ಟು ಮಸುಕಾಗಿದೆ ಎಂದಿರುವ ಅಖಿಲ ಭಾರತ ಕಿಸಾನ್ ಸಭಾ, ಸರ್ಕಾರವು ತನ್ನ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಮತ್ತು ರೈತರ ಸಮಸ್ಯೆಗಳನ್ನು ಪರಿಹರಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದೆ, ರೈತರು ತಮ್ಮ ಜೀವನಾಧಾರವನ್ನು ಉಳಿಸಿಕೊಳ್ಳಲು ಮತ್ತು ದೇಶದ ಆಹಾರ ಭದ್ರತೆಯನ್ನು ಸುರಕ್ಷಿತಗೊಳಿಸಲು ಅಗತ್ಯವಾದ ಬೆಂಬಲ ಮತ್ತು ಸಬ್ಸಿಡಿಗಳನ್ನು ಪಡೆಯುವಂತಾಗಬೇಕು ಎಂದು ಅದು ಆಗ್ರಹಪಡಿಸಿದೆ.
ಈ ವಿಡಿಯೋ ನೋಡಿ : ರೈತರು ಬೆಳದ ಬೆಳೆಗಳಿಗೆ ನ್ಯಾಯವಾದ ಬೆಂಬಲ ಬೆಲ ಕೊಡಿ: ಯೋಗೇಂದ್ರ ಯಾದವ್