ಬರಿ ನಾಟಕವಲ್ಲ ಬಂಜಾರ ಜನಾಂಗದ ಕಲೆ, ಸಂಸ್ಕೃತಿ ಮತ್ತು ಬದುಕು ಬವಣೆಗಳ ಅನಾವರಣ
– ಎಚ್.ಆರ್.ನವೀನ್ ಕುಮಾರ್, ಹಾಸನ
ಬಂಜಾರ ಸಮುದಾಯ ಬೆಳೆದು ಬಂದ ರೀತಿ, ಅವರು ಬದುಕು ಕಟ್ಟಿಕೊಂಡ ಪರಿ, ಬದುಕಿನ ವಿಧಾನ, ಇದುವರೆಗೂ ಅನುಭವಿಸಿದ್ದ ಕಷ್ಟಗಳು, ಈಗಲೂ ಅನುಭವಿಸುತ್ತಿರುವ ಸಂಕಷ್ಟಗಳು, ಅವರ ಮೇಲಿನ ದಾಳಿ ದಬ್ಬಾಳಿಕೆ, ಇವೆಲ್ಲವನ್ನೂ ಮೀರಿ ಈ ಸಮುದಾಯದಿಂದ ಬೆಳೆದುಬಂದ ಹಲವು ಪ್ರತಿಭೆಗಳು…. ಹೀಗೇ ಬಂಜಾರ ಸಮುದಾಯ ಬದುಕು ಕಟ್ಟುಕೊಂಡ ರೀತಿಯನ್ನು ತೆರೆಯ ಮೇಲೆ ಎರಡು ಗಂಟೆ ನಲವತ್ತೆöÊದು ನಿಮಿಷಗಳ ಕಾಲ ಅತ್ಯಂತ ಪರಿಣಾಮಕಾರಿಯಾಗಿ ರಂಗಕ್ಕಿಳಿಸಲಾಗಿದೆ.
ನಾಗರೀಕತೆಯ ಬೆಳವಣಿಗೆಯಲ್ಲಿ ಜನಾಂಗಗಳು ಹುಟ್ಟುತ್ತವೆ, ಆದರೆ ಈ ‘ಜನಾಂಗಗಳು ಜಾತಿಗಳಾಗದೆ ಜ್ಯೋತಿಗಳಾಗಬೇಕು’ ಎಂಬ ನಾಟಕದಲ್ಲಿ ಬರುವ ಈ ಮಾತು ಇಂದಿಗೆ ಬಹಳ ಪ್ರಸ್ತುತವಾಗಿದೆ. ನಾಟಕದ ನಿರ್ದೇಶಕರಾದ ಸಿ.ಬಸವಲಿಂಗಯ್ಯನವರ ಮಾತುಗಳಲ್ಲೇ ಹೇಳುವುದಾದರೆ “ಭಾರತದ ಉದ್ದಗಲಕ್ಕೂ ಮೊದಲೆ ರೂಪುಗೊಂಡ ‘ಲಮಾಣ್ ಮಾರ್ಗ’ ಬಂಜಾರರ ವ್ಯಾಪಾರಿ ರಸ್ತೆಗಳು! ಮನುಷ್ಯರು ನಡೆದಾಡಲು ಅಸಾದ್ಯವಾದ ಗೊಂಡಾರಣ್ಯ ಮಾರ್ಗಗಳಲ್ಲಿ ಪ್ರಾಣವನ್ನು ಪಣಕ್ಕಿಟ್ಟು ತಮ್ಮ ಎತ್ತು ಹೇರುಗಳ ಮೇಲೆ ಲದೇಣಿಯ ಸಾಗಿಸಿ ಗುರಿ ತಲುಪುವ ಸಾಹಸಿ ಶ್ರಮಿಕ ವರ್ಗದ ಬಂಜಾರರಿಗೆ ಸಹಜವಾಗಿಯೇ ಬಹುಬೇಡಿಕೆ ಇತ್ತು. ಯುದ್ಧಭೂಮಿಗೆ ಆಹಾರ ಪದಾರ್ಥ, ಧವಸ ಧಾನ್ಯ, ಮದ್ದುಗುಂಡು ಕತ್ತಿ ಗುರಾಣಿ ಇತ್ಯಾದಿ ಸಲಕರಣೆಗಳನ್ನು ಸಕಾಲಕ್ಕೆ ಸರಬರಾಜು ಮಾಡಿ ಉತ್ತಮ ಸೇವೆ ಸಲ್ಲಿಸುವ ನಂಬುಗೆಯ ಜನರು ಬಂಜಾರರಾಗಿದ್ದರು ಎಂಬ ಪ್ರತೀತಿ ಇದೆ. ಇದರಿಂದ ಆರ್ಥಿಕವಾಗಿ ಬಲಾಡ್ಯರಾಗುತ್ತಿದ್ದ ಆ ಜನ ಮುಂದೆ ವ್ಯಾಪಾರ ವಹಿವಾಟಿನಲ್ಲಿ ತಮಗೆ ಪ್ರತಿಸ್ಪರ್ಧಿಗಳಾಗಬಹುದೆಂಬ ಭೀತಿಯಿಂದ ಆಳುವ ದೊರೆಗಳು (ನಿಜಾಮರು, ಬ್ರಿಟಿಷರು) ಅವರನ್ನು ‘ಕೊಳ್ಳೆಹೊಡೆಯುವ ಸಮುದಾಯ’ ಎಂಬ ಸುಳ್ಳು ಆರೋಪ ಹೊರಿಸಿ ಖಾಯಂ ಅಪರಾಧಿಪಟ್ಟಿಗೆ ಸೇರಿಸುತ್ತಾರೆ.
ಸಂಚಾರಿ ವ್ಯಾಪಾರ ಕೈತಪ್ಪಿದ ಬಳಿಕ ಶ್ರಮಜೀವಿಗಳಾದ ಲಂಬಾಣಿಗರು ಉತ್ತಮ ಕೃಷಿಕರಾಗಿ ಹೊರಹೊಮ್ಮುತ್ತಾರೆ. ಆದರೆ ಅವರು ಅಲ್ಲಿಯೂ ನೆಮ್ಮದಿಯಿಂದ ವ್ಯವಸಾಯ ಮಾಡಿಕೊಂಡಿರಲು ಸಾಧ್ಯವಾಗುವುದಿಲ್ಲ. ಭೂಮಾಲೀಕರು, ಆಳುವವರ್ಗ, ಗೂಂಡಾಗಳು ಕಾಲಕಾಲಕ್ಕೆ ನಾನಾ ರೀತಿಯಲ್ಲಿ ಕಿರುಕುಳ ಕೊಡುತ್ತಾರೆ.” ಮೂಲತಃ ದುಡಿಯುವ ವರ್ಗವಾದ ಬಂಜಾರರು ದನಗಳನ್ನು ಸಾಕುತ್ತಾ ಅವುಗಳನ್ನೇ ಬಳಸಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸಾಮಾನು ಸರಂಜಾಮುಗಳನ್ನು ಸಾಗಿಸಲು, ರಾಜರುಗಳಿಗೆ, ಆನಂತರ ಬ್ರಿಟೀಷರಿಗೆ ಕೆಲಸ ಮಾಡಿದ ಇವರು ತಮ್ಮ ದುಡಿಮೆಯನ್ನೇ ನಂಬಿ ಬದುಕಿದವರು. ನಂತರದಲ್ಲಿ ಬ್ರಿಟಿಷರು ತಮ್ಮ ಲೂಟಿಯ ವೇಗವನ್ನು ಹೆಚ್ಚಿಸಲು ರಸ್ತೆ ಮತ್ತು ರೈಲು ಮಾರ್ಗಗಳ ನಿರ್ಮಾಣ ಕಾರ್ಯ ಆರಂಬಿಸಿದಾಗ ಇದರಲ್ಲಿ ದುಡಿದವರು ಬಹುತೇಕರು ಬಂಜಾರರು.
ತಮ್ಮ ಕುಲದ ಸಮಸ್ಯೆಗಳನ್ನು ತಾವೇ ಕುಳಿತು ಬಗೆಹರಿಸಿಕೊಳ್ಳುವ ಬುಡಕಟ್ಟುಗಳ ನ್ಯಾಯಪಂಚಾಯತಿ ವ್ಯವಸ್ಥೆಯನ್ನು ಇಂದಿಗೂ ಬಂಜಾರರು ತಮ್ಮ ತಾಂಡಾಗಳಲ್ಲಿ ಮುಂದುವರೆಸಿಕೊAಡು ಬಂದಿದ್ದಾರೆ. ಇವುಗಳ ಜೊತೆಗೆ ಅನಕ್ಷರತೆ, ಮೌಡ್ಯ ಅತಿಹೆಚ್ಚಾಗಿದ್ದ ಈ ಸಮುದಾಯ ಉಳ್ಳವರಿಂದ ಇನ್ನಿಲ್ಲದ ಶೋಷಣೆಯನ್ನ ಅನುಭವಿಸುತ್ತಾ ಬಂದಿದೆ. ಹಬ್ಬ/ಜಾತ್ರೆ ಮಾಡುವ ಸಲುವಾಗಿ ಧಣಿಗಳಿಂದ ಸಾಲಪಡೆದು ಅದನ್ನು ತೀರಿಸಲಾಗದೆ ತನ್ನನ್ನೇ ಜೀತದಾಳಾಗಿ ಬಲಿಕೊಟ್ಟುಕೊಳ್ಳುವ ಪ್ರಕರಣಗಳು ಮತ್ತು ತಮ್ಮ ಸಮುದಾಯದಲ್ಲೇ ಇದ್ದ ಉಳ್ಳವರು ಇಲ್ಲದವರ ಮಕ್ಕಳಿಗೆ ಶಿಕ್ಷಣವನ್ನು ನಿರಾಕರಿಸುವ ರೀತಿ ಹೀಗೆ ಹತ್ತು ಹಲವು ಒಳನೋಟಗಳನ್ನು ನಾಟಕ ಬಿಂಬಿಸುತ್ತದೆ.
ಬುಡಕಟ್ಟು ಸಮುದಾಯಗಳು ಮೂಲತಃ ಮಹಿಳಾ ಪ್ರಧಾನವಾದವುಗಳು ಆದರೆ ಕ್ರಮೇಣ ಬೆಳವಣಿಗೆಯ ಹಂತದಲ್ಲಿ ಪುರೋಹಿತಶಾಹಿ ವ್ಯವಸ್ಥಿತ ಪಿತೂರಿಯ ಭಾಗವಾಗಿ ಮಹಿಳೆಗೆ ಯಾವ ಸ್ಥಾನವನ್ನೂ ನೀಡದೆ ಆಕೆಯನ್ನು ಎರಡನೇ ದರ್ಜೆಯ ಪ್ರಜೆಯನ್ನಾಗಿ ನಾಗರೀಕ ಸಮಾಜ ಅನಾಗರೀಕವಾಗಿ ಕಾಣುತ್ತಿರುವ ಈ ಕಾಲಘಟ್ಟದಲ್ಲೂ ಬಂಜಾರ ಸಮುದಾಯ ಮಹಿಳೆಯರಿಗೆ ಪುರುಷರಷ್ಟೇ ಎಲ್ಲಾ ರೀತಿಯಲ್ಲೂ ಸಮಾನ ಅವಕಾಶಗಳನ್ನು ಕಲ್ಪಸಲಾಗಿದೆ. ಈ ನಾಟಕದ ಒಂದು ದೃಶ್ಯದಲ್ಲಿ ತಾಂಡಾದ ನ್ಯಾಯ ಪಂಚಾಯತಿಯಲ್ಲಿ ಇಬ್ಬರೂ ವಿವಾಹಿತರು ಪರಸ್ಪರ ಬೇರೆಯವರನ್ನು ಇಷ್ಡಪಟ್ಟಿರುತ್ತಾರೆ. ಇವರಿಬ್ಬರ ಸಂಬAಧದ ಕುರಿತಾಗಿ ನ್ಯಾಯ ಪಂಚಾಯತಿ ನಡೆಯುತ್ತಿರುತ್ತದೆ. ಎಲ್ಲರೂ ಅವರವರ ರೀತಿ ತಮ್ಮ ವಿಚಾರಗಳನ್ನು, ಅಭಿಪ್ರಾಯಗಳನ್ನು ಮಂಡಿಸುತ್ತಿರುತ್ತಾರೆ. ಆದರೆ ಈ ಪಂಚಾಯತಿಯ ಕೇಂದ್ರ ಬಿಂದುವಾದ ಮಹಿಳೆಗೆ ಮಾತನಾಡಲು ಅವಕಾಶ ಕಲ್ಪಿಸಿ, ಅವಳ ಅಭಿಪ್ರಾಯದಂತೆ ತಾಂಡಾದ ನಾಯಕರು ತೀರ್ಪು ನೀಡುತ್ತಾರೆ. ಇದು ಇಂದಿನ ಪುರುಷ ಪ್ರಧಾನ ಸಮಾಜಕ್ಕೆ, ಅದರ ದೌರ್ಜನ್ಯಕ್ಕೆ ಹಿಡಿದ ಕನ್ನಡಿಯಂತೆ ಕಾಣುತ್ತದೆ.
ಬಂಜಾರ ಸಮುದಾಯದ ಮೂಲದಿಂದ ಬಂದು ಜಗತ್ತಿನ ವಿವಿಧ ದೇಶಗಳಲ್ಲಿ ಮತ್ತು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಭರತನಾಟ್ಯ ಕಲಾವಿಧೆ ವೆಂಕಟಲಕ್ಷಿö್ಮ, ಮಿಂಚಿನ ಒಟಗಾರ ಮಿಲ್ಖಾಸಿಂಗ್, ಪಾಕಿಸ್ತಾನದ ಹಾಡುಗಾರ್ತಿ ರೇಷ್ಮಾ, ವಿಶ್ವವಿಖ್ಯಾತ ಹಾಸ್ಯನಟ ಚಾರ್ಲಿ ಚಾಪ್ಲಿನ್ ಇವರುಗಳ ಪರಿಚಯವನ್ನು ಮಾಡುವ ಮೂಲಕ ಸಂಖ್ಯೆಯಲ್ಲಿ ಚಿಕ್ಕಸಮುದಾಯವಾದರೂ ಸಮಾಜಕ್ಕೆ ಮಹತ್ವದ ಕೊಡುಗೆಯನ್ನು ಕೊಟ್ಟಿದ್ದೇವೆ ಮತ್ತು ಕೊಡಲು ಸಾದ್ಯವಿದೆ ಎಂಬುದನ್ನು ಬಿಂಬಿಸಲಾಗಿದೆ.
ಇಡೀ ನಾಟಕದಲ್ಲಿ ವಸ್ತç ವಿನ್ಯಾಸ, ಬೆಳಕು ಮತ್ತು ಸಂಗೀತ ಇವುಗಳು ಬಂಜಾರರ ಕಲೆ ಮತ್ತು ಸಾಂಸ್ಕೃತಿಕ ವೈಭವವನ್ನು ನಾವು ಅವರ ನಡುವೆಯೇ ಇದ್ದೇವೇನೋ ಎಂಬAತೆ ನೈಜವಾಗಿ ತೆರೆಯ ಮೇಲೆ ತರಲಾಗಿದೆ. ಇನ್ನು ರಂಗಾಯಣದ ಕಲಾವಿಧರು ಎಂದರೆ ಕೇಳಬೇಕ ಪಾತ್ರಗಳನ್ನು ಮೈಮೇಲೆ ಆವರಿಸಿಕೊಂಡವರAತೆ ಸಹಜವಾಗಿ ನಟನೆ ಮಾಡುತ್ತಾರೆ. ಒಟ್ಟಾರೆಯಾಗಿ ‘ಗೋರ್ ಮಾಟಿ’ ಬರಿ ನಾಟಕವಲ್ಲ ಬಂಜಾರ ಜನಾಂಗದ ಕಲೆ, ಸಂಸ್ಕೃತಿ ಬದುಕು ಬವಣೆಗಳ ಅನಾವರಣ.
ನಾಟಕದ ಕೊನೆಯ ದೃಶ್ಯ ಇಂದಿನ ಸಮಾಜಕ್ಕೆ ನೀಡುವ ಸ್ಪಷ್ಟ ಸಂದೇಶದಂತಿದೆ. ಈ ದೃಶ್ಯದಲ್ಲಿ ಇದೇ ಸಮುದಾಯಕ್ಕೆ ಸೇರಿದ ತನ್ನ ಹಾಸ್ಯ ನಟನೆಯ ಮೂಲಕ ಸಮಾಜದ ಓರೆ ಕೋರೆಗಳನ್ನು ವಿಡಂಬಿಸುವ ನಟ ಚಾರ್ಲಿಚಾಪ್ಲಿನ್ “ದಿ ಗ್ರೇಟ್ ಡಿಕ್ಟೇಟರ್” ಸಿನಿಮಾದ ಕೊನೆಯ ದೃಶ್ಯದಲ್ಲಿ ಅವನು ಜನರನ್ನು ಉದ್ದೇಶಿಸಿ ಮಾಡುವ ಭಾಷಣವನ್ನು ರಂಗದ ಮೇಲೆ ಅತ್ಯಂತ ಪರಿಣಾಮಕಾರಿಯಾಗಿ ನಮ್ಮೆಲ್ಲರಿಗೂ ತಲುಪಿಸಲು ಮಾಡಿರುವ ಪ್ರಯತ್ನ ಯಶಸ್ವಿಯಾಗಿದೆ. ಆ ಮಾತುಗಳನ್ನು ಮತ್ತೊಮ್ಮೆ ಗಮನಿಸಿ ಇಂದಿನ ಸಾಮಾಜಿಕ, ರಾಜಕೀಯ ಪರಿಸರಕ್ಕೆ ಅನ್ವಯಿಸಿಕೊಂಡು ಯೋಚಿಸುವಂತೆ ಮಾಡುತ್ತದೆ. ಇದೇ ನಾಟಕಕ್ಕಿರುವ ಶಕ್ತಿ. ಈ ಸಿನಿಮಾದಲ್ಲಿ ಚಾಲ್ಪಿನ್ ಆಡುವ ಮಾತುಗಳೇ ನಾಟಕದ ಕೊನೆಯ ಮಾತುಗಳಾಗಿವೆ ಮತ್ತು ಇದು ನಾಟಕದ ಒಟ್ಟು ಸಾರವನ್ನು ಕಟ್ಟಿಕೊಟ್ಟಇದೆ.
“ಕ್ಷಮಿಸಿ ನಾನು ಸರ್ವಾಧಿಕಾರಿಯಾಗಲು ಬಯಸುವುದಿಲ್ಲ. ನಾನು ಯಾರನ್ನೂ ಗೆಲ್ಲಲೂ ಅಥವಾ ಆಳಲು ಬಯಸುವುದಿಲ್ಲ. ಸಾಧ್ಯವಾದರೆ ಎಲ್ಲರಿಗೂ ಸಹಾಯ ಮಾಡಲು ಬಯಸುತ್ತೇನೆ. ಜೂಗಳು, ಯಹೂದಿಗಳು, ಕರಿಯರು, ಬಿಳಿಯರು ಎಲ್ಲರೂ ಒಬ್ಬರಿಗೊಬ್ಬರು ಸಹಾಯ ಮಾಡಬೇಕು ಮನುಷ್ಯರೇ ಹಾಗೆ.
ನಾವು ಪರಸ್ಪರ ಸಂತೋಷಕ್ಕಾಗಿ ಬದುಕಬೇಕೆ ಹೊರತು ಇತರರ ಸುಖಕ್ಕಾಗಿ ನಾವು ಒಬ್ಬರನ್ನೊಬ್ಬರು ದ್ವೇಷಿಸಲೇ ಕೂಡದು, ಈ ಭೂಮಿಯಲ್ಲಿ ಎಲ್ಲರಿಗೂ ಸ್ಥಳವಿದೆ, ಈ ಭೂಮಿ ಎಲ್ಲರನ್ನೂ ಪೊರೆಯುವಷ್ಟು ಸಮೃದ್ದವಾಗಿದೆ.
ಈ ಬದುಕಿನ ಹಾದಿಯು ಸ್ವತಂತ್ರವೂ ಸುಂದರವೂ ಆಗಿರಲು ಸಾಧ್ಯ. ಆದರೆ ನಾವು ಹಾದಿ ತಪ್ಪಿದ್ದೇವೆ. ಸ್ವಾರ್ಥವು ಮನುಷ್ಯನ ಆತ್ಮವನ್ನೇ ಕಲುಷಿತಗೊಳಿಸಿದೆ. ಜಗತ್ತನ್ನು ದ್ವೇಷದ ಬೆಂಕಿಯಿಂದ ಬಂಧಿಸಿದೆ. ದುಃಖ ಮತ್ತು ರಕ್ತಪಾತದೆಡೆಗೆ ಸಾಗುತ್ತಿದೆ. ನಾವು ವೇಗವನ್ನು ಅಭಿವೃದ್ಧಿ ಪಡಿಸಿದ್ದೇವೆ. ಆದರೆ ನಮ್ಮನ್ನು ನಾವು ಬಂಧಿಸಿದ್ದೇವೆ.
ನಮ್ಮನ್ನು ಮುಕ್ತಗೊಳಿಸಿರುವ ಯಂತ್ರಗಳು ನಮ್ಮನ್ನು ಆಸೆಯ ಕೂಪದಲ್ಲಿರಿಸಿವೆ. ಜ್ಞಾನವು ನಮ್ಮನ್ನು ಸಿನಿಕರನ್ನಾಗಿಸಿದೆ. ನಮ್ಮ ಜಾಣ್ಮೆಯು ಕಠಿಣವೂ ನಿರ್ಧಯಿಯೂ ಆಗಿದೆ. ನಾವು ತುಂಬಾ ಯೋಚಿಸುತ್ತೇವೆ ಆದರೆ ಕಡಿಮೆ ಪ್ರೀತಿಸುತ್ತೇವೆ. ಯಂತ್ರಗಳಿಗಿAತ ಹೆಚ್ಚು ನಮಗೆ ಮಾನವೀಯತೆಯ ಅವಶ್ಯಕತೆ ಇದೆ. ಜಾಣ್ಮೆಗಿಂತ ಹೆಚ್ಚು ದಯೆ, ಸಭ್ಯತೆಯ ಅವಶ್ಯಕತೆ ಇದೆ. ಈ ಗುಣಗಳಿಲ್ಲದೇ ಹೋದರೆ ಬದುಕು ಹಿಂಸಾಮಯವಾಗುವುದು ಮತ್ತು ವಿನಾಶವಾಗುವುದು.
ವಿಮಾನ ಮತ್ತು ರೆಡಿಯೋಗಳು ನಮ್ಮನ್ನು ಹತ್ತಿರಕ್ಕೆ ತಂದಿವೆ. ಈ ಸಂಶೋಧನೆಗಳ ತಥ್ಯವೇ ಮನುಷ್ಯನ ಒಳ್ಳೆಯತನವನ್ನು ಕೂಗಿ ಹೇಳುತ್ತಿವೆ. ವಿಶ್ವ ಭ್ರಾತೃತ್ವಕ್ಕಾಗಿ ಒಟ್ಟಾಗಿ ಮೊರೆಯಿಡುತ್ತಿವೆ. ಈಗಲೂ ಸಹ ನನ್ನ ದ್ವನಿಯು ಮಿಲಿಯಗಟ್ಟಲೆ ಜನರನ್ನು ತಲುಪುತ್ತಿದೆ. ನಿರ್ಗತಿಕ ಗಂಡಸರು, ಹೆಂಗಸರು, ಪುಟ್ಟ ಪುಟ್ಟ ಮಕ್ಕಳು ವ್ಯವಸ್ಥೆಯ ಬಲಿಪಶುಗಳು. ಮುಗ್ದ ಜನರನ್ನು ಚಿತ್ರಹಿಂಸೆ ನೀಡಿ ಬಂಧನದಲ್ಲಿರಿಸುವ ವ್ಯವಸ್ಥೆ !
ಯಾರಿಗೆ ನನ್ನ ಮಾತುಗಳು ಕೇಳಿಸುತ್ತಿವೆಯೋ ಕೇಳಿರಿ, ಧೃತಿಗೆಡದಿರಿ. ನಮ್ಮ ಮೇಲಿರುವ ಈ ವಿಷಾದ, ಸ್ವಾರ್ಥ ಸಾಗುತ್ತಿರುವ ಈ ಹೊತ್ತು ಮಾನವ ಪ್ರಗತಿಯ ಬಗ್ಗೆ ಭಯಪಟ್ಟ ಮನುಷ್ಯರ ಕಹಿ ಭಾವನೆಗಳಿವು. ಮಾನವ ದ್ವೇಷವು ಕೊನೆಗೊಳ್ಳಲಿದೆ, ಸರ್ವಾಧಿಕಾರಿಯ ಅಂತ್ಯವಾಗಲಿದೆ. ಜನರ ಕೈಗಳಿಂದ ಕಿತ್ತುಕೊಂಡ ಅಧಿಕಾರವು ಮರಳಿ ಜನರ ಕೈಗಳಿಗೆ ಮರಳಲಿದೆ. ಎಲ್ಲಿಯವರೆಗೆ ಮನುಷ್ಯರು ಸಾಯುತ್ತಿರುವರೋ, ಸ್ವಾತಂತ್ರ‍್ಯವೆಂದು ನಾಶವಾಗದು.
ಸಂಗಾತಿಗಳೆ ನಿಮ್ಮತನವನ್ನು ದುಷ್ಟರಿಗೆ ಬಿಟ್ಟುಕೊಡದಿರಿ. ನಿಮ್ಮನ್ನು ಶೋಷಿಸುವವರಿಗೆ, ನಿಮ್ಮನ್ನು ಧಾಸ್ಯಕ್ಕೆ ದೂಡುವವರಿಗೆ, ನಿಮ್ಮ ಬದುಕುಗಳನ್ನು ನಿಯಂತ್ರಿಸುವವರಿಗೆ, ನೀವು ಯಾವುದನ್ನು ಯೋಚಿಸಬೇಕು ಪ್ರೀತಿಸಬೇಕು ಎನ್ನುವವರಿಗೆ, ನಿಮ್ಮನ್ನ ದುಡಿಸಿದವರಿಗೆ, ಪಶುಗಳಂತೆ ನಡೆಸಿಕೊಂಡವರಿಗೆ, ನಿಮ್ಮನ್ನು ಫಿರಂಗಿಗಳ ಮದ್ದಾಗಿ ಬಳಸಿದವರಿಗೆ, ಮನುಷ್ಯರಲ್ಲದವರಿಗೆ ನಿಮ್ಮತನವನ್ನು ಬಿಟ್ಟುಕೊಡದಿರಿ. ಯಾಂತ್ರಿಕ ಮನುಷ್ಯರಿಗೆ, ಯಾಂತ್ರಿಕ ಮನಸ್ಸುಗಳಿಗೆ
ನೀವು ಯಂತ್ರಗಳಲ್ಲ, ನೀವು ದನಗಳಲ್ಲ!! ನೀವು ಮನುಷ್ಯರು ನಿಮ್ಮ ಹೃದಯದಲ್ಲಿ ಮಾನವತೆಯ ಪ್ರೇಮವಿದೆ. ನೀವು ದ್ವೇಷಿಸಲಾರಿರಿ, ಪ್ರೀತಿಸಲ್ಪಡುವವನು ಮಾತ್ರ ದ್ವೇಷಿಸುತ್ತಾನೆ. ಸೈನಿಕರೆ ದಾಸ್ಯಕ್ಕಾಗಿ ಹೋರಾಡದಿರಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿ.
ಸಂತ ಲೂಕನ 17 ನೇ ಅಧ್ಯಾಯದಲ್ಲಿ ಹೀಗಿದೆ……
“ದೇವರ ಸಾಮ್ರಾಜ್ಯವು ಮಾನವನ ಹೃದಯದಲ್ಲಿದೆ”. ಒಬ್ಬನ ಹೃದಯದಲ್ಲಲ್ಲ, ಯಾವುದೋ ಗುಂಪಿನ ಹೃದಯದಲ್ಲಲ್ಲ, ಎಲ್ಲರ ಹೃದಯದಲ್ಲಿಯೂ.
ಆ ಶಕ್ತಿ ನಿಮ್ಮಲ್ಲಿದೆ. ಯಂತ್ರಗಳನ್ನು ತಯಾರಿಸುವ ಶಕ್ತಿ! ಸಂತೋಷವನ್ನು ತಯಾರಿಸುವ ಶಕ್ತಿ! ಈ ಬದುಕನ್ನು ಮುಕ್ತವೂ, ಸುಂದರವೂ ಆಗಿಸುವ ಶಕ್ತಿ ನಿಮಗಿದೆ! ಈ ಬದುಕನ್ನು ಅಧ್ಬುತ ಸಾಹಸವನ್ನಾಗಿಸಿ! ಪ್ರಜಾಪ್ರಭುತ್ವದ ಹೆಸರಿನಲ್ಲಿ ಆ ಶಕ್ತಿಯನ್ನು ಬಳಸೋಣ!
ಒಟ್ಟಾಗೋಣ ಹೊಸ ವಿಶ್ವಕ್ಕಾಗಿ ಹೋರಾಡೋಣ. ಆ ಸಭ್ಯ ಜಗತ್ತಿಗಾಗಿ, ಎಲ್ಲಾ ಜನರಿಗೆ ಉದ್ಯೋಗ ನೀಡುವ, ಯುವಜನರಿಗೆ ಭವಿಷ್ಯವನ್ನೂ, ವೃದ್ಧರಿಗೆ ರಕ್ಷಣೆಯನ್ನೂ ನೀಡುವ ಆ ಜಗತ್ತಿಗೋಸ್ಕರ!
ಈ ಸುಳ್ಳು ಆಶ್ವಾಸನೆಗಳ ಮೂಲಕವೇ ಭ್ರಷ್ಟರು ಅಧಿಕಾರಕ್ಕೆ ಬಂದಿದ್ದಾರೆ. ಅದು ಸುಳ್ಳು! ಆ ಆಶ್ವಾಸನೆಗಳನ್ನು ಈಡೇರಿಸಲಾರರು ಎಂದೆAದಿಗೂ!!! ಸರ್ವಾಧಿಕಾರಿಗಳು ತಮ್ಮನ್ನ ತಾವು ಮುಕ್ತಿಗೊಳಿಸುತ್ತಾರೆ. ಆದರೆ ಜನರನ್ನು ಗುಲಾಮರನ್ನಾಗಿಸುತ್ತಾರೆ.
ನಾವು ಆ ಆಶ್ವಾಸನೆಗಳಿಗೋಸ್ಕರ ಹೋರಾಡೋಣ. ಮುಕ್ತ ಜಗತ್ತಿಗೋಸ್ಕರ, ರಾಷ್ಟ್ರ ಬಂದಗಳ ವಿಮುಕ್ತಿಗೋಸ್ಕರ. ಸ್ವಾರ್ಥ, ದ್ವೇಷ, ಅಸಹನೆಗಳ ಅಳಿವಿಗೋಸ್ಕರ!! ವೈಚಾರಿಕ ಜಗತ್ತಿಗಾಗಿ ಹೋರಾಡೋಣ! ವಿಜ್ಞಾನ ಮತ್ತು ಅಭಿವೃದ್ಧಿಯು ಎಲ್ಲಾ ಮನುಷ್ಯರನ್ನು ಸಂತೋಷದೆಡೆಗೆ ಸಾಗಿಸುವುದು.
ಸಂಗಾತಿಗಳೆ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಾವೆಲ್ಲರೂ ಒಂದಾಗೋಣ.
ಯಾರೂ ಯಾರಿಗೂ ಗುಲಾಮರೂ ಅಲ್ಲಾ, ಯಾರೂ ಯಾರನ್ನೂ ಶೋಷಣೆಯನ್ನು ಮಾಡಬಾರದು. ಪ್ರೀತಿಯಿಂದ ಎಲ್ಲವನ್ನು ಗೆಲ್ಲಲು ಸಾಧ್ಯ, ಮತ ಧರ್ಮಗಳ ಶ್ರೇಷ್ಟತೆಯಿಂದ ಹೊರಬಂದು ಎಲ್ಲರೂ ಸೋದರರಂತೆ ಬದುಕಬೇಕಿದೆ.” ಚಾರ್ಲಿಯ ಬಾಯಿಂದ ಬರುವ ಈ ಮಾತುಗಳು ಇಂದಿಗೂ ನಾವೆಲ್ಲರು ಅನುಭವಿಸುತ್ತಿರುವುದೆ ಆಗಿದೆ.
‘ಗೋರ್‌ಮಾಟಿ’ ರೂಪಕದಲ್ಲಿ ಶಾಂತಾನಾಯಕ್‌ರ ಕಾದಂಬರಿ ‘ಗೋರ್‌ಮಾಟಿ’ಯ ಕೆಲವು ಅಧ್ಯಾಯಗಳನ್ನು ಬಿ.ಟಿ. ಲಲಿತನಾಯಕ್‌ರವರ ‘ತಾಂಡಾಯಣ’, ‘ಹಬ್ಬ ಮತ್ತು ಬಲಿ’ ಸಣ್ಣ ಕಥೆಗಳ ಜೊತೆಗೆ ಚರಿತ್ರೆಯಲ್ಲಿ ಮುಖ್ಯವಾಗಿರುವ ಲಕ್ಕಿಸಾ ಬಂಜಾರ, ವಸಾಹತುಶಾಹಿಯಡಿಯಲ್ಲಿ ಬಂಜಾರರ ದಮನಿತ ಸಂಕಥನಗಳನ್ನು ಹಾಗೂ ಸಂತ ಸೇವಾಲಾಲರ ಧರ್ಮ ಬೋಧನೆಯ ಅಂಶಗಳನ್ನು ಬೆಸೆಯಲಾಗಿದೆ.
ರಂಗಾಯಣದ ರೆಪರ್ಟರಿಯ ನುರಿತ ಕಲಾವಿದರು ಅಭಿನಯಿಸಿರುವ “ಗೋರ್ ಮಾಟಿ” ನಾಟಕವನ್ನು ರಂಗಭೂಮಿಯಲ್ಲಿ ಹಲವು ಪ್ರಯೋಗಗಳಿಗೆ ಹೆಸರಾಗಿ ಸತತವಾಗಿ 9 ಗಂಟೆಗಳ ಕಾಲ ಕುವೆಂಪುರವರ ಮಹಾಕಾದಂಬರಿ ಮಲೆಗಳಲ್ಲಿ ಮದುಮಗಳನ್ನು ನಿರ್ದೇಶಿಸಿದ ಸಿ.ಬಸವಲಿಂಗಯ್ಯನವರ ಪರಿಕಲ್ಪನೆ ಮತ್ತು ನಿರ್ದೇಶಕತ್ವದಲ್ಲಿ ಅಚ್ಚುಕಟ್ಟಾಗಿ ಮೂಡಿಬಂದಿದೆ. ಡಾ.ಶರಗಾನಹಳ್ಳಿ ಶಾಂತಾನಾಯಕ್ ರವರ ರಂಗರೂಪಕ, ಶಶಿಧರ ಅಡಪ ಅವರ ರಂಗವಿನ್ಯಾಸ, ಪ್ರಮೋದ್ ಶಿಗ್ಗಾವ್ ಮತ್ತು ಶಶಿಕಲಾ ಬಿ.ಎನ್ ಅವರ ವಸ್ತ್ರ ವಿನ್ಯಾಸ, ಕೃಷ್ಣಕುಮಾರ್ ನಾರ್ಣಕಜೆ ಅವರ ಬೆಳಕಿನ ವಿನ್ಯಾಸ, ಧನಂಜಯ ಅವರ ಸಂಗೀತ ಪ್ರೇಕ್ಷಕರನ್ನು ಆಚೀಚೆ ಅಲುಗಾಡದಂತೆ ಹಿಡಿದಿಟ್ಟಲು ಯಶಸ್ವಿಯಾಗಿವೆ.