ಶಿಗ್ಗಾವಿ: ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷರು ಹಾಗೂ ಗೊಟಗೋಡಿಯ ರಾಕ್ ಗಾರ್ಡನ್ ರೂವಾರಿ, ಹಿರಿಯ ರಂಗಕರ್ಮಿ ಡಾ.ಟಿ.ಬಿ. ಸೊಲಬಕ್ಕನವರ (73) ಗುರುವಾರ ಮಧ್ಯರಾತ್ರಿ 2.45ರ ಸುಮಾರಿಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತರು ಪತ್ನಿ ಸಾವಿತ್ರಮ್ಮ, ಪುತ್ರಿ ವೇದಾರಾಣಿ, ಪುತ್ರ ರಾಜಹರ್ಷ ಹಾಗೂ ಅಳಿಯ ಉದ್ಯಮಿ ಪ್ರಕಾಶ ದಾಸನೂರ ಅವರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ರಾಕ್ ಗಾರ್ಡನ್ ಪಕ್ಕ ನ್ಯೂ ವರ್ಕ್ ಶಾಪ್ (ದುಂಡಸಿ ದಾರಿ) ಹತ್ತಿರ ಜರುಗಲಿದೆ.
ಎಂಭತ್ತರ ದಶಕದಲ್ಲಿ “ಅಣುಸಮರದ ವಿರುದ್ಧ ವಿಶ್ವಶಾಂತಿ” ಯ ಜಾತಾಕ್ಕಾಗಿ ೧೨೦ ಅಡಿಗಳ ಉದ್ದದ ಬಣ್ಣದ ಕಲಾಕೃತಿಯನ್ನು ರಚಿಸಿ ‘ಇತಿಹಾಸ’ ಸೃಷ್ಟಿಸಿ ಪ್ರಖ್ಯಾತರಾದ ಹಿರಿಯ ರಂಗಕರ್ಮಿ, ಕಲಾವಿದ ಡಾ.ಸೊಲಬಕ್ಕನವರ ಅವರು ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಇಂದು ಮಧ್ಯಾಹ್ನ ಅವರ ಅಂತ್ಯಕ್ರೀಯೆ ಗೋಟಗೋಡಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸೊಲಬಕ್ಕನವರ ಪಾರಂಪರಿಕ ಗ್ರಾಮ ವ್ಯವಸ್ಥೆಯ ಪರಿಕಲ್ಪನೆಯನ್ನು ಶಿಗ್ಗಾವಿ ಬಳಿ ಇರುವ ಗೋಟಗೋಡಿಯಲ್ಲಿ ನಿರ್ಮಾಣ ಮಾಡಿದ್ದರು. ಇದು ರಾಷ್ಟ್ರ ಮನ್ನಣೆಯನ್ನು ಪಡೆದಿತ್ತು. ಕರ್ನಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷರಾಗಿ ಡಾ. ಸೊಲಬಕ್ಕನವರ ಕಾರ್ಯನಿರ್ವಹಿಸುತ್ತಿದ್ದರು.
ಹಿರಿಯ ಜನಪದ ಕಲಾವಿದರು, ವರ್ಣಚಿತ್ರ ಕಲಾವಿದರು ಮತ್ತು ಗೋಟಗೋಡದಲ್ಲಿ ಗ್ರಾಮೀಣ ಪರಿಸರದ ಮ್ಯೂಸಿಯಂ ರೂವಾರಿ ಸೊಲಬಕ್ಕನವರ್ ಮೂಲತಃ ದಾವಣಗೆರೆಯಲ್ಲಿ ತಮ್ಮ ಸಾಂಸ್ಕೃತಿಕ ಕೃಷಿಯನ್ನು ಮಾಡಿದವರು. ದಾವಣಗೆರೆ ಚಿತ್ರಕಲಾ ಶಾಲೆಯ ವಿದ್ಯಾರ್ಥಿ ಯಾಗಿ ಕಾರ್ಯಚಟುವಟಿಕೆಗಳನ್ನು ಪ್ರಾರಂಭ ಮಾಡಿದವರು. ದಾವಣಗೆರೆ ಸಮುದಾಯ ಮತ್ತು ರಾಜ್ಯ ಕೇಂದ್ರ ಸಮುದಾಯ ಸಂಘಟನೆಯೊಟ್ಟಿಗೆ ಗುರುತಿಸಿಕೊಂಡಿದ್ದವರು.
ದೇಶದಲ್ಲೇ ಪ್ರಥಮ ಎನ್ನಿಸಿಕೊಳ್ಳುವ ಅಣುಸಮರ ವಿರುದ್ಧದ ಜಾಥಾದಲ್ಲಿ 120 ಅಡಿ ಉದ್ದದ ಆರು ಅಡಿ ಅಗಲದ ಕ್ಯಾನ್‌ವಾಸ್ ನಲ್ಲಿ ಅಣುಶಕ್ತಿ ಯ ಪ್ರಕೋಪಗಳನ್ನು, ಅಣುಯುದ್ದ ನಡೆದರೆ ದೇಶ ದೇಶದ ಗಡಿಗಳನ್ನು ದಾಟಿ ಅದು ಮನುಕುಲದ ಮೇಲೆ ಮಾಡುವ ಊಹೆಗೂ ನಿಲುಕದ ದುಷ್ಪರಿಣಾಮದ ವರ್ಣಚಿತ್ರ ತಯಾರಿಸಿ ಕೊಟ್ಟ ಶ್ರೇಷ್ಠ ಕಲಾವಿದರು.
ದಾವಣಗೆರೆ ಕಲಾಶಾಲೆಯ ಮತ್ತೊಬ್ಬ ವರ್ಣಚಿತ್ರ ಕಲಾವಿದ ಕರಿರಾಜು ಮತ್ತು ಕಲಾಶಾಲೆಯ ವಿದ್ಯಾರ್ಥಿ ಗಳು ಸೊಲಬಕ್ಕನವರ್ ಅವರ ಮುಂದಾಳತ್ವದಲ್ಲಿ ತಯಾರಿಸಿ ಕೊಟ್ಟ ವರ್ಣಚಿತ್ರ ವನ್ನು ಸಮುದಾಯ ಮೊದಲಿಗೆ ಇಡೀ ರಾಜ್ಯದಲ್ಲಿ, ನಂತರ ದೇಶದ ಎಲ್ಲ ಪ್ರಮುಖ ರಾಜ್ಯ ಕೇಂದ್ರಗಳಲ್ಲಿ ಮತ್ತು ಅಂತಿಮವಾಗಿ ಜಪಾನ್ ದೇಶದಲ್ಲೂ ಪ್ರದರ್ಶನಗೊಂಡು ಅದು ಸೊಲಬಕ್ಕನವರ್ ಅವರ ಮ್ಯೂಸಿಯಂ ಅನ್ನು ಸೇರಿತು.
ಸಣ್ಣಾಟ, ದೊಡ್ಡಾಟ ಕಲಾಪ್ರಾಕಾರಗಳಲ್ಲೂ ಸೊಲಬಕ್ಕನವರ್ ಅವರು ತಮ್ಮನ್ನು ಗುರುತಿಸಿಕೊಂಡು , ಆ ಪ್ರಕಾರಗಳ ಆಳವಾದ ಅಧ್ಯಯನ ಮತ್ತು ಪ್ರದರ್ಶನ ಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು, ಪ್ರದರ್ಶನ ಗಳ ಸಂಘಟನೆಯನ್ನೂ ದಾವಣಗೆರೆ, ಬಳ್ಳಾರಿ, ತುಮಕೂರು ಜಿಲ್ಲೆಗಳ ಸುತ್ತಮುತ್ತ ಆಯೋಜಿಸಿದ್ದರು.
ಇವರ ಬದ್ದತೆ ಕಲಾ ಮಾಧ್ಯಮ ಮತ್ತು ರಂಗಭೂಮಿ ಕಡೆ ಎಷ್ಟರಮಟ್ಟಿಗೆ ಇತ್ತೆಂದರೆ, ಅವರ ಮಗ, ಎಸ್.ಎಸ್..ಎಲ್.ಸಿ ಓದುತ್ತಿದ್ದ ಹುಡಗನ್ನನ್ನು ಶಾಲೆ ಬಿಡಿಸಿ, ತಮ್ಮ ಸಾಂಸ್ಕೃತಿಕ ಸಂಘಟನೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು.
ಬಾಗಲಕೋಟೆ ಜಿಲ್ಲೆ ಮುಳುಗಡೆಗೆ ಒಳಗಾಗಿ, ನವ ಬಾಗಲಕೋಟೆ ಉದಯವಾದಾಗ, ನವ ಬಾಗಲಕೋಟೆ ವಿನ್ಯಾಸದಲ್ಲೂ ಸೊಲಬಕ್ಕನವರ್ ಅವರ ಶ್ರಮ ಮತ್ತು ಕ್ರಿಯಾಶೀಲ ಕೊಡುಗೆ ಇದೆ. ಜಾನಪದ ಅಕಾಡಮಿ ಸದಸ್ಯರಾಗಿ ಸಹ ಕಾರ್ಯನಿರ್ವಹಿಸಿದವರು ಎಂದು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.