ಬೆಂಗಳೂರು: ಮೇ 21 ಬುಧವಾರದಂದು ಕನ್ನಡಿಗ ಹಾಗೂ ಹಿರಿಯ ಐಪಿಎಸ್ ಅಧಿಕಾರಿ ಡಾ. ಎಂ. ಎ. ಸಲೀಂ ರನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರನ್ನಾಗಿ (ಪ್ರಭಾರ) ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೇ 21ರಂದು ಸೇವೆಯಿಂದ ನಿವೃತ್ತರಾದ ಡಿಜಿ-ಐಜಿಪಿ ಡಾ.ಅಲೋಕ್ ಮೋಹನ್ ರ ಸ್ಥಾನಕ್ಕೆ ನೂತನ ಡಿಜಿ-ಡಿಜಿಪಿಯಾಗಿ ಸಲೀಂ ನೇಮಕವಾಗಿದ್ದಾರೆ. ಆದರೆ ಇದೀಗ ಅವರ ಈ ನೇಮಕ ಆದೇಶವನ್ನು ತಡೆಹಿಡಿಯಬೇಕು ಎಂದು ಒತ್ತಾಯಿಸಿ ವಕೀಲೆ ಸುಧಾ ಕಟ್ವಾ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಹೊಸ ತೆರಿಗೆ: ತ್ಯಾಜ್ಯ ವಿಲೇವಾರಿ ಸೇವೆಗಳಿಗೂ ‘ಸೇವಾ ಶುಲ್ಕ’
ಪತ್ರದಲ್ಲಿ ಕೆಲ ಕಾರಣಗಳನ್ನು ನೀಡಿ ಆದೇಶವನ್ನು ತಡೆಹಿಡಿಯಬೇಕು ಎಂದಿರುವ ಸುಧಾ ಅವರು, ಸುಪ್ರೀಂ ಕೋರ್ಟ್ನ ಆದೇಶದ ಪ್ರಕಾರ ಪ್ರಭಾರ ಡಿಜಿ-ಐಜಿಪಿ ನೇಮಕ ಮಾಡುವಂತಿಲ್ಲ. ಯಾವ ವಿಶೇಷ ಕಾರಣಗಳನ್ನು ನೀಡದೆ, ಅಲ್ಲದೇ ಅವಧಿಯನ್ನೂ ಉಲ್ಲೇಖಿಸದೇ ನೇಮಕ ಮಾಡಲಾಗಿದೆ ಎಂದು ದೂರಿದ್ದಾರೆ.
ಹೀಗೆ ನೇಮಕ ಮಾಡಿರುವುದು ಸಂವಿಧಾನ, ಕಾನೂನು ಉಲ್ಲಂಘಿಸಿದಂತಾಗಿದೆ. ಹೀಗಾಗಿ ಎಂ.ಎ.ಸಲೀಂ ಅವರ ನೇಮಕಾತಿ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರಲ್ಲದೇ, ಸುಪ್ರೀಂಕೋರ್ಟ್ ನ ಮಾರ್ಗಸೂಚಿ ಪ್ರಕಾರ ನೇಮಕ ಮಾಡಲಿ. ಒಂದು ವಾರದಲ್ಲಿ ಈ ನಿಯಮ ಪಾಲಿಸದಿದ್ದರೆ ಪಿಐಎಲ್ ಸಲ್ಲಿಸುವುದಾಗಿ ಸುಧಾ ಅವರು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ವರದಿಯಾಗಿದೆ.
ಅಂದ್ಹಾಗೆ 1966ರ ಜೂ.25ರಂದು ಬೆಂಗಳೂರು ಸಮೀಪದ ಚಿಕ್ಕಬಾಣಾವರದಲ್ಲಿ ಜನಿಸಿದ ಡಾ.ಎಂ.ಎ.ಸಲೀಂ ಅವರು, 1989ರಲ್ಲಿ ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಹೈದರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾನಿಲಯದಲ್ಲಿ 1993ರಲ್ಲಿ ಪೊಲೀಸ್ ನಿರ್ವಹಣೆ ಕುರಿತು ಸ್ನಾತಕೋತ್ತರ ಪದವಿಯನ್ನು ಅವರು ಪಡೆದಿದ್ದು, ಬೆಂಗಳೂರು ವಿ.ವಿ.ಯಿಂದ ಟ್ರಾಫಿಕ್ ಮ್ಯಾನೇಜ್ಮೆಂಟ್ ವಿಷಯದಲ್ಲಿ 2010ರಲ್ಲಿ ಡಾಕ್ಟರೇಟ್ ಪದವಿಯನ್ನೂ ಪಡೆದುಕೊಂಡಿದ್ದಾರೆ.
ಇದನ್ನೂ ನೋಡಿ: ಪಿಚ್ಚರ್ ಪಯಣ 159 | ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮೂರು ಸಿನಿಮಾಗಳತ್ತ ಒಂದು ನೋಟ