ಹಂತಹಂತವಾಗಿ ಶಾಲೆಗಳನ್ನು ಆರಂಭಿಸಲು ತಜ್ಞರ ಸಮಿತಿ ಶಿಫಾರಸ್ಸು

ಬೆಂಗಳೂರು: ಕೊರೊನಾ ಮೂರನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಚಿಸಲಾದ ತಜ್ಞರ ಸಮಿತಿಯವರೊಂದಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನಡೆಸಿದ ಸಭೆಯ ನಂತರ ಸಮಿತಿ ಶಿಫಾರಸ್ಸು ಮಾಡಿದ ಕೆಲವು ಪ್ರಮುಖ ಅಂಶಗಳನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡರು.

‘ರಾಜ್ಯದಲ್ಲಿ ಶಾಲಾ-ಕಾಲೇಜುಗಳನ್ನು ಹಂತಹಂತವಾಗಿ ಆರಂಭ ಮಾಡುವಂತೆ ತಜ್ಞರ ಸಮಿತಿ ಶಿಫಾರಸು ಮಾಡಿದೆ. ಮೊದಲ ಹಂತದಲ್ಲಿ ಎಲ್ಲ ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಲಸಿಕೆ ನೀಡಿದ ನಂತರದಲ್ಲಿ ಪದವಿ ಕಾಲೇಜುಗಳನ್ನು ಆರಂಭಿಸಬೇಕೆಂದು ಸಮಿತಿ ವರದಿ ನೀಡಿದೆ ಎಂದು ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ತಿಳಿಸಿದರು.

ಇದನ್ನು ಓದಿ: ದೇಶದಲ್ಲಿ ಒಂದೇ ದಿನ 82 ಲಕ್ಷ ಕೋವಿಡ್ ಲಸಿಕೆ ವಿತರಣೆ-ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು

ಮೂರನೇ ಅಲೆಯನ್ನು ತಡೆಯಲು ರಚಿಸಲಾಗಿರುವ ಉನ್ನತ ಮಟ್ಟದ ನುರಿತ ತಜ್ಞರ ಸಮಿತಿ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ ಹಾಗೂ ಇತರ ಸದಸ್ಯರು ಸಭೆ ನಡೆಸಿ, ಕರ್ನಾಟಕ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಿದ್ದಾರೆ. ಇದರನ್ವಯ ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದ್ದಾರೆ.

ಹಂತ ಹಂತವಾಗಿ ಶಾಲೆಗಳನ್ನು ಆರಂಭಿಸುವುದಕ್ಕೆ ತಜ್ಞರು ಸಲಹೆ ನೀಡಿದ್ದು, ಮೊದಲ ಹಂತದಲ್ಲಿ ಕಾಲೇಜುಗಳನ್ನು ಆರಂಭಿಸುವುದು, ಎರಡನೇ ಹಂತದಲ್ಲಿ 8 ರಿಂದ 10ನೇ ತರಗತಿಗೆ ಶಾಲೆ ಆರಂಭಿಸುವುದು ಹಾಗೂ ಮೂರನೇ ಹಂತದಲ್ಲಿ 5 ರಿಂದ 7ನೇ ತರಗತಿಗಳನ್ನು ಆರಂಭಿಸುವುದು ಸೂಕ್ತ ಎಂದು ತಿಳಿಸಿದ್ದಾರೆ. ಆದರೆ, ಶಾಲಾ ಕಾಲೇಜಿನಲ್ಲಿ ಕೊರೊನಾ ನಿಯಮಾವಳಿಗಳು ಕಡ್ಡಾಯವಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಪೋಷಕರು ಒಪ್ಪಿದರೆ ಮಾತ್ರ ಮಕ್ಕಳನ್ನು ಶಾಲೆಗೆ ಕಳುಹಿಸಬಹುದು. ಮಕ್ಕಳ ಹಾಜರಾತಿಯನ್ನು ಕಡ್ಡಾಯ ಮಾಡುವಂತಿಲ್ಲ. ಆನ್‌ಲೈನ್ ಮತ್ತು ಆಫ್‌ಲೈನ್ ಎರಡು ಮಾದರಿಯ ಕಲಿಕೆಗೂ ಅವಕಾಶ ನೀಡಬೇಕು ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ರಾಜ್ಯ ಸರ್ಕಾರವೇ ಮಾಸ್ಕ್ ನೀಡಬೇಕು. ಶಾಲೆಗಳಲ್ಲಿ ಮಕ್ಕಳಿಗೆ ಬಿಸಿ ನೀರಿನ ವ್ಯವಸ್ಥೆಗೊಳಿಸಬೇಕು. ಶಿಕ್ಷಕರು, ಶಾಲೆಯ ಇತರೆ ಸಿಬ್ಬಂದಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆ‌ ಹಾಕಿಸಿಕೊಂಡಿರಬೇಕು. ಆರೋಗ್ಯವಂತ ಮಕ್ಕಳು ಮಾತ್ರ ಶಾಲೆಗೆ ಬರಬೇಕು. ಶಾಲಾ ಆವರಣಕ್ಕೆ ಅನ್ಯರಿಗೆ ಪ್ರವೇಶವನ್ನು ನಿರ್ಬಂಧಿಸಬೇಕು.

ಇದನ್ನು ಓದಿ: ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯದ ಗುರಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ವಾರಕ್ಕೊಮ್ಮೆ ಸ್ಥಳೀಯ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಬೇಕು. ಮಕ್ಕಳಿಗೆ ಕರ್ನಾಟಕ ಸರ್ಕಾರವೇ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಶಾಲಾ ಆವರಣ, ಸುತ್ತಮುತ್ತ ತಿಂಡಿ ತಿನಿಸು ಮಾರಾಟ ನಿಷೇಧ ಮಾಡಬೇಕು. ಕೊರೊನಾ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಟ ಆಡಿಸಬೇಕು. ಮಕ್ಕಳಿಗೆ ಸರ್ಕಾರದಿಂದ ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕು. ಊಟವನ್ನು ಸ್ಥಳೀಯ ಮಟ್ಟದಲ್ಲಿ ನೀಡುವುದು ಸೂಕ್ತ ಎಂಬ ಸಲಹೆಯನ್ನು ತಜ್ಞರು ಶಿಫಾರಸ್ಸು ಮಾಡಿದ್ದಾರೆ.

ತರಗತಿಗಳನ್ನು ದಿನದಲ್ಲಿ 2 ರಿಂದ 3 ಗಂಟೆವರೆಗೆ ಮಾತ್ರ ನಡೆಸಬೇಕು. ರಾಜ್ಯದಲ್ಲಿ 18 ವರ್ಷದೊಳಗಿನ 2.38 ಕೋಟಿ ಮಕ್ಕಳಿದ್ದಾರೆ. 12 ರಿಂದ 18 ವರ್ಷದ ಮಕ್ಕಳಿಗೆ ಆದಷ್ಟು ಬೇಗ ಲಸಿಕೆ ನೀಡುವುದಕ್ಕೆ ಅನುಮೋದನೆ ಕೊಡುವುದು ಉತ್ತಮ. ಈ ನಿಯಮ ಪಾಲಿಸದಿದ್ದರೆ ಮಕ್ಕಳಿಗೆ ಕೊರೊನಾ 3ನೇ ಅಲೆಯಲ್ಲಿ ಹೆಚ್ಚು ಅಪಾಯ ಆಗಬಹುದು, 3.40 ಲಕ್ಷ ಮಕ್ಕಳಿಗೆ ಸೋಂಕು ಹರಡುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ನೀಡಲಾಗಿದೆ.

ಮಕ್ಕಳಿಗೆ ಚಿಕಿತ್ಸೆ ನೀಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಸುಮಾರು 6,801 ಐಸಿಯು, ಹೆಚ್‌ಡಿಯು, ವೆಂಟಿಲೇಟರ್ ಬೆಡ್, 23,804 ಸಾಮಾನ್ಯ ಬೆಡ್‌ಗಳು ಬೇಕಾಗಬಹುದು. ಕೊವಿಡ್ ಕೇರ್ ಸೆಂಟರ್‌ಗಳಲ್ಲಿ 43,000 ಹಾಸಿಗೆಗಳ ಅಗತ್ಯವಿದೆ ಎಂದು ಮಧ್ಯಂತರ ವರದಿಯಲ್ಲಿ ಡಾ.ದೇವಿಪ್ರಸಾದ್ ಶೆಟ್ಟಿ ಸಮಿತಿಯು ಸಲಹೆ ನೀಡಿರುವುದು ತಿಳಿದುಬಂದಿದೆ.

ಮಕ್ಕಳಿಗೆ ಕೊರೊನಾ ಬಂದರೆ ಪ್ರತ್ಯೇಕವಾಗಿರಿಸಲು ಬಾಲ ಆರೈಕೆ ಸುರಕ್ಷಾ ಕೇಂದ್ರದ ವ್ಯವಸ್ಥೆ ಮಾಡಬೇಕು. ಅದರಲ್ಲಿ ತಾಯಿ-ಮಗು ಒಟ್ಟಾಗಿ ಇರುವುದಕ್ಕೆ ವ್ಯವಸ್ಥೆ ಮಾಡಬೇಕು. ಆರೈಕೆ ಕೇಂದ್ರದಲ್ಲಿ ಮಕ್ಕಳಿಗೆ ಆಟವಾಡುವುದಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಪ್ರೌಢಾವಸ್ಥೆಗೆ ಬಂದ ಗಂಡು, ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಬೇಕು. ಮಕ್ಕಳು ಮನೆ ಊಟ ಕೇಳಿದರೆ ನೀಡಬೇಕು ಎಂದು ಸಲಹೆ ನೀಡಲಾಗಿದೆ.

ಇದನ್ನು ಓದಿ: ಕೋವಿಡ್‌ನಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ 50 ಮಕ್ಕಳು ಪತ್ತೆ: ಶಶಿಕಲಾ ಜೊಲ್ಲೆ

ಜತೆಗೆ, ವೈದ್ಯರು-ದಾದಿಯರ ಕೊರತೆ ನೀಗಿಸುವುದು, ಆಸ್ಪತ್ರೆಗಳಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸುವುದು ಹಾಗೂ ಆಮ್ಲಜನಕ ಸೇರಿದಂತೆ ಮೂಲಭೂತ ಅವಶ್ಯಕತೆಗಳ ಬಗ್ಗೆ ಗಮನ ಹರಿಸುವುದಕ್ಕೂ ಸಲಹೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೇ, ಈಗಾಗಲೇ ಅನುಸರಿಸಿರುವ ಅನ್​ಲಾಕ್​ ಕ್ರಮ ಸರಿ ಇದೆ. ಮುಂದೆ ಲಸಿಕೆ ವಿತರಣೆ ಹೆಚ್ಚಿಸಿ ಹೆಜ್ಜೆ ಇಡುವುದರತ್ತ ಗಮನ ಹರಿಸಿ ಎಂಬುದನ್ನೂ ಹೇಳಿದ್ದಾರೆ.

ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆ, ಕೊರೊನಾ ವೈರಾಣು ಸೋಂಕಿತ ಮಕ್ಕಳಿಗೆ ಮನೋಸ್ಥೈರ್ಯ ತುಂಬಲು ಆಸ್ಪತ್ರೆಗಳಲ್ಲಿ ಮನೋವೈದ್ಯರ ಸೇವೆ, ಕಾರ್ಪೋರೇಟ್‌ ಸಂಸ್ಥೆಗಳ ಸಹಭಾಗಿತ್ವದಲ್ಲಿ ವೈದ್ಯಕೀಯ ಮೂಲಸೌಕರ್ಯ ಅಭಿವೃದ್ಧಿ, ಮಾನವ ಸಂಪನ್ಮೂಲ ಹೆಚ್ಚಿಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಸಮಿತಿ ಶಿಫಾರಸು ಮಾಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಸುದ್ದಿಗೋಷ್ಠಿ ವೇಳೆ ಪ್ರಸ್ತಾಪಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಸಮಿತಿ ಸದಸ್ಯರು ಮಧ್ಯಂತರ ವರದಿಯನ್ನು ಮಂಡಿಸಿದರು.

Donate Janashakthi Media

Leave a Reply

Your email address will not be published. Required fields are marked *