ಮಾಜಿ ಶಾಸಕ ಡಾ.ಬಿ.ಎಂ. ತಿಪ್ಪೇಸ್ವಾಮಿ ಸಮಾಧಿ ನೆಲಸಮ ಖಂಡಿಸಿ ಪ್ರತಿಭಟನೆ; ಕ್ರಮಕ್ಕೆ ಆಗ್ರಹ

ದಾವಣಗೆರೆ: ದಶಕಗಳ ಹಿಂದೆ ಜನಸಾಮಾನ್ಯರ ವೈದ್ಯರು ಎಂದೇ ಪ್ರಸಿದ್ಧರಾಗಿದ್ದ ಡಾ.ಬಿ.ಎಂ. ತಿಪ್ಪೇಸ್ವಾಮಿ ಮತ್ತು ಅವರ ಕುಟುಂಬದ ನಾಲ್ವರು ಸಮಾಧಿಗಳನ್ನು ನೆಲಸಮ ಮಾಡಿರುವುದನ್ನು ಖಂಡಿಸಿ ಇಂದು ವಿವಿಧ ಸಂಘಟನೆಗಳು ಪ್ರತಿಭಟನೆಯನ್ನು ನಡೆಸಿದವು.

ವಿದ್ಯುತ್‌ನಗರದಿಂದ ಆರಂಭವಾದ ಪ್ರತಿಭಟನಾ ಪಾದಯಾತ್ರೆಯು ಅಂಬೇಡ್ಕರ್‌ ವೃತ್ತಕ್ಕೆ ಆಗಮಿಸಿ, ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಂತರ ಮೆರವಣಿಗೆ ಮುಂದೆ ಸಾಗಿ ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಪ್ರತಿಭಟನಾಕಾರರು ದುಷ್ಕರ್ಮಿಗಳ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.

ಭಾನುವಾರ(ನವೆಂಬರ್‌ 20) ಯಾವ ಮುನ್ಸೂಚನೆ ನೀಡದೆ  ಗಣೇಶ ಹುಲ್ಲುಮನೆ ಮತ್ತು ಇತರರು ಜೆಸಿಬಿ ಯಂತ್ರಗಳನ್ನು ತಂದು ದಲಿತ ಮುಖಂಡರು, ಮಾಜಿ ಶಾಸಕರು ಆದ ದಿವಂಗತ ಡಾ. ಬಿ.ಎಂ. ತಿಪ್ಪೇಸ್ವಾಮಿ ಹಾಗೂ ಅವರ ಕುಟುಂಬದ ಮೂರು ಸದಸ್ಯರ ಸಮಾಧಿಗಳನ್ನು ಧ್ವಂಸ ಮಾಡಿರುವ ಘಟನೆ ನಡೆದಿತ್ತು. ಇದನ್ನು ಖಂಡಿಸಿ ಪ್ರತಿಭಟನೆ ನಡೆದವು.

‘ಇಲ್ಲಿನ ಭೂಗಳ್ಳರು ಅತಿಕ್ರಮಕ್ಕೆ ಮುಂದಾಗಿರುವ ದುಷ್ಕರ್ಮಿಗಳು ಸಮಾಧಿಯನ್ನು ಒಡೆದಿದ್ದಾರೆ. ಇದು ದೇವಸ್ಥಾನವನ್ನು ಒಡೆದಷ್ಟೇ ಅಪಾಯಕಾರಿ ಕೃತ್ಯ. ಡಾ. ತಿಪ್ಪೇಸ್ವಾಮಿ ದಾವಣಗೆರೆಗೆ, ಅವರ ಕುಟುಂಬಕ್ಕೆ ಸೇರಿದವರಲ್ಲ. ಈ ನಾಡಿನ ಸಾಕ್ಷಿಪ್ರಜ್ಞೆ. ಕಣ್ಣಿನ ತಜ್ಞನಾಗಿ, ಶಾಸಕನಾಗಿ, ಕೆಪಿಎಸ್‌ಸಿಯಲ್ಲಿ ಕೆಲಸ ಮಾಡಿದ್ದರು. ಅಂಥವರ ಸಮಾಧಿಯನ್ನು ಒಡೆದು ಹಾಕಿದ್ದಾರೆ. ಸರ್ಕಾರದ ಭಯ ಇಲ್ಲದೇ ಇರುವುದೇ ಇದಕ್ಕೆ ಕಾರಣ’ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್‌. ದ್ವಾರಕನಾಥ್‌ ಆರೋಪಿಸಿದರು.

ತಿಪ್ಪೇಸ್ವಾಮಿ ಅವರ ಪುತ್ರಿ, ಲೇಖಕಿ ಬಿ.ಟಿ.ಜಾಹ್ನವಿ ಮಾತನಾಡಿ, ‘ತಂದೆ ತಿಪ್ಪೇಸ್ವಾಮಿ, ತಾಯಿ ಯಲ್ಲಮ್ಮ, ಸಹೋದರರಾದ ಬಿ.ಟಿ. ಮೋಹನ್‌, ಬಿ.ಟಿ. ಮಲ್ಲಿಕಾರ್ಜುನ ಅವರ ಸಮಾಧಿ ಇಲ್ಲಿದ್ದು, ಅದನ್ನು ಒಡೆಯಲಾಗಿದೆ. ಘಟನೆಯ ದಿನ ನಾನು ಮತ್ತು ಮಗ ಅಲ್ಲಿಗೆ ಬಂದಾಗ ಗಣೇಶ್‌ ಹುಲ್ಮನಿ ಮತ್ತು ಇತರರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. 1955ರಿಂದ ಭೂಮಿ ಅವರಲ್ಲಿದೆ ಎಂದು ಹೇಳಿದರು. ಮತ್ಯಾಕೆ 1990ರಿಂದ ಇಲ್ಲಿವರೆಗೆ ನಾಲ್ಕು ಸಮಾಧಿ ಮಾಡಲು ಯಾಕೆ ಬಿಟ್ಟರು. ನಮ್ಮ ಭೂಮಿ ಇದು. 2013ರಲ್ಲಿ ರವಿ ಮತ್ತು ರವಿಕುಮಾರ್‌ ಎಂಬಿಬ್ಬರಿಗೆ ಸೇರಿದ ಜಮೀನು ಎಂದು ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಅದು ನ್ಯಾಯಾಲಯದಲ್ಲಿ ಇರುವಾಗಲೇ ಇಲ್ಲಿ ಈಗ ಬೇರೆ ಯಾರೋ ನಮ್ಮ ಭೂಮಿ ಎಂದು ಬಂದಿದ್ದಾರೆ’ ಎಂದು ದೂರಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಹನುಮಂತಪ್ಪ ಅಣಜಿ, ಲಿಂಗರಾಜು ಎಂ., ಪ್ರದೀಪ್‌, ಮಹಾಂತೇಶ್‌ ಹಾಲುವರ್ತಿ, ಬನ್ನಿಹಟ್ಟಿ ನಿಂಗಪ್ಪ, ಖಾಲಿದ್‌ ಅಲಿ, ಮಹಾಂತೇಶ್‌ ಬೇತೂರು, ಅನಿಸ್‌ ಪಾಷ, ಜಬೀನಾಖಾನಂ, ಶಿರಿನ್‌ಬಾನು, ಹಾಲೇಶ್‌, ಎ.ಬಿ. ರಾಮಚಂದ್ರಪ್ಪ, ಡಿ. ಹನುಮಂತಪ್ಪ, ಸಿ. ಬಸವರಾಜ್‌, ಎಚ್‌. ಮಲ್ಲೇಶ್‌ ಮತ್ತಿತರರು ಇದ್ದರು.

Donate Janashakthi Media

Leave a Reply

Your email address will not be published. Required fields are marked *