ಬೆಂಗಳೂರು : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಖ್ಯಾತ ವೈಚಾರಿಕ ಸಾಹಿತಿ ಉಡುಪಿಯ ಡಾ.ಜಿ.ಭಾಸ್ಕರ್ ಮಯ್ಯ ಕೊವಿಡ್ ಗೆ ಇಂದು ಬಲಿಯಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.
ಕಳೆದ 4 ದಿನಗಳಿಂದ ಅವರು ಉಡುಪಿ ಜಿಲ್ಲೆಯ ಸಾಲಿಗ್ರಾಮದ ಪ್ರಣವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ 4:30ರ ಸುಮಾರಿಗೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ. ಹಿಂದಿ ಸಾಹಿತ್ಯ ಅಧ್ಯಯನದಲ್ಲಿ ಮೇರು ವ್ಯಕ್ತಿತ್ವ ಹೊಂದಿದ್ದ ಡಾ.ಜಿ.ಭಾಸ್ಕರ್ ಮಯ್ಯ ಅವರ ವೈಚಾರಿಕ ಕೃತಿಗೆ ಕೇಂದ್ರ ಸರ್ಕಾರ 2004ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತ್ತು.
ಇವರು ಧೀರ್ಘಕಾಲ ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಹಿಂದಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸಿದ್ದರು. ಹಿಂದಿ, ಸಂಸ್ಕೃತ, ಪಾಲಿ, ಕನ್ನಡ, ಇಂಗ್ಲಿಷ್ ಮತ್ತಿತರ ಭಾಷೆಗಳಲ್ಲಿ ಆಳವಾದ ಪಾಂಡಿತ್ಯ ಹೊಂದಿದ್ದ ಇವರು ಜೈನಧರ್ಮದಿಂದ ಮಾರ್ಕ್ಸ್ ವಾದದವರೆಗೂ ಅಧ್ಯಯನಮಾಡಿದ್ದರು. ಸತತವಾದ ಓದು. ಚಿಂತನೆ, ಪರಿಶ್ರಮಗಳಿಂದ ಹಲವಾರು ವಿಶ್ವವಿದ್ಯಾಲಯಗಳಿಂದ ಎಂ.ಎ.ಪದವಿಗಳನ್ನೂ, ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ. ಪದವಿಯನ್ನೂ ಗಳಿಸಿದ್ದಾರೆ ಮತ್ತು 52 ಪುಸ್ತಕಗಳನ್ನು, ಅನೇಕಾನೇಕ ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಿದ್ದಾರೆ. ವೈಚಾರಿಕ ಹಾಗೂ ಪ್ರಗತಿಪರ ಸಾಹಿತ್ಯದಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದ ಭಾಸ್ಕರ್ ಮಯ್ಯ ಅವರ ನಿಧನಕ್ಕೆ ಸಾಹಿತ್ಯ ಲೋಕ ಕಂಬನಿ ಮಿಡಿದಿದೆ. ಕರ್ನಾಟಕ ವೈಚಾರಿಕ ಸಾಹಿತ್ಯದ ಮೇರುಕೊಂಡಿಯೊಂದು ಕಳಚಿಕೊಂಡಿದೆ ಎಂದು ಸಂತಾಪ ಸೂಚಿಸಿದ್ದಾರೆ.
‘ಸಮುದಾಯ’ದಂತಹ ಪ್ರಗತಿಪರ ಸಂಘಟನೆಗಳೊಂದಿಗೆ ತಮ್ಮ ಸಾಹಚರ್ಯ ಹೊಂದಿದ್ದ ಮಯ್ಯ ಅವರು ಅಧ್ಯಯನ ಶಿಬಿರಗಳಲ್ಲಿ ಉಪನ್ಯಾಸ ನೀಡಿ ಕಾರ್ಯಕರ್ತರ ಬೌದ್ಧಿಕ ಪ್ರಜ್ಞೆ ಎತ್ತರಿಸುವಲ್ಲಿ ತಮ್ಮ ಕೊಡುಗೆ ನೀಡಿದ್ದಾರೆ ಎಂದು ಸಮುದಾಯ ಸಂಘಟನೆಯ ಟಿ. ಸುರೇಂದ್ರರಾವ್ ರವರು ಭಾಸ್ಕರ್ ಮಯ್ಯರವನ್ನು ನೆನಪಿಸಿಕೊಂಡಿದ್ದಾರೆ.