ಸಾವಿರ ಒಂಬೈನೂರ ಮೂವತ್ತರ ಸುಮಾರಿನಲ್ಲಿ ಭಾರತದ ಜನಸಂಖ್ಯೆ 35 ಕೋಟಿ ಇದ್ದಾಗ ಬ್ರಿಟಿಷ್ ಸೈನಿಕರ ಸಂಖ್ಯೆ 15 ಸಾವಿರದಷ್ಟು ಕಿರಿದಾಗಿತ್ತು. ಆದರೂ ಬ್ರಿಟಿಷರು ಭಾರತವನ್ನು ತಮ್ಮ ಅಂಕೆಯಲ್ಲಿ ಇಟ್ಟುಕೊಂಡು ಆಡಳಿತ ನಡೆಸಿದರು. ಅದು ಹೇಗೆ ಸಾಧ್ಯವಾಯಿತು?
ಅದಕ್ಕೆ ಅಂಬೇಡ್ಕರ್ ಹೀಗೆ ಉತ್ತರಿಸುತ್ತಾರೆ:
ಭಾರತದ ಜನ ಸಮುದಾಯದೊಳಗೆ ಜಾತಿಯ ಕಾರಣಕ್ಕಾಗಿ ಸಮನ್ವಯದ ಕೊರತೆ ಎದ್ದು ಕಾಣುತ್ತಿತ್ತು. ಒಂದು ಪ್ರಾಂತ್ಯದ ರಾಜನ ಮೇಲೆ ಬ್ರಿಟಿಷರು ದಂಡೆತ್ತಿ ಹೋದರೆ ಇನ್ನೊಂದು ಪ್ರಾಂತ್ಯದ ರಾಜ ನನಗೂ ಅದಕ್ಕೂ ಸಂಬಂಧ ಇಲ್ಲ ಅನ್ನುವಂತೆ ಯುದ್ಧವನ್ನು ಒಂದು ಮೋಜಿನ ಸಂಗತಿಯಂತೆ ನೋಡುತ್ತಾ ಕುಳಿತುಕೊಳ್ಳುತ್ತಿದ್ದ. ಜೊತೆಗೆ ಖಡ್ಗ ಹಿಡಿಯುವ ಸಾಮರ್ಥ್ಯ ಹೊಂದಿದ್ದ ಈ ನೆಲದ ಬಲಿಷ್ಠ ಅಸ್ಪೃಶ್ಯ ಸಮುದಾಯವನ್ನು ಬ್ರಾಹ್ಮಣ್ಯವು ತನ್ನ ಮನುಧರ್ಮಶಾಸ್ತ್ರದ ನಿಯಮದ ಪ್ರಕಾರ ಖಡ್ಗ ಹಿಡಿಯುವ ಹಕ್ಕನ್ನು ನಿರಾಕರಿಸಿದ ಕಾರಣಕ್ಕಾಗಿ ಸೇನೆಗೆ ಸೇರಿಸಿಕೊಳ್ಳದೇ ಹೊರಗಿಟ್ಟ ಕಾರಣದಿಂದಾಗಿ ಪರಕೀಯರು ಭಾರತವನ್ನು ಅಷ್ಟು ಸುಲಭವಾಗಿ ಆಕ್ರಮಿಸಿಕೊಳ್ಳಲು ಸಾಧ್ಯವಾಯಿತು. ಭಾರತದ ಚರಿತ್ರೆಯನ್ನು ಅವಲೋಕನ ಮಾಡಿದರೆ ನೂರಾರು ವಿದೇಶಿ ಆಕ್ರಮಣಗಳು ನಡೆದಿವೆ.
ಭಾರತ ವಿದೇಶಿ ಆಕ್ರಮಣಗಳಿಗೆ ತುತ್ತಾಗಲು ಕಾರಣವೇ ಈ ಬ್ರಾಹ್ಮಣ್ಯ ಎಂಬ ತಾರತಮ್ಯದ ನೀತಿ.
(ಸಂಗ್ರಹ : ಸುರೇಶ್ ಗೌತಮ್)