ದ್ವೇಷದ ರಾಜಕಾರಣದ ಪಿತೂರಿಯ ಈ ಸಂದರ್ಭದಲ್ಲಿ ಡಾ. ಅಂಬೇಡ್ಕರ್ ಪ್ರಸ್ತುತವೇ? ಎಂದು ಪ್ರಶ್ನಿಸಿದರೆ?
ಯಮುನಾ ಗಾಂವ್ಕರ್
ಜೋಯಿಡಾ, ಕಾರವಾರ
ರಸ್ತೆಯಲ್ಲಿ ಕರುಳು ಬಗೆದು ಇಡಲಾಗುತ್ತಿದೆ, ತಾಯ ಗರ್ಭ ಸೀಳಿ ಪಿಂಡ ಚಂಡಾಡಿ ಸುಡಲಾಗುತ್ತಿದೆ, ದೇವಸ್ಥಾನದ ಗರ್ಭಗುಡಿಯ ಗೋಡೆಯ ಮರೆಯಲ್ಲಿ ಅವಳ ಮೇಲೆ ಅತ್ಯಾಚಾರ ಮಾಡಲಾಗುತ್ತಿದೆ, ರಕ್ಷಣೆಯ ಹೊಣೆ ಹೊತ್ತವರೇ ಕೊಳ್ಳಿದೆವ್ವಗಳಾಗುತ್ತಿದ್ದಾರೆ. ಇಗರ್ಜಿ-ದರ್ಗಾ-ದುರ್ಗಾಗಳ ಬಾಗಿಲ ಮೆಟ್ಟಿಲಲ್ಲಿ ರಾತ್ರಿಬೆಳಗೊಳಗೆ ಆಗಬಾರದ್ದು ಆಗುಮಾಡಲಾಗುತ್ತಿದೆ, ನೀನು ಇಲ್ಲಿಯವನ/ಳಲ್ಲ ಹೋಗು ಹೊರಗೆ ಎಂದು ದೂಡಲಾಗುತ್ತಿದೆ, ಇಲ್ಲಿ ಹುಟ್ಟಲೇ ಇಲ್ಲ ಎಂದು ಸಾರಲಾಗುತ್ತಿದೆ. ಅದಕ್ಕೆಲ್ಲ ಕಾಗದಪತ್ರಗಳು ಸಿದ್ಧವಾಗಿವೆ, ಅವಳ ಮೈಮುಚ್ಚುವ ಉಡಿಗೆಯೂ ನ್ಯಾಯಾಸ್ಥಾನಕ್ಕೆ ವಸ್ತುವಾಗುತ್ತದೆ, ಆಚಾರ ವಿಚಾರ ದೈಹಿಕ ಗುರ್ತಿಸುವಿಕೆಗಳೇ ರಾಜಕೀಯ ಪಿತೂರಿಗೆ ಕಾರಣವಾಗುತ್ತಿದೆ, ತಿನ್ನುವ ಅನ್ನಾಹಾರ, ಉಡುವ ವಸ್ತ್ರಕ್ಕೆ ಬೀದಿ ಕಾಳಗ ನಡೆದಿದೆ, ನೆಲಮೂಲಕ್ಕೆ ಜೋಡಿಸಿ ಹೊಲಿದ ಬಗೆಬಗೆಯ ಬಣ್ಣಗಳ ಕೌದಿಯೊಳಗಿಂದ ಎಲ್ಲವನ್ನೂ ಹರಿದು ಬೀದಿಗೆಸೆಯಲಾಗುತ್ತಿದೆ. ಅಂದಿನ ನಮ್ಮವರ ತ್ಯಾಗ ಬಲಿದಾನದ ದೀರ್ಘ ಆಂದೋಲನದಿಂದ ಕಟ್ಟಲು ತೊಡಗಿದ ಭಾರತದಲ್ಲಿ, ಆತನೇ ಮುಂದಾಳಾಗಿ ನಿಂತು ಬರೆದುಕೊಟ್ಟ, ನಂತರ ನಮಗೆ ನಾವೇ ವಿಧಿಸಿಕೊಂಡ ಸಂವಿಧಾನದ ಸಂಧಿಯಲ್ಲಿ ತೂತುಗಳನ್ನು ಹುಡುಕಿ ಅಥವಾ ತೂತು ಕೊರೆದು ಆಧಾರ ಸಮೇತ ದ್ವೇಷದ ನಿಯಮಗಳನ್ನು ಹೇರಲಾಗುತ್ತಿದೆ. ಈಗಲೂ ಡಾ. ಅಂಬೇಡ್ಕರ್ ಎಷ್ಟು ಪ್ರಸ್ತುತ ಎಂದರೆ? ಅದೊಂದು ಕುಚೋದ್ಯದ ಸಂಗತಿಯಾಗಿ ಕಾಣುತ್ತದೆ, ಇನ್ನೂ ಕೆಲವರ ಮಾತಿನ ದಾಟಿ ನೋಡಿದರೆ ಅಂಬೇಡ್ಕರ್ ರ ಬಗ್ಗೆ ಅವರು ಮುಗ್ಧವಾಗಿ ಕೇಳುತ್ತಿದ್ದಾರೆ ಎನಿಸುತ್ತದೆ.
ಸನಾತನವಾದಿ ವೈದಿಕಶಾಯಿ ಹಿಂದುತ್ವದ ಪಂಜರ ಸೀಳಿ
ಸಂವಿಧಾನದ ಮೇಲೆ ಆಣೆ ಪ್ರಮಾಣ ಮಾಡಿ ಅಧಿಕಾರಕ್ಕೇರಿದವರಲ್ಲಿ ಬಹುಮತದ ಆಧಾರದಲ್ಲಿ ಚುಕ್ಕಾಣಿ ಹಿಡಿದವರೇ ತಾವು ಪ್ರತಿನಿಧಿಸುವ ಪಕ್ಷ, ಪಂಗಡ, ಸಂಘಟನೆ ಮೂಲಕ ಸಂವಿಧಾನದ ಬಗೆಗೇ ಅಸಡ್ಡೆ, ದ್ವೇಷ ಹಾಗೂ ಭಾರತದ ಎಲ್ಲಾ ಸಮಸ್ಯೆಗೆ ಕಾರಣವೇ ಸಂವಿಧಾನ ಎಂಬ ತೆರನಾದ ಅಸಹನೆ ಬೆಳೆಸುತ್ತಿದ್ದಾರೆ. ಕೇವಲ ವೈಚಾರಿಕವಾಗಿಯಷ್ಟೇ ಅಲ್ಲ; ದೈಹಿಕ ದಾಳಿಗಳ ಮೂಲಕ ಹಾಗೂ ಪ್ರಭುತ್ವ ಪ್ರಾಯೋಜಿತ ಜೈಲು, ಕೋರ್ಟು, ಕಛೇರಿ ಅಲೆಯಿಸುವ ಮೂಲಕವೂ. ಮತ್ತೊಂದೆಡೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಿಂತು ನೋಡಿದರೆ, ಅಂದು ಭಾರತವನ್ನು ಇಡಿಯಾಗಿ ಕಟ್ಟುವಲ್ಲಿ ಶ್ರಮಿಸಿದವರ ಮೇಲೆ ಹಲವು ಸುಳ್ಳುಗಳನ್ನು, ಭ್ರಮೆಗಳನ್ನು ಹಬ್ಬಿಸುವ ಮೂಲಕ ದ್ವೇಷದ ಜ್ವಾಲೆ ಹರಡಿ ಭಾರತದ ನೈತಿಕ ಅಧಃಪತನಕ್ಕೆ ದಿನವೂ ಹೊಸಹೊಸ ದಾರಿ ಹುಡುಕುತ್ತಿದ್ದಾರೆ. ಕಟ್ಟುವ ಕೆಲಸವಿಲ್ಲದವರಿಗೆ ಕೆಡವಲು ಮತ್ತು ವಿರೋಧಿಸಲಿಕ್ಕೆ ಎದುರಿಗೆ ಒಂದು ಪ್ರತಿಮೆ, ಒಂದು ಧರ್ಮ, ವ್ಯಕ್ತಿ, ಸಮೂಹ ಅಥವಾ ಹೀಗೆ ಏನಾದರೊಂದು ಬೇಕೆಬೇಕು. ಅವರು ಡಾ. ಅಂಬೇಡ್ಕರ್ ರನ್ನೂ ಅವರ ವಿಚಾರಗಳನ್ನೂ ದಾಳಿಗೊಳಪಡಿಸದೇ ಬಿಟ್ಟಿಲ್ಲ. ಹಾಗಾದರೆ ಯಾಕೆ ಎಂದು ಪರಿಶೀಲಿಸೋಣ.
ಪವಿತ್ರ ಅಪವಿತ್ರ, ಮುಟ್ಟು-ತಟ್ಟುಗಳ ಅಸಮಾನತೆಯನ್ನೇ ಸೃಜಿಸಿದ, ಜಾತಿ, ಉಪಜಾತಿ, ವರ್ಣ, ಲಿಂಗ, ಪ್ರದೇಶ, ಉಡುಗೆ ತೊಡುಗೆಗಳ ತಾರತಮ್ಯಗಳನ್ನು ತನ್ನೊಳಗಿನ ಕಟು ಕಾನೂನಾಗಿಸಿಕೊಂಡ ಸನಾತನವಾದಿ ವೈದಿಕ ಧರ್ಮವನ್ನು ತನ್ನ ರಾಜಕೀಯ ಪುನರುತ್ಥಾನಕ್ಕಾಗಿ ಬಳಸುತ್ತ ಮುಸ್ಲಿಂ ದ್ವೇಷವನ್ನು ಕಾರುತ್ತಿದೆ. ತನ್ನೊಳಗೆ ದಲಿತರು, ಹಿಂದುಳಿದವರು, ಮಹಿಳೆಯರೆಂಬ ಕಾರಣಕ್ಕೆ ಚೌಕಟ್ಟು ವಿಧಿಸುವುದು, ಅನ್ಯಾಹಾರಿಗಳು, ಅನ್ಯ ಭಾಷಿಕರು ಎಂದು ಎರಗಿ ಬರುವುದರ ಮೂಲಕ ರಾಜಕೀಯ ಆಡಳಿತ ಭದ್ರಗೊಳಿಸಿಕೊಳ್ಳುತ್ತಿದೆ. ಇಂಥ ಸರ್ಕಾರವು ವಿಶ್ವದೊಳಗಿನ ನವ ಉದಾರವಾದಿ ಆರ್ಥಿಕ ನೀತಿ ಹೇರುವವರ ಕೈಗೊಂಬೆಯಾಗುತ್ತಿದೆ. ಅದರ ಫಲವಾಗಿ ಭಾರತದಲ್ಲಿ ಎಂದಿಗೂ ಶಾಂತಿ ನೆಲೆಸದಂತೆ ಸೌಹಾರ್ದತೆ ನೆಲೆಗೊಳ್ಳದಂತೆ ಮಾಡುವ ಹುನ್ನಾರ ಮುನ್ನೆಲೆಗೆ ಬರುತ್ತಿದೆ. ಅದಕ್ಕಾಗಿಯೇ ಡಾ. ಅಂಬೇಡ್ಕರ್ ಸನಾತನ ವೈದಿಕಶಾಹಿ ಹಿಂದು ಧರ್ಮವನ್ನು ಖಂಡತುಂಡವಾಗಿ ಟೀಕಿಸಿದರು. ಸಂದರ್ಭ ಬಂದಾಗ ಬಹಿರಂಗವಾಗಿಯೇ ಆ ಮನುಷ್ಯದ್ರೋಹಿ ಶಾಸ್ತ್ರಗ್ರಂಥ ಮನುಸ್ಮೃತಿಯನ್ನು ಸುಟ್ಟುಹಾಕುವ ಧೈರ್ಯ ಮಾಡಿದರು. ಈ ಕುರಿತು ಮರಾಠಿ ಲೇಖಕ ನರಹರ ಕುರಂದಕರ್ ರವರು ತಮ್ಮ ಮನುಸ್ಮೃತಿ ಕೆಲವು ವಿಚಾರಗಳು ಹಾಗೂ “ಬಹಿಷ್ಕೃತ ಭಾರತ ಕೆಲವು ಲೇಖನಗಳು” ದಲ್ಲಿ ಮತ್ತು ಪ್ರಭಾಕರ್ ಸಾಂಜಗಿರ್ ರವರು ಬರೆದ ಪುಸ್ತಕದಲ್ಲಿ ಅಂದಿನ ದಿನಮಾನವನ್ನು ಕಣ್ಣಿಗೆ ಕಟ್ಟುವಂತೆ ವಿಶ್ಲೇಷಿಸಿದ್ದಾರೆ.
“ಧರ್ಮ ಮನುಷ್ಯನಿಗಾಗಿ ಹೊರತೂ ಧರ್ಮಕ್ಕಾಗಿ ಮನುಷ್ಯ ಅಲ್ಲ”
ಭಾರತದ ನೆಲಗುಣ ಎಂದಿಗೂ ದ್ವೇಷದ ವಿಷಕ್ಕೆ ತನ್ನನ್ನು ತೆರೆದುಕೊಂಡಿಲ್ಲ ಅಥವಾ ಒಗ್ಗಿಲ್ಲ ಅಥವಾ ಅಂಥ ಸಂದರ್ಭ ಬಂದಾಗೆಲ್ಲ ನೆಲಮೂಲಕ್ಕೆ ಬಹುಳಗಳನ್ನೇ ಸಾರವಾಗಿ ಹಿಡಿದುಕೊಂಡಿದೆ. ಅದರ ರಕ್ಷಣೆಯೇ ಇಂದಿನ ಸವಾಲು ಅಂದರೆ ಬಹುಳಗಳ ಕೇಂದ್ರ ಬಾರತದ ಮತ್ತು ಅದರೊಳಗೆ ವಾಸಿಸುವವರೆಲ್ಲರ ಪ್ರೀತಿಯ ಬಾಹುಬಂಧಿಯಾಗಿ ಸಂರಕ್ಷಿಸಲಿಕ್ಕೆಂದೇ ಡಾ. ಅಂಬೇಡ್ಕರ್ ಪೀಠಿಕೆಯಲ್ಲಿ ಯಾವ ಧರ್ಮವನ್ನೂ ಉಲ್ಲೇಖಿಸದೇ ಎಲ್ಲರ ಮಾನವ ಘನತೆಯನ್ನು ಎತ್ತಿ ಹಿಡಿದರು. ಕಲಂ 15, 17ನ್ನೂ ಒಳಗೊಂಡು ಎಲ್ಲರಿಗೂ ಸಂವಿಧಾನಾತ್ಮಕವಾಗಿ ರಕ್ಷಣೆಯ ಹಕ್ಕುಗಳನ್ನು ಸೇರಿಸಿದರು.
ಮುಸ್ಲಿಂ ದ್ವೇಷದ ಹಲವು ಚರ್ಚೆಗಳು ಅವರ ಸಮ್ಮುಖದಲ್ಲಿ ನಡೆದಿವೆ. ದಲಿತ ದ್ವೇಷಿಯಾದ ದಾಳಿಕೋರ ಸನಾತನವಾದಿಗಳ ವಿಚಾರ ಅವರ ಮುಂದೆ ಬಂದಿತ್ತು ಮಾತ್ರವಲ್ಲ ಹೆಣ್ಣನ್ನು ತುಚ್ಛವಾಗಿಸುವ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾದ ಅನೇಕ ವಿಚಾರಗಳಿಗೆ ಡಾ. ಅಂಬೇಡ್ಕರ್ ವಿಚಾರ ಪ್ರಚೋದಕ ಉತ್ತರ ನೀಡಿದ್ದಾರೆ. ಅದಕ್ಕೆಂದೇ ಭಾರತದಲ್ಲಿ ಸನಾತನವಾದಿಗಳು ಹಿಂದುತ್ವ ಫ್ಯಾಸಿಸ್ಟ್ ರು ಅಂದಿನಿಂದ ಇಂದಿನ ವರೆಗೆ ಮಾನವತೆ ಎತ್ತಿ ಹಿಡಿದ ಸಂವಿಧಾನವನ್ನು ಸುಡುತ್ತಲೇ ಬಂದಿದ್ದಾರೆ. ಮನುಸ್ಮೃತಿಯನ್ನು ಪೂಜಿಸುತ್ತ ಬಂದಿದ್ದಾರೆ.
ಜೊತೆಗೆ ಇನ್ನೊಂದು ಜಾಣ ಅವಕಾಶವಾದಿ ರಾಜಕಾರಣವೆಂದರೆ, ಡಾ. ಅಂಬೇಡ್ಕರ್ ರನ್ನು ರಾಜಕೀಯ ಮತ್ತು ಓಟಿನ ಕಾರಣಕ್ಕೆ ದೂರವಿಡದೇ ಹಲವು ಸುಳ್ಳುಗಳನ್ನು ಆವಾಹಿಸಿಕೊಂಡು ತಮ್ಮ ಬ್ಯಾನರಿನ ಭಾಗವಾಗಿಯೂ ಮಾಡಿಕೊಂಡಿದ್ದಾರೆ. ಭಗತ್ ಸಿಂಗ್ ರನ್ನೂ ಒಳಗೊಂಡು ಅನೇಕ ಕ್ರಾಂತಿಕಾರಿಗಳನ್ನು ಕೇಸರಿ ಜೆಂಡಾ ಜೊತೆಗೆ ಸೇರಿಸಿದಂತೆ ಇದೂ ಒಂದು. ಆಗೆಲ್ಲ ಅವರು ಅಂಬೇಡ್ಕರ್ ರಿಗೆ ಸಾಂಸ್ಕೃತಿಕ ರಾಷ್ಟ್ರವಾದದಲ್ಲಿ ನಂಬಿಕೆ ಇತ್ತು, ಎರಡು ರಾಷ್ಟ್ರ ಸಿದ್ಧಾಂತದಲ್ಲಿ ನಂಬಿಕೆ ಇತ್ತು, ಅವರೊಬ್ಬ ಮುಸ್ಲಿಂ ದ್ವೇಷಿಯಾಗಿದ್ದರು, ಮುಸ್ಲಿಮರನ್ನು ಭಯೋತ್ಪಾದಕ ಎಂದು ಅಂಬೇಡ್ಕರ್ ರವರೇ ಕರೆದಿದ್ದರು, ಹಿಂದು ಮುಸ್ಲಿಮರು ಕೂಡ ಬಾಳಲಾಗದು, ಅಂಬೇಡ್ಕರ್ ಹಿಂದೂ ಪರವಾಗಿದ್ದರು ಇತ್ಯಾದಿಯಾಗಿ ಹಲುಬುತ್ತಲೇ ಬಂದಿದ್ದಾರೆ. ಆದರೆ ಡಾ. ಅಂಬೇಡ್ಕರ್ ಇಂಥ ಸಂದರ್ಭವನ್ನು ಗಮನದಲ್ಲಿಟ್ಟೇ ಹೇಳಿರುವುದೇನೆಂದರೆ, “ಧರ್ಮ ಮನುಷ್ಯನಿಗಾಗಿ ಹೊರತೂ ಧರ್ಮಕ್ಕಾಗಿ ಮನುಷ್ಯ ಅಲ್ಲ” ಎಂದು. ಇಷ್ಟರಲ್ಲೇ ನಾವು ತಿಳಿಯಬೇಕಾದುದು, ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲರ ಧರ್ಮಗಳ ಚೌಕಟ್ಟುಗಳಾಚೆ ಬಹುತ್ವ ಭಾರತವೇ ನಮ್ಮೊಳಗೆ ನೆಲೆಸಿರುವವರೆಗೆ ಭಾರತಕ್ಕೆ ಯಾವ ಅಪಾಯವೂ ಬರುವುದಿಲ್ಲ. ಅಂಬೇಡ್ಕರ್ ಚಿಂತನೆಗಳನ್ನೂ ಒಳಗೊಂಡು ಪ್ರಗತಿಪರ ಪ್ರಜಾಸತ್ತಾತ್ಮಕ ಚಿಂತನೆಗಳ ಅಳವಡಿಸಿಕೊಂಡಲ್ಲಿ ಖಂಡಿತ ಭಾರತದ ಇಂದಿನ ಸಮಸ್ಯೆಗಳಿಗೆ ಪರಿಹಾರಗಳು ದೊರೆಯುತ್ತವೆ.
ನೀಲಿ ಬಾನೊಳಗೆ ಕೆಂಪು ಸೂರ್ಯನೆಂದರೆ…
ಭಾರತದ ಉದ್ದಗಲಕ್ಕೂ ಪ್ರಜಾಪ್ರಭುತ್ವವಾದಿಗಳು ಒಂದು ದುಷ್ಟ, ವಿಷಕಾರಿ ವಿದ್ವಂಸಕ ಕೂಟದ ವಿರುದ್ಧ ಸಿಡಿದೇಳುವ ಕಾಲಘಟ್ಟ ಇದು. ಹಾಗಾಗಿ ಡಾ. ಅಂಬೇಡ್ಕರ್ ಚಿಂತನಗಳು, ಸಂಶೋಧನೆಗಳು ನಮಗೆ ನೀಲಿ ಬಾನಿನೊಳಗೆ ಕೆಂಪು ಸೂರ್ಯನಂತೆ. ಅದಕ್ಕೆ ದೇಶದ ಎಡ ಚಳುವಳಿಯ ಹಿರಿಯ ಚಿಂತಕ ಪ್ರಕಾಶ್ ಕಾರಟ್ ರವರು ಹೇಳುತ್ತಾರೆ, “ಸಾಮಾಜಿಕ ವಿಮೋಚನೆಯ ವೇದಿಕೆಯು ಭಾರತದಲ್ಲಿ ವರ್ಗ ಸಂಘರ್ಷದ ಅವಿಭಾಜ್ಯ ಅಂಗವೇ ಆಗಿರುತ್ತದೆ. ಅಂಬೇಡ್ಕರ್ ರವರು ಭಾರತದಲ್ಲಿ ಕಮ್ಯುನಿಷ್ಟರಿಗೆ ಸದಾ ಪ್ರಸ್ತುತರಾಗಿದ್ದಾರೆ….. ಪ್ರತಿಗಾಮಿ ಶಕ್ತಿಗಳು ಕೋಮುವಾದ ಮತ್ತು ನವ ಉದಾರವಾದದ ಬಾವುಟಗಳಡಿ ಒಟ್ಟುಗೂಡಿರುವಾಗ ಎಡ ಚಳುವಳಿ ಮತ್ತು ಅಂಬೇಡರ್ ವಾದಿ ಚಳುವಳಿಗಳೆಂಬ ಎರಡು ಧಾರೆಗಳು ಪರಸ್ಪರ ಸಮೀಪಿಸುತ್ತಿವೆ. ಈ ವಿಶಾಲ ಒಗ್ಗಟ್ಟನ್ನು ಮುಂದಕ್ಕೆ ಒಯ್ಯಬೇಕಾಗಿದೆ. ಅಂಬೇಡ್ಕರ್ ರ ನಿಜವಾದ ಮಹತ್ವ ಮತ್ತು ಪರಂಪರೆಯನ್ನು ಸರಿಯಾಗಿ ಗ್ರಹಿಸಿಕೊಂಡು ಮೈಗೂಡಿಕೊಳ್ಳಬೇಕಾಗಿದೆ” ಎಂದು.
ಭಾರತ ಅಥವಾ ಇಂಡಿಯಾ ಇಡಿಯಾಗಿ ಅರ್ಥವಾಗಲು ದೇಶ ಸುತ್ತಬೇಕು ಇಲ್ಲವೇ ಡಾ. ಅಂಬೇಡ್ಕರ್ ರನ್ನು ಹಲವು ಮಗ್ಗಲುಗಳಲ್ಲಿ ಓದಬೇಕು; ಓದಿಸಬೇಕು; ವಿಮರ್ಶಿಸಬೇಕು, ಅಳವಡಿಸಿಕೊಳ್ಳಬೇಕು. ಅವರು ಹೇಳಿದ್ದರು “ನಾವು ಭಾರತೀಯರು ಮೊಟ್ಟ ಮೊದಲನೆಯದಾಗಿಯೂ, ಕಟ್ಟ ಕಡೆಯದಾಗಿಯೂ” ಹಾಗಾಗಿ ಭಾರತದ ಜನ ಗಣ ಮನಗಳ ವಿಭಜಿಸುವ ಈ ಕಾಲದಲ್ಲಿ ಅಂಬೇಡ್ಕರ್ ಆಲೋಚನೆಗಳು, ಬರಹಗಳು, ಅಂದು ಅವರ ಜೀವಿತಾವಧಿಯಲ್ಲಿ ಮಾಡಿದ ಅನೇಕ ಕ್ರಿಯೆ-ಕಾರ್ಯಗಳು ಸಮಕಾಲೀನ ಪರಿಸ್ಥಿತಿಯಲ್ಲಿ ಹೆಚ್ಚು ಪ್ರಸ್ತುತವಾಗುತ್ತಿವೆ.
ನಿರಂಕುಶ ಪ್ರಭುತ್ವದ ಎಚ್ಚರಿಕೆ
ಭಾರತದಲ್ಲಿ ಬಹುಧರ್ಮದ ಜಾಗದಲ್ಲಿ ಬಹುಸಂಖ್ಯಾತ ಧರ್ಮದ ಅಹಮಿಕೆ ಉತ್ತುಂಗಕ್ಕೇರಿದೆ. ಮುಸ್ಲಿಂ ಕ್ರೈಸ್ತ ಇತರೇ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಹಿಂದೆಂದೂ ಕೇಳರಿಯದ ಹೊಸ ಬಗೆಯ ಹಿಂಸೆಯ ಮಾರ್ಗ ಹಿಡಿದಿದೆ. ಮಹಿಳೆ, ಮಕ್ಕಳು, ದಲಿತರು ಹಾಗೂ ಬುಡಕಟ್ಟುಗಳ ಮೇಲೆ ಸನಾತನ ಧರ್ಮದ ವಿಚಾರ ಎರಗಿದೆ. ಯಾಕೆ ಹೀಗೆ ಎಂದು ನಮ್ಮನ್ನೇ ನಾವು ಪ್ರಶ್ನಿಸಿಕೊಂಡರೆ ಮತ್ತೆ ಮತ್ತೆ ಅಂಬೇಡ್ಕರ್ ನೆನಪಾಗುತ್ತಾರೆ, ಅಂದು ನವೆಂಬರ್ 26, 1949 ಸಂವಿಧಾನ ಸಭೆಯಲ್ಲಿ ಡಾ. ಅಂಬೇಡ್ಕರ್ ರ ಒಂದು ಮಾತು ನೆನಪಿಸಿಕೊಳ್ಳುವೆ “ರಾಜಕೀಯ ಕ್ಷೇತ್ರದಲ್ಲಿ ಭಕ್ತಿ ಅಥವಾ ವ್ಯಕ್ತಿ ಪೂಜೆಯು ಖಂಡಿತವಾಗಿಯೂ ಅವನತಿಗೆ ಮತ್ತು ನಿರಂಕುಶ ಪ್ರಭುತ್ವದ ಉದಯಕ್ಕೆ ಕಾರಣವಾಗುತ್ತದೆ” ಎಂದು. ಈಗ ಆಗುತ್ತಿರುವುದು ಅದೇ ಅನಿಸುತ್ತದೆ. ಏಕೆಂದರೆ, ಹಿರಿಯ ಮಾರ್ಕ್ಸ್‌ವಾದಿಯೊಬ್ಬರು ಭಾರತವೆಂದರೆ ಭಾವ, ರಾಗ, ತಾಲಗಳ ಮೇಳದಿಂದ ಉದಿಸಿದ್ದು ಎಂದಿದ್ದಾರೆ. ಇಂಥ ಅಪೂರ್ವ ಜೀವಪರ ನಂಬಿಕೆಗೆ ಇಂದು ಏಟು ಕೊಟ್ಟು ಮುಸ್ಲಿಂ ದ್ವೇಷವನ್ನೋ ಕ್ರೈಸ್ತ ದ್ವೇಷವನ್ನೋ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ತಿನ್ನುವ ಆಹಾರ ಪದ್ಧತಿಯ ದ್ವೇಷವನ್ನೋ ಬಿತ್ತುತ್ತಿದ್ದಾರೆ. ದಲಿತರನ್ನು ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ.
ಸಂವಿಧಾನದ ಕೊಡುಗೆ: ಮನುಷ್ಯತ್ವದ ಸಬಲಿಕರಣದ ಮುಂಚೂಣಿ ನಾಯಕರಲ್ಲಿ ಒಬ್ಬರು
ಹಾಗೆ ನೋಡಿದರೆ ಡಾ. ಅಂಬೇಡ್ಕರ್ ಅವರ ಕುರಿತು ನಿಜವಾದ ಪೂರ್ಣ ಓದು ಪ್ರಾರಂಭವಾಗಿರುವುದೇ ಇತ್ತೀಚಿನ ದಶಕಗಳಲ್ಲಿ. ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಸಾಮಾಜಿಕ ನ್ಯಾಯ, ಕೋಮು ಸೌಹಾರ್ದತೆ, ಆರ್ಥಿಕ ಸ್ವಾತಂತ್ರ್ಯ, ಸಮಾನತೆಯ ವಿಚಾರಗಳಿಗೆ ಹಾಗೂ ಆ ತಳಹದಿಯಲ್ಲಿ ಇಡಲಾದ ಬೇಡಿಕೆಗಳಿಗೆ ಮಾನ್ಯತೆ ಸಿಕ್ಕಿದ್ದು ಸಂವಿಧಾನ ರಚನೆಯಾದ ನಂತರವೇ. ಭಾರತದ ಸಂವಿಧಾನ ರಚನೆಗೆ ಹಲವರು ಕೊಡುಗೆ ಕೊಟ್ಟಿದ್ದಾರೆ; ಕೆಲವರದ್ದು ಧನಾತ್ಮಕವಾದರೆ ಇನ್ನೂ ಕೆಲವರದ್ದು ಋಣಾತ್ಮಕವಾದುದು. ಆದರೆ ಡಾ. ಅಂಬೇಡ್ಕರ್ ತನ್ನೆಲ್ಲಾ ಸಾಮರ್ಥ್ಯವನ್ನು ಉಪಯೋಗಿಸಿ, ಅಪಾರ ಓದು, ಜೀವನಾನುಭವದ ಹಿನ್ನೆಲೆಯಲ್ಲಿ ಸಂವಿಧಾನವನ್ನು ಜನಮುಖಿಯಾಗಿಸುವಲ್ಲಿ ಎಲ್ಲರಿಗಿಂತ ಹೆಚ್ಚು ಕೊಡುಗೆ ಕೊಟ್ಟರು ಎಂಬುದನ್ನು ಇತಿಹಾಸದಿಂದ ಅಳಿಸಲು ಸಾಧ್ಯವಿಲ್ಲ. ರಾಜ್ಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಮಹಿಳಾ ಹಕ್ಕುಗಳ ಪ್ರತಿಪಾದಕರಾಗಿ, ಕಾನೂನಿ ತಜ್ಞರಾಗಿ ಮಾತ್ರವಲ್ಲ ಸೌಹಾರ್ದ ಭಾರತಕ್ಕೆ ಶ್ರಮಿಸಿದ ಮೇಧಾವಿ. ಡಾ. ಅಂಬೇಡ್ಕರ್ ಎಂದರೆ ಕೇವಲ ಭಾವನಾತ್ಮಕ ವಿದ್ಯಮಾನವಲ್ಲ; ಅವರು ಚಾರಿತ್ರಿಕ ಬಹುಸೈದ್ಧಾಂತಿಕ ಸಂಘರ್ಷಗಳ ಪ್ರತೀಕ.
ಅಂಬೇಡ್ಕರ್ ಕೇವಲ ಭಾರತದಲ್ಲಿ ಅಸ್ಪೃಶ್ಯತೆ ನಿವಾರಣೆಗೆ, ಮಹಿಳಾ ಸಮಾನತೆಗೆ, ಸಾಮಾಜಿಕ ನ್ಯಾಯಕ್ಕೆ, ಅಲ್ಪಸಂಖ್ಯಾತ ಸಮುದಾಯಗಳ ಪರವಾಗಿ ಮಾತ್ರ ಹೋರಾಡಲಿಲ್ಲ, ವಿಶ್ವದ ನಾನಾ ದೇಶಗಳಲ್ಲಿ ಇರುವ ಎಲ್ಲಾ ತರತಮ ಭಾವಗಳ ವಿನಾಶಕ್ಕೆ ಸ್ಪೂರ್ತಿಯಾದರು, ಎಲ್ಲಾ ರೀತಿಯ ಮಾನವ ಹಕ್ಕುಗಳನ್ನು ಸಂರಕ್ಷಿಸುವ ಪೋಷಿಸುವ ಸಲುವಾಗಿ ಹೋರಾಡಿದರು, ಬರೆದರು, ಬದುಕಿದರು. ಆದರೆ ಅಂಬೇಡ್ಕರ್ ರ‍್ಯಾಡಿಕಲ್ ವಿಚಾರಧಾರೆಗೆ ಪರದೆ ಎಳೆದಿಟ್ಟು ಅವರನ್ನು ಒಂದು ಸಮುದಾಯದ ನಾಯಕ ಅವರ ಬಗ್ಗೆ ಬೇರೆಯವರು ಮಾತಾಡಬಾರದು ಅಥವಾ ಅವರ ಚಿಂತನೆಗಳನ್ನು ವಿಮರ್ಶೆ ಮಾಡಬಾರದು ಎಂದು ಹೇಳುತ್ತ ಅಂಬೇಡ್ಕರ್ ವಿಚಾರ ಪ್ರಸರಣ ತಡೆದು ಅವರನ್ನು ದಲಿತ ನಾಯಕ ಎಂಬ ಚೌಕಟ್ಟಿಗೆ ನಿಲ್ಲಿಸುವವರೂ ಇದ್ದಾರೆ. ಇದರಿಂದ ಡಾ. ಅಂಬೇಡ್ಕರ್, ಮತ್ತವರ ಚಿಂತನೆಗಳು ಮತ್ತೆ ಮತ್ತೆ ವೈಚಾರಿಕ ಅಸ್ಪೃಶ್ಯತೆಯ ಬಂಧಿಯಾಗಿಸಲಾಗುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕೋಮುವಾದಿಗಳು ನೂರಾರು ಹಸಿಸುಳ್ಳುಗಳ ಮೂಲಕ ಭ್ರಮೆಗಳ ಮೂಲಕ ಅಂಥವರನ್ನು ಮುಸ್ಲಿಂ ದ್ವೇಷದ ರಾಜಕಾರಣಕ್ಕೆ ಬಳಸುತ್ತಿದ್ದಾರೆ. ಅದನ್ನು ದೇಶಮಟ್ಟದ ರಾಜಕಾರಣದಲ್ಲಿ ನಿಚ್ಚಳವಾಗಿ ಕಾಣಬಹುದು. ಅಂಥವರಿಂದ ಡಾ. ಅಂಬೇಡ್ಕರ್ ರನ್ನು ಬಿಡಿಸಿ ಅವರನ್ನು ಮಾನವ ಘನತೆ ಪ್ರತೀಕವಾಗಿ, ಮನುಷ್ಯತ್ವದ ಸಬಲಿಕರಣದ ನಾಯಕರಲ್ಲಿ ಒಬ್ಬರಾಗಿ ಎಲ್ಲೆಡೆ ಪ್ರತಿಷ್ಟಾಪಿಸಲು ಸಾಧ್ಯವಾಗಬೇಕು.
ಜೀವಪರ ಚಿಂತನೆಯ ಬೆಳಕಿನಲಿ ದ್ವೇಷ ಅಳಿಯಲಿ; ಪ್ರೀತಿ ಬೆಳಗಲಿ
ಅಂಬೇಡ್ಕರ್ ಬದುಕಿನ ಬಾಲ್ಯ, ಯೌವನದ ಮಜಲುಗಳು, ದೇಶ-ವಿದೇಶಗಳಲ್ಲಿ ಅಧ್ಯಯನ ಮಾಡಿದ ವಿಷಯಗಳು ಹಾಗೂ ಭಾರತದ ಪುನರಾವಲೋಕನಕ್ಕೆ ಕೈಗೊಂಡ ಸಂಶೋಧನೆಗಳು, ಸಂವಿಧಾನ ರಚನಾ ಸಭೆಯ ಸುದೀರ್ಘ ಚರ್ಚೆಗಳು, ಅಂಗೀಕಾರದ ದಿನದ ಸುದೀರ್ಘ ಭಾಷಣ ಹಾಗೂ ಭಾರತ ಸರ್ಕಾರದಲ್ಲಿ ಮಂತ್ರಿಗಳಾಗಿ ಮಾಡಿದ ಕೆಲಸ, ಸಂಸತ್ತಿನಲ್ಲಿ ಮಂಡಿಸಿದ ಮಸೂದೆಗಳು ಮತ್ತು ರಾಜಿನಾಮೆಯ ಖಡಕ್ ನಿರ್ಣಯ ಹಾಗೂ ಜೀವನದ ಕೊನೆಯ ಹಂತದಲ್ಲಿ ತೆಗೆದುಕೊಂಡ ನಿರ್ಧಾರದಂತೆ ಬೌದ್ಧ ಧರ್ಮಕ್ಕೆ ತೆರಳಿದ್ದು ಇವೆಲ್ಲವೂ ಇಂದಿನ ಯುವಜನತೆಯ ಕಣ್ಣು ತೆರೆಯಿಸುವ ಚಿಂತನೆಗೆ ಹಚ್ಚುವ ವಿಷಯಗಳಾಗಲಿ. ಭಾರತದಾದ್ಯಂತ ಸೌಹಾರ್ದತೆ ಹಾಗೂ ದ್ವೇಷ ರಹಿತ ವಾತಾವರಣ ನೆಲೆ ನಿಲ್ಲಲು ಚಾರ್ವಾಕ, ಲೋಕಾಯತ, ಬುದ್ಧ, ಬಸವ, ಗಾಂಧಿ, ಮಾರ್ಕ್ಸ್, ಪೆರಿಯಾರ್, ಪುಲೆ, ಭಗತ್ ಸಿಂಗ್, ಇಎಂಎಸ್, ಅಂಬೇಡ್ಕರ್ ಎಲ್ಲರ ಅಧ್ಯಯನಕ್ಕೆ ಒತ್ತು ನೀಡುವ ಮೂಲಕ ಈ ಸುವಿಚಾರಗಳ ಅನ್ವಯ ಮಾಡಿಕೊಳ್ಳಬೇಕಿದೆ. ಮತ್ತು ಸಂವಿಧಾನ ಓದು, ಪ್ರಗತಿಪರ ಸಾಹಿತ್ಯ ಓದು ಮತ್ತು ಜೀವನದ ಎಲ್ಲಾ ಹಂತದಲ್ಲಿ ಯಾರನ್ನೂ ದ್ವೇಷಿಸದ ಎಚ್ಚರ ಹಾಗೂ ಅದನ್ನು ಭಾರತದ ಜನತೆಯ ಪ್ರಜ್ಞೆಯ ಭಾಗವಾಗಿಸುವುದಕ್ಕೆ ನಮ್ಮೆಲ್ಲರ ಕೆಲಸ ಸಾಗಲಿ. ದ್ವೇಷ ಅಳಿಯಲಿ; ಪ್ರೀತಿ ಬೆಳಗಲಿ.