ಪಕ್ಷದ ಪ್ರಣಾಳಿಕೆ ಹೊರತು ಪಡಿಸಿ ಆಗಬೇಕಾದ ಅಗತ್ಯ ಕೆಲಸಗಳೇ ಅಧಿಕ

ಮಲ್ಲಿಕಾರ್ಜುನ ಕಡಕೋಳ

ನೂತನ ಶಾಸಕ ಡಾ. ಅಜಯಸಿಂಗ್ ಅವರಿಗೊಂದು ಬಹಿರಂಗ ಪತ್ರ

ದುಡಿಯುವ ಕೈಗಳಿಗೆ ಕೆಲಸ ನೀಡುವ ಕಾರ್ಖಾನೆಗಳಂತೂ ನಮಗೆ ಕನಸಿನ ಚಿತ್ರಗಳೇ. ಅಂದಹಾಗೆ ನಿಮ್ಮ ತಂದೆಯವರ ಕಾಲದಲ್ಲೇ ”ಫುಡ್ ಪಾರ್ಕ್” ಗೆಂದು ಜೇವರ್ಗಿ ಟು ಸಿಂದಗಿ ಮಾರ್ಗ ಬದಿಯಲ್ಲಿ ಮೀಸಲಾಗಿಟ್ಟಿರುವ ನೂರು ಎಕರೆ ಜಮೀನು ಬರ್ಬಾದ ಆಗುತ್ತಲಿದೆ. ದಶಕಗಳೇ ಕಳೆದರೂ ಅಲ್ಲಿ ಫುಡ್ಡೂ ಇಲ್ಲ ಪಾರ್ಕೂ ಇಲ್ಲ. ಯುವಕರಿಗೆ ಉದ್ಯೋಗದ ಮಾತು ಗಗನ ಕುಸುಮವೇ ಆಗಿ ಹೋಗಿದೆ.

 

ಸನ್ಮಾನ್ಯರೇ ನಮಸ್ಕಾರ……..

ರಾಜ್ಯದಲ್ಲಿ ಪ್ರಸ್ತುತ ಕಾಂಗ್ರೆಸ್ ಪಕ್ಷದ ಗೆಲುವೆಂದರೆ, ಕೇವಲ ಆಡಳಿತ ವಿರೋಧಿ ಅಲೆಗೆ (anti incombency wave) ಜನ ನೀಡಿದ ತೀರ್ಪು ಮಾತ್ರವಲ್ಲ. ಅದು ಫ್ಯಾಸಿಸಮ್ (fascism) ವಿರುದ್ದದ ಹೋರಾಟಕ್ಕೆ ದಕ್ಕಿದ ಜಯ. ಇದು ನನ್ನ ಗಟ್ಟಿಗ್ರಹಿಕೆ ಮತ್ತು ನಂಬಿಕೆ. ನಮ್ಮ ಜೇವರ್ಗಿ ಮತಕ್ಷೇತ್ರದ ಜನರು ಸ್ವಭಾವಜನ್ಯ ಮುಗ್ಧರು ಮಾತ್ರವಲ್ಲ, ಅವರಲ್ಲಿ ಸೆಕ್ಯುಲರ್ ಪ್ರಜ್ಞೆಯ ಅಭಾವ ಇಲ್ಲವೇ ಇಲ್ಲ. ಅದನ್ನು ಯಾವತ್ತೂ ಚುನಾವಣಾ ಮತಗಳ ಅಂಕಿ ಸಂಖ್ಯೆಗಳಿಂದ ಅಳೆಯಲಾಗದು. ಕಾರಣ ಅಪ್ಪಟ ಮನುಷ್ಯಪ್ರಜ್ಞೆಯ ಕಡಕೋಳ ಮಡಿವಾಳಪ್ಪ, ರಾಂಪುರದ ಬಕ್ಕಪ್ಪ, ಷಣ್ಮುಖ ಶಿವಯೋಗಿ, ಚೆನ್ನೂರ ಜಲಾಲ ಸಾಹೇಬರು ಬಾಳಿ ಬದುಕಿದ ಅಂತಃಕರಣದ ನೆಲಧರ್ಮ. ಅಂತಹ ಸಂತ, ಸೂಫಿ, ಶರಣರ ಜಾತ್ಯತೀತ ಬೇರುಬಂಧ ಸಂವೇದನೆಗಳೇ ಗೆಲುವಿನ ಪ್ರತೀಕ. ಅದರ ಸಾಧ್ಯತೆಯ ಕ್ಷಿತಿಜ ನಿಮ್ಮ ಹ್ಯಾಟ್ರಿಕ್ ಯಶಸ್ಸಿನ ಹಿಂದೆ ಎರಕಗೊಂಡಿರುವ ನೇಪಥ್ಯ ಸತ್ಯವೂ ಹೌದು.

ಕೇವಲ ಹಣ ಹಂಚಿಕೆಯಂತಹ ಕೆಲವು ತಾಂತ್ರಿಕ ಕಾರಣಗಳನ್ನು ಧೇನಿಸಿಕೊಂಡು ಜಯದ ಲೆಕ್ಕಾಚಾರ ಹಾಕುವ ಲೆಕ್ಕಿಗರಿಗೂ ಇದು ಅರ್ಥವಾಗಬೇಕಿದೆ. ಒಂದು ಅಜಮಾಸಿನ ಪ್ರಕಾರ ಜೇವರ್ಗಿ ತಾಲೂಕಿನ ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಂದುನೂರು ಕೋಟಿಗೂ ಅಧಿಕ ವಹಿವಾಟು ನಡೆಸಿವೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಆಮಿಷೆಗಳಾಚೆಯೂ ಮತದಾರ ತನ್ನ ಜಾತ್ಯತೀತ ಮತ್ತು ಧರ್ಮಾತೀತ ಮತಪ್ರಜ್ಞೆ ಮೆರೆದಿರುವುದು ಶ್ಲಾಘನೀಯ. ಗರ್ಭಗುಡಿ ಸಂಸ್ಕೃತಿ ಹಿಡಿತದ ಸಮೀಕರಣ, ಶೇಕಡಾವಾರು ಮತ ವಿಶ್ಲೇಷಣೆಗಳ ಕೂದಲು ಸೀಳುವ ಗೋಜಿಗೆ ನಾನು ಹೋಗಲಾರೆ. ಕಾಲಘಟ್ಟದ ಸಾಪೇಕ್ಷೆ, ಉಪೇಕ್ಷೆಗಳೇನಿದ್ದರೂ ಅದನ್ನು ನಾನು ರಾಜ್ಯಮಟ್ಟಕ್ಕೆ ಮಿತಿಗೊಳಿಸಿ ಮತ್ತೆ ಜೇವರ್ಗಿ ಕ್ಷೇತ್ರಕ್ಕೆ ಹೊಳ್ಳಿ ಬರುವೆ.

ಕೋಮುವಾದದ ಕಿಚ್ಚಿನ ಬೆಂಕಿ ಹಚ್ಚುವ ತ್ರಿಶೂಲ ಹಂಚಿಕೆಯ ಕೇಸರಿ ಕಿಡಿಯೊಂದಿಗಿನ ನಿಮ್ಮ ಅಂತರಂಗದ ಸಖ್ಯ ಅನಾರೋಗ್ಯಕರ. ನಾಗಪುರದ ಹಾವಾಡಿಗರ ಕುಡಿಯಂತಿರುವ ಅದು ನಿಮ್ಮನ್ನು ಯಾವತ್ತಾದರೂ ಕಚ್ಚದೇ ಬಿಡುವುದಿಲ್ಲ ಎಂಬುದು ನೆನಪಿರಲಿ. ಹೀಗಾಗಿ ನನ್ನ ಹಾಗೆ ಕೆಲವರಿಗೆ ನಿರಾಳ ಮತ್ತು ಆತಂಕ ಎರಡರ ಮಿಶ್ರನಡೆ ನೋಡುವಂತಾಗಿದೆ. ಇದು ಕೇವಲ ಅಲ್ಪಸಂಖ್ಯಾತರನು ಗಮನದಲ್ಲಿರಿಸಿ ಹೇಳುವ ಮಾತಲ್ಲ. ಬಹುಸಂಖ್ಯಾತ ಶೋಷಿತ, ದಲಿತ, ಬಸವ ಧರ್ಮೀಯರೆಲ್ಲರನು ಕಾಡುವ ತೋರಿಕೆ. ಸಮಷ್ಟಿಯ ಕಟ್ಟಕಡೆಯ ಶೋಷಿತನಿಗೆ ಅನ್ಯಾಯವಾದರೆ ಥಟ್ಟಂತ ಅವನ ಪರವಾಗಿ ನಿಲ್ಲುತ್ತಿದ್ದುದು ಧರ್ಮಸಿಂಗ್ ಅವರ ಐಡಿಯಾಲಜಿ. ನಿಮ್ಮದು ಸೇಫರ್ ಝೋನ್ ಸೋಷಿಯಲ್ ಎಂಜಿನಿಯರಿಂಗ್. ಅದೆಲ್ಲ ವಿವರಿಸಲು ಇದು ವೇದಿಕೆ ಮತ್ತು ಸಕಾಲವಲ್ಲ.

ಅದೇನೇ ಇರಲಿ, ನಿಮ್ಮ ತಂದೆಯವರು ನಿಮ್ಮ ಹಾಗೆ ಆರಿಸಿ ಬಂದಾಗೆಲ್ಲ ನಾನು ಪೋಷ್ಟ್ ಕಾರ್ಡ್, ಇಲ್ಲವೇ ಅಂತರ್ದೇಸಿಯ ಪತ್ರ ಬರೆದು ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತಿದ್ದೆ. ಹಾಗೆಯೇ ಕೆಲವು ಮೂಲಭೂತ ಅಗತ್ಯಗಳನ್ನು ಬೇಡಿಕೆಯಾಗಿ ಮಂಡಿಸುತ್ತಿದ್ದೆ. ಹಾಗೆ ಮಂಡಿಸುವಾಗ ಒಂದೇಒಂದು ವಯಕ್ತಿಕ ಬೇಡಿಕೆ ನನ್ನದಾಗಿರುತ್ತಿರಲಿಲ್ಲ. ಈಗ್ಗೆ ಐವತ್ತೊಂದು ವರ್ಷಗಳ ಹಿಂದೆ ೧೯೭೨ ರ ಧರ್ಮಸಿಂಗ್ ಅವರ ಮೊಟ್ಟ ಮೊದಲ ವಿಧಾನಸಭಾ ಚುನಾವಣೆ ನನಗಿನ್ನೂ ನಿನ್ನೆಯ ನಿಮ್ಮ ಚುನಾವಣೆಯಷ್ಟೇ ಹಚ್ಚ ಹಸಿರಾಗಿದೆ. ಅವರು ಆನಂತರ ನಮ್ಮೂರಿನ ಹಿರೇಹಳ್ಳಕ್ಕೆ ಪೂಲ್ (ಸೇತುವೆ) ನಿರ್ಮಿಸಿ ಕೊಡದಿದ್ದರೆ, ಅವರ ಹಾಗೆ ಹಳ್ಳದಾಚೆಯ ವಾರಿಯ ಮೇಲೆ ಜೀಪು ನಿಲ್ಲಿಸಿ ನೀವೂ ಎಡಗೈಯಲ್ಲಿ ಪಾದರಕ್ಷೆ ಹಿಡಕೊಂಡು ಹಳ್ಳದಾಟಿ ಊರೊಳಕ್ಕೆ ಬರಬೇಕಿತ್ತು.

ಪುಣ್ಯಾತ್ಮ ಹಿರೇಹಳ್ಳಕ್ಕೆ ಪೂಲ್ ಕಟ್ಟಿಸಿ ಪುಣ್ಯ ಕಟ್ಟಿಕೊಂಡ‌ರು. ಫಾರ್ಚ್ಯುನೇಟ್ಲೀ ನಿಮ್ಮ ಫಾರ್ಚುನರ್ ಇಲ್ಲವೇ ಇನ್ನೋವಾ ಕಾರುಗಳು ಈಗ ಸರಾಗವಾಗಿ ಸೇತುವೆ ಮೇಲೆ ಬರುತ್ತಿವೆ. ಅದು ಕೇವಲ ಊರುಗಳನು ಬೆಸಗೊಳಿಸುವ ಭೌತಿಕ ಸೇತುವೆಯಾಗಿರದೇ ಮಡಿವಾಳಪ್ಪನ ಕಾಯಕ ನೆಲ ಸಂಪರ್ಕದ ಸಾಂಸ್ಕೃತಿಕ ಸೇತುವೆಯೆಂದು ನಾನು ಭಾವಿಸುವೆ. ಅಂತೆಯೇ ಧರ್ಮಸಿಂಗ್ ಅವರು ಮುಖ್ಯಮಂತ್ರಿ ಆದಾಗ ಎಣೆಯಿಲ್ಲದಷ್ಟು ಸಂಭ್ರಮಿಸಿದವರು ನಾವು. ಅವರು ನಮ್ಮೂರಿಗೆ ಮಾಡಿಕೊಟ್ಟ ಅಕ್ಷರಶಃ ಲೋಕೋಪಯೋಗಿ ಕೆಲಸವೆಂದರೆ ಹಿರೇಹಳ್ಳಕ್ಕೆ ಕಟ್ಟಿದ ಸೇತುವೆ ಮತ್ತು ಬ್ಯಾರೇಜ್.

ಅಂತಹ ಉಲ್ಲೇಖನೀಯ ಕೆಲಸ ತಮ್ಮ ಹತ್ತು ವರ್ಷಗಳ ಅವಧಿಯಲ್ಲಿ ಆಗಲಿಲ್ಲ. ಸ್ವಾತಂತ್ರ್ಯ ಬಂದು ಎಪ್ಪತ್ತೈದು ವರ್ಷ ಕಳೆದರೂ ಕೇವಲ ಕೆಲವು ಲಕ್ಷಗಳ ವೆಚ್ಚದ ಶುದ್ಧ ಕುಡಿಯುವ ನೀರು ಪೂರೈಸಲಾಗಲಿಲ್ಲ. ಇಂದಿಗೂ ದನಗಳು ಮತ್ತು ಜನಗಳು ನಾವು ಕುಡಿಯುವ ನೀರೊಂದೇ. ನೀರೊಂದೇ ಶೌಚಾಚಮನಕ್ಕೆ ಭೇದವಿಲ್ಲ ಎಂಬ ವಚನದಂತಾಗಿದೆ ನಮ್ಮ ಪರಿಸ್ಥಿತಿ. ಇದು ನನ್ನೂರು ಮಾತ್ರವಲ್ಲ ಬಹಳಷ್ಟು ಹಳ್ಳಿಗಳ ವಸ್ತುಸ್ಥಿತಿ.

ಇನ್ನು ಹಳ್ಳಿಗಳ ರಸ್ತೆ, ಶಾಲೆ, ಆರೋಗ್ಯ ವ್ಯವಸ್ಥೆ ನೀವು ಅರಿಯದ್ದೇನಲ್ಲ. ಸೂಫಿ ಸಂತರು ಮತ್ತು ತತ್ವಪದಗಳ ಅನುಭಾವ ಸಂಪತ್ತು ಕುರಿತು ಸಮಗ್ರ ಅಧ್ಯಯನ ಹಾಗೂ ಸಂಶೋಧನಾ ಪ್ರಾಧಿಕಾರ ರಚನೆಯಾಗಬೇಕಿರುವುದು. ಅದು ನಿಮ್ಮ ತಂದೆಯವರ ಕಾಲದ ಅರ್ಧ ಶತಮಾನದಷ್ಟು ಹಳತಾದ ಅಗತ್ಯದ ಬೇಡಿಕೆ. ಆ ಬಗ್ಗೆ ರೇಜಿಗೆಯಾಗುವಷ್ಟು ಬಾರಿ ಪತ್ರಿಕೆಗಳು ಬರೆದಾಗಿದೆ. ಯಡ್ರಾಮಿ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಲ್ಲಿ ಕುಂತು ನಿಮ್ಮ ಸಮಕ್ಷಮವೇ ನಾನು ಖುದ್ದು ಸರಕಾರಕ್ಕೆ ಮನವಿ ಮಾಡಿಕೊಂಡೆ. ಅದಕ್ಕೆ ಮೊದಲು ರಾಯಚೂರಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ನಾಡೋಜ ಬರಗೂರು ರಾಮಚಂದ್ರಪ್ಪ ಅದೇ ಬೇಡಿಕೆಯನ್ನು ಮಂಡಿಸಿದ್ದರು. ನಮ್ಮ ಹಕ್ಕೊತ್ತಾಯಗಳು ಪ್ರಭುತ್ವಕ್ಕೆ ಅರ್ಥವಾಗಿರಲಾರವೆಂದು ಭಾವಿಸಲಾರೆ. ಪ್ರಾಯಶಃ ಜಾಣ ಕುರುಡು ಮತ್ತು ಕಿವುಡುತನವೆಂದು ಭಾವಿಸಲೇ.?

ದುಡಿಯುವ ಕೈಗಳಿಗೆ ಕೆಲಸ ನೀಡುವ ಕಾರ್ಖಾನೆಗಳಂತೂ ನಮಗೆ ಕನಸಿನ ಚಿತ್ರಗಳೇ. ಅಂದಹಾಗೆ ನಿಮ್ಮ ತಂದೆಯವರ ಕಾಲದಲ್ಲೇ ”ಫುಡ್ ಪಾರ್ಕ್” ಗೆಂದು ಜೇವರ್ಗಿ ಟು ಸಿಂದಗಿ ಮಾರ್ಗ ಬದಿಯಲ್ಲಿ ಮೀಸಲಾಗಿಟ್ಟಿರುವ ನೂರು ಎಕರೆ ಜಮೀನು ಬರ್ಬಾದ ಆಗುತ್ತಲಿದೆ. ದಶಕಗಳೇ ಕಳೆದರೂ ಅಲ್ಲಿ ಫುಡ್ಡೂ ಇಲ್ಲ ಪಾರ್ಕೂ ಇಲ್ಲ. ಯುವಕರಿಗೆ ಉದ್ಯೋಗದ ಮಾತು ಗಗನ ಕುಸುಮವೇ ಆಗಿ ಹೋಗಿದೆ.

ಮಲ್ಲಾಬಾದಿ ಏತ ನೀರಾವರಿ ವಿಧಾನಸೌಧದ ಪ್ರಶ್ನೋತ್ತರಗಳ ಪ್ರಕ್ರಿಯೆಗಳನ್ನು ದಾಟಿ ನಿಮ್ಮ ಈ ಅವಧಿಯಲ್ಲಿ ಸಂಪೂರ್ಣವಾಗಿ ಅನುಷ್ಠಾನಕ್ಕೆ ಬರುವಂತಾಗಲಿ. ನೂರಾ ಅರವತ್ತೈದು ಹಳ್ಳಿಗಳ ಇಷ್ಟು ದೊಡ್ಡ ಕ್ಷೇತ್ರದ ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿಗೆ ಮಳ್ಳಿ ಬಳಿಯಲ್ಲಿ ಒಂದೇ ಒಂದು ಸಕ್ಕರೆ ಕಾರ್ಖಾನೆ ಇದೆ. ಅದೂ ಖಾಸಗಿ ಕಾರ್ಖಾನೆ. ಈಗೀಗ ಹೆಚ್ಚುಪಾಲು ಕಬ್ಬು ಬೆಳೆಯುವ ರೈತರ ಬವಣೆ ಹೇಳತೀರದು. ಎಷ್ಟೋ ಬಾರಿ ಕಬ್ಬು ಅರೆಯುವ ಸರದಿ ಬಾರದೇ ಒಣಗಿ ಕರಲಾದ ಕಬ್ಬಿನ ಪೆಂಡಿಗಳನ್ನು ರೈತರು ಸಿಟ್ಟಿಗೆದ್ದು ಸಂಕಟದಿಂದ ಸುಟ್ಟು ಹಾಕುತ್ತಾರೆ.

ಅಂತೆಯೇ ಸರಕಾರದ ನೆರವಿನ ರೈತ ಸಹಕಾರಿ ಯೋಜನೆಯಡಿ ಬೃಹತ್ ಪ್ರಮಾಣದ ಕಬ್ಬಿನ ಕಾರ್ಖಾನೆ ಸ್ಥಾಪನೆ ಮಾಡುವ ತುರ್ತು ಕೆಲಸ ಆಗಬೇಕಿದೆ. ವಿಧಾನಸಭಾ ಕ್ಷೇತ್ರದ ಒಂದೇಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರ ಸುಸಜ್ಜಿತವಾಗಿ, ಸಂಪೂರ್ಣ ಸಿಬ್ಬಂದಿಯಿಂದ ಭರ್ತಿ ಆದುದು, ಅವರೆಲ್ಲ ಹೆಡ್ ಕ್ವಾರ್ಟರ್ಸ್ ಗಳಲ್ಲೇ ವಾಸವಾಗಿದ್ದು, ಸುಸ್ಥಿರ ಸೇವೆ ನೀಡುವ ನಿದರ್ಶನಗಳು ಅವು ಸ್ಥಾಪನೆಯಾದ ಕಾಲದಿಂದಲೂ ಇಲ್ಲ. ಅದು ನಿಮ್ಮ ತಂದೆಯವರ ಅವಧಿಯಿಂದಲೂ ಸಾಧ್ಯವಾಗಿಲ್ಲ. ಹೇಗಿದ್ದರೂ ನೀವೇ ಖುದ್ದು ವೈದ್ಯರೇ ಆಗಿರುವುದರಿಂದ ನಿಮಗೆ ಪಬ್ಲಿಕ್ ಹೆಲ್ತ್ ಅವೇರ್ನೆಸ್ ಇರ್ಲೇಬೇಕು. ಇಂಡಿಯನ್ ಪಬ್ಲಿಕ್ ಹೆಲ್ತ್ ಸ್ಟ್ಯಾಂಡರ್ಡ್ (IPHS) ಕುರಿತಾಗಿ ತಮಗೆ ಅಪಾರ ಜ್ಞಾನ ಇದೆಯೆಂದು ನಂಬಿದ್ದೇನೆ.

ಅದರನುಗುಣವಾಗಿ ಈ ಹಿಂದಿನ ಹತ್ತು ವರ್ಷಗಳ ಅವಧಿಯಲ್ಲೇ ಇದನ್ನೆಲ್ಲ ಸಾಧುಗೊಳಿಸಿದ್ದರೆ ನಾನಿಲ್ಲಿ ಹೆಲ್ತ್ ಇಶ್ಯೂ ಪ್ರಸ್ತಾಪಿಸುವ ಅಗತ್ಯವೇ ಇರುತ್ತಿರಲಿಲ್ಲ. ಇನ್ನೇನು ಬೇಡ ಸಣ್ಣದೊಂದು ನಿದರ್ಶನ : ನಮ್ಮೂರಿನಲ್ಲಿ ಸರಕಾರ ನಿರ್ಮಿಸಿದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ (ಈಗದು ಪ್ರೈಮರಿ ಹೆಲ್ತ್ ಕೇರ್ ಆಫಿಸರ್ ) ನಿವಾಸ ಕಮ್ ಕ್ಲಿನಿಕ್ ಉದ್ಘಾಟನೆ ಆಗದೇ, ಸಂಬಂಧಿತ ನೌಕರರು ಅಲ್ಲಿ ವಾಸಿಸುತ್ತಿಲ್ಲ. ಯಾವಾಗಲೋ ಅದು ತೆರೆದು ಮುಚ್ಚುವ ಉಪಕೇಂದ್ರ, ಪಾಳುಬಿದ್ದುದನ್ನು ನಾಡಿನ ವಿಶ್ವಾಸಾರ್ಹತೆಯ ಪ್ರಜಾವಾಣಿಯಂತಹ ದೈನಿಕ ಸಚಿತ್ರ ಸುದ್ದಿ ಮಾಡಿತ್ತು. ಅಂತಹ ಹತ್ತಾರು ಆರೋಗ್ಯ ಉಪಕೇಂದ್ರಗಳು ಜೇವರ್ಗಿ ವಿಧಾನಸಭಾ ಕ್ಷೇತ್ರದ ತುಂಬಾ ಇವೆ. ತಾಲೂಕಿನ ಅವುಗಳನ್ನೆಲ್ಲ ಸುಸ್ಥಿರಗೊಳಿಸಿ ಜನಾರೋಗ್ಯ ಸುಧಾರಿಸಬೇಕು. ಇದು ನೀವು ಕ್ಷೇತ್ರದ ನಮಗೆ ನೀಡುವ ವಿಶೇಷ ಗ್ಯಾರಂಟಿಯಾದರೆ ಗ್ರಾಮೀಣ ಆರೋಗ್ಯ ಸೇವೆಗಳು ಸಾರ್ಥಕ ಆಗಬಲ್ಲವು.

ಹೀಗೆ ಐದು ವರುಷಗಳ ಅವಧಿಯಲ್ಲಿ ಪಕ್ಷದ ಪ್ರಣಾಳಿಕೆ ಹೊರತು ಪಡಿಸಿ ಆಗಬೇಕಾದ ಅಗತ್ಯ ಕೆಲಸಗಳೇ ಅಧಿಕ. ಅವೆಲ್ಲ ಆದ್ಯತೆಯ ಮೇರೆಗೆ ಆಗುಮಾಡಲು ಮನವಿ. ಜನರಿಂದ ಬರುವ ಪತ್ರಗಳನ್ನು ತಪ್ಪದೇ ಓದುವ ಸಹೃದಯತೆ ನಿಮ್ಮ ತಂದೆಯವರಿಗಿತ್ತು. ಅದು ನಿಮಗೂ ಇದೆಯೆಂದು ಭಾವಿಸಿದ್ದೇನೆ. ಏಕೆಂದರೆ ನನ್ನಂತಹ ಸಾಮಾನ್ಯರು ಬರೆಯುವ ಕಾಗದಗಳಲ್ಲಿ ಜನರ ಪ್ರಾಣಪ್ರಾಯದ ಸಂಕಟಗಳಿರುತ್ತವೆ. ಸಧ್ಯಕ್ಕಿಷ್ಟು ಸಾಕು. ಮತ್ತೆ ಸಂದರ್ಭೋಚಿತವಾಗಿ ಆಗಾಗ ಬರೆಯುವೆ.

Donate Janashakthi Media

Leave a Reply

Your email address will not be published. Required fields are marked *