ಪ್ರಕಾಶ್ ಕಾರಟ್
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ನರೇಂದ್ರ ಮೋದಿ ಹಾಗೂ ಆದಿತ್ಯನಾಥ್ ನೇತೃತ್ವದ ಬಿಜೆಪಿ ಕೋಮುವಾದ ಹಾಗೂ ಜಾತಿವಾದದ ಡಬಲ್ ಎಂಜಿನ್‌ನಲ್ಲಿ ಜನರನ್ನು ಅಣಿಗೊಳಿಸಲು ಮುಂದಾಗಿದೆ. ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ನಡೆಯುತ್ತಿರುವ ರೈತ ಚಳವಳಿಯ ಹಿನ್ನೆಲೆಯಲ್ಲಿ ಮೋದಿ ಮತ್ತು ಯೋಗಿ ಭಾಷಣಗಳನ್ನು ಗಮನಿಸಬೇಕು.
ಪ್ರಧಾನಿ ನರೇಂದ್ರ ಮೋದಿ ಕೆಲವು ದಿನಗಳ ಹಿಂದೆ, ಉತ್ತರ ಪ್ರದೇಶದಲ್ಲಿ ‘ಡಬಲ್ ಲಾಭ’ ಒದಗಿಸಲು ‘ಡಬಲ್ ಎಂಜಿನ್ ಬೆಳವಣಿಗೆ’ ಎಂಬ ತಮ್ಮ ಅಚ್ಚುಮೆಚ್ಚಿನ ಹೋಲಿಕೆ ಮಾತನ್ನು ಮತ್ತೆ ಬಳಸಿದ್ದಾರೆ. ಆಲಿಗಢದಲ್ಲಿ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ರಾಜ್ಯ ವಿಶ್ವವಿದ್ಯಾಲಯದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುವಾಗ ಮೋದಿ ಹೀಗೆ ಹೇಳಿದ್ದು ವಾಸ್ತವವಾಗಿ ‘ಡಬಲ್ ಎಂಜಿನ್’ನ ಅರ್ಥವೇನೆಂಬುದನ್ನು ಸ್ಪಷ್ಟವಾಗಿಸಿದೆ. ಅದು ಕಡು ಕೋಮುವಾದ ಹಾಗೂ ಜಾತಿ ಮನವಿಯ ಒಂದು ಮಿಶ್ರಣವಾಗಿದೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ಮೋದಿ ಹಾಗೂ ಆದಿತ್ಯನಾಥ್ ನೇತೃತ್ವದ ಬಿಜೆಪಿ ಕೋಮುವಾದ ಹಾಗೂ ಜಾತಿವಾದದ ಡಬಲ್ ಎಂಜಿನ್‌ನಲ್ಲಿ ಜನರನ್ನು ಅಣಿಗೊಳಿಸಲು ಮುಂದಾಗಿದೆ. ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ನಡೆಯುತ್ತಿರುವ ರೈತ ಚಳವಳಿಯ ಹಿನ್ನೆಲೆಯಲ್ಲಿ ಮೋದಿ ಭಾಷಣವನ್ನು ಗಮನಿಸಬೇಕು. ನಾಲ್ಕರಿಂದ ಐದು ವರ್ಷಗಳ ಹಿಂದೆ ಜನರು ಹೆದರಿಕೆಯಿಂದ ಜೀವನ ನಡೆಸುತ್ತಿದ್ದರು ಹಾಗೂ ‘ಸೋದರಿಯರು ಮತ್ತು ಪುತ್ರಿಯರು ಮನೆಗಳಿಂದ ಹೊರಗೆ ಬರಲು ಭಯಪಡುತಿದ್ದರು’ ಎಂಬುದನ್ನು ನೆನಪಿಸಲು ಮೋದಿ ಮರೆಯಲಿಲ್ಲ. ಭಯದ ವಾತಾವರಣ ಹೇಗಿತ್ತೆಂದರೆ ಅನೇಕ ಜನರು ತಮ್ಮ ಪೂರ್ವಜರ ಮನೆಗಳನ್ನು ಬಿಟ್ಟು ಓಡಿ ಹೋಗಿದ್ದರು. ಮುಸ್ಲಿಂ ಕ್ರಿಮಿನಲ್‌ಗಳ ಹೆದರಿಕೆಯಿಂದಾಗಿ ಶಾಮ್ಲಿ ಜಿಲ್ಲೆಯ ನೂರಾರು ಕುಟುಂಬಗಳು ಮನೆಮಠ ತೊರೆದಿದ್ದರು ಎಂದು ಬಿಜೆಪಿ ಸಂಸದ ಹುಕುಂ ಸಿಂಗ್ 2016ರಲ್ಲಿ ಮಾಡಿದ್ದ ಸುಳ್ಳು ಆರೋಪದ ಪ್ರತಿಧ್ವನಿಯಂತಿದೆ ಈ ಟಿಪ್ಪಣಿ.
ಮಹೇಂದ್ರ ಪ್ರತಾಪ್ ಸಿಂಗ್ ಯುನಿವರ್ಸಿಟಿಯ ಸ್ಥಾಪನೆಯು ‘ಜಾಟ್ ಶಿರೋಮಣಿ’ಗೆ ಅರ್ಪಿಸುವ ಗೌರವವಾಗಿದೆ ಎಂದು ಕಾರ್ಯಕ್ರಮದ ಪೋಸ್ಟರ್‌ಗಳಲ್ಲಿ ವರ್ಣಿಸಲಾಗಿದೆ. ಮಹೇಂದ್ರ ಪ್ರತಾಪ್ ಸಿಂಗ್‌ರನ್ನು ಜಾಟ್ ನಾಯಕನ ಸ್ಥಾನಕ್ಕೆ ಇಳಿಸುವುದು ತೀರಾ ಅಸಂಗತವಾಗಿದೆ. ಅವರೊಬ್ಬ ಕ್ರಾಂತಿಕಾರಿಯಾಗಿದ್ದರು. ಇತರ ಮುಜಾಹಿದಿನ್‌ಗಳ ಜೊತೆ ಸೇರಿ 1915ರಲ್ಲಿ ಕಾಬೂಲ್‌ನಲ್ಲಿ ಭಾರತದ ತಾತ್ಕಾಲಿಕ ಸರ್ಕಾರವನ್ನು ಸ್ಥಾಪಿಸಿದ್ದರು. ಅವರು ಆ ಸರ್ಕಾರದ ಅಧ್ಯಕ್ಷರಾಗಿದ್ದರು; ಮೌಲ್ವಿ ಬರ್ಕತುಲ್ಲಾ ಪ್ರಧಾನ ಮಂತ್ರಿಯಾಗಿದ್ದರು. ಅವರ ಸಮಾಜವಾದಿ ಹಾಗೂ ಜಾತ್ಯತೀತ ದೃಷ್ಟಿಕೋನಕ್ಕೂ ಸಂಕುಚಿತವಾದಿ ಧಾರ್ಮಿಕ ಅಥವಾ ಜಾತಿವಾದಿ ರಾಜಕಾರಣಕ್ಕೂ ಏನೇನೂ ಸಂಬಂಧವಿಲ್ಲ. ಆದರೆ, ಇಡೀ ಜಾಟ್ ಸಮುದಾಯ ಹೊಸ ಕೃಷಿ ಕಾನೂನುಗಳ ವಿರುದ್ಧ ಸೆಟೆದು ನಿಂತಿರುವಾಗ ಬಿಜೆಪಿ ಹತಾಶೆಯಿಂದ ಆ ಸಮುದಾಯದ ವಿಶ್ವಾಸಗಳಿಸಲು ಕಸರತ್ತು ನಡೆಸುತ್ತಿರುವುದು ಸ್ಪಷ್ಟವಾಗಿದೆ.

ಆದಿತ್ಯನಾಥ್ ತನ್ನ ವಾಡಿಕೆಯ ಧೋರಣೆಗೆ ಅನುಗುಣವಾಗಿ ಕೋಮುವಾದಿ ಅಬ್ಬರವನ್ನು ಹೆಚ್ಚಿಸಿದ್ದಾರೆ. ಆಲಿಗಢದಲ್ಲಿ ನಡೆದ ಸಭೆಗೂ ಮುನ್ನ ಆದಿತ್ಯನಾಥ್ ಕುಶಿನಗರದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ್ದರು. ಈಗ ಎಲ್ಲರಿಗೂ ಪಡಿತರ ಸಿಗುತ್ತಿದೆ. ಆದರೆ 2017ಕ್ಕೂ ಮುಂಚೆ ಪ್ರತಿಯೊಬ್ಬರಿಗೂ ಪಡಿತರ ಸಿಗುತ್ತಿತ್ತೇ ಎಂದು ಪ್ರಶ್ನಿಸಿದರು. ‘ಅಬ್ಬಾ ಜಾನ್’ ಎಂದು ಹೇಳುವವರು ಮಾತ್ರವೇ ಎಲ್ಲ ಪಡಿತರ ಧಾನ್ಯಗಳನ್ನು ತಿಂದು ತೇಗುತ್ತಿದ್ದರು ಎಂದಿದ್ದರು. ಈ ಪಕ್ಕಾ ಮುಸ್ಲಿಂ-ವಿರೋಧಿ ಪ್ರಚಾರ ಹಸಿ ಹಸಿ ಸುಳ್ಳು. ಮುಸ್ಲಿಮರೇ ಅಗತ್ಯ ಸೇವೆಗಳಿಂದ ಅತಿ ಹೆಚ್ಚು ವಂಚಿತ ಜನರು ಎಂಬುದು ಉತ್ತರ ಪ್ರದೇಶದ ಎಲ್ಲ ಅಂಕಿಅಂಶಗಳು ಸಾಬೀತುಪಡಿಸಿವೆ. ಮುಸ್ಲಿಮರನ್ನು ಪ್ರತ್ಯೇಕಗೊಳಿಸಿ ರಾಕ್ಷಸರೆಂಬಂತೆ ಬಿಂಬಿಸುತ್ತಲೇ, ಉತ್ತರ ಪ್ರದೇಶ ಹಾಗೂ ಕೇಂದ್ರದ ಸರ್ಕಾರಗಳೆರಡೂ ಎಲ್ಲರ ಅಭಿವೃದ್ಧಿಗಾಗಿ (ಸಬ್ ಕಾ ವಿಕಾಸ್) ತಾವು ಕೆಲಸ ಮಾಡುತ್ತಿದ್ದೇವೆ ಎಂದು ಅಬ್ಬರಿಸುತ್ತಿವೆ, ಸರ್ಕಾರದ ಕಲ್ಯಾಣ ಯೋಜನೆಗಳ ಲಾಭ ಎಲ್ಲ ಸಮುದಾಯಗಳಿಗೆ ಸಿಗುತ್ತಿದೆ ಎಂದು ಕೊಚ್ಚಿಕೊಳ್ಳುತ್ತಿವೆ. ಈ ಧೋರಣೆಯಿಂದಾಗಿಯೇ ಬಿಜೆಪಿಯು ಪ್ರಧಾನಮಂತ್ರಿ ಹಾಗೂ ಪಕ್ಷದ ಹೆಸರಿನಲ್ಲಿ ಸರ್ಕಾರಿ ಯೋಜನೆಗಳನ್ನು ಹೈಜಾಕ್ ಮಾಡಿದೆ.
ಮೋದಿಯ 71ನೇ ಜನ್ಮದಿನದ ಪ್ರಯುಕ್ತ ಅವರ ಭಾವಚಿತ್ರ ಹೊಂದಿದ 14 ಕೋಟಿ ರೇಶನ್ ಬ್ಯಾಗ್‌ಗಳನ್ನು ವಿತರಿಸಲು ಬಿಜೆಪಿ ನಿರ್ಧರಿಸಿದೆ. ಆಹಾರಧಾನ್ಯ ಒದಗಿಸುವ ಸರ್ಕಾರಿ ಯೋಜನೆಯನ್ನು ಆಳುವ ಬಿಜೆಪಿ ತನ್ನ ನಾಯಕನನ್ನು ವೈಭವೀಕರಿಸಲು ದುರುಪಯೋಗಪಡಿಸಿಕೊಳ್ಳುತ್ತಿದೆ.
ಬಿಜೆಪಿಯ ಪಾಳೇಗಾರಿ ಮನೋಭಾವ ಭಾರತದ ಜನತೆಯನ್ನು ಸರ್ಕಾರಿ ಯೋಜನೆಗಳ ಫಲಾನುಭವಿಗಳು ಎಂದಷ್ಟೇ ಕಾಣುತ್ತದೆಯೇ ಹೊರತು, ಸಮಾನ ಹಕ್ಕುಗಳಿರುವ ನಾಗರಿಕರು ಎಂದಲ್ಲ.
ಅನು: ವಿಶ್ವ