ಎಂ.ಚಂದ್ರ ಪೂಜಾರಿ
ಡಬ್ಬಲ್ ಇಂಜೀನ್ ಸರಕಾರದ ಕಲ್ಪನೆ ಬಿಜೆಪಿ ಕೊಡುಗೆ. ಇದು ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಬಳಕೆ ಆಗುವ ಪರಿಕಲ್ಪನೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ (ಬಿಜೆಪಿ) ಆಡಳಿತ ಇದ್ದರೆ ರಾಜ್ಯದ ಅಭಿವೃದ್ಧಿಗೆ ಅನುಕೂಲ ಎನ್ನುವ ಅರ್ಥ ನೀಡುತ್ತಿದೆ ಇದು. ಈ ಕುರಿತು ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ. ಈ ಚರ್ಚೆಗಳಲ್ಲಿ ಎರಡು ನಿಲುವುಗಳು ಸ್ಪಷ್ಟವಾಗಿ ಮೂಡಿ ಬರುತ್ತಿವೆ. ಒಂದು, ಬಿಜೆಪಿ ಪಕ್ಷದ ನಿಲುವನ್ನು ಸಮರ್ಥಿಸುವ ನಿಲುವು. ಅದೇನೆಂದರೆ ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷದ ಆಡಳಿತ ಇದ್ದರೆ ಕೇಂದ್ರದಿಂದ ಹೆಚ್ಚಿನ ನೆರವು, ಸಂಪನ್ಮೂಲಗಳು ರಾಜ್ಯಕ್ಕೆ ಹರಿದು ಬರಬಹುದೆನ್ನುವ ನಿಲುವು. ಅಂದರೆ ಒಂದೇ ಪಕ್ಷದ ಆಡಳಿತ ಎರಡೂ ಕಡೆ ಇದ್ದರೆ ಅನುಕೂಲ ಎನ್ನುವ ನಿಲುವು. ಎರಡು, ಹಣಕಾಸು ಸಮಿತಿ ಒಂದು ಸಂವಿಧಾನಿಕ ಸೃಷ್ಟಿ. ಇದು ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಪನ್ಮೂಲ ಹಂಚುವಿಕೆಯನ್ನು ನಿರ್ಣಯಿಸುತ್ತಿದೆ. ಇದು ನಿರ್ದಿಷ್ಟ ಮಾನದಂಡ ಬಳಸಿಕೊಂಡು ಕೇಂದ್ರ ಮತ್ತು ರಾಜ್ಯಗಳ ಪಾಲನ್ನು ಮತ್ತು ಪ್ರತಿ ರಾಜ್ಯದ ಪಾಲನ್ನು ನಿರ್ಣಯಿಸುತ್ತದೆ. ಹಣಕಾಸು ಸಮಿತಿ ಬಳಸುವ ಈ ಮಾನದಂಡಗಳು ರಾಜ್ಯದಲ್ಲಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ನೆಲೆಯಲ್ಲಿ ಬದಲಾಗುವುದಿಲ್ಲ. ಆದುದರಿಂದ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿ ಇದ್ದ ಕೂಡಲೇ ರಾಜ್ಯಕ್ಕೆ ಹೆಚ್ಚಿನ ಸಂಪನ್ಮೂಲ ಹರಿದು ಬರುವುದಿಲ್ಲ ಎನ್ನುವುದು ಎರಡನೇ ನಿಲುವು. ಇದೇ ಸಂದರ್ಭದಲ್ಲಿ ಗವರ್ನರ್‌ಗಳು ಸೃಷ್ಟಿಸುವ ಅಡ್ಡಿಗಳು, ಪಕ್ಷದ ಸದಸ್ಯರನ್ನು ಖರೀದಿಸಿ ವಿರೋಧಿ ಪಕ್ಷವನ್ನು ರಾಜ್ಯದ ಅಧಿಕಾರದಿಂದ ಇಳಿಸುವುದು, ಸಿಬಿಐ ಈಡಿ ದಾಳಿಯನ್ನು, ಇತ್ಯಾದಿ ಸಂವಿಧಾನೇತರ ಕಿರುಕುಳಗಳನ್ನು ಡಬ್ಬಲ್ ಇಂಜೀನ್ ಸರಕಾರ ತಪ್ಪಿಸಬಹುದೆನ್ನುವ ಅಭಿಪ್ರಾಯವೂ ಇದೆ. ಈ ನಿಲುವುಗಳನ್ನು ಲೇಖನದಲ್ಲಿ ವಿಶ್ಲೇಷಿಸಿದ್ದೇನೆ.
ಇದನ್ನು ಓದಿ: ಹಣಕಾಸು ಬಂಡವಾಳದ ಅಗತ್ಯಗಳಿಗಾಗಿ ಹೊಸ ಶಿಕ್ಷಣ ನೀತಿ
14ನೇ ಹಣಕಾಸು ಸಮಿತಿ
ಆದಾಯ ತೆರಿಗೆ, ಕಾರ್ಪೋರೇಟ್ ತೆರಿಗೆ, ಸೆಂಟ್ರಲ್ ಜಿಎಸ್‌ಟಿ, ಸೆಂಟ್ರಲ್ ಎಕ್ಸೈಸ್, ಕಷ್ಟಮ್ಸ್ ಇತ್ಯಾದಿ ಮೂಲಗಳಿಂದ ಕೇಂದ್ರ ಸಂಪನ್ಮೂಲ ಸಂಗ್ರಹಿಸುತ್ತದೆ. ಇವೆಲ್ಲ ರಾಜ್ಯಗಳಿಂದಲೇ ಬರುವ ಆದಾಯಗಳು. ಆದುದರಿಂದ ಇದರಲ್ಲಿ ಪಾಲು ಪಡೆಯುವುದು ರಾಜ್ಯಗಳ ಹಕ್ಕು. ಇದೇ ರೀತಿ ಇದರಲ್ಲಿ ಪಾಲು ಪಡೆಯಲು ಒಂದೇ ಪಕ್ಷದ ಸರಕಾರಗಳು ರಾಜ್ಯ ಮತ್ತು ಕೇಂದ್ರದಲ್ಲಿರುವ ಅವಶ್ಯಕತೆ ಇಲ್ಲ. ಏಕೆಂದರೆ ಕೇಂದ್ರ ಸಂಗ್ರಹಿಸುವ ತೆರಿಗೆಯಲ್ಲಿ ರಾಜ್ಯ ಮತ್ತು ಕೇಂದ್ರದ ಪಾಲನ್ನು ಹಣಕಾಸು ಸಮಿತಿ ತೀರ್ಮಾನಿಸುತ್ತಿದೆ. ಹಣಕಾಸು ಸಮಿತಿ ಸಂವಿಧಾನದ ಸೃಷ್ಟಿ. 5 ವರ್ಷಕ್ಕೊಮ್ಮೆ ಹಣಕಾಸು ಸಮಿತಿಯನ್ನು ಕೇಂದ್ರ ಸರಕಾರ ನೇಮಿಸುತ್ತದೆ. ಇದು ಕೇಂದ್ರ ಸಂಗ್ರಹಿಸುವ ಸಂಪನ್ಮೂಲದಲ್ಲಿ ರಾಜ್ಯಗಳ ಪಾಲನ್ನು ಮಾತ್ರ ನಿರ್ಣಯಿಸುವುದಲ್ಲ ಪ್ರತಿ ರಾಜ್ಯದ ಪಾಲನ್ನು ನಿರ್ಧರಿಸುತ್ತದೆ. ಹಣಕಾಸು ಸಮಿತಿಯನ್ನು ಕೇಂದ್ರ ಸರಕಾರ ನೇಮಿಸುವುದರಿಂದ ಕೇಂದ್ರ ಸರಕಾರದೊಂದಿಗೆ ಚರ್ಚಿಸಿಯೇ ಮಾನದಂಡಗಳು ತೀರ್ಮಾನವಾಗುವುದು. ಫೆಡರಲ್ ವ್ಯವಸ್ಥೆಗೆ ಮಹತ್ವ ನೀಡುವ ಕೇಂದ್ರ ಸರಕಾರ ರಾಜ್ಯಗಳೊಂದಿಗೆ ಚರ್ಚಿಸಿ ಮಾನದಂಡಗಳನ್ನು ರೂಪಿಸುತ್ತದೆ. ಕೇಂದ್ರವೇ ಮುಖ್ಯ ರಾಜ್ಯಗಳು ಕೇಂದ್ರ ಹೇಳಿದಂತೆ ಕಾರ್ಯನಿರ್ವಹಿಸಲು ಇರುವ ವ್ಯವಸ್ಥೆಯೆಂದು ತಿಳಿಯವ ಕೇಂದ್ರ ರಾಜ್ಯಗಳ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.
2015ರವರಗೆ ಕೇಂದ್ರ ಸಂಗ್ರಹಿಸುವ ಸಂಪನ್ಮೂಲದಲ್ಲಿ ಶೇ.32ನ್ನು ರಾಜ್ಯಗಳಿಗೆ ಹಂಚಲಾಗುತ್ತಿತ್ತು. 14ನೇ ಹಣಕಾಸು ಸಮಿತಿ (2015-20) ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಪಾಲನ್ನು ಶೇ.32ರಿಂದ ಶೇ.42ಕ್ಕೆ ಏರಿಸಿತು. ಆದರೆ ಶೇ.10 ಏರಿಕೆಯನ್ನು ಕೇಂದ್ರದ ಬಿಜೆಪಿ ಸರಕಾರ ಇಷ್ಟಪಡಲಿಲ್ಲ. ಹಾಗೆಂದು ಹಣಕಾಸು ಸಮಿತಿ ತೀರ್ಮಾನವನ್ನು ಬದಲಾಯಿಸುವಂತಿಲ್ಲ. ಆದುದರಿಂದ ಶೇ.42ನ್ನು ಶೇ.32ರಲ್ಲೇ ಇರಿಸಿಕೊಳ್ಳಲು ಕೇಂದ್ರ ಸರಕಾರ ಬೇರೆ ದಾರಿ ಹುಡುಕಿತು. ಕೇಂದ್ರ ಸಂಗ್ರಹಿಸುವ ತೆರಿಗೆಯಲ್ಲಿ ಎರಡು ಪಾಲಿದೆ. ಒಂದು ಮೂಲ ತೆರಿಗೆ ಮತ್ತೊಂದು ಸೆಸ್ ಮತ್ತು ಸರ್‌ಚಾರ್ಜ್. ಮೂಲ ತೆರಿಗೆಯನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಬೇಕು. ಆದರೆ ಸೆಸ್ ಮತ್ತು ಸರ್‌ಚಾರ್ಜ್ ಗಳನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಅಗತ್ಯವಿಲ್ಲ. ರಾಜ್ಯಗಳೊಂದಿಗೆ ಹಂಚಿಕೊಳ್ಳದಿರುವ ಸೆಸ್ ಮತ್ತು ಸರ್‌ಚಾರ್ಜನ್ನು ಕೇಂದ್ರ ಏರಿಸುತ್ತಾ ಹೋಯಿತು. 2017ರಲ್ಲಿ ಶೇ.13.5ರಷ್ಟಿದ್ದ ಸೆಸ್ 2020ರಲ್ಲಿ ಶೇ.20.2ಕ್ಕೆ ಏರಿತು.
ಇದನ್ನು ಓದಿ: ಹಣಕಾಸು ಮಂತ್ರಿಗಳು ಹೇಳುವಂತೆ ರಾಜ್ಯಗಳಿಗೆ ಸಂಪನ್ಮೂಲ ವರ್ಗಾವಣೆ ಏರಿಲ್ಲ
ಸೆಸ್ ಸಂಗ್ರಹ ಹೆಚ್ಚಾದುದರಿಂದ ರಾಜ್ಯಗಳೊಂದಿಗೆ ಹಂಚಿಕೊಳ್ಳುವ ಪಾಲು ಶೇ.32ರಿಂದ ಶೇ.42ಕ್ಕೆ ಏರಿದರೂ ರಾಜ್ಯಗಳಿಗೆ ವರ್ಗಾವಣೆ ಆಗುವ ಮೊತ್ತ ಬದಲಾಗಲಿಲ್ಲ. ಏಕೆಂದರೆ ಹಂಚಿಕೊಳ್ಳುವ ಪಾಲು ಶೇ.100 ಇದ್ದದ್ದು ಶೇ. 80ಕ್ಕೆ ಇಳಿಯಿತು. ಅಷ್ಟು ಮಾತ್ರವಲ್ಲ 2019ರಲ್ಲಿ ಆರ್ಟಿಕಲ್ 370 ರದ್ದುಗೊಂಡು ಮೂರು ಕೇಂದ್ರಾಡಳಿತ ಪ್ರದೇಶಗಳು ಸೃಷ್ಟಿಯಾದವು. ಅವುಗಳ ಅಭಿವೃದ್ಧಿಗಾಗಿ ಶೇ.42ನ್ನು ಶೇ.41ಕ್ಕೆ ಕೇಂದ್ರ ಇಳಿಸಿದೆ. ಅಂದರೆ ರಾಜ್ಯಗಳಿಗೆ ವರ್ಗಾವಣೆ ಆಗುವ ಮೊತ್ತ ಶೇ.32.8ಕ್ಕೆ ಇಳಿಯಿತು. ಇವೆಲ್ಲ ರಾಜ್ಯಗಳಿಗೆ ಅನುಕೂಲ ಮಾಡುವ 14ನೇ ಹಣಕಾಸಿನ ಶಿಫಾರಸ್ಸನ್ನು ನಿರುಪಯುಕ್ತಗೊಳಿಸಲು ಬಿಜೆಪಿ ಬಳಸಿದ ತಂತ್ರಗಳು.
15ನೇ ಹಣಕಾಸು ಸಮಿತಿ
15ನೇ ಹಣಕಾಸು ಸಮಿತಿಯನ್ನು 2017ರಲ್ಲಿ ಬಿಜೆಪಿ ಸರಕಾರ ನೇಮಿಸಿದೆ. ಸಂಪನ್ಮೂಲವನ್ನು ರಾಜ್ಯಗಳ ನಡುವೆ ಹಂಚಲು ಬಳಸುವ ಮಾನದಂಡಲ್ಲಿ ಹಣಕಾಸು ಸಮಿತಿ ವಿಶೇಷ ಬದಲಾವಣೆ ಮಾಡಿಲ್ಲ. ರಾಜ್ಯದ ಜನಸಂಖ್ಯೆ, ವಿಸ್ತೀರ್ಣ, ಅರಣ್ಯ ಪ್ರದೇಶ, ಆದಾಯ ಅಂತರ, ತೆರಿಗೆ ಸಂಗ್ರಹ ಪ್ರಯತ್ನ ಮತ್ತು ಜನಸಂಖ್ಯೆ ನಿಯಂತ್ರಣ ಸಾಧನೆ ಇವೆಲ್ಲ ಹಿಂದಿನ ಹಣಕಾಸು ಸಮಿತಿಗಳು ಬಳಸಿದ ಮಾನದಂಡಗಳೇ. ಆದರೆ ಈ ಮಾನದಂಡಗಳನ್ನು ಪ್ರಯೋಗಿಸುವಾಗ ಹಿಂದಿನ ಸಮಿತಿಗಳು 1971ರ ಜನಸಂಖ್ಯೆಯನ್ನು ಬಳಸಿದರೆ 15ನೇ ಹಣಕಾಸು ಸಮಿತಿ ಕೇಂದ್ರದ ಸಲಹೆಯ ಮೇರೆಗೆ 2011ರ ಜನಸಂಖ್ಯೆಯನ್ನು ಬಳಸಿದೆ. ಕೇಂದ್ರ ಹಣಕಾಸು ಸಮಿತಿಯ ಈ ನಿರ್ಧಾರವನ್ನು ದಕ್ಷಿಣದ ರಾಜ್ಯಗಳು ಬಲವಾಗಿ ವಿರೋಧಿಸಿವೆ. ಏಕೆಂದರೆ 1971ರ ನಂತರ ಕೇಂದ್ರದ ಆದೇಶದನ್ವಯ ದಕ್ಷಿಣದ ರಾಜ್ಯಗಳು ಜನಸಂಖ್ಯೆ ಬೆಳವಣಿಗೆಯನ್ನು ನಿಯಂತ್ರಿಸಿದ್ದವು. ಆದುದರಿಂದ 1971ರಲ್ಲಿ ದಕ್ಷಿಣದ ಮೂರು ರಾಜ್ಯಗಳಲ್ಲಿ (ಕರ್ನಾಟಕ, ಕೇರಳ, ತಮಿಳುನಾಡು) ಶೇ.17ರಷ್ಟಿದ್ದ ಜನಸಂಖ್ಯೆ 2011ರ ವೇಳೆಗೆ ಶೇ.14ಕ್ಕೆ ಕುಸಿದ್ದಿತ್ತು. ಆದರೆ ಉತ್ತರದ ರಾಜ್ಯಗಳು ಅದರಲ್ಲೂ ಉತ್ತರಪ್ರದೇಶ. ಬಿಹಾರ್, ಮಧ್ಯಪ್ರದೇಶದಂತಹ ದೊಡ್ಡ ರಾಜ್ಯಗಳು ಜನಸಂಖ್ಯೆ ಬೆಳವಣಿಗೆಯನ್ನು ನಿಯಂತ್ರಿಸದಿದ್ದುದರಿಂದ 1971ರಲ್ಲಿ ಶೇ.28ರಷ್ಟಿದ್ದ ಜನಸಂಖ್ಯೆ 2011ರಲ್ಲಿ ಶೇ.31ಕ್ಕೆ ಏರಿದೆ.
ಇದನ್ನು ಓದಿ: ಬಂಡವಾಳಶಾಹಿಯ ಅಡಿಯಲ್ಲಿ ಹಣಕಾಸು ಮಾರುಕಟ್ಟೆಗಳು ‘ಉದ್ಯಮ’, ‘ಸಟ್ಟಾಬಾಜಿ’ ಮತ್ತು ಬ್ಯಾಂಕ್‌ಗಳ ಒಡೆತನ
ಅಷ್ಟು ಮಾತ್ರವಲ್ಲ ರಾಜ್ಯದ ಆದಾಯ ಅಂತರವನ್ನು ಮಾಪನ ಮಾಡಲು ರಾಜ್ಯದ ತಲಾ ಆದಾಯವನ್ನು ಬಳಸಲಾಗಿದೆ. ಆದಾಯವನ್ನು ರಾಜ್ಯದ ಜನಸಂಖ್ಯೆಯಿಂದ ಭಾಗಿಸಿ ತಲಾ ಆದಾಯ ನಿರ್ಧರಿಸುವುದು. ಅಂದರೆ ಇಲ್ಲೂ ಉತ್ತರದ ರಾಜ್ಯಗಳಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದ ಅವರ ರಾಜ್ಯದ ಆದಾಯ ಹೆಚ್ಚಿದ್ದರೂ ತಲಾ ಆದಾಯ ಕಡಿಮೆ ಆಯಿತು. ಉದಾಹರಣೆಗೆ 2022ರಲ್ಲಿ ಉತ್ತರ ಪ್ರದೇಶದ ಜಿಡಿಪಿ (ರೂ. 21.64 ಲಕ್ಷ ಕೋಟಿ) ಕರ್ನಾಟಕದ ಜಿಡಿಪಿಗಿಂತ (ರೂ.18.85 ಲಕ್ಷ ಕೋಟಿ) ಹೆಚ್ಚಿತ್ತು. ಆದರೆ ಜನಸಂಖ್ಯೆ ಕಾರಣದಿಂದ ಕರ್ನಾಟಕದ ತಲಾ ಜಿಡಿಪಿ (ರೂ.249957) ಉತ್ತರಪ್ರದೇಶದ ತಲಾ ಜಿಡಿಪಿಗಿಂತ (ರೂ.81500) ಮೂರು ಪಟ್ಟು ಹೆಚ್ಚಾಯಿತು. ಇದೇ ರೀತಿ ಉತ್ತರದ 3 ರಾಜ್ಯಗಳ ಒಟ್ಟು ವಿಸ್ತೀರ್ಣ ದೇಶದ ವಿಸ್ತೀರ್ಣದ ಶೇ.20 ಇದ್ದರೆ ದಕ್ಷಿಣದ 3 ರಾಜ್ಯಗಳ ವಿಸ್ತೀರ್ಣ ದೇಶದ ವಿಸ್ತೀರ್ಣದ ಶೇ.11 ಇದೆ. ಹೀಗೆ ಹಣಕಾಸು ಸಮಿತಿ ರಾಜ್ಯಗಳ ನಡುವೆ ಸಂಪನ್ಮೂಲ ಹಂಚಲು ಬಳಸುವ ಬಹುತೇಕ ಮಾನದಂಡಗಳು ಜನಸಂಖ್ಯೆ, ವಿಸ್ತೀರ್ಣ ಹೆಚ್ಚಿರುವ ಮತ್ತು ಆರ್ಥಿಕವಾಗಿ ಹಿಂದುಳಿದ ರಾಜ್ಯಗಳ ಪರ ಇವೆ. ಇದೇ ಕಾರಣದಿಂದ ಕೇಂದ್ರದ ಸಂಪನ್ಮೂಲದಲ್ಲಿ ಉತ್ತರದ ಮೂರು ರಾಜ್ಯಗಳು ಶೇ.35ರಷ್ಟು ಪಾಲು ಪಡೆದರೆ ದಕ್ಷಿಣದ ಮೂರು ರಾಜ್ಯಗಳು ಕೇವಲ ಶೇ.9.6ರಷ್ಟು ಪಾಲು ಪಡೆದಿವೆ.
ಇದರಿಂದಾಗಿ 2023-24ನೇ ಕೇಂದ್ರದ ಬಜೆಟಲ್ಲಿ ಉತ್ತರದ ಮೂರು ರಾಜ್ಯಗಳು ಕೇಂದ್ರದಿಂದ ರೂ. 231207 ಕೋಟಿಯಷ್ಟು ನೇರ ತೆರಿಗೆಯ ಪಾಲು ಪಡೆದರೆ ದಕ್ಷಿಣದ ಮೂರು ರಾಜ್ಯಗಳು ಕೇವಲ ರೂ. 62245 ಪಡೆದಿವೆ. ಆದರೆ ಇದೇ ಪ್ರಮಾಣದಲ್ಲಿ ಉತ್ತರದ ರಾಜ್ಯಗಳು ಕೇಂದ್ರದ ಬೊಕ್ಕಸಕ್ಕೆ ತೆರಿಗೆ ತುಂಬುವುದಿಲ್ಲ. 2021-22ರಲ್ಲಿ ದಕ್ಷಿಣದ ಮೂರು ರಾಜ್ಯಗಳು ಶೇ. 20ರಷ್ಟು ನೇರ ತೆರಿಗೆ ತುಂಬಿದರೆ ಉತ್ತರದ ಮೂರು ರಾಜ್ಯಗಳು ಕೇವಲ ಶೇ.4ರಷ್ಟು ನೇರ ತೆರಿಗೆ ತುಂಬಿವೆ. 2021-22ರಲ್ಲಿ ಕರ್ನಾಟಕವೊಂದೇ 2.72 ಲಕ್ಷ ಕೋಟಿಯಷ್ಟು ತೆರಿಗೆ ತುಂಬಿದೆ. ಆದರೆ ಕರ್ನಾಟಕ ಕೇಂದ್ರದಿಂದ ಪಡೆದ ತೆರಿಗೆ ಪಾಲು ಕೇವಲ ರೂ.50257 ಕೋಟಿ. ಇದೇ ಅವಧಿಯಲ್ಲಿ ಉತ್ತರಪ್ರದೇಶ ಕೇವಲ ರೂ.34720 ಕೋಟಿ ತೆರಿಗೆ ತುಂಬಿ ಕೇಂದ್ರದಿಂದ ರೂ.115705 ಕೋಟಿ ಹಿಂದಕ್ಕೆ ಪಡೆದಿದೆ. ಅಂದರೆ ರಾಜ್ಯದಿಂದ ಕೇಂದ್ರಕ್ಕೆ ಹೋಗುವ ಪ್ರತಿ 1 ರೂಪಾಯಿ ತೆರಿಗೆಗೆ ಉತ್ತರ ಪ್ರದೇಶ ರೂ.1.79 ಹಿಂದಕ್ಕೆ ಪಡೆದರೆ ಕರ್ನಾಟಕ ಕೇವಲ 47 ಪೈಸೆ ಹಿಂದಕ್ಕೆ ಪಡೆಯುತ್ತಿದೆ. ಹೀಗೆ ಉತ್ತರದ ಹಿಂದುಳಿದ ರಾಜ್ಯಗಳ ಬಜೆಟ್ ಕೊರತೆಯನ್ನು ತುಂಬಲು ತಮ್ಮ ರಾಜ್ಯಗಳ ತೆರಿಗೆ ಬಳಕೆಯಾಗುವುದರಿಂದ ತಮ್ಮ ಬಜೆಟ್ ಕೊರತೆಯನ್ನು ಸಾಲ ಮಾಡಿ ತುಂಬಿಸಿಕೊಳ್ಳುವ ಸ್ಥಿತಿ ದಕ್ಷಿಣದ ರಾಜ್ಯಗಳಿಗೆ ಬಂದಿದೆ. ಕರ್ನಾಟಕದ್ದೇ ಉದಾಹರಣೆ ನೋಡುವುದಾದರೆ 2018ರಲ್ಲಿ ರೂ.2.18 ಲಕ್ಷ ಕೋಟಿ ಇದ್ದ ಸಾಲ 2023ರ ವೇಳೆಗೆ ರೂ.5.4 ಲಕ್ಷ ಕೋಟಿಗೆ ಏರಿದೆ. ಈ ಸ್ಥಿತಿ ದಕ್ಷಿಣದ ರಾಜ್ಯಗಳಲ್ಲಿ ಸಾಕಷ್ಟು ಅಸಮಾಧಾನ ಸೃಷ್ಟಸಿದೆ.
ಇದನ್ನು ಓದಿ: ಸಂಪ್ರದಾಯಶರಣ ಆರ್ಥಿಕ ನೀತಿಯ ಅಸಂಬದ್ಧತೆ – ಬಂಡವಾಳಶಾಹಿಗಳಿಗೂ ಈಗ ಗೋಚರಿಸುತ್ತಿದೆ
ಕಾರಣ ಮತ್ತು ಪರಿಹಾರಗಳು
ಇಂತಹ ಸ್ಥಿತಿ ನಿರ್ಮಾಣಕ್ಕೆ ಎರಡು ಮೂರು ಕಾರಣಗಳಿವೆ. ಒಂದು, 1/3ರಷ್ಟು ಅಭಿವೃದ್ಧಿ ಜವಾಬ್ದಾರಿ ಇರುವ ಕೇಂದ್ರಕ್ಕೆ 2/3ರಷ್ಟು ತೆರಿಗೆ ಸಂಗ್ರಹ ಮಾಡುವ ಅಧಿಕಾರ ಮತ್ತು 2/3ರಷ್ಟು ಅಭಿವೃದ್ಧಿ ಜವಾಬ್ದಾರಿ ಇರುವ ರಾಜ್ಯಗಳಿಗೆ 1/3ರಷ್ಟು ತೆರಿಗೆ ಸಂಗ್ರಹ ಮಾಡುವ ಅಧಿಕಾರ ನಮ್ಮ ಫೆಡರಲ್ ಸ್ಟ್ರಕ್ಚರಲ್ಲೇ ಇರುವ ದೋಷ. ಶಿಕ್ಷಣ, ಆರೋಗ್ಯ, ವಸತಿ, ಕುಡಿಯುವ ನೀರು, ಕೃಷಿ, ಪೊಲೀಸ್, ನ್ಯಾಯ ಇತ್ಯಾದಿ ಜನರ ಬದುಕಿಗೆ ನೇರವಾಗಿ ಸಂಬಂಧಿಸುವ ಸವಲತ್ತುಗಳನ್ನು ರಾಜ್ಯಗಳು ನೀಡುವುದು. ಆದರೆ ಅವರ ಸ್ವಾಧೀನ ಸಂಪನ್ಮೂಲ ಸಂಗ್ರಹಿಸುವ ಅಧಿಕಾರ ತುಂಬಾ ಕಡಿಮೆ ಇದೆ. ಅಷ್ಟು ಮಾತ್ರವಲ್ಲ 2016ರಲ್ಲಿ ಜಿಎಸ್‌ಟಿ ಕೌನ್ಸಿಲ್ ರೂಪಿತಗೊಂಡ ನಂತರ ಶೇ.80ರಷ್ಟು ಪರೋಕ್ಷ ತೆರಿಗೆ ಸಂಗ್ರಹ ಮಾಡುವ ಅಧಿಕಾರ ಕೂಡ ಕೇಂದ್ರೀಕರಣಗೊಂಡಿದೆ. ಈ ದೋಷವನ್ನು ಮೊದಲು ಸರಿಪಡಿಸಿಕೊಳ್ಳಬೇಕಾಗಿದೆ. ಎರಡು, ರಾಜ್ಯ ಸರಕಾರಗಳು ಕೈಗೊಳ್ಳುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೇಂದ್ರ ಕೂಡ ಕೈಗೊಂಡು ಸಂಪನ್ಮೂಲ ಪೋಲು ಮಾಡುತ್ತಿದೆ. ಶಿಕ್ಷಣ, ಆರೋಗ್ಯ, ಕೃಷಿ ಮೂಲಸೌಕರ್ಯಗಳು ಇವೆಲ್ಲ ರಾಜ್ಯಗಳು ನೀಡುವ ಸವಲತ್ತುಗಳು. ಇವೇ ಕ್ಷೇತ್ರದಲ್ಲಿ ಕೇಂದ್ರ ಎರಡು ರೀತಿಯ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಒಂದು, ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳು ಮತ್ತೊಂದು ಕೇಂದ್ರೀಯ ಯೋಜನೆಗಳು. ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳ ಮೇಲೆ ಕೇಂದ್ರ ಮತ್ತು ರಾಜ್ಯಗಳು ವಿನಿಯೋಜನೆ ಮಾಡುತ್ತಿವೆ.
ಇದನ್ನು ಓದಿ: ಮೋದಿ ಸರಕಾರದ ವಿತ್ತ ನೀತಿಯ ಫಜೀತಿ
ಕೇಂದ್ರ ಪ್ರಾಯೋಜಿತ ಯೋಜನೆಗಳ ಮೇಲೆ ವಿನಿಯೋಜನೆ ಮಾಡುವ ಅನಿವರ್ಯತೆಯಿಂದ ರಾಜ್ಯ ತನ್ನ ಸ್ವಾಧೀನ ಇರುವ ಅಲ್ಪ ಸಂಪನ್ಮೂಲವನ್ನು ತನ್ನ ಆದ್ಯತೆ ಅನುಸಾರ ಬಳಸುವ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿದೆ. ಕೇಂದ್ರೀಯ ಯೋಜನೆಗಳ ಮೇಲೆ ಕೇಂದ್ರ ಸರಕಾರ ಮಾತ್ರ ವಿನಿಯೋಜಿಸುತ್ತಿದೆ. ಜನರಿಂದ ಬಹುದೂರ ಇರುವ ಕೇಂದ್ರ ಸರಕಾರ ಜನರ ಮೂಲಸೌಕರ್ಯಗಳ ಮೇಲೆ ವಿನಿಯೋಜನೆ ಮಾಡುವುದು ಸಂಪನ್ಮೂಲ ಪೋಲು ಮಾಡುವುದಕ್ಕೆ ಸಮ. ಏಕೆಂದರೆ ಜನರಿಗೆ ಹತ್ತಿರ ಇರುವ ರಾಜ್ಯ ಸರಕಾರಗಳೇ ಮೂಲಸೌಕರ್ಯಗಳ ಮೇಲೆ ವಿನಿಯೋಜನೆ ಮಾಡುವುದು ಜನರಿಗೆ ತಲುವುದಿಲ್ಲ ಎಂದು ಪಂಚಾಯತ್ ವ್ಯವಸ್ಥೆ ಜಾರಿಗೆ ಬಂದಿದೆ. ವಾಸ್ತವ ಹೀಗಿರುವಾಗ ಕೇಂದ್ರ ತನ್ನ ರಾಜಕೀಯ ಲಾಭಕ್ಕಾಗಿ ಕೋಟಿಗಟ್ಟಲೆ ಸಂಪನ್ಮೂಲ ವಿನಿಯೋಜನೆ ಮಾಡುವುದು ಉಪಯುಕ್ತವಲ್ಲ. ಇದೇ ಸಂಪನ್ಮೂಲವನ್ನು ಜನರಿಗೆ ಹತ್ತಿರ ಇರುವ ರಾಜ್ಯ/ಸ್ಥಳೀಯ ಸಂಸ್ಥೆಗಳಿಗೆ ನೀಡುವುದು ಹೆಚ್ಚು ಉಪಯುಕ್ತ. ಹಣಕಾಸು ಸಮಿತಿ ಮಾನದಂಡಗಳನ್ನು ನಿರ್ಧರಿಸುವಾಗ ರಾಜ್ಯಗಳ ಅಭಿಪ್ರಾಯವನ್ನು ಪರಿಗಣಿಸದಿರುವುದು ಮೂರನೇ ಕಾರಣ. ಹಣಕಾಸು ಸಮಿತಿ 2011ರ ಜನಸಂಖ್ಯೆಯನ್ನು ಬಳಸಬಾರದೆಂದು ದಕ್ಷಿಣದ ಎಲ್ಲ ರಾಜ್ಯಗಳು ಸಮಿತಿಯನ್ನು ಕೋರಿದ್ದವು. ಆದರೆ ಸಮಿತಿ ರಾಜ್ಯಗಳ ಅಭಿಪ್ರಾಯವನ್ನ ಪರಿಗಣಿಸಲೇ ಇಲ್ಲ. ಇದರಿಂದ ಕೇಂದ್ರ ಸರಕಾರದ ಬೊಕ್ಕಸಕ್ಕೆ ಹೆಚ್ಚು ತೆರಿಗೆ ತುಂಬುವ ರಾಜ್ಯಗಳ ಹೆಚ್ಚು ಸಂಪನ್ಮೂಲ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣ ಆಗಿದೆ. ರಾಜ್ಯಗಳ ಅಭಿಪ್ರಾಯವನ್ನು ಪರಿಗಣಿಸುವುದೇ ಈ ಸಮಸ್ಯೆಗೆ ಪರಿಹಾರ.
ಇವೆಲ್ಲ ಸಮಸ್ಯೆಗಳನ್ನು ಪರಿಹರಿಸಲು ಗಂಭೀರವಾಗಿ ಪ್ರಯತ್ನಿಸುವ ಬದಲು ಇವನ್ನೂ ಡಬ್ಬಲ್ ಇಂಜೀನ್ ಸರಕಾರದ ಹೆಸರಲ್ಲಿ ಓಟು ಬ್ಯಾಂಕ್ ಪೊಲಿಟಿಕ್ಸ್ ಗೆ ಬಿಜೆಪಿ ಬಳಸಿಕೊಳ್ಳುತ್ತಿದೆ. ಬಿಹಾರದಲ್ಲಿ, ತಮಿಳುನಾಡಲ್ಲಿ, ಆಂದ್ರದಲ್ಲಿ , ಬಿಜೆಪಿ ಸರಕಾರ ಇಲ್ಲ. ಆದರೆ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಇತ್ತು. ಆದರೆ ಮೇಲಿನ ರಾಜ್ಯಗಳು ಕೇಂದ್ರದ ಸಂಪನ್ಮೂಲದಲ್ಲಿ ಕರ್ನಾಟಕಕ್ಕಿಂತ ಹೆಚ್ಚಿನ ಪಾಲು ಪಡೆದಿವೆ. ಹೀಗೆ ಡಬ್ಬಲ್ ಇಂಜೀನ್ ಸರಕಾರದಿಂದ ರಾಜ್ಯಗಳು ಕೇಂದ್ರ ಸಂಗ್ರಹಿಸುವ ತೆರಿಗೆಯಲ್ಲಿ ಹೆಚ್ಚಿನ ಪಾಲು ಪಡೆಯಲು ಸಾಧ್ಯವಿಲ್ಲ ಎನ್ನುವುದು ಮೇಲಿನ ಮಾಹಿತಿಯಿಂದ ಸ್ಪಷ್ಟವಾಗಿದೆ. ಸಂಪನ್ಮೂಲ ವಿತರಣೆಯ ವಾಸ್ತವ ಹೀಗಿರುವಾಗ ಡಬ್ಬಲ್ ಇಂಜೀನ್ ಸರಕಾರದ ಕಲ್ಪನೆ ಮೂಲಕ ಬಿಜೆಪಿ ರಾಜ್ಯಗಳಿಗೆ ನೀಡುವ ಸಂದೇಶ ಏನು? ಡಬ್ಬಲ್ ಇಂಜೀನ್ ಸರಕಾರ ಇಲ್ಲವಾದರೆ ಕೇಂದ್ರದ ಸಂವಿಧಾನೇತರ ಕಿರುಕುಳಗಳನ್ನು (ಗವರ್ನರ್ ಕಿರುಕುಳ, ಎಂಎಲ್‌ಎಗಳ ಖರೀದಿ ಇತ್ಯಾದಿಗಳನ್ನು, ಸಿಬಿಐ ಈಡಿ ದಾಳಿ) ತಪ್ಪಿಸಿಕೊಳ್ಳುವುದು ಕಷ್ಟ ಎನ್ನುವ ಸಂದೇಶವನ್ನು ಈ ಕಲ್ಪನೆ ರವಾನಿಸುತ್ತಿದೆ. ಆದುದರಿಂದ ಡಬ್ಬಲ್ ಇಂಜೀನ್ ಸರಕಾರದ ಕಲ್ಪನೆ ನಮ್ಮ ಫೇಡರಲ್ ಸ್ಟ್ರಕ್ಚರನ್ನು ಗಟ್ಟಿ ಮಾಡುವ ಕಲ್ಪನೆ ಅಲ್ಲ. ಏಕೆಂದರೆ ರಾಜ್ಯದ ಜನರು ಬಿಜೆಪಿಯೇತರ ಪಕ್ಷವನ್ನು ಬೆಂಬಲಿಸಿದರೆ ಆ ಪಕ್ಷದ ಆಡಳಿತವನ್ನು ಸುಸೂತ್ರವಾಗಿ ನಡೆಸಲು ಬಿಡುವುದಿಲ್ಲ ಎನ್ನುವ ಬೆದರಿಕೆ ಈ ಕಲ್ಪನೆಯಲ್ಲಿದೆ. ಆದುದರಿಂದ ಇದೊಂದು ಫೆಡರಲ್ ಸ್ಟ್ರಕ್ಚರನ್ನು ಬುಡಮೇಲು ಮಾಡುವ ಕಲ್ಪನೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ