ಕಲಂ 66ಎ ಅಡಿ ಪ್ರಕರಣ ದಾಖಲಿಸಲು ಅವಕಾಶವಿಲ್ಲ: ಕೇಂದ್ರ ಗೃಹ ಇಲಾಖೆ ನಿರ್ದೇಶನ

ನವದೆಹಲಿ: ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ 66ಎ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿರುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಅದರ ಅಡಿ ಯಾರ ವಿರುದ್ಧವೂ ದೂರು ದಾಖಲಿಸದಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಇಲಾಖೆ ನಿರ್ದೇಶಿಸಿದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ದಾಖಲಿಸಿರುವ ಎಲ್ಲಾ ದೂರುಗಳನ್ನು ಹಿಂಪಡೆಯುವಂತೆ ಹಾಗೂ ಮುಂದೆ ಆ ಕಲಂ ಅಡಿಯಲ್ಲಿ ಯಾರ ವಿರುದ್ಧವೂ ದೂರು ದಾಖಲಿಸದಂತೆ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲಾಗಿದೆ.

ಇದನ್ನು ಓದಿ: ರದ್ದಾದ ಸೆಕ್ಷನ್‌ 66ಎ ಪ್ರಕರಣದಡಿ 1000 ಹೆಚ್ಚು ಮಂದಿ ಬಂಧನ: ಕೇಂದ್ರಕ್ಕೆ ನೋಟಿಸ್‌ ನೀಡಿದ ಸುಪ್ರೀಂ ಕೋರ್ಟ್‌

ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್‌ ಮಹಾನಿರ್ದೇಶಕರಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಇಲಾಖೆಯು “ಐಟಿ ಕಾಯಿದೆಯ ನಿರ್ದಿಷ್ಠ ಕಲಂ  66ಎ ಅಡಿ ಕೆಲವು ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಾಗಿರುವ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿರುವುದ ಈಗಾಗಲೇ ತಮಗೆ ತಿಳಿದ ವಿಚಾರವಾಗಿದೆ. ಕಲಂ ರದ್ದತಿ ನಂತರವೂ 66ಎ ಅಡಿ ದೂರು ದಾಖಲಿಸಲಾಗಿರುವುದು ಗಂಭೀರವಾಗಿದೆ. ಕೂಡಲೇ ಎಲ್ಲಾ ಪೊಲೀಸ್‌ ಠಾಣೆಗಳಿಗೆ ನಿರ್ದೇಶಿಸಿ 2015ರ ಮಾರ್ಚ್‌ 24ರಂದು ಸರ್ವೋಚ್ಛ ನ್ಯಾಯಾಲಯ ಹೊರಡಿಸಿರುವ ಆದೇಶವನ್ನು ಪಾಲಿಸುವಂತೆ ಕಾನೂನು ಜಾರಿ ಸಂಸ್ಥೆಗಳಿಗೆ ಎಚ್ಚರಿಸಬೇಕು” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ನಿರ್ದಿಷ್ಟ ನಿಬಂಧನೆಗಳ ನಡುವೆಯೂ ಕಲಂ 66ಎ ಅಡಿ ಪ್ರಕರಣ ದಾಖಲಿಸುತ್ತಿರುವುದರ ಬಗ್ಗೆ ಸುಪ್ರೀಂ ಕೋರ್ಟ್‌ ವಿಚಾರಣೆಯ ಸಂದರ್ಭದಲ್ಲಿ ಕೇಂದ್ರ ಸರಕಾರವನ್ನು ಪ್ರಶ್ನೆ ಮಾಡಿತು. ಕಾಯ್ದೆ ರದ್ದಾದರೂ, ರದ್ಧತಿ ಬಳಿಕ ಸಾವಿರಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿರುವ ಬಗ್ಗೆ ಗಂಭೀರವಾಗಿ ಪ್ರಶ್ನೆ ಮಾಡಿತ್ತು.

ಇದನ್ನು ಓದಿ: ವೆಬ್ ಮಾಧ್ಯಮಗಳ ಸೆನ್ಸಾರಿನತ್ತ ದೊಡ್ಡ ಹೆಜ್ಜೆ

ಆರು ವರ್ಷಗಳ ಹಿಂದೆಯೇ ಐಟಿ ಕಾಯಿದೆಯ ಸೆಕ್ಷನ್‌ 66ಎ ಅನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದ್ದರೂ ದೇಶಾದ್ಯಂತ ಹಲವು ಪ್ರಕರಣಗಳನ್ನು ದಾಖಲಿಸಲಾಗುತ್ತಿರುವುದಕ್ಕೆ ಸರ್ವೋಚ್ಛ ನ್ಯಾಯಾಲಯ ಆಘಾತ ವ್ಯಕ್ತಪಡಿಸಿತ್ತು.

ಸುಪ್ರೀಂ ಕೋರ್ಟ್‌ ಶ್ರೇಯಾ ಸಿಂಘಾಲ್‌ ಪ್ರಕರಣದ ಐತಿಹಾಸಿಕ ತೀರ್ಪಿನಲ್ಲಿ ಐಟಿ ಕಾಯಿದೆಯ ಕಲಂ 66ಎ ಅನ್ನು ರದ್ದುಗೊಳಿಸಲಾಗಿತ್ತು. ಆದರೂ ಈ ಕಲಂ ಅಡಿ ಸಾವಿರಕ್ಕೂ ಹೆಚ್ಚಿನ ಜನರ ಮೇಲೆ ಮೊಕದ್ದಮೆ ದಾಖಲಾಗಿರುವ ಬಗ್ಗೆ ಸರ್ಕಾರೇತರ ಸಂಸ್ಥೆ ಪಿಯುಸಿಎಲ್‌ ಸಲ್ಲಿಸಿದ್ದ ಮನವಿ ಆಧರಿಸಿ ಜುಲೈ 5ರಂದು ಕೇಂದ್ರ ಸರ್ಕಾರಕ್ಕೆ ಸರ್ವೋಚ್ಚ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿತ್ತು.

Donate Janashakthi Media

Leave a Reply

Your email address will not be published. Required fields are marked *