ಸರ್ಕಾರಿ ಶಾಲೆಗಳಿಗೂ ಹಬ್ಬಿದ ಡೊನೇಷನ್ ಹಾವಳಿ!

ಗುರುರಾಜ ದೇಸಾಯಿ

ನಮ್ಮ ಶಾಲೆ – ನನ್ನ ಕೊಡುಗೆ ಹೆಸರಿನಲ್ಲಿ ಸರಕಾರ 100 ರೂ ದೇಣಿಗೆ ಪಡೆಯುವ ಮೂಲಕ ಡೊನೇಷನ್ ಹಾವಳಿಯನ್ನು ಸರಕಾರಿ ಶಾಲೆಗೂ ಹಬ್ಬಿಸಿದೆ. ಮುಂದೆ ಶಿಕ್ಷಕರ ವೇತನಕ್ಕಾಗಿ ಪೋಷಕರು ಹಣ ನೀಡಬೇಕು ಎಂದು ಸುತ್ತೋಲೆ ಹೊರಡಿಸಿದರು ಅಚ್ಚರಿ ಪಡಬೇಕಿಲ್ಲ.

ರಾಜ್ಯದ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಅಗತ್ಯವಿರುವ ಖರ್ಚುವೆಚ್ಚಗಳಿಗಾಗಿ ಮಕ್ಕಳ ಪೋಷಕರಿಂದ ದೇಣಿಗೆ ರೂಪದಲ್ಲಿ ಪ್ರತಿ ತಿಂಗಳು ₹ 100 ಸಂಗ್ರಹಿಸಲು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ (ಎಸ್‌ಡಿಎಂಸಿ) ಅನುಮತಿ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

ಸರ್ಕಾರದ ಈ ನಡೆ ಶಿಕ್ಷಣದ ಮೂಲಭೂತ ಹಕ್ಕಿನ ಉಲ್ಲಂಘನೆ, ಕಡ್ಡಾಯ ಶಿಕ್ಷಣ ಹಕ್ಕು ಮೊಟಕುಗೊಳಿಸುವ ಹುನ್ನಾರ ಎಂದು ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳು, ಪೋಷಕರ ಸಂಘಟನೆಗಳು ಆಕ್ಷೇಪವನ್ನು ವ್ಯಕ್ತಪಡಿಸಿ, ಇದು ಸರಕಾರಿ ಶಾಲೆಗಳನ್ನು ಮುಚ್ಚುವುದರ ಒಂದು ಭಾಗವೆಂದು ಆರೋಪಿಸಿವೆ.

ಸುತ್ತೋಲೆಯಲ್ಲಿ ಏನಿದೆ? : ಅಕ್ಟೋಬರ್ 19 ರಂದು, (ಸೊತ್ತೋಲೆ ಸಂಖ್ಯೆ ; ಸಿ7(1) ಸ.ಶಾಲಾ.ದೇಣಿಗೆ. 01/2022-23 ) ರಾಜ್ಯ ಸರಕಾರ ಸುತ್ತೋಲೆ ಹೊರಡಿಸಿದೆ. ಸುತ್ತೋಲೆಯಲ್ಲಿ ‘ಶಾಲಾ ನಿರ್ವಹಣೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಸರ್ಕಾರದ ಮಂಜೂರಾತಿ ಇಲ್ಲವಾದಾಗ, ಅನುದಾನದ ಕೊರತೆ ಎದುರಾದಾಗ ಸ್ಥಳೀಯವಾಗಿ ಸುಗಮ ನಿರ್ವಹಣೆ ಸಾಧ್ಯವಾಗಿಸಲು ಸರ್ಕಾರ ‘ನಮ್ಮ ಶಾಲೆ-ನನ್ನ ಕೊಡುಗೆ’ ಯೋಜನೆ ರೂಪಿಸಿದೆ. ಈ ಯೋಜನೆ ಅನ್ವಯ ಸಾರ್ವಜನಿಕರಿಂದ ಆರ್ಥಿಕ ಸಹಾಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಆದರೂ, ಪೋಷಕರಲ್ಲಿ ಶಾಲಾ ಚಟುಚಟಿಕೆ, ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನ ಕೊಡುವಂತೆ ಮಾಡಲು ಮಕ್ಕಳ ಪೋಷಕರು, ತಂದೆ, ತಾಯಿಯರ ಮನವೊಲಿಸಿ ಪ್ರತಿ ತಿಂಗಳು ಹಣವನ್ನು ಪಡೆಯಬೇಕು. ಹಣಕ್ಕಾಗಿ ಬಲವಂತ ಮಾಡಬಾರದು. ಸಂಗ್ರಹಿಸಿದ ಹಣವನ್ನು ಎಸ್‌ಡಿಎಂಸಿ ಖಾತೆಗೆ ಜಮೆ ಮಾಡಬೇಕು’ ಎಂದು ಸೂಚಿಸಲಾಗಿದೆ.

ಈ ಯೋಜನೆಯಿಂದ ಸರ್ಕಾರಿ ಶಾಲೆ ಗಳ ಅಭಿವೃದ್ಧಿಗಾಗಿ ಸಾರ್ವಜನಿಕರಿಂದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಆರ್ಥಿಕ ಸಹಾಯವನ್ನು ಕೊಡುಗೆ,ದಾನದ ರೂಪದಲ್ಲಿ ಪಡೆಯಲು ಅನುಮತಿ ನೀಡಲಾಗಿದೆ ದೇಣಿಗೆ ರೂಪದಲ್ಲಿ ಮಾಸಿಕ ಸುಮಾರು ರೂ.100/-ಗಳಂತೆ ಹಣ ವನ್ನು ಸಂಗ್ರಹಿಸಿ ಸದರಿ ಹಣವನ್ನು ನಿಗದಿತ ಎಸ್.ಡಿ.ಎಂ.ಸಿ. ಖಾತೆಗೆ ಪೋಷಕರಿಂದ ಸಂದಾಯ ಮಾಡಲು ಕ್ರಮಕೈಗೊಳ್ಳಲು ಸೂಚಿಸಲಾಗಿದೆ.

ಪ್ರಥಮ ಆದ್ಯತೆ ಯಾಗಿ ಕುಡಿಯುವ ನೀರು ಪೂರೈಕೆ ಶೌಚಾಲಯ ಮತ್ತು ಶಾಲೆ ಶುಚಿಗೊಳಿಸಲು,ಶಾಲೆಯ ವಿದ್ಯುತ್ ಶುಲ್ಕ ಕಟ್ಟಲು,ಶಾಲೆಯಲ್ಲಿನ ಪರಿಕರಗಳ ತುರ್ತು ರಿಪೇರಿಗಳು,ಮಕ್ಕಳು ಬಿಸಿಯೂಟ ಸೇವಿಸಲು ತಟ್ಟೆ,ಲೋಟ ಮತ್ತಿತರ ಪೂರಕ ವಸ್ತುಗಳು, ಇಲಾಖೆ ಹೆಚ್ಚುವರಿ ಶಿಕ್ಷಕರನ್ನು ಒದಗಿಸಿದ್ದರೂ ಹೆಚ್ಚುವರಿಯಾಗಿ ಅತಿಥಿ ಶಿಕ್ಷಕರನ್ನು ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಿಕೊಂಡಲ್ಲಿ ಅವರಿಗೆ ನೀಡಲು ಗೌರವ ಸಂಭಾವನೆ, ಗಣಕಯಂತ್ರಗಳ ರಿಪೇರಿ, ಅಗತ್ಯ ಬೋಧನೋಪಕರಣಗಳ ಸಂಗ್ರಹಣೆಗಾಗಿ ಬಳಸಬಹುದಾಗಿದೆ.

ದ್ವಿತೀಯ ಆದ್ಯತೆಯಾಗಿ ಮಕ್ಕಳ ಉಪಯೋಗ ಕ್ಕಾಗಿ ಬೆಂಚ್ ಅಥವಾ ಡೆಸ್ಕ್ ಗಳು,ಶಾಲಾ ಆಟದ ಮೈದಾನದ ಸಿದ್ಧತೆ, ಇ-ಕಲಿಕಾ ಕೇಂದ್ರದ ಸ್ಥಾಪನೆ, ಶಾಲೆಯ ಗ್ರಂಥಾಲಯ,ವಾಚನಾಲಯ ಬಲವ ರ್ಧನೆ, ಸ್ಕೌಟ್ಸ್ ಗೈಡ್, ಎನ್.ಎಸ್.ಎಸ್,ಎನ್.ಸಿ.ಸಿ ಕ್ರೀಡಾ ಮಕ್ಕಳಿಗೆ ಅಗತ್ಯ ಸಮವಸ್ತ್ರ, ಸಾಮಗ್ರಿ ಗಳು, ಶಾಲಾವನ ಬಲವರ್ಧನೆ, ಅತ್ಯಂತ ಅವಶ್ಯ ಕವಾಗಿ ಮಾಡಲೇಬೇಕಾದ ಇತರ ವೆಚ್ಚಗಾಗಿ ಖರ್ಚು ಮಾಡಬಹುದಾಗಿದೆ.

ಈ ಸಂಬಂಧ ಶಾಲೆಯಲ್ಲಿ ಅಗತ್ಯವಿರುವ ತುರ್ತು ಕ್ರಮಗಳ ಬಗ್ಗೆ ಎಸ್.ಡಿ.ಎಂಸಿ ಸಭೆಯಲ್ಲಿ ವಿವರ ವಾಗಿ ಚರ್ಚಿಸಿ ಅನುಮೋದನೆ ಪಡೆದು ವೆಚ್ಚ ಮಾಡಲು ಅನುಮತಿಸಬಹುದಾಗಿದೆ.ಜೊತೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಪೋಷಕರು,ತಂದೆ ತಾಯಂದಿರ ಸಭೆ ಕರೆದು ಶಾಲೆಯಲ್ಲಿ ಅಗತ್ಯವಿ ರುವ ಚಟುವಟಿಕೆಗಳಿಗೆ ಅನುದಾನ ಮತ್ತು ಪ್ರಗತಿ ಬಗ್ಗೆ ವಿವರಣೆ ನೀಡ ಇತರ ಆದ್ಯತೆ ಕ್ರಮಗಳ ಬಗ್ಗೆಯೂ ಸಹ ಸಭೆಯಲ್ಲಿ ವಿವರಿಸಿ/ಚರ್ಚಿಸಿ ನಡಾವಳಿ ದಾಖಲಿಸುವುದು ಮುಂದಿನ ಸಭೆಯಲ್ಲಿ ನಡಾವಳಿಯನ್ನು ಓದಿ ತಿಳಿಸಿ ಅನುಪಾಲನ ಮಾಡಲು ಆದೇಶಿಸಲಾಗಿದೆ ಎಂದು ಸುತ್ತೋಲೆ ಹೇಳುತ್ತದೆ.

ಮಕ್ಕಳ ಹಕ್ಕುಗಳ ಉಲ್ಲಂಘನೆ : ಸರ್ಕಾರದ ಈ ನಡೆ ಶಿಕ್ಷಣದ ಮೂಲಭೂತ ಹಕ್ಕಿನ ಉಲ್ಲಂಘನೆ, ಕಡ್ಡಾಯ ಶಿಕ್ಷಣ ಹಕ್ಕು ಮೊಟಕುಗೊಳಿಸುವ ಹುನ್ನಾರ ಎಂದು ಶಿಕ್ಷಣ ತಜ್ಞ‌ ಬಿ. ಶ್ರೀಪಾದ್‌ ಭಟ್ ಆರೋಪಿಸಿದ್ದಾರೆ. ‘ಸಂವಿಧಾನದ 21 ಎ ವಿಧಿಯ ಪ್ರಕಾರ ಮಕ್ಕಳಿಗೆ ಶಿಕ್ಷಣ ನೀಡುವುದು ಆಯಾ ಸರ್ಕಾರಗಳ ಹೊಣೆ. ಆರ್‌ಟಿಇ ಸೆಕ್ಷನ್‌ 3ರ ಪ್ರಕಾರ 8ನೇ ತರಗತಿಯವರೆಗೆ ಯಾವುದೇ ಅಡ್ಡಿ ಆತಂಕ ಇಲ್ಲದೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು ಆದರೆ ಸರಕಾರ ಈಗ ಪೋಷಕರಿಂದ 100 ರೂ ಪಡೆದು ಶಾಲೆ ಅಭಿವೃದ್ಧಿ ಮಾಡುತ್ತೇನೆ ಎಂದು ಹೊರಟಿರುವುದು ಕ್ರೌರ್ಯವಾಗಿದೆ. ಮಠ ಮಾನ್ಯಗಳಿಗೆ ಹಣ ನೀಡುವ ಸರಕಾರದ ಬಳಿ ಸರಕಾರಿ ಶಾಲೆಗಳನ್ನು ಬಲ ಪಡಿಸಲು ಹಣ ಇಲ್ಲ ಎಂದರೆ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲ ಪಡಿಸಲು ಸಾಧ್ಯವಿಲ್ಲ ಎಂದರೆ ಇವರು ಅಧಿಕಾರದಲ್ಲಿ ಇರಲು ಇವರಿಗೆ ನೈತಿಕತೆ ಇಲ್ಲ ಎಂದು ಆರೋಪಿಸಿದ್ದಾರೆ.

ಶಾಲೆ ಮುಚ್ಚುವ ಹುನ್ನಾರ : ಸರಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯ ಇಲ್ಲದೆ ನರಳುತ್ತಿವೆ. ಸೌಲಭ್ಯಗಳಿಲ್ಲ ಎನ್ನುವ ಕಾರಣದಿಂದ ಸರಕಾರಿ ಶಾಲೆಗೆ ಬರುವವರ ಸಂಖ್ಯೆ ಇಳಿಮುಖವಾಗಿದೆ. ಈಗ ದೇಣಿಗೆ ರೂಪದಲ್ಲಿ 100 ರೂ ಪಡೆದರೆ ಖಂಡಿತಾ ಪೋಷಕರು ಮಕ್ಕಳನ್ನು ಸರಕಾರಿ ಶಾಲೆಯತ್ತ ಕಳುಹಿಸುವುದಿಲ್ಲ ಇದು ಸರಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ಎಂದು ಎಸ್‌ಎಫ್‌ಐ ಆರೋಪಿಸಿದೆ.

ದಲಿತರು, ರೈತರು, ಕೂಲಿ ಕಾರ್ಮಿಕರು, ಬಡವರ ಮಕ್ಕಳಷ್ಟೆ ಸರ್ಕಾರಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಈ ಸಮುದಾಯದ ಶಿಕ್ಷಣವನ್ನು ಸರಕಾರ ಕಸಿಯುತ್ತಿದೆ. ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡುವ ಬದಲು ಈ ರೀತಿಯ ಅನ್ಯಮಾರ್ಗಗಳನ್ನು ಬಳಸುತ್ತಿರುವುದು ಸರಿಯಾದ ವಿಧಾನ ಇಲ್ಲ. ಈ ಸುತ್ತೋಲೆಯನ್ನು ವಾಪಸ್ಸ ಪಡೆಯಬೇಕು, ಈ ಸುತ್ತೋಲೆಯ ವಿರುದ್ಧ ಎಸ್‌ಎಫ್‌ಐ ರಾಜ್ಯವ್ಯಾಪಿ ಹೋರಾಟವನ್ನು ನಡೆಸಲಿದೆ ಎಂದು ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ವಾಸುದೇವ ರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

ಸರಕಾರಿ ಶಾಲೆಯಲ್ಲಿ ಡೊನೇಶನ್‌! : ಸರ್ಕಾರಿ ಶಾಲೆಗಳಲ್ಲಿ ಡೊನೇಷನ್ (ದೇಣಿಗೆ) ಪಡೆಯುವ ಸರ್ಕಾರದ ದಂಧೆಯನ್ನು ಸುತ್ತೋಲೆಯ ಮೂಲಕ ಅಧಿಕೃತಗೊಳಿಸಿಕೊಂಡಿದೆ ಎಂದು ಎಐಟಿಎಸ್‌ಓ ಆರೋಪಿಸಿದೆ. ರಾಜ್ಯದ ಶಿಕ್ಷಣ ಇಲಾಖೆಯಲ್ಲಿ 50,000ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. 4500 ಸರ್ಕಾರಿ ಶಾಲೆಗಳಿಗೆ ತಲಾ ಒಬ್ಬರೇ ಶಿಕ್ಷಕರು ಗತಿ! ಮೇಷ್ಟ್ರೇ ಇಲ್ಲದ ಶಾಲೆಗಳು ಕೂಡ ಈ ರಾಜ್ಯದಲ್ಲಿವೆ. ತೀವ್ರ ಆರ್ಥಿಕ ಸಂಕಷ್ಟದಿಂದಾಗಿ ಜನಸಾಮಾನ್ಯರು ಪರಿತಪ್ಪಿಸುತ್ತಿದ್ದಾರೆ. ಮನೆ ನಿರ್ವಹಣೆಗಾಗಿ ಸಾವಿರಾರು ಸಂಖ್ಯೆಯಲ್ಲಿ ಹೈಸ್ಕೂಲ್ ಮಕ್ಕಳು ಈಗಾಗಲೇ ಶಾಲೆ ಬಿಟ್ಟು ಕೂಲಿಗೆ ಹೊರಟಿದ್ದಾರೆ. ಕಳೆದ 9 ವರ್ಷದಲ್ಲಿ ರಾಜ್ಯದ 10ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆ ಬಿಟ್ಟಿದ್ದಾರೆ.

ಅಗತ್ಯವಿರುವ ಹೆಚ್ಚಿನ ಹಣ ಬಿಡುಗಡೆ ಮಾಡಿ ಸರ್ಕಾರವೇ ಮೂಲಭೂತ ಅವಶ್ಯಕತೆಗಳನ್ನು ಪೂರೈಸಬೇಕು ಮತ್ತು ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕು. ಪ್ರತಿ ದಿನ ಸರ್ಕಾರದ ಖಜಾನೆಗೆ ಪೋಷಕರಿಂದ ನೇರ ತೆರಿಗೆ ರೂಪದಲ್ಲಿ ಬಂದು ಸೇರುವ ಕೋಟ್ಯಂತರ ಹಣವನ್ನು ಇಂತಹ ಕಾರ್ಯಗಳಿಗೆ ಬಳಸಬೇಕು. ಅದನ್ನು ಬಿಟ್ಟು ಈಗ ಮತ್ತೊಮ್ಮೆ ಪೋಷಕರ ಸುಲಿಗೆಗೆ ನಿಂತಿರುವುದು ಅತ್ಯಂತ ಖಂಡನೀಯ ಎಂದು ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಅಜಯ ಕಾಮತ್  ಪ್ರತಿಕ್ರಿಯಿಸಿದ್ದಾರೆ.

ಸರಕಾರಿ ಶಾಲೆಗಳನ್ನು ಅಬಿವೃದ್ಧಿ ಪಡಿಸಬೇಕಿರುವ ಸರಕಾರ ಕುಂಟುನೆಪಗಳನ್ನು ಮುಂದೆ ಮಾಡಿ ಪೋಷಕರಿಂದ ಸುಲಿಗೆ ಮಾಡಲು ಮುಂದಾಗುತ್ತಿರುವುದು ಸರಿಯಾದ ಕ್ರಮವಲ್ಲ. ಈ ಯೋಜನೆ ಸರಕಾರಿ ಶಾಲೆಯನ್ನು ಮುಚ್ಚಲು ದಾರಿ ಮಾಡಿಕೊಡಲಿದೆ. ಅಷ್ಟೆ ಇಲ್ಲ ಎಸ್‌ಡಿಎಂಸಿಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ವಾತಾವರಣವನ್ನು ನಿರ್ಮಿಸಿಕೊಡಲಿದೆ.  ಶಾಲೆಯನ್ನು ನಿರ್ವಹಣೆ ಮಾಡಲು ಈ ರೀತಿಯ ತಂತ್ರ ಹೂಡಿದ ಸರಕಾರ ನಾಳೆ ಶಿಕ್ಷಕರ ವೇತನವನ್ನು ಪೋಷಕರಿಂದಲೆ ಪಡೆಯಬೇಕು ಎಂಬ ನಿಯಮ ತಂದರೂ ಅಚ್ಚರಿ ಪಡಬೇಕಿಲ್ಲ.  ಹಾಗಾಗಿ ಸರಕಾರ ಈ ಸುತ್ತೋಲೆಯನ್ನು ವಾಪಸ್ಸ ಪಡೆದ ಶಿಕ್ಷಣ ಹಾಗೂ ಮಕ್ಕಳ ಹಿತವನ್ನು ಕಾಪಾಡಬೇಕಿದೆ.

Donate Janashakthi Media

Leave a Reply

Your email address will not be published. Required fields are marked *