– ಎಂ.ಚಂದ್ರ ಪೂಜಾರಿ
ಚುನಾವಣೆ ಪ್ರಜಾಪ್ರಭುತ್ವದ ಒಂದು ಅಂಗ ಮಾತ್ರ. ಆದರೆ ನಮ್ಮಲ್ಲಿ ಪ್ರಜಾಪ್ರಭುತ್ವದ ಆರಂಭ, ಬೆಳವಣಿಗೆ, ಅಂತ್ಯ ಎಲ್ಲವೂ ಚುನಾವಣೆಯೇ ಅಗಿದೆ. ಪ್ರಜಾಪ್ರಭುತ್ವ ಚುನಾವಣೆಗೆ ಸೀಮಿತವಾಗಿ ಹಲವು ದಶಕಗಳಾಗಿವೆ. ಅಂದರೆ ಪ್ರಜಾಪ್ರಭುತ್ವದ ಇತರ ಅಂಗಗಳಾದ ನ್ಯಾಯಾಂಗ, ಮಾಧ್ಯಮ, ಕಾರ್ಯಾಂಗಗಳು ಅರ್ಥ ಕಳೆದುಕೊಂಡು ದಶಕಗಳಾಗಿವೆ. ಇಂತಹ ಸಂದರ್ಭದಲ್ಲಿ ಸಮರ್ಪಕವಾಗಿ ನಡೆಯುವ ಚುನಾವಣೆಗಳು ಮಾತ್ರ ಪ್ರಜಾಪ್ರಭುತ್ವವನ್ನು ಭಾಗಶಃ ಜೀವಂತ ಇರಿಸಲು ಸಾಧ್ಯ. ಅಂದರೆ ಸಮಾಜದ ಎಲ್ಲ ವರ್ಗದ ಜನರಿಗೆ ಸ್ಪರ್ಧಿಸಿ ಗೆಲ್ಲಲು ಸಾಧ್ಯವಾದರೆ ಮಾತ್ರ ಚುನಾವಣೆಗಳು ಸಮಪರ್ಕವಾಗಿ ನಡೆಯುತ್ತಿದೆ ಎನ್ನಬಹುದು. ಇಲ್ಲವಾದರೆ ಅಧಿಕಾರ ಕೆಲವರಲ್ಲೇ ಕ್ರೋಢೀಕರಣಗೊಂಡು ಅವರು ಪ್ರಜಾಪ್ರಭುತ್ವದ ಹೆಸರಲ್ಲಿ ತಮ್ಮ ಗುಂಪಿನ ಆಸಕ್ತಿಗಳನ್ನು ವೃದ್ಧಿಸಿಕೊಳ್ಳಬಹುದು. ದಿನಗೂಲಿ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ಸಣ್ಣಪುಟ್ಟ ಕೃಷಿಕರು, ವ್ಯಾಪಾರಿಗಳು, ಉದ್ದಿಮೆದಾರರು ಇವರೇ ನಮ್ಮ ಸಮಾಜದ ಬಹುತೇಕರು. ಇವರೆಲ್ಲ ನಮ್ಮಲ್ಲಿ ನಡೆಯುವ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲ್ಲಲು ಅವಕಾಶ ಇದೆಯೇ? ಎನ್ನುವ ಪ್ರಶ್ನೆ ಸುತ್ತಾ ಈ ಲೇಖನದ ಚರ್ಚೆ ಇದೆ. ಸದ್ಯ ನಡೆಯುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣ ಪ್ರಕ್ರಿಯೆಯನ್ನು ಗಮನದಲ್ಲಿಟ್ಟುಕೊಂಡು ಲೇಖನದ ಚರ್ಚೆಯನ್ನು ಬೆಳೆಸಲಾಗಿದೆ. ಈ ಲೇಖನ ಎರಡು ಭಾಗಗಳಲ್ಲಿದೆ. ಮೊದಲನೆಯ ಭಾಗ ಇದು.
ತತ್ವ ಸಿದ್ಧಾಂತಗಳು : ರಾಜ್ಯದ ವಿಧಾನಸಭೆ ಚುನಾವಣೆಗೆ ಪ್ರಮುಖ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿವೆ. ನಿನ್ನೆ ಮೊನ್ನೆ ತನಕ ಒಂದು ಪಕ್ಷದಲ್ಲಿದ್ದವರು ಇವತ್ತು ಮತ್ತೊಂದು ಪಕ್ಷದಿಂದ ಟಿಕೇಟು ಪಡೆದಿದ್ದಾರೆ. ಬಿಜೆಪಿಯಲ್ಲಿದ್ದವರು ಕಾಂಗ್ರೆಸ್‌ಲ್ಲಿ ಅಥವಾ ಕಾಂಗ್ರೆಸ್‌ಲ್ಲಿದ್ದವರು ಬಿಜೆಪಿಯಲ್ಲಿ ಅಥವಾ ಜೆಡಿಎಸ್‌ಲ್ಲಿ ಟಿಕೇಟು ಪಡೆದಿದ್ದಾರೆ. ಎಲ್ಲ ಪಕ್ಷಗಳು ಡೊಮಿನೆಂಟ್ ಸಮುದಾಯಗಳಿಗೆ (ಲಿಂಗಾಯತರು ಮತ್ತು ಒಕ್ಕಲಿಗರು) ಹೆಚ್ಚು ಟಿಕೇಟು ನೀಡಿವೆ. ಡೊಮಿನೆಂಟ್ ಸಮುದಾಯಗಳ ಅವಲಂಬನೆ ತಪ್ಪಿಸಬೇಕೆನ್ನುವ ಬಿಜೆಪಿ ಕೂಡ ಅತೀ ಹೆಚ್ಚು ಟಿಕೇಟುಗಳನ್ನು ಇವೇ ಸಮುದಾಯದವರಿಗೆ ನೀಡಿರುವುದು ಬಹುದೊಡ್ಡ ವಿಡಂಬನೆ. ಎಲ್ಲ ಪಕ್ಷಗಳಲ್ಲೂ ಹಲವು ವರ್ಷಗಳಿಂದ ಸ್ಪರ್ಧಿಸುವವರೇ ಈ ಬಾರಿಯೂ ಸ್ಪರ್ಧಿಸುತ್ತಿದ್ದಾರೆ. ಒಂದು ವೇಳೆ ಬದಲಾವಣೆ ಇದ್ದರೂ ಅದು ಅವರ ಕುಟುಂಬಕ್ಕೆ ಸೀಮಿತ. ಅಂದರೆ ತಂದೆ ಬದಲು ಮಗನೋ ಅಥವಾ ಗಂಡನ ಬದಲು ಹೆಂಡತಿಯೋ ಅಥವಾ ಹತ್ತಿರದ ಸಂಬಂಧಿಯೋ ಟಿಕೇಟು ಪಡೆದಿದ್ದಾರೆ. ಎಲ್ಲ ಪಕ್ಷಗಳಲ್ಲೂ ವರ್ಷಾನುಗಟ್ಟಲೆ ಪಕ್ಷಕ್ಕೆ ದುಡಿದ ಸಾಮಾನ್ಯ ಕಾರ್ಯಕರ್ತರು ಟಿಕೇಟು ಪಡೆಯಲ ವಿಫಲರಾಗಿದ್ದಾರೆ.
ಎಲ್ಲ ಪಕ್ಷಗಳು ಟಿಕೇಟು ನೀಡುವಾಗ ತಮ್ಮ ಪಕ್ಷದ ತತ್ವ ಸಿದ್ಧಾಂತಗಳಿಗೆ ಮೂರು ಕಾಸಿನ ಬೆಲೆ ನೀಡಿಲ್ಲ. ‘ಏಸೋಶಿಯನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ ಮತ್ತು ‘ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್’ಗಳ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಟಿಕೇಟು ಹಂಚುವಾಗಿ ಪರಿಗಣಿಸಲ್ಪಡುವ ಬಹುಮುಖ್ಯ ಅಂಶ ಅಭ್ಯರ್ಥಿಯ ಗೆಲ್ಲುವ ಸಾಧ್ಯತೆ. ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಮೂರು ನಾಲ್ಕು ಅಂಶಗಳ ಮೇಲೆ ನಿಂತಿದೆ. ಒಂದು, ಸುದ್ಧಿ ಮಾಧ್ಯಮಗಳ ಮೂಲಕ ಜನರಿಗೆ ಹೆಚ್ಚು ಪರಿಚಯ ಮಾಡಿಕೊಳ್ಳುವ ಅಭ್ಯರ್ಥಿಯ ಸಾಮರ್ಥ್ಯ, ಎರಡು, ಕ್ಷೇತ್ರದ ಆಯಾಕಟ್ಟಿನ ಜಾಗದಲ್ಲಿ ಫ್ಲೆಕ್ಸ್ ಬ್ಯಾನರ್‌ಗಳನ್ನು ಹಾಕಿ ಸುದ್ಧಿ ಮಾಡುವ ಸಾಮರ್ಥ್ಯ, ಮೂರು, ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ನೇಮಕ ಮಾಡಿ ಮನೆಮನೆಗೆ ತಮ್ಮನ್ನು ಪರಿಚಯಿಸಿಕೊಳ್ಳುವ ಮತ್ತು ದುಡ್ಡು ಹಂಚುವ ಸಾಮರ್ಥ್ಯ. ನಾಲ್ಕು, ಹಲವು ಸಾವಿರ ಜನರನ್ನು ಸೇರಿಸಿ ಚುನಾವಣ ಸಮಾವೇಶಗಳನ್ನು ಸಂಘಟಿಸುವ ಸಾಮರ್ಥ್ಯ ಮತ್ತು ಇತ್ತೀಚಿನ ವರ್ಷಗಳಲ್ಲಿ ಮತ್ತೊಂದು ಸಾಮರ್ಥ್ಯ ಕೂಡ ಮುಂಚೂಣಿಗೆ ಬಂದಿದೆ. ಅದೇನೆಂದರೆ ಕೋಮು ಗಲಭೆಗಳನ್ನು ಹುಟ್ಟು ಹಾಕಿ ಮತಗಳನ್ನು ಧ್ರುವೀಕರಿಸುವ ಸಾಮರ್ಥ್ಯ.
ಇವೆಲ್ಲವೂ ಕೆಲವು ಕೋಟಿ ರೂಗಳ ವಿನಿಯೋಜನೆಯನ್ನು ಬಯಸುತ್ತವೆ. ಅಷ್ಟು ಮಾತ್ರವಲ್ಲ ವಿನಿಯೋಜಿಸಬೇಕಾದ ಕೆಲವು ಕೋಟಿಗಳಲ್ಲಿ ಸರಿ ಅರ್ಧದಷ್ಟನ್ನು ಅಭ್ಯರ್ಥಿಯೇ ಭರಿಸಬೇಕಾದ ಸ್ಥಿತಿ ಇದೆ. ಇದೇ ಕಾರಣದಿಂದ ಕೋಟಿ ಲೆಕ್ಕದಲ್ಲಿ ಆಸ್ತಿಪಾಸ್ತಿ ಇದ್ದವರು ಮಾತ್ರ ಇವತ್ತು ಚುನಾವಣೆ ಸ್ಪರ್ಧಿಸಿ ಗೆಲ್ಲಲು ಸಾಧ್ಯವಾಗಿದೆ. ಕೋಟಿಗಿಂತ ಕಡಿಮೆ ಆಸ್ತಿಪಾಸ್ತಿವುಳ್ಳ ಬೆರಳಣಿಕೆಯಷ್ಟು ಅಭ್ಯರ್ಥಿಗಳನ್ನು ಚುನಾವಣ ಕಣದಲ್ಲಿ ನೋಡಲು ಸಾಧ್ಯವಾಗುವುದಿಲ್ಲ. ಅಭ್ಯರ್ಥಿಯೇ ಭರಿಸುವ ಪ್ರಮಾಣ ಮತ್ತು ಪಕ್ಷದ ದೇಣಿಗೆ ಪಡೆಯುವ ಸಾಮರ್ಥ್ಯದ ನಡುವೆ ನೇರ ಸಂಬಂಧ ಇದೆ. ಅಂದರೆ ಹೊರಗಿನಿಂದ ಹೆಚ್ಚು ದೇಣಿಗೆ ಪಡೆಯುವ ಪಕ್ಷದಲ್ಲಿ ಅಭ್ಯರ್ಥಿಯೇ ಭರಿಸುವ ಪ್ರಮಾಣ ಕಡಿಮೆ ಇರುತ್ತದೆ. ಕಡಿಮೆ ದೇಣಿಗೆ ಪಡೆಯವ ಪಕ್ಷದಲ್ಲಿ ಅಭ್ಯರ್ಥಿಯೇ ಭರಿಸುವ ಪ್ರಮಾಣ ಹೆಚ್ಚಿರುತ್ತದೆ. ಅದೇ ರೀತಿ ಪಕ್ಷದ ದೇಣಿಗೆ ಪಡೆಯುವ ಶಕ್ತಿ ಮತ್ತು ಪಕ್ಷ ಅಧಿಕಾರದಲ್ಲಿರುವುದರ ನಡುವೆ ನೇರ ಸಂಬಂಧ ಇದೆ.
ಆಡಳಿತದಲ್ಲಿರುವ ಪಕ್ಷ ಹೆಚ್ಚು ದೇಣಿಗೆ ಮತ್ತು ವಿರೋಧ ಪಕ್ಷದಲ್ಲಿರುವ ಪಕ್ಷ ಕಡಿಮೆ ದೇಣಿಗೆ ಪಡೆಯುತ್ತವೆ. ಪಕ್ಷಗಳ ತತ್ವ ಸಿದ್ಧಾಂತಗಳನ್ನು ನೋಡಿ ಉದ್ದಿಮೆಗಳು ಮತ್ತು ಇತರ ಅನುಕೂಲಸ್ಥರು ದೇಣಿಗೆ ನೀಡುವುದಲ್ಲ. ಉದ್ದಿಮೆಗಳು ಮತ್ತು ಇತರ ಅನುಕೂಲಸ್ಥರ ಕೆಲಸ, ಕಾರ್ಯಗಳನ್ನು ಪಕ್ಷ ಅಧಿಕಾರಕ್ಕೆ ಬಂದ ನಂತರ ಈಡೇರಿಸುತ್ತದೆ ಎನ್ನುವ ಭರವಸೆ ಮೇಲೆ ದೇಣಿಗೆ ಪಡೆಯುತ್ತವೆ. ಈ ಎಲ್ಲದರ ಹಿನ್ನೆಲೆಯಲ್ಲಿ ತೀರ್ಮಾನಿಸುವುದಾದರೆ ಪಕ್ಷಗಳಿಗೆ ದೇಣಿಗೆ ನೀಡುವವರು ಮತ್ತು ಚುನಾವಣ ವೆಚ್ಚವನ್ನು ಸ್ವತಃ ಭರಿಸಲು ಶಕ್ತಿ ಇರುವವರು ನಮ್ಮ ಪ್ರಜಾಪ್ರಭುತ್ವದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ ಎನ್ನುವ ತೀರ್ಮಾನಕ್ಕೆ ಬರಬಹುದು. ಏಸೋಶಿಯನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ನ ಅಂಕಿಅಂಶಗಳ ಪ್ರಕಾರ ಒಂದು ಕೋಟಿಗಿಂತ ಕಡಿಮೆ ಆಸ್ತಿಪಾಸ್ತಿ ಘೋಷಣೆ ಮಾಡಿರುವ ಅಭ್ಯರ್ಥಿಗಳ
ಗೆಲ್ಲುವ ಸಾಧ್ಯತೆ ಕೇವಲ ಶೇ.೬ರಷ್ಟಿದ್ದರೆ ೨೦ ಕೋಟಿಗಿಂತ ಹೆಚ್ಚು ಆಸ್ತಿಪಾಸ್ತಿ ಘೋಷಣೆ ಮಾಡಿದ ಆಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಶೇ.೫೨ರಷ್ಟಿದೆ.
ಚುನಾವಣೆಯಲ್ಲಿ ಮಾತ್ರ ಹಣ ನಿರ್ಣಾಯಕ ಪಾತ್ರ ವಹಿಸುವುದಲ್ಲ, ಚುನಾವಣೆ ನಂತರವೂ ಹಣವೇ ನಿರ್ಣಾಯಕ. ರಾಜಕೀಯ ಪಕ್ಷ ಹಲವು ಕೋಟಿ ರೂಗಳನ್ನು ವಿನಿಯೋಜಿಸಲು ರೆಡಿ ಇದ್ದರೆ ಚುನಾವಣೆಯಲ್ಲಿ ಸೋತರೂ ಸರಕಾರ ರಚಿಸಬಹುದೆನ್ನುವ ಹಲವು ಘಟನೆಗಳು ನಮ್ಮಲ್ಲಿ ನಡೆದಿವೆ. ಕರ್ನಾಟಕದ ೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷ ಬಹುಮತ ಪಡೆದಿಲ್ಲ. ಆವಾಗ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸೇರಿ ಸಮ್ಮಿಶ್ರ ಸರಕಾರ ರಚಿಸಿವೆ. ಒಂದು ವರ್ಷದ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಹಲವು ಎಂಎಲ್‌ಎಗಳು ತಮ್ಮ ಪಕ್ಷಕ್ಕೆ ರಾಜಿನಾಮೆ ನೀಡಿ ಬಿಜೆಪಿ ಸೇರಿದರು. ಇವರನ್ನೆಲ್ಲ ಹಲವು ಕೋಟಿ ನೀಡಿ ಖರೀದಿಸಲಾಗಿದೆ ಎನ್ನುವ ಚರ್ಚೆ ಬಹುತೇಕರ ಪ್ರಜ್ಞೆಯ ಭಾಗವಾಗಿದೆ. ಎಂಎಲ್‌ಎಗಳು ಬಿಜೆಪಿ ಸೇರುವುದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಮಿಶ್ರ ಸರಕಾರ ಅಧಿಕಾರ ಕಳೆದುಕೊಂಡಿತು. ಚುನಾವಣೆಯಲ್ಲಿ ಬಹುಮತ ಪಡೆಯದಿದ್ದರೂ ಬಿಜೆಪಿ ಪಕ್ಷ ಕರ್ನಾಟಕದಲ್ಲಿ ಸರಕಾರ ರಚಿಸಿದೆ ಮತ್ತು ನಾಲ್ಕು ವರ್ಷ ಆಡಳಿತ ನಡೆಸಿದೆ.
ಇದನ್ನೂ ಓದಿ : ಮತ-ಮತದಾರ-ಮತದಾನ ಮತ್ತು ಮತದ ಮೌಲ್ಯ
ಹೆಚ್ಚು ಕಡಿಮೆ ಇದೇ ರೀತಿಯ ಪ್ರಯೋಗ ಮಧ್ಯಪ್ರದೇಶ ಮತ್ತು ಮಹಾರಾಷ್ಟಗಳಲ್ಲೂ ನಡೆದಿದೆ. ಮಧ್ಯ ಪ್ರದೇಶದಲ್ಲೂ ಕಾಂಗ್ರೆಸ್‌ನ ಹಲವು ಎಂಎಲ್‌ಎಗಳು ಬಿಜೆಪಿ ಸೇರುವುದರಿಂದ ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡಿತು. ಬಿಜೆಪಿ ಪಕ್ಷ ಅಧಿಕಾರ ಹಿಡಿಯಿತು. ಮಹಾರಾಷ್ಟçದಲ್ಲಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಮೂರು ಪಕ್ಷಗಳು ಸೇರಿ ಸರಕಾರ ನಡೆಸುತ್ತಿದ್ದವು. ಶಿವಸೇನೆಯ ಬಹುತೇಕ ಎಂಎಲ್‌ಎಗಳು ಪಕ್ಷದಿಂದ ಹೊರಹೋಗುವುದರಿಂದ ಸಮ್ಮಿಶ್ರ ಸರಕಾರ ಅಧಿಕಾರದಿಂದ ಇಳಿಯಬೇಕಾಯಿತು. ಶಿವಸೇನೆಯಿಂದ ಹೊರಹೋದ ಎಂಎಲ್‌ಎಗಳು ಬಿಜೆಪಿ ಜೊತೆ ಸೇರಿ ಸರಕಾರ ರಚಿಸಿದರು. ಎಲ್ಲ ಕಡೆ ದೊಡ್ಡ ಮೊತ್ತದ ಹಣದ ಬಳಕೆ ಜೊತೆಗೆ ಸೆಂಟ್ರಲ್ ಏಜನ್ಸಿಗಳನ್ನು (ಸಿಬಿಐ, ಇಡಿ ಇತ್ಯಾದಿಗಳು) ಬಳಸಿಕೊಂಡು ಚುನಾವಣೆಯಲ್ಲಿ ಬಹುಮತ ಪಡೆದ ಪಕ್ಷವನ್ನು ಅಧಿಕಾರದಿಂದ ಇಳಿಸಿ ಬಹುಮತ ಪಡೆಯದ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದೆ ಎನ್ನುವ ಚರ್ಚೆ ಇದೆ.
ಮತದಾರರು :
ಇಂತಹ ಚುನಾವಣೆಗಳಲ್ಲಿ ಮತ ಚಲಾಯಿಸುವ ಏಕಮಾತ್ರ ಶಕ್ತಿವುಳ್ಳ ಸಾಮಾನ್ಯ ಪ್ರಜೆಗಳ ಪಾತ್ರ ಏನು? ಪಾತ್ರ ಏನೆಂದು ರಾಜಕೀಯ ಪಕ್ಷಗಳು, ಮಾಧ್ಯಮಗಳು, ಸಮಾಜದ ಗಣ್ಯರು, ಅಧಿಕಾರಿಗಳು ನೇರವಾಗಿ ಮತ್ತು ಪರೋಕ್ಷವಾಗಿ ಹೇಳುತ್ತಾರೆ. ಮತದಾನ ತುಂಬಾ ಮಹತ್ವದ್ದು. ಆದುದರಿಂದ ಎಲ್ಲರೂ ತಪ್ಪದೇ ಮತದಾನ ಮಾಡಬೇಕೆಂದು ನೇರವಾಗಿ ಹೇಳುತ್ತಾರೆ. ನೇರವಾಗಿ ಹೇಳುವುದಕ್ಕಿಂತ ಹೆಚ್ಚು ಪರೋಕ್ಷ ಸಂದೇಶಗಳೇ ಹೆಚ್ಚು. ಇವನ್ನು ಮಾಧ್ಯಮ ತುಂಬಾ ಪರಿಣಾಮಕಾರಿಯಾಗಿ ಮಾಡುತ್ತಿವೆ. ಖಾನ್‌ದಾನ್ ಸಿನೀಮಾಗಳನ್ನು ಮೀರಿಸುವ ರೀತಿಯಲ್ಲಿ ಚುನಾವಣೆಯಲ್ಲಿ ಯಾರು ಸ್ಪರ್ಧಿಸಿ ಗೆಲ್ಲಬಹುದೆನ್ನುವ ವಿವರಗಳನ್ನು ಮಾಧ್ಯಮಗಳು ತೋರಿಸುತ್ತವೆ. ಮಾಧ್ಯಮಗಳು ನೀಡುವ ವಿಶುವಲ್ಸ್ಗಳಲ್ಲಿ ಕುಟುಂಬ, ಅಂತಸ್ತು, ಜಾತಿ, ದೇವರುಗಳು ಎದ್ದು ಕಾಣುವ ಅಂಶಗಳು.
ಗಂಡ ಟಿಕೇಟು ಪಡೆಯುವುದನ್ನು ಹೆಂಡತಿ ಮಕ್ಕಳು ಸಂಭ್ರಮಿಸುವುದು, ತಂದೆ, ತಾಯಿ, ಅಣ್ಣ ಅತ್ತಿಗೆಯವರ ಕಾಲು ಹಿಡಿದು ಆಶೀರ್ವಾದ ಪಡೆಯುವುದು, ಸಮುದಾಯದ ಗುರುಗಳ ಕಾಲು ಹಿಡಿದು ಆಶೀರ್ವಾದ ಪಡೆಯುವುದು, ಮನೆ ದೇವರ ಅಥವಾ ಊರ ದೇವರ ಮುಂದೆ ಟಿಕೇಟು ಇಟ್ಟು ಆಶೀರ್ವಾದ ಪಡೆಯುವುದು, ಸಾವಿರಾರು ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸುವುದು ಇತ್ಯಾದಿಗಳನ್ನು ಮಾಧ್ಯಮಗಳು ಸತತವಾಗಿ ಬಿತ್ತರಿಸುತ್ತವೆ. ಇವೆಲ್ಲವೂ ಕುಟುಂಬ, ಸಮುದಾಯ ಕೇಂದ್ರಿತ ಊಳಿಗಮಾನ್ಯ ಮೌಲ್ಯಗಳು. ಇವು ವಿಸ್ತರಿಸಿದಷ್ಟು ಪ್ರಜಾಪ್ರಭುತ್ವ ದೂರ ಸರಿಯತ್ತದೆ. ಆದರೆ ಇಂತಹ ಪ್ರಜಾಪ್ರಭುತ್ವವನ್ನು ದೂರೀಕರಿಸುವ ಮೌಲ್ಯಗಳನ್ನೇ ನಮ್ಮ ಸಂಸ್ಕೃತಿ ಹೆಸರಲ್ಲಿ ಚುನಾವಣೆ ಸಂದರ್ಭದಲ್ಲೂ ಜನರ ಪ್ರಜ್ಞೆಯ ಭಾಗ ಮಾಡಲಾಗುತ್ತಿದೆ. ಮಾಧ್ಯಮಗಳು ಯಾವುದರ ಮೇಲೆ ಫೋಕಸ್ ಮಾಡುತ್ತಿವೆ ಎನ್ನುವುದನ್ನು ಮೇಲೆ ನೋಡಿದ್ದೇವೆ. ಯಾವುದರ ಮೇಲೆ ಮಾಡುತ್ತಿಲ್ಲ ಎನ್ನುವುದರ ಮೇಲೆ ಗಮನ ಹರಿಸುವ.
ಚುನಾವಣೆಗಳು ನಮ್ಮ ಪ್ರತಿನಿಧಿಗಳನ್ನು ಆರಿಸುವ ಮುಖ್ಯ ಪ್ರಕ್ರಿಯೆ. ನಾವು ಚುನಾಯಿಸುವ ಪ್ರತಿನಿಧಿಗಳು ನಮ್ಮ ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ, ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ನೀತಿಗಳನ್ನು ರೂಪಿಸುತ್ತಾರೆ. ಇದನ್ನೇ ಇನ್ನೊಂದು ವಿಧದಲ್ಲಿ ಹೇಳುವುದಾದರೆ ನಮ್ಮ ಬದುಕಿನ ಗುಣಮಟ್ಟವನ್ನು ನಿರ್ಧರಿಸುವ ಎಲ್ಲ ನೀತಿಗಳನ್ನು ನಾವು ಚುನಾಯಿಸುವ ಪ್ರತಿನಿಧಿಗಳು ನಿರ್ಧರಿಸುತ್ತಾರೆ. ಆದುದರಿಂದ ಸ್ಪರ್ಧಿಸುವ ಅಭ್ಯರ್ಥಿಗಳು ನಮ್ಮ ಆದ್ಯತೆಗಳನ್ನು, ಆಸಕ್ತಿಗಳನ್ನು ಪ್ರತಿನಿಧಿಸಲು
ಶಕ್ತರೇ ಎನ್ನುವ ಅಂಶ ಚುನಾವಣ ಪ್ರಚಾರದ ಮುಖ್ಯ ಅಂಶ ಆಗಬೇಕು. ಶಿಕ್ಷಣ, ಆರೋಗ್ಯ ಅಥವಾ ಇತರ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿ ಅನುಭವ ಏನು? ಸಮಾಜ ಸೇವೆ ಮಾಡಿದ ಅನುಭವ ಎಷ್ಟಿದೆ? ಅಭ್ಯರ್ಥಿಯ ಆರ್ಥಿಕ ಹಿನ್ನೆಲೆ ಏನು? ಅಭ್ಯರ್ಥಿಯ ರಾಜಕೀಯ ಹಿನ್ನೆಲೆ ಏನು? ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಜಾರಿಗೆ ತರುವ ನೀತಿಗಳೇನು? ಇವೆಲ್ಲ ಚರ್ಚೆಗಳು ಚುನಾವಣ ಸಂದರ್ಭದಲ್ಲಿ ಮುಖ್ಯ ಭೂಮಿಕೆ ನಿಭಾಯಿಸಬೇಕು.
ಏಕೆಂದರೆ ಮೂರು ಹೊತ್ತಿನ ಊಟಕ್ಕೆ ಪರದಾಡುವವರು ಕೋಟ್ಯಧೀಶ ಪ್ರತಿನಿಧಿಗಳನ್ನು ಚುನಾಯಿಸಿದರೆ ಅಂತಹ ಪ್ರತಿನಿಧಿಗಳ ಜನಸಾಮಾನ್ಯರ ಹಿತಕ್ಕೆ ಪೂರಕವಾದ ಪಾಲಿಸಿಗಳನ್ನು ಬೆಂಬಲಿಸಲು ಸಾಧ್ಯವಿಲ್ಲ. ಅದೇ ರೀತಿ ಹಲವು ಸಮುದಾಯಗಳು ಒಟ್ಟಾಗಿ ಬದುಕುವ ಸಮಾಜದಲ್ಲಿ ಯಾವುದೋ ಒಂದು ಜಾತಿ ಧರ್ಮ ಮುಖ್ಯ ಎಂದು ನಂಬುವ ಅಭ್ಯರ್ಥಿ ಸಮಾಜಹಿತ ರಕ್ಷಿಸುವ ಕೆಲಸ ಮಾಡಲು ಸಾಧ್ಯವಿಲ್ಲ. ಅನುಕೂಲಸ್ಥರ ಪರ ಇರುವ ಪಕ್ಷ ಅನನುಕೂಲಸ್ಥರ ಪರ ಇರಲು ಸಾಧ್ಯವಿಲ್ಲ. ಊಳಿಗಮಾನ್ಯ ಮೌಲ್ಯಗಳನ್ನು ಪ್ರತಿನಿಧಿಸುವ ಅಭ್ಯರ್ಥಿಗಳು ಪ್ರಜಾಪ್ರಭುತ್ವವನ್ನು ರಕ್ಷಿಸಿ ಬೆಳಸಲು ಸಾಧ್ಯವಿಲ್ಲ. ಆದರೆ ಇವು ಯಾವುವು ಮುಂಚೂಣಿಗೆ ಬರುವುದೇ ಇಲ್ಲ. ಹೆಚ್ಚು ಜನಸಂಖ್ಯೆ ಇರುವ ಜಾತಿಗಳ ಕೋಟ್ಯಧೀಶ ಪುರುಷರು ಅಭ್ಯರ್ಥಿಗಳಾಗಲು ಯೋಗ್ಯರೆನ್ನುವ ಸಂದೇಶವನ್ನು ರಾಜಕೀಯ ಪಕ್ಷಗಳು, ಮಾಧ್ಯಮಗಳು, ಗಣ್ಯರು, ಅಧಿಕಾರಿಗಳು ಕೊಡುತ್ತಾರೆ. ತಮ್ಮ ಬದುಕನ್ನು ಸುಧಾರಿಸಲು ಏನೇನೂ ಕೊಡುಗೆ ನೀಡಲು ಯೋಗ್ಯರಲ್ಲದವರ ಪಟ್ಟಿಯಿಂದ ಒಬ್ಬರನ್ನು ಚುನಾಯಿಸುವುದು ಮಾತ್ರ ನಿಮ್ಮ ಕರ್ತವ್ಯ ಎನ್ನುವ ಸಂದೇಶವನ್ನು ಸಾಮಾನ್ಯ ಮತದಾರರಿಗೆ ನೀಡಲಾಗುತ್ತಿದೆ. ಇವುಗಳೊಂದಿಗೆ ಜನರ ರಾಜಕೀಯ ಆಯ್ಕೆಯನ್ನು ಕುಂಠಿಸುವ ಮತ್ತೊಂದು ಅಂಶ ಕೂಡ ಇದೆ. ಅದೇನೆಂದರೆ ಮೆಜಾರಿಟಿ ಮೈನಾರಿಟಿಗಳನ್ನು ಕಟ್ಟಿಕೊಳ್ಳುವ ವಿಧಾನ.
ಮೆಜಾರಿಟಿ ಮೈನಾರಿಟಿ :
ಜಾತಿ, ಲಿಂಗ, ಧರ್ಮಗಳು ಸಾಮಾಜಿಕ ಗುರುತುಗಳು. ಇವು ನಮ್ಮ ಸಾಮಾಜಿಕ ಸ್ಥಾನಮಾನವನ್ನು ಸೂಚಿಸುತ್ತವೆ. ಇವು ಯಾವುವು ನಮಗೆ ಊಟ, ಉದ್ಯೋಗ, ಶಿಕ್ಷಣ, ಆರೋಗ್ಯ, ವಸತಿ, ನೈಮರ್ಲ್ಯಗಳನ್ನು ಕೊಡುವುದಿಲ್ಲ. ಆದರೆ ಇವೇ ಗುರುತಗಳ ನೆಲೆಯಲ್ಲಿ ಕಟ್ಟಿಕೊಳ್ಳುವ ಮೆಜಾರಿಟಿ ಮೈನಾರಿಟಿಗಳು ಚುನಾವಣ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಅಂದರೆ ಬಿಜೆಪಿ ಪಕ್ಷ ಧರ್ಮದ ನಲೆಯಲ್ಲಿ ಮೆಜಾರಿಟಿ (ಹಿಂದೂ) ಮೈನಾರಿಟಿಗಳನ್ನು (ಮುಸ್ಲಿಮರು, ಕ್ರಿಶ್ಚಿಯನ್ನರು) ಕಟ್ಟಿಕೊಳ್ಳುತ್ತಿದೆ.
ಕಾಂಗ್ರೆಸ್ ಮತ್ತು ಇತರ ಪ್ರಾದೇಶಿಕ ಪಕ್ಷಗಳು ಜಾತಿ ನೆಲೆಯಲ್ಲಿ ಮೇಜಾರಿಟಿ ಮೈನಾರಿಟಿಗಳನ್ನು ಕಟ್ಟಿಕೊಳ್ಳುತ್ತಿವೆ. ಇದೇ ಕಾರಣದಿಂದ ಎಲ್ಲ ಪಕ್ಷಗಳಿಂದಲೂ ಹೆಚ್ಚು ಜನಸಂಖ್ಯೆ ಇರುವ ಜಾತಿ, ಧರ್ಮಗಳಿಂದ ಹೆಚ್ಚು ಪ್ರತಿನಿಧಿಗಳು ಚುನಾಯಿತರಾಗುತ್ತಾರೆ. ಆದರೆ ಆರ್ಥಿಕ ದೃಷ್ಟಿಯಿಂದ ನೋಡಿದರೆ ಇನ್ನೊಂದು ಮೆಜಾರಿಟಿ ಮೈನಾರಿಟಿ ಕಾಣುತ್ತದೆ.
ಮುಖ್ಯವಾಗಿ ಮೂರು ಆರ್ಥಿಕ ಚಟುವಟಿಕೆಗಳನ್ನು ಗಮನಿಸಬಹುದು. ಒಂದು, ಕೃಷಿ, ಎರಡು, ವ್ಯಾಪಾರ ಉದ್ದಿಮೆ ಮತ್ತು ಮೂರು, ಉದ್ಯೋಗ. ಕೃಷಿಯಲ್ಲಿ ಸಣ್ಣ, ಅತೀ ಸಣ್ಣ, ಮಧ್ಯಮ ಮತ್ತು ದೊಡ್ಡ ಕೃಷಿಕರೆನ್ನುವ ನಾಲ್ಕು ಗುಂಪುಗಳಿವೆ. ಶೇ.೭೫-೮೦ರಷ್ಟು ಕೃಷಿಕರು ಸಣ್ಣ ಮತ್ತು ಅತೀ ಸಣ್ಣ ಕೃಷಿಕರು ಅಥವಾ ಮೇಜಾರಿಟಿ ಕೃಷಿಕರು. ಮಧ್ಯಮ ಮತ್ತು ದೊಡ್ಡ ಕೃಷಿಕರು ಅಲ್ಪಸಂಖ್ಯಾತರು ಅಥವಾ ಮೈನಾರಿಟಿ ಕೃಷಿಕರು. ವ್ಯಾಪಾರ ಉದ್ದಿಮೆಯಲ್ಲೂ ಸಣ್ಣ ಅತೀ ಸಣ್ಣ, ಮಧ್ಯಮ ಮತ್ತು ದೊಡ್ಡ ವ್ಯಾಪಾರ ಉದ್ದಿಮೆಗಳಿವೆ. ಇಲ್ಲೂ ಶೇ.೯೦ರಷ್ಟು ಅಥವಾ ಮೆಜಾರಿಟಿ ವ್ಯಾಪಾರ ಉದ್ದಿಮೆಗಳು ಸಣ್ಣ ಅತೀ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರ ಉದ್ದಿಮೆಗಳು. ದೊಡ್ಡ ವ್ಯಾಪಾರ ಉದ್ದಿಮೆಗಳು ಮೈನಾರಿಟಿಗಳು. ಉದ್ಯೋಗದಲ್ಲಿ ಸಂಘಟಿತ ಮತ್ತು ಅಸಂಘಟಿತ ಎನ್ನುವ ಎರಡು ಗುಂಪುಗಳಿವೆ. ಸಂಬಳ,
ಉದ್ಯೋಗ ಅಥವಾ ಸಾಮಾಜಿಕ ಭದ್ರತೆಗಳಿಲ್ಲದ ಉದ್ಯೋಗಿಗಳನ್ನು ಅಸಂಘಟಿತ ಅಥವಾ ಅನಧಿಕೃತ ಉದ್ಯೋಗಿಗಳೆನ್ನುತಾರೆ. ನಮ್ಮಲ್ಲಿ ಮೆಜಾರಿಟಿ (ಶೇ.೮೦ರಷ್ಟು) ಉದ್ಯೋಗಿಗಳು ಅಸಂಘಟಿತ ಉದ್ಯೋಗಿಗಳು ಅಥವಾ ಯಾವುದೇ ಭದ್ರತೆಗಳಿಲ್ಲದ ಉದ್ಯೋಗಿಗಳು. ಸಂಘಟಿತ ಅಥವಾ ಭದ್ರತೆಗಳಿರುವ ಉದ್ಯೋಗಳು ಮೈನಾರಿಟಿಗಳು.
ಸಾಮಾಜಿಕ ನೆಲೆಯಲ್ಲಿ ನೋಡಿದಾಗ ಹೆಚ್ಚು ಸಂಖ್ಯೆ ಇರುವ ಜಾತಿ, ಧರ್ಮಗಳಿಂದ ಹೆಚ್ಚು ಪ್ರತಿನಿಧಿಗಳು ಚುನಾಯಿಸಲ್ಪಡುತ್ತಾರೆ. ಆದರೆ ಆರ್ಥಿಕ ದೃಷ್ಟಿಯಿಂದ ಮೇಜಾರಿಟಿಗಳು ಯಾವುದೇ ಕ್ಷೇತ್ರದಿಂದ ಚುನಾಯಿತರಾಗುವುದಿಲ್ಲ. ಅಂದರೆ ಸಣ್ಣ ಅತೀ ಸಣ್ಣ ಕೃಷಿಕರು ಕೃಷಿ ಕ್ಷೇತ್ರದ ಮೇಜಾರಿಟಿಗಳು. ಆದರೆ ಇಲ್ಲಿ ಇರ‍್ಯಾರು
ಚುನಾಯಿತರಾಗುವುದಿಲ್ಲ. ಕೇವಲ ದೊಡ್ಡ ಕೃಷಿಕರು ಮಾತ್ರ ಚುನಾಯಿತರಾಗುತ್ತಾರೆ. ಸಣ್ಣ, ಅತೀ ಸಣ್ಣ ವ್ಯಾಪಾರ ಉದ್ದಿಮೆಗಳು ಈ ಕ್ಷೇತ್ರದ ಮೇಜಾರಿಟಿಗಳು. ಆದರೆ ಇರ‍್ಯಾರು ಈ ಕ್ಷೇತ್ರದಿಂದ ಚುನಾಯಿತರಾಗುವುದಿಲ್ಲ. ಈ ಕ್ಷೇತ್ರದಿಂದ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ದೊಡ್ಡ ವ್ಯಾಪಾರ ಉದ್ದಿಮೆದಾರರು ಚುನಾಯಿತರಾಗುತ್ತಾರೆ. ಇದೇ ರೀತಿಯಲ್ಲಿ ಉದ್ಯೋಗ ಕ್ಷೇತ್ರದಿಂದಲೂ ಅಸಂಘಟಿತ ಮೆಜಾರಿಟಿ ಕಾರ್ಮಿಕರಿಂದ ಒಬ್ಬರು ಚುನಾಯಿತರಾಗುವುದಿಲ್ಲ. ಅದರ
ಬದಲು ಮೈನಾರಟಿಗಳಾದ ಸಂಘಟಿತ ಉದ್ಯೋಗಿಗಳು ಚುನಾಯಿತರಾಗುತ್ತಾರೆ. ಏಕೆ ಊಟ, ಉದ್ಯೋಗ, ಶಿಕ್ಷಣ, ಆರೋಗ್ಯ ಕೊಡುವ ಆರ್ಥಿಕ ಸ್ಥಿತಿ ಚುನಾವಣೆಯಲ್ಲಿ ಪ್ರಮುಖ ವಹಿಸುವುದಿಲ್ಲ? ಅಥವಾ ಬದುಕಿನ ಗುಣಮಟ್ಟದ ಮೇಲೆ ಅತ್ಯಲ್ಪ ಪ್ರಭಾವ ಬೀರುವ ಸಾಮಾಜಿಕ ಸ್ಥಿತಿ ಏಕೆ ಚುನಾವಣೆಯಲ್ಲಿ ಮುಖ್ಯವಾಗುತ್ತದೆ? ಎನ್ನುವುದು ಅರ್ಥವಾಗಬೇಕಾದರೆ ಜನರ ಮುಂದಿರುವ ರಾಜಕೀಯ ಆಯ್ಕೆಗಳ ಕಿರು ಪರಿಚಯ ಅಗತ್ಯ.