ನಮಗೆ ನಿಜಕ್ಕೂ ದೇವರು ಮತ್ತು ಧರ್ಮ ಬೇಕಿದೆಯೇ?

ಮತಧರ್ಮವು ವಾಸ್ತವಿಕತೆಯ ಬಗ್ಗೆ ನಮ್ಮ ಗ್ರಹಿಕೆಯನ್ನು ಸೀಮಿತಗೊಳಿಸಿ ವೈಚಾರಿಕತೆಯನ್ನು ಸಂಕುಚಿತಗೊಳಿಸಿದೆ

ಮೂಲ: ಸುಮಿತ್‌ ಪಾಲ್‌
ಅನುವಾದ: ನಾ ದಿವಾಕರ

ಧರ್ಮ ಮತ್ತು ದೇವರು ಭಾರತದಲ್ಲಿ ತೀವ್ರ ಹಾವಳಿ ಸೃಷ್ಟಿಸುತ್ತಿರುವ ಎರಡು ಸಂಗತಿಗಳು. ತಾಜಮಹಲ್‌ ತೇಜೋ ಮಹಾಲಯ ಆಗುತ್ತಿದ್ದರೆ ಕುತುಬ್‌ ಮಿನಾರ್‌ ವಿಷ್ಣು ಸ್ತಂಭವಾಗುತ್ತಿದೆ. ಈ ಸನ್ನಿವೇಶದಲ್ಲಿ ವಿವೇಕ ಇರುವ ಯಾರೇ ಆದರೂ ನಮಗೆ ದೇವರು ಮತ್ತು ಧರ್ಮದ ಅವಶ್ಯಕತೆ ಇದೆಯೇ ಎಂದು ಯೋಚಿಸುವುದು ಸಹಜ. ಕಾರ್ಲ್‌ ಮಾರ್ಕ್ಸ್‌ ಧರ್ಮ ಜನಸಮೂಹಗಳ ಅಫೀಮು ಎಂದು ಹೇಳಿರುವುದು ಪದೇಪದೇ ನೆನಪಾಗುತ್ತದೆ. ಖಂಡಿತವಾಗಿಯೂ ಇದು ಹೌದು. ಮನಶ್ಶಾಸ್ತ್ರದ ಸಂಶೋಧನೆ ಮಾಡುತ್ತಿರುವ ವಿಜ್ಞಾನಿಗಳು ಧರ್ಮಗಳ ಡಿಎನ್‌ಎ ಶೋಧನೆಯಲ್ಲಿ ತೊಡಗಿದ್ದಾರೆ. ಕೆಲವು ಪ್ರಖರ ಅಭಿಪ್ರಾಯಗಳೂ ಬರುತ್ತಿವೆ. ಮಿದುಳಿನ ಕಾರ್ಯನಿರ್ವಹಣೆಯನ್ನು ಚಿತ್ರಿಸುವ ಪ್ರಯೋಗಾತ್ಮಕ ಸಾಕ್ಷ್ಯಾಧಾರಗಳೂ ದೊರೆತಿವೆ. ಈ ಸಂಶೋಧನೆಗಳು, ಮಾನವನೇ ದೇವರನ್ನು ಸೃಷ್ಟಿಸಿರುವುದೇ ಹೊರತು ಮಾನವ ದೈವಸೃಷ್ಟಿಯಲ್ಲ ಎಂದು ಸಾಬೀತುಪಡಿಸಿವೆ.

ನಾವು ವಿಜ್ಞಾನವನ್ನು ಅರ್ಥಮಾಡಿಕೊಂಡಷ್ಟೂ ಸ್ವರ್ಗ, ನರಕ, ಧರ್ಮ ಇದಾವುದೂ ಇಲ್ಲ ಎಂಬ ಅಭಿಪ್ರಾಯಕ್ಕೆ ಬರುವುದು ಸಾಧ್ಯ. ಡಾ ಆಂಡ್ರ್ಯೂ ನ್ಯೂಮನ್‌ ನರವಿಜ್ಞಾನದಲ್ಲಿ ಅಧ್ಯಯನ ನಡೆಸಿ, ಬಹುಪಾಲು ಜನರು ತಮ್ಮ ಕೆಲವು ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲೆಂದೇ ದೇವರನ್ನು ಅವಲಂಬಿಸುತ್ತಾರೆ ಎಂದು ಹೇಳಿದ್ದಾರೆ.  ಧರ್ಮ ಮತ್ತು ದೇವರು ಮಾನವನ ಡಿಎನ್‌ಎದೊಳಗೆ ಅಂತರ್ಗತವಾಗಿರುವುದರಿಂದ ಬಹುಪಾಲು ಮನುಷ್ಯರಲ್ಲಿ ದೇವರ ಧಾತು ಇರುತ್ತದೆ ಎಂದು ಹೇಳುತ್ತಾರೆ. ಮಾನವನ ಮನಶ್ಶಾಸ್ತ್ರವನ್ನು ಮತ್ತು ನರ ವಿಜ್ಞಾನವನ್ನು ಸರಿಯಾಗಿ ಅರ್ಥಮಾಡಿಕೊಂಡರೆ ನಾವು ಧರ್ಮದ ಅಡಿಪಾಯವನ್ನು ಬಹಿರಂಗಪಡಿಸಲು ಸಾಧ್ಯ.

ಸಿಗ್ಮಂಡ್‌ ಫ್ರಾಯ್ಡ್‌ ಧರ್ಮ ಎಂದರೆ ಒಂದು ನರಶಾಸ್ತ್ರೀಯ ವಿದ್ಯಮಾನ ಎಂದೇ ಪರಿಗಣಿಸಿದ್ದರು ಮತ್ತು ಅದು ಪ್ರಜ್ಞಾಹೀನ ಮನಸ್ಸಿನಲ್ಲಿರುವ ಬಯಕೆ ತೀರಿಸಿಕೊಳ್ಳುವ ಅವಶ್ಯಕತೆ ಎಂದು ಹೇಳಿದ್ದರು. ಫ್ರಾನ್ಸ್-ಅಮೆರಿಕದ ಜ್ಞಾನ ಗ್ರಹಣದ ಸಮಾಜಶಾಸ್ತ್ರಜ್ಞ ಪಾಸ್ಕಲ್‌ ಬೋಯರ್‌ ಫ್ರಾಯ್ಡ್‌ನ ಪ್ರತಿಪಾದನೆಯನ್ನು ತಮ್ಮ  ʻರಿಲಿಜನ್‌ ಎಕ್ಸ್‌ಪ್ಲೈನ್ಡ್‌ ದ ಎವಲ್ಯೂಷನರಿ ಆರಿಜಿನ್ಸ್‌ ಆಫ್‌ ರಿಲಿಜಿಯಸ್‌ ಥಾಟ್‌ (2001)ʼ  ಕೃತಿಯಲ್ಲಿ ಸಮರ್ಥಿಸಿದ್ದಾರೆ. ಧರ್ಮ ಎನ್ನುವುದು ಮನುಕುಲದ ನೈತಿಕ ನೆಲೆ ಮತ್ತು ವಿರಕ್ತವಸತಿ ಎಂಬ ಸಾಮಾನ್ಯ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಅದು ಮನುಕುಲದ ನಾಗರಿಕತೆಯ ಆರಂಭದಿಂದಲೂ ಸಹ ಒಂದು ಬೇನೆಯೇ ಆಗಿದೆ. ಅಂದಿನಿಂದಲೂ ಮಾನವರು ನಂಬಿಕೆಗಳ ದಾಸರಾಗಿದ್ದಾರೆ. ಪೂರ್ವಗ್ರಹಗಳ ಬಂಧಿಯಾಗಿದ್ದಾರೆ. ಜನಸಮೂಹಗಳಿಗೆ ಅರ್ಥವಾಗದೆ ಇರುವುದೆಲ್ಲವೂ ಧಾರ್ಮಿಕ ನಂಬಿಕೆಗಳಾಗಿಬಿಡುತ್ತವೆ ಮತ್ತು ಅತೀತ ವಿದ್ಯಮಾನಗಳಾಗಿಬಿಡುತ್ತವೆ.

ಧರ್ಮ ಎನ್ನುವುದು ನಮ್ಮ ಅರಿವಿಲ್ಲದ ಚರಿತ್ರೆಯ ಪಳೆಯುಳಿಕೆ. ತರ್ಕ ಮತ್ತು ವಿವೇಕದ ಈ ಯುಗದಲ್ಲೂ ಏಕೆ ಅದಕ್ಕೆ ಅಂಟಿಕೊಂಡಿರಬೇಕು ? ಧರ್ಮದ ಉಗಮದೊಂದಿಗೇ ಅದಕ್ಕೆ ಪೂರಕವಾಗಿ ದೇವರು ಎಂಬ ಪರಿಕಲ್ಪನೆಯೂ ಸೃಷ್ಟಿಯಾಗಿತ್ತು ಮತ್ತು ಮಾನವನ ವೈಚಾರಿಕತೆಯನ್ನು ಕೊನೆಗೊಳಿಸಿ ಇಡೀ ಮನುಕುಲವನ್ನು ದಾಸ್ಯಕ್ಕೊಳಪಡಿಸಿತ್ತು. ಮನುಕುಲದ ನಾಗರಿಕತೆಯನ್ನು ಸೋಡಾ ಬಾಟಲಿನಂತೆ ಅಲುಗಾಡಿಸಿರುವ  ಎಲ್ಲ ರೀತಿಯ ಹಿಂಸಾಚಾರ ಮತ್ತು ರಕ್ತಪಾತಗಳ ಹಿಂದೆಯೂ ದೇವರು ಮತ್ತು ಶ್ರದ್ಧೆ ಎಂಬ ಎರಡು ಅಂಶಗಳು ಪ್ರಧಾನವಾಗಿ ಬದಲಾಗದೆ ಉಳಿದುಕೊಂಡಿವೆ. ನಾವು ನೆನಪಿಡಬೇಕಾದ ಅಂಶವೆಂದರೆ ಯಾವುದೇ ತತ್ವಜ್ಞಾನಿಯೂ ಪುರೋಹಿತರ ಹತ್ಯೆ ಮಾಡಿಲ್ಲ ಆದರೆ ಪುರೋಹಿತಶಾಹಿಯು ಅಸಂಖ್ಯಾತ ತತ್ವಜ್ಞಾನಿಗಳ ಹತ್ಯೆ ಮಾಡಿದೆ.

ಧರ್ಮದ ಪರಿಕಲ್ಪನೆಯೇ ಮನುಷ್ಯನ ಆಲೋಚನೆಯನ್ನು ಜಡ್ಡುಗಟ್ಟಿಸಿ ಅವನ ಅರಿವಿನ ಸಾಮರ್ಥ್ಯವನ್ನು ಪಳೆಯುಳಿಕೆಯಾಗಿಸಿಬಿಟ್ಟಿದೆ. ಮನುಷ್ಯನಲ್ಲಿರುವ ವಾಸ್ತವಿಕತೆಯ ಗ್ರಹಿಕೆಯನ್ನು ಸಂಕುಚಿತಗೊಳಿಸಿ ವೈಚಾರಿಕತೆಯನ್ನು ಸೀಮಿತಗೊಳಿಸಿಬಿಟ್ಟಿದೆ. ಹಾಗಾಗಿಯೇ ಭೂಮಿ ಗುಂಡಗಿದೆ ಎಂದು ತಿಳಿದು 2000 ವರ್ಷಗಳ ನಂತರವೂ ಇಂದಿಗೂ ಸಹ ಭೂಮಿ ಚಪ್ಪಟೆಯಾಗಿದೆ ಎಂಬ ನಂಬಿಕೆ ಜೀವಂತವಾಗಿದೆ. ಇದಕ್ಕೆ ಕಾರಣವೇನೆಂದರೆ ನಮ್ಮ ಸಾಮೂಹಿಕ ಪ್ರಜ್ಞೆಯ ಮೇಲೆ ಧರ್ಮದ ಪ್ರಭಾವ ಬಿಗಿಯಾಗುತ್ತಿದೆ. ಇನ್ನೂ ಬಹುಪಾಲು ಆಸ್ತಿಕರು ನಿಷ್ಕಲ್ಮಷ ಕಲ್ಪನೆಯಲ್ಲಿ, ಪುನರುತ್ಥಾನದಲ್ಲಿ ಮತ್ತು ಮರು ಆಗಮನದಲ್ಲಿ (ಸೆಕಂಡ್‌ ಕಮಿಂಗ್)‌ ನಂಬಿಕೆ ಇರಿಸಿದ್ದಾರೆ.

ಗತ ಕಾಲದಲ್ಲಿ ಮತ್ತು ವರ್ತಮಾನದ ಸಂದರ್ಭದಲ್ಲಿ ಮತಧಾರ್ಮಿಕ ದೌರ್ಜನ್ಯಗಳು ನಡೆಯುತ್ತಿರುವುದಕ್ಕೆ ಕಾರಣ ನಾವು ದುಷ್ಟರು ಎಂದಲ್ಲ.  ಬದಲಾಗಿ ನೈಸರ್ಗಿಕವಾಗಿ ಒಪ್ಪಿಕೊಳ್ಳಬೇಕಾದ ಒಂದು ವಾಸ್ತವ ಎಂದರೆ ಮಾನವ ಜೀವಿ ಜೈವಿಕವಾಗಿಯೇ ಭಾಗಶಃ ವೈಚಾರಿಕತೆಯನ್ನು ಹೊಂದಿರುತ್ತಾನೆ. ಮಾನವನ ಮಿದುಳು ಇನ್ನೂ ಪರಿಪಕ್ವವಾಗಿಲ್ಲವಾಗಿರುವುದರಿಂದ ನಮಗೆ ಅನೇಕ ನೈಸರ್ಗಿಕ ವಿದ್ಯಮಾನಗಳಿಗೆ ಉತ್ತರಗಳು ಹೊಳೆಯುವುದಿಲ್ಲ. ಹಾಗಾಗಿಯೇ ಈ ವಿದ್ಯಮಾನಗಳನ್ನು ವ್ಯಾಖ್ಯಾನಿಸಲು, ನ್ಯಾಯಸಮ್ಮತ ಎನಿಸುವ ವಿವರಣೆ ನೀಡಲು ದೇವರು ಮತ್ತು ಧರ್ಮ ಉದಯಿಸಿವೆ. ಮನುಕುಲದ ಎರಡು ಆದಿಕಾಲದ ಭೀತಿಯು ದೇವರು ಮತ್ತು ಧರ್ಮದ ಉದಯಕ್ಕೆ ಕಾರಣವಾದವು. ಮೊದಲನೆಯದು ಅಗೋಚರ ಶಕ್ತಿಯ ಬಗ್ಗೆ ಇರುವ ಭೀತಿ ಮತ್ತು ಎರಡನೆಯದು ಸಾವು ಅಂತ್ಯ ಎನ್ನುವುದರ ನಿರಾಕರಣೆ.

ಈ ಮೂಲಭೂತ ಭೀತಿಗಳೇ ದೇವರು ಮತ್ತು ಧರ್ಮದ ಹುಟ್ಟಿಗೆ ಕಾರಣ. ಪರಿಪಕ್ವವಾಗದ ಮನುಷ್ಯರು ಸರ್ವಶಕ್ತ, ಸರ್ವಾಂತರ್ಯಾಮೀ ದೇವರ ರಕ್ಷಣೆಯಲ್ಲಿರುವ ಧರ್ಮವನ್ನೇ ತಮ್ಮ ಅತ್ಯಂತ ಸುರಕ್ಷಿತ ತಾಣ ಎಂದೇ ಭಾವಿಸುತ್ತಾರೆ. ಗ್ರಹೀತ ಪೀಡನೆಗಳು ಮತ್ತು ದುಷ್ಟತನದಿಂದ ಪಾರುಮಾಡುವ ಈ ರಹಸ್ಯಮಯ ಸುರಕ್ಷತೆಯ ಹಿತಕರವಾದ ಭಾವನೆಯೇ ದೇವರು ಮತ್ತು ಧರ್ಮದಲ್ಲಿ ಮನುಷ್ಯನ ನಂಬಿಕೆಯನ್ನು ಮತ್ತಷ್ಟು ದೃಢಪಡಿಸುತ್ತದೆ. ಆದುದರಿಂದಲೇ, ಸಾಮಾನ್ಯ ಮನುಷ್ಯನು ಧರ್ಮವನ್ನು ಸಾರ್ವತ್ರಿಕ ನರವಿಕೃತಿ ಎಂದಾಗಲೀ, ದೇವರನ್ನು ಗೊಡ್ಡು ಸಂಪ್ರದಾಯದ ಪೂರ್ವಿಕರ ಕಟ್ಟುಕತೆ ಎಂದಾಗಲೀ ಒಪ್ಪಿಕೊಳ್ಳುವುದಿಲ್ಲ. ಮನುಷ್ಯನ ನಿರ್ದಿಷ್ಟ ಧರ್ಮ ಮತ್ತು ಅದು ಬಿಂಬಿಸುವ ದೇವರು ಮಾನವರನ್ನು ಸದಾ ಯುದ್ಧೋದ್ಯುಕ್ತರನ್ನಾಗಿ ಮಾಡುತ್ತದೆ. ನನ್ನ ಹಾದಿಯೇ ಹೆದ್ದಾರಿ ಮತ್ತು ನನ್ನ ದೇವರೇ ಸಕಲರ ಸಂರಕ್ಷಕ ಎಂಬ ಭಾವನೆಯೇ ಜಗತ್ತನ್ನು ರಕ್ತಪಾತದ ಕದನಗಳಿಗೆ ಮತ್ತು ಸಂಘರ್ಷಗಳಿಗೆ ಕಾರಣವಾಗಿದೆ. ದುರಭಿಮಾನ ಮನುಷ್ಯರ ನಡುವೆ ಸ್ವೀಕೃತ ಮನೋಭಾವವೇ ಆಗಿದ್ದು ನಾವೆಲ್ಲರೂ ನಮ್ಮ ಶ್ರದ್ಧೆಗಳಲ್ಲಿ ಮುಳುಗಿ ಅವುಗಳ ಸಂಕೇತಗಳಲ್ಲಿ, ಲಾಂಛನಗಳಲ್ಲಿ ಮುಳುಗಿಹೋಗಿದ್ದೇವೆ.

ಧಾರ್ಮಿಕ ಜಂಜಾಟಗಳಲ್ಲಿ ಮಾನವ ಸಮಾಜದ ಕಂಠಮಟ್ಟಿಗೆ ಮುಳುಗಿರುವವರೆಗೂ, ಕಪೋಲ ಕಲ್ಪಿತ ದೇವರಲ್ಲಿ ಶ್ರದ್ಧೆ ಮತ್ತು ನಂಬಿಕೆಯನ್ನು ಇಟ್ಟಿರುವವರೆಗೂ ಮನುಕುಲವು ಇದೇ ರೀತಿ ಅನುಭವಿಸುತ್ತಿರುತ್ತದೆ ಮತ್ತು ಅವಸಾನ ಹೊಂದುತ್ತಲೇ ಇರುತ್ತದೆ. ಹಾಗಾಗಿ ನಾವು ಈ ಸಾರ್ವತ್ರಿಕ ಪಿಡುಗುಗಳಿಂದ ಹೊರಬಂದು, ಮನುಕುಲದ ಶಾಪದಿಂದ ಆದಷ್ಟು ಬೇಗನೆ ವಿಮೋಚನೆ ಪಡೆಯಬೇಕಿದೆ.

2022ರ ಮೇ 21ರಂದು ಡೆಕ್ಕನ್‌ ಹೆರಾಲ್ಡ್‌ ನಲ್ಲಿ ಪ್ರಕಟವಾದ Do we really need religion and god? ಲೇಖನ

Donate Janashakthi Media

Leave a Reply

Your email address will not be published. Required fields are marked *