ಶೃಂಗೇರಿ ಕ್ಷೇತ್ರ| ಜೆಜೆಎಂನಲ್ಲಿ ಅಕ್ರಮ; ಸಿಬಿಐ ತನಿಖೆಗೆ ಡಿ.ಎನ್‌.ಜೀವರಾಜ್ ಒತ್ತಾಯ

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜಲಜೀವನ್‌ ಮಿಷನ್ ಯೋಜನೆಯಲ್ಲಿ ಅಕ್ರಮ ನಡೆದಿದ್ದು, ಇದರ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಮಾರ್ಷ್‌ 4ರಂದು ಮಾತನಾಡಿದ ಮಾಜಿ ಸಚಿವ ಡಿ.ಎನ್‌.ಜೀವರಾಜ್ ಒತ್ತಾಯಿಸಿದರು.

‘ಈ ಯೋಜನೆಯ ಅಡಿ ಕೇಂದ್ರ ಸರ್ಕಾರ ಶೃಂಗೇರಿ ಕ್ಷೇತ್ರಕ್ಕೆ ₹150 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆದರೆ, ಒಂದೇ ಒಂದು ಮನೆಗೂ ನೀರು ಲಭಿಸಿಲ್ಲ’ ಎಂದು ದೂರಿದರು.

ಜಲಜೀವನ್ ಮಿಷನ್‌ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಮತ್ತು ಸರ್ಕಾರದ ಜತೆ ಆದ ಒಪ್ಪಂದದ ಛಾಪಾ ಕಾಗದಗಳೇ ನಕಲಿ. ಸುಮಾರು 30 ಒಪ್ಪಂದಗಳು ನಕಲಿ ಛಾಪಾ ಕಾಗದದ ಮೇಲೆ ಆಗಿವೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗಿರುವುದು ಮಾತ್ರವಲ್ಲದೆ, ಇದು ಅಪ್ಪಟ ಕ್ರಿಮಿನಲ್‌ ಚಟುವಟಿಕೆ ಎಂದು ಹೇಳಿದರು.

ಇದನ್ನೂ ಓದಿ: ‘KPSC’ ಪರೀಕ್ಷೆಯಲ್ಲಿ ಭಾರಿ ಅಕ್ರಮ: ಒಂದೇ ಕೊಠಡಿಯ 20 ಅಭ್ಯರ್ಥಿಗಳು ಪಾಸ್!

ಇನ್ನೊಂದು ಛಾಪಾ ಕಾಗದ ಸ್ಕ್ಯಾನ್ ಮಾಡಿದರೆ ಅದು ಅಸಲಿ ಅಲ್ಲ ಎಂಬ ಅರ್ಥದ ಮಾಹಿತಿ ಬರುತ್ತಿದೆ. ಇದು ನಕಲಿಯೇ ಅಥವಾ ಅಸಲಿಯೇ ಎಂಬುದು ತಿಳಿದಿಲ್ಲ. ಸ್ಥಳೀಯವಾಗಿ ತನಿಖೆ ನಡೆಸಿದರೆ ಇದನ್ನು ಮುಚ್ಚಿ ಹಾಕುವ ಸಾಧ್ಯತೆ ಇದೆ ಎಂದು ಜೀವರಾಜ್‌ ಹೇಳಿದರು.

‘ಕೊರೆಯಿಸಿದ ಕೊಳವೆಬಾವಿಗಳ ಆಳದ ಕುರಿತು ತಿಳಿಯಲು ಮುಂದಾಗಿದ್ದೆ. ಇದಕ್ಕಾಗಿ ಕ್ಯಾಮರಾ ಒಳಬಿಟ್ಟು ಆಳ ತಿಳಿಯಲು ಸಾಧ್ಯವಿದೆ. ಸ್ವಂತ ಖರ್ಚಿನಲ್ಲಿ 10 ಕೊಳವೆಬಾವಿಗಳನ್ನು ಪರಿಶೀಲಿಸಿದ್ದು, ಕೊಪ್ಪ ತಾಲ್ಲೂಕು ಕಡೇಗದ್ದೆ ತಳಮಕ್ಕಿಯಲ್ಲಿ 228 ಅಡಿ ಆಳವಿರುವ ಕೊಳವೆ ಬಾವಿಗೆ 587 ಅಡಿಗೆ ಬಿಲ್ ಮಾಡಿದ್ದಾರೆ. ಮತ್ತೊಂದು 260 ಅಡಿಯ ಕೊಳವೆ ಬಾವಿಗೆ 587 ಅಡಿಗೆ ಬಿಲ್‌ ಮಾಡಿದ್ದು, ಇವೆಲ್ಲವುಗಳಿಗೂ ಹಣ ಪಾವತಿಸಲಾಗಿದೆ’ ಎಂದು ದೂರಿದರು.

ಬಲಗಾರು ಗ್ರಾಮ ಪಂಚಾಯಿತಿಯಲ್ಲಿ ಕೊಳವೆಬಾವಿ ಕೊರೆದಿಲ್ಲ. ಆದರೆ ₹1.49 ಲಕ್ಷ ಬಿಲ್ ಪಾವತಿ ಆಗಿದೆ. ಅದೇ ರೀತಿ ಗೌರಿಹಳ್ಳದಲ್ಲಿ ಕೊಳವೆಬಾವಿ ಇಲ್ಲ, ₹1.38 ಲಕ್ಷ ಬಿಲ್‌ ಪಾವತಿಸಲಾಗಿದೆ ಎಂದು ಅವರು ಆರೋಪಿಸಿದರು.

Donate Janashakthi Media

Leave a Reply

Your email address will not be published. Required fields are marked *