ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ 2019ರಲ್ಲಿ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಬಂಧನಕ್ಕೆ ಒಳಪಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.
2019ರಲ್ಲಿ ಐಟಿ ಡಿಕೆ ಶಿವಕುಮಾರ್ ಮತ್ತು ಅವರ ಆಪ್ತರ ನಿವಾಸಗಳ ಮೇಲೆ ದಾಳಿ ನಡೆದಿತ್ತು. ದಾಳಿ ವೇಳೆ ಬರೋಬ್ಬರಿ 8 ಕೋಟಿ ರೂ. ಹಣ ಪತ್ತೆಯಾಗಿತ್ತು. ಬಳಿಕ ಈ ಪ್ರಕರಣ ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆಗೊಂಡಿತ್ತು. ಜೊತೆಗೆ ಜಾರಿ ನಿರ್ದೇಶನಾಲಯ ಡಿಕೆಶಿಯನ್ನು ಬಂಧಿಸಿ ವಿಚಾರಣೆ ನಡೆಸಿತ್ತು.
ಜಾರಿ ನಿರ್ದೇಶನಾಲಯ ದಾಳಿ ನಡೆದು ಎರಡೂವರೆ ವರ್ಷದ ನಂತರ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ದೋಷಾರೋಪ ಪಟ್ಟಿಯನ್ನು ಸಲ್ಲಿಕೆ ಮಾಡಿದೆ.
2019ರಲ್ಲಿ ಬಂಧನಕ್ಕೆ ಒಳಗಾಗಿದ್ದ ಡಿ ಕೆ ಶಿವಕುಮಾರ್, 45 ದಿನಗಳ ಕಾಲ ತಿಹಾರ್ ಕೇಂದ್ರ ಕಾರಾಗೃಹದಲ್ಲಿದ್ದರು. ಅವರಿಗೆ ದೆಹಲಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ₹800 ಕೋಟಿಗೂ ಅಧಿಕ ಆಸ್ತಿ ಹೊಂದಿದ್ದು, ಅದಲ್ಲದೆ, 300ಕ್ಕೂ ಅಧಿಕ ಬ್ಯಾಂಕ್ ಖಾತೆ ಹೊಂದುವ ಮೂಲಕ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪ ಡಿ ಕೆ ಶಿವಕುಮಾರ್ ಮೇಲಿದೆ.
ಡಿ.ಕೆ ಶಿವಕುಮಾರ್ ಒಟ್ಟು ₹800 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಮಾಡಿದ್ದಾರೆ. ಕುಟುಂಬ ಸದಸ್ಯರ ಹೆಸರಿನಲ್ಲಿ ₹200 ಕೋಟಿಯಷ್ಟು ಠೇವಣಿ ಹಣ ಪತ್ತೆಯಾಗಿದೆ. 20ಕ್ಕೂ ಅಧಿಕ ಬ್ಯಾಂಕುಗಳಲ್ಲಿ 317 ಖಾತೆಗಳು ಪತ್ತೆ. ಇವುಗಳಿಂದ ಅಕ್ರಮದ ಮೂಲದಿಂದ ಹಣ ವರ್ಗಾವಣೆಯಾಗಿದೆ. ಶಿವಕುಮಾರ್ ಮತ್ತು ಅವರ ಪತ್ನಿ ಉಷಾ ಶಿವಕುಮಾರ್ ಮತ್ತು ತಾಯಿ ಗೌರಮ್ಮ ಅವರ ಬ್ಯಾಂಕ್ ಖಾತೆಗಳಲ್ಲಿ ಆರು ವರ್ಷದಲ್ಲಿ ಸುಮಾರು 180 ಕೋಟಿ ವಹಿವಾಟು ನಡೆದಿದೆ. ಏಳು ವರ್ಷದಲ್ಲಿ ಕೃಷಿಯಿಂದ 120 ಕೋಟಿ ಆದಾಯ ತೋರಿಸಿದ್ದಾರೆ.
ಗೌರಮ್ಮ ಕೃಷಿಯಿಂದ ಒಂದು ಕೋಟಿ ಆದಾಯ ಗಳಿಸಿದ್ದಾರೆ. ಆದರೆ ಅವರ ಖಾತೆಯಲ್ಲಿ ಐವತ್ತು ಕೋಟಿ ಹಣ ಜಮೆಯಾಗಿತ್ತು. ಕೃಷಿಯಿಂದ ಈ ಪ್ರಮಾಣದ ಹಣ ಬರಲು ಸಾಧ್ಯವೇ ಎಂದು ಜಾರಿ ನಿರ್ದೇಶನಾಲಯ ಪ್ರಶ್ನೆ ಮಾಡಿತ್ತು. ಉಷಾ ಶಿವಕುಮಾರ್ ಆರು ವರ್ಷಗಳಲ್ಲಿ ನಾಲ್ಕು ವರ್ಷ ಕೃಷಿ ಮತ್ತು ಎರಡು ವರ್ಷ ಕೃಷಿಯೇತರ ಆದಾಯ ತೋರಿಸಿದ್ದಾರೆ. ಅವರ ಖಾತೆಯಲ್ಲಿ 17 ಕೋಟಿ ವ್ಯವಹಾರ ನಡೆದಿದೆ. ಇದು ಹೇಗೆ ಎನ್ನುವುದು ಅನುಮಾನ ವ್ಯಕ್ತವಾಗಿದೆ.
ಇನ್ನು ಪುತ್ರಿ ಐಶ್ವರ್ಯಾ ಹೆಸರಿನಲ್ಲಿ 102 ಕೋಟಿ ರೂ. ಆಸ್ತಿ ಇದೆ. 23 ವರ್ಷದ ಅವರು, ರಿಯಲ್ ಎಸ್ಟೇಟ್, ಕಲ್ಲು ಗಣಿಗಾರಿಕೆ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಭಾಗಿಯಾಗಲು ಸಾಧ್ಯವೆ? ಚಿಕ್ಕವಯಸ್ಸಿನಲ್ಲಿ ಇಷ್ಟೊಂದು ಹಣ ಸಂಪಾದನೆ, ಆದಾಯ ಗಳಿಸಲು ಹೇಗೆ ಸಾಧ್ಯ ಎಂಬ ಆರೋಪಗಳು ಸಹ ಇವೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಸೋದರ ಡಿಕೆ ಸುರೇಶ್, ಇದು ರಾಜಕೀಯ ಪ್ರೇರಿತ, ಬಿಜೆಪಿಗೆ ಶರಣಾಗುವ ಪ್ರಶ್ನೆಯೇ ಇಲ್ಲ. ಕೋರ್ಟ್ ಮೂಲಕ ಪ್ರತಿ ಪಡೆಯುವಂತೆ ವಕೀಲರಿಗೆ ಸೂಚಿಸುತ್ತೇವೆ ಎಂದರು.