ಹಾವೇರಿ: ರಾಜ್ಯದಲ್ಲಿ 2025-26 ನೇ ಸಾಲಿನ ಖಾಸಗಿ ಶಾಲೆಗಳ ಪ್ರವೇಶವನ್ನು ಪ್ರಾರಂಭಿಸಿ ದಾಖಲಾತಿ ಪ್ರಾರಂಭ ಮಾಡಿವೆ. ಬಹುತೇಕ ಖಾಸಗಿ ಶಾಲೆಗಳಲ್ಲಿ ಡೊನೇಷನ್ ಮನಬಂದಂತೆ ವಸೂಲಿ ಮಾಡಲು ಮುಂದಾಗಿವೆ. ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ಸರ್ಕಾರದ ನಿಯಮ ಮೀರಿ ಹಣ ವಸೂಲಿಗೆ ಮುಂದಾದರೂ ರಾಜ್ಯದಲ್ಲಿನ ಶಿಕ್ಷಣ ಇಲಾಖೆಯ ಆಯುಕ್ತರು, ಅಪರ ಆಯುಕ್ತರು, ವಿವಿಧ ಜಿಲ್ಲೆಯ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸರ್ಕಾರ ತಮಗೆ ಯಾವುದೇ ಸಂಬಂಧವಿಲ್ಲದಂತೆ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಆಕ್ರೋಶ ವ್ಯಕ್ತಪಡಿಸಿದರು. ಡೊನೇಷನ್
ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ ಅವರು 2025-26 ನೇ ಸಾಲಿನಲ್ಲಿ ರಾಜ್ಯಾದ್ಯಂತ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಈಗಾಗಲೇ ಪ್ರವೇಶಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಣ ಪ್ರಾಧಿಕಾರ ಸಭೆ ಸೇರಿ, ಖಾಸಗಿ ಶಾಲೆಗಳ ಡೊನೇಷನ್ ಹಾವಳಿ ಕುರಿತು ಪಾಲಕರಿಗೆ ಮಾಹಿತಿ ನೀಡಬೇಕು. ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವಂತಹ ಸಮಿತಿಯು ಸಭೆ ಸೇರಿ ಖಾಸಗಿ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡದಿರುವ ಕಾರಣ 1983ರ ಶಿಕ್ಷಣ ಕಾಯ್ದೆ ಮತ್ತು 2009ರ ಆರ್.ಟಿ.ಇ ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡುವುದರ ಮೂಲಕ ಹಗಲು ದರೋಡೆ ಮಾಡಲು ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದಾಗುತ್ತಿವೆ.
ಒಂದೆಡೆ ರಾಜ್ಯಾದ್ಯಂತ ಅಣಬೆಗಳಂತೆ ಖಾಸಗಿ ಶಾಲೆಗಳು ತಲೆ ಎತ್ತುತ್ತಿವೆ ಮತ್ತೊಂದೆಡೆ ರಾಜ್ಯದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿವೆ. ಈಗಾಗಲೆ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಹೆಸರಲ್ಲಿ ಡೊನೇಷನ್ ಹಣವನ್ನು ಮನಬಂದತೆ ವಸೂಲಿ ಮಾಡಲು ಮುಂದಾಗಿದ್ದಾರೆ. ಬಡ ಹಿಂದುಳಿದ, ದಲಿತ ಅಲ್ಪಸಂಖ್ಯಾತರ ಮಕ್ಕಳು ಖಾಸಗಿ ಶಾಲೆಗಳಲ್ಲಿ ಡೊನೇಷನ್ ಪಿಡುಗಿನಿಂದ ಶಾಲೆಗಳಲ್ಲಿ ಓದುವುದು ಅಸಾಧ್ಯವಾಗುತ್ತಿದೆ.
ಇದನ್ನೂ ಓದಿ: ಕೈಗಾರೀಕರಣ ಇಲ್ಲದೆ ಯಾರೂ ಬದುಕಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು – ಬಿ.ಆರ್. ಮಂಜುನಾಥ್
ಶಿಕ್ಷಣ ಹಕ್ಕು ಕಾಯ್ದೆ-1983 ಮತ್ತು 2009ರ ಆರ್.ಟಿ.ಇ ಕಾಯ್ದೆ ಜಾರಿಯಾದರೂ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಬಹುತೇಕ ಖಾಸಗಿ ಶಾಲೆಗಳಲ್ಲಿ ಲಕ್ಷಾಂತರ ರೂಪಾಯಿಗಳವರೆಗೂ ಹಣ ವಸೂಲಿ ಮಾಡುವುದರ ಮೂಲಕ ಹಗಲು ದರೋಡೆ ಮಾಡುತ್ತಿದ್ದಾರೆ. ಹಾಗೂ ಆಕ್ರಮವಾಗಿ ಟ್ಯೂಷನ್, ಟ್ಯೂಟರಿಯಲ್ಸ್, ಆನದೀಕೃತವಾಗಿ CSC CBSC ಕೆಲವು ಪ್ರತಿಷ್ಟಿತ ಪಿ.ಯು.ಸಿ ಕಾಲೇಜುಗಳು JEE, NEET, CET ಹೆಸರಿನಲ್ಲಿ ಶಾಲಾ ಕಾಲೇಜುಗಳು ನಡೆಯುತ್ತಿವೆ.
ಸರಕಾರ ನಿಯಮಗಳ ಪ್ರಕಾರ ಸರ್ಕಾರ ನಿಗದಿಪಡಿಸಿದಂತೆ ಅನುದಾನಿತ ಶಿಕ್ಷಣ ಸಂಸ್ಥೆಗಳು ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿ ಶುಲ್ಕ (ಡೆವಲಪ್ ಮೆಂಟ್ ಫೀ) ನ್ನು ಸಂಗ್ರಹಿಸಲು ಅವಕಾಶವಿದೆ. ಈ ಹಣವನ್ನು ಒತ್ತಾಯದ ಮೂಲಕ ಸಂಗ್ರಹಿಸುವಂತಿಲ್ಲ. ಇದಕ್ಕೂ ಹೆಚ್ಚು ಸಂಗ್ರಹಿಸುವುದು ಕಾನೂನಿನ ಪ್ರಕಾರ ಅಪರಾಧ, ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಾರಂಭಿಕ ತರಗತಿಗೆ ಪ್ರವೇಶ ಪರೀಕ್ಷೆಗಳನ್ನು ನಡೆಸಬಾರದು ಎಂದು ಶಿಕ್ಷಣ ಹಕ್ಕು ಕಾಯ್ದೆ 2009 ರ ಸೆಕ್ಷನ್ 13(2)(ಬಿ) ಹೇಳುತ್ತದೆ. ಪ್ರವೇಶ ಪರೀಕ್ಷೆ ನಡೆಸುವ ಶಾಲೆಗಳಿಗೆ 25 ಸಾವಿರ ರೂ ದಂಡ ಹಾಕಬೇಕೆಂದು ಹೇಳಿದೆ.
ವಿದ್ಯಾರ್ಥಿಗಳ ಸಂಖ್ಯೆ, ಕಲಿಕಾ ಮಾಧ್ಯಮ, ಶುಲ್ಕದ ವಿವರ, ಕ್ರೀಡಾಂಗಣ, ಶೌಚಾಲಯ, ಶಿಕ್ಷಕರ ಸಂಖ್ಯೆ, ಮುಂತಾದ ಮಾಹಿತಿಯನ್ನು ಶಾಲಾ ಆವರಣದಲ್ಲಿ 10×16 ಸೈಜಿನಲ್ಲಿ ಫ್ಲೆಕ್ಸ್ ಪ್ರಕಟಿಸಬೇಕೆಂದು ಹಾಗೂ ಇದೇ ಮಾಹಿತಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕೆಂದು ಶಿಕ್ಷಣ ಇಲಾಖೆ ಆದೇಶಿಸಿದೆ. ಆದರೆ, ಇದನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಜಾರಿ ಮಾಡಿಲ್ಲ. ಸರ್ಕಾರದ ಸುತ್ತೋಲೆಯಲ್ಲಿ ಡಿ.ಡಿ.ಪಿ.ಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇದನ್ನು ಪರೀಶಿಲಿಸಬೇಕೆಂದು ಹೇಳಿದ್ದರೂ ಇಲಾಖಾ ಅಧಿಕಾರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಣಿದು ಸರಿಯಾಗಿ ಪರೀಶೀಲನೆ ಮಾಡಿರುವುದಿಲ್ಲ.
ಇದರಿಂದಾಗಿ ಶಾಲೆಗಳಲ್ಲಿ ಪ್ರವೇಶ ಪರೀಕ್ಷೆ ನಡೆಸುವುದರ ಜೊತೆಗೆ ನೋಟ್‌ಬುಕ್, ಶಾಲಾ ಬ್ಯಾಗ್, ಬೂಟು, ಬಟ್ಟೆ, ಜಾಮಿಟ್ರಿ ಬಾಕ್ಸ್ ಕಡ್ಡಾಯವಾಗಿ ಆಯಾ ಶಾಲೆಗಳಲ್ಲಿ ತೆಗೆದುಕೊಳ್ಳಬೇಕೆಂದು ಪಾಲಕರಿಗೆ ಹೇಳಿ ಹೆಚ್ಚಿನ ದರದಲ್ಲಿ ಕೊಟ್ಟು ಶಾಲೆಗಳನ್ನು ಅಂಗಡಿಯಾಗಿ ಮಾರ್ಪಟ್ಟು ಮಾಡಿದ ಶಾಲೆಗಳ ವಿರುದ್ಧ ಮಾನ್ಯತೆಯನ್ನು ರದ್ದು ಮಾಡಿ ಮತ್ತು ಬಹುತೇಕ ಶಾಲೆಗಳು ಇಲಾಖೆಯ ಆದೇಶವನ್ನು ಉಲ್ಲಂಘಿಸಿದ್ದು, ಅಂತಹ ಶಾಲೆಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಅನಧಿಕೃತ ಟ್ಯೂಷನ್ ಸೆಂಟರ್‌ಗಳನ್ನು ಮುಚ್ಚತಕ್ಕದ್ದು ಮತ್ತು ಈ ಕೂಡಲೇ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ ಸಭೆ ಸೇರಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಹಾವೇರಿ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ ಜಿಲ್ಲಾ ಕಾರ್ಯದರ್ಶಿ ದುರಗಪ್ಪ ಯಮ್ಮಿಯವರ ತಿಳಿಸಿದರು.
ಬೇಡಿಕೆಗಳು
1. ಡೊನೆಷನ್ ನಿಯಂತ್ರಣಕ್ಕೆ ‘ಜಿಲ್ಲಾ ಶಿಕ್ಷಣ ರೆಗ್ಯುಲೆಟಿಂಗ ಪ್ರಾಧಿಕಾರ’ ( ಡೊನೇಷನ್ ವಿರೋಧಿ ಸಮಿತಿ) ವನ್ನು ತಕ್ಷಣ ರಚಿಸಬೇಕು. ವಂತಿಗೆ ವಸೂಲಿಮಾಡುತ್ತಿರುವ ಶಿಕ್ಷಣ ಸಂಸ್ಥೆಗಳ ಮೇಲೆ. ಕ್ರಮಕೈಗೊಳ್ಳಬೇಕು.
2. ಜಿಲ್ಲಾ ಮತ್ತು ತಾಲೂಕ ಮಟ್ಟದಲ್ಲಿ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಮತ್ತು ಶಿಕ್ಷಣ ಇಲಾಖೆಯ ಮುಖ್ಯಸ್ಥರು, ಪಾಲಕರು, ವಿದ್ಯಾರ್ಥಿ ಸಂಘಟನೆಯ ಪ್ರತಿನಿಧಿಗಳ ಜಂಟಿ ಸಭೆಯನ್ನು ಕರೆಯಬೇಕು.
3. ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿರುವ ಕೇಂದ್ರೀಯ ಶಾಸನ ಜಾರಿಗೆ ತರಬೇಕು.
4. ಸರ್ಕಾರ ನಿಗದಿಗೊಳಿಸಿರುವ ಪ್ರವೇಶ ಶುಲ್ಕದ ವಿವರವನ್ನು ಮಾಧ್ಯಮಗಳ ಮೂಲಕ ಮತ್ತು ಚಿತ್ತಿ ಪತ್ರ. ಕರಪತ್ರಗಳ ಮೂಲಕ ಪ್ರಚಾರ ಪಡಿಸಬೇಕು.
5. ಶಿಕ್ಷಣ ಸಂಸ್ಥೆಗಳು ಪ್ರತಿ ತಿಂಗಳಿಗೊಮ್ಮೆ ಪಾಲಕರ ಸಭೆ ಕರೆದು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸುವಂತೆ ನಿರ್ದೇಶಿಸಬೇಕು.
6. ಜಿಲ್ಲಾಧಿಕಾರಿಗಳು ಪ್ರಾಧಿಕಾರ ರಚನೆ ಕುರಿತು ಪಾಲಕರು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು. ಶಿಕ್ಷಣ ಇಲಾಖೆಯ ಮುಖ್ಯಸ್ಥರು, ವಿದ್ಯಾರ್ಥಿ ಸಂಘಟನೆಯ ಪ್ರತಿನಿಧಿಗಳ ಜಂಟಿಸಭೆ ಕರೆಯಬೇಕು.
ಇದನ್ನೂ ನೋಡಿ: ಇಂಗ್ಲೀಷ್ ಕಲಿಯೋಣ ಬನ್ನಿ Articles – A, An, The ಎಂದರೇನು ? Janashakthi Media