ಪ್ರತ್ಯೇಕ ಸಭೆ, ವಿವಾದಾತ್ಮಕ ಹೇಳಿಕೆಗಳ ಮೂಲಕ ಮುಖ್ಯಮಂತ್ರಿ ಬದಲಾವಣೆ ಚರ್ಚೆ: ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ತೀವ್ರ ಅಸಮಾಧಾನ

ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಚರ್ಚೆಯನ್ನು ಪ್ರತ್ಯೇಕ ಸಭೆ, ವಿವಾದಾತ್ಮಕ ಹೇಳಿಕೆಗಳ ಮೂಲಕ ಹುಟ್ಟುಹಾಕುತ್ತಿರುವ ಸಚಿವರ ವಿರುದ್ಧ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿವರಾದ ಸತೀಶ ಜಾರಕಿಹೊಳಿ, ಎಚ್‌.ಸಿ. ಮಹದೇವಪ್ಪ, ಜಿ. ಪರಮೆಶ್ವರ್ ಅವರು ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಚಹಾ, ಭೋಜನದ ನೆಪದಲ್ಲಿ ಗೌಪ್ಯವಾಗಿ ಸಭೆ ಸೇರಿ ಚರ್ಚಿಸಿರುವ ವಿಚಾರ ಸಭೆಯಲ್ಲಿ ಪ್ರಸ್ತಾವವಾಗಿದೆ.

ಈ ವೇಳೆ ಮೂವರು ಸಚಿವರೂ, ‘ಜೊತೆಯಾಗಿ ಊಟ ಮಾಡಿರುವುದನ್ನೇ ಮಾಧ್ಯಮಗಳು ಅಪಾರ್ಥ ಕಲ್ಪಿಸಿಕೊಂಡು ಬಿಂಬಿಸಿರುವುದರಿಂದ ಮತ್ತು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಗೊಂದಲಗಳು ಉಂಟಾಗಿವೆ. ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಯಾವ ಸಭೆಯೂ ನಡೆದಿಲ್ಲ. ಯಾವುದೇ ರಾಜಕೀಯ ವಿಚಾರಗಳನ್ನು ಚರ್ಚಿಸಿಲ್ಲ’ ಎಂದು ಸಮಜಾಯಿಷಿ ನೀಡಿದ್ದಾರೆ ಎಂದೂ ಮೂಲಗಳು ತಿಳಿಸಿವೆ.

ಸಭೆಯಲ್ಲಿ ಮಾತನಾಡಿರುವ ಸಿದ್ದರಾಮಯ್ಯ ಅವರು, ಪ್ರಕರಣದಲ್ಲಿ ನನ್ನದೇನೂ ತಪ್ಪಿಲ್ಲ. ಪ್ರತಿಪಕ್ಷಗಳು ನಡೆಸುತ್ತಿರುವ ಷಡ್ಯಂತ್ರ ಎಂಬುದು ಎಲ್ಲರಿಗೂ ಗೊತ್ತಿದೆ. ವರಿಷ್ಠರು ಕೂಡ ಈಗಾಗಲೇ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ. ಪ್ರಸ್ತುತ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಸಚಿವ ಸಂಪುಟವೂ ಇದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತ್ಯೇಕ ಸಭೆ ನಡೆಸಿ ಸಾರ್ವಜನಿಕವಾಗಿ ಅಪಾರ್ಥಕ್ಕೆ ಅವಕಾಶ ಮಾಡಿಕೊಡುವುದು ಸರ್ಕಾರ ಮತ್ತು ಪಕ್ಷದ ಹಿತದೃಷ್ಟಿಯಿಂದ ಸರಿಯಲ್ಲ.

ಸರ್ಕಾರ ರೂ.50 ಸಾವಿರ ಕೋಟಿ ಮೊತ್ತದಲ್ಲಿ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನರಿಗೆ ತಲುಪಿಸುತ್ತಿದೆ. ಆ ಬಗ್ಗೆ ಮಾತನಾಡಬೇಕಾದ ನಾಯಕರು, ಅನಾವಶ್ಯಕ ವಿಷಯಗಳ ಬಗ್ಗೆ ಮಾಧ್ಯಮಗಳ ಜೊತೆ ಮತ್ತು ಬಹಿರಂಗವಾಗಿ ಚರ್ಚೆ ನಡೆಸುತ್ತಿರುವುದು, ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಇದನ್ನು ಓದಿ : ಮೊದಲು ಬಿ ವೈ ವಿಜಯೇಂದ್ರ ರಿಂದ ರಾಜಿನಾಮೆ ಕೊಡಿಸಿ: ಸಚಿವ ಪ್ರಿಯಾಂಕ್ ಖರ್ಗೆ

ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಯನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದ್ದು, ಕೂಡಲೇ ಇಂತಹ ಚಟುವಟಿಕೆಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಹೈಕಮಾಂಡ್ ಯಾವುದೇ ಕಠಿಣ ಕ್ರಮ ಕೈಗೊಂಡರೂ ನಾನು ಹೊಣೆಯಲ್ಲ ಎಂದೂ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

ಇನ್ನು ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್’ಕೆ.ಪಾಟೀಲ್ ಅವರು, ನಾವೆಲ್ಲರೂ ನಿಮ್ಮ ಜೊತೆ ಇದ್ದೇವೆ ಎಂದು ಎಲ್ಲಾ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಗ್ಗಟ್ಟಿನ ಬೆಂಬಲ ವ್ಯಕ್ತಪಡಿಸಿದ್ದಾರೆಂದು ಹೇಳಿದರು.

ರಾಜ್ಯದಲ್ಲಿ ಮುಡಾ ಪ್ರಕರಣ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಮುಖ್ಯಮಂತ್ರಿ ಹುದ್ದೆ ಬದಲಾವಣೆ ಬಗ್ಗೆ ಗುಮಾನಿ ಹುಟ್ಟುವಂತಹ ರಾಜಕೀಯ ಚಟುವಟಿಕೆ ಶುರುವಾಗಿತ್ತು.

ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ ಹಾಗೂ ಡಾ. ಎಚ್ ಎಚ್‌.ಸಿ. ಮಹದೇವಪ್ಪ ಸೇರಿ ತ್ರಿಮೂರ್ತಿ ಸಚಿವರ ಸರಣಿ ಸಭೆಗಳಿಂದ ಸರ್ಕಾರ ಹಾಗೂ ಪಕ್ಷದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಸಿದ್ದರಾಮಯ್ಯ ಅವರ ಆಪ್ತ ಸತೀಶ್ ಇಬ್ಬರು ದಲಿತ ಮುಖಂಡರಾದ ಗೃಹ ಸಚಿವ ಡಾ.ಜಿ.ಪರಮೇಶ್ವರ ಮತ್ತು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರೊಂದಿಗೆ ಬೆಂಗಳೂರು, ತುಮಕೂರು ಮತ್ತು ಮೈಸೂರಿನ್ಲಿ ಮಾತುಕತೆ ನಡೆಸಿದ್ದರು. ಇದು ಸಿದ್ದರಾಮಯ್ಯನವರ ಸಚಿವ ಸಂಪುಟ ಸನ್ನಿಹಿತ ಬದಲಾವಣೆಗೆ ಸಜ್ಜಾಗುತ್ತಿದೆ ಎಂಬ ಸೂಚನೆ ನೀಡಿತ್ತು.

ಸತೀಶ್ ಅವರ ಈ ಭೇಟಿ, ಶಾಸಕರನ್ನು ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಂಡ ಬಳಿಕ ದಲಿತ ಮುಖಂಡರ ಭೇಟಿಯಾಗಿ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆನ್ನಲಾಗಿತ್ತು. ಬಳಿಕ ಚಿಕ್ಕಮಗಳೂರು ಶಾಸಕ ಎಚ್‌ಡಿ ತಮ್ಮಯ್ಯ ಅವರನ್ನೂ ಬುಧವಾರ ಭೇಟಿ ಮಾಡಿರುವುದು, ಚರ್ಚೆಗಳು ಹೆಚ್ಚಾಗುವಂತೆ ಮಾಡಿತ್ತು. ಈ ಎಲ್ಲಾ ಬೆಳವಣಿಗೆ ಬಗ್ಗೆ ಹೈಕಮಾಂಡ್’ಗೆ ಡಿಕೆ.ಶಿವಕುಮಾರ್ ಅವರು ಮಾಹಿತಿ ನೀಡಿದ್ದು, ಇದರ ಬೆನ್ನಲ್ಲೇ ಪಕ್ಷದ ವರಿಷ್ಠರು ಮಧ್ಯಪ್ರವೇಶಿಸಿ, ನಾಯಕರಿದೆ ಕಠಿಣ ಸೂಚನೆ ನೀಡಿದ್ದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೂಚನೆ ಬೆನ್ನಲ್ಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆಸಿ ವೇಣುಗೋಪಾಲ್ ಅವರು ಶಿವಕುಮಾರ್ ಅವರೊಂದಿಗೆ ಮಾತುಕತೆ ನಡಸಿದ್ದರು.

ಸಚಿವರಕ ಸಭೆಗಳು ತಪ್ಪು ಸಂದೇಶ ರವಾನೆಯಾಗುವುದರಿಂದ ಸತೀಶ್ ಸೇರಿದಂತೆ ಯಾವುದೇ ಸಚಿವರು ಪಕ್ಷದ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಬಾರದು ಎಂಬ ಸೂಚನೆ ನೀಡಿದ್ದರು.

ಇದನ್ನು ನೋಡಿ : ಮುಡಾ ಪ್ರಕರಣ | ದ್ವೇಷ ಸಾಧನೆಗೆ ರಾಜಕೀಯ ಕುಟುಂಬದ ಹೆಣ್ಣುಮಕ್ಕಳನ್ನು ಎಳೆದುತರಬೇಡಿ; ಸಿದ್ದರಾಮಯ್ಯ ಪತ್ನಿ ಭಾವುಕ ಪತ್ರ

Donate Janashakthi Media

Leave a Reply

Your email address will not be published. Required fields are marked *