ಭೋಪಾಲ್: ಇಷ್ಟು ದಿನ ತಮ್ಮ ಕುಲದೇವರುಗಳೆಂದು ಪೂಜೆ ಮಾಡುತ್ತಿದ್ದ ಕಲ್ಲಿನ ಚೆಂಡುಗಳು, ಸಾವಿರಾರು ವರ್ಷಗಳ ಹಿಂದೆ ಪಳೆಯುಳಿಕೆಗೊಂಡ ಡೈನೋಸಾರ್ ಮೊಟ್ಟೆಗಳು ಎಂದು ಇದೀಗ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ಧಾರ್ ಜಿಲ್ಲೆಯ ಪಡಲ್ಯಾ ಗ್ರಾಮದ ಜನರು ಕಲ್ಲಿನ ಉಂಡೆಗಳನ್ನು ಕುಲದೇವರುಗಳೆಂದು ಪೂಜೆ ಮಾಡುತ್ತಿದ್ದರು. ಈ ಕಲ್ಲಿನ ಉಂಡೆಗಳು ಉಳುಮೆ ಮಾಡುವಾಗ ಸಾಕಷ್ಟು ವರ್ಷಗಳ ಹಿಂದೆ ಪತ್ತೆಯಾದವು. ಕಾಕಡ ಭೈರವ್ ಅಥವಾ ಭಿಲಾತ್ ಬಾಬಾ ಎಂಬ ಹೆಸರಿನಲ್ಲಿ ಪೂಜೆ ಸಲ್ಲಿಸುತ್ತಿದ್ದರು. ತಮಗಿರುವ ದುರಾದೃಷ್ಟಗಳು, ಸಂಕಷ್ಟಗಳು ಮತ್ತು ತಮ್ಮ ಜಮೀನುಗಳು ಹಾಗೂ ಜಾನುವಾರುಗಳನ್ನು ಕುಲದೇವರುಗಳು ರಕ್ಷಿಸುತ್ತಾ ಬರುತ್ತಿವೆ ಎಂದು ನಂಬಿದ್ದಾರೆ.
ನಿತ್ಯವೂ ಪೂಜೆ ಸಲ್ಲಿಸುವಾಗ ಭಿಲಾತ್ ಬಾಬಾಗೆ ತೆಂಗಿನಕಾಯಿಯನ್ನು ಅರ್ಪಣೆ ಮಾಡುತ್ತಾ ಬರುತ್ತಿದ್ದಾರೆ. ಅಲ್ಲದೆ, ಮಳೆಗಾಲದ ಸಂದರ್ಭದಲ್ಲಿ ಮೇಕೆಗಳನ್ನು ಸಹ ಬಲಿ ನೀಡುತ್ತೇವೆ ಎಂದು ಪಡಲ್ಯಾ ಗ್ರಾಮದ ನಿವಾಸಿಯಾದ ವೆಸ್ತಾ ಮಂಡಲೋಯ್ ತಿಳಿಸಿದ್ದಾರೆ.
ಆದಾಗ್ಯೂ ತಜ್ಞರ ತಂಡವೊಂದು ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿ, ಕಲ್ಲಿನ ಉಂಡೆಗಳನ್ನು ಪರಿಶೀಲಿಸಿದಾಗ ಸಾವಿರಾರು ವರ್ಷಗಳ ಹಿಂದೆ ಭೂಮಿಯ ಮೇಲೆ ಅಳಿದು ಹೋದ ಡೈನೋಸಾರ್ಗಳ ಮೊಟ್ಟೆಗಳೆಂದು ಕಂಡುಕೊಂಡಿದ್ದಾರೆ. 2011 ರಲ್ಲಿ ನಿರ್ಮಿಸಲಾದ ಡೈನೋಸಾರ್ ಪಾರ್ಕ್ ಅನ್ನು ನಾವಿಲ್ಲಿ ಹೊಂದಿದ್ದೇವೆ. ಅನೇಕ ಬಾರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜನರು ಅಂತಹ ಪಳೆಯುಳಿಕೆಗಳನ್ನು ಕಂಡಾಗ ಅವುಗಳನ್ನು ದೇವರುಗಳೆಂದು ಪೂಜಿಸಲು ಪ್ರಾರಂಭಿಸುತ್ತಾರೆ ಎಂದು ವಿಭಾಗೀಯ ಅರಣ್ಯಾಧಿಕಾರಿ (ಡಿಎಫ್ಒ) ಎ.ಎಸ್. ಸೋಲಂಕಿ ತಿಳಿಸಿದರು.
ಅಂದಹಾಗೆ ಮಧ್ಯಪ್ರದೇಶದ ಧಾರ್ ಜಿಲ್ಲೆಯ ಬಾಗ್ ಪ್ರದೇಶದಲ್ಲಿ ಪಳೆಯುಳಿಕೆಗಳ ಸಂಗ್ರಹಣೆ ಮತ್ತು ಸಂರಕ್ಷಣೆಯ ಕೇಂದ್ರವಿದೆ. ಇದು ಡೈನೋಸಾರ್ ಪಳೆಯುಳಿಕೆಗಳ ರಾಷ್ಟ್ರೀಯ ಉದ್ಯಾನವನ ಎಂದೇ ಖ್ಯಾತಿ ಪಡೆದಿದೆ. ಇದು ಹಳೆಯ ಕಾಲದ ಪಳೆಯುಳಿಕೆಗಳನ್ನು ಸಂಗ್ರಹಿಸುತ್ತದೆ. ಈ ಜಿಲ್ಲೆಯಲ್ಲಿ ಇದುವರೆಗೂ ಇಂತಹ 250 ಡೈನೋಸಾರ್ ಮೊಟ್ಟೆಗಳು ಕಂಡುಬಂದಿದ್ದು, ಮಧ್ಯಪ್ರದೇಶದ ನರ್ಮದಾ ಕಣಿವೆಯಲ್ಲಿ ಸಾಕಷ್ಟು ಡೈನೋಸಾರ್ಗಳಿದ್ದವು ಎಂದು ನಂಬಲಾಗಿದೆ.
ಸುಮಾರು 175 ಮಿಲಿಯನ್ ವರ್ಷಗಳ ಹಿಂದೆಯೇ ಡೈನೋಸಾರ್‌ಗಳು ಈ ಭೂಮಿಯಲ್ಲಿ ಜೀವಿಸುತ್ತಿದ್ದವು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಭೂಮಂಡಲದಲ್ಲಿದ್ದ ದೈತ್ಯ ಗಾತ್ರದ ಈ ಜೀವಿಗಳು 65 ಮಿಲಿಯನ್ ವರ್ಷಗಳ ಹಿಂದೆ ಅಳಿದುಹೋದವು ಎಂದು ಹೇಳಲಾಗಿದೆ.