ದಿಲ್ಲಿಯಲ್ಲಿ 9 ವರ್ಷದ ಮಗುವಿನ ಮೇಲೆ ಭೀಕರ ಅಪರಾಧ: ಅಮಿತ್‍ ಷಾ ಏಕೆ ಮೌನವಾಗಿದ್ದಾರೆ?

ದಿಲ್ಲಿಯ ಅತ್ಯಂತ ಸುಭದ್ರ ಕಂಟೋನ್ಮೆಂಟ್‍ ಪಕ್ಕದ ಪುರಾನೀ ನಾಂಗಲ್ ನಲ್ಲಿ ನಡೆದ ಭೀಕರ ಅಪರಾಧಕ್ಕೆ ಬಲಿಯಾದದ್ದು ಒಂದು ಅಶಕ್ತ ದಲಿತ ಮಗು. ಬಹುಶಃ ಆ ಅಪರಾಧ ಅತ್ಯಾಚಾರ ಮತ್ತು ಕೊಲೆಯದ್ದು, ಖಂಡಿತವಾಗಿಯೂ ಬಲವಂತದ ದಹನ ಸಂಸ್ಕಾರದ್ದು, ಸಂತ್ರಸ್ತೆಯ ಪೋಷಕರನ್ನು ಕಾನೂನುಬಾಹಿರವಾಗಿ ಬಂಧಿಸಿಟ್ಟದ್ದು, ಜಾತಿವಾದಿ ಅಭಯಹಸ್ತದ್ದು ಹಾಗೂ ಪೋಲೀಸರ ತಪ್ಪಿನದ್ದು. ಆ ಮಗುವಿನ ಸಾವು ಭಾರತದ ಬಡವರಿಗೆ ಮತ್ತು ವಂಚಿತರಿಗೆ ನಾಗರಿಕತ್ವದ ಹಕ್ಕುಗಳ ನಿರಾಕರಣೆ ಮುಂದುವರೆಯುತ್ತಿರುವ,ಅಥವ ಅದು ಇನ್ನಷ್ಟು ತೀವ್ರಗೊಳ್ಳುತ್ತಿರುವ, ಮತ್ತು ದೇಶದ ರಾಜಧಾನಿಯಲ್ಲೂ ವರ್ಗ ಮತ್ತು ಜಾತಿ-ಆಧಾರಿತ ಹಿಂಸಾಚಾರಕ್ಕೆ ದಾರಿ ಮಾಡಿಕೊಡುತ್ತಿರುವ ಒಂದು ಬಹು ಗಹನ ಪ್ರಶ್ನೆಯನ್ನು ಎತ್ತಿದೆ. ದೆಹಲಿಯಲ್ಲಿ, ಪೊಲೀಸರು ನೇರವಾಗಿ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿದ್ದಾರೆ. ಆದರೆ ಶ್ರೀ ಅಮಿತ್ ಷಾ ಮೌನವಾಗಿದ್ದಾರೆ. ಮಗು ಮತ್ತು ಆಕೆಯ ಪೋಷಕರ ಬಗ್ಗೆ ಒಂದೇ ಒಂದು ಅನುಕಂಪದ ಮಾತಿಲ್ಲ, ಮಗುವಿನ ಬಲವಂತದ ದಹನಕ್ರಿಯೆಯ ಕೃತ್ಯಕ್ಕೆ ಒಂದೇ ಒಂದು ಖಂಡನೆಯಿಲ್ಲ.

ಬೃಂದಾ ಕಾರಟ್
(ಎನ್ ಡಿ ಟಿ ವಿ. ಕಾಂ ನಲ್ಲಿ ಪ್ರಕಟವಾದ ಲೇಖನದ
ಕನ್ನಡ ಅನುವಾದ: ಲವಿತ್ರ)

ವಂದನಾ ಕಟಾರಿಯ, ಪ್ರತಿಭಾಶಾಲಿ ಯುವ ಹಾಕಿ ಆಟಗಾರ್ತಿ, ಭಾರತದ ಹಾಕಿ ತಂಡದ ಭಾಗವಾಗಿ ಭಾರತಕ್ಕಾಗಿ ಒಲಿಂಪಿಕ್ ನಲ್ಲಿ ಹೃದಯಪೂರ್ವಕಾಗಿ ಆಡುತ್ತಿದ್ದಳು. ಅದೇ ಸಂದರ್ಭದಲ್ಲಿ ಹರಿದ್ವಾರದಲ್ಲಿದ್ದ ಅವಳ ಕುಟುಂಬ ಜಾತಿ ನಿಂದನೆಯನ್ನು ಎದುರಿಸುತ್ತಿತ್ತು. ವಂದನಾ ಒಂದು ದಲಿತ ಸಮುದಾಯಕ್ಕೆ ಸೇರಿದವಳು. ತಂಡದಲ್ಲಿ ದಲಿತರನ್ನು ಸೇರಿಸಿಕೊಂಡಿರುವುದರಿಂದಲೇ ಭಾರತ ಸೋತಿದೆ ಎಂದು ಮೇಲ್ಜಾತಿಯ ಪುರುಷರು ದೂಷಿಸುತ್ತಿದ್ದರು. ನಿಜ, ಈಗ ಅವರನ್ನು ಬಂಧಿಸಲಾಗಿದೆ ಮತ್ತು, ಹೌದು, ಹಳ್ಳಿಯ ಇತರರು ಈ ಜಾತಿವಾದಿ ಕೃತ್ಯಗಳನ್ನು ಖಂಡಿಸಿದ್ದಾರೆ. ಆದರೆ ಈ ಅಪರಾಧಿಗಳಿಗೆ ಇದನ್ನು ಹೇಳುವ ಭಂಡತನವಾದರೂ ಹೇಗೆ ಬಂತು? ಒಂದು ಜಾತಿ-ಶ್ರೇಣಿ ವ್ಯವಸ್ಥೆ ಕೊಡಮಾಡಿರುವ ಅರ್ಹತೆಯಿಂದ ಮತ್ತು ಅಭಯದಿಂದ- ಕಾನೂನು ಪ್ರಕಾರ ನಿರ್ಮೂಲವಾಗಿದ್ದರೂ, ಧರ್ಮದ ಹೆಸರಿನಲ್ಲಿ, ಸಂಪ್ರದಾಯದ ಹೆಸರಿನಲ್ಲಿ ಉಳಿದುಕೊಂಡಿರುವ ಒಂದು ವ್ಯವಸ್ಥೆಯಿಂದ. ಈ ಅಭಯ ತಮ್ಮ ಶಕ್ತಿಯನ್ನು ಹೆಚ್ಚಿಸುವ ಸಾಧನವಾಗಿ ಜಾತಿ ಹೆಸರಲ್ಲಿ ಅಪರಾಧ ಎಸಗುವವರನ್ನು ರಕ್ಷಿಸುವ ಒಂದು ರಾಜಕಾರಣದಿಂದಲೂ ಸಿಗುತ್ತದೆ. ರಾಜಧಾನಿಯ ಹೃದಯಭಾಗದಲ್ಲಿ ಒಂದು ದಲಿತ ಮಗುವಿನ ಮೇಲೆ ಎಸಗಿದ ಅಪರಾಧಕ್ಕೆ ಭಾರತವನ್ನು ಇಂದು ಆಳುತ್ತಿರುವವರಿಂದ ಒಂದಾದರೂ ಅನುಕಂಪದ ಮಾತು ಬರದೇ ಹೋಗಿರುವುದು ಕೂಡ ಇದರಿಂದಾಗಿಯೇ,

ಜಾತಿವಾದ: ಭಾರತದ ಅತ್ಯಂತ ಹೀನ ಬಹಿರಂಗ ಗುಟ್ಟು (ವ್ಯಂಗ್ಯಚಿತ್ರ: ಸಜಿತ್‍ ಕುಮಾರ್, ಡೆಕ್ಕನ್ ಹೆರಾಲ್ಡ್)

ಅವಳು ಕೇವಲ 9 ವರ್ಷದ ಹುಡುಗಿ. ಅವಳ ತಾಯಿ ಹೇಳುತ್ತಾಳೆ, ಒಂದು ಮಗುವನ್ನು ಪಡೆಯುತ್ತೇನೆ ಎಂಬ ಭರವಸೆಯನ್ನೇ ತ್ಯಜಿಸಿದ ಎಷ್ಟೋ ಸಮಯದ ನಂತರ ಅನಿರೀಕ್ಷಿತವಾಗಿ ಕೊಡುಗೆಯಾಗಿ ಜನಿಸಿದ ಏಕೈಕ ಮಗು ಅವಳು. ಅದರಿಂದಾಗಿ ಇನ್ನಷ್ಟು ಅಮೂಲ್ಯ ಮತ್ತು ಇನ್ನಷ್ಟು ಪ್ರಿಯ. ಅವರ ಈ ದುಃಖದ ಸಂದರ್ಭದಲ್ಲಿ ನಮ್ಮ ಬೆಂಬಲವನ್ನು ಸೂಚಿಸಲು, ನಮ್ಮ ಸೌಹಾರ್ದವನ್ನು ವ್ಯಕ್ತಪಡಿಸಲು ನಾನು ಮತ್ತು ನನ್ನ ಸಂಗಾತಿಗಳು ಭೇಟಿಯಾಗಲು ಹೋಗಿದ್ದೆವು. ನಮ್ಮ ಸುತ್ತಮುತ್ತ ಹತ್ತಾರು ಮಂದಿ ಇದ್ದರು, ಅವರ ಬಗ್ಗೆ ಕಾಳಜಿ ಇರುವ ನಾಗರಿಕರು, ಮುಖ್ಯವಾಗಿ ಆ ಮಗು ವಾಸಿಸುತ್ತಿದ್ದ ಕಾಲೋನಿಯವರು, ಮತ್ತು ಅವರನ್ನು ಬೆಂಬಲಿಸಿ ನಗರದ ವಿವಿಧ ಭಾಗಗಳಿಂದ ಬಂದಿದ್ದವರು, ಈ ಅನಾಗರಿಕ ಅಪರಾಧದ ವಿರುದ್ಧ ಹೋರಾಟ ಮಾಡಲು ಬೀದಿಗಿಳಿದಿದ್ದವರು. ಅವರಿಲ್ಲದಿದ್ದರೆ, ಅವರು ಸಾಮೂಹಿಕವಾಗಿ ದನಿಯೆತ್ತಿರದಿದ್ದರೆ ಈ ಅಪರಾಧವನ್ನು ಶಾಶ್ವತವಾಗಿ ಸಮಾಧಿ ಮಾಡಲಾಗುತ್ತಿತ್ತು.

ಬಹುಶಃ ಆ ಅಪರಾಧ ಅತ್ಯಾಚಾರ ಮತ್ತು ಕೊಲೆಯದ್ದು, ಆದರೆ ಖಂಡಿತವಾಗಿಯೂ ಬಲವಂತದ ದಹನ ಸಂಸ್ಕಾರದ್ದು, ಸಂತ್ರಸ್ತೆಯ ಪೋಷಕರನ್ನು ಕಾನೂನುಬಾಹಿರವಾಗಿ ಬಂಧಿಸಿಟ್ಟದ್ದು, ಜಾತಿವಾದಿ ಅಭಯದ್ದು ಹಾಗೂ ಪೋಲೀಸರ ತಪ್ಪಿನದ್ದು
ಬಲಿಯಾದದ್ದು ಒಂದು ಅಶಕ್ತ ದಲಿತ ಮಗು. ಆಕೆಯ ಸಾವು ಭಾರತದ ಬಡವರಿಗೆ ಮತ್ತು ವಂಚಿತರಿಗೆ ನಾಗರಿಕತ್ವದ ಹಕ್ಕುಗಳ ನಿರಾಕರಣೆ ಮುಂದುವರೆಯುತ್ತಿರುವ,ಅಥವ ಇನ್ನಷ್ಟು ತೀವ್ರಗೊಳ್ಳುತ್ತಿರುವ, ಅದು ದೇಶದ ರಾಜಧಾನಿಯಲ್ಲೂ ಅವರ ವಿರುದ್ಧ ವರ್ಗ ಮತ್ತು ಜಾತಿ-ಆಧಾರಿತ ಹಿಂಸಾಚಾರಕ್ಕೆ ದಾರಿ ಮಾಡಿಕೊಡುತ್ತಿರುವ ಒಂದು ಬಹು ಗಹನ ಪ್ರಶ್ನೆಯನ್ನು ಎತ್ತಿದೆ.

ಆ ಭಾನುವಾರ, ಆಗಸ್ಟ್ ಒಂದರಂದು ತಾಯಿ ಮತ್ತು ಮಗಳು ಎಂದಿನಂತೆ “ಸೈಯದ್ ಜಲಾಲುದ್ದೀನ್ ಸಾಹಿಬ್” ಮಸೀದಿ ಬಳಿ ಭಿಕ್ಷೆಗಾಗಿ ಕುಳಿತಿದ್ದರು. ಈ ಸ್ಥಳವು ಅವರಿಗೆ ಆಶ್ರಯವಾಗಿತ್ತು. ಅಲ್ಲಿನ ಸ್ಥಳವನ್ನು ಸ್ವಚ್ಛಗೊಳಿಸುತ್ತಿದ್ದರು, ಸ್ವಲ್ಪ ಹಣವನ್ನೂ ಸಂಪಾದಿಸುತ್ತಿದ್ದರು, ಅಲ್ಲಿ ಅವರು ತಮ್ಮ ಅನೇಕ ದಿನಗಳನ್ನು ಕಳೆದಿದ್ದಾರೆ ಎಂದು ಆ ತಾಯಿ ಹೇಳುತ್ತಾಳೆ. ಚಿಂದಿ ಆಯುವುದರಿಂದ ಜೀವನ ಸಾಗಿಸುತ್ತಿರುವ ಮಗುವಿನ ತಂದೆ ಹಗಲಿನಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ಮಾರಾಟಮಾಡಲು ಪಕ್ಕದ ಮಾರುಕಟ್ಟೆಯಲ್ಲಿದ್ದ. ಈ ಕುಟುಂಬವು ವಾಲ್ಮೀಕಿ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ್ದು ಹಲವು ವರ್ಷಗಳಿಂದ ಕಾಲನಿಯಲ್ಲಿ ಶೋಚನೀಯ ಸ್ಥಿತಿಯಲ್ಲಿ ವಾಸಿಸುತ್ತಿದೆ. ಮಗುವಿಗೆ ಶಾಲೆಗೆ ಹೋಗುವ ಅವಕಾಶವೇ ದೊರೆಯಲಿಲ್ಲ. ” ನಾವು ಈಗ ಸ್ವಲ್ಪ ಮಟ್ಟಿಗೆ ನೆಲೆಯಾಗಿದ್ದೇವೆ, ಶಾಲೆಗಳು ತೆರೆದ ನಂತರ ನನ್ನ ಮಗಳನ್ನು ಶಾಲೆಗೆ ಸೇರಿಸುತ್ತೇನೆ ಎಂದುಕೊಂಡಿದ್ದೆ” ಎನ್ನುತ್ತಾಳೆ ಅವಳ ತಾಯಿ.

ಸಂಜೆ ಸುಮಾರು ಐದು ಗಂಟೆ, ಮಗು ಹತ್ತಿರದ ಸ್ಮಶಾನದ ದೊಡ್ಡ ವಾಟರ್ ಕೂಲರ್ ನಿಂದ ನೀರು ತರಲು ಹೋಗಿದ್ದಳು. ಅಂತ್ಯಕ್ರಿಯೆಗಳ ಉಸ್ತುವಾರಿ ನೋಡಿಕೊಳ್ಳುವ ಪೂಜಾರಿಯು ಕುಟುಂಬಕ್ಕೆ ಪರಿಚಯದವನಾಗಿದ್ದ. ದೆಹಲಿಯ ವಿವಿಧ ಭಾಗಗಳಲ್ಲಿ ಸಾಮಾನ್ಯವಾಗಿರುವಂತೆ ದಾರಿಹೋಕರ ಬಾಯಾರಿಕೆಯನ್ನು ನೀಗಿಸಲು ರಸ್ತೆಯಲ್ಲಿ ಇರಿಸಲಾದ ಕೂಲರ್ ಗೆ ವಿದ್ಯುತ್ ಸಂಪರ್ಕವನ್ನೂ ಸಹ ಏರ್ಪಡಿಸಲಾಗಿದ್ದ ಕಾಲವೊಂದಿತ್ತು ಎಂದು ಪ್ರದೇಶದ ಹಿರಿಯರು ಹೇಳುತ್ತಾರೆ. ಅದನ್ನು ಸ್ಮಶಾನಕ್ಕೆ ಏಕೆ ಮತ್ತು ಯಾವಾಗ ಸ್ಥಳಾಂತರಿಸಲಾಯಿತು ಎಂದು ಯಾರಿಗೂ ಗೊತ್ತಿಲ್ಲ. ಇದೊಂದು ಸಣ್ಣ ವಿಷಯ ನಿಜ, ಆದರೆ ಇದು ಮಗುವಿನ ಬದುಕು ಮತ್ತು ಸಾವಿನ ನಡುವಿನ ಅಂತರವಾಗಿ ಬಿಟ್ಟಿತು.

ಅವತ್ತು ಅದಾಗಲೇ ಅವಳು ಒಂದು ಬಾರಿ ನೀರಿನ ಬಾಟಲಿಯನ್ನು ತುಂಬಿಸಿಕೊಂಡು ಬಂದಿದ್ದಳು. ಹಾಗಾಗಿ ತಾಯಿಗೆ ಯಾವುದೇ ಆತಂಕವಿರಲಿಲ್ಲ. ಆದರೆ ಸ್ವಲ್ಪ ಸಮಯದ ನಂತರ, ಪೂಜಾರಿಯು ನಿನ್ನ ಮಗಳು ಅಸ್ವಸ್ಥಳಾಗಿದ್ದಾಳೆ, ಸ್ಮಶಾನಕ್ಕೆ ಬಾ ಎಂದ.. ಯಾವುದೇ ಸಂದೇಹ ಪಡದೆ ತಾಯಿ ಒಬ್ಬಳೇ ಅಲ್ಲಿಗೆ ಹೋದಳು. ಪೂಜಾರಿ ನಿರ್ಜೀವ ಮಗುವಿನ ದೇಹವನ್ನು ತೋರಿಸಿದ, “ವಿದ್ಯುತ್ ಹರಿದಿದೆ” ಎಂದ – ಎನ್ನುತ್ತಾಳೆ ತಾಯಿ. ಅಲ್ಲಿ ನಾಲ್ಕು ಜನ ಗಂಡಸರಿದ್ದರು. ಅವರು ಯಾರನ್ನಾದರೂ ಕರೆಯಲು ಅವಳನ್ನು ಬಿಡಲಿಲ್ಲ. ಅವಳು ಸಂಪೂರ್ಣ ಆಘಾತದಲ್ಲಿದ್ದಳು. ಅವರು ಎಲ್ಲ ವ್ಯವಸ್ಥೆಗಳನ್ನು ಮಾಡುವುದಾಗಿ ಹೇಳಿದರು ಮತ್ತು ಆಕೆಯ ಹೆಬ್ಬೆಟ್ಟು ಗುರುತನ್ನು ಒಂದು ಕಾಗದದ ಮೇಲೆ ತಗೊಂಡರು. ಮಗುವಿನ ತಂದೆಗೂ ಅದೇ ಸಂದೇಶವನ್ನು ಕಳುಹಿಸಲಾಗಿತ್ತು. ತಂದೆ ಅಲ್ಲಿಗೆ ತಲುಪಿ ಸ್ಮಶಾನದ ಒಳಗೆ ಹೋದನಂತರ ಗೇಟುಗಳನ್ನು ಮುಚ್ಚಲಾಯಿತು ಎನ್ನುತ್ತಾನೆ ಆತ. ಕೆಲವೇ ನಿಮಿಷಗಳಲ್ಲಿ, ಮಗುವಿನ ದೇಹವನ್ನು ಮರದ ದಿಮ್ಮಿಗಳ ಮೇಲೆ ಇಡಲಾಯಿತು ಮತ್ತು ಚಿತೆಗೆ ಅಗ್ನಿಯನ್ನು ಹಚ್ಚಲಾಯಿತು. ಮಗುವಿನ ದೇಹವು ಸುಮಾರಾಗಿ ಸಂಪೂರ್ಣವಾಗಿ ಸುಟ್ಟು ಹೋದ ನಂತರವೇ ಪೋಷಕರನ್ನು ಅಲ್ಲಿಂದ ಹೋಗಲು ಅನುಮತಿ ನೀಡಿದರು.

ದುಃಖದಲ್ಲಿದ್ದ ಪೋಷಕರಿಂದ ನಡೆದ ಸಂಗತಿ ತಿಳಿದ ಕಾಲೋನಿಯ ನಿವಾಸಿಗಳು ಸ್ಮಶಾನಕ್ಕೆ ಧಾವಿಸಿ ಉರಿಯುತ್ತಿದ್ದ ಚಿತೆಯಿಂದ ಮಗುವಿನ ಉಳಿದ ದೇಹವನ್ನು ಹೊರಗೆಳೆದರು. ಪೊಲೀಸರು ಬಂದರು, ಎಚ್ಚರದಿಂದಿದ್ದ ನಾಗರಿಕರ ಕೈಗೆ ಸಿಕ್ಕಿಬಿದ್ದ ವ್ಯಕ್ತಿಗಳನ್ನು ಬಂಧಿಸಿದರು. ಆದರೆ ಪೊಲೀಸರು ಪೋಷಕರೊಂದಿಗೆ ಅವರೇ ಅಪರಾಧಿಗಳೆಂಬಂತೆ ವರ್ತಿಸಿದರು. ಅಲ್ಲಿ ಹಾಜರಿದ್ದ ಜನರ ಪ್ರಕಾರ, ಆ ಪ್ರದೇಶದ ಕುಖ್ಯಾತ ಪೊಲೀಸ್ ಮಾಹಿತಿದಾರನೊಬ್ಬ ಪೊಲೀಸರ ಸಮ್ಮುಖದಲ್ಲಿಯೇ, ಮಗುವಿನ ತಂದೆಯನ್ನು ತಳ್ಳಾಡಿದ, ಸುಳ್ಳು ಆರೋಪ ಮಾಡುತ್ತಿದ್ದಾನೆ ಎಂದು ಆರೋಪಿಸಿ ನಿಂದನೆಯ ಭಾಷೆಯನ್ನು ಬಳಸುತ್ತ ಕಪಾಳಕ್ಕೆ ಹೊಡೆದ. ಪೊಲೀಸರಿಗೆ ದೂರು ನೀಡದಂತೆ ಕುಟುಂಬದ ಮೇಲೆ ಒತ್ತಡ ಹೇರಲಾಯಿತು. ಇದೇ ಕಾರಣದಿಂದ ಪೊಲೀಸರು ದುಃಖತಪ್ತ ಪೋಷಕರನ್ನು ಮರುದಿನ ಸಂಜೆಯವರೆಗೂ ಬಂಧಿಸಿಟ್ಟಿದ್ದರು. ಬೇರೆ ರೀತಿಯಲ್ಲಿ ಹೇಳುವುದಾದರೆ, ತಮ್ಮ ಏಕೈಕ ಮಗಳ ಸಾವಿಗೆ ಅಳುವ ಹಕ್ಕನ್ನೂ ಸಹ ಕಿತ್ತುಕೊಳ್ಳಲಾಯಿತು. ನಿವಾಸಿಗಳು ನಡೆಸಿದ ಪ್ರತಿಭಟನೆ ಮತ್ತು ಮಾಧ್ಯಮದ ಆಗಮನದಿಂದಾಗಿ ಅಂತಿಮವಾಗಿ ಅವರನ್ನು ಬಿಡುಗಡೆ ಮಾಡಲಾಯಿತು. ಆದರೆ ಇದುವರೆಗೂ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ರಕ್ಷಣಾ ಇಲಾಖೆಯ ಸಿಬ್ಬಂದಿ ವಾಸವಾಗಿರುವ ಅತ್ಯಂತ ಸುಭದ್ರ ವಾಗಿರುವ ದೆಹಲಿ ಕಂಟೋನ್ಮೆಂಟ್ ನ ಪಕ್ಕದಲ್ಲೇ ಇರುವ ಹಳ್ಳಿಯಂತಹ ಕಾಲೋನಿ ಅದು. ಈ ಎರಡು ಪ್ರಪಂಚಗಳು, ಭೌಗೋಳಿಕವಾಗಿ ಕೇವಲ ಒಂದು ಕಿಲೋಮೀಟರ್ ಅಂತರದಲ್ಲಿವೆ, ಆದರೆ ನಿಜಜೀವನದಲ್ಲಿ ಬಡತನ ಮತ್ತು ಜಾತಿಯಿಂದ ಸೃಷ್ಟಿಯಾದ ದೂರದಿಂದ ಬೇರ್ಪಟ್ಟಿವೆ. ಇದು ಆ ಮಗು ವಾಸವಿದ್ದ ವಾಸ್ತವಿಕ ಜಗತ್ತು. ಭಾರತ, ಅದರಲ್ಲಿಯೂ ನಿರ್ದಿಷ್ಟವಾಗಿ ದೆಹಲಿಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಹೀನಾಯ ಕೃತ್ಯಗಳನ್ನು ಮಾಡುತ್ತಿರುವ ಅಪರಾಧಿಗಳು ಸಮಾಜದ ಪ್ರತಿಯೊಂದು ಸಾಮಾಜಿಕ ಗುಂಪುಗಳಲ್ಲಿ ಮತ್ತು ಸಮುದಾಯಗಳಲ್ಲಿ ಇದ್ದಾರೆ. ಆದರೆ ಒಂದು ಬಡ-ದಲಿತ ಕುಟುಂಬದಿಂದ ಬಂದಂತಹ ಮಗುವಿಗೆ ಎಲ್ಲಕ್ಕಿಂತ ಹೆಚ್ಚು ಕುತ್ತು.

ಇತ್ತೀಚಿಗೆ, ಪರಿಶಿಷ್ಟ ಜಾತಿ/ಬುಡಕಟ್ಟುಗಳ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಅಪರಾಧಗಳ ಕುರಿತು ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ದಲಿತ ಮಹಿಳೆಯರ ಮತ್ತು ಮಕ್ಕಳ ಮೇಲಿನ ಅಪರಾಧಗಳಲ್ಲಿ ಶೇಕಡ 15.5 ರಷ್ಟು (2017-2019) ಹೆಚ್ಚಳವಾಗಿದೆ ಎಂದು ವರದಿಯು ಹೇಳುತ್ತದೆ. ಸಮಿತಿಯ ವರದಿಯು ಎನ್‌.ಸಿ.ಆರ್‌.ಬಿ. ದತ್ತಾಂಶವನ್ನು ಉಲ್ಲೇಖಿಸಿದ್ದು, ಅದರ ಪ್ರಕಾರ ಪರಿಶಿಷ್ಟ ಜಾತಿ/ಬುಡಕಟ್ಟುಗಳ ಹುಡುಗಿಯರು ಮತ್ತು ಮಹಿಳೆಯರ ಮೇಲಿನ ಎಲ್ಲಾ ರೀತಿಯ ದೌರ್ಜನ್ಯ ಪ್ರಕರಣಗಳಲ್ಲಿ, ವಿಶೇಷ ನ್ಯಾಯಾಲಯಗಳಲ್ಲಿ ಬಾಕಿ ಇರುವ ದಲಿತ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ಪ್ರಕರಣಗಳ ದರವು ಅಧಿಕವಾಗಿದೆ. ಅತ್ಯಾಚಾರದ ಪ್ರಕರಣಗಳನ್ನು ನೋಡಿದರೆ ಇದು ಶೇಕಡಾ 88.9 ರಷ್ಟಿದೆ. ಸ್ಥಾಯಿ ಸಮಿತಿಯ ಪ್ರಕಾರ, ಪರಿಶಿಷ್ಟ ಜಾತಿ/ಬುಡಕಟ್ಟುಗಳ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳಲ್ಲಿ ಈ ದೊಡ್ಡ ಹೆಚ್ಚಳವು “ಅಸ್ತಿತ್ವದಲ್ಲಿರುವ ಕಾನೂನುಗಳ ಕಳಪೆ ಅನುಷ್ಠಾನ ಮತ್ತು ಕಾನೂನು ಜಾರಿ ಸಂಸ್ಥೆಗಳ ನಿರಾಸಕ್ತಿಯ ವರ್ತನೆಯಿಂದಾಗಿ … ಮೇಲಾಗಿ, ಖುಲಾಸೆಯ ಹೆಚ್ಚಿನ ದರವು ಇಂತಹ ಅಪರಾಧಗಳನ್ನು ಎಸಗುತ್ತಲೇ ಇರಲು ಪ್ರಬಲ ಮತ್ತು ಬಲಿಷ್ಟ ಸಮುದಾಯಗಳಿಗೆ ಪ್ರೇರೇಪಣೆ ನೀಡುತ್ತದೆ ಮತ್ತು ಅವರ ವಿಶ್ವಾಸವನ್ನು ಉತ್ತೇಜಿಸುತ್ತದೆ ” ಎಂದು ವರದಿ ಹೇಳುತ್ತದೆ.

ಈ ನಿರ್ದಿಷ್ಟ ಪ್ರಕರಣದಲ್ಲಿ, ಪರಿಶಿಷ್ಟ ಜಾತಿ/ಬುಡಕಟ್ಟುಗಳ ಕಾಯ್ದೆಯಡಿ ಅಥವಾ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ತಡೆ ಕಾಯ್ದೆಯಡಿ ಆರೋಪಗಳನ್ನು ದಾಖಲಿಸಲು ಪೊಲೀಸರು ನಿರಾಕರಿಸಿದ್ದಾರೆ ಎಂದು ನಮಗೆ ತಿಳಿಸಲಾಯಿತು. ಇಷ್ಟಲ್ಲದೇ ಕುಟುಂಬಕ್ಕೆ ಎಫ್.ಐ.ಆರ್. ಪ್ರತಿಯನ್ನು ನೀಡಲೂ ಸಹ ನಿರಾಕರಿಸಿದರು. ಮಗುವಿನ ದೇಹದ ಅವಶೇಷಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆದರೆ ಅವಶೇಷಗಳ ಸ್ಥಿತಿಯನ್ನು ನೋಡಿದರೆ, ಫಲಿತಾಂಶ ಏನಿರಬಹುದೆಂದು ಊಹಿಸಬಹುದಾಗಿದೆ. ಅತ್ಯಾಚಾರದ ಆರೋಪವನ್ನು ಸ್ಪಷ್ಟವಾಗಿ ಸಾಬೀತುಪಡಿಸಲು ಸಾಧ್ಯವಿಲ್ಲ. ಶಂಕಿತರನ್ನು ವಿಚಾರಣೆಗೆ ಒಳಪಡಿಸುವ ಮೂಲಕ ಸತ್ಯವನ್ನು ಕಂಡುಹಿಡಿಯಲು ಪೊಲೀಸರು ಬದ್ಧರಾಗಿರದ ಹೊರತು, ನ್ಯಾಯ ಸಿಗುವುದಿಲ್ಲ. ಈಗಾಗಲೇ ಪೊಲೀಸರು ಆರೋಪಿಯ ಪರವಾಗಿ ಸಾರ್ವಜನಿಕ ಹೇಳಿಕೆಗಳನ್ನು ನೀಡಿದ್ದಾರೆ.

ಇದು ಹಾಥ್ರಸ್ ಪ್ರಕರಣದ ಮರು-ಪ್ರದರ್ಶನದಂತಿದೆ. ಹಾಥ್ರಸ್ ನಲ್ಲಿ ಆಡಳಿತವು ಬಹಿರಂಗವಾಗಿಯೇ ಮೇಲ್ಜಾತಿಯ ಆರೋಪಿಗಳ ರಕ್ಷಣೆಗೆ ನಿಂತಿತ್ತು ಎಂಬುದು ತಿಳಿದ ಸಂಗತಿ. ಪರಸ್ಪರ ಸಮ್ಮತಿಯ ಸಂಬಂಧಗಳಿದ್ದವು, “ಮರ್ಯಾದಾ ಹತ್ಯೆ” ಮುಂತಾದ ಅತ್ಯಂತ 19 ವರ್ಷದ ಹುಡುಗಿ ಮತ್ತು ಆಕೆಯ ಕುಟುಂಬಕ್ಕೆ ಕಳಂಕ ಹಚ್ಚುವ ಆಕ್ಷೇಪಾರ್ಹ ಕಥೆಗಳನ್ನು ಹರಿ ಬಿಡಲಾಯಿತು. ಹಾಥ್ರಸ್ ನಲ್ಲಿಯೂ, ಹೆಣವನ್ನು ಬಲವಂತವಾಗಿ ಸುಡಲಾಯಿತು ಮತ್ತು ಕುಟುಂಬವು ಒಂದು “ರಾಜಿ” ಗೆ ಬರಲು ಭಾರೀ ಒತ್ತಡವನ್ನು ಹೇರಲಾಯಿತು. ಹೈಕೋರ್ಟ್‌ನ ಮಧ್ಯಪ್ರವೇಶ ಮಾತ್ರವೇ ಸ್ವಲ್ಪ ಸಮಾಧಾನ ತಂದಿದೆ. ದೆಹಲಿಯ ಭೀಕರ ಅಪರಾಧದ ಸಂದರ್ಭ ಮತ್ತು ಸನ್ನಿವೇಶಗಳು ಭಿನ್ನವಾಗಿವೆ. ಆದರೆ ಎರಡರಲ್ಲಿಯೂ ಇರುವ ಸಮಾನ ಅಂಶ ಎಂದರೆ ಅಪರಾಧಿಗಳ ಪರವಾಗಿ ಮತ್ತು ಸಂತ್ರಸ್ತೆಯ ಮತ್ತು ಆಕೆಯ ಕುಟುಂಬದ ಘನತೆ ಮತ್ತು ಹಕ್ಕುಗಳನ್ನು ನಿರ್ಮೂಲನೆ ಮಾಡಲು ಪೊಲೀಸರು ದಂಡನೆಯ ಭಯವಿಲ್ಲದೆ ಎಷ್ಡೊಂದು ನಿರ್ಭೀತಿಯಿಂದ ವರ್ತಿಸುತ್ತಿದ್ದಾರೆ ಎಂಬುದು.

ಇಲ್ಲಿ ದೆಹಲಿಯಲ್ಲಿ, ಪೊಲೀಸರು ನೇರವಾಗಿ ಗೃಹ ಸಚಿವಾಲಯದ ಅಡಿಯಲ್ಲಿದ್ದಾರೆ. ಅದೇಕೆ ಶ್ರೀ ಅಮಿತ್ ಷಾ ಮೌನವಾಗಿದ್ದಾರೆ? ಮಗು ಮತ್ತು ಆಕೆಯ ಪೋಷಕರ ಬಗ್ಗೆ ಒಂದೇ ಒಂದು ಅನುಕಂಪದ ಮಾತನ್ನು ನಾವು ಕೇಳಿದ್ದೇವೆಯೇ? ಮಗುವಿನ ಬಲವಂತದ ದಹನಕ್ರಿಯೆಯನ್ನು ಖಂಡಿಸುವ ಒಂದೇ ಒಂದು ಮಾತನ್ನು ನಾವು ಕೇಳಿದ್ದೇವೆಯೇ? ಸಂತ್ರಸ್ತ ಕುಟುಂಬಕ್ಕೆ ಕಿರುಕುಳ ನೀಡಿದ ಮತ್ತು ಕಾನೂನುಬಾಹಿರವಾಗಿ ಬಂಧನದಲ್ಲಿಟ್ಟ ಪೊಲೀಸ್ ಸಿಬ್ಬಂದಿ ವಿರುದ್ಧ ಏಕೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ? ಜನರು ಪ್ರತಿಭಟನೆ ಮಾಡುತ್ತಿರುವುದು ಈ ಇಬ್ಬಂದಿತನದ ವಿರುದ್ಧ.

 

ಮಗುವಿನ ತಾಯಿ ನ್ಯಾಯಕ್ಕಾಗಿ ಕಾಯುತ್ತಿದ್ದಾಳೆ.


ಮಗುವಿನ ತಾಯಿ     ಚಿತ್ರಕೃಪೆ: ನ್ಯೂಸ್‍ ಲಾಂಡ್ರಿ

Donate Janashakthi Media

Leave a Reply

Your email address will not be published. Required fields are marked *