ದಿಲ್ಲಿ ಗಲಭೆಗಳ ಬಗ್ಗೆ ಸಿಪಿಐ(ಎಂ) ಸತ್ಯಶೋಧನಾ ವರದಿಯ ಬಿಡುಗಡೆ

ಸ್ವತಂತ್ರ ನ್ಯಾಯಾಂಗ ತನಿಖೆಯ ಆಗ್ರಹಕ್ಕೆ ಮತ್ತಷ್ಟು ಬಲ

ದಿಲ್ಲಿ ಗಲಭೆಗಳು ದೇಶದ ವಿಭಜನೆಯ ನಂತರ ದೇಶದ ರಾಜಧಾನಿಯಲ್ಲಿ ನಡೆದ ಅತಿ ದೊಡ್ಡ ಗಲಭೆ ಎಂದು ದಾಖಲಾಗಿದೆ. ಇದು ನಡೆದು ಹತ್ತು ತಿಂಗಳಾಗುತ್ತ ಬಂದಿದೆ. ದೇಶದ ರಾಜಧಾನಿಯಲ್ಲೇ 54 ಜೀವಗಳನ್ನು ಬಲಿ ತೆಗೆದುಕೊಂಡ, ನೂರಾರು ಕುಟುಂಬಗಳನ್ನು ದಿಕ್ಕುಗಾಣದಂತೆ ಮಾಡಿರುವ ಈ ಭೀಕರ ಘಟನೆ ಏಕೆ ಸಂಭವಿಸಿತು ಎಂಬುದರ ಬಗ್ಗೆ ಒಂದು ಸ್ವತಂತ್ರ ನ್ಯಾಯಾಂಗ ತನಿಖೆ ನಡೆಯಬೇಕೆಂಬ ಆಗ್ರಹಕ್ಕೆ ಕೇಂದ್ರ ಸರಕಾರ ಇನ್ನೂ ಕಿವುಡಾಗಿಯೇ ಕೂತಿದೆ. ಏಕೆ ಎಂಬುದು ಡಿಸೆಂಬರ್ 9ರಂದು ಅಂತರ್ಜಾಲ ಸಭೆಯಲ್ಲಿ ಸಿಪಿಐ(ಎಂ)ನ ದಿಲ್ಲಿ ರಾಜ್ಯಸಮಿತಿ ಬಿಡುಗಡೆ ಮಾಡಿರುವ ಒಂದು ಸಮಗ್ರ ವರದಿಯಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಇದರಲ್ಲಿ ಗಲಭೆಗಳ ಸಮಯದಿಂದಲೇ ಸಂತ್ರಸ್ತರ ನೆರವಿಗೆ ಧಾವಿಸಿದ ಸಿಪಿಐ(ಎಂ) ಕಾರ್ಯಕರ್ತರು ಸಂಗ್ರಹಿಸಿದ ಮಾಹಿತಿಗಳನ್ನು ನೋಡಿದರೆ ಅವೆಲ್ಲ ನೇರವಾಗಿ ಕೇಂದ್ರ ಗೃಹ ಮಂತ್ರಾಲಯದತ್ತವೇ ಬೊಟ್ಟು ಮಾಡಿ ತೋರಿಸುತ್ತಿವೆ.

ಆದ್ದರಿಂದಲೇ ಈ ಬಿಡುಗಡೆಯ ಸಭೆಯಲ್ಲಿ ಆಹ್ವಾನಿತರಾಗಿದ್ದ ಸುಪ್ರಿಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲ ಗೌಡ, ನಿವೃತ್ತ ಮುಖ್ಯ ಮಾಹಿತಿ ಆಯುಕ್ತ ವಜಾಹತ್ ಹಬಿಬುಲ್ಲ ಮತ್ತು ಐಎಎಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ಕೊಟ್ಟು ಈಗ ಸಾಮಾಜಿಕ ಪ್ರಶ್ನೆಗಳ ಬಗ್ಗೆ ವ್ಯಾಪಕ ಸಂಶೋಧನೆ ನಡೆಸುತ್ತಿರುವ ಪ್ರಮುಖ ಮಾನವ ಹಕ್ಕುಗಳ ಹೋರಾಟಗಾರ ಹರ್ಷ ಮಂದರ್ ಈಗಲಾದರೂ ಸರಕಾರ ಒಂದು ಸ್ವತಂತ್ರ ನ್ಯಾಯಾಂಗ ತನಿಖೆಯನ್ನು ನಡೆಸಬೇಕು ಎಂದು ಆಗ್ರಹಿಸುವಂತೆ ಈ ವರದಿ ಮಾಡಿದೆ ಎಂದರು.

ಸಿಪಿಐ(ಎಂ)ನ  ದಿಲ್ಲಿ ರಾಜ್ಯ ಕಾರ್ಯದರ್ಶಿ ಕೆ.ಕೆ. ತಿವಾರಿ ಮತ್ತು ಪೊಲಿಟ್ ಬ್ಯುರೊ ಸದಸ್ಯರಾದ ಬೃಂದಾ ಕಾರಟ್ ಮಾರ್ಗದರ್ಶನದಲ್ಲಿ ತಯಾರಿಸಿದ “ಈಶಾನ್ಯ ದಿಲ್ಲಿಯಲ್ಲಿ ಕೋಮುವಾದಿ ಹಿಂಸಾಚಾರ, ಫೆಬ್ರುವರಿ 2020-ಒಂದು ವರದಿ” ಎಂಬ ಹೆಸರಿನ ಈ ವರದಿಯಲ್ಲಿನ ಮಾಹಿತಿಗಳು ಮುಖ್ಯವಾಗಿ ಸರಕಾರೀ ದಸ್ತಾವೇಜುಗಳಿಂದಲೇ ಶ್ರಮ ಪಟ್ಟು ಕಲೆ ಹಾಕಿದವುಗಳು. ಮುಖ್ಯವಾಗಿ ಪೋಲಿಸರ ಚಾರ್ಜ್ ಶೀಟುಗಳು ಮತ್ತು ನ್ಯಾಯಾಲಯದಲ್ಲಿ ನೀಡಿದ ಉತ್ತರಗಳನ್ನು ಆಧರಿಸಿ ಕಲೆ ಹಾಕಿದ ದತ್ತಾಂಶಗಳು ಕೇಂದ್ರ ಗೃಹ ಮಂತ್ರಾಲಯದ ಆಡಳಿತ ವೈಖರಿಯ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತುತ್ತವೆ. ಕೇಂದ್ರ ಗೃಹ ಮಂತ್ರಿಗಳು ತಮ್ಮ ಪೋಲಿಸರು ಇದನ್ನು ‘ಮೂರೇ ದಿನಗಳಲ್ಲಿ’ಹತೋಟಿಗೆ ತಂದರು ಎಂದು ಹೇಳಿದರೂ, ವಾಸ್ತವವಾಗಿ ಆರು ದಿನಗಳ ಕಾಲ ಅದು ಲಂಗುಲಗಾಮಿಲ್ಲದತೆ ನಡೆಯಿತು.

ಫೆಬ್ರುವರಿ 23ರಂದು ಈಶಾನ್ಯ ದಿಲ್ಲಿಯಲ್ಲಿ ಗಲಭೆಗಳು ಆರಂಭವಾದವು. ಆ ವೇಳೆಗಾಲೇ ಸರಕಾರಕ್ಕೆ 39 ಬೇಹುಗಾರಿಕೆ ಮಾಹಿತಿಗಳು ಬಂದಿದ್ದವು. 700ಕ್ಕೂ ಹೆಚ್ಚು ಹತಾಶ ಕರೆಗಳು ಪೋಲಿಸರಿಗೆ ಬಂದವು. ಆದರೆ ಅವುಗಳನ್ನು ನಿರ್ವಹಿಸಲು ಅಲ್ಲಿದ್ದ ಪೋಲಿಸ್ ಸಿಬ್ಬಂದಿ ಕೇವಲ 450. ಹಿಂಸಾಚಾರ ಎರಡನೇ ದಿನವೂ ತೀವ್ರ ಸ್ವರೂಪದಲ್ಲಿ ಮುಂದುವರೆದರೂ, ಕರ್ಫ್ಯೂ ಹಾಕಲಿಲ್ಲ. ಪೋಲಿಸ್ ಸಿಬ್ಬಂದಿಯ ಸಂಖ್ಯೆಯನ್ನೇನೋ ತುಸು ಹೆಚ್ಚಿಸಿ 1393ಕ್ಕೆ ಏರಿಸಲಾಯಿತು. ಆದರೆ ಅವರ ಸಮ್ಮುಖದಲ್ಲೇ ಹತ್ತಾರು ಮನೆಗಳು, ಅಂಗಡಿಗಳನ್ನು ಧ್ವಂಸವಾದವು, ಹಲವಾರು ಮಂದಿ ಸಾವಿಗೀಡಾದರು. ದಿಲ್ಲಿ ಅಲ್ಪಸಂಖ್ಯಾತ ಆಯೋಗ ಮತ್ತೆ-ಮತ್ತೆ ಮನವಿ ಮಾಡಿಕೊಂಡರೂ ಭದ್ರತಾ ಪಡೆಗಳನ್ನು ಗಮನಾರ್ಹವಾಗಿ ಹೆಚ್ಚಿಸಿದ್ದು ನಾಲ್ಕನೇಯ ದಿನದ ನಂತರವೇ ಎಂದು ಈ ವರದಿಯಲ್ಲಿ ಕೊಟ್ಟಿರುವ ಸರಕಾರೀ ಅಂಕಿ-ಅಂಶಗಳೇ ಹೇಳುತ್ತವೆ. ಆಗಲೂ, ಸುಮಾರು 26 ಲಕ್ಷ ಜನಸಂಖ್ಯೆಯಿರುವ ಈ ಪ್ರದೇಶದಲ್ಲಿ ಇದ್ದ ಒಟ್ಟು ಭದ್ರತಾ ಸಿಬ್ಬಂದಿ 4756ಕ್ಕಷ್ಟೇ ಏರಿದ್ದು. ಆವೇಳೆಗಾಗಲೇ ಬಹಳಷ್ಟು ಸಾವು-ನೋವುಗಳು ಸಂಭವಿಸಿದ್ದವು. ಏಕೆ ಇಂತಹ ಸಡಿಲತನ ಎಂಬುದೇ ಇಲ್ಲಿ ಎದ್ದಿರುವ ಪ್ರಶ್ನೆ.

ಬೃಂದಾ ಕಾರಟ್ ವರದಿಯ ಬಿಡುಗಡೆ ಸಭೆಯಲ್ಲಿ ಮಾತಾಡುತ್ತ “ಇದು ಸಿ.ಎ.ಎ. ವಿರುದ್ಧ ಪ್ರತಿಭಟನೆ ಸಲ್ಲದು ಎಂಬ ಒಂದು ರಾಜಕೀಯ ಸಂದೇಶ ಎಂಬುದು ಸ್ಪಷ್ಟವಾಗುತ್ತದೆ, ನೀವು ಪ್ರತಿಭಟಿಸಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂಬ ಸಂದೇಶವದು” ಎಂದರು. ನಿಜ ಸಂಗತಿಯೆಂದರೆ ಅದು ಹಿಂಸಾಚಾರ ಕಡಿಮೆಯಾಗದೆ ಹಾಗೇ ಮುಂದುವರೆಯಲಿ ಎಂಬ ಕೇಂದ್ರ ಸರಕಾರದ ಉದ್ದೇಶಪೂರ್ವಕ ಪ್ರಯತ್ನವಾಗಿತ್ತು ಎಂದು ಅವರು ಹೇಳಿದರು.

ಸಮಗ್ರ ವರದಿ

ಸಿಪಿಐ(ಎಂ) ದಿಲ್ಲಿ ರಾಜ್ಯಸಮಿತಿಯ ಮುತುವರ್ಜಿಯಿಂದ ರಚನೆಗೊಂಡ “ಪರಿಹಾರ ಮತ್ತು ಪುನರ್ವಸತಿ ಸೌಹಾರ್ದ ಸಮಿತಿ’ಯ ಸುಮಾರು 250 ಕಾರ್ಯಕರ್ತರು ಅಂದಿನಿಂದ ನಡೆಸುತ್ತಿರುವ ಪರಿಹಾರ, ನೆರವು ಕಾರ್ಯಗಳ ವೇಳೆ ಸಂಪರ್ಕಕ್ಕೆ ಬಂದ 400ಕ್ಕೂ ಹೆಚ್ಚು ಸಂತ್ರಸ್ತ ಕುಟುಂಬಗಳೊಂದಿಗೆ, ಎಲ್ಲ ಸಮುದಾಯಗಳಿಗೂ ಸೇರಿದ ಸ್ಥಳೀಯ ಜನರೊಂದಿಗೆ ನಡೆಸಿದ ವಿವರವಾದ ಸಂದರ್ಶನಗಳು ಮತ್ತು ಮೇಲೆ ಹೇಳಿದಂತೆ ಪೋಲಿಸ್ ಚಾರ್ಜ್ ಶೀಟುಗಳು ಮತ್ತು ಇದಕ್ಕೆ ಸಂಬಂಧಪಟ್ಟ ವಿವಿಧ ಅರ್ಜಿಗಳಲ್ಲಿ ಕೋರ್ಟುಗಳಿಗೆ ಸಲ್ಲಿಸಿದ ಮಾಹಿತಿಗಳ ಆಧಾರದಲ್ಲಿ ಮತ್ತು ‘ದಿ ವೈರ್’ ಪತ್ರಿಕೆಯಲ್ಲಿ ಪ್ರಕಟವಾದ ವಿವರಗಳನ್ನು ತಗೊಂಡು ತಯಾರಿಸಿದ ಈ ವಿಸ್ರೃತ ವರದಿಯಲ್ಲಿ ಮೂರು ಭಾಗಗಳಿವೆ.

ಮೊದಲನೆಯದು, ಹಿನ್ನೆಲೆ- ಇದರಲ್ಲಿ ಈಶಾನ್ಯ ದಿಲ್ಲಿಯ ಸಾಮಾಜಿಕ-ಆರ್ಥಿಕ-ರಾಜಕೀಯ ಸನ್ನಿವೇಶವನ್ನು ಪರಿಶೀಲಿಸಲಾಗಿದೆ. ದಿಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಸೋತ ನಂತರ ಬಿಜೆಪಿ ತನ್ನ ‘ಪರಿವಾರ’ದ ಸಂಘಟನೆಗಳೊಂದಿಗೆ ಚುನಾವಣೆಯ ವೇಳೆಯಲ್ಲಿಯೇ ಆರಂಭಿಸಿದ್ದ ಕೋಮು ಧುವೀಕರಣದ ವಾತಾವರಣವನ್ನು ಇನ್ನಷ್ಟು ಗಂಭೀರಗೊಳಿಸಿತು.

ಎರಡನೆಯ ಭಾಗ ‘ಕೋಮುವಾದಿ ಹಿಂಸಾಚಾರದ ಭೀಕರ ಮುಖ’. ಇದರಲ್ಲಿ ಹಿಂಸಾಚಾರದ ಆರಂಭ ಮತ್ತು ಹರಡಿಕೆ, ಹಾಗೂ ಗೃಹ ಮಂತ್ರಾಲಯದ ಪಾತ್ರದ ಬಗ್ಗೆ ವಿವರವಾದ ಮಾಹಿತಿಗಳನ್ನು ಕೊಡಲಾಗಿದೆ.

ಮೂರನೇ ಭಾಗ-‘ಆನಂತರ’. ಇದರಲ್ಲಿ ಕೇಂದ್ರ ಸರಕಾರ ಪ್ರಚುರಪಡಿಸುತ್ತಿರುವ ‘ಪಿತೂರಿ;ಯ ಹಿಂದಿರುವ ಪಿತೂರಿ, ಗೃಹಮಂತ್ರಿಗಳು ಹೇಗೆ ಒಂದು ನಿಷ್ಪಕ್ಷಪಾತ ತನಿಖೆ ನಡೆಯದಂತೆ ಮೊದಲೇ ನೋಡಿಕೊಂಡರು, ಸಿಎಎ-ಎನ್‌ಆರ್‌ಸಿ/ಎನ್‌ಆರ್‌ಪಿ ವಿರುದ್ಧ ಪ್ರತಿಭಟಿಸಿದವರ ವಿರುದ್ಧವೇ ಎಫ್‌.ಐ.ಆರ್‌.ಗಳ ಸುರಿಮಳೆ, ‘ಸಾಕ್ಯರ್ಯ’ಗಳ ಉತ್ಪಾದನೆ ಇತ್ಯಾದಿಗಳ ವಿವರಗಳನ್ನು ಕೊಡುತ್ತ ನ್ಯಾಯ ಪಡೆಯವುದಕ್ಕಾಗಿ ಅಗತ್ಯವಾದ ಕ್ರಮಗಳ ಬಗ್ಗೆ ಹೇಳಲಾಗಿದೆ.

ಮೂರು ಅನುಬಂಧಗಳಲ್ಲಿ ಈ ಹಿಂಸಾಚಾರಗಳಲ್ಲಿ ಪ್ರಾಣ ಕಳಕೊಂಡವರ ಪಟ್ಟಿ, ಹಿಂಸಾಚಾರಕ್ಕೆ ಬಲಿಯಾದ ಕುಟುಂಬಗಳ ಕುರಿತ ಸರ್ವೆಯ ದತ್ತಾಂಶಗಳ ವಿಶ್ಲೇಷಣೆ ಮತ್ತು ಸೌಹಾರ್ದ ಹಾಗೂ ಪರಿಹಾರ ಕೆಲಸಗಳ ಬಗ್ಗೆ ಮಾಹಿತಿಗಳನ್ನು ಕೊಡಲಾಗಿದೆ.

ವಾಸ್ತವವಾಗಿ ಇದು ಕೋಮು ಘರ್ಷಣೆ ಅಲ್ಲವೇ ಅಲ್ಲ, ಸಾವು-ನೋವುಗಳು ಅಲ್ಪಸಂಖ್ಯಾತ ಸಮುದಾಯದ ಕುಟುಂಬಗಳಲ್ಲೇ ಹೆಚ್ಚಾಗಿ ನಡೆದಿರುವುದು, ಹಿಂಸಾಚಾರಗಳು ಮಹಿಳೆಯರು ಸಿಎಎ ವಿರುದ್ಧ ಪ್ರತಿಭಟನೆಗಳಿಗೆ ಕುಳಿತ ಸ್ಥಳಗಳ ಸುತ್ತ-ಮುತ್ತ, ಮತ್ತು ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚು ದಟ್ಟವಾದ ಪ್ರದೇಶಗಳಲ್ಲೇ ನಡೆದಿರುವುದೇ ಇದಕ್ಕೆ ಸಾಕ್ಷಿ ಎಂದು ಈ ವರದಿ ಹೇಳುತ್ತದೆ. ಪೋಲೀಸರು ಹಿಂದುತ್ವ ಪಡೆಗಳ ಕಡೆಯಿಂದಲೇ ಮಧ್ಯಪ್ರವೇಶಿಸಿದ್ದಕ್ಕೆ ಹಲವು ವೀಡಿಯೋ ಸಾಕ್ಷಿಗಳಿವೆ.

ಗೃಹಮಂತ್ರಿಗಳ ಪಾತ್ರದ ಬಗ್ಗೆ ಹೇಳುತ್ತ, 26 ಲಕ್ಷ ಜನಸಂಖ್ಯೆಯಿರುವ ಈ ಪ್ರದೇಶದಲ್ಲಿ ತೀವ್ರ ಹಿಂಸಾಚಾರಗಳ ಸಂದರ್ಭದಲ್ಲೂ ಭದ್ರತಾ ಸಿಬಂಧಿಯ ಸಂಖ್ಯೆ 1393ರಿಂದ 4756 ನಡುವೆಯೇ ಏಕೆ ಉಳಿಯಿತು, ಸಾಕಷ್ಟು ಪಡೆಗಳನ್ನು ಏಕೆ ಒದಗಿಸಲಿಲ್ಲ, ಅದರಿಂದಾಗಿ ಈ ದಿನಗಳಲ್ಲಿ 13,000 ಹತಾಶ ಕರೆಗಳಿಗೆ ಸ್ಪಂದಿಸಲಾರದೆ ಹೋದದ್ದು ಏಕೆ ಎಂಬ ಪ್ರಶ್ನೆಗಳಿಗೆ ಅವರು ಇದುವರೆಗೂ ಉತ್ತರ ನೀಡಿಲ್ಲ ಎಂಬ ಸಂಗತಿಯತ್ತ ವರದಿ ಗಮನ ಸೆಳೆದಿದೆ. ಇದು ಜಿಹಾದಿಗಳ ಕೃತ್ಯವಾಗಿದ್ದರೆ, ಈ ಹಿಂದುತ್ವ-ಪರ ಸರಕಾರ ಅವರ ಹಿಂಸಾಚಾರವನ್ನು ತಕ್ಷಣವೇ ಕೊನೆಗೊಳಿಸಲು ವಿಫಲವಾದದ್ದೇಕೆ, ಅಥವ ಹಿಂದುತ್ವ ಪಡೆಗಳು ಹೆಚ್ಚೆದ್ದು ಕುಣಿಯುತ್ತಿವೆ ಎಂದು ಗೊತ್ತಿದ್ದರಿಂದಲೇ ಅದು ಏನೂ ಮಾಡದೆ ಸುಮ್ಮನಿತ್ತೇ ಎಂದು ವರದಿ ತನ್ನ ತೀರ್ಮಾನದಲ್ಲಿ ಸಂದೇಹ ವ್ಯಕ್ತಪಡಿಸಿದೆ.

ವರದಿಯ ಮೇಲೆ ಸಂವಾದ

ಈ ವರದಿ ಕುರಿತ ಸಂವಾದದಲ್ಲಿ ಮಾತಾಡಿದ ನ್ಯಾಯಮೂರ್ತಿ ವಿ.ಗೋಪಾಲ ಗೌಡ “ಕಾನೂನು ಪಾಲನೆಯ ಕಡೆಯಿಂದ ತೀವ್ರ ವೈಫಲ್ಯಗಳಾಗಿವೆ. 54 ಜನ ಸತ್ತರು, ನೂರಾರು ಅಂಗಡಿಗಳು ಧ್ವಂಸವಾದವು ಎಂಬುದು ನಾಚಿಕೆಗೇಡಿನ ಸಂಗತಿ. ಕರ್ಫ್ಯು ಏಕೆ ಹಾಕಲಿಲ್ಲ? ಅರೆ ಮಿಲಿಟರಿ ಪಡೆಗಳನ್ನು ಏಕೆ ಬಳಸಲಿಲ್ಲ? ಕೇಂದ್ರ ಸರಕಾರ ಏನು ಮಾಡುತಿತ್ತು?” ಎಂದು ಪ್ರಶ್ನಿಸುತ್ತ ಈಗಲಾದರೂ ನಿವೃತ್ತ ಸುಪ್ರಿಂ ಕೋರ್ಟ್ ನ್ಯಾಯಾಧೀಶರು ಅಥವ ದಿಲ್ಲಿ ಹೈಕೋರ್ಟಿನ ನ್ಯಾಯಾಧೀಶರ ನೇತೃತ್ವದಲ್ಲಿ ನಿಷ್ಪಕ್ಷಪಾತ ತನಿಖೆಯನ್ನು ನಡೆಸಬೇಕು, ಇದರಲ್ಲಿ ಕೇಂದ್ರ ಗೃಹ ಮಂತ್ರಾಲಯದ ಮತ್ತು ದಿಲ್ಲಿ ಪೊಲೀಸ್‌ನ ಪಾತ್ರದ ಬಗ್ಗೆಯೂ ತನಿಖೆಯಿರಬೇಕು ಎಂದಿರುವ ಈ ಸಿಪಿಐ(ಎಂ) ವರದಿಯ ಒತ್ತಾಯವನ್ನು ಅವರು ಬೆಂಬಲಿಸಿದರು.

ಭಾರತದ ನಿವೃತ್ತ ಮುಖ್ಯ ಮಾಹಿತಿ ಆಯುಕ್ತ ವಜಾಹತ್ ಹಬಿಬುಲ್ಲ ಈ ಘಟನೆಯ ಬಗ್ಗೆ ತನ್ನ ದುಃಖ ಈಗಲೂ ಕಡಿಮೆಯಾಗಿಲ್ಲ ಎನ್ನುತ್ತ ಇಂತಹ ಗಲಭೆಗಳು ಈಗಲೂ ಏಕೆ ನಡೆಯುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು. “ಕೆಲವು ಮಂದಿ ‘ಭಕ್ತಿ’ಯ ಮುಸುಕು ಹೊದ್ದು ಜನಗಳು ತಮ್ಮಲ್ಲೇ ಬಡಿದಾಡುವಂತೆ ಮಾಡುತ್ತಿದ್ದರೆ. ಸರಕಾರ ಇದಕ್ಕೆ ಹೊಣೆ ವಹಿಸಬೇಕು. ಅದು ತನ್ನ ಕರ್ತವ್ಯವನ್ನು ಪಾಲಿಸಲು ವಿಫಲವಾದರೆ ಸರಕಾರಕ್ಕೆ ಅದರ ಕೆಲಸ ಮಾಡುವಂತೆ ನೆನಪಿಸುವುದು ನಮ್ಮ ಜವಾಬ್ದಾರಿ” ಎಂದು ಅವರು ಹೇಳಿದರು.

ದಿಲ್ಲಿ ಪೊಲಿಸ್ ಈ ಹಿಂಸಾಚಾರಗಳಿಗೆ ಸಂಬಂಧಪಟ್ಟಂತೆ ಹುಟ್ಟಿಸಿರುವ ‘ಪಿತೂರಿ’ ಸಿದ್ಧಾಂತದ ಹಿಂದೆಯೇ ಒಂದು ಪಿತೂರಿ ಇದೆ ಎನ್ನುತ್ತ, ಇದರ ರೂಪುರೇಷೆ ಈ ಹಿಂಸಾಚಾರದ ಬಗ್ಗೆ ತನಿಖೆ ಆರಂಭವಾಗುವ ಮೊದಲೇ ಮೂಡಿಬಂದಿತ್ತು, ಸ್ವತಃ ಗೃಹಮಂತ್ರಿಗಳೇ ಈ ಅನ್ಯಾಯದ ಚಕ್ರಕ್ಕೆ ಚಾಲನೆ ನೀಡಿದವರು ಎಂದು ಹೇಳಿರುವ ಈ ಸಿಪಿಐ(ಎಂ) ತನಿಖೆಯ ಅಭಿಪ್ರಾಯಕ್ಕೆ ದನಿಗೂಡಿಸುತ್ತ “ಈ ಹಿಂಸಾಚಾರದ ಹಿಂದೆ ಪಿತೂರಿ ಇದೆ ಎಂಬುದನ್ನು ನಾನೂ ಸಂಪೂರ್ಣವಾಗಿ ಒಪ್ಪುತ್ತೇನೆ. ಆದರೆ ಅದು ಸರಕಾರ ಅಥವ ಪೋಲಿಸ್ ಹೇಳುವುದಕ್ಕೆ ತದ್ವಿರುದ್ಧವಾದದ್ದು” ಎಂದು ಹರ್ಷ ಮಂದರ್ ಹೇಳಿದರು.

ಒಬ್ಬ ಐ.ಎ.ಎಸ್. ಅಧಿಕಾರಿಯಾಗಿ ಇಂತಹ ಘಟನೆಗಳನ್ನು ನಿರ್ವಹಿಸಿದ ಅನುಭವಗಳು ಮತ್ತು ಐಎಎಸ್ ಬಿಟ್ಟ ನಂತರದ ಅಧ್ಯಯನಗಳ ಆಧಾರದಲ್ಲಿ ಹೇಳುವುದಾದರೆ ಯಾವುದೇ ಗಲಭೆ ತನ್ನಷ್ಟಕ್ಕೇ ನಡೆಯುವುದಿಲ್ಲ, ನಡೆದರೂ ಕೆಲವು ಗಂಟೆಗಳ ನಂತರವೂ ಮುಂದುವರೆಯುವುದಿಲ್ಲ ಎಂದು ಅವರು ಮುಂದುವರೆದು ಹೇಳಿದರು. ಮೊದಲನೆಯದಾಗಿ, ಗಲಭೆಗಳನ್ನು ಉತ್ಪಾದಿಸಲಾಗುತ್ತದೆ, ಎರಡನೆಯದಾಗಿ ಅದಕ್ಕೆ ಸಿದ್ಧತೆ ನಡೆಯುತ್ತದೆ, ಮತ್ತು ಮೂರನೆಯದಾಗಿ ಅದು ಸರಕಾರ ತಾನಾಗಿಯೇ ಬಯಸದಿದ್ದರೆ ಅದು ಬಹಳ ಸಮಯ ಮುಂದುವರೆಯುವದಿಲ್ಲ ಎಂದು ಅವರು ಹೇಳಿದರು. ಈ ಹಿಂಸಾಚಾರದ ಮೊದಲು ದಿಲ್ಲಿ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಕಪಿಲ್ ಮಿಶ್ರ ಮಾತ್ರವೇ ಅಲ್ಲ, ಪ್ರಧಾನಿಗಳು, ಗೃಹ ಮಂತ್ರಿಗಳಿಂದ ಹಿಡಿದು ಕೇಂದ್ರ ಸರಕಾರದ ಹಿರಿಯ ಮುಖಂಡರುಗಳೇ, “ದ್ವೇಷದ ಉತ್ಪಾದನೆ” ಮಾಡಿದ್ದರು ಎಂದು ಹರ್ಷ ಮಂದರ್ ಹೇಳಿದರು.

ಈ ತನಿಖಾ ವರದಿಯ ಬಗ್ಗೆ ಸಿಪಿಐ(ಎಂ)ನ್ನು ಶ್ಲಾಘಿಸುತ್ತ ಅವರು ಈ ಹಿಂದೆ ಇಂತಹ ಘಟನೆಗಳು ನಡೆದಾಗ ಸಾಮಾನ್ಯವಾಗಿ ರಾಜಕೀಯ ಪಕ್ಷಗಳು ಇಂತಹ ಸತ್ಯಶೋಧಕ ವರದಿಗಳನ್ನು ತಯಾರಿಸುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಪರಂಪರೆ ಲುಪ್ತವಾದಂತೆ ಕಾಣುತ್ತಿದೆ. 2002 ರ ಗುಜರಾತ್ ಹಿಂಸಾಚಾರದ ವೇಳೆ ಹಾಕಿದ್ದ ಪರಿಹಾರ ಶಿಬಿರಗಳಲ್ಲಿ ಕಾಂಗ್ರೆಸಿನ ಕಾರ್ಯಕರ್ತರು ಯಾರೂ ಕಂಡು ಬರಲಿಲ್ಲ ಎಂದು ನೆನಪಿಸಿಕೊಂಡ ಅವರು, ಕಮುನಿಸ್ಟರು ಮತ್ತು ಎಡಪಂಥೀಯರು ಮಾತ್ರವೇ ಈ ಪರಿಹಾರ ಮತ್ತು ಸತ್ಯಶೋಧನೆಯ ಪರಂಪರೆಯನ್ನು ಮುಂದುವರೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿಶೇಷವಾಗಿ ಬೃಂದಾ ಕಾರಟ್ ಅವರ ಶ್ರಮವನ್ನು ಪ್ರಶಂಸಿಸುತ್ತ, ಕೊವಿಡ್ ಸೋಂಕು ತಗಲಿ ಆರೋಗ್ಯ ಕೆಟ್ಟಿದ್ದರೂ ತಾನು ಈ ಸಭೆಯಲ್ಲಿ ಭಾಗವಹಿಸಲೇ ಬೇಕು ಎಂದು ಬಂದಿರುವುದಕ್ಕೆ ಇದು ಒಂದು ಕಾರಣ ಎಂದು ಹರ್ಷ ಮಂದರ್ ಹೇಳಿದರು.

‘ನಮಗೆ ನ್ಯಾಯ ಬೇಕು”

ಸಿಪಿಐ(ಎಂ) ದಿಲ್ಲಿ ರಾಜ್ಯ ಸಮಿತಿ ಏರ್ಪಡಿಸಿದ್ದ ಈ ಸಭೆಯಲ್ಲಿ, ಈ ಹಿಂಸಾಚಾರಗಳಿಗೆ ಬಲಿಯಾದವರ ಮೂರು ಕುಟುಂಬಗಳ ಸದಸ್ಯgರು ಭಾಗವಹಿಸಿ ತಮಗಾಗಿರುವ ಅನ್ಯಾಯವನ್ನು ಹೇಳುತ್ತ ತಮಗೆ ನ್ಯಾಯ ಬೇಕು ಎಂದರು.

ಪೋಲೀಸರೇ ಲಾಠಿಯೇಟು ಬಾರಿಸುತ್ತ ರಾಷ್ಟ್ರಗೀತೆ ಹಾಡು ಎಂದು ಹಿಂಸಿಸಿದ, ಅದರಿಂದಾಗಿ ನಂತರ ಪ್ರಾಣ ಕಳಕೊಂಡ ಯುವಕ ಫೈಝಾನ್‌ನ ತಾಯಿ ಕಿಸ್ಮತೂನ್ “ಅವನು ಮುಸಲ್ಮಾನನೆಂಬ ಏಕೈಕ ಕಾರಣಕ್ಕೆ ಸಾಯಿಸಲಾಯಿತು, ನನ್ನ ಮಗುವನ್ನು ನೋಡಲೂ ಅವರು ಬಿಡಲಿಲ್ಲ” ಎಂದರು.

ಫೆಬ್ರುವರಿ 15ರಂದು ಪ್ರಾಣ ಕಳಕೊಂಡ 22 ವರ್ಷದ ಅಷ್ಫಾಖ್ ಹುಸೇನ್‌ನ ತಂದೆ ಅಗಾಜ್ ಹುಸೆನ್, ನಮ್ಮ ಈ ಎಲ್ಲ ಮಕ್ಕಳಿಗೆ ದೇಶದ ನ್ಯಾಯ ವ್ಯವಸ್ಥೆಯಿಂದ ನ್ಯಾಯ ಬೇಕಾಗಿದೆ ಎಂದರು. “ಅದು ಕೋಮು ಗಲಭೆಯಲ್ಲ, ದೇಶದ ಶತ್ರುಗಳು ಆರಂಭಿಸಿದ ಗಲಭೆ, ನಾವು ಎಷ್ಟೋ ವರ್ಷಗಳಿಂದ ಇಲ್ಲಿ ಸಾಮರಸ್ಯದಿಂದ ಬದುಕಿದ್ದೇವೆ, ಈಗಲೂ ಬದುಕುತ್ತಿದ್ದೇವೆ” ಎಂದು ಹುಸೆನ್ ಹೇಳಿದರು.

ಫೆಬ್ರುವರಿ 26ರಂದು ಅಸು ನೀಗಿದ 15 ವರ್ಷದ ಬಾಲಕ ನಿತಿನ್ ಪಾಸ್ವಾನ್‌ನ ತಂದೆ ರಾಮ್ ಸುಭಗ್ “ನನ್ನ ಮಗನನ್ನು ಪೋಲೀಸರು ಕೊಂದರು. ಗಲಭೆ ಇಲ್ಲದಿದ್ದರೂ ಅಶ್ರುವಾಯು ಸಿಡಿಸಿದ್ದೇಕೆ ತಿಳಿಯಲಿಲ್ಲ, ಅವನು ನಿಜವಾಗಿ ಹೇಗೆ ಸತ್ತ ಎಂಬದು ನನಗಿನ್ನೂ ತಿಳಿದಿಲ್ಲ. ಅವನು ಮೈನರ್ ಎಂದು ದಿಲ್ಲಿ ಸರಕಾರ ಪ್ರಕಟಿಸಿದ ಪರಿಹಾರದ ಪೂರ್ಣ ಮೊತ್ತವೂ ನನಗೆ ಇನ್ನೂ ಸಿಕ್ಕಿಲ್ಲ” ಎಂದು ಹೇಳಿದರು.

ಸಿಪಿಐ(ಎಂ) ಈ ತನಿಖಾ ವರದಿಯ ಕೊನೆಯಲ್ಲಿ ನಿಷ್ಪಕ್ಷಪಾತ ನ್ಯಾಯಾಂಗ ತನಿಖೆಗೆ ಆಗ್ರಹಿಸುವುದರೊಂದಿಗೇ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು, ದಿಲ್ಲಿ ಸರಕಾರ ಸೂಚಿಸಿರುವಂತೆ ತಪ್ಪಿತಸ್ಥರನ್ನು ಶಿಕ್ಷಿಸಲು ವಕೀಲರ ಒಂದು ನಿಷ್ಪಕ್ಷಪಾತ ಸಮಿತಿಯನ್ನು ರಚಿಸಬೇಕು ಮತ್ತು ಹಿಂಸಾಚಾರದ ಸಂತ್ರಸ್ತರಿಗೆ ಪೂರ್ಣ ಪರಿಹಾರ ಮತ್ತು ನೆರವನ್ನು ಒದಗಿಸಬೇಕು ಎಂದೂ ಆಗ್ರಹಿಸಿದೆ.

ಈ ವರದಿಯ ಉದ್ದೇಶ ಈ ಭೀಕರ ಘಟನೆ ಸಾರ್ವಜನಿಕರ ನೆನಪಿನಿಂದ ಮಾಸದಂತೆ ಜೀವಂತವಾಗಿಡುವುದು ಮತ್ತು ಭಾರತದ ನಾಗರಿಕರ ಪ್ರಶ್ನೆಗಳಿಗೆ ಉತ್ತರ ಪಡೆಯಲು ಒಂದು ಸ್ವತಂತ್ರ ತನಿಖೆ ನಡೆಸುವಂತೆ ಸರಕಾರದ ಮೇಲೆ ಒತ್ತಡ ಹಾಕುವುದು ಎಂದು ವರದಿಯನ್ನು ಬಿಡುಗಡೆಗೆ ಸಿದ್ಧಪಡಿಸಿದ ತಂಡದ ಸದಸ್ಯರು ಹೇಳುತ್ತಾರೆ.

Donate Janashakthi Media

Leave a Reply

Your email address will not be published. Required fields are marked *