ದೇಶದ ಮೊಟ್ಟ ಮೊದಲ ಡಿಜಿಟಲ್‌ ವಿಶ್ವವಿದ್ಯಾಲಯದಿಂದ ಪ್ರವೇಶ ಪ್ರಕ್ರಿಯೆ ಆರಂಭ

ತಿರುವನಂತಪುರ: ಭಾರತ ದೇಶದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್‌ ವಿಶ್ವವಿದ್ಯಾಲಯವಾದ ‘ಕೇರಳ ಡಿಜಿಟಲ್‌ ವಿಜ್ಞಾನಗಳ ವಿಶ್ವವಿದ್ಯಾಲಯ’ಕ್ಕೆ ಭರ್ಜರಿ ಜಾಲನೆ ದೊರೆತಿದ್ದು, ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಕೋವಿಡ್‌ ಪಿಡುಗಿನ ನಡುವೆಯೂ ವಿದ್ಯಾರ್ಥಿಗಳಿಂದ ಭಾರಿ ಪ್ರತಿಕ್ರಿಯೆ ದೊರೆಯುತ್ತಿದೆ.

ಡಿಜಿಟಲ್‌ ವಿಶ್ವವಿದ್ಯಾಲಯದಲ್ಲಿ ಆರಂಭವಾಗಿರುವ ಪಿಎಚ್‌.ಡಿ ಕೋರ್ಸ್‌ಗಳಿಗೆ ಈಗಾಗಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಲಭ್ಯವಿರುವ 30 ಸೀಟುಗಳಿಗೆ 442 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ. ಇದು ಕೇರಳ ಡಿಜಿಟಲ್‌ ವಿಶ್ವವಿದ್ಯಾಲಯದ (ಡಿಯುಕೆ) ಮೊದಲ ಶೈಕ್ಷಣಿಕ ಕಾರ್ಯಕ್ರಮ.

ಇದನ್ನು ಓದಿ: ಡಿಜಿಟಲ್‌ ಕಲಿಕೆಗೆ ತೊಡಕಾಗದಂತೆ ತುರ್ತು ಕ್ರಮಗಳ ಪರಿಹಾರಕ್ಕೆ ಪ್ರಯತ್ನ: ಪಿಣರಾಯಿ ವಿಜಯನ್

ದೇಶದಲ್ಲಿ ಮೊದಲ ಸಾಕ್ಷರತೆ ಪ್ರಮಾಣದಲ್ಲಿ ಮೊದಲ ಸ್ಥಾನವನ್ನು ಪಡೆದಿರುವ ಕೇರಳವು ಈಗ ಡಿಜಿಟಲ್‌ ವಿಶ್ವವಿದ್ಯಾಲಯವನ್ನು ಆರಂಭಿಸಿದೆ. ಕೇರಳದ ಎಡರಂಗ ಸರಕಾರ ಶಿಕ್ಷಣ ಮತ್ತು ಆರೋಗ್ಯ ಒಳಗೊಂಡು ಎಲ್ಲಾ ಜನ ವಿಭಾಗದ ಆದ್ಯತೆ ವಲಯಗಳಿಗೆ ಆದ್ಯತೆ ನೀಡುತ್ತಿರುವ ಯೋಜನೆಗಳಿಂದಾಗಿ ಹೊಸ ಹೊಸ ಪ್ರಯೋಗಗಳಿಗೆ ಚಾಲನೆ ನೀಡಿದೆ.

ಡಿಜಿಟಲ್‌ ವಿವಿಯು ‘ಎಐ ರೊಬೊಟಿಕ್ಸ್‌’, ‘ಕಂಪ್ಯುಟೇಷನಲ್‌ ಇಂಟೆಲಿಜೆನ್ಸ್‌’, ‘ಕಂಪ್ಯೂಟೇಷನಲ್‌ ಇಮೇಜಿಂಗ್‌ ಸಿಸ್ಟಂ’ ಸೇರಿದಂತೆ ಅತ್ಯಾಧುನಿಕ ವಿಷಯಗಳ ಕುರಿತು ಡಾಕ್ಟರೇಟ್‌ ಪದವಿ ಮಟ್ಟದ ಶೈಕ್ಷಣಿಕ ವಿಭಾಗಗಳನ್ನು ಪರಿಚಯಿಸಿರುವುದರಿಂದ ಎಲ್ಲರ ಗಮನ ಸೆಳೆದಿದೆ.

ಅತ್ಯಾಧುನಿಕ ತಂತ್ರಜ್ಞಾನಗಳ ಕುರಿತ ಕೋರ್ಸ್‌ಗಳನ್ನು ನಡೆಸುತ್ತಿದ್ದ ಕೇರಳದ ಭಾರತೀಯ ಮಾಹಿತಿ ತಂತ್ರಜ್ಞಾನ ಮತ್ತು ನಿರ್ವಹಣಾ ಸಂಸ್ಥೆಯನ್ನು (ಐಐಐಟಿಎಂ–ಕೆ) ಮೇಲ್ದರ್ಜೆಗೇರಿಸಿ ಜನವರಿಯಲ್ಲಿ ಎಡರಂಗ ಸರಕಾರವು ಸುಗ್ರೀವಾಜ್ಞೆಯನ್ನು ಹೊರಡಿಸಿದೆ.

ಅರ್ಜಿ ಸಲ್ಲಿಸಿರುವ ಹೆಚ್ಚಿನ ಅಭ್ಯರ್ಥಿಗಳು ರೆಗ್ಯುಲರ್‌ ಪಿ.ಎಚ್‌.ಡಿ ಪ್ರವೇಶಕ್ಕೆ ಆಸಕ್ತಿ ಹೊಂದಿದ್ದಾರೆ. ಹೊಸದಾಗಿ ಪರಿಚಯಿಸಲಾಗಿರುವ ‘ಇಂಡಸ್ಟ್ರಿ ರೆಗ್ಯುಲರ್ ಪಿ.ಎಚ್‌.ಡಿ’ಗೂ ಬೇಡಿಕೆ ಇದೆ ಎಂದು ವಿವಿಯು ತಿಳಿಸಿದೆ.

ಒಟ್ಟಾರೆ ಸಲ್ಲಿಕೆಯಾಗಿರುವ 442 ಅರ್ಜಿಗಳ ಪೈಕಿ 259 ಅಭ್ಯರ್ಥಿಗಳು ರೆಗ್ಯುಲರ್‌ ಪಿ.ಎಚ್‌.ಡಿ, 169 ಅಭ್ಯರ್ಥಿಗಳು ಅರೆ–ಕಾಲಿಕ ಪಿ.ಎಚ್‌.ಡಿ ಅಧ್ಯಯನಕ್ಕೆ ಒಲವು ತೋರಿದ್ದಾರೆ. ಅಭ್ಯರ್ಥಿಗಳಿಗೆ ಮುಂದಿನ ವಾರ ಸಂದರ್ಶನಗಳು ನಡೆಯಲಿದ್ದು, ಆಗಸ್ಟ್‌ ವೇಳೆಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಂಶೋಧನಾ ಚಟುವಟಿಕೆಗಳ ಜತೆಗೆ ಹೊಸ ರೂಪದಲ್ಲಿ ಎಂ.ಎಸ್ಸಿ ಮತ್ತು ಎಂ.ಟೆಕ್‌ ಕೋರ್ಸ್‌ಗಳನ್ನು ಡಿಯುಕೆ ಆಗಸ್ಟ್‌ನಲ್ಲಿ ಪರಿಚಯಿಸಲಿದೆ ಎಂದು ವಿಶ್ವವಿದ್ಯಾಲಯದ ಉನ್ನತ ಮೂಲಗಳು ತಿಳಿಸಿವೆ.

ಇದನ್ನು ಓದಿ: ನಾಲ್ಕು ವರ್ಷಗಳ ಪದವಿ ಶಿಕ್ಷಣ: ಬೆಂಕಿಯಿಂದ ಬಾಣಲೆಗೆ

ಸಾಂಪ್ರದಾಯಿಕ ಎಂ.ಟೆಕ್‌ ಕೋರ್ಸ್‌ಗಳಿಗಿಂತ ಭಿನ್ನವಾದ ಕೋರ್ಸ್‌ಗಳನ್ನು ಆರಂಭಿಸಲು ಡಿಯುಕೆ ಮುಂದಾಗಿದೆ. ಪ್ರಮುಖವಾಗಿ ಕೃತಕ ಬುದ್ಧಿಮತ್ತೆ (ಎಐ), ಎಐ ಹಾರ್ಡ್‌ವೇರ್, ಸೈಬರ್-ಫಿಸಿಕಲ್ ಸಿಸ್ಟಮ್ಸ್, ಸೈಬರ್ ಸೆಕ್ಯುರಿಟಿ ಎಂಜಿನಿಯರಿಂಗ್ ಮತ್ತು ಸಿಗ್ನಲ್ ಪ್ರೊಸೆಸ್, ಕನೆಕ್ಟೆಡ್ ಸಿಸ್ಟಮ್ಸ್ ಮತ್ತು ಇಂಟೆಲಿಜೆನ್ಸ್‌ನಂತಹ ಸಮಕಾಲೀನ ವಿಷಯಗಳ ಕುರಿತ ವಿಶೇಷ ಕೋರ್ಸ್‌ಗಳಿಗೆ ಇದರಲ್ಲಿ ಇರಲಿವೆ.

ಹಾಗೆಯೇ ಮೆಷಿನ್ ಇಂಟೆಲಿಜೆನ್ಸ್, ಕಾಗ್ನಿಟಿವ್ ಸೈನ್ಸಸ್, ಸೈಬರ್ ಸೆಕ್ಯುರಿಟಿ, ಎಕಾಲಜಿಕಲ್ ಇನ್ಫರ್ಮ್ಯಾಟಿಕ್ಸ್‌ , ಕಂಪ್ಯೂಟೇಷನಲ್ ಎಕನಾಮಿಕ್ಸ್ ಮತ್ತು ಕಂಪ್ಯೂಟೇಷನಲ್ ಸೋಶಿಯಲ್ ಸೈನ್ಸ್ (ಎಐ, ದತ್ತಾಂಶ ಮತ್ತು ಸಮಾಜವನ್ನು ಕೇಂದ್ರೀಕರಿಸಿ) ವಿಷಯಗಳಲ್ಲಿ ಎಂ.ಎಸ್ಸಿ ಕೋರ್ಸ್‌ಗಳನ್ನು ಆರಂಭಿಸಲಿದೆ.

‘ವಿಶ್ವವಿದ್ಯಾಲಯದ ಪಿಎಚ್‌.ಡಿ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಡಿಜಿಟಲ್ ತಂತ್ರಜ್ಞಾನಗಳು ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಗುಣಮಟ್ಟದ ಸಂಶೋಧನೆಗೆ ಬೇಡಿಕೆ ಇದೆ ಎಂಬುದನ್ನು ತೋರಿಸುತ್ತದೆ’ ಎಂದು ಕೇರಳದ ಡಿಜಿಟಲ್ ವಿಶ್ವವಿದ್ಯಾಲಯದ ಕುಲಪತಿ ಡಾ. ಸಾಜಿ ಗೋಪಿನಾಥ್ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *