ಗಾಳಿಯಿಂದಲೇ ದುಡ್ಡು ಮಾಡ್ತಿದ್ದ ಲೇಸ್ ಕಂಪನಿಗೆ ದಂಡ

ತ್ರಿಶೂರ್: ತಿಂಡಿ ಪ್ರಿಯರಾದ ಇಂದಿನ ಜನರಿಗೆ, ಅದರಲ್ಲೂ ಲೇಸ್ ಕಂಪನಿಯ ಆಲೂಗಡ್ಡೆ ಚಿಪ್ಸ್‌ ಅಂದರೆ ಮಕ್ಕಳು ಸೇರಿದಂತೆ ಎಲ್ಲರಿಗೂ ಅಚ್ಚುಮೆಚ್ಚು.  ಅಷ್ಟರ ಮಟ್ಟಿಗೆ ಲೇಸ್‌ ಭಾರತದಲ್ಲಿ ಪ್ರಭಾವ ಬೀರಿದೆ. ಆದರೆ ಲೇಸ್‌ ಪ್ಯಾಕೇಟ್‌ಗಳಲ್ಲಿ ಆಲೂಗಡ್ಡೆ ಚಿಪ್ಸ್‌ಗಿಂತ ಹೆಚ್ಚು ಗಾಳಿಯೇ ತುಂಬಿರುತ್ತದೆ. ಇದೇ ಕಾರಣಕ್ಕೆ ಈಗ ಲೇಸ್‌ನ ಮಾತೃಸಂಸ್ಥೆ ಪೆಪ್ಸಿಕೋಗೆ ಕೇರಳದ ತ್ರಿಶೂರ್‌ನ ಕಾನೂನು ಮಾಪನಶಾಸ್ತ್ರ ಕಚೇರಿ 85,000 ರೂ ದಂಡ ವಿಧಿಸಿದೆ. ಪ್ಯಾಕೇಟ್‌ ತುಂಬಾ ಗಾಳಿ ತುಂಬಿಸುತ್ತಿದ್ದ ಪೆಪ್ಸಿಕೋ ಸಂಸ್ಥೆ ಅದರೊಳಗಿರುವ ಚಿಪ್ಸ್‌ನ ಪ್ರಮಾಣವನ್ನು ಕಡಿಮೆ ಮಾಡುತ್ತಿತ್ತು.

ಇದನ್ನು ಓದಿ: ಆಲೂಗಡ್ಡೆ ರೈತರ ಮೇಲೆ ದಾಖಲಿಸಿದ್ದ ಕೇಸು ವಾಪಸ್ಸು ಪಡೆದ ಪೆಪ್ಸಿಕೋ ಕಂಪನಿ

ಕಾನೂನು ಮಾಪನಶಾಸ್ತ್ರ ಕಚೇರಿಯು ಲೇಸ್’ನ ಮಾತೃಸಂಸ್ಥೆ ಪೆಪ್ಸಿಕೋಗೆ 85,000 ರೂಪಾಯಿ ದಂಡ ವಿಧಿಸಿದ್ದಾರೆ. ತ್ರಿಶೂರ್ ಮೂಲದ ನಿವಾಸಿ ಹಾಗೂ ಸಾಮಾಜಿಕ ನ್ಯಾಯ ಸಂರಕ್ಷಣಾ ಕೇಂದ್ರದ ಅಧ್ಯಕ್ಷ ಪಿಡಿ ಜಯಶಂಕರ್ ಖರೀದಿಸಿದ ಲೇಸ್‌ ಪ್ಯಾಕೆಟ್‌ನಲ್ಲಿರುವ ಚಿಪ್ಸ್‌ನ ಪ್ರಮಾಣದಲ್ಲಿ ನಿಗದಿಗಿಂತ ಕಡಿಮೆ ಇರುವ ಬಗ್ಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಪೆಪ್ಸಿಕೋ ಇಂಡಿಯಾ ಹೋಲ್ಡಿಂಗ್ಸ್ ಪ್ರೈವೇಟ್ ವಿರುದ್ಧ ಕ್ರಮಕೈಗೊಳ್ಳಲಾಗಿದೆ.

ಪ್ರತಿ ಲೇಸ್‌ ಪ್ಯಾಕೆಟ್ಟಿನಲ್ಲಿ 115 ಗ್ರಾಂ ಎಂದು ತೋರಿಸಲಾಗಿತ್ತು. ಆದರೆ ಅದರೊಳಗಿನ ಚಿಪ್ಸ್‌ಗಳ ಪ್ರಮಾಣ  ಅದಕ್ಕಿಂತ ಕಡಿಮೆಯಿತ್ತು. ಪ್ಯಾಕೆಟ್‌ಗಳ ತಪಾಸಣೆ ನಡೆಸಿದಾಗ ಒಂದರಲ್ಲಿ ಕೇವಲ 50.930 ಗ್ರಾಂ, ಎರಡನೆಯದರಲ್ಲಿ 72 ಗ್ರಾಂ ಮತ್ತು ಮೂರನೇ ಪ್ಯಾಕೆಟ್‌ನಲ್ಲಿ 86.380 ಗ್ರಾಮ್‌ ಚಿಪ್ಸ್‌ ಮಾತ್ರ ಇದ್ದವು.

ಈ ಹಿನ್ನೆಲೆಯಲ್ಲಿ ಕಂಜಾಣಿಯಲ್ಲಿರುವ ಸೂಪರ್‌ ಮಾರುಕಟ್ಟೆಯಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ಚಿಪ್ಸ್‌ಗಳ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಇಲಾಖೆ ಕ್ರಮ ಕೈಗೊಂಡಿದೆ.

ಇದನ್ನು ಓದಿ: ಪೆಪ್ಸಿಕೋ ಕಂಪನಿಯ ಲೇಸ್‌ಗೆ ನೀಡಲಾಗಿದ್ದ ಪೇಟೇಂಟ್‌ ರದ್ದು

ಲೇಸ್ ಪ್ಯಾಕೆಟ್‌ನಲ್ಲಿ ಚಿಪ್ಸ್‌ಗಿಂತ ಹೆಚ್ಚು ಗಾಳಿ ಇತ್ತು ಎಂಬ ಆರೋಪ ಪ್ರಪಂಚದಾದ್ಯಂತ ಇದೆ. ಆದರೆ ಯಾರೂ ಅದರ ತೂಕವನ್ನು ಪರಿಶೀಲಿಸಲು ಅಥವಾ ಅದರ ಪ್ರಮಾಣದ ಬಗ್ಗೆ ದೂರು ನೀಡಲು ತಲೆಕೆಡಿಸಿಕೊಳ್ಳುವುದಿಲ್ಲ, ಇದನ್ನೇ ಕಂಪನಿಯು ದುರುಪಯೋಗಪಡಿಸಿಕೊಂಡಿದೆ. ಸರಿಯಾದ ತಪಾಸಣೆಯ ಕೊರತೆಯಿಂದಾಗಿ ಇದು ಭಾರತದಲ್ಲಿ ವ್ಯಾಪಕವಾಗಿ ನಡೆಯುತ್ತದೆ. ಲೇಸ್‌ನಂತಹ ಹಲವಾರು ಇತರ ಪ್ರಮುಖ ಬ್ರಾಂಡ್‌ಗಳು ಭಾರತದಲ್ಲಿ ಉತ್ಪಾದನೆಯಾಗುತ್ತಿದ್ದು,  ಕಡಿಮೆ ಗುಣಮಟ್ಟವನ್ನು ಹೊಂದಿರುವ ಕಾರಣ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ.

ಲೇಸ್ ಪ್ಯಾಕೇಟುಗಳು ಒಡೆಯದೆ ಇರುವಂತೆ ಮಾಡಲು ಹಾಗೂ ಆಲೂಗಡ್ಡೆ ಚಿಪ್ಸ್ ಕೊಳೆಯದಂತೆ ಈ ಗಾಳಿಯು ರಕ್ಷಿಸುತ್ತದೆ. ಅವು ಹಳಸಿದ ಅಥವಾ ಒದ್ದೆಯಾಗದಂತೆ ಮಾಡುವುದು ಗಾಳಿ ತುಂಬಿಸುವುದರ ಹಿಂದಿನ ಉದ್ದೇಶ. ಈ ಚಿಪ್ಸ್ ಪ್ಯಾಕೆಟ್‌ನಲ್ಲಿರುವ ಗಾಳಿಯು ಸಾಮಾನ್ಯ ಗಾಳಿಯಲ್ಲ, ಅದು ಸಾರಜನಕ. ಚಿಪ್ಸ್ ಹಾಳಾಗದಂತೆ ಅಥವಾ ಕೊಳೆಯುವುದನ್ನು ತಡೆಯುವುದಕ್ಕೆ ಈ ಗಾಳಿ ನೆರವಾಗುತ್ತದೆ.

ಆದರೆ ಇಂದಿನ ದಿನಗಳಲ್ಲಿ ಲೇಸ್ ಸೇರಿದಂತೆ ಬಹುತೇಕ ಎಲ್ಲಾ ಬಗೆಯ ಪ್ಯಾಕ್​ನಲ್ಲಿ ಚಿಪ್ಸ್​ಗಿಂತ ಹೆಚ್ಚು ಗಾಳಿ ಇರುವುದು ಸಾಮಾನ್ಯ. ಕಾಲಾನಂತರದಲ್ಲಿ ಭ್ರಷ್ಟಾಚಾರವು ಬೆಳೆದಂತೆ ಈ ಪ್ಯಾಕೆಟ್ ಒಳಗಿನ ಗಾಳಿಯು ಹೆಚ್ಚಾಯಿತು ಎಂಬುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ.

ನಮ್ಮ ವಾಟ್ಸಪ್ ಗ್ರುಪ್ ಗೆ ಸೇರಲು ಲಿಂಕ್ ಬಳಸಿ

Donate Janashakthi Media

Leave a Reply

Your email address will not be published. Required fields are marked *