ದಾರುಣ ದುರವಸ್ಥೆಗೆ ಆಡಳಿತ ವ್ಯವಸ್ಥೆಯೇ ಕಾರಣ

ನಗರಾಭಿವೃದ್ಧಿಯ ಅವೈಜ್ಞಾನಿಕ ಯೋಜನೆಗಳ ಪರಿಣಾಮವನ್ನು ನಾವಿಂದು ಅನುಭವಿಸುತ್ತಿದ್ದೇವೆ 

ನಾ ದಿವಾಕರ

ಬೆಂಗಳೂರು ಎಂದು ನಾವು ಇಂದು ಗುರುತಿಸುವ ಭೂಪ್ರದೇಶ ಸುತ್ತಲಿನ ಹಲವಾರು ಹಳ್ಳಿಗಳನ್ನು ನುಂಗಿ ಬೆಳೆದಿರುವ ಒಂದು ಆಧುನಿಕ ನಗರ. ಸಾವಿರ ಕೆರೆಗಳ ಪ್ರದೇಶ ಎಂದೇ ಚಾರಿತ್ರಿಕವಾಗಿ ಪ್ರಸಿದ್ಧಿ ಪಡೆದಿದ್ದ ಈ ಪ್ರದೇಶದಲ್ಲಿ 1960ರ ವೇಳೆಗೆ ಕೇವಲ 280 ಕೆರೆಗಳು ಉಳಿದಿದ್ದವು. ಈಗ 80 ಕೆರೆಗಳಿವೆ. ಆದರೆ ಈ ಬೃಹತ್‌ ಬೆಂಗಳೂರು ಆಪೋಷನ ತೆಗೆದುಕೊಂಡಿರುವ ಸುತ್ತಲಿನ ಗ್ರಾಮ ಮತ್ತು ಅರಣ್ಯ ಪ್ರದೇಶಗಳನ್ನು ಒಳಗೊಂಡಂತೆ ಆಧುನಿಕ ಬೆಂಗಳೂರು 189 ಕೆರೆಗಳನ್ನು ಹೊಂದಿದೆ. ಇದರ ಪೈಕಿ 69 ಕೆರೆಗಳು ಈ ಬಾರಿಯ ಅತಿವೃಷ್ಟಿಯಿಂದ ತುಂಬಿ ಹರಿಯುತ್ತಿವೆ. ಕೆರೆಗಳು ತುಂಬುವುದು ಸಹಜ, ತುಂಬಿ ಹರಿಯುವುದೂ ಸಹಜ ಆದರೆ ಈ ಹರಿಯುವ ಹೆಚ್ಚುವರಿ ನೀರು ರಸ್ತೆಗಳಿಗೆ ಮನೆಗಳಿಗೆ ನುಗ್ಗುವುದು ಸಹಜವಲ್ಲ. ಇದು ನಾವು ಮಾಡಿಕೊಂಡಿರುವ ಅವಾಂತರ.

ಬಂಡವಾಳಶಾಹಿ ಆರ್ಥಿಕತೆಯಲ್ಲಿ ಚುನಾಯಿತ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಶಾಹಿ ಮತ್ತು ತಳಮಟ್ಟದ ಅಧಿಕಾರ ಕೇಂದ್ರಗಳು ಅತಿ ಹೆಚ್ಚು ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತವೆ. ಈ ಎಲ್ಲ ಅಧಿಕಾರ ಮತ್ತು ಆಡಳಿತ ಕೇಂದ್ರಗಳೂ ಅಂತಿಮವಾಗಿ ಮಾರುಕಟ್ಟೆ ಶಕ್ತಿಗಳೊಡನೆ ನೇರ ಸಂಬಂಧವನ್ನು ಹೊಂದಿರುತ್ತವೆ. ಸುಂದರ ನಗರಿಯನ್ನು ನಿರ್ಮಿಸುವ ಎಲ್ಲ ಆಡಳಿತ ಯೋಜನೆಗಳ ಹಿಂದೆಯೂ ಈ ಸೌಂದರ್ಯೀಕರಣವು ಮಾರುಕಟ್ಟೆಯ ಅನಿವಾರ್ಯತೆಗಳನ್ನು, ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡೇ ನಡೆಯುತ್ತದೆ. ಭಾರತದ ಸಿಲಿಕಾನ್‌ ಸಿಟಿ ಎಂದೇ ಕರೆಯಲಾಗುವ ಬೆಂಗಳೂರನ್ನು ಸುಂದರ ನಗರಿ ಎಂದು ಪರಿಗಣಿಸಬೇಕೇ ಬೇಡವೇ ಎಂದು ನಿಷ್ಕರ್ಷೆ ಮಾಡುವ ಮುನ್ನ ನಮ್ಮ ಸೌಂದರ್ಯಪ್ರಜ್ಞೆ ಯಾವ ನೆಲೆಯಲ್ಲಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ವೈಮಾನಿಕ ನೋಟದಲ್ಲಿ ಒಂದು ಕಾಲದಲ್ಲಿ ದಟ್ಟ ಹಸಿರು ವನಗಳ ನಡುವೆ ಇರುವಂತೆ ಕಾಣುತ್ತಿದ್ದ ಬೆಂಗಳೂರು ಇಂದು ಅಲ್ಪಸ್ವಲ್ಪ ಹಸಿರನ್ನು ಉಳಿಸಿಕೊಂಡಿದ್ದರೂ ಬೃಹತ್‌ ಕಾಂಕ್ರೀಟ್‌ ಕಾಡಿನಂತೆ ಕಾಣುವುದು ವಾಸ್ತವ. ಇದನ್ನು ಅಭಿವೃದ್ಧಿ, ಪ್ರಗತಿ ಅಥವಾ ಆಧುನಿಕತೆ ಎನ್ನುವುದೇ ಆದರೆ ನಾವು ಇಂದು ಕಾಣುತ್ತಿರುವ ಅನಾಹುತಗಳನ್ನೂ ಸಹ ಸಹಜ ಪ್ರಕ್ರಿಯೆಯೆಂದೇ ಸ್ವೀಕರಿಸಬೇಕಾಗುತ್ತದೆ.

ರಸ್ತೆ, ಮೆಲ್ಸೇತುವೆ, ಚರಂಡಿ, ಒಳಚರಂಡಿ, ರಾಜಕಾಲುವೆ, ಉದ್ಯಾನ ಇವೆಲ್ಲವನ್ನೂ ನಿರ್ವಹಿಸುವ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಆಡಳಿತಾರೂಢ ಸರ್ಕಾರಗಳು ಅಭಿವೃದ್ಧಿ ಎಂಬ ಪರಿಕಲ್ಪನೆಯನ್ನು ಮಾರುಕಟ್ಟೆ ದೃಷ್ಟಿಯಿಂದಲೇ ನೋಡುವುದರಿಂದ, ಈ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಕಾರ್ಪೋರೇಟ್‌ ಔದ್ಯಮಿಕ ಹಿತಾಸಕ್ತಿಯನ್ನು ಪೋಷಿಸುವ, ಮಾರುಕಟ್ಟೆಯನ್ನು ಬೆಳೆಸುವ ಮತ್ತು ಅಂತಾರಾಷ್ಟ್ರೀಯ ಹಣಕಾಸು ಬಂಡವಾಳದ ಹಾದಿಯನ್ನು ಸುಗಮಗೊಳಿಸುವ ಚೌಕಟ್ಟಿನಲ್ಲೇ ರೂಪುಗೊಳ್ಳುತ್ತವೆ. ಒಂದು ನಗರ ಎಷ್ಟು ಬೆಳೆಯುತ್ತದೆ ಎನ್ನುವುದನ್ನೇ ಪ್ರಧಾನವಾಗಿ ಬಿಂಬಿಸಿ ನಮ್ಮ ನಗರದ ಭೂ ವಿಸ್ತೀರ್ಣ ನಿರಂತರವಾಗಿ ಹೆಚ್ಚಾಗುತ್ತಿರುವುದನ್ನು ಸಂಭ್ರಮಿಸುವ ಮೇಲ್ವರ್ಗದ ಸಮಾಜಕ್ಕೆ, ಈ ವಿಸ್ತರಣೆಗೆ ಪೂರಕವಾದ ಮೂಲ ಸೌಕರ್ಯಗಳು ತಳಮಟ್ಟದ ಜನಸಮುದಾಯಗಳಿಗೆ ತಲುಪುವುದೋ ಇಲ್ಲವೋ ಎಂದು ಯೋಚಿಸಲೂ ಮುಂದಾಗುವುದಿಲ್ಲ. ಈ ಹಿತವಲಯದ ಸಮಾಜವನ್ನೇ ಪ್ರಧಾನವಾಗಿ ಪ್ರತಿನಿಧಿಸುವ ಇಂದಿನ ಸರ್ಕಾರಗಳಿಗೆ ಬಂಡವಾಳದ ಒಳಹರಿವು, ಆದಾಯದ ವೃದ್ಧಿ ಮತ್ತು ಬಂಡವಾಳದ ಹೂಡಿಕೆಗಳೇ ಪ್ರಮುಖವಾಗುವುದೇ ಹೊರತು, ಜನಜೀವನ ಅಥವಾ ಜನರ ಜೀವನೋಪಾಯ ಅಲ್ಲ.

ಕಳೆದ 90 ವರ್ಷಗಳಲ್ಲೇ ಅತಿ ಹೆಚ್ಚು ಮಳೆ ಈ ವರ್ಷ ಬೆಂಗಳೂರು ಮತ್ತು ಕರ್ನಾಟಕವನ್ನು ಕಂಗೆಡಿಸಿದೆ. ಈ ಪ್ರಮಾಣದ ಮಳೆಯನ್ನು ತಡೆದುಕೊಳ್ಳುವ ಶಕ್ತಿ ಮತ್ತು ಸಾಮರ್ಥ್ಯ ನಮಗೆ ಇದೆಯೋ ಇಲ್ಲವೋ ಎಂದು ಯೋಚಿಸುವ ಮುನ್ನ, ನಾವೇ ಕಟ್ಟಿಕೊಂಡಿರುವ ಸುಂದರ ನಗರದ ವಿನ್ಯಾಸ, ಶೈಲಿ ಮತ್ತು ವಿಸ್ತಾರವನ್ನೂ ಸೂಕ್ಷ್ಮವಾಗಿ ಗಮನಿಸಬೇಕಿದೆ. ಬಂಡವಾಳದ ವ್ಯಾಮೋಹ ಮತ್ತು ಔದ್ಯಮಿಕ ಪ್ರಗತಿಯ ದಾಹ ಮಾರುಕಟ್ಟೆ ವ್ಯವಸ್ಥೆಯನ್ನು ಪಾಪದ ಕೂಪವನ್ನಾಗಿ ಪರಿವರ್ತಿಸುತ್ತದೆ ಹಾಗೆಯೇ ಸಾಮಾನ್ಯ ಜನರು ಬದುಕ ಬಯಸುವ ವಾತಾವರಣವನ್ನೂ ಕಲುಷಿತಗೊಳಿಸಿಬಿಡುತ್ತದೆ. ಬೆಂಗಳೂರು ಕಳೆದ ಐದು ದಶಕಗಳಲ್ಲಿ ಕಂಡಿರುವ ಹೊರ ವರ್ತುಲ ರಸ್ತೆಗಳತ್ತ ಗಮನ ಹರಿಸಿದಾಗ ಇದು ಸ್ಪಷ್ಟವಾಗುತ್ತದೆ. ಹೊರ ವರ್ತುಲ ರಸ್ತೆ ಎನ್ನುವುದೇ ನಗರ ವಿಸ್ತೀರ್ಣಕ್ಕೆ ಕಡಿವಾಣ ಹಾಕಬೇಕಾದ ಒಂದು ಗಡಿ. ಅದರಿಂದಾಚೆಗೂ ನಗರ ಬೆಳೆಯಬೇಕೆಂದರೆ, ಈ ಬೆಳವಣಿಗೆಗೆ ಪೂರಕವಾದ ಮೂಲ ಸೌಕರ್ಯಗಳು ಮತ್ತು ಸಾರ್ವಜನಿಕ ಸೌಲಭ್ಯಗಳನ್ನು ಮುಂಚಿತವಾಗಿಯೇ ಯೋಚಿಸಬೇಕಾದ್ದು ಆಡಳಿತ ವ್ಯವಸ್ಥೆಯ ಕರ್ತವ್ಯ. ನಗರಾಭಿವೃದ್ಧಿ ಮತ್ತು ಮೂಲ ಸೌಕರ್ಯಗಳ ನಿರ್ಮಾಣದಲ್ಲಿ ವೈಜ್ಞಾನಿಕ ಯೋಜನಾ ವಿಧಾನಗಳನ್ನು ಅನುಸರಿಸದೆ ಹೋದರೆ ಇನ್ನು ನೂರು ವರ್ಷಗಳಲ್ಲಿ ಹತ್ತು ʼಬೆಂಗಳೂರುಗಳುʼ ಸೃಷ್ಟಿಯಾಗುತ್ತವೆ.

ʼನಗರವಾಸಿʼ ಎನಿಸಿಕೊಳ್ಳಲು ಹಾತೊರೆಯುವ ಹಿತವಲಯದ ಒಂದು ವರ್ಗದ ದೃಷ್ಟಿಯಲ್ಲಿ ರಸ್ತೆಗಳ ನವಿರು, ಅಗಲ ಮತ್ತು ವಿಸ್ತೀರ್ಣ ಬಹಳ ಮುಖ್ಯವಾಗಿ ಕಾಣುತ್ತದೆ. ಸಿಲಿಕಾನ್‌ ನಗರ ಎಂದು ಹೆಸರು ಗಳಿಸಲು ಕಾರಣವಾದ ಬೆಂಗಳೂರಿನ ಐಟಿ ಹಬ್‌ ಈ ಹಿತವಲಯದ ಆವಾಸಸ್ಥಾನವಾಗಿದೆ. ಕೃಷ್ಣರಾಜಪುರಂನಿಂದ ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ವರೆಗೆ ವಿಸ್ತರಿಸುವ 17 ಕಿಲೋಮೀಟರ್‌ ಬೆಂಗಳೂರಿನ ಮತ್ತು ಕರ್ನಾಟಕದ ಆರ್ಥಿಕತೆಯ ಕೇಂದ್ರ ಬಿಂದು. ಒಂದು ಅಂದಾಜಿನ ಪ್ರಕಾರ ಈ ವ್ಯಾಪ್ತಿಯಲ್ಲೇ ಹತ್ತು ಲಕ್ಷಕ್ಕೂ ಹೆಚ್ಚು ದುಡಿಮೆಗಾರರಿದ್ದಾರೆ. ಈ ಆಧುನಿಕ ʼ ನವಿರು ಸಾಮ್ರಾಜ್ಯಕ್ಕೆʼ ಅನುಕೂಲಗಳನ್ನು ಕಲ್ಪಿಸದೆ ಹೋದರೆ ಹರಿದುಬಂದ ಬಂಡವಾಳ ಹಾಗೆಯೇ ಹೊರಗೆ ಹರಿದುಹೋಗುತ್ತದೆ ಎಂಬ ಭೀತಿ ಸರ್ಕಾರಗಳನ್ನು ಸದಾ ಕಾಡುತ್ತಲೇ ಇರುತ್ತದೆ. ಈ ವಲಯದಲ್ಲಿ ಹಸಿರು ನಿಷಿದ್ಧವಾಗಿರುತ್ತದೆ. ಭೂಮಿ ಎಂದರೆ ಕೇವಲ ಕಾಂಕ್ರೀಟು, ಸಿಮೆಂಟು, ಗಾರೆ, ನೆಲಹಾಸು ಮತ್ತು ಗ್ರಾನೈಟ್‌ಗಳಿಂದ ಅಲಂಕೃತವಾದ ಒಂದು ಸ್ವತ್ತು ಎನ್ನುವ ಭಾವನೆ ದಟ್ಟವಾಗಿ ಬೇರೂರಿರುತ್ತದೆ. ಗಗನದೆತ್ತರದ ಕಟ್ಟಡಗಳು ಮತ್ತಷ್ಟು ಸುಂದರವಾಗಿ ಕಾಣಬೇಕೆಂದರೆ ಗಾಜಿನ ಗೋಡೆಗಳೇ ಅಲಂಕಾರ ಸಾಧನಗಳಾಗುತ್ತವೆ. ನಿಸರ್ಗ ಒದಗಿಸುವ ಶುದ್ಧವಾಯು ಕಾಂಕ್ರೀಟ್‌ ಗೋಡೆಗಳ ಶಾಖೋತ್ಪನ್ನಕ್ಕೆ ಬಲಿಯಾಗಿ ಬಿಸಿಯಾಗುತ್ತದೆ. ಸುಂದರ ಗಗನಚುಂಬಿಗಳಲ್ಲಿ ಕುಳಿತ ಹಿತವಲಯದ ಸಮಾಜಕ್ಕೆ ಹವಾನಿಯಂತ್ರಣದ ಯಂತ್ರಗಳು ಉಸಿರು ನೀಡುತ್ತವೆ.

ಈ ಅಭಿವೃದ್ಧಿ ಮಾದರಿಯನ್ನು ಉಪೇಕ್ಷೆ ಮಾಡಲಾಗುವುದಿಲ್ಲ. ಏಕೆಂದರೆ ದೇಶದ ಪ್ರಗತಿಯನ್ನು ಅಳೆಯುವುದೇ ಈ ಮಾನದಂಡಗಳ ಮೂಲಕ. ಅತಿ ಹೆಚ್ಚು ಕಾರುಗಳು, ಅತಿ ಎತ್ತರದ ಕಟ್ಟಡಗಳು ಮತ್ತು ನವಿರಾದ ಚತುಷ್ಪಥ-ಷಟ್ಪಥ ರಸ್ತೆಗಳು ಆಧುನಿಕತೆ ಮತ್ತು ಅಭಿವೃದ್ಧಿಯ ಸೂಚಿಗಳಾಗಿಯೇ ಕಾಣುತ್ತವೆ. ಐಟಿ ಕಂಪನಿಗಳ ಈ ಹಿತವಲಯದಲ್ಲಿ ಆಗಸ್ಟ್‌ 30ರಂದು ಬಿದ್ದ ಮಳೆಯಿಂದಲೇ 225 ಕೋಟಿ ರೂ ನಷ್ಟವಾಗಿದೆ ಎಂದು ಐಟಿ ಕಂಪನಿಗಳು ಹುಯಿಲೆಬ್ಬಿಸುತ್ತಿವೆ. ಈ ನಷ್ಟಕ್ಕೆ ಕಾರಣ ಸಿಬ್ಬಂದಿಗಳಿಗೆ ತಮ್ಮ ಕಾರ್ಯಸ್ಥಳಗಳನ್ನು ತಲುಪಲು ಸಾಧ್ಯವಾಗಿಲ್ಲ ಎನ್ನುವುದು. ಸರ್ಕಾರ ಮತ್ತು ಮಾರುಕಟ್ಟೆಯ ದೃಷ್ಟಿಯಲ್ಲಿ ಈ ಮಾರುಕಟ್ಟೆ ನಷ್ಟ ಪ್ರಾಮುಖ್ಯತೆ ಪಡೆಯುತ್ತದೆ. ಈ ನವಿರು ಸಾಮ್ರಾಜ್ಯದಲ್ಲಿ ದುಡಿಯಲು ಬರುವವರು ವಾಸ ಮಾಡುವ ಬಡಾವಣೆಗಳಿಗೂ, ಐಟಿ ಪಾರ್ಕ್‌ಗೂ ನಡುವೆ ಮಳೆಯಿಂದ ಉಂಟಾಗುವ ಅನಾಹುತಗಳು ಮಧ್ಯಮ ವರ್ಗದ ಅಥವಾ ಕೆಳವರ್ಗದ ಜನತೆಯ ಸಮಸ್ಯೆಯಾಗಿ ಉಳಿದುಬಿಡುತ್ತವೆ. ಈ ಹಿತವಲಯದ ಜನರ ನಡುವೆಯೂ ಅಭಿವೃದ್ಧಿ ಮತ್ತು ಪರಿಸರ ಸಮತೋಲನದ ನಡುವೆ ಇರುವ ಸೂಕ್ಷ್ಮ ಸಂಬಂಧಗಳು ಅರ್ಥವಾಗದೆ ಹೋದಾಗ, ಅವೈಜ್ಞಾನಿಕವಾಗಿ ರೂಪುಗೊಂಡಿರುವ ಅಪಾರ್ಟ್‌ಮೆಂಟ್‌ಗಳು, ಬಡಾವಣೆಗಳು, ರಸ್ತೆಗಳು, ಅಂಡರ್‌ಪಾಸ್‌ಗಳು ಅಡೆತಡೆಯಿಲ್ಲದೆ ತಲೆಎತ್ತುತ್ತವೆ.

“ಇಡೀ ಬೆಂಗಳೂರು ಮುಳುಗಿಲ್ಲ” ಎಂದು ಸಮಾಧಾನಪಟ್ಟುಕೊಳ್ಳುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಹೇಳಿರುವಂತೆ ಕಳೆದ 90 ವರ್ಷಗಳಲ್ಲೇ ಅತಿ ಹೆಚ್ಚು ಮಳೆ ಈ ಬಾರಿ ಅಪ್ಪಳಿಸಿದೆ. 90 ವರ್ಷಗಳ ಹಿಂದೆ ರೀತಿಯ ಮಳೆ ಬಂದಿದ್ದರೆ ಬೆಂಗಳೂರಿನ ಒಂದು ಭಾಗವೂ ಮುಳುಗುತ್ತಿರಲಿಲ್ಲ. ಏಕೆಂದರೆ ಆಗ ಬೆಂಗಳೂರಿನಲ್ಲಿ ನೂರಾರು ಕೆರೆಗಳು ಜೀವಂತಿಕೆಯಿಂದಿದ್ದವು. ಹಸಿರು ಅರಣ್ಯ ನಗರಕ್ಕೆ ಹೊದಿಕೆಯಂತೆ ಕಾಣುತ್ತಿತ್ತು. ಬಹುತೇಕ ಎಲ್ಲ ಬಡಾವಣೆಗಳಲ್ಲೂ ರಸ್ತೆಯ ಇಕ್ಕೆಲಗಳಲ್ಲಿ ಹಸಿರು ಕಂಗೊಳಿಸುತ್ತಿತ್ತು. ಅತ್ಯಾಧುನಿಕ ಒಳಚರಂಡಿ ವ್ಯವಸ್ಥೆ ಇಲ್ಲದಿದ್ದರೂ ಮಳೆ ನೀರನ್ನು ಸೆಳೆದುಕೊಳ್ಳಲು ಭೂಮಿ ಸಿದ್ಧವಾಗಿತ್ತು. ಈ ನೀರು ಇಂಗುವ ಪ್ರಕ್ರಿಯೆಯ ಸ್ವಾಭಾವಿಕವಾದದ್ದು. ನಿಸರ್ಗ ತಾನು ಮಾಡುವ ಅನಾಹುತಗಳಿಗೆ ತನ್ನೊಳಗೇ ಪರಿಹಾರ ಮಾರ್ಗಗಳನ್ನೂ ನಿರ್ಮಿಸಿಕೊಂಡಿರುತ್ತದೆ. ಕೆರೆ ಕುಂಟೆಗಳು, ಹಸಿರು ವಲಯಗಳು, ಉದ್ಯಾನಗಳು ಮತ್ತು ಸಾಲು ಮರಗಳು ಈ ನಿಟ್ಟಿನಲ್ಲಿ ಸಹಾಯಕವಾಗಿರುತ್ತವೆ. ಈ ಎಲ್ಲ ಸ್ವಾಭಾವಿಕ ನಿಸರ್ಗ ನೆಲೆಗಳನ್ನೂ ಧ್ವಂಸ ಮಾಡಿ, ಶಾಖೋತ್ಪನ್ನ ಮಾಡುವಂತಹ ಕಾಂಕ್ರೀಟ್‌ ಭೂಮಿಯನ್ನು ನಿರ್ಮಿಸುವುದರ ಪರಿಣಾಮವನ್ನು ನಾವು ಎದುರಿಸುತ್ತಿದ್ದೇವೆ.

 

ಬೆಂಗಳೂರು ಎಂದು ನಾವು ಇಂದು ಗುರುತಿಸುವ ಭೂಪ್ರದೇಶ ಸುತ್ತಲಿನ ಹಲವಾರು ಹಳ್ಳಿಗಳನ್ನು ನುಂಗಿ ಬೆಳೆದಿರುವ ಒಂದು ಆಧುನಿಕ ನಗರ. ಸಾವಿರ ಕೆರೆಗಳ ಪ್ರದೇಶ ಎಂದೇ ಚಾರಿತ್ರಿಕವಾಗಿ ಪ್ರಸಿದ್ಧಿ ಪಡೆದಿದ್ದ ಈ ಪ್ರದೇಶದಲ್ಲಿ 1960ರ ವೇಳೆಗೆ ಕೇವಲ 280 ಕೆರೆಗಳು ಉಳಿದಿದ್ದವು. ಈಗ 80 ಕೆರೆಗಳಿವೆ. ಆದರೆ ಈ ಬೃಹತ್‌ ಬೆಂಗಳೂರು ಆಪೋಷನ ತೆಗೆದುಕೊಂಡಿರುವ ಸುತ್ತಲಿನ ಗ್ರಾಮ ಮತ್ತು ಅರಣ್ಯ ಪ್ರದೇಶಗಳನ್ನು ಒಳಗೊಂಡಂತೆ ಆಧುನಿಕ ಬೆಂಗಳೂರು 189 ಕೆರೆಗಳನ್ನು ಹೊಂದಿದೆ. ಇದರ ಪೈಕಿ 69 ಕೆರೆಗಳು ಈ ಬಾರಿಯ ಅತಿವೃಷ್ಟಿಯಿಂದ ತುಂಬಿ ಹರಿಯುತ್ತಿವೆ. ಕೆರೆಗಳು ತುಂಬುವುದು ಸಹಜ, ತುಂಬಿ ಹರಿಯುವುದೂ ಸಹಜ ಆದರೆ ಈ ಹರಿಯುವ ಹೆಚ್ಚುವರಿ ನೀರು ರಸ್ತೆಗಳಿಗೆ ಮನೆಗಳಿಗೆ ನುಗ್ಗುವುದು ಸಹಜವಲ್ಲ. ಇದು ನಾವು ಮಾಡಿಕೊಂಡಿರುವ ಅವಾಂತರ. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿರುವಂತೆ ಅವರ ಅಧಿಕಾರಾವಧಿಯಲ್ಲೇ 11 ಸಾವಿರಕ್ಕೂ ಹೆಚ್ಚು ಎಕರೆ ಜಮೀನು ಬೆಂಗಳೂರಿನ ಸುತ್ತಮುತ್ತ ಒತ್ತುವರಿಯಾಗಿತ್ತು. ಇದರಲ್ಲಿ ಕೆರೆಕಟ್ಟೆಗಳೂ ಸೇರಿವೆ. ಇದನ್ನು ತೆರವುಗೊಳಿಸುವ ಪ್ರಕ್ರಿಯೆಯೂ ಜಾರಿಯಾಗಿತ್ತು. ಹಾಲಿ ಮುಖ್ಯಮಂತ್ರಿಯವರು ಇಂದಿನ ಅನಾಹುತಕ್ಕೆ ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಆದ ಒತ್ತುವರಿ ಕಾರಣ ಎಂದು ಹೇಳುತ್ತಾರೆ. ಈ 10 ವರ್ಷಗಳ ಅವಧಿಯಲ್ಲಿ 11 ಸಾವಿರ ಎಕರೆ ಒತ್ತುವರಿ ಪ್ರದೇಶವನ್ನು ತೆರವುಗೊಳಿಸಲಾಗಿದೆಯೇ ಅಥವಾ ಒತ್ತುವರಿಯಾದ ಭೂ ಪ್ರದೇಶ ಹೆಚ್ಚಾಗಿದೆಯೇ ಎಂಬ ವಾಸ್ತವವನ್ನು ಜನತೆಗೆ ತಿಳಿಸಬೇಕಾದ್ದು ಇಬ್ಬರೂ ನಾಯಕರ ನೈತಿಕ ಜವಾಬ್ದಾರಿ ಅಲ್ಲವೇ ?

ʼರಾಜಕಾಲುವೆʼ ಎಂದು ಗೌರವಯುತ ಹೆಸರು ಪಡೆದಿರುವ ಹೆಚ್ಚುವರಿ ನೀರು, ತ್ಯಾಜ್ಯ ಮತ್ತು ವರ್ಜಿತ ಪದಾರ್ಥಗಳು ಹರಿಯುವ ಈ ಕಾಲುವೆಗಳ ಮೇಲೆ ಎಷ್ಟು ಮನೆಗಳು, ವಿಲ್ಲಾಗಳು, ಅಪಾರ್ಟ್‌ಮೆಂಟ್‌ಗಳು, ವಿದ್ಯಾಸಂಸ್ಥೆಗಳು ನಿರ್ಮಾಣವಾಗಿವೆ ಎಂಬ ಮಾಹಿತಿಯನ್ನೂ ಸರ್ಕಾರ ನೀಡಬೇಕಿದೆ. ರಾಜಕಾಲುವೆಗಳ ಒತ್ತುವರಿಯಿಂದಲೇ ಮಳೆನೀರು ಹರಿಯಲು ಜಾಗವಿಲ್ಲದೆ ಮನೆಗಳೊಳಗೆ ನುಗ್ಗುತ್ತಿದೆ. ಕೆರೆ ಪ್ರದೇಶಗಳನ್ನು ನುಣ್ಣಗೆ ಬೋಳಿಸಿ ಕಾಂಕ್ರೀಟ್‌ ಕಾಡುಗಳನ್ನು ನಿರ್ಮಿಸುವ ಮುನ್ನ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಸರ್ಕಾರಗಳು, ಇಂಜಿನಿಯರುಗಳು, ಸ್ವಲ್ಪಮಟ್ಟಿಗಾದರೂ ವಿವೇಕ ಮತ್ತು ವಿವೇಚನೆಯನ್ನು ಉಪಯೋಗಿಸಿದ್ದಲ್ಲಿ, ಇಂದು ಬೆಂಗಳೂರಿನ ಬಡಾವಣೆಗಳು ಹೊಳೆಗಳಾಗುತ್ತಿರಲಿಲ್ಲ. ಯಾವುದೇ ಕೆರೆಯ ಸಮೀಪ ರಸ್ತೆ, ಸೇತುವೆ, ಬಡಾವಣೆ ನಿರ್ಮಿಸಬೇಕೆಂದರೂ, ಒಂದು ವೇಳೆ ಕೆರೆ ತುಂಬಿ ಕೋಡಿ ಹರಿದರೆ ನೀರು ಎತ್ತ ಹರಿಯಬೇಕು ಎಂಬ ದೂರಾಲೋಚನೆ ಇರಲೇಬೇಕಲ್ಲವೇ? ಈ ದೂರಾಲೋಚನೆಯೇ ನಮ್ಮ ಮೂಲ ಸೌಕರ್ಯಗಳ ಯೋಜನೆಗಳನ್ನು ರೂಪಿಸುವವರಿಗೂ ಇರಬೇಕಲ್ಲವೇ? ಇದು ಇಲ್ಲವಾದಾಗ ಜನರು ರಸ್ತೆಗಳಲ್ಲೂ ತೆಪ್ಪ ಸಂಚಾರ ಮಾಡುವ ದುರ್ಗತಿ ಎದುರಾಗುತ್ತದೆ.

ಹೊಲ, ಗದ್ದೆ, ತೋಟ ಮತ್ತು ಕೆರೆ ಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಅಂತರ್ಜಲ ಮಟ್ಟ ಹೆಚ್ಚಾಗಿರುತ್ತದೆ. ಸಾಮಾನ್ಯ ಭೂ ಪ್ರದೇಶಕ್ಕಿಂತಲೂ ಕೆಳಗಿನ ಹೊಲಗದ್ದೆಗಳನ್ನು ನಿವೇಶನಗಳಾಗಿ ಪರಿವರ್ತಿಸುವ ಮುನ್ನ ನಗರಾಭಿವೃದ್ಧಿ ಪ್ರಾಧಿಕಾರಗಳು ಇದನ್ನೂ ಯೋಚಿಸಬೇಕು. ಬೋರ್‌ವೆಲ್‌ ತೋಡಿಸಿದಾಗ ಬೇಗನೆ ನೀರು ದೊರೆಯುವಂತಾದರೆ ಅಲ್ಲಿ ಅಂತರ್ಜಲಮಟ್ಟ ಹೆಚ್ಚಿದೆ ಎಂದೇ ಅರ್ಥ. ಅದು ತಗ್ಗು ಪ್ರದೇಶವಾದರೆ ಸಹಜವಾಗಿಯೇ ಭಾರಿ ಮಳೆ ಬಂದಾಗ ಇಡೀ ಪ್ರದೇಶವೇ ಹೊಳೆಯಂತಾಗುತ್ತದೆ. ಕೆರೆ ದಂಡೆಯ ಮತ್ತೊಂದು ಬದಿಯಲ್ಲಿ ಮತ್ತು ತಗ್ಗು ಪ್ರದೇಶದ ಹೊಲಗದ್ದೆಗಳಲ್ಲಿ ಬಡಾವಣೆಗಳನ್ನು ನಿರ್ಮಿಸುವ ಮುನ್ನ, ಸಂಭಾವ್ಯ ಅತಿವೃಷ್ಟಿಯನ್ನು ಎದುರಿಸಬೇಕಾದ ಸೂಕ್ತ ರಕ್ಷಣಾ ಕವಚಗಳನ್ನೂ ನಿರ್ಮಿಸುವುದು ನಗರಾಡಳಿತದ ನೈತಿಕ ಜವಾಬ್ದಾರಿ. ಆದರೆ ತನ್ನ ಸುತ್ತಲಿನ ಎಲ್ಲ ಗ್ರಾಮಗಳನ್ನೂ ನುಂಗಿಹಾಕುತ್ತಲೇ ಬೆಳೆಯುತ್ತಿರುವ ಬೆಂಗಳೂರು ನಿಶ್ಚಿಂತೆಯಿಂದ ವಿಸ್ತರಿಸುತ್ತಲೇ ಇದೆ. ತಮ್ಮ ಗ್ರಾಮೀಣ ಬದುಕಿನ ನೆಲೆಯನ್ನು ಕಳೆದುಕೊಂಡ ಸಾಮಾನ್ಯ ಜನತೆ ತಮ್ಮದೇ ನೆಲ ನಗರೀಕರಣಕ್ಕೊಳಗಾಗಿ, ನಗರ ಎನಿಸಿಕೊಂಡಾಗ, ಅಲ್ಲಿಯೇ ವಲಸೆ ಕಾರ್ಮಿಕರಾಗಿ, ದಿನಗೂಲಿ ನೌಕರರಾಗಿ ದುಡಿಯುವಂತಹ ಒಂದು ಕ್ರೂರ ಸಮಾಜಕ್ಕೆ ಬೆಂಗಳೂರು ಇಂದು ಸಾಕ್ಷಿಯಾಗಿದೆ.

ಕೆರೆ, ಅರಣ್ಯ ಮತ್ತು ಸಾರ್ವಜನಿಕ ಭೂ ಒತ್ತುವರಿಯಾಗುತ್ತಿರುವುದು ಅಧಿಕಾರ ರಾಜಕಾರಣದ ಕೃಪಾಕಟಾಕ್ಷ ಇರುವ ರಿಯಲ್‌ ಎಸ್ಟೇಟ್‌ ಉದ್ಯಮಿಗಳಿಂದ. ಬೆಳೆಯುತ್ತಿರುವ ಬೃಹತ್‌ ಬೆಂಗಳೂರಿನ ಆರ್ಥಿಕ ಫಲಾನುಭವಿಗಳು ಆಧುನಿಕತೆಯ-ಐಟಿ ವಲಯದ ಫಲಾನುಭವಿಗಳು. ಆದರೆ ಈ ರೀತಿಯ ಅತಿವೃಷ್ಟಿ ಮತ್ತು ಮಳೆಹಾನಿಯಿಂದ ಇನ್ನು ಹಲವು ವರ್ಷಗಳ ಕಾಲ ಸಂಕಷ್ಟ ಎದುರಿಸುವುದು, ಈ ʼಸುಂದರ ನಗರಿʼಯನ್ನು ನಿರ್ಮಿಸಲು ಬೆವರು ಸುರಿಸುವ ದುಡಿಯುವ ವರ್ಗ. ಹೊಳೆಯಂತಾಗಿರುವ ಬೆಂಗಳೂರಿನ ಐಟಿ ಹಬ್‌ನಿಂದ ಜೀವನ ಸವೆಸುವ ಮೇಲ್ವರ್ಗದ ಸಿಬ್ಬಂದಿ ಮನೆಯಲ್ಲೇ ಕುಳಿತು ಕೆಲಸ ಮಾಡಿ ಸಂಬಳ ಗಳಿಸುತ್ತಾರೆ. ಆದರೆ ಇಲ್ಲಿಗೆ ತಲುಪದೆ ಹೋದರೆ ತಮ್ಮ ದಿನಗೂಲಿ/ಒಪ್ಪೊತ್ತಿನ ಊಟವನ್ನೂ ಕಳೆದುಕೊಳ್ಳುವ ಕಾರ್ಮಿಕರ ಪಾಡೇನು? ಸರ್ಕಾರ ಮತ್ತು ಸಮಾಜ ಯೋಚಿಸಬೇಕಿರುವುದು ಇವರ ಬಗ್ಗೆ ಅಲ್ಲವೇ? ಡೆಂಗಿ ಮುಂತಾದ ರೋಗಗಳಿಗೆ ತುತ್ತಾಗುವವರೂ ಇವರೇ. ಇವರ ಆರೋಗ್ಯ ರಕ್ಷಣೆಗೆ ಸರ್ಕಾರ ಏನು ಕ್ರಮ ಕೈಗೊಳ್ಳುತ್ತಿದೆ?

ಭೂ ಸ್ವಾಧೀನ ಇಲ್ಲದೆ, ಒತ್ತುವರಿ ಇಲ್ಲದೆ, ಅಕ್ರಮ ನಿರ್ಮಾಣ ಇಲ್ಲದೆ ಯಾವುದೇ ನಗರಗಳೂ ಬೆಳೆಯುವುದಿಲ್ಲ. ಇದು ಬಂಡವಾಳಶಾಹಿ ವ್ಯವಸ್ಥೆಯ ಒಂದು ಲಕ್ಷಣ. ಸ್ವಾಧೀನಗೊಂಡ ಭೂಮಿಯಲ್ಲಿ ವಿಲ್ಲಾಗಳನ್ನು ನಿರ್ಮಿಸಿ ಸಂಭ್ರಮಿಸುವ ಮೇಲ್ವರ್ಗದ ಹಿತವಲಯಕ್ಕೆ ನೆಲೆ ಕಳೆದುಕೊಂಡವರ ನೋವು ಕಾಣುವುದೂ ಇಲ್ಲ ಅರ್ಥವಾಗುವುದೂ ಇಲ್ಲ. ಏಕೆಂದರೆ ಆಧುನಿಕ ಅಭಿವೃದ್ಧಿ ಸಂಕಥನದಲ್ಲಿ ನೆಲೆ ಕಳೆದುಕೊಳ್ಳುವವರ ತ್ಯಾಗ, ಸಂಭಾವ್ಯ ಫಲಾನುಭವಿಗಳ ಉದ್ಧಾರಕ್ಕೆ ಅನಿವಾರ್ಯವಾಗಿರುತ್ತದೆ. ಒಂದು ಕೆರೆ ಒತ್ತುವರಿಯಾದರೆ ಅದು ನೂರಾರು ಕುಟುಂಬಗಳ ನಿರ್ಗತಿಕತೆಗೆ ಕಾರಣವಾಗುತ್ತದೆ ಎಂಬ ಸರಳ ಸೂಕ್ಷ್ಮವನ್ನೂ ಗ್ರಹಿಸಲಾರದಷ್ಟು ಮಟ್ಟಿಗೆ ಆಧುನಿಕತೆ ನಮ್ಮ ಪ್ರಜ್ಞೆಯನ್ನು ಆವರಿಸಿಬಿಟ್ಟಿದೆ. ಎಕರೆಗಟ್ಟಲೆ ಪ್ರದೇಶದಲ್ಲಿ ನಿರ್ಮಿಸಲಾಗುವ ಬೃಹತ್‌  ಅಪಾರ್ಟ್‌ಮೆಂಟ್‌ಗಳಲ್ಲಿ ಈಜುಕೊಳವನ್ನು ನಿರೀಕ್ಷಿಸುವ ಸುಶಿಕ್ಷಿತ ಸಮಾಜ, ಅಪ್ಪಿತಪ್ಪಿಯೂ ಉದ್ಯಾನವನ್ನು ಅಪೇಕ್ಷಿಸುವುದಿಲ್ಲ. ಮಳೆನೀರನ್ನು ಹೀರಿಕೊಳ್ಳುವ ನಿಸರ್ಗದತ್ತ ಮೂಲಗಳನ್ನೂ ನುಂಗಿ ಬೆಳೆಯುವ ಕಾಂಕ್ರೀಟ್‌ ನೆಲಹಾಸುಗಳು, ಕಟ್ಟಡಗಳು ಸಹಜವಾಗಿಯೇ ಅತಿವೃಷ್ಟಿಯಾದಾಗ ಈಜುಕೊಳವಾಗುತ್ತವೆ.

ಅಧಿಕಾರ ರಾಜಕಾರಣಕ್ಕೆ ರಿಯಲ್‌ ಎಸ್ಟೇಟ್‌ ಮತ್ತು ಗಣಿ ಉದ್ಯಮ ಮೆಟ್ಟಿಲಾಗಿರುವುದರಿಂದಲೇ ಇಂದು ನಗರಾಭಿವೃದ್ಧಿ ಎಂಬ ಪರಿಕಲ್ಪನೆಯೂ ಒತ್ತುವರಿ ಮತ್ತು ಅಕ್ರಮಗಳ ಮೂಲಕವೇ ಸಾಕಾರಗೊಳ್ಳುತ್ತದೆ. ಗ್ರಾನೈಟ್‌ ಉದ್ಯಮ, ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆ, ರಿಯಲ್‌ ಎಸ್ಟೇಟ್‌ ಉದ್ಯಮ ಮತ್ತು ನಗರಾಭಿವೃದ್ಧಿ ಇವೆಲ್ಲದರ ಅನೈತಿಕ ಸಂಬಂಧವನ್ನು ಈ ವರ್ಷದ ಅತಿವೃಷ್ಟಿ ಬಯಲುಮಾಡಿದೆ. ಅಭಿವೃದ್ಧಿಯ ಪಥದಲ್ಲಿ ಹರಿದಾಡುವ ಭ್ರಷ್ಟ ಹಣ ಮತ್ತು ಅಕ್ರಮ ಸಂಪತ್ತು ಅಧಿಕಾರಶಾಹಿಯ ನರನಾಡಿಗಳಲ್ಲೂ ಹರಡಿರುವುದನ್ನು ಇತ್ತೀಚಿನ ಕೆಲವು ಹಗರಣಗಳು ಸ್ಪಷ್ಟವಾಗಿ ತೆರೆದಿಟ್ಟಿವೆ. ಸ್ವಾಭಾವಿಕವಾಗಿ ಮಳೆನೀರನ್ನು ಹೀರಿಕೊಳ್ಳುವ ಭೂ ಪ್ರದೇಶವನ್ನು ಕಾಂಕ್ರೀಟ್‌ ಹಾಸುಗಳ ಮೂಲಕ ಒಣಗಿಸಲಾಗಿದ್ದು, ಮತ್ತೊಂದೆಡೆ ಮಳೆನೀರಿನ ಸ್ವಾಭಾವಿಕ ಸಂಗ್ರಹಾಗಾರಗಳಾದ ಕೆರೆಗಳನ್ನೂ ಕಾಂಕ್ರೀಟ್‌ಮಯ ಮಾಡುವ ಅಭಿವೃದ್ಧಿಯ ಅವೈಜ್ಞಾನಿಕ ವಿಧಾನವೇ ಇಂದಿನ ದುರಂತಗಳಿಗೆ ಕಾರಣವಾಗಿದೆ. ನಗರಾಭಿವೃದ್ಧಿ ಯೋಜನೆಯನ್ನು ರೂಪಿಸುವರು ಮಾರುಕಟ್ಟೆ ಶಕ್ತಿಗಳಿಂದ ಮುಕ್ತವಾಗಿ, ನಿಸರ್ಗ ಸಹಜ ವ್ಯತ್ಯಯಗಳನ್ನು ಎದುರಿಸಲು ಶಕ್ಯವಾದ ಒಂದು ವೈಜ್ಞಾನಿಕ ತಳಹದಿಯ ಅಭಿವೃದ್ಧಿ ಮಾದರಿಯನ್ನು ರೂಪಿಸುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ.

90 ವರ್ಷಗಳಲ್ಲೇ ಅತಿ ಹೆಚ್ಚು ಮಳೆಯಾಗಿರುವುದು ನಿಸರ್ಗದತ್ತ ವಿದ್ಯಮಾನ. ಈ ಮಳೆಯನ್ನು ಎದುರಿಲಾಗದೆ ತಿಣುಕಾಡುತ್ತಿರುವುದು ನಮ್ಮ ಆಡಳಿತ ವ್ಯವಸ್ಥೆಯ ದೌರ್ಬಲ್ಯ ಮತ್ತು ನ್ಯೂನತೆ. ಇದು ಅನಿರೀಕ್ಷಿತ ಎಂದು ಹೇಳುವುದು ಈ ವ್ಯವಸ್ಥೆಯಲ್ಲಿನ ದೂರದೃಷ್ಟಿಯ ಕೊರತೆ. ನೈಸರ್ಗಿಕ ವಿಕೋಪಗಳಿಂದ ರಕ್ಷಿಸಿಕೊಳ್ಳುವ ವಿಧಾನಗಳನ್ನು ವಿಜ್ಞಾನ ಕಲ್ಪಿಸುತ್ತದೆ. ಆದರೆ ಅಭಿವೃದ್ಧಿಯ ಹಾದಿಯಲ್ಲಿ ವೈಜ್ಞಾನಿಕ ಚಿಂತನೆ ಇಲ್ಲದೆ ಹೋದಾಗ ಮತ್ತಷ್ಟು ʼ ಸುಂದರ ನಗರಿಗಳು ʼ ಸೃಷ್ಟಿಯಾಗುತ್ತವೆ.

Donate Janashakthi Media

Leave a Reply

Your email address will not be published. Required fields are marked *