ಕನಿಷ್ಠ ವೇತನಕ್ಕೆ ಆಗ್ರಹಿಸಿ ಸಂಸದರ ಕಚೇರಿ ಮುಂದೆ ಕಾರ್ಮಿಕರ ಧರಣಿ

ಬೆಂಗಳೂರು: ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಗಾಗಿ, ಹಾಗೂ ರೈತ – ಕಾರ್ಮಿಕ ವಿರೋಧಿ ಕಾನೂನುಗಳ ವಾಪಸ್ಸಾತಿಗೆ ಆಗ್ರಹಿಸಿ ಸಂಸದರ ಕಚೇರಿ ಮುಂದೆ ಸಿಐಟಿಯು ನೇತೃತ್ವದಲ್ಲಿ ರಾಜ್ಯವ್ಯಾಪಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯದ ಎಲ್ಲಾ ಸಂಸದರ ಕಚೇರಿ ಮುಂಭಾಗ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿಭಟನೆಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. 25 ರವರೆಗೆ ಪ್ರತಿಭಟನೆ ಮುಂದುವರೆಯಲಿದೆ ಎಂದು ಸಿಐಟಿಯು ರಾಜ್ಯ ಸಮಿತಿ ತಿಳಿಸಿದೆ. ಕನಿಷ್ಠ

ಬೆಂಗಳೂರು :  ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ನಡೆದ ಮೊದಲ ದಿನದ ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಭಾಗಿಯಾಗಿದ್ದರು.  ಪ್ರತಿಭಟನೆಯನ್ನುದ್ದೇಶಿಸಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ಕಳೆದ 10 ವರ್ಷಗಳಿಂದ ದೇಶದ ಕಾರ್ಮಿಕ ವರ್ಗ ತೀವ್ರ ಸಂಕಷ್ಟದಲ್ಲಿದ್ದು, ಬದುಕು ಸಾಗಿಸಲು ಹರಸಾಹಸಪಡುವಂತಾಗಿದೆ. ದೇಶವನ್ನಾಳುವ ನರೇಂದ್ರ ಮೋದಿ ಸರಕಾರ ನಿರಂತರವಾಗಿ ಕಾರ್ಪೊರೇಟ್ ಪರ ನೀತಿಗಳನ್ನು ಜಾರಿಗೊಳಿಸುತ್ತಿದೆ. ದೇಶದ ಪ್ರಮುಖ ಕಾರ್ಮಿಕ ಕಾನೂನುಗಳನ್ನು ಸಂಹಿತೆಯನ್ನಾಗಿ ರೂಪಿಸಲು ಹೊರಟಿದ್ದು, ಮತ್ತೆ ಕಾರ್ಮಿಕರನ್ನು ಗುಲಾಮರನ್ನಾಗಿ ದುಡಿಸುವ ಷಡ್ಯಂತ್ರ ಅಡಗಿದೆ. ಕನಿಷ್ಠ ಕೂಲಿ, ಸಾಮಾಜಿಕ ಭದ್ರತೆ ಇಲ್ಲದೆ ಅಸಂಘಟಿತ ಕ್ಷೇತ್ರದ ಕಾರ್ಮಿಕರು ಅತ್ಯಂತ ನಿಕೃಷ್ಟವಾಗಿ ಬದುಕುವಂತಾಗಿದೆ. ಕೇಂದ್ರ ಸರಕಾರದ ಯೋಜನೆಯಡಿಯಲ್ಲಿ ದುಡಿಯುವ ಸ್ಕೀಂ ನೌಕರರಾದ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರು ತಮ್ಮ ಅಸ್ತಿತ್ವಕ್ಕಾಗಿ ಹೆಣಗಾಡುವಂತಾಗಿದೆ. ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೊರೇಟ್ ಕಂಪೆನಿಗಳ ಕೈಗೊಪ್ಪಿಸಿ ದೇಶದ ಆರ್ಥಿಕತೆಯನ್ನೇ ದಿವಾಳಿಯೆಬ್ಬಿಸಿದೆ.ಇಂತಹ ಸಂದರ್ಭದಲ್ಲಿ ದೇಶದ ಜನತೆಯ ಬದುಕನ್ನು ಸಂರಕ್ಷಿಸಲು ಕಾರ್ಮಿಕ ವರ್ಗ ಒಂದಾಗಿ ಸಮರಧೀರ ಹೋರಾಟಕ್ಕೆ ಮುಂದಾಗಿದೆ ಎಂದರು.

ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ

ಸಿಐಟಿಯು ರಾಜ್ಯಾಧ್ಯಕ್ಷೆ ಎಸ್‌ ವರಲಕ್ಷ್ಮಿ ಮಾತನಾಡಿ, ಕೇಂದ್ರ ಸರ್ಕಾರದ ನವ ಉದಾರೀಕರಣ ನೀತಿಗಳ ಜಾರಿಯ ವೇಗದಲ್ಲಿ ತನ್ನ ನೀತಿಗಳ ಪರಿಕಲ್ಪನೆಯನ್ನು ಬದಲಾಯಿಸಿ ದೇಶದ ಅಭಿವೃದ್ಧಿಯ ಸಂಕೇತಗಳಾದ ಮಕ್ಕಳು ಮತ್ತು ಮಹಿಳೆಯರಿಗಾಗಿ ಕೊಡುವ ಸವಲತ್ತುಗಳಿಗೆ 90% ರಿಂದ 60% ಪಾಲನ್ನು ಕಡಿತ ಮಾಡಿ 2021 ರ ಬಜೆಟ್‌ನಲ್ಲಿ 8542 ಕೋಟಿ ರೂಗಳನ್ನು ಕಡಿತ ಮಾಡುವ ಮುಖಾಂತರ ಕತ್ತರಿ ಹಾಕುತ್ತಿದೆ, ಇದರಿಂದ ದೇಶದ 11-12 ಕೋಟಿ ಫಲಾನುಭವಿಗಳು ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು.

ಸಂಸತ್ ನ 146 ಜನ ಸದಸ್ಯರನ್ನು  ಹೊರಗೆ ಹಾಕಿ  ಲೋಕ¸ಭೆಯಲ್ಲಿ 18, ರಾಜ್ಯ ಸಭೆಯಲ್ಲಿ 17 ಬಿಲ್ ಗಳನ್ನು ಮಂಡಿಸಿ ಅಂಗೀಕರಿಸಿದೆ. ಇದು  ಪ್ರಜಾ ತಂತ್ರಕ್ಕೆ  ಎಸಗಿದ ದ್ರೋಹ,  ಬಡ ಜನತೆಯ ಯೋಜನೆಗಳಿಗೆ  ಹಣ ನೀಡದ  ಸರ್ಕಾರ ದೇಶದ ಬಂಡವಾಳಗಾರರು ಮತ್ತು ಕಾರ್ಪೋರೇಟ್ ಕಂಪನಿಗಳಿಗೆ 14.5 ಲಕ್ಷ ಕೋಟಿ ಸಾಲ ಮನ್ನ ಮಾಡಿದೆ. ರೈತ – ಕಾರ್ಮಿಕರ  ಮತ್ತು ಜನತೆಯ ಪ್ರಶ್ನೆಗಳನ್ನು  ಪರಿಹರಿಸದೆ  ಜನ ವಿರೋಧಿಯಾಗಿ ವರ್ತಿಸುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ಬಿಸಿಯೂಟ ನೌಕರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಾಲಿನಿ ಮೇಸ್ತ, ಅಂಗನವಾಡಿ ನೌಕರರ ಸಂಘಟನೆಯ ಟಿ.ಲೀಲಾವತಿ, ನಾಗರತ್ನ, ಬಿ. ಎನ್ ಮಂಜುನಾಥ್  ಸುಮಿತ್ರ ಸೇರಿದಂತೆ ಅನೇಕರಿದ್ದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಮನವಿ ಸ್ವೀಕರಿಸಿ ರಾಜ್ಯವ್ಯಾಪ್ತಿಯಲ್ಲಿರುವ ಬೇಡಿಕೆಗಳ ಕುರಿತು ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.

ತುಮಕೂರಿನಲ್ಲಿ ಜಮಾವಣೆಗೊಂಡ ಕಾರ್ಮಿಕರು

 ತುಮಕೂರು : ಟೌನ್ ಹಾಲ್ ನಿಂದ ಜಿಲ್ಲಾಧಿಕಾರಿಗೆ ಕಚೇರಿಗೆ ಮೇರವಣಿಗೆ ನಡೆಸಿ ಸಂಸತ್ ಸದಸ್ಯರ   ಕಛೇರಿ ಎದರು  ಧರಣಿ ಆರಂಭಿಸಿದ್ದಾರೆ. ಪ್ರತಿಭಟನೆಯನ್ನುದೇಶಿಸಿ ಸಿಐಟಿಯು ಜಿಲ್ಲಾಧ್ಯಕ್ಷ  ಸೈಯದ್ ಮುಜೀಬ್ ಮಾತನಾಡಿ,  ಐಸಿಡಿಎಸ್‌ ಯೋಜನೆಯಡಿ ದೇಶದಲ್ಲಿ ಸುಮಾರು 11 ಕೋಟಿ ಮಕ್ಕಳು ಮತ್ತು 2 ಕೋಟಿ ಗರ್ಭಿಣಿ, ಬಾಣಂತಿಯರು ಫಲಾನುಭವಿಗಳಾಗಿದ್ದಾರೆ. ಯೋಜನೆಯಿಂದ ಅಪೌಷ್ಠಿಕತೆ, ತಾಯಿ ಮಕ್ಕಳ ಮರಣ ತಡೆಯಲು ಸಾಧ್ಯವಾಗಿದೆ. ಆದರೆ, ಅನುದಾನ ಕಡಿತದಿಂದಾಗಿ ಯೋಜನೆಯ ಫಲಾನುಭವಿಗಳಿಗೆ ಆಹಾರ, ಶಿಕ್ಷಣಕ್ಕೆ ತುಂಬಾ ತೊಂದರೆಯಾಗಲಿದೆ. ಇದರಿಂದ ಅಪೌಷ್ಠಿಕತೆಯ ಮಟ್ಟ ಹೆಚ್ಚಾಗಲಿದೆ ಎಂದರು.

ಪ್ರತಿಭಟನೆಯಲ್ಲಿ, ಕಮಲ, ಗುಲ್ಜಾರ್‌ಭಾನು, ಅನಸೂಯ, ಕೆಂಚಮ್ಮ ಸೇರಿದಂತೆ ಸಾವಿರಾರು ಜನ ಕಾರ್ಮಿಕರಿದ್ದರು.

ಹಾಸನದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅಂಗನವಾಡಿ, ಬಿಸಿಯೂಟ ನೌಕರರು

ಕೋಲಾರ : ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಹಳೆ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿರುವ ಸಂಸದ ಎಸ್ ಮುನಿಸ್ವಾಮಿ ಅವರ ಕಛೇರಿಯವರಗೆ ಕಾಲ್ನಡಿಗೆಯಲ್ಲಿ ಆಗಮಿಸಿದ ಅಂಗನವಾಡಿ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ದೇಶದಲ್ಲಿ ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೊರೇಟ್ ಕಂಪೆನಿಗಳ ಕೈಗೊಪ್ಪಿಸಿ ದೇಶದ ಆರ್ಥಿಕತೆಯನ್ನೇ ದಿವಾಳಿಯೆಬ್ಬಿಸಿದೆ.ಇಂತಹ ಸಂದರ್ಭದಲ್ಲಿ ದೇಶದ ಜನತೆಯ ಬದುಕನ್ನು ಸಂರಕ್ಷಿಸಲು ಕಾರ್ಮಿಕ ವರ್ಗ ಒಂದಾಗಿ ಸಮರಧೀರ ಹೋರಾಟದತ್ತ ಮುನ್ನಡೆಯಲು ಸಂಸದರ ಕಛೇರಿ ಮುಂದೆ ಧರಣಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಇದಕ್ಕೆ ಸ್ಪಂದಿಸದೇ ಹೋದರೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದಾಗಿ ಪ್ರತಿಭಟನೆ ಕಾರರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಗಾಂಧಿ ನಗರದ ನಾರಾಯಣಸ್ವಾಮಿ, ಅಂಜಲಮ್ಮ, ಕಲ್ಪನಾ, ಎಂ. ವಿಜಿಕೃಷ್ಣ ಸೇರಿದಂತೆ ಸಾವಿರಾರು ಜನ ಹಾಜರಿದ್ದರು.

ಧಾರವಾಡ : ಬಿಸಿಯೂಟ ನೌಕರರ ಕನಿಷ್ಠ ವೇತನ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌ (ಸಿಐಟಿಯು) ಜಿಲ್ಲಾ ಸಮಿತಿಯಿಂದ ಇಲ್ಲಿನ ಸಂಸದರ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿ, ಮನವಿ ಸಲ್ಲಿಸಲಾಯಿತು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ, ಅಧ್ಯಕ್ಷ ಬಿ.ಐ. ಈಳಿಗೇರ, ಖಜಾಂಚಿ ಗುರುಸಿದ್ದಪ್ಪ ಅಂಬಿಗೇರ, ಬಿಸಿಯೂಟ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಚನ್ನಮ್ಮ ಡೊಳ್ಳಿನ, ಪ್ರಧಾನ ಕಾರ್ಯದರ್ಶಿ ಸುನಂದಾ ಚಿಗರಿ, ಖಜಾಂಚಿ ಫಕ್ಕೀರವ್ವ ತೆಂಬದಮನಿ ಮುಖಂಡರಾದ ಯಮನವ್ವ ಮಾದರ, ಲಕ್ಷ್ಮಿ ಕರೆಬರಬಣ್ಣವರ, ರೈತ ಮುಖಂಡ ಬಿ.ಎಸ್. ಸೊಪ್ಪಿನ, ನಮ್ಮ ಕರ್ನಾಟಕ ಸೇನೆಯ ಅಮೃತ ಇಜಾರಿ, ಮಹದಾಯಿ ಹೋರಾಟಗಾರ ವಿರೇಶ ಸೊಬರದಮಠ ಮತ್ತಿತರರು ಇದ್ದರು.

ಇದನ್ನೂ ಓದಿಆಂಧ್ರಪ್ರದೇಶ | 42 ದಿನಗಳ ಹೋರಾಟ ಗೆದ್ದ ಅಂಗನವಾಡಿ ಅಮ್ಮಂದಿರು; ಕೊನೆಗೂ ಮಂಡಿಯೂರಿದ ಜಗನ್ ಸರ್ಕಾರ  ಕನಿಷ್ಠ

ಉಡುಪಿ : ಬಜೆಟ್‌ನಲ್ಲಿ ಎಂಡಿಎಂಗೆ ಅನುದಾನ ಹೆಚ್ಚಳ ಮತ್ತು ಕನಿಷ್ಠ ವೇತನವನ್ನು ಘೋಷಿಸುವಂತೆ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಉಡುಪಿ ಜಿಲ್ಲಾ ಅಕ್ಷರ ದಾಸೋಹ ನೌಕರರ ಸಂಘ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಉಡುಪಿ ಜಿಲ್ಲಾ ಸಮಿತಿ ಹಾಗೂ ಆಶಾ ಕಾರ್ಯಕರ್ತೆಯರ ಸಂಘದ ಸಹಯೋಗದಲ್ಲಿ ‘ಸಂಸದ ಕಚೇರಿ ಚಲೋ’ ಅಹೋರಾತ್ರಿ ಧರಣಿಯನ್ನು ಮಣಿಪಾಲದ ರಜತಾದ್ರಿಯಲ್ಲಿ ರುವ ಸಂಸದರ ಕಚೇರಿ ಮುಂದೆ ಹಮ್ಮಿಕೊಳ್ಳಲಾಗಿತ್ತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್, ಆಹಾರ, ಆರೋಗ್ಯ, ಶಿಕ್ಷಣಕ್ಕಾಗಿರುವ ಯೋಜನೆ ಗಳಾದ ಐಸಿಡಿಎಸ್, ಎಂಡಿಎಂ, ಎನ್‌ಎಚ್‌ಎಂ, ಐಸಿಪಿಎಸ್, ಎಸ್‌ಎಸ್‌ಎ, ನರೇಗಾ ಮೊದಲಾದ ಯೋಜನೆಗಳನ್ನು ಖಾಯಂ ಮಾಡುವ ಮೂಲಕ ಹಕ್ಕನ್ನು ಸಾರ್ವತ್ರಿಕಗೊಳಿಸ ಬೇಕು. ಈ ಯೋಜನೆಯ ಸಿಬ್ಬಂದಿಗಳನ್ನು ಖಾಯಂ ಮಾಡಬೇಕು. ಕೆಲಸದ ಅವಧಿಯನ್ನು 4ಗಂಟೆಯಿಂದ 6ಗಂಟೆಗೆ ಅಕ್ಷರ ದಾಸೋಹ ಕೈಪಿಡಿಯಲ್ಲಿ ಬದಲಾಯಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಭಾರತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶೀಲಾ ನಾಡ, ಉಡುಪಿ ಜಿಲ್ಲಾ ಆಶಾ ಕಾರ್ಯಕರ್ತರ ಸಂಘ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಫೆಡರೇಷನ್, ಸಿಐಟಿಯು ಉಡುಪಿ ಜಿಲ್ಲೆಯ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.

ರಾಯಚೂರು : ಆಹಾರ, ಆರೋಗ್ಯ ಹಾಗೂ ಶಿಕ್ಷಣಕ್ಕಾಗಿ ಇರುವ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು (ಐಸಿಡಿಎಸ್) ಮತ್ತು ಬಿಸಿಯೂಟ ಯೋಜನೆ ಸೇರಿದಂತೆ ಅನೇಕ ಯೋಜನೆಗಳನ್ನು ಕಾಯಂಗೊಳಿಸುವ ಮೂಲಕ ಹಕ್ಕುಗಳನ್ನು ಸಾರ್ವತ್ರಿಕಗೊಳಿಸಬೇಕು ಎಂದು ಒತ್ತಾಯಿಸಿ ಅಂಗನವಾಡಿ ಹಾಗೂ ಬಿಸಿಯೂಟ ನೌಕರರ ಸಂಘದ (ಸಿಐಟಿಯು ಸಂಯೋಜಿತ) ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಸಂಸದರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಸಾರ್ವಜನಿಕ ಉದ್ಯಾನದಿಂದ ಜಿಲ್ಲಾಧಿಕಾರಿ ಕಚೇರಿ ಬಳಿಯ ಸಂಸದರ ಕಚೇರಿವರೆಗೆ  ಮೆರವಣಿಗೆ ನಡೆಸಿ ಬಳಿಕ ಸಂಸದರಿಗೆ ಮನವಿ ಸಲ್ಲಿಸಿದರು.

ಕಳೆದ 9 ವರ್ಷಗಳಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ ನೀತಿಯಿಂದಾಗಿ ಕೋಟ್ಯಂತರ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸಿನಂತೆ ಈ ಯೋಜನೆಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿ ಸೇರಿದಂತೆ ಒಂದು ಕೋಟಿ ನೌಕರರಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳನ್ನು ಕಲ್ಪಿಸಿ ನೌಕರರೆಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷೆ ಎಚ್.ಪದ್ಮಾ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಿ.ಎಸ್ ಶರಣಬಸವ, ಜಿಲ್ಲಾ ಖಜಾಂಚಿ ಶಬ್ಬೀರ್, ಪದಾಧಿಕಾರಿಗಳಾದ ರಂಗಮ್ಮ ಅನ್ವಾರ್, ವರಲಕ್ಷ್ಮೀ ರೇಣುಕಮ್ಮ, ಮರಿಯಮ್ಮ, ಮಹಮ್ಮದ್ ಹನೀಫ್, ಗಿರಿಯಪ್ಪ ಪೂಜಾರಿ, ಶರ್ಫುದ್ದೀನ್, ಅನ್ವರ್ ಪಾಷಾ, ರಮಾದೇವಿ, ನರ್ಮದಾ, ಸರಸ್ವತಿ, ಅಕ್ಕಮಹಾದೇವಿ ಹಾಗೂ ಶ್ರೀಲೇಖಾ ಪಾಲ್ಗೊಂಡಿದ್ದರು.

ವಿಜಯಪುರ : ಮುಂಬರುವ ಬಜೆಟ್‌ನಲ್ಲಿ ಐ.ಸಿ.ಡಿ.ಎಸ್.ಗೆ ಅನುದಾನ ಹೆಚ್ಚಳ ಮತ್ತು ಕನಿಷ್ಠ ವೇತನವನ್ನು ಘೋಷಿಸುವಂತೆ ಒತ್ತಾಯಿಸಿ ಸಂಸದ ರಮೇಶ ಜಿಗಜಿಣಗಿ ಅವರ ಕಚೇರಿಗೆ ಮುತ್ತಿಗೆ ಹಾಕಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ಮತ್ತು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ ಮಾತನಾಡಿ, ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭಿಸಿರುವ ಎಲ್‌ಕೆಜಿ, ಯುಕೆಜಿ ನಿಲ್ಲಿಸಿ ಅಂಗನವಾಡಿ ಕೇಂದ್ರಗಳಲ್ಲಿಯೇ ಈ ಶಿಕ್ಷಣ ಕೊಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಠಿಕ ಆಹಾರ, ಪೂರ್ವ ಪ್ರಾಥಮಿಕ ಶಿಕ್ಷಣ ಗರ್ಭಿಣಿ-ಬಾಣಂತಿಯರ ಆರೈಕೆ ಹೊರತುಪಡಿಸಿ ಉಳಿದ ಕೆಲಸಗಳನ್ನು ನಿರ್ಭಂಧಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯಗಳನ್ನು ನೀಡಬೇಕು. ಖಾಲಿ ಹುದ್ದೆಗಳಿಗೆ 3 ತಿಂಗಳೊಳಗೆ ನೇಮಕಾತಿಯಾಗಬೇಕು, ಇಲ್ಲದಿದ್ದರೆ ಹೆಚ್ಚುವರಿ ವೇತನ ಕೊಡಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಭಾರತಿ ವಾಲಿ, ಸುರೇಖಾ ರಜಪೂತ, ಅಶ್ವಿನಿ ತಳವಾರ, ಪ್ರತಿಭಾ ಕುರಡೆ, ಸುವರ್ಣಾ ಹಲಗಣಿ, ಸರಸ್ವತಿ ಮಠ, ಶೋಭಾ ಕಬಾಡೆ, ಗಿರಿಜಾ ಸಕ್ರಿ, ಅಣ್ಣಾರಾಯ ಈಳಗೇರ, ಗೀತಾ ಭಜಂತ್ರಿ, ಶೈಲಾ ಕಟ್ಟಿ, ಮುತ್ತವ್ವ ಹೊಸಕೋಟಿ, ಜಯಶ್ರೀ ಪೂಜಾರಿ, ಸುರೇಖಾ ಇದ್ದರು.

ಉತ್ತರ ಕನ್ನಡ, ಬಳ್ಳಾರಿ, ವಿಜುನಗರ, ಕೊಪ್ಪಳ, ಗದಗ, ಕಲಬುರ್ಗಿ, ಬೀದರ್‌, ಯಾದಗಿರಿ, ಹಾಸನ, ಮೈಸೂರು, ಚಾಮರಾಜ ನಗರ, ಮಂಡ್ಯ, ಚಿಕ್ಕಬಳ್ಳಾಪುರ, ಬಾಗಲಕೋಟೆ, ಚಿತ್ರದುರ್ಗ, ದಾವಣಗೆರೆಯಲ್ಲೂ ಪ್ರತಿಭಟನೆ ನಡೆದಿದೆ.

ಈ ವಿಡಿಯೋ ನೋಡಿದೇಶವೆಂದರೆ “ಅಂಕಿ – ಅಂಶಗಳ ಆಟವಲ್ಲ”, – ಎಸ್ ವರಲಕ್ಷ್ಮಿ Janashakthi Media

 

 

 

Donate Janashakthi Media

Leave a Reply

Your email address will not be published. Required fields are marked *