ಶ್ರೀ ಕ್ಷೇತ್ರ ಧರ್ಮಸ್ಥಳದ ಪತ್ರಿಕಾ ಜಾಹೀರಾತು ಹುಟ್ಟು ಹಾಕಿರುವ ಪ್ರಶ್ನೆಗಳು

– ನವೀನ್ ಸೂರಿಂಜೆ

ಸೌಜನ್ಯಳ ಕೊಲೆ, ಅತ್ಯಾಚಾರ ಬಗ್ಗೆ ಬಹಿರಂಗ ಹೇಳಿಕೆ, ಹೋರಾಟ ನಡೆಸುತ್ತಿರುವ ವ್ಯಕ್ತಿಗಳನ್ನು ಸಿಬಿಐ ಯಾಕೆ ಸಾಕ್ಷಿಗಳನ್ನಾಗಿ ಉಲ್ಲೇಖಿಸಿಲ್ಲ ? ಯಾಕೆ ಸಿಬಿಐ ಹೋರಾಟಗಾರರಿಗೆ ಸಾಕ್ಷಿ ನೋಟಿಸ್ ಕೊಡಲಿಲ್ಲ ? ಇದು ಸಿಬಿಐ ನ್ಯಾಯಾಲಯದ ಪ್ರಶ್ನೆ ಕೂಡಾ ಆಗಿತ್ತು. ಯಾರೂ ಕೂಡಾ ಸಾರ್ವಜನಿಕರು ನೇರಾ ನೇರ ಹೋಗಿ ಸಿಬಿಐ ಆಫೀಸ್ ನಲ್ಲಿ ಸಾಕ್ಷಿ ಹೇಳಲು ಸಾಧ್ಯವಿಲ್ಲ, ನೋಟಿಸ್ ಕೊಟ್ಟರೆ ಮಾತ್ರ ಸಾಕ್ಷ್ಯ ಹೇಳಬಹುದು ಎಂಬ ಕಾಮನ್ ಸೆನ್ಸ್ ಮತ್ತು ಕನಿಷ್ಠ ಕಾನೂನಿನ ಜ್ಞಾನ ಇರಬೇಕು.

ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ “ಶ್ರೀ ಕ್ಷೇತ್ರ ಧರ್ಮಸ್ಥಳ” ಹೆಸರಿನಲ್ಲಿ ಅರ್ಧ ಪುಟದ ಜಾಹೀರಾತು ನೀಡಲಾಗಿದೆ‌. ಸೌಜನ್ಯ ಪ್ರಕರಣಕ್ಕೂ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೂ ಏನು ಸಂಬಂಧ ? ಧರ್ಮಸ್ಥಳ ಎಂದರೆ ಒಂದು ಗ್ರಾಮ ಪಂಚಾಯತ್ ವ್ಯಾಪ್ತಿ. ಶ್ರೀಕ್ಷೇತ್ರ ಧರ್ಮಸ್ಥಳ ಎಂದರೆ ಮಂಜುನಾಥ ದೇವರು ಮತ್ತು ಅಣ್ಣಪ್ಪ ದೈವ. ಸೌಜನ್ಯ ಪ್ರಕರಣದಲ್ಲಿ “ದೇವರು ನೋಡಿಕೊಳ್ಳುತ್ತಾನೆ” ಎಂದು ಕೆಲ ಹೋರಾಟಗಾರರು ಹೇಳಿದ್ದು ಬಿಟ್ಟರೆ ದೇವರು ಅಥವಾ ದೇವಸ್ಥಾನವೇ ಬಂದು ಕೊಲೆ ಮಾಡಿದೆ ಎಂದು ಯಾರೂ ಆರೋಪಿಸಿಲ್ಲ. ಆದರೂ “ಶ್ರೀ ಕ್ಷೇತ್ರ ಧರ್ಮಸ್ಥಳ” ಪ್ರಕಟಣೆ ಯಾಕೆ ಕೊಡಬೇಕು ?

ಪ್ರಕಟಣೆಯ 4 ನೇ ಪ್ಯಾರದಲ್ಲಿ “ಸೌಜನ್ಯ ಕಾಣೆಯಾಗಿದ್ದು ತಿಳಿಯುತ್ತಿದ್ದಂತೆ ಹೆಗ್ಗಡೆಯವರು ಅಂದಿನ ಗೃಹ ಮಂತ್ರಿಗೆ ಫೋನ್ ಮಾಡಿ ತನಿಖೆ ನಡೆಸುವಂತೆ ವಿನಂತಿಸಿದ್ದರು” ಎಂದು ಹೇಳಲಾಗಿದೆ. ಇದೇ ಸಮಸ್ಯೆಯಾಗಿರೋದು. ಹೆಗ್ಗಡೆಯವರ ವಿನಂತಿಯಂತೆ ಗೃಹ ಇಲಾಖೆ ತನಿಖೆ ವಿಶ್ವಾಸಾರ್ಹವೇ ? ಮೊದಲೇ ಪ್ರಭಾವಶಾಲಿಯಾಗಿರುವ ಹೆಗ್ಗಡೆಯವರು ತನಿಖೆಯ ವಿಷಯದಲ್ಲಿ ಗೃಹ ಸಚಿವರಿಗೆ ಮಾತನಾಡಿದ್ದು ಏಕೆ ?

ಪ್ರಕಟಣೆಯ 6 ನೇ ಪ್ಯಾರಾದಲ್ಲಿ “ಸೌಜನ್ಯ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಹೆಗ್ಗಡೆಯವರೇ ಮುಖ್ಯಮಂತ್ರಿಗೆ ಪತ್ರ ಬರೆದರು. ಅದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಸಿಬಿಐಗೆ ವಹಿಸಿದರು” ಎಂದು ಹೇಳಲಾಗಿದೆ. ಸಿಬಿಐಗೆ ಕೊಡಿ ಎಂದು ಹೆಗ್ಗಡೆಯವರು ಹೇಳುವ ಹೊತ್ತಿಗೆ ಸೌಜನ್ಯ ಪರ ಪ್ರತಿಭಟನೆ ಸಮಾಜದಲ್ಲಿ ತೀವ್ರತೆಯನ್ನು ಪಡೆದಿತ್ತು ಎಂದು ಇದೇ ಪ್ಯಾರದಲ್ಲಿ ಹೇಳಲಾಗಿದೆ. ತೀವ್ರತೆ ಅಂದರೆ ಯಾರ ವಿರುದ್ದ ? ತನಿಖೆಯ ಬಗ್ಗೆ ಸಮಾಜದ ಅಸಮಾದಾನ ಎಂದರೆ ಯಾರ ವಿರುದ್ದ ? ಹೆಗ್ಗಡೆಯವರ ಸಂಬಂಧಿಗಳು ಈ ಪ್ರಕರಣದಲ್ಲಿ ಇದ್ದಾರೆ ಮತ್ತು ಅವರನ್ನು ಬಂಧಿಸಿ ಎಂಬ ಆಗ್ರಹ ತಾನೆ ? ಇಂತಹ ಆರೋಪ ಇರುವಾಗ ಸೌಜನ್ಯ ಪ್ರಕರಣ ಸಿಬಿಐಗೆ ಕೊಡಿ ಎಂದು ಹೆಗ್ಗಡೆಯವರು ಯಾಕೆ ಪ್ರಭಾವ ಬೀರಬೇಕಿತ್ತು ? ಹೆಗ್ಗಡೆಯವರ ಮನವಿಯಂತೆ ನಡೆದ ಕಾರಣಕ್ಕೇ ಸಂತೋಷ್ ರಾವ್ ಆರೋಪಿಯಲ್ಲ, ಸೌಜನ್ಯ ಕೊಲೆಗಾರರೂ ಪತ್ತೆಯಾಗಿಲ್ಲ ಎಂಬ ಫಲಿತಾಂಶ ಬಂದಿರುವುದು ಎಂಬ ಅರ್ಥ ಬರುವುದಿಲ್ಲವೇ ? ಒಬ್ಬ ವ್ಯಕ್ತಿಯ ಮನವಿಯಂತೆ ಸಿಐಡಿ, ಸಿಬಿಐ ತನಿಖೆ ನಡೆಯುವುದಾದರೆ ಲಕ್ಷಾಂತರ ಜನರ ಮನವಿಯಂತೆ ಎಸ್ ಐಟಿ, ನ್ಯಾಯಾಂಗ ತನಿಖೆ ಯಾಕೆ ನಡೆಯಬಾರದು ?

ಇದನ್ನೂ ಓದಿ : “ಅಂದು ಪದ್ಮಲತಾ, ಇಂದು ಸೌಜನ್ಯ” ಎಂಬ ಘೋಷವಾಕ್ಯವೇ ಹಿಂದುತ್ವವಾದಿಗಳ ನಿದ್ದೆಗೆಡಿಸಿದೆ

ಪ್ರಕಟಣೆಯ ಪ್ಯಾರ 8 ಮತ್ತು 9 ರಲ್ಲಿ “ಅರೋಪ ಮಾಡುವವರಾಗಲೀ, ಇತರ ಯಾರೊಬ್ಬರಾಗಲೀ ಈ ಮೂವರೂ ಸೌಜನ್ಯಳ ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂದು ಸಾಕ್ಷ್ಯ ನುಡಿಯಲಿಲ್ಲ” ಎಂದು ಹೇಳಲಾಗಿದೆ. ಸಿಬಿಐ ಕೋರ್ಟ್ ಸೇರಿದಂತೆ ಹೋರಾಟಗಾರರ ಆಕ್ಷೇಪ ಇರುವುದೇ ಇಲ್ಲಿ ! ಸೌಜನ್ಯಳ ಕೊಲೆ, ಅತ್ಯಾಚಾರ ಬಗ್ಗೆ ಬಹಿರಂಗ ಹೇಳಿಕೆ, ಹೋರಾಟ ನಡೆಸುತ್ತಿರುವ ವ್ಯಕ್ತಿಗಳನ್ನು ಸಿಬಿಐ ಯಾಕೆ ಸಾಕ್ಷಿಗಳನ್ನಾಗಿ ಉಲ್ಲೇಖಿಸಿಲ್ಲ ? ಯಾಕೆ ಸಿಬಿಐ ಹೋರಾಟಗಾರರಿಗೆ ಸಾಕ್ಷಿ ನೋಟಿಸ್ ಕೊಡಲಿಲ್ಲ ? ಇದು ಸಿಬಿಐ ನ್ಯಾಯಾಲಯದ ಪ್ರಶ್ನೆ ಕೂಡಾ ಆಗಿತ್ತು. ಯಾರೂ ಕೂಡಾ ಸಾರ್ವಜನಿಕರು ನೇರಾ ನೇರ ಹೋಗಿ ಸಿಬಿಐ ಆಫೀಸ್ ನಲ್ಲಿ ಸಾಕ್ಷಿ ಹೇಳಲು ಸಾಧ್ಯವಿಲ್ಲ, ನೋಟಿಸ್ ಕೊಟ್ಟರೆ ಮಾತ್ರ ಸಾಕ್ಷ್ಯ ಹೇಳಬಹುದು ಎಂಬ ಕಾಮನ್ ಸೆನ್ಸ್ ಮತ್ತು ಕನಿಷ್ಠ ಕಾನೂನಿನ ಜ್ಞಾನ ಇರಬೇಕು.

ಪ್ರಕಟಣೆಯ ಪ್ಯಾರಾ 11 ರಲ್ಲಿ “ಈ ಮೂವರನ್ನು ಈ ಕೆಳಗಿನಂತೆ ಸಿಬಿಐ ನ್ಯಾಯಾಲಯದ ಆದೇಶದ ಪ್ರಕಾರ ತನಿಖೆ ಒಳಪಡಿಸಲಾಗಿದೆ” ಎಂದು ಹೇಳಲಾಗಿದೆ. ತನಿಖೆಯ ಬಗ್ಗೆಯೇ ಅಸಮಾದಾನ ಇದೆ. ಈ “ಮೂವರು” ಎಂದು ಹೇಳಲಾಗುವ ಅವರನ್ನು ಸಿಬಿಐ ಆರೋಪಿಗಳು ಎಂದು ಎಫ್ಐಆರ್ ನಲ್ಲಿ ಗುರುತಿಸಿ ತನಿಖೆಗೆ ಒಳಪಡಿಸಬೇಕಿತ್ತು. ಆಗ ಬ್ರೈನ್ ಮ್ಯಾಪಿಂಗ್ ಸೇರಿದಂತೆ ಎಲ್ಲಾ ತನಿಖೆಗೂ ಒಂದು ಅರ್ಥ ಇರುತ್ತದೆ. ಆರೋಪಿ ಎಂದು ಎಫ್ಐಆರ್ ನಲ್ಲಿ ಹೆಸರಿಲ್ಲದ ವ್ಯಕ್ತಿಯನ್ನು ತನಿಖೆಗೆ ಒಳಪಡಿಸಿದ್ದಲ್ಲಿ ಸದ್ರಿ ಆರೋಪಿಯನ್ನು ವಿಚಾರಣೆಯಿಂದ ಕೈಬಿಡುವ ಅವಕಾಶ ತನಿಖಾಧಿಕಾರಿಗೆ ಇರುತ್ತದೆ. ಆರೋಪಿಗಳು ಎಂದು ಆ ಮೂವರ ಹೆಸರು ಎಫ್ಐಆರ್ ಮತ್ತು ಚಾರ್ಜ್ ಶೀಟ್ ನಲ್ಲಿದ್ದು “ಕೋರ್ಟ್ ಟ್ರಯಲ್” ಮೂಲಕ ಆ ಮೂವರೂ ತಮ್ಮ ನಿರಪರಾಧಿತ್ವವನ್ನೂ, ದೂರುದಾರರು ಆ ಮೂವರ ಅಪರಾಧಿತ್ವವನ್ನೂ ಸಾಭೀತುಪಡಿಸಬೇಕಿತ್ತು. ಆರೋಪಿಯೆಂದೇ ಉಲ್ಲೇಖಿಸದೇ ಹೆಗ್ಗಡೆಯವರ ಮನವಿಯಂತೆ ತನಿಖೆ ನಡೆಸುತ್ತಿರುವ ಸಿಬಿಐ ಅವರನ್ನು ಪ್ರಕರಣದಿಂದ ಕೈಬಿಟ್ಟಿರುವುದು ಅನುಮಾನಗಳಿಗೆ ಎಡೆಮಾಡಿಕೊಡುವುದಿಲ್ಲವೇ ?

ಪ್ರಕಟಣೆ 14 ನೇ ಪ್ಯಾರಾದಲ್ಲಿ “ಮರಣವಪ್ಪುವ ಸಾಧ್ಯತೆ ಇರುವ ಅಪಾಯಕಾರಿ ಬ್ರೈನ್ ಮ್ಯಾಪಿಂಗ್ ಪರೀಕ್ಷೆಯನ್ನು ಕೂಡಾ ಸ್ವ ಇಚ್ಚೆಯಿಂದ ಒಪ್ಪಿಕೊಂಡು ಈ ಮೂವರು ಪರೀಕ್ಷೆಗೆ ಒಳಪಟ್ಟಿದ್ದಾರೆ” ಎಂದು ಹೇಳಲಾಗಿದೆ. ಅದೇ ಪ್ರಕಟಣೆಯ 15 ನೇ ಪ್ಯಾರದಲ್ಲಿ “ಸೌಜನ್ಯಳ ತಂದೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಆ ಮೂವರನ್ನೂ ಸಹಾ ಆರೋಪಿಗಳಾಗಿ ಸಮನ್ಸ್ ಮಾಡಬೇಕು ಎಂದು ಕೋರಿಕೊಂಡಂತೆ 07.02.2017 ರಂದು ಈ ಮೂವರಿಗೂ ಅವರ ಅನುಪಸ್ಥಿತಿಯಲ್ಲಿ ನ್ಯಾಯಾಲಯಕ್ಕೆ ಹಾಜರಾಗಲು ಆದೇಶ ನೀಡಿತ್ತು. ಸದ್ರಿ ಸಮನ್ಸ್ ಆದೇಶವನ್ನು ರದ್ದು ಮಾಡಬೇಕು ಎಂದು ಸಿಆರ್ ಎಲ್ ಪಿ ನಂ 1928/2017 ರಂತೆ ಅರ್ಜಿ ಸಲ್ಲಿಸಿದಾಗ ಹೈಕೋರ್ಟ್ ಅವರ ಆದೇಶವನ್ನು ಪುರಸ್ಕರಿಸಿದೆ” ಎಂದು ಬರೆಯಲಾಗಿದೆ. ಸಿಬಿಐ ಮುಂದೆ ಮಾರಣಾಂತಿಕ ಬ್ರೈನ್ ಮ್ಯಾಪಿಂಗ್ ಗೆ ಸಿದ್ದರಿರುವವರು ಕೋರ್ಟ್ ಟ್ರಯಲ್ ಗೆ ಯಾಕೆ ಸಿದ್ದರಿಲ್ಲ ? ಸಿಬಿಐ ಹೆಗ್ಗಡೆಯವರ ಮನವಿಯಂತೆ ತನಿಖೆ ನಡೆಸುತ್ತಿದೆ ಎಂಬ ಧೈರ್ಯವೇ ಎಂಬ ಪ್ರಶ್ನೆ ಉದ್ಬವಿಸದೇ ಇರಲ್ಲ. ಬ್ರೈನ್ ಮ್ಯಾಪಿಂಗ್ ಸೇರಿದಂತೆ ಎಲ್ಲದರಲ್ಲೂ ಕ್ರಿಸ್ಟಲ್ ಕ್ಲೀಯರ್ ಆಗಿರುವವರು ಕೋರ್ಟ್ ಟ್ರಯಲ್ ಗೆ ಹಾಜರಾಗಲು ನ್ಯಾಯಾಲಯಕ್ಕೆ ಬರುವಂತೆ ನೀಡಿದ ಸಮನ್ಸ್ ಅನ್ನು ಹೈಕೋರ್ಟ್ ಗೆ ಹೋಗಿ ರದ್ದು ಪಡಿಸಿರುವುದು ಯಾಕೆ ?

ಪ್ರಕಟಣೆಯ ಕೊನೆಯಲ್ಲಿ ಮತ್ತೆ ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಹೋರಾಟಗಾರರು ಕೀಳು ಭಾಷೆಯ ನಿಂದನೆ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ‌. ಹಾಗೆ ನೋಡಿದರೆ ಬಹುತೇಕ ಹೋರಾಟಗಾರರು ಆಣೆ ಪ್ರಮಾಣ, ಮಂಜುನಾಥ ನೋಡಿಕೊಳ್ಳುತ್ತಾನೆ, ಅಣ್ಣಪ್ಪ ಬಿಡುವುದಿಲ್ಲ ಎಂದು ಹೇಳುವ ಮೂಲಕ ದೈವತ್ವವನ್ನು ಎತ್ತಿ ಹಿಡಿಯುತ್ತಿದ್ದಾರೆಯೇ ಹೊರತು ದೇವಸ್ಥಾನವನ್ನು ನಿಂದಿಸುತ್ತಿಲ್ಲ. (ಹೋರಾಟವೆನ್ನುವುದು ಸಂವಿಧಾನ, ಕಾನೂನುಗಳನ್ನು ಆಶ್ರಯಿಸಿ ಮಾಡಬೇಕೇ ಹೊರತು ದೇವರು, ಧರ್ಮವನ್ನಾಶ್ರಯಿಸಿ ಅಲ್ಲ) ಹೆಗ್ಗಡೆಯವರೆಂದರೆ ಶ್ರೀ ಕ್ಷೇತ್ರ ಧರ್ಮಸ್ಥಳವಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಾಲ್ಕು ಹೆಗ್ಗಡೆಯವರು ಇದ್ದಾರೆ. ಹಾಗಾಗಿ ಹೆಗ್ಗಡೆಯವರ ಮೇಲೆ ಅಸಮಾದಾನ ಹೊಂದುವುದು ಎಂದರೆ ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ಅಸಮಾದಾನ ಇರುವುದು ಎಂದು ಅರ್ಥವಲ್ಲ.

ಆಗಸ್ಟ್ 28 ರ ಬೆಳ್ತಂಗಡಿ ಚಲೋಗೆ ಸಿಗುತ್ತಿರುವ ಅಭೂತಪೂರ್ವ ಜನ ಬೆಂಬಲದಿಂದ ಕಂಗೆಟ್ಟು ಎಲ್ಲಾ ಪತ್ರಿಕೆಗಳಿಗೆ ನೀಡಿರುವ ಅರ್ಧ ಪುಟ ಪ್ರಕಟಣೆ ಜಾಹೀರಾತು ಇನ್ನಷ್ಟು ಪ್ರಶ್ನೆ, ಸಂಶಯಗಳನ್ನು ಹುಟ್ಟುಹಾಕಿದೆ‌.

 

Donate Janashakthi Media

Leave a Reply

Your email address will not be published. Required fields are marked *