ಪುರುಷೋತ್ತಮ ಬಿಳಿಮಲೆ
ನಿನ್ನೆ ಕಾಶಿಯಲ್ಲಿ ನಡೆದ ಧಾರ್ಮಿಕ ಸ್ವರೂಪದ ಕಾರ್ಯಕ್ರಮದಲ್ಲಿ ಔರಂಗಜೇಬ್ (1618- 1707) ಮತ್ತು ಶಿವಾಜಿಯ (1630 – 1680) ಉಲ್ಲೇಖ ಅನಗತ್ಯವಾಗಿತ್ತಾದರೂ ಪ್ರಧಾನಿಗಳು ಅದನ್ನು ಮಾಡಿದ್ದಾರೆ. ಉತ್ತರ ಪ್ರದೇಶದ ಚುನಾವಣೆ ಹತ್ತಿರ ಬರುತ್ತಿರುವಾಗ ಇದು ಅನಿರೀಕ್ಷಿತವೇನೂ ಆಗಿರಲಿಲ್ಲ. ಅವರು ಇಬ್ಬರು ಐತಿಹಾಸಿಕ ವ್ಯಕ್ತಿಗಳನ್ನು ಕೋಮುವಾದೀ ಚೌಕಟ್ಟಿನಲ್ಲಿ ಮಂಡಿಸಿದ ಬಗ್ಗೆ ಎರಡು ಮಾತು.
ಔರಂಗಜೇಬನು ಷಾಜಹಾನನ ಮೂರನೆಯ ಮಗ. 49 ವರ್ಷಗಳ ಕಾಲ ವಿಸ್ತಾರವಾಗಿದ್ದ ಸಾಮ್ರಾಜ್ಯವನ್ನು ಆಳಿದನು. ಇಸ್ಲಾಂ ಧರ್ಮದ ಬಗ್ಗೆ ಅವನ ನಂಬಿಕೆ ಅಚಲವಾಗಿತ್ತು. ಅಕ್ಬರನ ಕಾಲದಲ್ಲಿದ್ದ ಜಾತ್ಯಾತೀತ ತತ್ವಗಳು ಇವನ ಕಾಲದಲ್ಲಿ ಅಂಚಿಗೆ ಸರಿದುವು.
ಆದರೆ, ಪ್ರಧಾನಿಗಳು ಧ್ವನಿಸಿದ ಹಾಗೆ ಈತ ಎಲ್ಲಿಂದಲೋ ಬಂದವನಲ್ಲ. ಇವನು ಹುಟ್ಟಿದ್ದು ಮೋದಿಯವರು ಜನ್ಮ ತಾಳಿದ ಗುಜರಾತಿನಲ್ಲಿಯೇ. ಸ್ವಲ್ಪ ಕಾಲ ಗುಜರಾತಿನ ರಾಜ್ಯಪಾಲನೂ ಆಗಿದ್ದ. ಅರಬ್ಬೀ, ಪಾರ್ಸಿ, ತುರ್ಕಿ, ಉರ್ದು ಮತ್ತು ಹಿಂದಿ ಭಾಷೆಗಳಲ್ಲಿ ಆತ ಮಾತಾಡುತ್ತಿದ್ದ. ಸಾಮ್ರಾಜ್ಯ ವಿಸ್ತರಣಾಕಾಂಕ್ಷಿಯಾಗಿದ್ದ ಈತನು ಶಿವಾಜಿ ಜೊತೆ ಮಾತ್ರ ಯುದ್ಧ ಮಾಡಿದ್ದಲ್ಲ. ತನ್ನ ಅಣ್ಣನಾದ ದಾರಾ ಷುಕೋನನ್ನು ಮರಣದಂಡನೆಗೊಳಪಡಿಸಿದ್ದ. ಅಪ್ಪ ಷಾಜಹಾನನನ್ನು ಆಮರಣಾಂತ ಜೈಲಲ್ಲಿಟ್ಟ. ತಮ್ಮ ಮುರಾದನನ್ನೂ ಕೊಂದ. ಷೂಜಾನ ಕುಟುಂಬವನ್ನೇ ಸರ್ವನಾಶ ಮಾಡಿದ. ಎಲ್ಲರನ್ನೂ ಕೊಂದು ಕೊನೆಗೆ 1659ರ ಜೂನ್ ತಿಂಗಳಲ್ಲಿ ʼಅಲಂಗೀರ್ʼ (ವಿಶ್ವವಿಜೇತ) ಎಂಬ ಬಿರುದು ತಾಳಿ, ಅಧಿಕೃತವಾಗಿ ಸಿಂಹಾಸನವನ್ನೇರಿ ದೀರ್ಘಕಾಲ ಆಳ್ವಿಕೆ ನಡೆಸಿದ. ಈತ ಜೀವನದ ಬಹುತೇಕ ಅವಧಿಯನ್ನು ಸಾಮ್ರಾಜ್ಯ ವಿಸ್ತರಣೆಯಲ್ಲಿಯೇ ಕಳೆದ. ದಖನ್ ಪ್ರಾಂತ್ಯವನ್ನು ಹತೋಟಿಗೆ ತರಲು ಆತ ಮಾಡಿದ ಪ್ರಯತ್ನಗಳು ಅವನನ್ನು ವಿನಾಶದಂಚಿಗೆ ತಳ್ಳಿದುವು.
ಇವನಿಗೆ ಹಿಂದೂಗಳ ಮೇಲೆ ಅಸಹನೆ ಇದ್ದುದು ನಿಜ. ಆದರೆ ಅನೇಕ ಕಡೆಗಳಲ್ಲಿ ಹಿಂದೂಗಳನ್ನು ರಕ್ಷಿಸಲೂ ಪ್ರಯತ್ನಪಟ್ಟಿದ್ದ. ಕಾಶಿ ದೇವಾಲಯದ ಅರ್ಚಕರಿಗೆ ಅವರ ಹಕ್ಕು ಬಾಧ್ಯತೆಗಳನ್ನು ಸುರಕ್ಷಿತವಾಗಿ ಪಾಲಿಸುವೆನೆಂದು ಒಂದು ಅಭಯಪತ್ರವನ್ನೂ ಬರೆದುಕೊಟ್ಟಿದ್ದ. ರಜಪೂತರು ದೊಡ್ಡ ಸಂಖ್ಯೆಯಲ್ಲಿ ಅವನ ಸೈನ್ಯ ಲ್ಲಿದ್ದರು. ಇವನಿಗೋಸ್ಕರ ಕಾಬೂಲ್ ಮತ್ತು ದಖನ್ ಪ್ರಾಂತ್ಯಗಳಲ್ಲಿ ತಮ್ಮ ಜೀವಗಳನ್ನು ಅರ್ಪಿಸಿದರು. ಔರಂಗಜೇಬನ ಖಾಸ ಕಾರ್ಯದರ್ಶಿ ವಾಲೀರಾಮ್ ಹಿಂದೂ. ಇವನ ಹಣಕಾಸಿನ ಮಂತ್ರಿಗಳಲ್ಲಿ ಒಬ್ಬನಾದ ರಘುನಂದನರಾಯನೂ ಹಿಂದೂವೇ.
ಒಬ್ಬ ಮಹತ್ವಾಕಾಂಕ್ಷೀ ಅರಸನಾದ ಔರಂಗಜೇಬನು ಅಧಿಕಾರಕ್ಕಾಗಿ ಏನೂ ಮಾಡಬಲ್ಲವನಾಗಿದ್ದ. ಸ್ವಂತ ಮಕ್ಕಳನ್ನೂ ಕೂಡ ಅವನು ನಂಬಲಿಲ್ಲ. ಆದ್ದರಿಂದಲೇ ಇವನ ಸಹೋದರರೂ, ಮುಸಲ್ಮಾನ್ ಸರದಾರರೂ , ಮಕ್ಕಳೂ, ಹಿಂದೂಗಳೂ ಒಟ್ಟಾಗಿಯೇ ದಂಗೆ ಎದ್ದು ಈ ಸರ್ವಾಧಿಕಾರಿಯ ರಾಜ್ಯವನ್ನು ಚೂರುಚೂರಾಗಿ ಮಾಡಿದರು. ತನ್ನದೇ ರಾಜ್ಯದಲ್ಲಿ ಗೊಂದಲವೆಬ್ಬಿಸಿದ ಔರಂಗಜೇಬನು ಕೊನೆಗೆ 1707ರಲ್ಲಿ ಅಹಮದ್‍ನಗರದಲ್ಲಿ ಎಲ್ಲರ ಹಾಗೆ ಸತ್ತ. ಅವನ ಸಾವಿನೊಂದಿಗೆ ಮತಾಂಧ ಸರ್ವಾಧಿಕಾರಿಯೊಬ್ಬ ಕೊನೆಗೊಂಡ.
ಅಧಿಕಾರ ರಾಜಕಾರಣದ ಒಳಸುಳಿವುಗಳು ಬಹಳ ಸಂಕೀರ್ಣವಾಗಿರುತ್ತವೆ. ಅವುಗಳನ್ನು ಸರಳೀಕರಿಸಿ ಜನರ ಮುಂದಿಡುವುದು ಬಹಳ ಅಪಾಯಕಾರಿ.