ಭಾರತ ಜ್ಞಾನ ವಿಜ್ಞಾನ ಸಮಿತಿ(ಬಿಜಿವಿಎಸ್)ಯಿಂದ ಸಂವಿಧಾನ ಪೀಠಿಕೆ ಅರ್ಥ-ಅರಿವು, ಸಂವಿಧಾನ ತಿಳಿಯೋಣ ಜಿಲ್ಲಾ ಮಟ್ಟದ ಕಾರ್ಯಾಗಾರ
ಹಾಸನ: ಭಾರತ ಸಂವಿಧಾನ ಭಾರತವನ್ನು ಎಲ್ಲ ಜಾತಿ ಧರ್ಮಗಳಿಂದ ಮುಕ್ತಗೊಳಿಸಿ ಐತಿಹಾಸಿಕ ಹಿನ್ನೆಲೆ, ವೈಚಾರಿಕ ದೃಷ್ಟಿಕೋನ ಹಾಗೂ ವೈಜ್ಞಾನಿಕ ಪಥದಲ್ಲಿ ಮುಂದೊಯ್ಯಲು ಮಾರ್ಗದರ್ಶನ ಮಾಡುತ್ತದೆ. ಆದರೆ ಭಾರತದ ಆಳರಸರು ಸಂವಿಧಾನಕ್ಕೆ ವಿರುದ್ಧವಾಗಿ ಭಾರತವನ್ನು ಧರ್ಮ ಜಾತಿ ಪಾಳೇಗಾರಿ ಮತ್ತು ಅಸ್ಪೃಶ್ಯತೆಯ ಹಾದಿಯಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂದು ಬಿಜಿವಿಎಸ್ ಜಿಲ್ಲಾಧ್ಯಕ್ಷ ಎಚ್ ಟಿ ಗುರುರಾಜು ಹೇಳಿದರು.
ಇದನ್ನು ಓದಿ: ʻಪ್ಲಾಸ್ಟಿಕ್ ಬಂಧನ-ಪರಿಸರ ಸ್ಪಂದನ ಜಾಗೃತಿ ಜಾಥಾʼ ಅರಿವು ಮೂಡಿಸುವ ವಿನೂತನ ಕಾರ್ಯಕ್ರಮ
ಹಾಸನ ನಗರದ ಭಾರತ ಜ್ಞಾನ ವಿಜ್ಞಾನ ಸಮಿತಿ(ಬಿಜಿವಿಎಸ್) ಕಚೇರಿಯಲ್ಲಿ ಜಿಲ್ಲಾ ಸಮಿತಿ ಹಾಗೂ ಎಮ್ ಕೃಷ್ಣ ಕಾನೂನು ವಿದ್ಯಾಲಯದ ಸಹಯೋಗದಲ್ಲಿ ಸಂವಿಧಾನ ತಿಳಿಯೋಣ ಜಿಲ್ಲಾ ಮಟ್ಟದ ಕಾರ್ಯಾಗಾರ ನಡೆಯಿತು ಕಾರ್ಯಾಗಾರವನ್ನು ಎಚ್ ಟಿ ಗುರುರಾಜು ಉದ್ಘಾಟಿಸಿ ಮಾತನಾಡಿ, ಭವಿಷ್ಯದ ಪೀಳಿಗೆಯನ್ನು ಸಂವಿಧಾನದ ಹಾದಿಯಲ್ಲಿ ಕೊಂಡೊಯ್ಯಲು ಭಾರತ ಸಂವಿಧಾನವನ್ನು ಅರ್ಥ ಮಾಡಿಸುವುದು ಅಗತ್ಯವಾಗಿದೆ ಈ ನಿಟ್ಟಿನಲ್ಲಿ ಈ ಕಾರ್ಯಗಾರ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಂವಿಧಾನ ಪೀಠಿಕೆ ಅರ್ಥ-ಅರಿವು
ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಅಹಮದ್ ಹಗರೆ ಕಾರ್ಯಾಗಾರದಲ್ಲಿ ವಿವರಣೆ ನೀಡಿ, ಭಾರತದ ಸಂವಿಧಾನ ʻಭಾರತದ ಜನತೆಯಾದ ನಾವುʼ ಎಂದು ಹೇಳುತ್ತದೆ ಅಷ್ಟು ಮಾತ್ರವಲ್ಲದೆ ರಿಪಬ್ಲಿಕ್ ಆಫ್ ಇಂಡಿಯಾ ಎಂದಷ್ಟೇ ಭಾರತವನ್ನು ಗುರುತಿಸುತ್ತದೆ. ಅಂದರೆ ಭಾರತ ಸಂವಿಧಾನ ದೇವರು ಮತ್ತು ಧರ್ಮದಿಂದ ಮುಕ್ತಿಗೊಂಡು ಸ್ವತಂತ್ರವಾಗಿ ಭಾರತದ ಜನರೇ ನಿರೂಪಿಸಿಕೊಂಡ ಸಂವಿದಾನವಾಗಿದೆ. ಮತ್ತೆ ಸಂವಿಧಾನ ಎಲ್ಲ ಧರ್ಮೀಯರಿಗೂ ಸಮಾನ ಗೌರವ, ಅವಕಾಶ, ಸಮತೆ, ನ್ಯಾಯ ಮತ್ತು ಅವಕಾಶಗಳನ್ನು ಒದಗಿಸಿಕೊಡುತ್ತದೆ ಎಂದು ಹೇಳಿದರು.
ಇದನ್ನು ಓದಿ: ದೇಶದಲ್ಲಿ ವಿಜ್ಞಾನಕ್ಕಿಂತ ಮೌಢ್ಯಾಚರಣೆ ಹೆಚ್ಚು ಬೆಳೆಯುತ್ತಿವೆ: ಪ್ರೊ.ಪಾಲಹಳ್ಳಿ ವಿಶ್ವನಾಥ್
ಮುಂದುವರೆದು ಮಾತನಾಡಿದ ಅವರು, ಭಾರತೀಯ ಪ್ರತಿಯೊಬ್ಬ ನಾಗರೀಕನು ವೈಜ್ಞಾನಿಕ ಮನೋವೃತ್ತಿ, ಮಹಿಳಾ ಗೌರವ, ರಾಷ್ಟ್ರೀಯ ಸಂಪತ್ತಿನ ಸಂರಕ್ಷಣೆ, ಪರಿಸರ ಕಾಳಜಿಗಳನ್ನು ಮೂಡಿಸಲು ಧರ್ಮ ನಿರಪೇಕ್ಷವಾಗಿ ಲೌಕಿಕ ಜ್ಞಾನದಿಂದ ನೋಡಬೇಕೆಂದು ಮಾರ್ಗದರ್ಶನ ಮಾಡುತ್ತದೆ ಹಾಗಾಗಿ ಅಲ್ಪ ಮಾನವ ಗಂಡು ಜಾತಿ ಮತಗಳ ಅಂಧತ್ವದಿಂದ ಕುಂಟಿತಗೊಳ್ಳುತ್ತಿರುವ ಹೊಸ ಸಮುದಾಯಕ್ಕೆ ಸಂವಿಧಾನದ ಜ್ಞಾನವನ್ನು ನೀಡಿ ಅದನ್ನೇ ಜೀವನದ ಮಾರ್ಗವನ್ನಾಗಿ ಅಳವಡಿಸಿಕೊಳ್ಳುವಂತೆ ಮಾಡುವುದು ಭಾರತದ ಅಭಿವೃದ್ಧಿಗೆ ಮತ್ತು ಅದರ ಪರಂಪರೆಗೆ ಅತ್ಯಂತ ಪ್ರಮುಖವಾದದ್ದು ಎಂದು ತಿಳಿಸಿದರು.
ಸ್ವಾತಂತ್ರ್ಯ-ಗಣತಂತ್ರದ ನಡುವಿನ ವ್ಯತ್ಯಾಸವನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದ ಅಹಮದ್ ಹಗರೆ ಅವರು, ಭಾರತದ ಧ್ವಜವನ್ನು ಸ್ವಾತಂತ್ರ್ಯ ದಿನದಂದು ಹಾರಿಸಲಾಗುತ್ತದೆ. ಆದರೆ ಗಣರಾಜ್ಯೋತ್ಸವದಂದು ಪಸರಿಸಲಾಗುತ್ತದೆ ಎಂಬ ಬಗ್ಗೆ ವಿವರಣಾತ್ಮಕವಾಗಿ ತಿಳಿಸಿ ಹೇಳಿದರು.
ಇದನ್ನು ಓದಿ: ಡಿ.25ರಂದು ಜಾತಿ-ಅಸ್ಪೃಶ್ಯತೆ-ಅಸಮಾನತೆಯ ವಿರುದ್ಧ ʻಸಂವಿಧಾನವನ್ನು ಎದೆಗಪ್ಪಿಕೊಳ್ಳೋಣʼ ಕಾರ್ಯಕ್ರಮ
- ಬ್ರಿಟಿಷರ ಆಳ್ವಿಕೆಯಿಂದ ದೇಶದ ಸ್ವಾತಂತ್ರ್ಯವನ್ನು ಗುರುತಿಸಲು ಸ್ವಾತಂತ್ರ್ಯ ದಿನದಂದು ಧ್ವಜದ ಕಂಬದ ಕೆಳಗಿನಿಂದ ಮೇಲಕ್ಕೆ ಧ್ವಜವನ್ನು ಹಾರಿಸಲಾಗುತ್ತದೆ.
- ಧ್ವಜದ ಕಂಬದ ಮೇಲ್ಭಾಗದಲ್ಲಿ ಧ್ವಜವನ್ನು ಕಟ್ಟಲಾಗುತ್ತದೆ ಮತ್ತು ಗಣರಾಜ್ಯ ದಿನದಂದು ಪಸರಿಸಲಾಗುತ್ತದೆ, ಇದು ದೇಶವು ಈಗಾಗಲೇ ಸ್ವತಂತ್ರವಾಗಿದೆ ಎಂದು ಸೂಚಿಸುತ್ತದೆ.
- 1947ರಲ್ಲಿ ಅಧ್ಯಕ್ಷರು ಇರಲಿಲ್ಲವಾದ್ದರಿಂದ ಪ್ರಧಾನಮಂತ್ರಿಯವರು ಸರ್ಕಾರದ ಮುಖ್ಯಸ್ಥರಾಗಿ ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ಮಾಡುತ್ತಾರೆ. ಭಾರತವು ಜನವರಿ 26, 1950ರಂದು ಗಣರಾಜ್ಯವಾದಾಗಿನಿಂದ, ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕ ಮುಖ್ಯಸ್ಥರಾಗಿದ್ದಾರೆ ಮತ್ತು ಗಣರಾಜ್ಯ ದಿನದಂದು ಧ್ವಜಪಸರಣ ಮಾಡುತ್ತಾರೆ.
- ಗಣರಾಜ್ಯೋತ್ಸವ ದಿನ ರಾಜಪಥದಲ್ಲಿ ಭಾರತದ ಅಭಿವೃದ್ಧಿ, ಶಕ್ತಿ ಮತ್ತು ಸಾಧನೆಗಳನ್ನು ಹೇಳುತ್ತದೆ.
- ಸ್ವಾತಂತ್ರ್ಯ ಭಾರತದ ಪರಂಪರೆ, ಸಾಂಸ್ಕೃತಿಕತೆ ಸ್ವಾತಂತ್ರ್ಯದ ಚರಿತ್ರೆ ಹಾಗೂ ಅದಕ್ಕಾಗಿ ದುಡಿದವರನ್ನು ಸ್ಮರಿಸುತ್ತದೆ ಎಂಬ ಅಂಶಗಳ ಬಗ್ಗೆ ವಿವರಣೆ ನೀಡಿದರು.
ಭಾರತ ಸಂವಿಧಾನ ರಚನೆ ಮತ್ತು ಸವಾಲುಗಳು
ಭಾರತ ಸಂವಿಧಾನದ ರಚನೆಯ ಸ್ವರೂಪ ಮತ್ತು ಸವಾಲುಗಳ ಬಗ್ಗೆ ತರಬೇತಿ ನೀಡಿದ ಎಂ ಕೃಷ್ಣ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ವಿ ಶ್ರೀನಿವಾಸ್ ಅವರು, ಭಾರತ ಸಂವಿಧಾನವು ಭಾರತದ ನೆಲ ಜಲ ಜನಸಂಸ್ಕೃತಿ ಮತ್ತು ಐತಿಹಾಸಿಕ ಪ್ರಜ್ಞೆಯಿಂದ ಅಧ್ಯಯನ ಮಾಡಿ ಹೊಸ ಭಾರತಕ್ಕೆ ಹೊಸ ಮನ್ವಂತರ ತೋರಿಸಲು ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಜನ ಕೂಡಿ ಕಟ್ಟಿಕೊಟ್ಟ ಶ್ರೇಷ್ಠ ಸಂವಿಧಾನವಾಗಿದೆ. ಆದರೆ ಈ ಸಂವಿಧಾನ ಭಾರತದ ಜನತೆಯ ಬದುಕಿಗೆ ಸೂಕ್ತ ನೆಲೆಯಲ್ಲಿ ಜಾರಿಗೊಳಿಸಬೇಕಾಗಿರುವ ಅಂಗ ಸಂಸ್ಥೆ ಇದರ ಅಜ್ಞಾನದಿಂದ ಕೂಡಿ ಪಾಳೇಗಾರ ಮನಸ್ಥಿತಿಯನ್ನು ಆಳ್ವಿಕೆಯಲ್ಲಿ ತೊಡಗಿಕೊಂಡಿದೆ ಎಂದರು.
ಇದನ್ನು ಓದಿ: ಸಂವಿಧಾನದ ಆಚರಣೆಯೂ ಸಾಂವಿಧಾನಿಕ ನಡೆಯೂ
ಭಾರತದ ಗಣತಂತ್ರ ಸ್ವಾತಂತ್ರ ಹಾಗೂ ಭವಿಷ್ಯ ಅತ್ಯಂತ ಕಷ್ಟದ ಸ್ಥಿತಿಯಲ್ಲಿದೆ. ಭಾರತವನ್ನು ಸಂಪನ್ನವಾಗಿ ಇಡಬೇಕಾದರೆ ಸಂವಿಧಾನ ಬದ್ಧವಾಗಿ ಪ್ರತಿಯೊಬ್ಬ ಪ್ರಜೆಯೂ ತಮ್ಮ ಬದುಕನ್ನು ನಿರೂಪಿಸಿಕೊಳ್ಳಲೇಬೇಕಿದೆ. ಜೊತೆಗೆ ಸಂವಿಧಾನವೇ ಜೀವನದ ಉಸಿರಾಗಬೇಕಾಗಿದೆ. ಹಾಗಾಗಿ ಸಂವಿಧಾನದಲ್ಲಿ ಕೊಡಮಾಡಿರುವ ಹಕ್ಕುಗಳನ್ನು ಪಡೆಯಲು ರಾಜ ನಿರ್ದೇಶಕ ತತ್ವದ ಅಡಿಯಲ್ಲಿ ನಿರೂಪಿಸಲಾಗಿರುವ ಮೂಲಭೂತ ಕರ್ತವ್ಯಗಳನ್ನು ಜಾರಿಗೊಳಿಸಬೇಕಾಗಿದೆ. 51ಎಡಿ ಬರುವ ರಾಷ್ಟ್ರಭಕ್ತಿ ಅಂದರೆ ಈ ನೆಲದ ಎಲ್ಲಾ ಸ್ಮಾರಕ ಸಂಪನ್ಮೂಲಗಳು ಜೀವ ವೈವಿಧ್ಯ ಹಾಗೂ ಪರಿಸರವನ್ನು ಸಂರಕ್ಷಿಸಬೇಕು. ವೈಜ್ಞಾನಿಕ ಮನೋಧರ್ಮ ಜಿಜ್ಞಾಸೆ ಹಾಗೂ ಮಾನವತ್ವವನ್ನು ರೂಢಿಸಿಕೊಳ್ಳಲೇಬೇಕು ಮಹಿಳೆಯರ ಗೌರವಕ್ಕೆ ಗುಂಡುಂಟಾಗದಂತೆ ಮತ್ತು ಅವರನ್ನು ಸಮಾನ ನೆಲೆಯಲ್ಲಿ ನೋಡುವ ಮತ್ತು ಬದುಕುವ ಚಿಂತನೆ ಹಾಗೂ ಪ್ರಯೋಗಗಳನ್ನು ನಡೆಸಬೇಕು ಎಂದು ಒಂದೊಂದಾಗಿ ವಿವರಿಸಿದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾನೂನು ಕಾಲೇಜುಗಳ ಆಯ್ದ ವಿದ್ಯಾರ್ಥಿಗಳು, ನೋಂದಾಯಿಸಿಕೊಂಡ ಸಾರ್ವಜನಿಕರು ಹಾಗೂ ವಿಜ್ಞಾನ ಕಾರ್ಯಕರ್ತರು ಭಾಗವಹಿಸಿದ್ದರು. ಬಿಜಿವಿಎಸ್ ಜಿಲ್ಲಾ ಸಮಿತಿ ಸದಸ್ಯೆ ಲೋಲಾಕ್ಷಿ ಸ್ವಾಗತಿಸಿದರು, ಸಂಚಾಲಕಿ ಪ್ರಮೀಳಾ ವಂದಿಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ