ಹಾಸನ: ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಮತ್ತು ಸೋಮವಾರ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಸೋಮವಾರ ಸಂಜೆ ಆರು ಗಂಟೆಗೆ ಶುರುವಾದ ಮಳೆ ಸುಮಾರು ತಡರಾತ್ರಿವರೆಗೂ ಸುರಿದಿದೆ. ಎಡೆಬಿಡದೆ ಬೀಳುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯಿಂದಾಗಿ ಹಲವು ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ಹಾನಿಯಾಗಿದ್ದರೆ, ಕೆಲವು ಕಡೆ ಮನೆಗಳ ಗೋಡೆಗಳು ಕುಸಿದು ಬಿದ್ದಿವೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ.
ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ಸುರಿಯುತ್ತಿರುವ ಮಳೆಯಿಂದಾಗಿ ರಾಗಿ, ಜೋಳ, ಭತ್ತ, ಕಾಫಿ ಫಸಲಿಗೆ ಹಾನಿಯಾಗಿದ್ದು, ಸಾಲ ಮಾಡಿ ಬೆಳೆದಿದ್ದ ಬೆಳೆಗಳೆಲ್ಲ ನಷ್ಟವಾಗಿದೆ. ಚನ್ನರಾಯಪಟ್ಟಣ, ಹಿರೀಸಾವೆ, ಹೊಳೆನರಸೀಪುರ, ಅರಕಲಗೂಡು, ಅರಸೀಕೆರೆ ತಾಲೂಕುಗಳಲ್ಲಿ ರಾಗಿ ಮತ್ತು ಜೋಳ ಕಟಾವಿಗೆ ಬಂದಿದ್ದು, ಕೊಯ್ಲು ಸಾಧ್ಯವಾಗುತ್ತಿಲ್ಲ. ರಾಗಿ, ಜೋಳ ಬೆಳೆಗಾರರು ಸಂಕಷ್ಟಕ್ಕೆ ತುತ್ತಾಗುತ್ತಿದ್ದರೆ. ಮಳೆ ಬಿರುಸಿಗೆ ಹಲವೆಡೆ ರಾಗಿ ಪೈರು ನೆಲ ಕಚ್ಚಿದ್ದು ಫಸಲು ಮಣ್ಣು ಪಾಲಾಗುತ್ತಿದೆ. ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ತಾಲೂಕಿನಲ್ಲಿ ರೋಬೊಸ್ಟಾ, ಅರೇಬಿಕಾ ಕಾಫಿ ಕೊಯ್ಲು ಮಳೆಯಿಂದ ಹಾಳಾಗುತ್ತಿವೆ. ಕಾಳು ಮೆಣಸು ಉದುರುತ್ತಿದೆ ಎಂದು ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಶೀತಗಾಳಿ, ಮೋಡ ಕವಿದ ವಾತಾವರಣ ಹಾಗೂ ಜಿಟಿ ಜಿಟಿ ಮಳೆಯಿಂದ ಕಟಾವು ಮಾಡಿದ ಕಾಫಿ ಒಣಗಿಸಲು ರೈತರು ಹರಸಾಹಸ ಪಡುವಂತಾಗಿದೆ. ಮನೆಯೊಳಗೆ ಬೀಜ ಹರಡಿ ಸುತ್ತ ಬೆಂಕಿ ಹಾಕಿ ಮತ್ತು ಕಬ್ಬಿಣದ ತಗಡಿನ ಮೇಲೆ ಕಾಫಿ ಹಣ್ಣುಗಳನ್ನು ಬೆಳೆಗಾರರು ಒಣಗಿಸುತ್ತಿದ್ದಾರೆ. ಅದೇ ರೀತಿ ಆಲೂರು, ಅರಕಲಗೂಡು, ಹಾಸನ ಭಾಗದಲ್ಲಿ ಶುಂಠಿ ಬೆಳೆಯಲಾಗಿದ್ದು, ಅಧಿಕ ಮಳೆಯಿಂದ ಕೊಳೆ ರೋಗ ತಗುಲಿ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುವಂತಾಗಿದೆ. ಮೆಕ್ಕೆಜೋಳ ಬೆಳೆಗಾರರ ಸ್ಥಿತಿ ಶೋಚನೀಯವಾಗಿದೆ.
ಜಿಲ್ಲೆಯಲ್ಲಿ ಅಂದಾಜು 90 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. 6,77,000 ಮೆಟ್ರಿಕ್ ಟನ್ ಜೋಳ ಉತ್ಪಾದನೆ ನಿರೀಕ್ಷಿಸಲಾಗಿದ್ದು, ಶೇ 60ರಷ್ಟು ಬೆಳೆ ಕಟಾವಿಗೆ ಬಂದಿದ್ದು, ಜಿಟಿ ಜಿಟಿ ಮಳೆಯಿಂದಾಗಿ ಕಟಾವು ಮಾಡಲು ಆಗುತ್ತಿಲ್ಲ. ಮಾರುಕಟ್ಟೆ ದರ ಕ್ವಿಂಟಲ್‌ಗೆ 1000 ರಿಂದ 1200. ನಿರಂತರ ಮಳೆಯಿಂದಾಗಿ ಜೋಳದಲ್ಲಿ ಫಂಗಸ್ ಕಾಣಿಸಿಕೊಳ್ಳುತ್ತಿದ್ದು, ಕಷ್ಟಪಟ್ಟು ಬೆಳೆದ ಬೆಳೆ ಕೈಗೆ ಸಿಗದ ಕಾರಣ ಮಳೆ ನಿಂತರೆ ಸಾಕು ಎನ್ನುವಂತಾಗಿದೆ. ಹೋಬಳಿಯಲ್ಲಿ ಎರಡು ಮೂರು ದಿನಗಳಿಂದ ಸತತವಾಗಿ ಗಾಳಿ ಮತ್ತು ತುಂತುರು ಮಳೆಯಾಗುತ್ತಿದೆ. ಕೆಲ ದಿನ ಕಳೆದಿದ್ದರೆ ರಾಗಿ ಫಸಲು ಕೊಯ್ಲಿಗೆ ಬರುತ್ತಿತ್ತು. ರಾಗಿ ಬೆಳೆ ನೆಲ ಕಚ್ಚಿರುವುದರಿಂದ ಮೇವು ಸಿಗುವುದಿಲ್ಲ. ಮೇವು ಕೊಳೆತು ದನಗಳು ತಿನ್ನಲು ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಲ, ಸೋಲ ಮಾಡಿ ಬೆಳೆದ ಬೆಳೆ ಕೈಗೆ ಸಿಗದೆ ಕೊಳೆತು ಹೋಗುತ್ತಿದೆ. ಎಕರೆಗೆ 5 ರಿಂದ 6 ಸಾವಿರ ಖರ್ಚು ಮಾಡಿದ್ದೇನೆ. ಯಂತ್ರದಲ್ಲೂ ಕೊಯ್ಲು ಆಗುವುದಿಲ್ಲ. ಮಾಡಿದ ಖರ್ಚು ಸಿಗದಂತೆ ಆಗಿದೆ’ ಎಂದು ಅರಕಲಗೂಡು ಬೆಮ್ಮತ್ತಿ ರೈತ ಮಹಿಳೆ ರತ್ನ ಅಳಲು ತೋಡಿಕೊಂಡರು. ಸದ್ಯ ಜೋಳ ಕಟಾವು ನಡೆಯುತ್ತಿದ್ದು, ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರೈತರು ಹೈರಾಣಾಗಿದ್ದಾರೆ.
ಕೋಡಿ ಬಿದ್ದ ಕೆರೆಕಟ್ಟೆಗಳು: ಅಬ್ಬರಿಸುತ್ತಿರುವ ಮಳೆಗೆ ಕೆರೆಕಟ್ಟೆಗಳು ಕೋಡಿ ಬಿದ್ದಿವೆ. ಚನ್ನರಾಯಪಟ್ಟಣ ತಾಲೂಕಿನ ದಡ್ಡಿಹಳ್ಳಿ ಕೆರೆ 60 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕೋಡಿ ಬಿದ್ದಿದ್ದು, ನೀರು ಹರಿದು ಗದ್ದೆ, ತೋಟ, ರಸ್ತೆ ಜಲಾವೃತವಾಗಿದೆ. ತೆಂಗಿಕಾಯಿಗಳು ನೀರಿನಲ್ಲಿ ತೇಲಿ ಬರುತ್ತಿವೆ. ರಸ್ತೆ ಮೇಲೆ ನೀರು ಹರಿಯುತ್ತಿರುವುದರಿಂದ ಗ್ರಾಮದ ಸಂಪರ್ಕ ಕಡಿತಗೊಂಡಿದೆ.
ಹೊಳೆನರಸೀಪುರ ತಾಲೂಕಿನಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿದಿವೆ. ಐಚನಹಳ್ಳಿ, ಚಾಕೇನಹಳ್ಳಿ ಕಟ್ಟೆ ತುಂಬಿ ಹರಿಯುತ್ತಿವೆ. ತಾತನಹಳ್ಳಿ ಕೆರೆ ಏರಿ ಒಡೆದು ಪೂಜೆಕೊಪ್ಪಲು ಗ್ರಾಮದ ಗದ್ದೆಗಳಿಗೆ ನೀರು ನುಗ್ಗಿ ಅಪಾರ ಹಾನಿಯುಂಟಾಗಿದೆ. ಅದೇ ರೀತಿ ಬೇಲೂರಿನ ವಿಷ್ಣುಸಮುದ್ರ ಕೆರೆಯೂ ತುಂಬಿ ಕೋಡಿ ಬಿದ್ದಿದೆ.