ಗೌರಮ್ಮ
ಅನುಸೂಯ ಬೆಂಗಳೂರು ನಗರದ ವಿಜಿನಾಪುರ ಅಂಬೇಡ್ಕರ್ ನಗರ ಸರ್ಕಾರಿ ಕೆರೆ ಅಂಗಳದಲ್ಲಿ ಸಾಕಷ್ಟು ಬಡವರು ಮನೆ ಕಟ್ಟಿಕೊಂಡು ವಾಸವಿರುವುದಕ್ಕೆ ಹಕ್ಕುಪತ್ರ ಕೊಡಿಸಲು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷ ಮತ್ತು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲ್ಯೂಎ) ಹೋರಾಟ ಮಾಡುವ ಸಂಧರ್ಭದಲ್ಲಿ ನಮಗೆ ಸಿಕ್ಕ ಹೆಣ್ಣು ಮಗಳು. ಈಕೆಗಿಂತ ಮುಂಚೆ ಇವರ ಅಕ್ಕ ಮುನಿಲಕ್ಷ್ಮಿ, ತಾಯಿ ಶ್ಯಾಮಕ್ಕೂ ಇಬ್ಬರೂ ನಮ್ಮ ಹೋರಾಟಗಳಲ್ಲಿ ಸಕ್ರೀಯರಾಗಿದ್ದರು. ಆಗ ಅನುಸೂಯಳ ಒರಟುತನ, ಗಡಸು ಮಾತು. ರೋಷ ಕಂಡ ಅಕೆಯನ್ನು ಮಾತನಾಡಿಸಲು ಹೆದರಿಕೆಯಾಗುತ್ತಿತ್ತು.
ನಂತರ ನಮ್ಮ ಹೋರಾಟಗಳಿಂದ ಪ್ರಭಾವಿತಳಾಗಿ ನಮ್ಮ ಹೋರಾಟಗಳ ಜೊತೆ ಕೈಜೋಡಿಸಿದಳು ಹಾಗು ಮೂಂಚೂಣಿಯಲ್ಲಿ ನಿಲ್ಲುತ್ತಿದ್ದಳು. 1998ರಲ್ಲಿ ಸ್ಲಂ ಜನರನ್ನು ಒಕ್ಕಲೆಬ್ಬಿಸಲು ಆಗಿನ ಸಕ್ಕರೆ ಸಚಿವ ಎ.ಕೃಷ್ಣಪ್ಪ ಮುಂದಾದರು. ಅವರನ್ನು ಪ್ರಶ್ನಿಸಲು ಹೋದಾಗ ಪೊಲೀಸ್ ನವರು ಅಕೆಯನ್ನು ಹಿಡಿದುಕೊಂಡಾಗ 4-5 ಪೊಲೀಸರನ್ನು ತಳ್ಳಿ ಗುಡಿಸಲು ಕೀಳದಂತೆ ಎದೆ ಕೊಟ್ಟು ನಿಂತಳು. ನಂತರ ಸಚಿವರು ಅಕೆಯನ್ನು ಬಂಧಿಸಲು ಸೂಚಿಸಿದಾಗ ಎಲ್ಲ ಹೆಣ್ಣುಮಕ್ಕಳು ಪೊರಕೆ ಹಿಡಿದರು. ಸಚಿವರು, ತಹಸೀಲ್ದಾರ್ ಮತ್ತು ಪೊಲೀಸ್ ನವರು ಅಲ್ಲಿಂದ ಓಡಿಹೋಗುವಂತೆ ಮಾಡುವಲ್ಲಿ ಅನುಸೂಯ ಪಾತ್ರ ಮೂಂಚೂಣಿಯಲ್ಲಿತು. ಹೀಗೆ ಹೋರಾಟಗಳಲ್ಲಿ ತೊಡಗಿಸಿಕೊಳ್ಳುತಾ ಮಹಿಳಾ ಚಳುವಳಿಯಲ್ಲಿ ಸಕ್ರಿಯವಾಗುವ ಮೂಲಕ 2002-2003 ರಲ್ಲಿ ಪಕ್ಷದ ಸದಸ್ಯೆಯಾದಳು.
ಸಿಪಿಐಎಂ ಪಕ್ಷದ ಸದಸ್ಯೆಯಾದ ಅನುಸೂಯಳಿಗೆ ಕೆಂಪು ಬಾವುಟ ಅಂದರೆ ಹುಚ್ಚು. ಮನೆಯ ಮೇಲೆ ಕೆಂಪುಬಾವುಟ, ಆಕೆ ಹಾಕುವ ಬಟ್ಟೆ ಕೆಂಪು, ಗಾಡಿ ಬಣ್ಣ ಕೆಂಪು, ಗಾಡಿಯ ಮೇಲೆ ಪಕ್ಷದ ಚಿಹ್ನೆ, ಹೀಗೆ ಅತಿಯಾದ ಅಭಿಮಾನ. ಪಕ್ಷದ ಕಾರ್ಯಕ್ರಮ ಅಂದರೆ ಎಲ್ಲೆ ಕೆಲಸ ಮಾಡುತ್ತಿರಲಿ ಏನಾದರೂ ಸುಳ್ಳು ಹೇಳಿ ಬಂದು ಹಾಜರಾಗುತ್ತಿದ್ದಳು. ಹೋರಾಟ ಕಾರ್ಯಕ್ರಮಕ್ಕೆ ಬಂದರೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದರು. ಒಮ್ಮೆ ಬೆಂಗಳೂರಿನಲ್ಲಿ ಕುಮಾರಸ್ವಾಮಿ ಮತ್ತು ಯಡ್ಡಿಯೂರಪ್ಪನವರ ದೋಸ್ತಿ ಸರ್ಕಾರ ಬೆಂಗಳೂರಿನಲ್ಲಿರುವ 31 ಸಾವಿರ ಎಕರೆ ಭೂಮಿಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಹರಾಜು ಹಾಕುವುದನ್ನು ತಡೆಯಬೇಕೆಂದು ಸಿಪಿಐ(ಎಂ) ಪಕ್ಷ ಬೆಂಗಳೂರು ಸಮಿತಿಯು ಹೋರಾಟವನ್ನು ರೂಪಿಸಿತ್ತು. ಆಗ ಜಿಲ್ಲಾಧಿಕಾರಿ ಕಚೇರಿ ಸುತ್ತಲೂ ಪೊಲೀಸ್ ಬಂದೋಬಸ್ತ್ ಇತ್ತು. ಕಚೇರಿಯ ಗೇಟಿಗೆ ಬೀಗ ಹಾಕಲಾಗಿತು. ಹೇಗಾದರೂ ಜಿಲ್ಲಾಧಿಕಾರಿ ಕಚೇರಿಯ ಒಳಗೆ ಹೋಗಲು ಪ್ರಯತ್ನಿಸುತ್ತಿದ್ದಾಗ ಗೇಟ್ ಹತ್ತಿ ಒಳಗೆ ನುಗ್ಗಿದವರಲ್ಲಿ ಅನುಸೂಯ ಸಹ ಒಬ್ಬಳು.
ಮತ್ತೊಂದು ಬಾರಿ ರಾಮನಗರ ಗಣಿ ವಿಚಾರದಲ್ಲಿ ಹೋರಾಟ ಮಾಡಿದ ನಮ್ಮ ಮುಖಂಡರನ್ನು ಯಡಿಯೂರಪ್ಪ ಸರ್ಕಾರ ಬಂಧಿಸಿದಾಗ ಪಕ್ಷವು ಮುಖ್ಯಮಂತ್ರಿ ಮನೆ ಮುತ್ತಿಗೆ ಹಾಕಲು ಕಾರ್ಯಕ್ರಮ ರೂಪಿಸಿದಾಗಲೂ ಅನುಸೂಯ ಮುಂಚೂಣಿಯಲ್ಲಿದ್ದಳು. ಪೊಲೀಸರು ಬಂಧಿಸಿ ಜೀಪ್ ನೊಳಗೆ ಕೂರಿಸುವಾಗ 4 ಜನ ಮಹಿಳಾ ಪೊಲೀಸರನ್ನು ತಳ್ಳಿ ಬಿಸಾಡಿ ಈಚೆ ಬಂದ ಕೆಚ್ಚೆದೆ ಹೆಣ್ಣು ಮಗಳು. ಕೆ.ಅರ್.ಪುರಂ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆಯ ಸಂದರ್ಭದಲ್ಲಿ ಮಗುವಿನ ಸಾವಿಗೆ ಕಾರಣರಾದ ಸ್ತ್ರೀ ರೋಗ ತಜ್ಞರ ವಿರುದ್ಧ ಹೋರಾಟ ಮಾಡಿದ ಹೆಣ್ಣು ಮಗಳು. ನೊಂದ ಹೆಣ್ಣು ಮಕ್ಕಳು ಮಧ್ಯ ರಾತ್ರಿ ಬಂದು ಬಾಗಿಲು ಬಡಿದರೆ ಆ ಹೆಣ್ಣು ಮಗಳಿಗೆ ನ್ಯಾಯ ಕೊಡಿಸಲು ಅಷ್ಟು ಹೊತ್ತಿನಲ್ಲಿ ಪೊಲೀಸ್ ಠಾಣೆಗೆ ಹೋಗುತ್ತಿದ್ದ ಗಡುಸುತನ ಅವರಲ್ಲಿತ್ತು.
ಒಂದು ಬಾರಿ ನೊಂದ ಹೆಣ್ಣು ಮಗಳಿಗೆ ನ್ಯಾಯ ನೀಡಬೇಕೆಂದು ಕೆ.ಅರ್.ಪುರಂ ಇನ್ಸ್‌ಪೆಕ್ಟರ್ ಬಳಿ ಪೋನಿನಲ್ಲಿ ಮಾತನಾಡಿದ್ದಾಳೆ. ಅವರು ಈಕೆ ಗಡುಸು ಧ್ವನಿ ಕೇಳಿ ‘ಯಾರೋ ಬೊ.. ಮಗನೇ, ಬೂಟ್ ನಲ್ಲಿ ಹೊಡೆಯುತ್ತೇನೆ’ ಎಂದಾಗ ಸಂಜೆ ಕೆಲಸ ಮುಗಿಸಿ ಠಾಣೆಯ ಅಧಿಕಾರಿಯ ಮುಂದೆ ಹೋಗಿ ಕುಳಿತುಕೊಂಡು ಸರ್ಕಾರ ನಿಮಗೆ ಬೂಟ್ ಕೊಟ್ಟದ್ದು ನಮಗೆ ಹೊಡೆಯಲಿಕ್ಕಾ, ಇವತ್ತು ನನಗೆ ಬೂಟ್ ನಲ್ಲಿ ಹೊಡೆಯುವವರೆಗೂ ನಾನು ಇಲ್ಲಿಂದ ಹೋಗುವುದಿಲ್ಲ ಅಂತ ಅವರ ಚೇಂಬರ್‌ನಲ್ಲಿ ಗಂಟೇಗಟ್ಟಲೇ ಜನವಾದಿ ಮಹಿಳಾ ಮುಖಂಡರ ಜೊತೆ ಕುಳಿತು ಕೆಲಸ ಮಾಡಲು ಬಿಟ್ಟಿರಲಿಲ್ಲ. ನಂತರ ನನಗೆ ಇನ್ಸ್‌ಪೆಕ್ಟರ್ ಫೋನ್ ಮಾಡಿ ಈಕೆಯನ್ನು ಕರೆದುಕೊಂಡು ಹೋಗಲು ಸೂಚಿಸಿದರು. ಆಗ ನಾವು ‘ನೀವು ಅಕೆಗೆ ಹೇಳಿದ್ದಕ್ಕೆ ಕ್ಷಮೆ ಕೇಳುವವರೆಗೂ ಅಕೆ ಹೋಗುವುದಿಲ್ಲʼ ಎಂದು ತಿಳಿಸಿದಾಗ ಬೇರೆ ದಾರಿಯಿಲ್ಲದೆ ಅಧಿಕಾರಿಗಳು ಕ್ಷಮೆಕೇಳಿ ಕೈಮುಗಿಯುವಂತೆ ಮಾಡಲಾಯಿತು. ಠಾಣೆಗೆ ಸಾಕಷ್ಟು ಜನರು ಬರುತ್ತಿರುವಾಗ ಮರ್ಯಾದೆ ಹೋಗುತ್ತದೆಂದು ಇನ್ಸ್‌ಪೆಕ್ಟರ್ ಗೆ ಆತಂಕವಾಗಿತ್ತು.
ಹೀಗೆ ಹೇಳುತ್ತಾ ಹೋದರೆ ಅನುಸೂಯಳ ಬಗ್ಗೆ ಸಾಕಷ್ಟು ಘಟನೆಗಳಿವೆ. ಅಂಗನವಾಡಿಯ ಅಖಿಲ ಭಾರತ ಸಮ್ಮೇಳನದಲ್ಲಿ ವಸತಿ ಜವಾಬ್ದಾರಿಯನ್ನು ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್)ಗೆ ನೀಡಲಾಗಿತ್ತು. ಆಗ ಹಾಸಿಗೆ ಹೊತ್ತು ತಂದು ಹಾಕುವುದರಿಂದ ಹಿಡಿದು ನೀರು ಕಾಯಿಸಿಕೊಡುವ ಸ್ವಯಂ ಸೇವಕರ ಕೆಲಸ ಅಚ್ಚುಕಟ್ಟಾಗಿ ಮಾಡಿದ್ದಳು. ಇದರಿಂದಾಗಿ ಹೊರ ರಾಜ್ಯದಿಂದ ಬಂದ ಪ್ರತಿನಿಧಿಗಳು ವರ್ಷ ವರ್ಷ ಉಡುಗೊರೆಗಳನ್ನು ಕಳಿಸುವಂತಹ ಪ್ರೀತಿಯ ಗೆಳತಿಯಾಗಿದ್ದಳು. ವಿಜಿನಾಪುರ ಒಂದೇ ಅಲ್ಲ, ಸುತ್ತಮುತ್ತಲ ಪ್ರದೇಶಗಳಲ್ಲದೆ ನಮ್ಮ ರಾಜ್ಯದ ಎಲ್ಲ ಜಿಲ್ಲೆಗಳ ಜನವಾದಿಯ ಗೆಳತಿಯರಿಗೆ ಅನುಸೂಯ ಅಚ್ಚುಮೆಚ್ಚು. ಸ್ಥಳೀಯವಾಗಿ ಎಲ್ಲ ಧರ್ಮದ ಜನರು ಇವರನ್ನು ಇಷ್ಟಪಡುತ್ತಿದ್ದರು. ವಿಜನಾಪುರದಲ್ಲಿ ಜನವಾದಿ ಮಹಿಳಾ ಸಂಘಟನೆಯ ಕಚೇರಿ ಕಟ್ಟಲು ಅನುಸೂಯರವರ ಪಾತ್ರ ಹೆಚ್ಚು. ಸರ್ಕಾರಿ ಜಾಗದಲ್ಲಿ ಕಚೇರಿ ನಿರ್ಮಾಣಕ್ಕೆ ಜಾಗ ಹಿಡಿದಿದ್ದೆವು. ಅದರ ಮೇಲೆ ಸ್ಥಳೀಯ ಬಿಜೆಪಿ ಪಾಲಿಕೆ ಸದಸ್ಯರ ಕಣ್ಣು ಬಿದ್ದು, ಜಾಗ ಬಿಟ್ಟುಕೊಡಲು ನಮ್ಮನ್ನು ಕೇಳಿದರು. ನಾವು ಯಾರೂ ಒಪ್ಪಿರಲಿಲ್ಲ. ಮಂಡ್ಯದಲ್ಲಿ ‘ಸಮತೆಗಾಗಿ ಸಹಪಯಾಣ’ ರಾಜ್ಯ ಮಟ್ಟದ ಕಾರ್ಯಕ್ರಮ ನಡೆಯುತ್ತಿತ್ತು. ನಾವೆಲ್ಲರೂ ಅಲ್ಲಿರುವಾಗ ಬೆಸ್ಕಾಂ ಅಧಿಕಾರಿಗಳು ಟ್ರಾನ್ಸ್ ಫಾರಂ ಹಾಕಲು… ಗುಂಡಿ ತೆಗೆದಿದ್ದರು. ಇದು ಈಕೆಗೆ ಗೊತ್ತಾಗಿ ಇನ್ನೊಬ್ಬ ಸಂಗಾತಿ ನಸ್ರೀನ್ ತಾಜ್ ಹೋಗಿ ಸಿಕ್ಕಾಪಟ್ಟೆ ಗಲಾಟೆ ಮಾಡಿ ಅಲ್ಲಿಂದ ಅವರು ವಾಪಸ್ಸು ಹೋಗುವವರೆಗೂ ಬಿಟ್ಟಿಲ್ಲ. ಇವರು ಅವತ್ತು ಸುಮ್ಮನಿದ್ದಿದರೆ ನಾವು ಮಂಡ್ಯದಿಂದ ಬರುವಷ್ಟರಲ್ಲಿ ಜಾಗ ಕಣ್ಮರೆಯಾಗುತ್ತಿತು.
ತೂಬರಹಳ್ಳಿಯಲ್ಲಿ ವಾಸಿಸುತ್ತಿದ್ದ ಪಶ್ಚಿಮ ಬಂಗಾಳದ ಜನರನ್ನು ಬಾಂಗ್ಲಾದೇಶದವರೆಂದು ಅಲ್ಲಿನ ಶಾಸಕ ಅರವಿಂದ ಲಿಂಬಾವಳಿ ಒಕ್ಕಲೆಬ್ಬಿಸುವಾಗ ಸಿಪಿಐ(ಎಂ) ಪಕ್ಷದ ವತಿಯಿಂದ ಬೆಳಿಗ್ಗೆ 4 ಗಂಟೆಗೆ ಪಕ್ಷದ ಮುಖಂಡ ಗೋಪಾಲಗೌಡರ ಜೊತೆಯಲ್ಲಿ ಹೋಗಿ ಕತ್ತಲೆಯಲ್ಲಿ ನಾಯಿಯಿಂದ ಕಚ್ಚಿಸಿಕೊಂಡು ಹೋರಾಟದಲ್ಲಿ ಭಾಗವಹಿಸಿದ್ದರು.
ಕಚೇರಿಗಳು ಯಾವಾಗಲೂ ತೆಗೆದಿರಬೇಕು. ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸಬೇಕು. ಪಕ್ಷ ಜೋರಾಗಿ ಬೆಳೆಸಬೇಕು ಅನ್ನುವ ಆಸೆಯಿಂದ ಎಲ್ಲರೊಂದಿಗೂ ಜಗಳವಾಡುತ್ತಿದ್ದರು. ಅರೋಗ್ಯದ ಕಡೆ ಸರಿಯಾಗಿ ಗಮನಹರಿಸದ ಕಾರಣ ಹೃದಯ ಸಂಬಂಧಿಸಿದ ಕಾಯಿಲೆಯಿಂದ ಆಸ್ಪತ್ರೆ ಸೇರುವಂತಾಯಿತು. ಆಸ್ಪತ್ರೆಯಲ್ಲಿ ಅಕ್ಸಿಜನ್ ಹಾಕಿ ಮಲಗಿದಾಗ ನರ್ಸ್ ಮಾತ್ರೆ ತರಲು ಚೀಟಿ ಬರೆದುಕೊಟ್ಟಾಗ ‘ಯಾಕಮ್ಮ ನಿಮ್ಮ ಹತ್ತಿರ ಮಾತ್ರೆ ಇಲ್ವಾ ಬರೆದುಕೊಡುತ್ತಿದ್ದಿರಾ’ ಅಂತ ಪ್ರಶ್ನಿಸಿದಳು. ನೋವಿನಲ್ಲಿಯೇ ಜನವರಿ 3 ರಂದು ಸಂಜೆ 5 ಗಂಟೆಗೆ ನಿಧನಳಾದಳು.
ತಂದೆ ತಾಯಿ ಇಲ್ಲದ ಈಕೆ ‘ನನ್ನ ಅಮ್ಮ ನೀನು. ನನ್ನ ಆಸೆ ಇಡೇರಿಸಬೇಕು’ ಎಂದು ಹೇಳುತ್ತಾ, ಎಲ್ಲರಿಗೂ ವಿದಾಯ ಹೇಳಿ ಹೋದಳು. ಅನುಸೂಯಳ ವಯಸ್ಸು 53.
ಇಂತಹ ಒಬ್ಬ ಕಾರ್ಯಕರ್ತೆಯನ್ನು ಹುಟ್ಟುಹಾಕಲು ಸಾಧ್ಯವಿಲ್ಲ. ಅಕೆಯ ಆಸೆಯಂತೆ ಕೆಂಪು ಬಾವುಟ, ಕೆಂಪು ಬಣ್ಣದ ಹೂಗಳಿಂದ ಅಲಂಕಾರ, ಪೆಂಡಾಲ್ ಗೆ ಕೆಂಪು ಬಾವುಟ, ಶವ ಸಾಗಿಸುವ ವಾಹನದಲ್ಲೂ ಕೆಂಪು ಬಾವುಟದೊಂದಿಗೆ ‘ಅನುಸೂಯ ಅಮರ್ ಹೈ’ ಎಂಬ ಘೋಷಣೆಯೊಂದಿಗೆ ನಮ್ಮನೆಲ್ಲ ಅಗಲಿ ಹೋದರು.
ಈಗ ಕೇವಲ ಅನುಸೂಯ ನೆನಪು ಮಾತ್ರ.