–ಬೃಂದಾ ಕಾರಟ್, ಅನು: ಸಿ.ಸಿದ್ದಯ್ಯ
‘ಸುಧಾರಣೆ’ ಎಂಬ ಪದವು ಬಂಡವಾಳಶಾಹಿಯ ಲಾಭವನ್ನು ಗರಿಷ್ಟಗೊಳಿಸುವ ಮಾದರಿಗಳಿಗೆ ಮುಖವಾಡವಾಗಿದ್ದಂತೆಯೇ, ‘ಮಹಿಳಾ–ನೇತೃತ್ವದ ಅಭಿವೃದ್ಧಿ’ ಎಂಬುದು ಮಹಿಳೆಯರ ಅಭಿವೃದ್ಧಿಗೆ ಉದ್ದೇಶಿಸಿರುವ ಕಾರ್ಯಕ್ರಮಗಳು ಮತ್ತು ಯೋಜನೆಗಳಲ್ಲಿ ಸರ್ಕಾರದ ಹೂಡಿಕೆ ಕಡಿಮೆಯಾಗುತ್ತಿರುವ ಪ್ರವೃತ್ತಿಯನ್ನು ಮರೆಮಾಡುತ್ತದೆ. ಕೇಂದ್ರ ಸರ್ಕಾರವು ತನ್ನ ಆರ್ಥಿಕ ನೀತಿಗಳನ್ನು ಜಾರಿಗೊಳಿಸುವ ಕೆಲಸವನ್ನು ದೇಶದ ಶೇಕಡ 1 ಶ್ರೀಮಂತರಿಗೆ ವಹಿಸಿರುವಾಗ, ದೇಶದ ಶೇ. 40ರಷ್ಟು ಸಂಪತ್ತನ್ನು ಅವರು ನಿಯಂತ್ರಿಸುತ್ತಿರುವಾಗ ಇಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಪೊರೇಟ್ ನೇತೃತ್ವದ ಅಭಿವೃದ್ಧಿಯೇ ಹೊರತು ಖಂಡಿತವಾಗಿಯೂ ಮಹಿಳಾ–ನೇತೃತ್ವದ ಅಭಿವೃದ್ಧಿಯಲ್ಲ. ಮಹಿಳಾ
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಜಿ-20 ಶೃಂಗಸಭೆಯು “ಲಿಂಗ ಸಮಾನತೆ ಮತ್ತು ಎಲ್ಲಾ ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಸಬಲೀಕರಣ” ಎಂಬ ವಿಭಾಗವನ್ನು ಒಳಗೊಂಡಿರುವ ಘೋಷಣೆಯನ್ನು ಅಂಗೀಕರಿಸಿತು. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಮಹಿಳೆಯರ “ನಾಯಕತ್ವ ಮತ್ತು ಸಮಾನ ಭಾಗವಹಿಸುವಿಕೆಯ” ಪ್ರಾಮುಖ್ಯತೆಯನ್ನು ಪುನರುಚ್ಚರಿಸುವ 17 ಷರತ್ತುಗಳ ಮೂಲಕ, ಘೋಷಣೆಯು “ಮಹಿಳಾ ಸಬಲೀಕರಣದ ಮೇಲೆ ಕಾರ್ಯನಿರತ ಗುಂಪನ್ನು” ಸ್ಥಾಪಿಸಲು ನಿರ್ಧರಿಸಿತು.
ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಮೇಲಿನ ನಿರಂತರವಾದ ತಾರತಮ್ಯದ ಜಾಗತಿಕ ವಾಸ್ತವವನ್ನು ಗಮನಿಸಿದರೆ ಇದು ಸ್ವಾಗತಾರ್ಹ. ಆದಾಗ್ಯೂ, ಇದರಲ್ಲಿ ಹೊಸತೇನಿದೆ ಎಂಬ ಭಾವನೆ ಬರುವುದು ಸಹಜ. ಏಕೆಂದರೆ ಹಿಂದೆ ರೂಪುಗೊಂಡ ಎಲ್ಲಾ “ಕಾರ್ಯನಿರತ ಗುಂಪುಗಳ” ಶಿಫಾರಸುಗಳು ಕಾರ್ಯರೂಪಕ್ಕೆ ಬಂದಿಲ್ಲ. ಉದಾಹರಣೆಗೆ, “ಸುಸ್ಥಿರ ಅಭಿವೃದ್ಧಿ ಗುರಿಗಳು” ಎಂಬ ಗುಂಪನ್ನು ಲಿಂಗ ತಾರತಮ್ಯವನ್ನು ಮುಚ್ಚುವ ನಿರ್ದಿಷ್ಟ ಗುರಿಯೊಂದಿಗೆ ಸ್ಥಾಪಿಸಲಾಗಿದೆ. ಆದಾಗ್ಯೂ, ಮೇಲೆ ತಿಳಿಸಲಾದ ಘೋಷಣೆಯು “2030 ರತ್ತ ಮಧ್ಯದ ವೇಳೆಗೆ, ಸುಸ್ಥಿರ ಅಭಿವೃದ್ಧಿ ಗುರಿಗಳ ಪ್ರಗತಿಯು ಗುರಿಯ 12 ಪ್ರತಿಶತವನ್ನು ಮೀರುವುದಿಲ್ಲ” ಎಂದು ಒಪ್ಪಿಕೊಳ್ಳುತ್ತದೆ.
ಲಿಂಗ ಸಮಾನತೆಯ ವಿಭಾಗವು ಹೇಳುತ್ತದೆ: “ನಾವು ಮಹಿಳಾ-ನೇತೃತ್ವದ ಅಭಿವೃದ್ಧಿಯನ್ನು ಪ್ರೋತ್ಸಾಹಿಸುತ್ತೇವೆ. ಜಾಗತಿಕ ಸವಾಲುಗಳನ್ನು ಒಳಗೊಂಡಂತೆ ಮತ್ತು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಸಕ್ರಿಯ ಪಾಲ್ಗೊಳ್ಳುವವರಾಗಿ ಕೊಡುಗೆ ನೀಡುವಲ್ಲಿ ನಿರ್ಧಾರ ತೆಗೆದುಕೊಳ್ಳುವವರಾಗಿ ಮಹಿಳೆಯರ ಪೂರ್ಣ, ಸಮಾನ, ಪರಿಣಾಮಕಾರಿ ಮತ್ತು ಅರ್ಥಪೂರ್ಣ ಭಾಗವಹಿಸುವಿಕೆಯನ್ನು ಉತ್ತೇಜಿಸಲು ನಾವು ಬದ್ಧರಾಗಿದ್ದೇವೆ.” ಮಹಿಳಾ
ಇದನ್ನೂ ಓದಿ : “ಮುಸ್ಲಿಂ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ಸತತ ಕರೆ” ಗಳ ವಿರುದ್ಧ ಸುಪ್ರಿಂ ಕೋರ್ಟಿಗೆ ಬೃಂದಾ ಕಾರಟ್ ಅರ್ಜಿ
‘ಮಹಿಳಾ–ನೇತೃತ್ವದ ಅಭಿವೃದ್ಧಿ’ ಎಂದರೇನು?
“ಮಹಿಳಾ-ನೇತೃತ್ವದ ಅಭಿವೃದ್ಧಿ” ಎಂಬ ನುಡಿಗಟ್ಟು ನಿಜಕ್ಕೂ ಗಮನಾರ್ಹವಾಗಿದೆ. ಈ ನುಡಿಗಟ್ಟು ಭಾರತ ಸರ್ಕಾರದ ಆವಿಷ್ಕಾರವಾಗಿದೆ. ಅದೀಗ ಇದನ್ನು ಬಹಳವಾಗಿ ಬಳಸುತ್ತಿದೆ. ಆದರೆ ಇದರ ನಿಜವಾದ ಅರ್ಥವೇನು ಎಂಬುದಕ್ಕೆ ಘೋಷಣೆಯ ಈ ವಿಭಾಗದ 17 ಕಲಮುಗಳಲ್ಲಿ ಯಾವುದೇ ವಿವರಣೆ ಸಿಗುವುದಿಲ್ಲ. ಇದು ಕೇವಲ ಶಬ್ದಾರ್ಥದ ಪ್ರಶ್ನೆಯಲ್ಲ. “ಮಹಿಳಾ-ನೇತೃತ್ವದ ಅಭಿವೃದ್ಧಿ” ಎಂಬ ಪದವನ್ನು ಬಳಸುವಾಗ, ಈ ಅಭಿವೃದ್ಧಿ ಮಾದರಿ ಬೇರೆ ಮಹಿಳಾ-ಅಭಿವೃದ್ಧಿ ಮಾದರಿಗಳಿಗಿಂತ ಹೇಗೆ ಭಿನ್ನವಾಗಿದೆ ಎಂದು ವಿವರಿಸಲು ನಾಯಕರು ಜವಾಬ್ದಾರರಾಗಿರುತ್ತಾರೆ. ವಾಸ್ತವವಾಗಿ, ಅನೇಕ ಸ್ವಯಂ ಘೋಷಿತ ‘ಪ್ರಜಾಪ್ರಭುತ್ವ’ಗಳಲ್ಲಿ (ವಿಶೇಷವಾಗಿ ಪಶ್ಚಿಮದಲ್ಲಿ) ಪ್ರಚಲಿತದಲ್ಲಿರುವ ‘ಅಭಿವೃದ್ಧಿ ಮಾದರಿಗಳು’ ದೇಶಗಳ ನಡುವೆ, ದೇಶಗಳಲ್ಲಿ ಶ್ರೀಮಂತ ಮತ್ತು ಬಡವರ ನಡುವೆ ಮತ್ತು ಪುರುಷರು ಮತ್ತು ಮಹಿಳೆಯರ ನಡುವೆ ಹೊಲಸು ಅಸಮಾನತೆಗಳಿಗೆ ಕಾರಣವಾಗಿವೆ.
ಈ ಮಾದರಿಯ ಮುಖ್ಯಾಂಶ ಅದೇ ಹಳಸಲು ‘ಕೆಳಗೆ ತೊಟ್ಟಿಕ್ಕುವ’ ಸಿದ್ಧಾಂತ, ಅಂದರೆ ಎಲ್ಲಾ ದೇಶಗಳಲ್ಲಿನ ಬಹುತೇಕ ಎಲ್ಲಾ ದೊಡ್ಡ ಬಂಡವಳಿಗರು ಆ ದೇಶಗಳು ನೀಡುವ ತೆರಿಗೆ ರಿಯಾಯಿತಿಗಳು, ಬ್ಯಾಂಕ್‌ಗಳಿಂದ ಪಡೆದ ಸಾಲ ಮನ್ನಾ, ಸಬ್ಸಿಡಿ ಬೆಲೆಯಲ್ಲಿ ಭೂಮಿ ಖರೀದಿ ಮತ್ತು ಹೆಚ್ಚಿನ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ಇತ್ಯಾದಿಗಳಿಗೆ ಕಾರಣವಾಗುತ್ತದೆ ಎಂಬ ಹೆಸರಿನಲ್ಲಿ ದೇಶಗಳ ನಡುವೆ ಹಣಕಾಸು ಬಂಡವಾಳವನ್ನು ಮುಕ್ತವಾಗಿ ಸಾಗಿಸುವ ಎಲ್ಲಾ ಪ್ರಯೋಜನಗಳನ್ನು ಅನುಭವಿಸುತ್ತಿದ್ದಾರೆ..‘ಸರ್ಕಾರದ ನಿಯತ್ರಣಗಳಿಲ್ಲದಿದ್ದರೆ ಅದೇ ಉತ್ತಮ ಆಡಳಿತ’ ಎಂಬ ಮಾದರಿಯು ಎಲ್ಲ ಸರ್ಕಾರೀ ನಿಯಂತ್ರಣಗಳನ್ನು ಕಳಚಿ ಹಾಕಿ ಸಾರ್ವಜನಿಕ ಆಸ್ತಿಗಳನ್ನು ಖಾಸಗಿಯವರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿದೆ, ಆಯಕಟ್ಟಿನ ಉದ್ದಿಮೆಗಳನ್ನು ಖಾಸಗೀಕರಿಸಿದೆ. ಇವೆಲ್ಲವೂ ‘ಸುಧಾರಣೆ’ಯ ಹೆಸರಿನಲ್ಲಿ ನಡೆದಿದೆ ಎಂಬುದು ನಮಗೆ ಗೊತ್ತಿದೆ. ಜಿ-20 ಶೃಂಗಸಭೆಯ ಘೋಷಣೆಯು ಇದಕ್ಕೇ ಬದ್ದತೆಯನ್ನು ದೃಢಪಡಿಸಿದೆ. “ಅಭಿವೃದ್ಧಿ ಯೋಜನೆಗಳನ್ನು ಚಾಲನೆ ಮಾಡುವಲ್ಲಿ ಮತ್ತು ಸುಸ್ಥಿರ ಆರ್ಥಿಕ ಪರಿವರ್ತನೆಯಲ್ಲಿ ಖಾಸಗಿ ವಲಯದ ಪ್ರಮುಖ ಕೊಡುಗೆಯನ್ನು ನಾವು ಗುರುತಿಸುತ್ತೇವೆ” ಎಂದು ಅದು ಹೇಳಿದೆ. ಅಭಿವೃದ್ಧಿಯ ಸ್ಥೂಲ ಮಾದರಿಯು ಇದೇ ಆಗಿದ್ದರೆ, ಮಹಿಳಾ-ನೇತೃತ್ವದ ಅಭಿವೃದ್ಧಿ ಎಂಬುದು ಇದಕ್ಕೆ ಎಲ್ಲಿ ಹೊಂದಿಕೊಳ್ಳುತ್ತದೆ?
ಕೇಂದ್ರ ಸರ್ಕಾರದ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ಮಾರ್ಚ್ 7 ರಂದು “ಮಹಿಳಾ ಅಭಿವೃದ್ಧಿಯಿಂದ ಮಹಿಳಾ-ನೇತೃತ್ವದ ಅಭಿವೃದ್ಧಿಗೆ” ಶೀರ್ಷಿಕೆಯ ಪಟ್ಟಿಯನ್ನು ಬಿಡುಗಡೆ ಮಾಡಿತು,. ‘ಸುಧಾರಣೆ’ ಎಂಬ ಪದವು ಬಂಡವಾಳಶಾಹಿಯ ಲಾಭವನ್ನು ಗರಿಷ್ಟಗೊಳಿಸುವ ಮಾದರಿಗಳಿಗೆ ಮುಖವಾಡವಾಗಿರುವಂತೆಯೇ, ‘ಮಹಿಳಾ-ನೇತೃತ್ವದ ಅಭಿವೃದ್ಧಿ’ ಎಂಬುದು ಮಹಿಳೆಯರ ಅಭಿವೃದ್ಧಿಗೆ ಉದ್ದೇಶಿಸಿರುವ ಕಾರ್ಯಕ್ರಮಗಳು ಮತ್ತು ಯೋಜನೆಗಳಲ್ಲಿ ಸರ್ಕಾರದ ಹೂಡಿಕೆ ಕಡಿಮೆಯಾಗುತ್ತಿರುವ ಪ್ರವೃತ್ತಿಯ ವಾಸ್ತವತೆಯನ್ನು ಮರೆಮಾಡುತ್ತದೆ. ಮಹಿಳಾ
ಬಜೆಟ್ ನಲ್ಲಿ ಇಳಿಕೆ
ಮಹಿಳೆಯರ ಹೋರಾಟಗಳ ಫಲವಾಗಿ 2005-06ರಲ್ಲಿ ಲಿಂಗ ಬಜೆಟ್ ಎಂಬುದು ಆರಂಭವಾಯಿತು. ಲಿಂಗ ತಾರತಮ್ಯದ ಬಹು ಸ್ತರಗಳನ್ನು ಪರಿಹರಿಸಲು ಬಜೆಟಿನಲ್ಲಿ ರಾಷ್ಟ್ರೀಯ ಸಂಪನ್ಮೂಲಗಳಲ್ಲಿ ಒಂದು ಪಾಲನ್ನು ಮೀಸಲಿಡುವುದು ಇದರ ಉದ್ದೇಶ. ಪಾಲಿನ ಬಜೆಟ್ 2005-2006 ರಲ್ಲಿ ಪ್ರಾರಂಭವಾಯಿತು. ಇದು ಎರಡು ಭಾಗಗಳನ್ನು ಹೊಂದಿದೆ. ಮೊದಲ ಭಾಗ, 100 ಪ್ರತಿಶತ ಮಹಿಳಾ ಯೋಜನೆಗಳನ್ನು ಒಳಗೊಂಡಿರುತ್ತದೆ. ಎರಡನೆಯ ಭಾಗವೆಂದರೆ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳಲ್ಲಿ ಕನಿಷ್ಠ ಮೂರನೇ ಒಂದು ಭಾಗದಷ್ಟು ವೆಚ್ಚವು ಮಹಿಳೆಯರಿಗಾಗಿರಬೇಕು. ಮಹಿಳಾ-ನೇತೃತ್ವದ ಅಭಿವೃದ್ಧಿಗೆ ಬಂದಾಗ, ಲಿಂಗ ಬಜೆಟ್‌ನ ಒಟ್ಟು ಮೊತ್ತವನ್ನು ಮಹಿಳೆಯರಿಗೆ ಗಣನೀಯವಾಗಿ ಹೆಚ್ಚು ಮೀಸಲಿಡಬೇಕು. ಆದರೆ ವಾಸ್ತವದಲ್ಲಿ ಈ ಎರಡೂ ಕ್ಷೇತ್ರಗಳಲ್ಲಿ ವ್ಯತಿರಿಕ್ತ ಪ್ರವೃತ್ತಿ ಚಾಲ್ತಿಯಲ್ಲಿದೆ. 2023-24ರ ಒಟ್ಟು ಲಿಂಗ ಬಜೆಟ್ ಅನ್ನು ಕಳೆದ ವರ್ಷ ಶೇಕಡಾ 5.2 ರಿಂದ ಶೇಕಡಾ 5 ಕ್ಕೆ ಇಳಿಸಲಾಗಿದೆ. ಸರಾಸರಿ, ಲಿಂಗ ಬಜೆಟ್ ಅನ್ನು ಪರಿಚಯಿಸಿದಾಗಿನಿಂದ ಯಾವುದೇ ಗಮನಾರ್ಹ ಹೆಚ್ಚಳವನ್ನು ನೀಡಲಾಗಿಲ್ಲ. ಇದು ಯಾವಾಗಲೂ ಶೇ. 4 ಮತ್ತು ಶೇ. 6 ರ ನಡುವೆ ಇರುತ್ತದೆ.
ಕಳವಳಕಾರಿ ಸಂಗತಿಯೆಂದರೆ, 2023-24ರಲ್ಲಿ “ಮಹಿಳಾ-ನೇತೃತ್ವದ ಅಭಿವೃದ್ಧಿ” ಎಂಬ ಪದಗುಚ್ಛವನ್ನು ಪರಿಚಯಿಸಿದಾಗ, ಲಿಂಗ ಬಜೆಟ್‌ನ ಮೊದಲ ಭಾಗದಲ್ಲಿ ವೆಚ್ಚವು ಅತ್ಯಂತ ಕಡಿಮೆಯಾಗಿದ್ದು, ಒಟ್ಟು ಮೊತ್ತದ ಸುಮಾರು ಶೇ. 39 ಮತ್ತು ಎರಡನೇ ಭಾಗದಲ್ಲಿ ಒಟ್ಟು ಶೇ. 61 ರಷ್ಟಿತ್ತು. ಬೇರೆ ರೀತಿಯಲ್ಲಿ ಹೇಳುವುದಾದರೆ, ಈಗಾಗಲೇ ಕಡಿಮೆ ಬಜೆಟ್ ಹಂಚಿಕೆಯಲ್ಲಿ ಕೇವಲ ಶೇ. 40 ಅನ್ನು ಎಲ್ಲಾ ಮಹಿಳಾ ಯೋಜನೆಗಳಿಗೆ ಮೀಸಲಿಡಲಾಗಿದೆ.
ಆರ್ಥಿಕ ಸ್ವಾತಂತ್ರ್ಯ
ಮಹಿಳೆಯರ ಪ್ರಗತಿಗೆ ಪೂರ್ವಾಪೇಕ್ಷಿತವೆಂದು ಗುರುತಿಸಲ್ಪಟ್ಟ ನಿರ್ಣಾಯಕ ವಿಷಯ ಎಂದರೆ ಅವರಿಗೆ ಆರ್ಥಿಕ ಸ್ವಾತಂತ್ರ‍್ಯವನ್ನು ಒದಗಿಸುವುದು. ಆದರೆ, ಭಾರತದಲ್ಲಿ ಕಾಯಂ ವೇತನ ಪಡೆಯುವವರ ಸಂಖ್ಯೆ ಇಳಿಮುಖವಾಗಿದೆ. ಎನ್‌ಎಸ್‌ಒ ದ ‘ಆವರ್ತಕ ಕಾರ್ಮಿಕ ಬಲ ಸಮೀಕ್ಷೆ’(ಪಿಎಲ್‌ಎಫ್‌ಎಸ್) ವಿಶ್ಲೇಷಣೆಯ ಪ್ರಕಾರ, ನಿಯಮಿತ ಕೂಲಿ ಕೆಲಸದಲ್ಲಿ ಮಹಿಳೆಯರ ಪಾಲು 2018-2019ರಲ್ಲಿ 21.9 ಪ್ರತಿಶತದಿಂದ 2022-2023ರಲ್ಲಿ ಸಾಂಕ್ರಾಮಿಕ ನಂತರದ ಅವಧಿಯಲ್ಲಿ ಕೇವಲ 15.9 ಪ್ರತಿಶತಕ್ಕೆ ಕುಸಿದಿದೆ ಎಂದು ಅಸಮಾನ ಪರಿಣಾಮವನ್ನು ಎತ್ತಿ ತೋರಿಸುತ್ತದೆ. ಅನೌಪಚಾರಿಕ ವಲಯದಲ್ಲಿ ತೊಡಗಿಸಿಕೊಂಡಿರುವ ಸುಮಾರು 95 ಪ್ರತಿಶತ ಮಹಿಳೆಯರಿಗೆ ಉದ್ಯೋಗ ಅಥವಾ ಸುರಕ್ಷಿತ ಆದಾಯವಿಲ್ಲ. ಹೆಚ್ಚಿನ ಮಹಿಳೆಯರು ಕೇಂದ್ರ ಸರ್ಕಾರದಲ್ಲಿ ಸ್ಕೀಮ್ ವರ್ಕರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಸುಮಾರು ಒಂದು ಕೋಟಿ ಮಹಿಳೆಯರು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ಮಧ್ಯಾಹ್ನದ ಬಿಸಿಯೂಟದ ಕಾರ್ಯಕರ್ತೆಯರಾಗಿ ಕೆಲಸ ಮಾಡುತ್ತಿದ್ದಾರೆ. ಮಹಿಳಾ
ಆದಾಗ್ಯೂ ಈ ಸೇವಾ ಆಧಾರಿತ ಯೋಜನೆಗಳಿಗೆ ಕಷ್ಟಕರವಾದ ಕೆಲಸ ಕಾರ್ಯಗಳ ಹೊರತಾಗಿಯೂ, ಈ ಮಹಿಳೆಯರು ಅತ್ಯಂತ ಶೋಷಣೆಗೆ ಒಳಗಾಗಿದ್ದಾರೆ. ‘ಭತ್ಯೆ’ಎಂಬ ಹೆಸರಿನಲ್ಲಿ ಕನಿಷ್ಠ ಕೂಲಿಗಿಂತ ತೀರಾ ಕಡಿಮೆ ಕೂಲಿ ಪಡೆಯುತ್ತಿದ್ದಾರೆ. ಅವರನ್ನು ಸರ್ಕಾರಿ ನೌಕರರೆಂದು ಗುರುತಿಸಿಲ್ಲ. ಪಿಎಲ್‌ಎಫ್‌ಎಸ್ ಸಮೀಕ್ಷೆಯ ಪ್ರಕಾರ, 2018-19 ರಲ್ಲಿ ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾಲು ಶೇ. 55.3 ರಷ್ಟಿದ್ದದ್ದು2022-23 ರಲ್ಲಿ ಶೇ. 64.3 ಕ್ಕೆ ಏರಿಕೆಯಾಗಿದೆ. ಇದು ಮುಖ್ಯವಾಗಿ ಕುಟುಂಬದ ಜಮೀನುಗಳಲ್ಲಿ ಕೂಲಿ ಕೊಡದ ಕೆಲಸವನ್ನು ಒಳಗೊಂಡಿದೆ.
ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಮಂಜೂರು ಮಾಡಬೇಕಾದ ಮೊತ್ತವನ್ನು ತೀವ್ರವಾಗಿ ಕಡಿತಗೊಳಿಸಿದೆ. ಹಲವು ರಾಜ್ಯಗಳಲ್ಲಿ ಈ ಯೋಜನೆಯಡಿ ಶೇ.50ರಿಂದ ಶೇ.80ರಷ್ಟು ಕೆಲಸ ಮಾಡುತ್ತಿರುವ ಮಹಿಳೆಯರ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರಿದೆ.
ವಾಸ್ತವದಲ್ಲಿ ಮಹಿಳೆಯರು ಅದರಲ್ಲೂ ದಲಿತ ಮತ್ತು ಬುಡಕಟ್ಟು ಮಹಿಳೆಯರು ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ಪರಿಣಾಮಗಳನ್ನು ನೇರವಾಗಿ ಎದುರಿಸುತ್ತಿದ್ದಾರೆ. ಏಕೆಂದರೆ ಕೇಂದ್ರ ಸರ್ಕಾರವು ತನ್ನ ಆರ್ಥಿಕ ನೀತಿಗಳನ್ನು ಜಾರಿಗೊಳಿಸುವ ಕೆಲಸವನ್ನು ದೇಶದ ಶೇಕಡ 1 ಶ್ರೀಮಂತರಿಗೆ ವಹಿಸಿದೆ. ದೇಶದ ಶೇ. 40ರಷ್ಟು ಸಂಪತ್ತನ್ನು ಅವರು ನಿಯಂತ್ರಿಸುತ್ತಾರೆ.
ಹಾಗಾಗಿ, ಇಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಪೊರೇಟ್ ನೇತೃತ್ವದ ಅಭಿವೃದ್ಧಿಯೇ ಹೊರತು ಖಂಡಿತವಾಗಿಯೂ ಮಹಿಳಾ- ನೇತೃತ್ವದ ಅಭಿವೃದ್ಧಿಯಲ್ಲ.
ಈ ವಿಡಿಯೋ ನೋಡಿ : ಮೃಣಾಲ್ ಸೆನ್ 100 ವೆಬಿನಾರ್ ಸರಣಿ : ಉಪನ್ಯಾಸ-4 | ಒಕ ಊರಿ ಕಥಾ ದಲ್ಲಿ ಕಾಣುವ ತೆಲಂಗಾಣ ಊಳಿಗಮಾನ್ಯ ವ್ಯವಸ್ಥೆ