ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಮಾಜ ಕಲ್ಯಾಣ ಸಚಿವರು ಇಲಾಖೆಯ ಉನ್ನತ ಮಟ್ಟದ ಅಧಿಕಾರಗಳ ಜೊತೆ ನಡೆಸಿದ ಜಂಟಿ ಸಭೆಯು ಬಿಟ್ಟು ಹೋದ ಮಹಿಳೆಯರ ಗಣತಿ ಮಾಡಲು ಕ್ರಮ ಕೈಗೊಳ್ಳುವಂತೆ ನಿರ್ಧರಿಸಿರುವುದು ಸ್ವಾಗತಾರ್ಹವಾದುದಾಗಿದೆ. ಇದು ಕಳೆದ ಒಂದು ದಶಕದಿಂದ ನಾವು ನಡೆಸಿದ ಹೋರಾಟಕ್ಕೆ ದೊರೆತ ಜಯವಾಗಿದೆ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ತಿಳಿಸಿದೆ.
ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಸಂಘದ ಅಧ್ಯಕ್ಷೆ ಟಿ.ವಿ. ರೇಣುಕಾ, ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಗಳು ಜಂಟಿಯಾಗಿ ನಿರಂತರ ಹೋರಾಟ ನಡೆಸಿ ರಾಜ್ಯ ಸರಕಾರದ ಮೇಲೆ ಒತ್ತಡ ಹೇರಿದ ಮತ್ತು ಸಚಿವರನ್ನು ಕಂಡು ಹಲವು ಸುತ್ತಿನ ಮಾತುಕತೆ ನಡೆಸಿದ ಫಲವಾಗಿ ಸರ್ಕಾರ ಸಮೀಕ್ಷೆ ನಡೆಸುವ ಬಗ್ಗೆ ನಿರ್ಧಾರ ಕೈಗೊಂಡಿರುವುದು ಉತ್ತಮ ಬೆಳವಣಿಗೆ ಎಂದು ತಿಳಿಸಿದ್ದಾರೆ.
ರಾಜ್ಯದಾದ್ಯಂತ ಇರುವ ದಶ ಸಾವಿರಗಟ್ಟಲೆ ದೇವದಾಸಿ ಮಹಿಳೆಯರನ್ನು ದುರುದ್ದೇಶದಿಂದಲೇ ಗಣತಿಯಿಂದ ಹೊರಗಿಡಲಾಗಿತ್ತು. ಇದರಿಂದ ಈ ಮಹಿಳೆಯರು ಅವರ ಮಕ್ಕಳು ಸರಕಾರದ ಯಾವುದೇ ಸೌಲಭ್ಯಗಳು ದೊರೆಯದೇ ಸಂಕಷ್ಟದಲ್ಲಿದ್ದರು. ಇದೀಗ ಸಚಿವರ ಮಟ್ಟದಲ್ಲಿ ನಡೆದ ಸಭೆಯು ಗಣತಿಯನ್ನು ಕೈಗೊಳ್ಳುವಂತೆ ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿಯೇ ನಿರ್ಣಯಿಸಬೇಕೆಂಬ ಅಭಿಪ್ರಾಯಕ್ಕೆ ಬಂದಿರುವುದನ್ನು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಒಕ್ಕೂಟಗಳು ಬೆಂಬಲಿಸುತ್ತವೆ ಮತ್ತು ಈ ಮೂಲಕ ಮುಖ್ಯಮಂತ್ರಿಗಳು ಕೂಡಲೇ ಅಧಿವೇಶದಲ್ಲಿ ಕ್ರಮವಹಿಸುವಂತೆ ಒತ್ತಾಯಿಸುತ್ತವೆ ಎಂದಿದ್ದಾರೆ.
ಅದೇ ರೀತಿ, ಮತ್ತೊಂದು ಹಕ್ಕೊತ್ತಾಯವಾದ ದೇವದಾಸಿ ಮಹಿಳೆಯರ ಮಕ್ಕಳ ಉನ್ನತ ಶಿಕ್ಷಣದ ಹಾಗೂ ಹಾಸ್ಟೆಲ್ ಸೌಲಭ್ಯಗಳ ವಿಚಾರದಲ್ಲಿ ಯಾವುದೇ ಅಂಕಗಳು ಮತ್ತು ಪ್ರವೇಶ ಪರೀಕ್ಷೆಗಳ ಸ್ಪರ್ಧೆ ಇಲ್ಲದೇ ಒಳ ಮೀಸಲಾತಿ ಆಧಾರದಲ್ಲಿ ಮತ್ತು ನೇರ ಪ್ರವೇಶಕ್ಕೆ ಕ್ರಮವಹಿಸಲು ನಿರ್ಧಾರಿಸಿರುವುದು ಸಹ ಸ್ವಾಗತಾರ್ಹವಾಗಿದೆ. ಈ ಕುರಿತಂತೆ ತಕ್ಷಣವೇ ರಾಜ್ಯ ಸರಕಾರ ಆದೇಶ ಹೊರಡಿಸಲು ನಮ್ಮ ಒತ್ತಾಯವಾಗಿದೆ ಎಂದು ಹೇಳಿದ್ದಾರೆ.
ಮಾಸಿಕ ಸಹಾಯವನ್ನು 3000 ರೂ.ಗಳಿಗೆ ಹೆಚ್ಚಿಸಿರಿ
ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಮಾಳಮ್ಮ ಮಾತನಾಡಿ, ಕಳೆದ ಐದು ವರ್ಷಗಳಿಂದಲೂ ನಾವು ಬಲವಾಗಿ ಒತ್ತಾಯಿಸುವ ದೇವದಾಸಿ ಮಹಿಳೆಯರ ಮಾಸಿಕ ಸಹಾಯಧನ / ಪಿಂಚಣಿಯನ್ನು ಕನಿಷ್ಟ 1500 ರೂ.ಗಳಿಂದ 3,000 ರೂ. ಗಳಿಗೆ ಹೆಚ್ಚಿಸಬೇಕು ಮತ್ತು ಎಲ್ಲ ವಯೋಮಾನದ ದೇವದಾಸಿ ಮಹಿಳೆಯರಿಗೂ ಸಹಾಯಧನ ದೊರೆಯುವಂತೆ ವಿಸ್ತರಿಸಬೇಕೆಂಬ ಹಕ್ಕೊತ್ತಾಯಗಳ ಕುರಿತು ಸಚಿವದ್ವಯರ ಹಾಗೂ ಅಧಿಕಾರಿಗಳ ಜಂಟಿ ಸಭೆಯು ಮೌನವಾಗಿರುವುದು ತೀವ್ರ ಖಂಡನೀಯ ಎಂದು ಹೇಳಿದ್ದಾರೆ.
ಪರಿಶಿಷ್ಟ ಜಾತಿ ಹಾಗು ಪಂಗಡದ ಉಪಯೋಜನೆಯ ಹಣವು ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 30,000 ಕೋಟಿ ರೂ.ಗಳಷ್ಟು ಕೊಳೆಯುತ್ತಾ ಬಿದ್ದಿದ್ದರೂ ಮತ್ತು ಪ್ರತಿವರ್ಷವೂ ಅದರಲ್ಲಿ ಹಲವು ಸಾವಿರ ಕೋಟಿ ರೂ.ಗಳನ್ನು ಬಳಸದೇ ಬಿಡಲಾಗುತ್ತಿದ್ದರೂ ಅದನ್ನು ದೌರ್ಜನ್ಯದ ದೇವದಾಸಿ ಪದ್ಧತಿಗೆ ತುತ್ತಾದ ಮಹಿಳೆಯರಿಗೆ ನೀಡದೇ ದೌರ್ಜನ್ಯ ಅನುಭವಿಸಲು ಬಿಟ್ಟಿರುವುದು ಅಕ್ಷಮ್ಯವಾಗಿದೆ ಎಂದು ತಿಳಿಸಿದರು.
ಈ ಕೂಡಲೇ ಮುಖ್ಯಮಂತ್ರಿಗಳು ಹಾಗೂ ಸಮಾಜ ಕಲ್ಯಾಣ ಸಚಿವರು ವಯೋಮಾನದ ಭೇದವಿಲ್ಲದೇ ಎಲ್ಲ ಮಹಿಳೆಯರಿಗೂ ಮಾಸಿಕ 3000 ರೂ.ಗಳ ಸಹಾಯಧನ ಅಥವಾ ಪಿಂಚಣಿ ದೊರೆಯುವಂತೆ ಅನುದಾನ ಬಿಡುಗಡೆ ಮಾಡಲು ಕ್ರಮವಹಿಸುವಂತೆ ಒತ್ತಾಯಿಸಿದ್ದಾರೆ.
ದಲಿತ ಬಾಲಕಿಯರು ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ಹರಿಬಿಡುವ ಫಲಾನುಭವಿಗಳನ್ನು ಶಿಕ್ಷಿಸಿ
ಸಂಘದ ಗೌರವಾಧ್ಯಕ್ದ ಯು. ಬಸವರಾಜ ಮಾತನಾಡಿ, ಅಧಿಕಾರಿಗಳಿಗೆ ಈಗಿರುವ ದೇವದಾಸಿ ಪದ್ಧತಿ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸೂಚಿಸಿರುವುದನ್ನು ಮತ್ತು ದೇವದಾಸಿ ಪದ್ಧತಿಗೆ ದಲಿತ ಬಾಲಕಿಯರು ಬಲಿಯಾಗುವುದನ್ನು ತಡೆಯಲು ಕ್ರಮವಹಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಈ ಕಾಯ್ದೆಯು ದೌರ್ಜನ್ಯದ ದೇವದಾಸಿ ಪದ್ಧತಿಯ ಬಲಾಢ್ಯ ಫಲಾನುಭವಿಗಳನ್ನು ರಕ್ಷಿಸುತ್ತದೆ ಮತ್ತು ದೌರ್ಜನ್ಯಕ್ಕೆ ತುತ್ತಾದ ಬಾಲಕಿಯರನ್ನು ಮತ್ತು ಅವರ ಕುಟುಂಬದ ಸದಸ್ಯರನ್ನು ಹಿಂಸಿಸುವಂತಿದೆ. ಸದರಿ ಕಾಯ್ದೆಯ ಫಲಾನುಭವಿಯಿಂದ ದೌರ್ಜನ್ಯಕ್ಕೀಡಾದ ಮಹಿಳೆಯರು ಹಾಗೂ ಅವರ ಮಕ್ಕಳಿಗೆ ಫಲಾನುಭವಿಯ ಆಸ್ತಿಗಳಲ್ಲಿ ಪಾಲು ದೊರೆಯುವಂತೆ, ನೆರವು ಸಿಗುವಂತೆ ಮತ್ತು ಹೊಸದಾಗಿ ದೌರ್ಜನ್ಯದಲ್ಲಿ ತೊಡಗುವ ಫಲಾನುಭವಿಗಳು ಕಠಿಣ ಶಿಕ್ಷೆಗೊಳಪಡುವಂತೆ ತಿದ್ದುಪಡಿ ಮಾಡಲು ನಾವು ಒತ್ತಾಯಿಸುತ್ತೇವೆ ಎಂದಿದ್ದಾರೆ.
ನಮ್ಮ ಎರಡು ಸಂಘಟನೆಗಳು ನಿರಂತರವಾಗಿ ಒತ್ತಾಯಗಳನ್ನು ಈಡೇರಿಸಬೇಕು. ರಾಜ್ಯ ಸರಕಾರ ಈ ಕುರಿತು ಗಂಭೀರ ಕ್ರಮವಹಿಸದಿರುವುದೇ ದೌರ್ಜನ್ಯದ ದೇವದಾಸಿ ಪದ್ಧತಿಗೆ ಕುಮ್ಮಕ್ಕಾಗಿದೆ. ರಾಜ್ಯ ಸರಕಾರವು ದಲಿತ ಕುಟುಂಬಗಳ ಸ್ವಾವಲಂಬಿ ಆದಾಯದ ಸಬಲೀಕರಣಕ್ಕೆ ಕ್ರಮವಹಿಸಬೇಕು ಎಂಬುದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಯ ಆಗ್ರಹವಾಗಿದೆ.