ಬೆಂಗಳೂರು: ಹಲವು ಬಾರಿ ಪ್ರತಿಭಟನೆಗಳ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಮನವಿ ಸಲ್ಲಿಸಿದ್ದರೂ, ತಮ್ಮ ಅನೇಕ ಬೇಡಿಕೆಗಳನ್ನು ಇದುವರೆಗೆ ಪರಿಗಣಿಸದೇ ವಿಳಂಬ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಗಳು ಆರೋಪಿಸಿದೆ.
ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಸಂಘದ ಪ್ರಧಾನ ಕಾರ್ಯದರ್ಶಿ ಬಿ. ಮಾಳಮ್ಮ ಅವರು, ಪರಿಶಿಷ್ಠ ಜಾತಿ ಮತ್ತು ಪಂಗಡಗಳ ಜನಸಂಖ್ಯೆಗನುಗುಣವಾದ ಅನುದಾನ ಪ್ರತಿ ವರ್ಷ ಸುಮಾರು 30,000 ಕೋಟಿ ರೂ.ಗಳಷ್ಟಿದ್ದರೂ, ನಮಗೆ ನೀಡಲಾಗುವ ಮಾಸಿಕ ಸಹಾಯಧನ ಹೆಚ್ವಳ ಮಾಡುತ್ತಿಲ್ಲ. ಅದೇ ರೀತಿ, ಗಣತಿ ಪಟ್ಟಿಯಲ್ಲಿ ಬಿಟ್ಟು ಹೋದ ಮಹಿಳೆಯರ ಸೇರ್ಪಡೆಗೆ ನೆರವಾಗುತ್ತಿಲ್ಲ. ಮಾತ್ರವಲ್ಲಾ, ಕುಟುಂಬದ ಸದಸ್ಯರನ್ನು ಗಣತಿ ಮಾಡಿ ಪುನರ್ವಸತಿ ಕಲ್ಪಿಸಲು ಸರ್ಕಾರ ವಿಫಲವಾಗಿದೆ. ಭೂಮಿ ಹಾಗೂ ಉದ್ಯೋಗಗಳನ್ನು ನೀಡುತ್ತಿಲ್ಲ. ಬದಲಿಗೆ ನಮ್ಮಗಳ ಸಾಲ ನೀಡಿಕೆಯ ಮೊತ್ತವನ್ನು ಕಡಿತಗೊಳಿಸಿರುವುದು ಖೇದಕರ ವಿಚಾರ ಎಂದು ವಿಷಾಧ ವ್ಯಕ್ತಪಡಿಸಿದರು.
ಇದನ್ನು ಓದಿ: ಕೊಪ್ಪಳ ಜಿಲ್ಲೆಯಲ್ಲಿ ದೇವದಾಸಿ ಪದ್ಧತಿ ಜೀವಂತ, ಮುತ್ತು ಕಟ್ಟಿಸಿದ ಪ್ರಕರಣ ಬೆಳಕಿಗೆ
ಇದಲ್ಲದೆ ನಿರಂತರ ಬರಗಾಲ ಹಾಗೂ ಅತೀವೃಷ್ಠಿ ಮತ್ತು ಪ್ರವಾಹ ಹಾಗೂ ಕೋವಿಡ್ ಬಾಧೆಗಳಿಂದಾಗಿ ಈ ಕುಟುಂಬಗಳು ಅತ್ಯಂತ ಸಂಕಷ್ಠಕ್ಕೀಡಾಗಿವೆ. ನಮ್ಮ ಹಕ್ಕೋತ್ತಾಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕೆಂದು ಈಗಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಅವರೊಂದಿಗೆ ಮನವಿ ಮಾಡಿ ಚರ್ಚಿಸಲಾಗಿದೆ. ಆದರೂ ಸಹ ಪರಿಗಣಿಸದೇ ಇರುವುದನ್ನು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಗಳು ಖಂಡಿಸಿವೆ.
ರಾಜ್ಯ ಅಧ್ಯಕ್ಷೆ ಟಿ.ವಿ ರೇಣುಕಮ್ಮ ಮಾತನಾಡಿ, ದೇವದಾಸಿ ಮಹಿಳೆಯರಿಗೆ ನೀಡಲಾಗುವ ಮಾಸಿಕ ಸಹಾಯಧನ ರೂ.5,000 ಕ್ಕೆ ಹೆಚ್ಚಿಸಬೇಕು. ದೇವದಾಸಿ ಮಹಿಳೆಯರ ಪರಿತ್ಯಕ್ತ ಹೆಣ್ಣು ಮಕ್ಕಳಿಗೂ ಅದನ್ನು ವಿಸ್ತರಿಸಬೇಕು. ಗಣತಿ ಪಟ್ಟಿಯಲ್ಲಿ ಸೇರ್ಪಡೆ ಮತ್ತು ಪುನರ್ವಸತಿ ಕಲ್ಪಸಬೇಕೆಂದು ಆಗ್ರಹಿಸಲಾಗಿದೆ. ದೇವದಾಸಿ ಮಹಿಳೆಯರ ಮಕ್ಕಳ ಮದುವೆ ಪ್ರೋತ್ಸಾಹ ಧನ ವಿಚಾರದಲ್ಲಿರುವ ಷರತ್ತುಗಳನ್ನು ಬದಲಿಸಿ, ಸಮಾನವಾಗಿ ಎಲ್ಲರಿಗೂ ರೂ.5 ಲಕ್ಷ ನೀಡಬೇಕು. ಅದು, ಅಂತರ್ಜಾತಿಯಲ್ಲಾಗಲೀ ಮತ್ತು ಸಜಾತಿಯಲ್ಲಾಗಲೀ ಹಾಗೂ ದೇವದಾಸಿ ಮಹಿಳೆಯರ ಕುಟುಂಬಗಳ ಸದಸ್ಯರ ನಡುವೆಯಾಗಲೀ, ಎಲ್ಲರನ್ನು ಪರಿಗಣಿಸಬೇಕೆಂದು ತಿಳಿಸಿದರು.
ಇದನ್ನು ಓದಿ: ದೇವದಾಸಿ ಮಹಿಳೆಯರ ಸಮೀಕ್ಷೆಗೆ ಸರ್ಕಾರದ ನಿರ್ಧಾರ: ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಸ್ವಾಗತ
ರಾಜ್ಯ ಉಪಾಧ್ಯಕ್ಷೆ ಪದ್ಮ ರಾಯಚೂರು ಮಾತನಾಡಿ, ಕೇಂದ್ರ ಸರಕಾರ ಈ ಕೂಡಲೇ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜನ ಸಂಖ್ಯೆಗನುಗುಣವಾಗಿ ಅನುದಾನ ಬಿಡುಗಡೆ ಮಾಡಬೇಕು. ಅದೇ ರೀತಿ, ಎಸ್ಸಿ/ಎಸ್ಟಿ-ಟಿಎಸ್ಪಿ ಕಾಯ್ದೆ ಜಾರಿಗೊಳಿಸಬೇಕೆಂದು ಆಗ್ರಹಿಸಿದರು. ಬರಗಾಲ ಹಾಗೂ ಅತೀವೃಷ್ಠಿ ಮತ್ತು ಪ್ರವಾಹದ ಹಿನ್ನೆಲೆಯಲ್ಲಿ ದೇವದಾಸಿ ಮಹಿಳೆಯರ ಮತ್ತು ಅವರ ಮಕ್ಕಳ ಹಾಗೂ ಸ್ತ್ರೀ ಶಕ್ತಿ ಹಾಗೂ ಸ್ವ ಸಹಾಯ ಸಂಘಗಳ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು. ದಲಿತ ಮಹಿಳೆಯರ ಸ್ತ್ರೀಶಕ್ತಿ ಹಾಗೂ ಸ್ವ ಸಹಾಯ ಗುಂಪುಗಳ ಸುತ್ತು ನಿಧಿಯನ್ನು ಎರಡು ಲಕ್ಷ ರೂ.ಗಳಿಗೆ ಮತ್ತು ಶೇ. 75 ಸಹಾಯಧನ ಮತ್ತು ಉಳಿದ ಸಾಲಕ್ಕೆ ಬಡ್ಡಿ ರಹಿತ ಸಾಲವನ್ನು ಕನಿಷ್ಠ 50 ಲಕ್ಷ ರೂ. ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಉಪಾಧ್ಯಕ್ಷೆ ಕೆ.ನಾಗರತ್ನಮ್ಮ ಮಾತನಾಡಿ, ವ್ಯವಸಾಯದಲ್ಲಿ ತೊಡಗಲು ಇಚ್ಛಿಸುವ ಎಲ್ಲಾ ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳಿಗೆ ತಲಾ 5 ಎಕರೆ ನೀರಾವರಿ ಜಮೀನು ಉಚಿತವಾಗಿ ಒದಗಿಸಬೇಕು. ಸದರಿ ಜಮೀನು ನೀಡುವ ಯೋಜನೆಯಲ್ಲಿ ಪ್ರತಿವರ್ಷ ಪ್ರತಿ ತಾಲೂಕಿಗೆ ಕನಿಷ್ಠ 500 ಎಕರೆ ಒದಗಿಸಲು ಅಗತ್ಯ ಕ್ರಮವಹಿಸಬೇಕು. ಭೂಸ್ವಾದೀನದ ಮೂಲಕವು ಕ್ರಮವಹಿಸಬೇಕು. ಭೂಮಿ ಖರೀದಿಸಲು ಪ್ರತಿವರ್ಷ ಕನಿಷ್ಠ 5,000 ಕೋಟಿ ರೂ ಒದಗಿಸಬೇಕು. ನಿವೇಶನ ರಹಿತರಿಗೆ ತಲಾ 80:80 ಚದರ ಅಡಿ ಸ್ಥಳದಲ್ಲಿ ಕನಿಷ್ಠ 7 ಲಕ್ಷ ರೂ ಮೌಲ್ಯದ ಮನೆಯನ್ನು ಉಚಿತವಾಗಿ ನಿರ್ಮಿಸಿಕೊಡಬೇಕು. ಉಳಿದ ಜಮೀನಿನಲ್ಲಿ ಬದುಕು ರೂಪಿಸಿಕೊಳ್ಳಲು ಅಗತ್ಯ ಯೋಜನೆಗಳನ್ನು ರೂಪಿಸಿಕೊಡಬೇಕು ಎಂದರು.
ರಾಜ್ಯ ಉಪಾಧ್ಯಕ್ಷ ಜಿ.ನಾಗರಾಜ ಮಾತನಾಡಿ, ದೇವದಾಸಿ ಮಹಿಳೆಯರು ಮತ್ತು ಅವರ ಮಕ್ಕಳು ಸ್ವಯಂ ಉದ್ಯೋಗ ಕೈಗೊಳ್ಳಲು ವೃತ್ತಿ ತರಬೇತಿ ಶಿಬಿರಗಳನ್ನು ಹೋಬಳಿಗೊಂದರಂತೆ ಪ್ರತಿ ತಿಂಗಳು ಕನಿಷ್ಠ 4,000 ರೂಪಾಯಿಗಳ ಊಟ- ವಸತಿ ಸೌಲಭ್ಯದೊಂದಿಗೆ ನೀಡಬೇಕು. ನಂತರ ವೃತ್ತಿಯಲ್ಲಿ ತೊಡಗಲು ತಲಾ ವ್ಯಕ್ತಿಗೆ ಕನಿಷ್ಠ 05 ಲಕ್ಷ ರೂ.ಗಳಿಗೆ ಕಡಿಮೆ ಇರದ ಸಾಲ ನೀಡಬೇಕು. ಅದರಲ್ಲಿ ಶೇ. 75 ಸಹಾಯಧನ ವಿರುವ ಉಳಿದ ಸಾಲಕ್ಕೆ ಕನಿಷ್ಠ 5 ವರ್ಷಗಳ ಕಾಲ ಬಡ್ಡಿ ಇರದಂತೆ ಕ್ರಮ ವಹಿಸಬೇಕು ಎಂದರು.
ಇದನ್ನು ಓದಿ: ದೇವದಾಸಿ ಅನಿಷ್ಟ ಪದ್ದತಿಯಿಂದ ಹೊರ ಬಂದು ಚೆಂದದ ಬದುಕು ಕಟ್ಟಿಕೊಂಡ ಮಂಜುಳ ಮಾಳ್ಗಿ
ರಾಜ್ಯ ಉಪಾಧ್ಯಕ್ಷೆ ಹುಲಿಗೆಮ್ಮ ಗಂಗಾವತಿ ಮಾತನಾಡಿ, ರಾಜ್ಯದಾದ್ಯಂತ ನಿರುಪಯುಕ್ತವಾಗಿರುವ ರಾಜ್ಯ ಸರಕಾರದ ವಿವಿಧ ಇಲಾಖೆಗಳಡಿಯ ಕೃಷಿ ಮತ್ತಿತರ ಫಾರಂಗಳ ಜಮೀನುಗಳನ್ನು ದೇವದಾಸಿ ಮಹಿಳೆಯರ ಸಹಕಾರಿ ಬೇಸಾಯಕ್ಕೆ ಒದಗಿಸಬೇಕು. ಉದಾಹರಣೆಗೆ ಬಳ್ಳಾರಿ ಜಿಲ್ಲೆಯ ಕುರೇಕುಪ್ಪ ಫಾರಂ ಇರುವಂತೆ. ದೇವದಾಸಿ ಮಹಿಳೆಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಉನ್ನತ ಹಂತದವರೆಗೆ ಉಚಿತವಾದ ಮತ್ತು ನೇರವಾದ ಪ್ರವೇಶಾವಕಾಶ ಒದಗಿಸಬೇಕು. ವಿದ್ಯಾವಂತ ನಿರುದ್ಯೋಗಿಗಳಿಗೆ ಅವರು ಉದ್ಯೋಗ ಪಡೆಯುವವರೆಗೆ ತಲಾ 10,000 ರೂಪಾಯಿಗಳ ನಿರುದ್ಯೋಗ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಉಪಾಧ್ಯಕ್ಷ ಎ. ಸ್ವಾಮಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಕನಿಷ್ಠ ತಲಾ 200 ದಿನಗಳ ಕಾಲ ಉದ್ಯೋಗವನ್ನು ಕಡ್ಡಾಯವಾಗಿ ಒದಗಿಸಬೇಕು. ಇಲ್ಲವಾದಲ್ಲಿ ಶೇ. 75 ರಷ್ಟು ನಿರುದ್ಯೋಗ ಭತ್ಯೆ ಒದಗಿಸಬೇಕು. ದಿನಗೂಲಿ ಮೊತ್ತವನ್ನು 700 ರೂ.ಗಳಿಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಮಕ್ಕಳ ಸಂಘ ರಾಜ್ಯ ಸಂಚಾಲಕ ಮಂಜುನಾಥ ಡಗ್ಗಿ ಮಾತನಾಡಿ, ರಾಜ್ಯ ಸರಕಾರ ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ ಹಾಗೂ ಯುಕೆಜಿ ಶಿಕ್ಷಣ ನೀಡಲು ಕ್ರಮವಹಿಸಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಬೇಕು. ಅದೇ ರೀತಿ, ಎಲ್ಲಾ ಕನ್ನಡ ಶಾಲೆಗಳಲ್ಲಿ ಇಂಗ್ಲೀಷ್ ಭಾಷೆಯನ್ನು ಒಂದನೇ ತರಗತಿಯಿಂದಲೇ ಪರಿಣಾಮಕಾರಿಯಾಗಿ ಒಂದು ಮಾಧ್ಯಮ ಭಾಷೆಯಾಗಿ ಕಲಿಸಲು ಅಗತ್ಯ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿ: ಪಿಂಚಣಿ-ಪುನರ್ವಸತಿ ಕಲ್ಪಿಸಲು ಸರ್ಕಾರ ಭರವಸೆ: ದೇವದಾಸಿ ಮಹಿಳೆಯರ ಧರಣಿ ಅಂತ್ಯ
ಸಂಘದ ಗೌರವಾಧ್ಯಕ್ಷ ಯು. ಬಸವರಾಜ ಮಾತನಾಡಿ, ದಲಿತರು, ಮಹಿಳೆಯರು, ಬಡವರು ಹಾಗೂ ರೈತರ ವಿರೋಧಿಯಾದ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ-2020 ಹಾಗು ಏಪಿಎಂಸಿ ತಿದ್ದುಪಡಿ ಕಾಯ್ದೆ-2020, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ-2020 ಮತ್ತು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಇವುಗಳನ್ನು ಹಾಗೂ ಜಾತಿ ತಾರತಮ್ಯ ಹೇರುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣಾ ಸುಗ್ರೀವಾಜ್ಞೆಯನ್ನು ವಾಪಾಸ್ಸು ಪಡೆಯಬೇಕು ಎಂದು ಆಗ್ರಹಿಸಿದರು.
ಫಲಾನುಭವಿಗಳ ಆಯ್ಕೆಯಲ್ಲಿ ನಡೆಯುವ ತಾರತಮ್ಯ ಮತ್ತು ಭ್ರಷ್ಠಾಚಾರವನ್ನು ತಡೆಯಲು ಗ್ರಾಮ ಪಂಚಾಯ್ತಿಗಳು ಮತ್ತು ನಗರ ಪ್ರದೇಶಕ್ಕೆ ಸಮರ್ಪಕ ಕೋಟಾ ನಿಗದಿಸಿ, ಅದರಂತೆ ಅಲ್ಲಿನ ಫಲಾನುಭವಿಗಳನ್ನು ಸಾರ್ವಜನಿಕರ ಸಮ್ಮುಖದಲ್ಲಿ ಲಾಟರಿ ಎತ್ತುವ ಮೂಲಕ ಗುರುತಿಸಬೇಕು. ಭ್ರಷ್ಠಾಚಾರ ತಡೆಯಲು ಕ್ರಮವಹಿಸಬೇಕು. ಫಲಾನುಭವಿಗಳಿಂದ ಪ್ರತಿ ವರ್ಷ ಅರ್ಜಿಗಳನ್ನು ಪಡೆಯುವುದನ್ನು ನಿಲ್ಲಿಸಿ, ಒಂದು ಬಾರಿ ಮಾತ್ರವೇ ಅರ್ಜಿಪಡೆದು ಫಲಾನುಭವಿಗಳಿಗಾಗುವ ತೊಂದರೆಗಳನ್ನು ನಿವಾರಿಸಬೇಕೆಂದು ಸಂಘವು ಆಗ್ರಹಿಸಿದೆ.
ತಮ್ಮ ಹಕ್ಕೋತ್ತಾಯಗಳನ್ನು ಈಡೇರಿಸಬೇಕೆಂದು ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಹಾಗೂ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ಮಕ್ಕಳ ಹೋರಾಟ ಸಮಿತಿಗಳು ಸಮಾಜ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಿದೆ.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ