ದೇಶದೆಲ್ಲೆಡೆ ಧರ್ಮದ ಹೆಸರಲ್ಲಿ ದ್ವೇಷ ಬಿತ್ತಲಾಗುತ್ತಿದೆ: ಬೃಂದಾ ಕಾರಟ್

ಶಹಾಪುರ (ಯಾದಗಿರಿ ಜಿಲ್ಲೆ): ‘ದೇಶ ಮತ್ತು ರಾಜ್ಯದಲ್ಲಿ ನಿರಂತರವಾಗಿ ಬೆಲೆ ಏರಿಕೆಯಾಗುತ್ತಿದ್ದು, ನಿರುದ್ಯೋಗ ಸಮಸ್ಯೆಯೂ ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗುತ್ತಿವೆ. ಆದರೆ, ಇವೆಲ್ಲವೂಗಳನ್ನು ಬದಿಗಿರಿಸಿ, ಧರ್ಮದ ಹೆಸರಲ್ಲಿ ದ್ವೇಷ ಬಿತ್ತಲಾಗುತ್ತಿದೆ. ಜನರ ಐಕ್ಯತೆಯನ್ನು ಒಡೆಯುವ ಕೆಲಸ ಮಾಡಲಾಗುತ್ತಿದೆ’ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಾಲಿಟ್‌ ಬ್ಯುರೊ ಸದಸ್ಯೆ ಬೃಂದಾ ಕಾರಟ್ ಆತಂಕ ವ್ಯಕ್ತಪಡಿಸಿದರು.

ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ನಡೆದ ಮೇ 22 ಮತ್ತು 23 ರಂದು ನಡೆದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ  ಮಹಿಳಾ ಕೃಷಿ ಕೂಲಿಕಾರರ ನಾಲ್ಕನೇ ಸಮಾವೇಶದ ಬಹಿರಂಗ ಸಭೆಯು ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ನೆನ್ನೆ(ಮೇ22) ನಡೆಯಿತು.

‘ಧರ್ಮದ ಬಗ್ಗೆ ಮಾತನಾಡುವವರು ಜಾತಿ ವ್ಯವಸ್ಥೆ ಬಗ್ಗೆ ಮಾತನಾಡುತ್ತಿಲ್ಲ. ದಲಿತರ ಮೇಲೆ ನಿರಂತರವಾಗಿ ದಬ್ಬಾಳಿಕೆ, ಅತ್ಯಾಚಾರ ನಡೆಯುತ್ತಿದೆ. ಆದರೂ ಸಹ ಯಾರೂ  ಪ್ರಶ್ನಿಸುತ್ತಿಲ್ಲ. ಎಲ್ಲದಕ್ಕಿಂತ ಧರ್ಮವೇ ಮುಖ್ಯ ಎಂದು ಬಿಂಬಿಸಲು ಹೊರಟಿದ್ದಾರೆʼ ಎಂದರು.

ದಿನನಿತ್ಯ ಬಳಕೆಯ ವಸ್ತುಗಳ ಬೆಲೆಗಳನ್ನು ಗಗನಕ್ಕೇರಿಸಿ ಬಡವರ ಬದುಕನ್ನು ಕಸಿದುಕೊಳ್ಳಲಾಗುತ್ತಿದೆ. ನಿರುದ್ಯೋಗ ಬಡತನ ಅಪೌಷ್ಟಿಕತೆ ತಾಯಿ ಮತ್ತು ಮಗುವಿನ ಮರಣಗಳ ಹೆಚ್ಚಳ ಆರ್ಥಿಕ ದಿವಾಳಿತನ ದೇಶದಲ್ಲಿ ಪುನರಾರಂಭವಾಗಿದೆ. ದೇಶವನ್ನಾಳುತ್ತಿರುವ ಪ್ರಧಾನಿ ಮೋದಿ ಅಮಿತ್ ಶಾ, ರಾಜ್ಯವನ್ನಾಳುತ್ತಿರುವ ಬೊಮ್ಮಾಯಿ ಸರಕಾರಗಳು ಕಾರ್ಪೋರೇಟ್ ಪರವಾದ ಕೆಲಸಗಳನ್ನು ಮಾಡುತ್ತಾ ಬಡವರನ್ನು ಕಡೆಗಣಿಸಿವೆ. ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ, ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಬಿಜೆಪಿ ಸರಕಾರ ಯುವಕರ ಕನಸನ್ನು ಹಿರಿಯರ ಬದುಕನ್ನ ಕಸಿದುಕೊಂಡಿವೆ ಎಂದರು.

‘ದೇಶದಲ್ಲಿ ಜನಕಲ್ಯಾಣ ಯೋಜನೆಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯನ್ನು ಸಂಪೂರ್ಣವಾಗಿ ಇಲ್ಲವಾಗಿಸಲು ಮುಂದಾಗುತ್ತಿರುವ ಬಿಜೆಪಿ ಸರ್ಕಾರವು, ಬಡವರ ಅನ್ನವನ್ನು ಕಸಿಯುವುದಕ್ಕೆ ಮುಂದಾಗಿದೆ. ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ಅನ್ನ ಕಸಿದುಕೊಳ್ಳುವ ಬದಲು ಕೂಲಿ ಹೆಚ್ಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಆಗ್ರಹಿಸಿದರು.

ನರೇಗಾದ ನೂರು ದಿನದ ಕೂಲಿ ದಿನದಲ್ಲಿ ಒಂದು ಕುಟುಂಬಕ್ಕೆ ಈಗ ಸರಾಸರಿ ಕೇವಲ 49 ದಿನಗಳು ಮಾತ್ರ ಕೂಲಿ ದಿನ ಸಿಗುತ್ತಿವೆ.

ನರೇಗಾ ಯೋಜನೆಯನ್ನು ನಗರಗಳಿಗೂ ವಿಸ್ತರಿಸಬೇಕು. ಅಲ್ಲದೆ, ಕನಿಷ್ಠ ಇನ್ನೂರು ದಿನಗಳಿಗೆ ಕೆಲಸ ನೀಡುವುದರೊಂದಿಗೆ, ₹600ರಂತೆ ಕೂಲಿ ನೀಡಬೇಕು ಇದಕ್ಕಾಗಿ ಹಳ್ಳಿಹಳ್ಳಿಗಳಲ್ಲಿ ಸಂಘಟನೆಯನ್ನು ವಿಸ್ತರಿಸುವ ಮೂಲಕ ಸರ್ಕಾರಗಳ ವಿರುದ್ಧ ಹೋರಾಟಕ್ಕೆ ಮುಂದಾಗಬೇಕೆಂದು ಬೃಂದಾ ಕಾರಟ್‌ ಕರೆ ನೀಡಿದರು.

‘ಬೆವರು ಹರಿಸಿ ದುಡಿಯುವ ಮಹಿಳೆಯರು ಕುಟುಂಬ ನಿರ್ವಹಣೆ ಜೊತೆ ಕೂಲಿಗೆಲಸ ಮಾಡುತ್ತಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ತೊಂದರೆ ಅನುಭವಿಸಿದ ಕೂಲಿಕಾರ್ಮಿಕರಿಗೆ ಸೌಲಭ್ಯಗಳು ಸಿಕ್ಕಿಲ್ಲ. ಉಳ್ಳವರಿಗೆ ಮಾತ್ರ ಸಿಕ್ಕಿದೆ’ ಎಂದು ಟೀಕಿಸಿದರು.

ದೇಶದಲ್ಲಿ ನಿರಂತರವಾಗಿ ಮಹಿಳಾ ದೌರ್ಜನ್ಯ ನಡೆಯುತ್ತಿದೆ ಕಂಡರೂ ಕಾಣದಂತೆ ಸರ್ಕಾರಗಳು ಕುರುಡಾಗಿವೆ. ದುಡಿಯುವ ವರ್ಗಗಳ ಹೋರಾಟದಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಗೆ ಬಂತು ಆದರೆ ಇಂದು ಮನುವಾದಿಗಳು ದುಡಿಯುವ ಜನರಿಗೆ ಕೆಲಸವನ್ನ ನೀಡದೆ ಕಾಯಿದೆಯನ್ನು ಮುಚ್ಚಿಹಾಕುವ ತಂತ್ರ ಮಾಡುತ್ತಿದ್ದಾರೆ.

ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಮಾತನಾಡಿ, ‘ನಮಗೆ ದರ್ಗಾ, ಮಂದಿರ ಎರಡೂ ಒಂದೇ. ಹಿಂದೂ, ಮುಸ್ಲಿಮರ ನಡುವೆ ದ್ವೇಷ ಬಿತ್ತಬೇಡಿ. ಮಹಿಳೆಯರು ತಮ್ಮ ಶಕ್ತಿಯನ್ನು ಅರಿತು, ಮುಂದೆ ಸಾಗಬೇಕು’ ಎಂದು ಹೇಳಿದರು.

ಜಾತ್ರೆಗಳು ಸಾಮರಸ್ಯದಿಂದ ನಡೆಯುತ್ತವೆ ಮುಸ್ಲಿಂ ಅಂಗಡಿಗಳಲ್ಲಿ ಆಟಿಕೆ ಖರೀದಿಸಬೇಡಿ ಅದನ್ನು ಖರೀದಿಸಬೇಡಿ ಇದನ್ನು ಖರೀದಿಸಬೇಡಿ ಎಂದು ಹೇಳುವ ಮೂಲಕ ಕೋಮು ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ. ನಾವೆಲ್ಲ ಹಳ್ಳಿಗಳಲ್ಲಿ ಬಾಂಧವ್ಯದಿಂದ ಬದುಕುತ್ತಿದ್ದೇವೆ. ನಮ್ಮ ಬಾಂಧವ್ಯಕ್ಕೆ ಕೊಳ್ಳಿ ಇಡುವ ಕೆಲಸ ಮಾಡಬೇಡಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.

ಮುಂಬರುವ ಗುಜರಾತ್‌ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈಗ ದಿಢೀರ್‌ ಎಂದು ಇಂಧನ ಬೆಲೆ ಇಳಿಸಲಾಗಿದೆ. ಎಲ್ಲಿಯವರೆಗೆ ನಾವು ಸುಮ್ಮನೆ ಕುಳಿತುಕೊಳ್ಳುತ್ತೇವೆ ಅಲ್ಲಿ ತನಕ ನಮ್ಮ ವಿರುದ್ಧ ಶೋಷಣೆ ತಪ್ಪಿದ್ದಲ್ಲ. ಮಹಿಳೆಯರು ಇನ್ನು ಮುಂದೆ ಅಳುವುದಿಲ್ಲ. ನಿರಾಶೆಯಿಂದ ಬದುಕು ಸಾಗಿಸುವುದಿಲ್ಲ. ನಮ್ಮ ಶಕ್ತಿ ನಮಗೆ ಗೊತ್ತಿದೆ. ಅದನ್ನು ಹೋರಾಟದ ಮೂಲಕ ಪಡೆದುಕೊಳ್ಳುತ್ತೇವೆ ಎಂದು ಕೆ. ನೀಲಾ ಅವರು ಕರೆ ನೀಡಿದರು.

ಹುಸಿ ಧಾರ್ಮಿಕ ಭಾವನೆಗಳನ್ನು ಬಿತ್ತುವ ಕೆಲಸ ಆಗಬಾರದು. ಆಜಾನ್‌ ಮತ್ತು ಭಜನೆ ಎರಡು ಬೇಕು. ರಾಮನ ಮತ್ತು ಹನುಮನ ಧ್ವಜನವನ್ನು ಹಿಡಿಯುವವರು ನಮ್ಮವರೇ ಎಂಬುದನ್ನು ಮರೆಯಬೇಡಿ. ಇಂತಹ ಸಮಾವೇಶಗಳು ಹೊಸ ಬದಲಾವಣೆಗೆ ನಾಂದಿಯಾಗಲಿವೆ ಎಂದು ಹೇಳಿದರು.

ಕೃಷಿಕೂಲಿಕಾರರ ಸಂಘದ ರಾಜ್ಯ ಅಧ್ಯಕ್ಷ ನಿತ್ಯಾನಂದಸ್ವಾಮಿ ಮಾತನಾಡಿ, ಕೃಷಿಕೂಲಿಕಾರರು ಗುಲಾಮರಲ್ಲ. ಅವರ ಹಕ್ಕುಗಳನ್ನು ಹೋರಾಟದ ಮೂಲಕ ಪಡೆದುಕೊಳ್ಳುವ ಶಕ್ತಿ ಇದೆ. ಮಹಿಳಯರು ಪುರುಷನಿಗಿಂತ ಹೆಚ್ಚು ದುಡಿಮೆ ಮಾಡುತ್ತಾರೆ. ಕೂಲಿ ಹಂಚಿಕೆಯಲ್ಲಿ ತಾರತಮ್ಯ ಬೇಡ. 100 ದಿನ ಕೂಲಿ ಕೆಲಸ ನೀಡಬೇಕು. ಕೆಲಸ ನಿರ್ವಹಿಸುವಾಗ ಮೂರು ಸಲ ಹಾಜರಾತಿ ನಿಯಮವನ್ನು ತಕ್ಷಣ ಹಿಂಪಡೆಯಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಚಂದ್ರಪ್ಪ ಹೊಸ್ಕೇರಾ, ಚೆನ್ನಪ್ಪ ಆನೇಗುಂದಿ, ಸಾವಿತ್ರಮ್ಮ, ಜೈಲಾಲ ತೋಟದಮನೆ, ಅನಿತಾ ಹಿರೇಮಠ, ಸರೋಜಮ್ಮ ಮಂಡ್ಯ, ಮಲ್ಲಪ್ಪ ಕೋಡ್ಲಿ, ದಾವಲಸಾಬ್‌ ನದಾಫ್‌, ನಾಗರತ್ನ ಕುಂದಾಪುರ, ಎಸ್‌.ಎ.ಸಾಗರ, ಸುನಂದ ಹಿರೇಮಠ, ಗಾಲಿಬ್‌ ಸಾಬ್‌, ಅಂಬುಬಾಯಿ ಮಾಳಿಗೆ, ಧರ್ಮಣ್ಣ ದೊರೆ, ಭಾಗಮ್ಮ, ರಂಗಮ್ಮ ಕಟ್ಟಿಮನಿ, ಮಮತಾಜ್‌, ಸಿದ್ದಮ್ಮ ಬೋನಾಳ, ರವಿಕುಮಾರ, ಜಗದೇವಿ ಚಂದನಕೇರಿ, ಬಸವಲಿಂಗಮ್ಮ ನಾಟೇಕರ್‌, ಈರಮ್ಮ ಹೈಯ್ಯಾಳಕರ್‌, ಭೀಮರಾಯ ಪೂಜಾರಿ, ಮಲ್ಲಯ್ಯ ಪೊಲಂಪಲ್ಲಿ, ಶಿವಪ್ಪ ವಿಭೂತಿಹಳ್ಳಿ ಇದ್ದರು.

ಇದಕ್ಕೂ ಮುನ್ನ ನಗರದ ಬಸವೇಶ್ವರ ಕಮಾನ್‌ನಿಂದ ಸಿಪಿಎಸ್ ಶಾಲಾ ಮೈದಾನದವರೆಗೆ ಮೆರವಣಿಗೆಯಲ್ಲಿ ಮಹಿಳೆಯರು ಕೆಂಪು ಧ್ವಜವನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಾ ಸಾಗಿ ಬಂದರು.

Donate Janashakthi Media

Leave a Reply

Your email address will not be published. Required fields are marked *