ಚಿಕ್ಕಮಗಳೂರು: ಚಿಕ್ಕಮಗಳೂರಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 300ರ ಗಡಿ ದಾಟಿದ್ದು , ಜನರಲ್ಲಿ ಆತಂಕ ಹೆಚ್ಚಾಗಿದೆ.
ಕಳೆದೊಂದು ದಶಕದಿಂದ ಕಾಫಿನಾಡು ಚಿಕ್ಕಮಗಳೂರಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಡೆಂಗ್ಯೂ ಮಹಾಮಾರಿ ತಾಂಡವವಾಡ್ತಿದೆ. ಪ್ರತಿನಿತ್ಯ ಜಿಲ್ಲೆಯಾದ್ಯಂತ ಐದಾರು ಪ್ರಕರಣಗಳು ದಾಖಲಾಗುತ್ತಿದ್ದು, ಸದ್ಯಕ್ಕೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ 300ರ ಗಡಿ ದಾಟಿದೆ.
ಬರದಿಂದ ಕಂಗೆಟ್ಟಿದ್ದ ಜಿಲ್ಲೆಯಲ್ಲಿ ಸದ್ಯಕ್ಕೆ ಉತ್ತಮ ಮಳೆಯಾಗ್ತಿದೆ. ಈ ಮಧ್ಯೆ ಡೆಂಗ್ಯೂ ಪ್ರಕರಣಗಳ ರುದ್ರನರ್ತನ ಕೂಡ ದಿನದಿಂದ ದಿನಕ್ಕೆ ಜಿಲ್ಲೆಯನ್ನ ಕಾಡುತ್ತಿದೆ. ಚಿಕ್ಕಮಗಳೂರು ತಾಲೂಕು ಒಂದರಲ್ಲೇ 250 ಪ್ರಕರಣಗಳಿದ್ದು ಜಿಲ್ಲೆಯಾದ್ಯಂತ 350 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಕಳೆದ ಎರಡು ತಿಂಗಳಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಜ್ವರ ಕಾಣಿಸಿಕೊಂಡರೆ ಸಾಕು ಡೆಂಗ್ಯೂ ಕಂಫರ್ಮ್ ಅನ್ನುವ ರೀತಿಯ ಸ್ಥಿತಿ ಇದೆ. ಆದರೆ, ಅದೃಷ್ಟವಶಾತ್ ಈವರೆಗೂ ಯಾವುದೇ ಸಾವು ಸಂಭವಿಸಿಲ್ಲ. ಜ್ವರ ಕಾಣಿಸಿಕೊಂಡರೇ ಮನೆಯಲ್ಲಿ ಔಷಧಿ ತೆಗೆದುಕೊಳ್ಳುವುದನ್ನು ಬಿಟ್ಟು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಿರಿ ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.
ಇದನ್ನು ಓದಿ : ಜನಗಣತಿಯ ನವೀಕರಣ ಯಾವಾಗ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಬೇಕು; ಕಾಂಗ್ರೆಸ್ ಒತ್ತಾಯ
ಡೆಂಗ್ಯೂ ಪ್ರಕರಣಗಳ ಸಂಖ್ಯೆ ಇಳಿಮುಖದ ಲಕ್ಷಣ ಕಾಣ್ತಿಲ್ಲ. ತರೀಕೆರೆ, ಕಡೂರು, ಚಿಕ್ಕಮಗಳೂರು, ಮೂಡಿಗೆರೆ, ಎನ್. ಆರ್. ಪುರ, ಕೊಪ್ಪ ತಾಲೂಕುಗಳಲ್ಲಿ ದಿನದಿಂದ ದಿನಕ್ಕೆ ಡೆಂಗ್ಯೂ ಸಂಖ್ಯೆ ದ್ವಿಗುಣಗೊಳ್ಳುತ್ತಿದೆ. ಒಂದು ದಶಕದ ಬಳಿಕ ಈ ಪರಿ ಮಹಾಮಾರಿ ಹರಡಿದ್ದು ಇದೇ ಮೊದಲು. ಬೇಸಿಗೆ ಅವಧಿಯಲ್ಲಿ ಮಳೆ ಇಲ್ಲದೆ ಚರಂಡಿ, ಮೋರಿ-ಕಾಲುವೆಗಳಲ್ಲಿ ನೀರು ನಿಂತು ಸೊಳ್ಳೆಗಳ ಲಾರ್ವ ಪ್ರಮಾಣ ಹೆಚ್ಚಾಗಿ ಸೊಳ್ಳೆಗಳ ಕಾಟವು ಜಿಲ್ಲೆಯಲ್ಲಿ ಮಿತಿ ಮೀರಿದೆ. ಇದರ ಪರಿಣಾಮ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ರಂದು ವೈದ್ಯರು ತಿಳಿಸಿದ್ದಾರೆ.
ಜೊತೆಗೆ ವಾರಕ್ಕೊಮ್ಮೆ ನೀರು ಬರುತ್ತೆ ಅಂತ ನೀರನ್ನ ಶೇಖರಿಸಿಕೊಂಡು ಮುಚ್ಚದೆ ಇರೋದ್ರಿಂದಲೂ ಡೆಂಗ್ಯೂ ಬಂದಿದೆ ಅನ್ನೋದು ವೈದ್ಯರ ಸ್ಪಷ್ಟನೆ. ರೋಗದಿಂದ ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ಅವಶ್ಯಕತೆ ಇದ್ದರೆ ಮಾತ್ರ ಅಡ್ಮಿಟ್ ಮಾಡಿಕೊಳ್ಳಲಾಗುತ್ತಿದ್ದು, ಉಳಿದವರನ್ನು ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿಚಕ್ಷಣ ಅಧಿಕಾರಿ ಬಾಲಕೃಷ್ಣ ತಿಳಿಸಿದರು.
ಒಟ್ಟಾರೆ, ಡೆಂಗ್ಯೂ ಆತಂಕ ಬೇಡ, ಎಚ್ಚರವಿರಲಿ ಎನ್ನುವ ಸಂದೇಶವನ್ನು ಚಿಕ್ಕಮಗಳೂರು ಆರೋಗ್ಯ ಇಲಾಖೆ ನೀಡುತ್ತಿದ್ದು, ಸೊಳ್ಳೆಗಳಿಂದ ಸೂಕ್ತ ರಕ್ಷಣೆ ಪಡೆಯಲು ಜನರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ. ಆದರೂ, ಈ ಪರಿ ಡೆಂಗ್ಯೂ ಮಹಾಮಾರಿ ಜಿಲ್ಲೆಯನ್ನು ಕಾಡುತ್ತಿದ್ದು ಸರ್ಕಾರ ಹಾಗೂ ಆರೋಗ್ಯ ಇಲಾಖೆ ಮತ್ತಷ್ಟು ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೆಡ್ಗಳ ಸಮಸ್ಯೆ ಎದುರಾದರು ಆಶ್ಚರ್ಯವಿಲ್ಲ.
ಇದನ್ನು ನೋಡಿ : ‘ಮೋದಿಸರ್ಕಾರ’ ಬೇಡ, ಎನ್‌ಡಿಎ ಸರ್ಕಾರ ಬೇಕಾದರೆ ಇರಲಿ- ಭಾರತದ ಮತದಾರರ ತೀರ್ಪು Janashakthi Media