ನೋಟು ಅಮಾನ್ಯೀಕರಣ ಪ್ರಕರಣ: ಮುಚ್ಚಿದ ಲಕೋಟೆಯಲ್ಲಿ ದಾಖಲೆ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ನವದೆಹಲಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರ 2016ರಲ್ಲಿ ₹500 ಮತ್ತು ₹1,000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿದೆ.

ನೋಟು ಅಮಾನ್ಯೀಕರಣ ಮಾಡಲಾಗಿರುವ ಬಗ್ಗೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳು ಎತ್ತಿರುವ ಹನ್ನೊಂದು ಕಾನೂನು ಪ್ರಶ್ನೆಗಳನ್ನು ಆಧರಿಸಿ ಸುಪ್ರೀಂ ಕೋರ್ಟ್‌ ವಿವೇಕ್‌ ನಾರಾಯಣ ಶರ್ಮಾ ಮತ್ತು ಭಾರತ ಒಕ್ಕೂಟ ಮತ್ತಿತರರ ನಡುವಿನ ಪ್ರಕರಣದ ಬಗ್ಗೆ ನ್ಯಾಯಮೂರ್ತಿಗಳಾದ ಎಸ್‌ ಅಬ್ದುಲ್‌ ನಜೀರ್‌, ಬಿ ಆರ್‌ ಗವಾಯಿ, ಎ ಎಸ್‌ ಬೋಪಣ್ಣ, ವಿ ರಾಮಸುಬ್ರಮಣಿಯನ್‌ ಹಾಗೂ ಬಿ ವಿ ನಾಗರತ್ನ ಅವರನ್ನೊಳಗೊಂಡು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ವಿಚಾರಣೆಯನ್ನು ಪೂರ್ಣಗೊಳಿಸಿದೆ.

ಸರ್ಕಾರದ ಪರ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ಹಿರಿಯ ವಕೀಲರಾದ ಪಿ ಚಿದಂಬರಂ ಹಾಗೂ ಶ್ಯಾಮ್ ದಿವಾನ್ ಸೇರಿದಂತೆ ಅರ್ಜಿದಾರರ ಪರ ವಾದವನ್ನು ಮಂಡಿಸಿದರು.

ಡಿಸೆಂಬರ್ 10ರೊಳಗೆ ತಮ್ಮ ಲಿಖಿತ ಮಂಡನೆಯನ್ನು ಸಲ್ಲಿಸುವಂತೆ  ಕಕ್ಷಿದಾರರಿಗೆ ನಿರ್ದೇಶಿಸಿದ ಸುಪ್ರೀಂ ಕೋರ್ಟ್‌ ನ್ಯಾಯಪೀಠ ನೋಟು ರದ್ದತಿ ನಿರ್ಧಾರಕ್ಕೆ ಸಂಬಂಧಿಸಿದ ಕೆಲವು ಬಹಿರಂಗಪಡಿಸಲಾಗದ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ವಾದ ಮಂಡನೆ ವೇಳೆ ಕೇಂದ್ರದ ಮಾಜಿ ಹಣಕಾಸು ಸಚಿವ ಹಾಗೂ ಹಿರಿಯ ವಕೀಲ ಪಿ.ಚಿದಂಬರಂ, “ನೋಟು ಅಮಾನ್ಯೀಕರಣ ಕುರಿತ ಕೇಂದ್ರದ ನಿರ್ಧಾರಕ್ಕೆ ಆರ್‌ಬಿಐ ವಿನಮ್ರವಾಗಿ ಮಣಿಯಿತು. ಇದರಿಂದಾಗಿ ಈ ಕ್ರಮ ಕುರಿತಾದ ಕಾನೂನು ಸಿಂಧುತ್ವವನ್ನು ಸುಪ್ರೀಂ ಕೋರ್ಟ್‌ ನಿರ್ಧರಿಸಬಹುದು” ಎಂದು ವಾದಿಸಿದ್ದಾರೆ.

ನೋಟು ಅಮಾನ್ಯೀಕರಣ ಸಂದರ್ಭದಲ್ಲಿ ಕೇವಲ ಒಂದು ಗಂಟೆ ಕಾಲ ಚರ್ಚೆ ನಡೆಸಿದ ಆರ್‌ಬಿಐ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಮಣಿದಿದೆ. ನೋಟು ರದ್ದತಿ ಬಗ್ಗೆ ಖುದ್ದು ಕೇಂದ್ರ ಸರ್ಕಾರವೇ ಅದರ ಅಗಾಧತೆಯನ್ನು ಪರಿಗಣಿಸಿರಲಿಲ್ಲ. ನೋಟು ರದ್ದತಿಗೆ ಸಂಬಂಧಿಸಿದಂತೆ ನಡೆದ ಸಭೆಯ ಮಾಹಿತಿಯನ್ನು ಕೇಂದ್ರ ಸರ್ಕಾರ ಮುಚ್ಚಿಡುತ್ತಿರುವುದೇಕೆ? ಪ್ರಕರಣ ಇತ್ಯರ್ಥಕ್ಕೆ ಈ ದಾಖಲೆಗಳ ಸಂಪೂರ್ಣ ಅವಶ್ಯಕತೆ ಇದೆ. ನೋಟು ರದ್ದತಿ ನಿರ್ಧಾರಕ್ಕೆ ಆಧಾರವೇನು ಯಾವ ಅಂಶವನ್ನು ಪರಿಗಣಿಸಿದರು ಎಂಬುದು ತಿಳಿಯಬೇಕು. ಇವುಗಳೆಲ್ಲವನ್ನೂ ಸರ್ಕಾರ ಬಹಿರಂಗಪಡಿಸಬೇಕಿದೆ. ಸಂಸತ್ತು ಅಂಗೀಕರಿಸಿದ ಕಾನೂನಿನ ಮೂಲಕ ನೋಟು ಅಮಾನ್ಯೀಕರಣವನ್ನು ಮಾನ್ಯ ಮಾಡಲಾಗಿದೆ ಎಂಬುದು ಸರಿಯಲ್ಲ. ಆರ್‌ಬಿಐ ಕಾಯಿದೆಯ ನಿಯಮಾವಳಿಯಂತೆ ಅಷ್ಟೇ ಕಾನೂನು ಜಾರಿಗೊಳಿಸಲಾಗಿದೆ ಎಂದು ಪಿ. ಚಿದಂಬರಂ ವಾದಿಸಿದರು.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ, ದೇಶವು ನಿಯಂತ್ರಿತ ಆರ್ಥಿಕತೆಯಿಂದ ಮಾರುಕಟ್ಟೆ ಆಧಾರಿತ ಆರ್ಥಿಕತೆಗೆ ಪರಿವರ್ತನೆಗೊಂಡಂತೆ, ಒಂದು ಚೌಕಟ್ಟಿನಿಂದ ಇನ್ನೊಂದಕ್ಕೆ ಚಲಿಸಲು ಅನುವು ಮಾಡಿಕೊಡಲು ನೋಟು ಅಮಾನ್ಯೀಕರಣ ಮಾಡಲಾಗಿದೆ. ನೋಟು ಅಮಾನ್ಯೀಕರಣ ನೀತಿಯ ಹಿಂದಿನ ಉದ್ದೇಶ ಪ್ರಶ್ನಿಸಿದರೆ ಅದರ ಸಾರ ದುರ್ಬಲಗೊಳ್ಳುತ್ತದೆ ಎಂದು ವಾದಿಸಿದರು.

ಮುಚ್ಚಿದ ಲಕೋಟೆಯಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸುವುದಾಗಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಸುಪ್ರೀಂ ಕೋರ್ಟ್ ನ್ಯಾಯಪೀಠಕ್ಕೆ ತಿಳಿಸಿದರು.

2016ರಲ್ಲಿ ನೋಟು ಅಮಾನ್ಯೀಕರಣಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ 58 ಅರ್ಜಿಗಳನ್ನು ಆರು ವರ್ಷಗಳ ಬಳಿಕ ವಿಚಾರಣೆಗೆ ಮುಂದಾಗಿ, ವಿಚಾರಣೆಯನ್ನು ಪೂರ್ನಗೊಳಿಸಿ ತೀರ್ಪು ಕಾಯ್ದಿರಿಸಿದೆ.

Donate Janashakthi Media

Leave a Reply

Your email address will not be published. Required fields are marked *