“ಪ್ರಜಾಪ್ರಭುತ್ವ ವರ್ಸಸ್ ತುರ್ತು ಪರಿಸ್ಥಿತಿ” ಎಂದ ಮೋದಿ

ಮೋದಿ ನೇತೃತ್ವದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ

ಪಲಾಶ್ ದಾಸ್- ಕೃಪೆ:’ಗಣಶಕ್ತಿ’

(ಕನ್ನಡಕ್ಕೆ:ಸಿ.ಸಿದ್ದಯ್ಯ)

ಭಾರತ ಪ್ರಜಾಪ್ರಭುತ್ವದ ಚರಿತ್ರೆಯಲ್ಲಿ ತುರ್ತು ಪರಿಸ್ಥಿತಿಯು ನಿಸ್ಸಂದೇಹವಾಗಿ ಒಂದು ಕರಾಳ ಅಧ್ಯಾಯ. ಆದರೆ ಬಹುತೇಕ ಫ್ಯಾಸಿಸ್ಟ್ ರೀತಿಯಲ್ಲಿ ಪ್ರಜಾಪ್ರಭುತ್ವವನ್ನು ಕೊಂದು ಸಂವಿಧಾನವನ್ನು ಬದಲಾಯಿಸಲು ತಯಾರಿ ನಡೆಸುತ್ತಿರುವ ವ್ಯಕ್ತಿಯ ಮಾತಿನಲ್ಲಿ ಪ್ರಜಾಪ್ರಭುತ್ವ ಎನ್ನುವುದು ಕಪಟತನವಲ್ಲದೆ ಬೇರೇನೂ ಅಲ್ಲ. …. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಆರೆಸ್ಸೆಸ್ ಮುಖ್ಯಸ್ಥ ಬಾಳಾ ಸಾಹೇಬ್ ದೇವರಸ್ ತಮ್ಮ ಬಂಧನದ ನಂತರ, ಆರೆಸ್ಸೆಸ್ ರಾಜಕೀಯೇತರ ನಿಲುವನ್ನು ಹೊಂದಿದೆ, ರಾಷ್ಟ್ರ ನಿರ್ಮಾಣಕ್ಕೆ ಸಹಕಾರ ನೀಡುತ್ತೇವೆ ಎನ್ನುತ್ತಾ, ತಮ್ಮನ್ನು ಮತ್ತು ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿ ಇಂದಿರಾ ಗಾಂಧಿಯವರಿಗೆ ಪದೇ ಪದೇ ಪತ್ರಗಳನ್ನು ಬರೆದರು. ಅಂತಿಮವಾಗಿ ಬಿಡುಗಡೆಗೆ ಸರ್ಕಾರ ನಿಗದಿಪಡಿಸಿದ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ಅವರು ಬಿಡುಗಡೆಯಾದರು.

ಜೂನ್ 25 ಇಂದಿರಾಗಾಂಧಿಯವರ ಆಡಳಿತದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ದಿನ. ಇದೇ ಜೂನ್ 24 ರಂದು ಲೋಕಸಭೆಯ ಮೊದಲ ದಿನದ ಸಮಾವೇಶದಲ್ಲಿ “ಪ್ರಜಾಪ್ರಭುತ್ವ ವರ್ಸಸ್ ತುರ್ತು ಪರಿಸ್ಥಿತಿ” ಎಂದ ನರೇಂದ್ರ ಮೋದಿ ಪ್ರತಿಪಕ್ಷಗಳ ಮೇಲೆ, ವಿಶೇಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಗೋಡಿ ಮಾಧ್ಯಮಗಳಲ್ಲಿ ಅವರ ಹೇಳಿಕೆಗಳು ಪ್ರಧಾನವಾಗಿ ಕಾಣಿಸಿಕೊಂಡವು.

ಭಾರತ ದೇಶದ ಪ್ರಜಾಪ್ರಭುತ್ವದ ಚರಿತ್ರೆಯಲ್ಲಿ ತುರ್ತು ಪರಿಸ್ಥಿತಿಯು ನಿಸ್ಸಂದೇಹವಾಗಿ ಒಂದು ಕರಾಳ ಅಧ್ಯಾಯ. ಆದರೆ ಬಹುತೇಕ ಫ್ಯಾಸಿಸ್ಟ್ ರೀತಿಯಲ್ಲಿ ಪ್ರಜಾಪ್ರಭುತ್ವವನ್ನು ಕೊಂದು ಸಂವಿಧಾನವನ್ನು ಬದಲಾಯಿಸಲು ತಯಾರಿ ನಡೆಸುತ್ತಿರುವ ವ್ಯಕ್ತಿಯ ಮಾತಿನಲ್ಲಿ ಪ್ರಜಾಪ್ರಭುತ್ವ ಎನ್ನುವುದು ಕಪಟತನವಲ್ಲದೆ ಬೇರೇನೂ ಅಲ್ಲ.

ತುರ್ತುಪರಿಸ್ಥಿತಿಯ ಕರಾಳ ದಿನಗಳು

ಸುಮಾರು ಅರ್ಧ ಶತಮಾನದ ಹಿಂದೆ, 1975 ಜೂನ್ 25 ರಂದು ಭಾರತದ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ಅಧಿಕೃತವಾಗಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಅದಕ್ಕೆ ಕಾರಣ ಅಲಹಾಬಾದ್ ಹೈಕೋರ್ಟ್ ನ ತೀರ್ಪು. ಇದರ ಪ್ರಕಾರ 1971ರಲ್ಲಿ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರ ಆಯ್ಕೆ ಅಸಿಂಧುವಾಗಿತ್ತು. ಅಧಿಕಾರ ಕಳೆದುಕೊಳ್ಳುವ ಭಯದಿಂದ ಸರ್ಕಾರವು ಸಂವಿಧಾನದ ಆರ್ಟಿಕಲ್ 352 ಅನ್ನು ಅನ್ವಯಿಸಿ ತುರ್ತು ಪರಿಸ್ಥಿತಿಯನ್ನು ಹೇರಿತು. ಇದು ಮಾರ್ಚ್ 21, 1977 ರವರೆಗೆ ಮುಂದುವರೆಯಿತು. ಭಾರತದ ಪ್ರಜಾಪ್ರಭುತ್ವದ ಚರಿತ್ರೆಯಲ್ಲಿ ಅದೊಂದು ಕರಾಳ ಅವಧಿ.

ಪತ್ರಿಕಾ ಸ್ವಾತಂತ್ರ್ಯ ಮೊಟಕು

ತುರ್ತು ಪರಿಸ್ಥಿತಿ ಘೋಷಣೆಯಾದ ಕೂಡಲೇ ಸರ್ಕಾರ ಪತ್ರಿಕಾ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಒಂದು ಕಾನೂನನ್ನು ಜಾರಿಗೆ ತಂದಿತು. ಸರ್ಕಾರದ ನಿಯಂತ್ರಣದಲ್ಲಿರುವ ವಾರ್ತಾಪತ್ರಿಕೆಗಳು, ಆಕಾಶವಾಣಿ ಮತ್ತು ದೂರದರ್ಶನ ಇವುಗಳು ಮಾತ್ರ ಸರ್ಕಾರದ ವೈಭವವನ್ನು ಪ್ರಸಾರ ಮಾಡುತ್ತಲೇ ಇದ್ದವು. ವಾರ್ತಾಪತ್ರಿಕೆಗಳು, ನಿಯತಕಾಲಿಕೆಗಳಿಂದ ಅವರಿಗೆ ಅಹಿತಕರವಾದ ವಿಷಯಗಳನ್ನು ತೆಗೆದುಹಾಕಲು ಬ್ಯೂರೋ ಆಫ್ ಪ್ರೆಸ್ ಸೆನ್ಸಾರ್ಶಿಪ್ ಕೆಲಸ ಮಾಡಿತು. ಆದಾಗ್ಯೂ, ಕೆಲವು ಪತ್ರಿಕೆಗಳು ಮತ್ತು ಅನೇಕ ಪತ್ರಕರ್ತರು ಪ್ರಮುಖವಾದ ಸತ್ಯವನ್ನು ಹೇಳಲು ಪ್ರಯತ್ನಿಸಿದರು. ಪರಿಣಾಮವಾಗಿ, ಅನೇಕ ಸಂಪಾದಕರು ಮತ್ತು ಪತ್ರಕರ್ತರು ಬಂಧನಕ್ಕೊಳಗಾದರು.

MISA ಬಳಸಿ ವಿರೋಧ ಪಕ್ಷಗಳ ನಾಯಕರ ಬಂಧನ

ತುರ್ತುಪರಿಸ್ಥಿತಿಯ ಅವಧಿಯಲ್ಲಿ ಸಂಸದೀಯ ವ್ಯವಸ್ಥೆಯನ್ನು ನಿರ್ಲಕ್ಷ್ಯ ಮಾಡಿದರು. ವಿರೋಧ ಪಕ್ಷಗಳ ಮೇಲೆ ದಾಳಿಗಳು ಮತ್ತು ದೇಶಾದ್ಯಂತ ಸಾಮೂಹಿಕ ಬಂಧನಗಳು ನಡೆದವು. ಸಮಾವೇಶಗಳು, ಪ್ರದರ್ಶನಗಳು, ಮೆರವಣಿಗೆಗಳು, ಸಭೆಗಳನ್ನು ನಿಷೇಧಿಸಲಾಯಿತು. ಜ್ಯೋತಿ ಬಸು, ಜಯಪ್ರಕಾಶ್ ನಾರಾಯಣ್ ಮತ್ತು ಮೊರಾರ್ಜಿ ದೇಶಾಯಿ ಸೇರಿದಂತೆ ದೇಶದ ಪ್ರಮುಖ ರಾಜಕೀಯ ನಾಯಕರು ಜೈಲು ಪಾಲಾದರು. MISA (ಆಂತರಿಕ ಭದ್ರತಾ ಕಾಯಿದೆ ನಿರ್ವಹಣೆ) ಮತ್ತು ಇತರ ಕಾನೂನುಗಳ ಅಡಿಯಲ್ಲಿ ಸಾವಿರಾರು ರಾಜಕೀಯ ಕಾರ್ಯಕರ್ತರು ಮತ್ತು ಮುಖಂಡರನ್ನು ಬಂಧಿಸಲಾಯಿತು.

ಇದಲ್ಲದೆ, ಸಾಮಾನ್ಯ ಜನರ ಮೂಲಭೂತ ಹಕ್ಕುಗಳು ಸಹ ಅಪಾಯಕ್ಕೆ ಒಳಗಾದವು. ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರತಿಭಟನೆ ಮಾಡುವ ಹಕ್ಕು, ನಾಗರಿಕ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ಸಾಂಸ್ಕೃತಿಕ ಜಗತ್ತಿನಲ್ಲಿ ನಿರ್ಬಂಧಗಳು, ಬಂಧನಗಳು ನಡೆದವು. ನಾಟಕ ಪ್ರದರ್ಶನಗಳ ಮೇಲೆ ನಿಷೇಧ, ಚಲನಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಿದ್ದು ನಡೆಯಿತು.

ತುರ್ತು ಪರಿಸ್ಥಿತಿ ಮತ್ತು ಆರೆಸ್ಸೆಸ್

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರತಿಪಕ್ಷಗಳ ರಾಜಕೀಯ ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ದ ಮುಖ್ಯಸ್ಥ ಬಾಳಾ ಸಾಹೇಬ್ ದೇವರಸ್ ಬಂಧನದ ನಂತರ, ತಮ್ಮನ್ನು ಮತ್ತು ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕೆಂದು ಮನವಿ ಮಾಡಿ ಇಂದಿರಾ ಗಾಂಧಿಯವರಿಗೆ ದೇವರಸ್ ಅವರು ಪದೇ ಪದೇ ಪತ್ರಗಳನ್ನು ಬರೆದರು. ಒಂದು ಪತ್ರದಲ್ಲಿ ಆರೆಸ್ಸೆಸ್ ರಾಜಕೀಯೇತರ ನಿಲುವನ್ನು ಹೊಂದಿದೆ ಎಂದು ಒತ್ತಿ ಹೇಳಿ, ದೇಶ ಸೇವೆಗೆ ತನ್ನ ಬದ್ಧತೆಯನ್ನು ವ್ಯಕ್ತಪಡಿಸಿದರು. ಎರಡನೇ ಪತ್ರದಲ್ಲಿ ದೇಶದ ಅಭಿವೃದ್ಧಿ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಜೈಲಿನಲ್ಲಿರುವ ಆರೆಸ್ಸೆಸ್ ಕಾರ್ಯಕರ್ತರನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಮೂರನೇ ಪತ್ರವು ದೇಶದ ಕಲ್ಯಾಣಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ವಿಧಾನಗಳನ್ನು ಚರ್ಚಿಸಲು ಇಂದಿರಾ ಗಾಂಧಿಯವರೊಂದಿಗೆ ಖಾಸಗಿ ಸಭೆಯನ್ನು ಕೋರಿತು. ಅಂತಿಮವಾಗಿ ಬಿಡುಗಡೆಗೆ ಸರ್ಕಾರ ನಿಗದಿಪಡಿಸಿದ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ಅವರು ಬಿಡುಗಡೆಯಾದರು.

ಮೋದಿ ಆಡಳಿತದಲ್ಲಿ ‘ಪ್ರಜಾಪ್ರಭುತ್ವ’ ಅರ್ಥವಿಲ್ಲದ್ದು

ನರೇಂದ್ರ ಮೋದಿಯವರ ಆಡಳಿತದಲ್ಲಿ ಪಿಎಂಒ (ಪ್ರಧಾನ ಮಂತ್ರಿ ಕಛೇರಿ) ಕಾರ್ಯಾಲಯ ಕೇಂದ್ರವಾಗಿ ಮಾರ್ಪಟ್ಟಿದೆ. ಮೋದಿ ಎಂದಿಗೂ ಪ್ರಜಾಪ್ರಭುತ್ವದ ಮಾರ್ಗವನ್ನು ಅನುಸರಿಸಲಿಲ್ಲ. ‘ಮನ್ ಕಿ ಬಾತ್’ ಎನ್ನುತ್ತಾರೆ. ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳುವ ಪ್ರಶ್ನೆಗಳಿಗೆ ಯಾವುದೇ ಉತ್ತರ ಕೊಡುವುದಿಲ್ಲ. ಸಂಸತ್ತಿನಲ್ಲಿ ಪ್ರತಿಪಕ್ಷಗಳ ಚರ್ಚೆಗೆ ಅವರು ಕಿವಿಗೊಡಲಿಲ್ಲ. ಯಾರ ಮಾತನ್ನೂ ಕೇಳದೆ, ಸಂಸತ್ತಿನಲ್ಲಿ ಚರ್ಚೆ ನಡೆಸದೆ ನೋಟು ಅಮಾನ್ಯೀಕರಣ ಮಾಡಿದರು. ಕೋವಿಡ್ ಅವಧಿಯಲ್ಲಿ ತರ್ಕಬದ್ಧವಲ್ಲದ, ಅವೈಜ್ಞಾನಿಕ ಕ್ರಮಗಳನ್ನು ತೆಗೆದುಕೊಂಡರು. ಪಿಎಂ ಕೇರ್ಸ್ ಫಂಡ್ ಅನ್ನು ಖಾಸಗಿ ನಿಧಿಯಾಗಿ ಪರಿವರ್ತಿಸಿದರು. ಯಾವುದೇ ಚರ್ಚೆಯಿಲ್ಲದೆ ಚುನಾವಣಾ ಬಾಂಡ್‌ಗಳನ್ನು ಪರಿಚಯಿಸಿದರು.

ಇದನ್ನು ಓದಿ : ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ : ಅಧಿಕಾರಿಗಳ ವರ್ಗಾವಣೆಗೆ ಮುಂದಾದ ಯೋಗಿ ಸರ್ಕಾರ್‌

ಅಧಿಕಾರಗಳ ಕೇಂದ್ರೀಕರಣ

ರಾಜ್ಯ ಸರ್ಕಾರಗಳ ಅಧಿಕಾರವನ್ನು ಕ್ರಮೇಣ ಮೊಟಕುಗೊಳಿಸಲಾಗಿದೆ. ಸಂಸತ್ತಿನಲ್ಲಿ ಚರ್ಚೆಗೆ ಅವಕಾಶವೇ ಇಲ್ಲದಂತಾಗಿದೆ. ಸಂಸದೀಯ ವ್ಯವಸ್ಥೆಯಲ್ಲಿ ಕಾನೂನು ಮಾಡುವ ಹಕ್ಕನ್ನು ಕಸಿದುಕೊಂಡು ಆರ್ಡಿನೆನ್ಸ್ ರಾಜ್ ಅನ್ನು ಸ್ಥಾಪಿಸಿದರು. ಕೃಷಿ ಕಾಯಿದೆ ಮತ್ತು ವಿದ್ಯುಚ್ಛಕ್ತಿ ಕಾಯಿದೆಗಳನ್ನು ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತರಲಾಯಿತು. ಸಂಸತ್ತಿನಲ್ಲಿ ಬಹುಮತ ಇರುವುದರಿಂದ ಬಹುತೇಕ ಬಲವಂತದ ಮೂಲಕವೇ ಮಸೂದೆಗಳನ್ನು ಅಂಗೀಕರಿಸುವುದು ವಾಡಿಕೆಯಾಗಿದೆ.

ಭಾರತದ ಸಂವಿಧಾನದ ಮುಖ್ಯ ಲಕ್ಷಣಗಳಲ್ಲಿ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಒಕ್ಕೂಟ ರಚನೆ (Democracy, Secularism, Federalism) ಮುಖ್ಯವಾದವುಗಳಾಗಿವೆ. ಆದರೆ ಮೋದಿ ಸರಕಾರ ಸಂವಿಧಾನದ ಸಾರದ ಮೇಲೆಯೇ ವ್ಯವಸ್ಥಿತವಾಗಿ ದಾಳಿಗೆ ಇಳಿದಿದೆ. ಕೇಂದ್ರ-ರಾಜ್ಯ ಸಂಬಂಧಗಳನ್ನು ಹಾಳು ಮಾಡುವ ಮೂಲಕ ಇದು ರಾಜ್ಯಗಳನ್ನು ದುರ್ಬಲಗೊಳಿಸಿದೆ. ರಾಜ್ಯಗಳ ಒಪ್ಪಿಗೆಯಿಲ್ಲದೆ ಸಂವಿಧಾನದ 370 ನೇ ವಿಧಿಯನ್ನು ಏಕಪಕ್ಷೀಯವಾಗಿ ರದ್ದುಗೊಳಿಸಿತು. ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ. ಅದೇ ರೀತಿ ಜಿಎಸ್‌ಟಿಯನ್ನು ಏಕಪಕ್ಷೀಯವಾಗಿ ಜಾರಿಗೊಳಿಸಲಾಗಿದೆ. ಇವೆಲ್ಲವೂ ರಾಜ್ಯಗಳ ಹಕ್ಕುಗಳನ್ನು ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ನಾಶಪಡಿಸಿವೆ.

ಸ್ವಾಯತ್ತ ಸಂಸ್ಥೆಗಳ ಮೇಲಿನ ಹಿಡಿತ

ಸ್ವಾಯತ್ತ ಸಂಸ್ಥೆಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ವಿರೋಧ ಪಕ್ಷಗಳನ್ನು ಒಡೆಯಲು, ಸರ್ಕಾರಗಳನ್ನು ವಶಪಡಿಸಿಕೊಳ್ಳಲು, ಚುನಾವಣಾ ಬಾಂಡ್‌ ಗಳ ಮೂಲಕ ಆರ್ಥಿಕ ಲಾಭ ಪಡೆಯಲು ಇಡಿ, ಸಿಬಿಐನಂತಹ ಕೇಂದ್ರೀಯ ಸಂಸ್ಥೆಗಳನ್ನು ಬಳಸಲಾಗುತ್ತಿದೆ. ಸಂಘಕ್ಕೆ ನಿಷ್ಠಾವಂತರಾಗಿರುವವರನ್ನು ಈ ಸಂಸ್ಥೆಗಳ ಮುಖ್ಯ ಅಧಿಕಾರಿಗಳಾಗಿ ನೇಮಿಸುತ್ತಿದೆ. ಚುನಾವಣಾ ಆಯೋಗ, ಭಾರತೀಯ ರಿಸರ್ವ್ ಬ್ಯಾಂಕ್, ಸಿಬಿಐ ಮುಂತಾದವುಗಳನ್ನು ಈ ರೀತಿ ತುಂಬಿಸಲಾಗುತ್ತದೆ. ಶಿಕ್ಷಣ ಕ್ಷೇತ್ರವನ್ನು ಕೇಂದ್ರೀಕರಿಸಲು ಮತ್ತು ಖಾಸಗೀಕರಣಗೊಳಿಸಲು… ಸಿಬಿಎಸ್ ಸಿ ನಿಂದ ಇತಿಹಾಸ ಸಂಶೋಧನಾ ಮಂಡಳಿಯವರೆಗೆ, ಎಲ್ಲಾ ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು ತಮ್ಮ ನಿಷ್ಠಾವಂತರನ್ನು ನೇಮಿಸುವ ಮೂಲಕ ಎಲ್ಲಾ ಸ್ವಾಧೀನಪಡಿಸಿಕೊಂಡರು.

ಇಂದು ಸಂಸತ್ತು ಭ್ರಷ್ಟಾಚಾರಿಗಳಿಂದ ತುಂಬಿದೆ. ಯುಜಿಸಿ ಮತ್ತು ಎನ್‌ ಟಿ ಎ ಗಳಂತೆ ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತ ತುಂಬಿದ ಅಸಮರ್ಥರ ಕೈಗೆ ಹೋಗಿವೆ. ಶಾಲಾ-ಕಾಲೇಜುಗಳಲ್ಲಿ ಏನನ್ನು ಕಲಿಸಬೇಕು, ಪಠ್ಯಪುಸ್ತಕಗಳಲ್ಲಿ ಏನನ್ನು ಸೇರಿಸಬೇಕು ಮತ್ತು ಯಾವುದನ್ನು ತೆಗೆದುಹಾಕಬೇಕು ಎಂಬುದನ್ನು ಆರೆಸ್ಸೆಸ್ ನಿರ್ಧರಿಸುತ್ತದೆ. ಕಾನೂನು ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸುವ ಯಾವುದೇ ಪ್ರಯತ್ನವನ್ನು ನಿರ್ಲಕ್ಷಿಸಬಾರದು. ನ್ಯಾಯಾಧೀಶರ ನೇಮಕದಲ್ಲಿ ಮತ್ತು ನ್ಯಾಯಾಂಗದ ಮೇಲೆ ಸರ್ಕಾರ ನಿರಂತರ ಒತ್ತಡ ಹೇರಿದೆ. ಚುನಾವಣಾ ಆಯುಕ್ತರ ನೇಮಕದ ಹೊಣೆಗಾರಿಕೆಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ತಪ್ಪಿಸಿ ಚುನಾವಣಾ ಆಯೋಗವನ್ನು ತಮ್ಮ ಅಧೀನಕ್ಕೆ ತೆಗೆದುಕೊಂಡಿದೆ.

ಜಾತ್ಯತೀತತೆ, ಬಹುತ್ವ ಅಪಾಯದಲ್ಲಿದೆ

ಭಾರತ ದೇಶದಲ್ಲಿ ಜಾತ್ಯತೀತ ಸಿದ್ಧಾಂತವನ್ನು ಅನುಸರಿಸಿ, ಧರ್ಮ, ಭಾಷೆ, ಜಾತಿ-ಗೋತ್ರ, ಲಿಂಗ ಮತ್ತು ಸಂಸ್ಕೃತಿಯನ್ನು ಲೆಕ್ಕಿಸದೆ ಕಾನೂನಿನ ದೃಷ್ಟಿಯಲ್ಲಿ ಎಲ್ಲಾ ಜನರು ಸಮಾನರು. ಆದರೆ ಜನರನ್ನು ವಿಭಜಿಸುವ ಉದ್ದೇಶದಿಂದ, ಮೋದಿ ಸರ್ಕಾರವು ಧರ್ಮದ ಆಧಾರದ ಮೇಲೆ ಪೌರತ್ವವನ್ನು ನೀಡಲು ತಿದ್ದುಪಡಿ ಮಾಡಿದ ಸಿಎಎಯನ್ನು ಅಸಂವಿಧಾನಿಕವಾಗಿ ಜಾರಿಗೆ ತಂದಿತು. ಸಾಮಾಜಿಕ ಸೌಹಾರ್ದತೆ, ಒಗ್ಗಟ್ಟು ಹಾಳು ಮಾಡಿ, ಆರೆಸ್ಸೆಸ್ ನ ಹಿಂದುತ್ವ ಸಿದ್ಧಾಂತ ಜಾರಿಗೆ ತರಲು ಸರ್ಕಾರ ಆದೇಶ ನೀಡಿದೆ. ಅಲ್ಪಸಂಖ್ಯಾತರು, ದಲಿತರು ಮತ್ತು ಬುಡಕಟ್ಟು ಜನಾಂಗದವರ ಮೇಲೆ ಹಲ್ಲೆ ಮತ್ತು ಚಿತ್ರಹಿಂಸೆಗಳು ನಿತ್ಯವೂ ನಡೆಯುತ್ತಿವೆ. ಬುಲ್ಡೋಜರ್ ರಾಜ್, ಎನ್‌ಕೌಂಟರ್, ಬಿಜೆಪಿ ಸರ್ಕಾರ ಎನ್ನುವುದು ಇಂದು ಪರ್ಯಾಯ ಪದಗಳಾಗಿ ಮಾರ್ಪಟ್ಟಿವೆ. ಗೋಸಂರಕ್ಷಣಾ ಪಡೆಗಳು ಸೇರಿದಂತೆ ವಿವಿಧ ಹಿಂದೂ ಶಕ್ತಿಗಳು ಯಾರು ಏನನ್ನು ತಿನ್ನಬೇಕು ಮತ್ತು ಏನನ್ನು ಧರಿಸಬೇಕು ಎಂಬುದನ್ನು ನಿರ್ಧರಿಸುತ್ತಿದ್ದಾರೆ. ಗೋ ರಕ್ಷಣೆ ಅಥವಾ ಲವ್ ಜಿಹಾದ್ ಹೆಸರಿನಲ್ಲಿ ಗುಂಪು ದಾಳಿಗಳು ನಡೆಯುತ್ತಿವೆ.

ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲಾಗಿದೆ

ಕಾರ್ಪೊರೇಟ್‌ಗಳ ಪರವಾಗಿ ಸರ್ಕಾರ ಕರಾಳ ಕೃಷಿ ಕಾಯಿದೆಗಳನ್ನು ಜಾರಿಗೆ ತಂದಾಗ ಐತಿಹಾಸಿಕ ರೈತ ಚಳುವಳಿ ಪ್ರಾರಂಭವಾಯಿತು. ಆ ಆಂದೋಲನವನ್ನು ಹತ್ತಿಕ್ಕಲು ಮೋದಿ ಸರಕಾರ ಸೇನೆ ಮತ್ತು ಪೊಲೀಸರೊಂದಿಗೆ ದೇಶಕ್ಕೆ ಅನ್ನ ನೀಡುವ ರೈತರ ವಿರುದ್ಧ ಯುದ್ಧಕ್ಕೆ ಇಳಿದು ಕ್ರೂರ ಹಿಂಸೆ ನೀಡಿತು. ದೆಹಲಿಯ ಶಾಹೀನ್ ಬಾಗ್, ಜೆಎನ್‌ ಯು ಮತ್ತು ದೇಶದ ಇತರ ಭಾಗಗಳಲ್ಲಿ ನಡೆದ ಸಿಎಎ-ಎನ್‌ ಆರ್‌ ಸಿ ವಿರೋಧಿ ಚಳುವಳಿಗಳನ್ನು ಹತ್ತಿಕ್ಕಲು ಸರ್ಕಾರ ಮತ್ತು ಹಿಂದುತ್ವ ಶಕ್ತಿಗಳು ಇದೇ ರೀತಿಯ ದಾಳಿಗಳನ್ನು ನಡೆಸಿದರು. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ದೇಶದ ವಿವಿಧ ಭಾಗಗಳ ಅನೇಕ ಪ್ರಮುಖರು ಇನ್ನೂ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಸ್ಟಾನ್ ಸ್ವಾಮಿ ಜೈಲು ಕಸ್ಟಡಿಯಲ್ಲಿ ನಿಧನರಾದರು. ವೈಜ್ಞಾನಿಕ ಧೋರಣೆಯನ್ನು ಅನುಸರಿಸಿದ ದಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿ, ಗೌರಿ ಲಂಕೇಶ್ ಅವರನ್ನು ಹಿಂದುತ್ವ ಶಕ್ತಿಗಳು ಹತ್ಯೆಗೈದವು.

ಅಘೋಷಿತ ತುರ್ತು ಪರಿಸ್ಥಿತಿ

ಮೋದಿಯವರ ಆಡಳಿತದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸದಿದ್ದರೂ ದೇಶವು ಅಘೋಷಿತ ತುರ್ತು ಪರಿಸ್ಥಿತಿಯಲ್ಲಿದೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮವನ್ನು ಇಂದು “ಗೋಡಿ ಮಾಧ್ಯಮ” (‘ ಮಡಿಲಲ್ಲಿ ಕುಳಿತ ಮಾಧ್ಯಮ ‘) ಎಂದು ಕರೆಯಲಾಗುತ್ತದೆ. ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ನಿಯಂತ್ರಣಗಳನ್ನು ಆರಂಭದಲ್ಲಿ ಟೀಕಿಸಿದ ಮುಖ್ಯವಾಹಿನಿಯ ಮಾಧ್ಯಮವು ಗೋಡಿ ಮಾಧ್ಯಮವಾಗಿ ಬದಲಾಗಿದೆ. ಸ್ವತಂತ್ರ ಪತ್ರಕರ್ತರು, ಪೋರ್ಟಲ್‌ ಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ನಿಯಂತ್ರಿಸಲು ಸರ್ಕಾರವು ಬಲವಾದ ಪ್ರಯತ್ನಗಳನ್ನು ಮಾಡಿದೆ. ಮೋದಿ ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ನ್ಯೂಸ್ ಕ್ಲಿಕ್, ದಿ ವೈರ್ ಮೇಲೆ ದಾಳಿ ನಡೆಸಿ ಅವುಗಳನ್ನು ಮುಚ್ಚುವ ಗುರಿ ಹೊಂದಲಾಗಿದೆ. ಎನ್‌ಡಿ ಟಿವಿ ಮೇಲೆ ದಾಳಿ ನಡೆಸಲಾಯಿತು ಮತ್ತು ಅದನ್ನು ಮೋದಿ ಸ್ನೇಹಿತ ಅದಾನಿ ತಮ್ಮ ಒಡೆತನಕ್ಕೆ ಪಡೆದಿದ್ದಾರೆ. ಮೋದಿ ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ಸಿದ್ದಿಕ್ ಕಪ್ಪನ್, ಮೊಹಮ್ಮದ್ ಜುಬೇರ್ ಮತ್ತು ಪ್ರಬೀರ್ ಪುರ್ಕಾಯಸ್ಥ ಸೇರಿದಂತೆ ಹಲವಾರು ಪತ್ರಕರ್ತರನ್ನು ಜೈಲಿಗೆ ಹಾಕಲಾಯಿತು.

ಸಾಂಸ್ಕೃತಿಕ ಲೋಕದ ಮೇಲೂ ಸಹಾ ಅಘೋಷಿತ ತುರ್ತುಪರಿಸ್ಥಿತಿಯ ಕರಿನೆರಳು ಬೀಳುತ್ತಿದೆ. ಸರ್ಕಾರದ ನೀತಿ, ಮೋದಿ-ಷಾ ಮತ್ತು ಅವರ ಹಿಂದುತ್ವ ಸಿದ್ಧಾಂತದ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದರೆ ಸಾಕು. ಧಾರ್ಮಿಕ ಭಾವನೆಗಳನ್ನು ನೋಯಿಸುವ ನೆಪದಲ್ಲಿ ಚಲನಚಿತ್ರಗಳು, ನಾಟಕ ಪ್ರದರ್ಶನಗಳು ಮತ್ತು ನೃತ್ಯ ಸಂಗೀತ ಕಾರ್ಯಕ್ರಮಗಳ ಮೇಲೆ ಹಿಂದುತ್ವ ಶಕ್ತಿಗಳು ದಾಳಿ ಮಾಡಿ ನಿಲ್ಲಿಸುತ್ತವೆ. ದೆಹಲಿಯ ಸಾಮೂಹಿಕ ಅತ್ಯಾಚಾರದ ಕುರಿತು ಬಿಬಿಸಿ ಸಾಕ್ಷ್ಯಚಿತ್ರವನ್ನು ನಮ್ಮ ದೇಶದಲ್ಲಿ ನಿಷೇಧಿಸಲಾಗಿದೆ. ಧಾರ್ಮಿಕ ಮೂಲಭೂತವಾದ, LGBTQ ಗಳ ಕುರಿತಾದ ಚಲನಚಿತ್ರ “ಅನ್-ಫ್ರೀಡಮ್” ಸೆನ್ಸಾರ್ ಮಂಡಳಿಯ ಮೂಲಕ ನಿರ್ಬಂಧಿಸಿದೆ. ಅನೇಕ ಮಂದಿ ಕಲಾವಿದರು, ಯೂಟ್ಯೂಬರ್‌ಗಳು, ನೇಹಾ ಸಿಂಗ್ ರಾಥೋಡ್ ಅವರಂತಹ ಸ್ಟ್ಯಾಂಡ್-ಅಪ್ ಕಾಮಿಡಿಯನ್‌ ಗಳು ಪ್ರತಿದಿನ ಟ್ರೋಲ್ ಗೆ ಗುರಿಯಾಗುತ್ತಿದ್ದಾರೆ. ಅವರಿಗೆ ಕೊಲೆ ಬೆದರಿಕೆಗಳು ಬರುತ್ತಿವೆ.

ಆದರೆ ಪ್ರಸ್ತುತ ಮೋದಿ 3.0 ಹಿಂದಿನಂತೆ ಆಗುವುದಿಲ್ಲ. ಪ್ರತಿಪಕ್ಷಗಳ ಸಂಖ್ಯೆ ಎಂದಿಗಿಂತಲೂ ಹೆಚ್ಚಾಗಿದೆ. ಜನರ ತೀರ್ಪು ಮೋದಿಯವರಿಗೆ ಅನುಕೂಲಕರವಾಗಿಲ್ಲ. ಸಮ್ಮಿಶ್ರ ಸರ್ಕಾರದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ದೇಶವನ್ನು ಹಳೆಯ ರೀತಿಯಲ್ಲಿ ನಡೆಸಲು ಸಾಧ್ಯವಿಲ್ಲ. ಆದರೂ ಬಿಜೆಪಿ ಅಧಿಕಾರದಲ್ಲಿದೆ. ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಂವಿಧಾನ ಸುರಕ್ಷಿತವಾಗಿಲ್ಲ. ಅದಕ್ಕಾಗಿಯೇ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ದೇಶದ ಸಂವಿಧಾನವನ್ನು ರಕ್ಷಿಸುವ ಹೋರಾಟವನ್ನು ಬಲಪಡಿಸಬೇಕು.

ಇದನ್ನು ನೋಡಿ : ಲೋಕಸಭೆಯಲ್ಲಿ ರೈತರ ಎರಡು ಗಟ್ಟಿ ದನಿಗಳುJanashakthi Media

Donate Janashakthi Media

Leave a Reply

Your email address will not be published. Required fields are marked *