ರಾಣೇಬೆನ್ನೂರ: ತಾಲ್ಲೂಕಿನ ಹೂಲಿಹಳ್ಳಿ ಗ್ರಾಮಕ್ಕೆ ಸಮರ್ಪಕವಾಗಿ ಬಸ್ ಸೇವೆ ಒದಗಿಸುವಂತೆ ಆಗ್ರಹಿಸಿ ಹಾಗೂ ಕಡ್ಡಾಯವಾಗಿ ಎಲ್ಲಾ ಬಸ್ ಗಳನ್ನು ನಿಲ್ಲಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ನೇತೃತ್ವದಲ್ಲಿ ಶನಿವಾರ ಹೂಲಿಹಳ್ಳಿ ಮಾರ್ಗವಾಗಿ ಹೋಗುವ ಎಲ್ಲಾ ಬಸ್ ಗಳನ್ನು ತಡೆದು ವಿದ್ಯಾರ್ಥಿಗಳು, ಊರಿನ ಗ್ರಾಮಸ್ಥರು ಪ್ರತಿಭಟಿಸಿದರು.
ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ಎಸ್ಎಫ್ಐ ತಾಲ್ಲೂಕು ಉಪಾಧ್ಯಕ್ಷ ಮಹೇಶ ಮರೋಳ ಮಾತನಾಡಿ, ತಾಲ್ಲೂಕಿನಾದ್ಯಂತ ಸಾರಿಗೆ ಸಂಸ್ಥೆಯ ಶಾಲಾ-ಕಾಲೇಜಿನ ವೇಳೆಗೆ ಸಮರ್ಪಕವಾಗಿ ಬಸ್ಸಿನ ಸೇವೆಯನ್ನು ಒದಗಿಸುವಲ್ಲಿ ವಿಫಲವಾಗಿದೆ. ವರ್ಷವಿಡೀ ವಿದ್ಯಾರ್ಥಿಗಳು ಬಸ್ಸಿಗಾಗಿ ಬಿದಿಗಿಳಿದು ಪ್ರತಿಭಟಿಸುವಂತಾಗುತ್ತಿದೆ. ಶೈಕ್ಷಣಿಕ ಅಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ. ಗ್ರಾಮದ ಕೆಲ ವಿದ್ಯಾರ್ಥಿ ಮುಖಂಡರು ಅನೇಕ ಬಾರಿ ಮನವಿ ಪತ್ರಗಳನ್ನು ನೀಡಿದ್ದಾರೆ ಆದರೂ ಘಟಕ ವ್ಯವಸ್ಥಾಪಕರು ಯಾವುದೇ ಬೇಡಿಕೆಗಳಿಗೂ ಸ್ಪಂದಿಸಿಲು ಮುಂದಾಗಿಲ್ಲದಿರುವುದು ಬೇಜವಾಬ್ದಾರಿತನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಗೌರವಧನ ಹೆಚ್ಚಳ, ಗ್ರ್ಯಾಚ್ಯುಟಿ ಹಣ ಬಿಡುಗಡೆಗಾಗಿ ಆಗ್ರಹಿಸಿ ಅಂಗನವಾಡಿ ನೌಕರರಿಂದ ಬೆಳಗಾವಿ ಚಲೋ
ವಿದ್ಯಾರ್ಥಿ ಜಿ.ಪಿ ಹಾಲಸ್ವಾಮಿ ಮಾತನಾಡಿ, ಹೂಲಿಹಳ್ಳಿ ಮಾರ್ಗವಾಗಿ ಬ್ಯಾಡಗಿ ಹಾಗೂ ರಾಣೇಬೆನ್ನೂರ ಘಟಕದ ಬಸ್ ಗಳು ಸಂಚಾರಿಸುತ್ತಿದ್ದು 30-40 ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಹೋಗುವುದಿಲ್ಲ. ಬಸ್ ನಿಲ್ಲಿಸಲು ಆಗುವುದಿಲ್ಲ ಎಂದು ಹಾಗೆ ಹೋಗುತ್ತಾರೆ. ನಮ್ಮ ಊರಿನ ಮೇಲೆ ಸಂಚರಿಸುವ ಪ್ರತಿಯೊಂದು ಬಸ್ ಕಡ್ಡಾಯವಾಗಿ ನಿಲ್ಲಿಸಿ ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಹೋಗಬೇಕೆಂದು ಆಗ್ರಹಿಸಿದರು.
ಮುಂಜಾನೆಯಿಂದ ಎಲ್ಲಾ ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳಿಗೆ, ಪ್ರತಿಭಟನಾಕಾರರಿಗೆ ರಾಣೇಬೆನ್ನೂರ ಗ್ರಾಮೀಣ ಠಾಣೆ ಪಿಎಸ್ಐ ಮನವೊಲಿಸಿ ವಿದ್ಯಾರ್ಥಿಗಳ ಪರವಾಗಿ ಘಟಕ ವ್ಯವಸ್ಥಾಪಕರಿಗೆ ಕೂಡಲೇ ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸ್ಪಂದಿಸಬೇಕೆಂದು ಸಂಧಾನ ಯಶಸ್ವಿಗೊಳಿಸಿದ್ದರು.
ಹೂಲಿಹಳ್ಳಿ ಮಾರ್ಗವಾಗಿ ಸಂಚರಿಸುವ ಪ್ರತಿಯೊಂದು ಬಸ್ ಕಡ್ಡಾಯವಾಗಿ ನಿಲ್ಲಿಸಲು ಹಾಗೂ ಹೆಚ್ಚುವರಿ ಬಸ್ ಸೇವೆಯನ್ನು ಪ್ರಾರಂಭಿಸುತ್ತೇವೆ ಎಂದು ಬ್ಯಾಡಗಿ ಘಟಕ ವ್ಯವಸ್ಥಾಪಕ ರಾಮು ಪಾಟೀಲ್ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ವಾಪಸ್ ಪಡೆದು ತಮ್ಮ ತಮ್ಮ ಶಾಲಾ-ಕಾಲೇಜಗಳಿಗೆ ತೆರಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡರಾದ, ಪುನೀತ್ ಬಣಗಾರ, ವಿನಾಯಕ ಗು ಬನ್ನಿಹಟ್ಟಿ, ಜೀವನ್ ಮಲೂರು, ದರ್ಶನ ಮತ್ತೂರು, ಮಹೇಶ ಮೂಡಲಸೀಮಿ, ಚೇತನ್ ಕೆ, ಕಿರಣ್ ಎನ್, ನಿವೇದಿತಾ ಎಸ್, ಮೇಘನಾ ಆರ್ ಡಿ, ಹೇಮಾ ಯು ಜಿ, ಸವಿತಾ, ಸಹನಾ ಕೆ ಆರ್, ಶಾರದಾ ಸೇರಿದಂತೆ ವಿದ್ಯಾರ್ಥಿಗಳು, ಊರಿನ ಗ್ರಾಮಸ್ಥರು ಹಾಗೂ ಪೋಲಿಸರು ಸಾರಿಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಇದನ್ನೂ ನೋಡಿ : ಬೆಳಗಾವಿ | ಕಬ್ಬು ಬೆಳೆಗೆ ಸೂಕ್ತ ದರ ನಿಗದಿ ಮಾಡಿ – ಕಬ್ಬು ಬೆಳೆಗಾರರ ಧರಣಿ Janashakthi Media