ನವದೆಹಲಿ: ಕರ್ನಾಟಕದಲ್ಲಿ 2 ಪ್ರಕರಣ ಸೇರಿದಂತೆ ದೇಶಾದ್ಯಂತ ಮಾರಕ ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರಿಯ 40 ಸೋಂಕು ಪ್ರಕರಣಗಳು ವರದಿಯಾಗಿದೆ. ಇದು ಮೂರನೆ ಅಲಗೆ ಕಾರಣವಾಗಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ದೇಶಾದ್ಯಂತ ಒಟ್ಟು 40 ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ಪ್ರಕರಣಗಳು ವರದಿಯಾಗಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಗರಿಷ್ಠ ಅಂದರೆ 21 ಪ್ರಕರಣಗಳು ವರದಿಯಾಗಿದ್ದು, ನಂತರದ ಸ್ಥಾನದಲ್ಲಿರುವ ಮಧ್ಯ ಪ್ರದೇಶದಲ್ಲಿ 6, ಕೇರಳ ಮತ್ತು ತಮಿಳುನಾಡಿನಲ್ಲಿ ತಲಾ 3 ಪ್ರಕರಣಗಳು ವರದಿಯಾಗಿವೆ.
ಉಳಿದಂತೆ ಮೈಸೂರು ಮತ್ತು ಬೆಂಗಳೂರಿನಲ್ಲಿ ತಲಾ ಒಂದೊಂದು ಪ್ರಕರಣಗಳು ಸೇರಿದಂತೆ ಕರ್ನಾಟಕದವಲ್ಲಿ ಎರಡು ಪ್ರಕರಣಗಳು ವರದಿಯಾಗಿದ್ದು, ಪಂಜಾಬ್, ಆಂಧ್ರಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ತಲಾ 1 ಪ್ರಕರಣ ವರದಿಯಾಗಿವೆ.
ಈ ಹಿಂದೆ ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ 2ನೇ ಅಲೆಗೆ ಕಾರಣವಾಗಿದ್ದ ಡೆಲ್ಟಾ ರೂಪಾಂತರಿ ಸೋಂಕು ಪ್ರಭಾವ ಇದೀಗ ಕಡಿಮೆಯಾಗುತ್ತಿದ್ದು, ದೇಶದಲ್ಲಿ ನಿಧಾನಗತಿಯಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಕುಸಿತವಾಗುತ್ತಿದೆ. ಆದರೆ ದಿನ ಕಳೆದಂತೆ ಡೆಲ್ಟಾ ಪ್ಲಸ್ ರೂಪಾಂತರಿ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ದೇಶದಲ್ಲಿ 3ನೇ ಅಲೆಯ ಭೀತಿ ಹೆಚ್ಚಿಸಿದೆ.
ಏನಿದು ಡೆಲ್ಟಾ ಪ್ಲಸ್? ಎರಡನೇ ಅಲೆಗೆ ಕಾರಣವಾದ ರೂಪಾಂತರಿ ವೈರಾಣು ‘ಡೆಲ್ಟಾ’ದ ಮತ್ತೊಂದು ರೂಪಾಂತರಿ ಆವೃತ್ತಿಯೇ ‘ಡೆಲ್ಟಾ ಪ್ಲಸ್’ ವೈರಾಣು ಆಗಿದೆ. ಇದನ್ನು ಎವೈ.1 ಅಥವಾ ಬಿ.1.617.2.1 ಎಂದು ಗುರುತಿಸಲಾಗಿದೆ. ಅಲ್ಲದೆ, ರೂಪಾಂತರಿಗಳಲ್ಲೇ ಇದನ್ನು ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಭಾರತ ಸೇರಿದಂತೆ 9 ದೇಶಗಳಲ್ಲಿ’ಡೆಲ್ಟಾ ಪ್ಲಸ್’ ಪತ್ತೆಯಾಗಿದೆ.
3ನೇ ಅಲೆಗೆ ಕಾರಣವಾಗುತ್ತಾ? ಕೊರೊನಾ ಎರಡನೇ ಅಲೆಯಿಂದ ದೇಶ ಹೊರಬರುತ್ತಿರುವ ಬೆನ್ನಲ್ಲಿಯೇ ಮೂರನೇ ಅಲೆ ಭೀತಿ ಎದುರಾಗಿದ್ದು, ‘ಡೆಲ್ಟಾ’ ಸೋಂಕಿನ ರೂಪಾಂತರಿಯಾಗಿರುವ ‘ಡೆಲ್ಟಾ ಪ್ಲಸ್’ ದೇಶಾದ್ಯಂತ ಮೂರನೇ ಅಲೆಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ಡೆಲ್ಟಾ ಪ್ಲಸ್ ರೂಪಾಂತರಿಯ 40 ಪ್ರಕರಣ ಪತ್ತೆಯಾಗಿದ್ದು, ಈ ರೂಪಾಂತರಿಯೇ ದೇಶಾದ್ಯಂತ ಮೂರನೇ ಅಲೆಯಾಗಿ ಪಸರಿಸಲಿದೆ ಎಂದು ಮಹಾರಾಷ್ಟ್ರದ ತಜ್ಞರು ಎಚ್ಚರಿಸಿದ್ದಾರೆ. ಇನ್ನು ಈ ನಾಲ್ಕು ರಾಜ್ಯಗಳಿಗೆ ಡೆಲ್ಟಾ ಪ್ಲಾಸ್ ವ್ಯಾಪಿಸಿರುವ ಬೆನ್ನಲ್ಲೇ ಕೇಂದ್ರ ಸರಕಾರವು ನಿರ್ದೇಶನವೊಂದನ್ನು ಕಳುಹಿಸಿದ್ದು, ”ಯಾವುದೇ ಕಾರಣಕ್ಕೂ ಈಗಿರುವ ಡೆಲ್ಟಾ ಪ್ಲಸ್ ಪ್ರಕರಣಗಳು ಜಾಸ್ತಿಯಾಗಬಾರದು. ಇದಕ್ಕಾಗಿ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಎಲ್ಲ ಸೌಲಭ್ಯ ವಿಸ್ತರಿಸುವ ಮೂಲಕ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು,” ಎಂದು ಸೂಚಿಸಿದೆ.
”ಅಮೆರಿಕ, ಬ್ರಿಟನ್, ಚೀನಾ, ರಷ್ಯಾ, ಜಪಾನ್ ಸೇರಿ ಒಂಬತ್ತು ದೇಶದಲ್ಲಿ ಹೊಸ ರೂಪಾಂತರಿ ಪತ್ತೆಯಾಗಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಇದರ ಕುರಿತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು,” ಎಂದು ನೀತಿ ಆಯೋಗದ ಮುಖ್ಯಸ್ಥ ವಿ.ಕೆ.ಪಾಲ್ ನಾಲ್ಕು ರಾಜ್ಯಗಳಿಗೆ ಸೂಚಿಸಿದ್ದಾರೆ. ರೂಪಾಂತರಿ ವೈರಸ್ ಬಗ್ಗೆ ಅಧ್ಯಯನ ನಡೆಸಲಾಗುವುದು ಮುಂಜಾಗೃತ ಕ್ರಮವನ್ನು ವಹಿಸಲಾಗುವುದು ಎಂದು ಕರ್ನಾಟಕ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.