ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಬರ್ಬರ ಅತ್ಯಾಚಾರ ಮತ್ತು ಹತ್ಯೆ ನಡೆದಿದೆ. ಆಕೆ 21 ವರ್ಷದ ಯುವತಿ. ದೆಹಲಿ ಸಿವಿಲ್ ಡಿಫೆನ್ಸ್‌ನಲ್ಲಿ ಅಧಿಕಾರಿ. ಕಳೆದ ತಿಂಗಳ 26ರಂದು ದೆಹಲಿಯ ಸಂಗಮ್ ವಿಹಾರ್ ಕಛೇರಿಗೆ ಕೆಲಸಕ್ಕೆ ಹೋದವಳು ಮನೆಗೆ ಮರಳಿ ಬರಲಿಲ್ಲ.
ಯುವತಿ ಮೇಲಿನ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಎಐಡಿಡಬ್ಲ್ಯೂಎ) ಮತ್ತು ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ದೆಹಲಿಯಲ್ಲಿ ಪ್ರತಿಭಟನೆಯನ್ನು ನಡೆಸಿ ಘಟನೆಯನ್ನು ಖಂಡಿಸಿದ್ದಾರೆ.
ಅಂದು ಕಛೇರಿ ಕೆಲಸದ ಅಂಗವಾಗಿ ಯಾವುದೋ ಪ್ರಕರಣವೊಂದರ ತನಿಖೆಗೆ ಪೋಲಿಸ್ ಸ್ಟೇಷನ್ನಿಗೆ ಹೋಗಿದ್ದಾರೆಂಬ ಮಾಹಿತಿಯನ್ನು ನಂಬಿ ಆಕೆಯ ಬರುವಿಕೆಗೆ ಕಾದು ಕೂತ ಕುಟುಂಬಕ್ಕೆ ಸಿಕ್ಕಿದ್ದು ಬಾಯಿಯ ಬಳಿ ಚಾಕುವಿನಿಂದ ಇರಿತ, ಕತ್ತರಿಸಿದ ಮೊಲೆಗಳು ಮತ್ತು ಛಿದ್ರಗೊಂಡ ದೇಹವಾದ ಶವ ಮಾತ್ರ.
ಕುಟುಂಬದವರ ಪ್ರಕಾರ ಆ ದಿನದಿಂದ ತಲೆತಪ್ಪಿಸಿಕೊಂಡ ಇಬ್ಬರು ಸಹೋದ್ಯೋಗಿಗಳೇ ಈ ಕೃತ್ಯದ ಹೊಣೆಗಾರರು ಎನ್ನಲಾಗಿದೆ. ಪ್ರಕರಣದ ತನಿಖೆ ನಡೆಸಿ ಸತ್ಯ ಹೊರಗೆಳೆದು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಕ್ರಮವಹಿಸಬೇಕಾದ ಪೋಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲವೆಂದು ಕುಟುಂಬದವರು ದೂರಿದ್ದಾರೆ.
ನಿರ್ಭಯಾ ಪ್ರಕರಣದ ಸಂದರ್ಭದಲ್ಲಿ ತೀವ್ರ ಆಕ್ರೋಶದ ಹೋರಾಟಕ್ಕೆ ಸಾಕ್ಷಿಯಾದ ದೆಹಲಿಯ ನೆಲ ಮತ್ತೆ ಮತ್ತೆ ಹೀನ ಕೃತ್ಯಗಳಿಂದ ನರಳುತ್ತಿದೆ. ಮಹಿಳೆಯರ ರಕ್ತದಿಂದ ತೋಯುತ್ತಿದೆ. ಕೇಂದ್ರದ ಗೃಹ ಇಲಾಖೆಯ ಅಡಿ ಕಾರ್ಯ ನಿರ್ವಹಿಸುತ್ತಿರುವ ದೆಹಲಿ ಪೋಲೀಸರು ಮತ್ತು ರಾಷ್ಟ್ರದ ರಾಜಧಾನಿ ದೆಹಲಿ ಮತ್ತೆ ಮತ್ತೆ ಕುಖ್ಯಾತಿ ಪಡೆಯುತ್ತಿದೆ. ಸಂತ್ರಸ್ಥೆಯು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವಳೆಂಬುದು ಪ್ರಕರಣದ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯಕ್ಕೆ ಕಾರಣವೇ? ಅಥವಾ ಆರೋಪಿಗಳನ್ನು ರಕ್ಷಿಸುವುದು ಸರಕಾರದ ಉದ್ದೇಶವೇ? ಎಂದು ಸಂಘಟನೆಗಳು ಪ್ರಶ್ನೆ ಮಾಡಿವೆ.
ಒಂದು ನಿಷ್ಪಕ್ಷಪಾತ ತನಿಖೆ ಅಪರಾಧಿಗಳ ಪತ್ತೆ ಮತ್ತು ಶೀಘ್ರ ಶಿಕ್ಷೆಗೆ ಆಗ್ರಹಿಸಿ ದೆಹಲಿಯಲ್ಲಿ ಮಹಿಳಾ ಸಂಘಟನೆಗಳು ಜಂಟಿ ಹೋರಾಟದ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.