- ಕೆ.ಮಹಾಂತೇಶ, ಸೈಯದ್ ಮುಜೀಬ್ (ಸಿಂಗು ಮತ್ತು ಗಾಜೀಪುರ್‌ಗಡಿಯಿಂದ)
ಸಂಗೊಳ್ಳಿ ರಾಯಣ್ಣ ಸಿಂಧೂರ ಲಕ್ಷ್ಮಣ್ಣ
ಬಂಡು ಹೂಡ್ಯಾರೋ ನಾಡಗ
ಬಂಡು ಹೂಡ್ಯಾರೋ ನಾಡಗ ಅಣ್ಣ
ಕೆಂಪು ದೀವಟಿಗೆ ಉರಿದಾವೋ
ಕೆಂಪು ದೀವಟಿಗೆ ಉರಿದಾವೋ..
ಸ್ವಾತಂತ್ರ ಚಳವಳಿಯ ದಿನಮಾನಗಳಲ್ಲಿ ಬ್ರಿಟಿಷರ ಕಣ್ಣು ಕೆಂಪಾಗಿಸಿ ಅವರ ನರನಾಡಿಗಳಲ್ಲಿ ದುಸಪ್ನವಾಗಿ ಕಾಡಿದ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಲೇ ಬೆಳಗಾವಿಯ ನಂದಗಡದಲ್ಲಿ ಬ್ರಿಟಿಷರ ನೇಣುಗಂಭವೇರಿದ ಅಪ್ರತಿಮ ಬಂಡಾಯಗಾರರಾದ ಸಂಗೊಳ್ಳಿ ರಾಯಣ್ಣ, ಸಿಂಧೂರ ಲಕ್ಷ್ಮಣ ಅವರ ಸಾಹಸ ಕುರಿತಾಗಿ ಹೆಣೆಯಲ್ಪಟ್ಟ ಕನ್ನಡ ಲಾವಣಿ ಪದವಿದು.
ದೆಹಲಿಯ ಸುತ್ತಮುತ್ತಲಿನ ನಾಲ್ಕಾರು ಗಡಿಗಳಲ್ಲಿ ಕಳೆದ ನೂರಾ ಹದಿನೈದು ದಿನಗಳಿಂದ ಬೀಡುಬಿಟ್ಟಿರುವ ‘ರೈತ ಬಂಡಾಯಗಾರರನ್ನು’ ನೋಡಿದಾಗ ಕನ್ನಡ ನಾಡಿನ ಜನಪದರು ಸಂಗೊಳ್ಳಿ ರಾಯಣ್ಣ, ಸಿಂಧೂರ ಲಕ್ಷ್ಮಣನ ಬಂಡಾಯದ ಕುರಿತಾಗಿ ಹೆಣೆದ ಹಾಡು ನಿಮಗೆ ಕಾಡದೇ ಇರದು.
ನಾವು ಪ್ರಯಾಣಿಸುತ್ತಿದ್ದ ವಿಮಾನ ಸಿಬ್ಬಂದಿ ಇನ್ನರ್ಧ ಗಂಟೆಯಲ್ಲಿ ನಾವು ದೆಹಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದ್ದೇವೆ ಸದ್ಯದ ಅಲ್ಲಿನ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಎಂದು ಪ್ರಕಟಿಸುತ್ತಿದ್ದಂತೆ, ದೆಹಲಿ ಆಗಲೇ ಬೆಂಕಿಯ ಚೆಂಡಾಗುತ್ತಿದೆ ಎನ್ನುವ ವರದಿಗಳ ಮಧ್ಯೆ ಇದೊಂದು ಸ್ವಲ್ಪ ಸಮಾಧಾನದ ಸುದ್ದಿಯಾಗಿತ್ತು ನಮಗೆ.
ಮಾರ್ಚ 15 ರಂದು ನವದೆಹಲಿಯಲ್ಲಿ ನಿಗದಿಯಾಗಿದ್ದ ಒಂದು ರಾಷ್ಟ್ರೀಯ ಮಟ್ಟದ ಸಭೆಗೆ ಹೋಗಲು ತೀರ್ಮಾನವಾದಾಗಲೇ ಮಾರ್ಚ 13 ಮತ್ತು 14 ರಂದು ದೆಹಲಿಯಲ್ಲಿನ ರೈತ ಬಂಡಾಯದ ಕೆಲವು ಪ್ರದೇಶಗಳಿಗಾದರೂ ಪ್ರತ್ಯಕ್ಷವಾಗಿ ಭೇಟಿ ನೀಡಬೇಕೆಂದು ನಾವು ನಿರ್ಧರಿಸಿದ್ದೆವು. ಅದರಂತೆ ವಿಮಾನ ಇಳಿದು ನೇರ ಮೆಟ್ರೊ ಮೂಲಕ ಶಿವಾಜಿ ಸ್ಟೇಡಿಯಂ ಬಳಿಕ ಬಿ.ಟಿ.ಆರ್ ಭವನ ತಲುಪಿದೆವು.
ವಿಮಾನದಲ್ಲಿ ನೀಡಿದ್ದ ಬ್ರೇಡ್ ತಿಂದಿದ್ದರಿಂದ ನನಗೆ ಅಷ್ಟಾಗಿ ಹಸಿವಿರಲಿಲ್ಲ. ನನ್ನ ಜೊತೆ ಇದ್ದ ಗೆಳೆಯ ಮುಜೀಬ್ ಅಲ್ಲೇ ಸಮೀಪದ ಮದ್ರಾಸ್ ದೋಸೆ ಎನ್ನುವ ಬೀದಿ ಹೊಟೇಲ್‌ನಲ್ಲಿ ಕಲ್ಲಿನಂತ ಎರಡು ಇಡ್ಲಿಯನ್ನು ತಿಂದು ಇಡ್ಲೀ ಪರವಾಗಿಲ್ಲ ಸಾಂಬರ್ ಸರಿ ಇಲ್ಲ ಸಾರ್ ಎಂದಾಗಲೇ ಈ ಉತ್ತರ ಬಂದೇ ಬರುತ್ತೇ ಎಂದು ನಾನು ನಿರೀಕ್ಷಿಸಿದ್ದೆ.! ಬಳಿಕ ನಮ್ಮ ಕಚೇರಿ ಸಿಬ್ಬಂಂದಿಯಿಂದ ರೈತರು ಬಿಡಾರ ಹೂಡಿರುವ ‘ಟಿಕ್ರಿ’ ಬಾರ್ಡರ್ ಗೆ ತಲುಪಲು ಇರುವ ದಾರಿಗಳ ವಿವರ ಪಡೆದುಕೊಂಡು ಕಾಶ್ಮೀರಿಗೇಟ್ ನಿಂದ ಮೆಟ್ರೊ ಹತ್ತಲು ಅವಸರಲ್ಲಿ ಆಟೋ ಒಂದನ್ನು ಹತ್ತಿ ಕುಳಿತೆವು.
ನಾವು ಹತ್ತಿದ ಆಟೋ ಡ್ರೈವರ್ 70 ವರ್ಷದವ. ಮುವತ್ತು ವರ್ಷ ಆಟೋ ಓಡಿಸಿದ ಅನುಭವ ಬೇರೆ. ನಾವು ರೈತರ ಹೋರಾಟದ ಸ್ಥಳಕ್ಕೆ ಹೊರಟಿರುವ ಸಂಗತಿ ಅವನ ಕಿವಿಗೆ ಬೀಳುತ್ತಿದ್ದಂತೆ, ‘ನೀವು ಮೇಟ್ರೋ, ಬಸ್ ಅಂತೆಲ್ಲಾ ಸುತ್ತಾಡಿ ಟೈಂ ಕಳೆದುಕೊಳ್ಳುತ್ತೀರಿ, ನಾನೂರು ರೂಪಾಯಿ ಕೊಟ್ರೇ ನಾನೇ ಅಲ್ಲಿಗೆ ನಿಮ್ಮನ್ನು ಬಿಡುತ್ತೇನೆ’ ಎಂದು ಚೌಕಾಸಿ ಆರಂಭಿಸಿದ. ‘ಅಯ್ಯೋ ಬೇಡ ಮಾರಾಯ ನಮ್ಮನ್ನು ಮೇಟ್ರೋ ಸ್ಟೇಷನ್‌ಗೆ ಸಾಗ್ಹಾಕು ಉಳಿದಿದ್ದು ನಾವು ನೊಡಿಕೊಳ್ತೇವೆ’ ಅನ್ನೋ ನಮ್ಮ ಮಾತನ್ನು ಅವನು ಕಿವಿಗೆ ಹಾಕ್ಕೊಳ್ಳಲಿಲ್ಲ. ‘ನೇರವಾಗಿ ಅಲ್ಲಿಗೆ ಮೆಟ್ರೊ ಸೌಲಭ್ಯ ಇಲ್ಲದ್ದು, ಬಸ್ ನಲ್ಲಿ ಹೋದ್ರೇ ಎರಡು ಗಂಟೆ ಆಗುತ್ತೇ’ ಅಂತೆಲ್ಲ ನಮಗೆ ಹೆದರಿಸುತ್ತಲೇ ಅವನ ಆಟೋದಲ್ಲೇ ಹೋಗಲು ಪ್ರೇರೆಪಿಸುತ್ತಲೇ ಕೊನೆಗೂ ನನ್ನ ಜೊತೆ ಪ್ರಯಾಣಿಸುತ್ತಿದ್ದ ಮುಜೀಬ್ ಅವರನ್ನು ಬುಟ್ಟಿಗೆ ಬೀಳಿಸ್ಕೊಂಡ. ಈಗ ಅವನ ಕೆಲಸ ಇವ್ರು ಮಾಡೋಕೆ ಶುರು ಹಚ್ಚಿಕ್ಕೊಂಡ್ರು! ‘ಸಾರ್ ಸಂಜೆ ಒಳಗೆ ವಾಪಸ್ ಬರೋಕೆ ಅನುಕೂಲವಾಗೋದ್ರೀಂದ ಇದೇ ಆಟೋದಲ್ಲೇ ಹೋಗಿಬಿಡೋಣ’ ಎನ್ನುತಾ ಅವ್ನ ಜೊತೆ ಮಿಲಾಪಿಯಾಗೋದ್ದರು! ಕೊನೆಗೆ ಬಹುಮತ ಕಳೆದುಕೊಂಡು ನಾನು ಒಂಟಿ ಧ್ವನಿಯಾಗಿದ್ದೆ..! ಆಯ್ತು ಅಂತಾ ಒಪ್ಪಿದೆವು.
ಆದರೆ ಅವನ ಬಳಿ ನಾವು ‘ಟಿಕ್ರೀ’ ಟಿಕ್ರೀ ಗಡಿಗ್ಹೋಗಬೇಕು ಅಂತಿದ್ರೇ...
ಅವ್ನ ಮಾತ್ರ ‘ಸಿಂಗು.. ಸಿಂಗು…ಗಡಿ ಅಂತಾನೇ ಅಂತಿಮವಾಗಿ ದೆಹಲಿಯಿಂದ ಸುಮಾರು ಮುವತ್ತು ಕೀಮೀ ದೂರದ ‘ಸಿಂಗು’ ಗಡಿಗೆ ಸರಿಸುಮಾರು ಮಧ್ಯಾಹ್ನ ೩ ಗಂಟೆ ಹೊತ್ತಿಗೆ ತಲುಪಿಸಿ ನಾನೂರುರೂಪಾಯಿ ನಮ್ಮಿಂದಕಿತ್ತು ಮರೆಯಾದ..!
ಪೊಲೀಸರ ಸರ್ಪಗಾವಲು : ಅದು ಚಂಡೀಗಡ್ ರಾಷ್ಟ್ರೀಯ ಹೆದ್ದಾರಿ. ದೆಹಲಿಯಿಂದ ಚಂಡೀಗಡಕ್ಕೆ ಹೋಗುವ ಈ ರಾಷ್ಟ್ರೀಯ ಹೆದ್ದಾರಿಯನ್ನು ಹೋರಾಟ ನಿರತ ಪಂಜಾಬ್ ಮತ್ತು ಹರಿಯಾಣ ರೈತರು ಕಳೆದ ನೂರಾ ಹದಿನೈದು ದಿನಗಳಿಂದ ಬಂದ್ ಮಾಡಿದ್ದಾರೆ. ಅತ್ತ ದೆಹಲಿ ತಲುಪುವ ಮುವತ್ತು ಕಿ.ಮೀ ಮುಂಚೆಯೇ ಇಡೀ ನಾಲ್ಕು ಲೆನ್‌ಗಳನ್ನು ಪೊಲೀಸರು ಬ್ಯಾರೀಕೇಡ್‌ಗಳನ್ನು, ಮುಳ್ಳು ತಂತಿಗಳನ್ನು ಹಾಕಿ ರೈತರ ಹೋರಾಟದ ಒಂದು ಕಿ.ಮೀ ದೂರದಲ್ಲೇ ಪಹರೆ ನಡೆಸುತ್ತಾ ಬಂದ್ ಮಾಡಿದ್ದಾರೆ.
ನಮಗೇ ರೈತರ ಹೋರಾಟದ ಸ್ಥಳಕ್ಕೇ ಹೋಗುವುದ್ಹೇಗೆ ಅನ್ನೋಚಿಂತಿ ಶುರುವಾಗಿತು. ಅದರ ಜೊತೆ ಹೊಟ್ಟೆ ಬೇರೆ ಚುರುಗುಟ್ತಾಯಿತ್ತು.ಅಲ್ಲೇ ಗಡಿಯಲ್ಲಿದ್ದ ಒಂದು ಡಾಬ ಒಳ ಹೊಕ್ಕೆವು. ನೊಡಿದ್ರೇ ಅದರ ತುಂಬೆಲ್ಲಾ ನೊಣಗಳ ಸಾಮ್ರಾಜ್ಯವೇ. ಅದರಲ್ಲೆ ಫ್ಯಾನು ಆನ್ ಮಾಡಲು ಹೇಳಿ ಎರಡೆರಡು ರೊಟ್ಟಿ, ಸ್ವಲ್ಪ ತರಕಾರಿ ಸಬ್ಜೀ ತಿಂದು ಹಸಿದ ಹೊಟ್ಟೆ ತುಂಬಿಸಿಕೊಂಡು, ಡಾಬಾದ ಮಾಲೀಕನಿಗೆ ರೈತ ಹೋರಾಟದ ಸ್ಥಳಕ್ಕೆ ಹೋಗೋ ದಾರಿಯಾವುದೆಂದು ಕೇಳಿಕೊಂಡು ಅಲ್ಲಿಂದ ಹೊರಬಿದ್ದೆವು.
ನಾವು ರೋಟಿ ತಿಂದ ಡಾಬಾ ಹಿಂದುಗಡೆ ಒಂದು ಕೈಗಾರಿಕೆಗಳಿಂದ ಹೊರ ಬರುವ ಕೊಳಚೆ ನೀರಿನ ಕಾಲುವೆ. ಆಕಡೆ ಜಮೀನುಗಳು ಮತ್ತು ಅದಕ್ಕೆ ಹೊಂದಿಕೊಂಡು ಕಸ ಆಯುವ ನೂರಾರು ಕುಟುಂಬಗಳು ಅದೇ ಕೊಳಚೆ ಪ್ರದೇಶದಲ್ಲಿ ರಾಶಿ ರಾಶಿಯಾಗಿ ಬಿದ್ದ ಕಸದ ಜೊತೆಗೆ ಕಟ್ಟಿಕೊಂಡಿರುವ ಅಮಾನವೀಯ ಬದುಕು. ಅದರ ಪಕ್ಕದಲ್ಲೇಒಂದು ಕಿ.ಮೀ ಮಣ್ಣು ಧೂಳು ರಸ್ತೆಯಲ್ಲಿ ಸಾಗಿಸಿದರೆ ರೈತರು ಬಂಡಾಯ ಹೊಡಿರುವ ಹೋರಾಟದ ಕಣ. ಅಂತಹ ದಾರಿಯಲ್ಲೇ ಸಾಗಿದ ನಾವು ಅಂತಿಮವಾಗಿ ‘ಸಿಂಗು’ ರೈತ ಬಂಡಾಯದ ಜಾಗತಲುಪಿದೆವು.
ಸಾಂಸ್ಥಿಕ ರೂಪ ಪಡೆದ ರೈತ ಚಳವಳಿ
ನಾವು ಅಲ್ಲಿಗೆ ಭೇಟಿ ನೀಡಿದಾಗ ರೈತ ಚಳವಳಿ ನೂರಾ ಒಂಬತ್ತು ದಿನಕ್ಕೆ ಕಾಲಿಟ್ಟಿತ್ತು. 2020 ನವೆಂಬರ್ 26 ರಂದು ಆರಂಭಗೊಂಡಿರುವ ರೈತ ಆಂದೋಲನ ಇದೀಗ ಬಹುತೇಕ ಒಂದು ಸಾಂಸ್ಥಿಕ ರೂಪ ಪಡೆದು ಮುನ್ನಡೆಯುತ್ತಿದೆ. ಸಿಂಗು ಗಡಿಯಲ್ಲಿ ನಾವು ಓಡಾಡಿದ ಐದಾರು ಕಿ.ಮೀ ಉದ್ದಕ್ಕೂ ಇದು ಸ್ಪಷ್ಟವಾಗಿ ಕಂಡು ಬಂತು. ಒಟ್ಟಾರೆ ಇಲ್ಲಿನ ಸುತ್ತ ಮುತ್ತಲಿನ ಸುಮಾರು ಐದಿನೈದು ಕಿ.ಮೀ ಉದ್ದಕ್ಕೂ ವಿಶೇಷವಾಗಿ ಪಂಜಾಬ್ ಹರಿಯಾಣ ರಾಜ್ಯದ ರೈತರು, ರೈತ ಮಹಿಳೆಯರು, ಅವರ ಮಕ್ಕಳು ಮೊಮ್ಮಕ್ಕಳಾದಿಯಾಗಿ ಈ ಪ್ರತಿಭಟನೆಯಲ್ಲಿ ಭಾಗವಹಿರುವುದು ಇದರ ವಿಶೇಷ.
ನಾವು ಅಲ್ಲಿ ಮಾತನಾಡಿಸಿದ ಪ್ರತಿಯೊಬ್ಬ ರೈತ ಹೋರಾಟಗಾರ ಹಾಗೂ ಅದಕ್ಕೆ ಬೆಂಬಲಿಸಿ ಬಂದಿರುವ ಮತ್ತು ಅದರ ಯಶಸ್ವಿಗಾಗಿ ಹಗಲು ರಾತ್ರಿಗಳನ್ನು ಒಂದಾಗಿಸಿ ದುಡಿಯುತ್ತಿರುವ ವಿದ್ಯಾರ್ಥಿಗಳು, ಮಹಿಳೆಯರು, ಔಷಧಿ ಪ್ರತಿನಿಧಿಗಳು, ವೈದ್ಯರು, ಸಾಮಾಜಿಕ ಕಾರ್ಯಕರ್ತರುಗಳು ಈ ಚಳವಳಿ ಭಾರತದ ಇತಿಹಾಸದಲ್ಲಿ ಬಹುಕಾಲ ಮುನ್ನಡೆಯುವ ಆಂದೋಲನವೆಂದು ಸ್ಪಷ್ಟವಾಗಿ ಹೇಳುತ್ತಾರೆ.
ಹಸಿವಾದರೆ ಊರೊಳಗೆ ಭಿಕ್ಷಾನ್ನಂಗಳುಂಟು
ತೃಷೆಯಾದರೆ ಕೆರೆ ಬಾವಿ ಹಳ್ಳಗಳುಂಟು
ಶಯನಕ್ಕೆ ಹಾಳು ದೇಗುಲವುಂಟು
ಚೆನ್ನ ಮಲ್ಲಿಕಾರ್ಜುನಯ್ಯ ಆತ್ಮ ಸಂಗಾತಕ್ಕೆ
ನೀನೆನಗುಂಟು
ಇದು 12 ನೆ ಶತಮಾನದ ಶರಣೆ ಹಾಗೂ ವಚನಗಾರ್ತಿಅಕ್ಕಮಹಾದೇವಿಯ ಪ್ರಸಿದ್ದವಾದ ವಚನ. ಇದು ಅಕ್ಷರಶ: ಸಿಂಗು ರೈತ ಹೋರಾಟದಲ್ಲಿ ಸಾಕಾರಗೊಂಡಿದೆ ಎನ್ನುವುದನ್ನು ಯಾವ ಅನುಮಾನವಿಲ್ಲದೆ ಹೇಳಬಹುದು.
ಹಸಿವಾದಡೆ ದಾಸೋಹಗಳುಂಟು
ನಿರಡಿಕೆಯಾದರೆ ಮಜ್ಜಿಗೆ ಪಾನಕಗಳುಂಟು
ಅರಿವ ಹೆಚ್ಚಿಸಲು ಸಾಲುಸಾಲು ಭಾಷಣಗಳುಂಟು
ಗ್ರಂಥ ಭಂಡಾರಗಳುಂಟು
ಮಕ್ಕಳ ಅಭ್ಯಾಸಕ್ಕೆ ಶಾಲೆಗಳ ಜೊತೆ ಶಿಕ್ಷಕರುಂಟು
ಕಾಯಿಲೆಯಾದರೆ ಆಸ್ಪತ್ರೆ, ಔಷಧಿಗಳುಂಟು
ಶಯನಕ್ಕೆ ಲಂಗರುಗಳುಂಟು
ಮನರಂಜನೆಗೆ ಹಾಡು, ನಾಟಕಗಳುಂಟು
ಮೈ ದಣಿವಾದರೆ ಮಸಾಜ್ ಪಾರ್ಲರ್‌ಗಳುಂಟು
ಸ್ನಾನಕ್ಕೆ ನೀರುಂಟು, ಬಹಿರ್ದೆಶೆಗೆ ಶೌಚಗಳುಂಟು
ಬಟ್ಟೆ ಕೊಳೆಯಾದರೆ ವಾಷಿಂಗ್ ಮಿಷನ್‌ಗಳುಂಟು…..
…. ಹೀಗೆ ಸಾಗುತ್ತಲೇ ಇವೆ ಇಲ್ಲಿಏನೇನುಂಟು ಎನ್ನುವ ಉಚಿತ ಸೌಲಭ್ಯಗಳ ಪಟ್ಟಿ!.ದೆಹಲಿ ರೈತ ಚಳವಳಿಯಲ್ಲಿ ಅಳವಡಿಸಲಾದ ಈ ವ್ಯವಸ್ಥೆಗಳನ್ನು ಕಂಡಾಗ ಇದೊಂದು ದೀರ್ಘಕಾಲಿಕವಾಗಿ ಇನ್ನೂ ಕನಿಷ್ಟ ಒಂದು ವರ್ಷವಾದರೂ ನಡೆಯುವ ಆಂದೋಲನವೆಂದು ಖಚಿತವಾಗಿ ಹೇಳಬಹುದು ಅದಕ್ಕೆ ಇಂಬು ಕೊಡುವಂತೆ ರಾಶಿ ರಾಶಿಯಾಗಿ ಪೇರಿಸಿರುವ ದವಸಧಾನ್ಯ ಆಹಾರ ಸಾಮಾಗ್ರಿಗಳು, ಕುಡಿಯುವ ನೀರು, ನಿರಂತರ ತರಕಾರಿ ಹಾಲು ಹಣ್ಣುಗಳ ಹರಿವು ಮತ್ತುಅದಕ್ಕೆಲ್ಲ ಮೇಲುಗೈಯಾಗಿರುವುದು ಸಿಖ್ ಧರ್ಮದ ಗುರುನಾನಕ್‌ರಾದಿಯಾಗಿ ಅವರ ಉತ್ತರಾಧಿಕಾರಿಗಳು ಆರಂಭಿಸಿದ ಸೇವಾ ಪರಂಪರೆ ಈ ಚಳವಳಿಯ ಮುನ್ನಡೆಸುವ ಸ್ಪೂರ್ತಿಗಳಾಗಿವೆ.
ಎರಡು ದಿನಗಳ ಹಿಂದಷ್ಟೇ ಅಖಿಲ ಭಾರತಕಿಸಾನ್ ಸಭಾದಿಂದ ಸಾಜಾನ್ಪುರ್ ಗಡಿಯಲ್ಲಿ ಹೋರಾಟ ನಿರತ ರೈತರಿಗೆ ಸುಮಾರು ಐದು ಲಕ್ಷ ರೂಪಾಯಿಗಳ ಆಹಾರ ಧಾನ್ಯ ತರಕಾರಿ ಇತ್ಯಾದಿ ಅಗತ್ಯ ವಸ್ತುಗಳನ್ನು ಹೋರಾಟದ ಕಣಕ್ಕೆ ಪೂರೈಸಿ ಈ ಹೋರಾಟದ ಮುನ್ನಡೆಗೆ ಸಹಕರಿಸಲಾಗಿದೆ ಎನ್ನುತ್ತಾರೆ ಕಿಸಾನ್ ಸಭಾದ ಜಂಟಿ ಕಾರ್ಯದರ್ಶಿ ಡಾ ವಿಜುಕೃಷ್ಣನ್.
ಸ್ವಾತಂತ್ರ್ಯ ಚಳವಳಿಯ ಕೊಂಡಿ
1905-07 ಸುಮಾರಿನಲ್ಲಿ ಭಗತಸಿಂಗ್ ಅವರ ಚಿಕ್ಕಪ್ಪ ಅಜಿತ್‌ಸಿಂಗ್ ಪಂಜಾಬ್ ನಲ್ಲಿ ಬ್ರಿಟಿಷರ ಭೂಕಂದಾಯ ಮತ್ತು ರೈತ ವಿರೋಧಿ ನೀತಿಗಳ ವಿರುದ್ದ ಕಟ್ಟಿದ ಆಂದೋಲನವು ಇಲ್ಲಿ ಭಾಗವಹಿಸಿದ್ದ ಬಹುತೇಕ ಪಂಜಾಬ್ ರೈತ ಕಾರ್ಯಕರ್ತರ ಮನದಲ್ಲಿ ಈಗಲೂ ರೋಮಾಂಚಕಾರಿಯಾಗಿ ನೆಲೆಗೊಂಡಿದೆ ಆ ಚಳವಳಿ ಬಳಿಕ ನಡೆಯುತ್ತಿರುವ ಬಹುದೊಡ್ಡ ಆಂದೋಲನವಿದು. ನಾವು ಪಂಜಾಬಿಗಳು ಈ ದೇಶಕ್ಕಾಗಿ ಸಾಕಷ್ಟು ಬಲಿದಾನ ಮಾಡಿದ್ದೇವೆ ನಮ್ಮ ತಾತ ಮುತ್ತಾತರು ನಮ್ಮ ತಂದೆ ತಾಯಿಗಳು ತೀರ ಕಷ್ಟಪಟ್ಟು ಬದುಕು ಕಟ್ಟಿಕೊಟ್ಟಿದ್ದಾರೆ. ಇಂತಹ ನಮ್ಮಯ ಬದುಕನ್ನು ನಾಶಪಡಿಸುವ ಈ ಕೃಷಿ ಕಾನೂನುಗಳನ್ನು ಜಾರಿ ಮಾಡಿದರೆ ಇಡೀ ದೇಶದ ರೈತ ಸಂಕುಲವೇ ಅಳಿಯಲಿದೆ.
ಆದ್ದರಿಂದ ಈಗ ಆರಂಭಿಸಿಲಾಗಿರುವ ಈ ಚಳವಳಿ ಗೆಲ್ಲುವವರೆಗೂ ಮುನ್ನಡೆಯಬೇಕು.ಇದು ಕೇವಲ ನಮ್ಮ ಹೋರಾಟವಲ್ಲ. ಇಡೀ ಭಾರತದ ಜನತೆಯು ಒಂದಾಗಿ ನಡೆಸುವ ಹೋರಾಟ. ಇದರ ಯಶಸ್ವಿಗೆ ನಾವು ಎಂತಹ ತ್ಯಾಗಕ್ಕಾದರೂ ಸಿದ್ಧವಿದ್ದೇವೆ. ನೀವು ದಕ್ಷಿಣ ಭಾರತದರೈತರು ನಾಗರೀಕರು ಈ ಹೋರಾಟ ಗೆಲ್ಲಲು ಸಹಾಯ ಮಾಡಬೇಕು. ನೀವು ಅಲ್ಲಿಇಂತಹುದೇ ಚಳವಳಿಯನ್ನು ಆರಂಭಿಸಿ ಎನ್ನುತ್ತಾರೆ ಸ್ವತಃ ಫಾರ್ಮಾಸಿಸ್ಟ್ ಆಗಿ ಕೆಲಸ ಮಾಡುತ್ತಿರುವ ಒಬ್ಬ ಮಧ್ಯಮ ವರ್ಗದ ಕಾರ್ಯಕರ್ತ. ಅವರು ಇಲ್ಲಿ ಆರಂಭಗೊಂಡಿರುವ ಲೈಫ್‌ಕೇರ್ ನ ಹತ್ತು ಹಾಸಿಗೆಗಳ ಮತ್ತುಒಂದು ಶಾಶ್ವತವಾದ ಆಸ್ಪತ್ರೆ ಮುನ್ನಡೆಸುತ್ತಿದ್ದಾರೆ. ಇಲ್ಲಿ ಓಪಿಡಿ ವ್ಯವಸ್ಥೆಇದೆ. ಐದಾರು ಜನ ವೈದ್ಯರು ಕೆಲಸ ಮಾಡುತ್ತಿದ್ದಾರೆ. ಇಲ್ಲಿಗೆ ಆಗಮಿಸುವ ಪ್ರತಿಯೊಬ್ಬರಿಗೂ ಉಚಿತವಾದ ವೈದ್ಯಕೀಯ ನೆರವು ಮತ್ತು ಔಷಧೋಪಚಾರ ಸಿಗುತ್ತದೆ. ಇಂತಹ ಕನಿಷ್ಟ ಐದು ಕೇಂದ್ರಗಳು ನಾವು ಓಡಾಡಿದ ಐದಾರು ಕಿ.ಮೀ ದೂರದಲ್ಲಿ ಕಾರ್ಯನಿರ್ವಹಿಸುತ್ತಿವೆ.
ನಮ್ಮ ಚಳವಳಿಗೆ ಸರ್ಕಾರ ಮಣಿಯದ ಹೊರತು ನಾವು ನಮ್ಮ ಚಳವಳಿಯನ್ನು ಹಿಂಪಡೆಯುವುದಿಲ್ಲ ಎನ್ನುವುದು ಇಲ್ಲಿ ನಮ್ಮೊಂದಿಗೆ ಮಾತನಾಡಿದ ಪ್ರತಿಯೊಬ್ಬರ ಅಚಲವಾದ ದೃಢವಾದ ತೀರ್ಮಾನ. ಅದಕ್ಕೆ ನಾವು ನಮನ ಸಲ್ಲಿಸಿ ‘ಸಿಂಘ’ ಗಡಿಯಿಂದ ದೆಹಲಿ ತಲುಪಿದೆವು. ಓಡಾಟದಿಂದ ಸುಸ್ತಾದ ದೇಹಕ್ಕೆ ತಣ್ಣನೆಯ ನೀರು ಬಿದ್ದಿದ್ದೆ ತಡಗಾಢ ನಿದ್ರೆ ಆವರಿಸಿಕೊಂಡಿತ್ತು.
ಗಾಜಿಪುರ್ : ಹೆದ್ದಾರಿ ತಡೆಗೋಡೆಗಳೇ ರೈತರ ಮೆಟ್ಟಿಲುಗಳು….
ಎರಡನೇ ದಿನ ನಮ್ಮ ಪಯಣ ಗಾಜಿಪುರ ರೈತರ ಹೋರಾಟದತ್ತ ಸಾಗಿತು. ಇದು ಉತ್ತರ ಪ್ರದೇಶದ ಮೀರತ್ ತಲುಪುವ ರಾಷ್ಟ್ರೀಯ ಹೆದ್ದಾರಿ. ಇಲ್ಲಿಎರಡು ಕಿ.ಮೀ ದೂರದವರೆಗೂ ರೈತ ಹೋರಾಟದ ಲಂಗರುಗಳು ವಿಸ್ತರಿಸಿಕೊಂಡಿವೆ. ಸಿಂಗು ಗಡಿಗೆ ಹೋಲಿಸಿದರೆ ಕಡಿಮೆ. ಇಲ್ಲಿ ಮುಖ್ಯವಾಗಿಉತ್ತರ ಪ್ರದೇಶದ ರೈತರದ್ದೇ ಪಾರುಪತ್ಯ. ಗಾಜಿಪುರ ರಾಷ್ಟ್ರೀಯ ಹೆದ್ದಾರಿ ರೈತ ಹೋರಾಟದ ತುಂಬೆಲ್ಲ ಭಗತಸಿಂಗ್,ರಾಜಗುರು ಸುಖದೇವ ಹಾಗೂ ಚಂದ್ರಶೇಖರ ಅಜಾದ್, ಸುಭಾಶ್‌ಚಂದ್ರ ಭೋಸ್, ಮಹೇಂದ್ರಸಿಂಗ್ ಟಿಕಾಯತ್ ಭಾವಚಿತ್ರಗಳೇ. ಅವರೇ ಇಲ್ಲಿನ ಹೋರಾಟದ ಸ್ಫೂರ್ತಿಯ ಸಂಕೇತಗಳು. ದೆಹಲಿ-ಮೀರತ್‌ರಾಷ್ಟ್ರೀಯ ಹೆದ್ದಾರಿಗಳನ್ನು ನೋಯ್ಡದ ಬಳಿ ತಡೆದು ತಮ್ಮ ಹೋರಾಟದ ಲಂಗರುಗಳನ್ನು ನಿರ್ಮಿಸಿರುವ ರೈತರು ಎಂಟು ಪಥಗಳ ಹೆದ್ದಾರಿಗಳ ಪೈಕಿ ನಾಲ್ಕು ಪಥಗಳನ್ನು ವಶಪಡಿಸಿಕೊಂಡು ಹೋರಾಟ ಮುಂದುವರೆಸಿದ್ದಾರೆ.
ಇಲ್ಲಿ ಹೋರಾಟ ನಿರತ ರೈತರು ಹೆದ್ದಾರಿ ತಡೆಗೋಡೆಗಳನ್ನೇ ತಮ್ಮ ಓಡಾಟಕ್ಕೆ ಮೆಟ್ಟಿಲುಗಳಾಗಿ ಪರಿರ್ತಿಸಿಕೊಂಡಿದ್ದಾರೆ. ಸಿಂಗು ಗಡಿಯಂತೆ ಇಲ್ಲೂ ಉಚಿತ ಔಷಧಿ ಕೇಂದ್ರಗಳು, ಮಲಗಲು ಲಂಗರುಗಳು, ಶೌಚಾಲಯಗಳು, ಓದಲು ಅಗತ್ಯವಿರುವ ಪುಸ್ತಕಗಳು, ಪತ್ರಿಕೆಗಳು ಜೊತೆಗೆ ನೂರಾರು ಸ್ವಯಂಸೇವಕರು, ಭೋಜನ ಕೇಂದ್ರಗಳು. ಇಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ನಿರಂತರ ಭಾಷಣಗಳ ನಡುವೆ ಚಾ,ತಿಂಡಿ ಮಧ್ಯಾಹ್ನ ಊಟ ರಾತ್ರಿ ಊಟ. ಒಂದಷ್ಟುಓದು, ಮನರಂಜನೆ, ಸ್ನಾನ, ಬಟ್ಟೆ ತೊಳೆಯುವುದು,ಅಡಿಗೆ ಮಾಡುವುದು ಬಂದವರಿಗೆ ಸಂತೋಷದಿಂದ ಬಡಿಸುವುದು, ಪರಿಸರ ಸ್ವಚ್ಚವಾಗಿಡುವುದು, ಹಾಡು,ಕುಣಿತ ಸಂಗೀತ ಹೀಗೆ ತರತರದ ಹವ್ಯಾಸಗಳು.
ಒಟ್ಟಿನಲ್ಲಿ ನೂರು ದಿನಗಳನ್ನು ಪೂರೈಸಿದ್ದರೂ ದಣಿವೆಂಬುದಿಲ್ಲ. ಬದಲಾಗಿ ಹೋರಾಟದ ಉತ್ಸಾಹ ಬದಲಾಗಿ ದಿನೇ ದಿನೇ ಹಿಮ್ಮಡಿಸುತ್ತಲೇ ಇದೆ ಎಂಬುದು ನಮಗೆ ಪ್ರತ್ಯಕ್ಷ ದರ್ಶನವಾಗಿತ್ತು.
ಅಕ್ಷರದವ್ವ ಸಾವಿತ್ರಿಭಾಯಿಪುಲೇ ಶಾಲೆ
ರೈತ ಹೋರಾಟದ ಅಂಗಳದಿ ಇದೊಂದು ವಿಶೇಷ ಶಾಲೆ ಮಕ್ಕಳಿಗಾಗಿ ಆರಂಭಗೊಂಡಿದೆ. ಅದು ಈ ದೇಶದ ಪ್ರಥಮ ಶಿಕ್ಷಕಿ ಅಕ್ಷರದವ್ವ ಸಾವಿತ್ರಿ ಭಾಯಿಫುಲೆ ಹೆಸರಿನದ್ದು. ರೈತರು ಹೋರಾಟ ಮಾತ್ರ ಮಾಡುತ್ತಿಲ್ಲ ಜೊತೆಗೆ ಶಿಕ್ಷಣವನ್ನು ಅರಿವನ್ನು ಹೆಚ್ಚಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂಬುದಕ್ಕೆ ಇದೊಂದು ಉತ್ತಮ ಮಾದರಿ.
ಇಲ್ಲಿ ನಿರ್ಮಿಸಿದ ಒಂದು ಹೋರಾಟದ ಟೆಂಟ್ ನಲ್ಲಿ ಸುಮಾರು ಮುವತ್ತರಿಂದ ನಲವತ್ತು ಮಕ್ಕಳಿಗೆ ಬೆಳಿಗ್ಗೆಯಿಂದ ಸಂಜೆವರೆಗೂ ಈ ಅನೌಪಚಾರಿಕ ಶಿಕ್ಷಣದ ಶಾಲೆಯನ್ನು ಸ್ವಯಂಸೇವಾ ಸಂಸ್ಥೆಯೊಂದು ಕಳೆದ ಜನವರಿಯಿಂದಲೇ ನಡೆಸುತ್ತಿದೆಎಂದು ಹೇಳುತ್ತಾರೆ. ಅದನ್ನು ನಡೆಸುತ್ತಿರುವ ಶಿಕ್ಷಕರು. ಗಾಜಿಪುರ ಹೋರಾಟದ ಸುತ್ತಮುತ್ತಲಿನ ಬಡಕೂಲಿಕಾರರು ಮತ್ತು ಕಾರ್ಮಿಕರ ಮಕ್ಕಳು ಇಲ್ಲಿಯ ಶಾಲೆಯ ವಿದ್ಯಾರ್ಥಿಗಳು. ಅವರಿಗೆ ಹೋರಾಟದ ಸ್ಥಳದಲ್ಲಿಯೇ ಊಟ, ತಿಂಡಿ, ಚಾ ವ್ಯವಸ್ಥೆಇರುತ್ತದೆ. ಈ ಬಗ್ಗೆ ಮಕ್ಕಳನ್ನು ಕೇಳಿದಾಗ ನಮಗೆ ಈ ಶಾಲೆ ತುಂಬಾ ಪ್ರಯೋಜನಕಾರಿಯಾಗಿದೆ ಎನ್ನುವ ಉತ್ತರವನ್ನು ಖುಷಿ ಖುಷಿಯಾಗಿ ನೀಡುತ್ತಾ ಊಟದ ಮನೆಯತ್ತ ಓಡುತ್ತಾ ಸಾಗಿದರು.
ನಿಜ……
ಎದೆಗೆ ಬಿದ್ದಅಕ್ಷರ
ಭೂಮಿಯಲ್ಲಿ ಭಿತ್ತಿದ ಬೀಜ
ಒಂದಲ್ಲ ಒಂದು ದಿನ
ಮೊಳಕೆ ಹೊಡೆಯುತ್ತವೆ ಎನ್ನುವ
ದೇವನೂರು ಮಹಾದೇವ ಅವರ ಮಾತು ಇಲ್ಲಿ ಫಲ ನೀಡುತ್ತದೆ.
ಪ್ರತಿ ಹೋರಾಟದ ಕಣವೂ ಒಂದೊಂದು ಬೆಂಕಿಯ ಕುಲುಮೆಯೇ. ಅಂತಹ ಕುಲುಮೆಯಲ್ಲೇ ಒಡಮೂಡಿದ ಮೂರ್ತಿಗಳು ಸಮಾಜಕ್ಕೆ ಬೆಳಕ ನೀಡುತ್ತಲೇ ಬಂದಿವೆ. ಇದು ಇತಿಹಾಸ ನಮಗೆ ಕಲಿಸಿದ ಪಾಠ. ಈ ಹೋರಾಟಗಳನ್ನು ಮುನ್ನಡೆಸುವ ಅತಿ ಪ್ರಮುಖವಾದ ಪ್ರೇರಕ ಶಕ್ತಿಗಳು ಸಿಖ್ ಧರ್ಮದ ಗುರುದ್ವಾರಗಳ ನೇತೃತ್ವದಲ್ಲಿರುವ ಗುರು ಪ್ರಬಂಧಕ ಸಮಿತಿಗಳು. ಇವು ದಾಸೋಹದ ಕೇಂದ್ರಗಳು ಮತ್ತು ಸೇವೆಗೆ ಎತ್ತಿದ ಕೈಗಳು. ಇಲ್ಲಿ ಹೋರಾಟ ನಿರತ ರೈತರಿಗೆ ಅಲ್ಲಿಗೆ ಆಗಮಿಸುವ ಪ್ರತಿಯೊಬ್ಬರಿಗೂ ನಿರಂತರ ದಾಸೋಹ ಕೇಂದ್ರಗಳನ್ನು, ಇವುಗಳು ನಡೆಸುತ್ತಿವೆ. ಈ ಸಮಿತಿಗಳ ನೂರಾರು ಜನ ಸ್ವಯಂ ಸೇವಕರು ಇಡೀ ಪರಿಸರವನ್ನು ಸ್ವಚ್ಚಗೊಳಿಸುವುದು ಸೇರಿ ಎಲ್ಲಾ ಕರ್ತವ್ಯಗಳನ್ನು ಯಾವ ಮುಜುಗರ ಮತ್ತು ಅಳುಕಿಲ್ಲದೆ ಅತ್ಯಂತ ಹೆಮ್ಮೆ ಮತ್ತು ಶ್ರದ್ದೆಯಿಂದ ನಡೆಸುತ್ತಿರುವುದು ಮತ್ತು ಮಹಿಳೆಯರು ಮತು ಇಡೀ ಕುಟುಂಬದ ಯುವಕರು ನಿರಂತವಾಗಿಎಲ್ಲಾ ರೀತಿಯ ಕಾಯಕಯೋಗಿಗಳಾಗಿ ತೊಡಗಿಸಿಕೊಂಡಿರುವುದು ಈ ಚಳವಳಿ ಯಶಸ್ಸಿನ ಹಿಂದಿರುವ ಪ್ರಮುಖ ಅಂಶಗಳು. ಇದಲ್ಲದೇ ಅಲ್ಲದೆ ದೇಶದ ಉದ್ದಗಲಕ್ಕೂ ನೆರವಿನ ಹಸ್ತ ಮತ್ತು ಬೆಂಬಲಗಳು ಭರಪೂರವಾಗಿ ಹರಿದು ಬರುತ್ತಲೇ ಇವೆ.
ಹೀಗಾಗಿ ಈ ಹೋರಾಟ ವರ್ಷಗಟ್ಟಲೇ ಆದರೂ ಸೈ ಮುಂದುವರೆಯುತ್ತದೆ ಮತ್ತು ಅಂತಿಮವಾಗಿ ಗೆಲವು ಸಾಧಿಸುತ್ತದೆ ಎನ್ನುವುದು ಹೋರಾಟಗಾರರ ಒಂದು ದೃಢವಾದ ನಂಬಿಕೆ. ಇಂತಹದೊಂದು ಸ್ಪೂರ್ತಿದಾಯಕ ರೈತ ಬಂಡಾಯ ಕಣದಲ್ಲಿಎರಡು ದಿನಗಳ ನಮ್ಮಯ ಒಕ್ಕಲುತನ ಎಂದೆಂದಿಗೂ ಮರೆಯಲಾರದ ಚಿತ್ತಗಳಾಗಿ ಉಳಿಯಲಿವೆ.