ನ್ಯೂಸ್ಕ್ಲಿಕ್ ಮೇಲೆ ‘ಬೃಹತ್’ ದಾಳಿಯ ಪ್ರಕರಣದಲ್ಲಿ ದಿಲ್ಲಿ ಪೊಲಿಸ್ ಎಫ್ಐಆರ್ ಬಗ್ಗೆ ಸಂಯುಕ್ತ ಕಿಸಾನ್ ಮೋರ್ಚ ಮತ್ತು ವರ್ಲ್ಡ್ ವೈಡ್ ಮೀಡಿಯ ಹೋಲ್ಡಿಂಗ್ಸ್‌ನ ವ್ಯವಸ್ಥಾಪಕರ ನಂತರ ಈಗ ಸ್ವತಃ ಅಮೆರಿಕದ ಮಿಲಿಯಾಧೀಶ ನೆವಿಲ್ ರಾಯ್ ಸಿಂಘಮ್ ಪ್ರತಿಕ್ರಿಯಿಸುತ್ತ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ.
ಅಕ್ಟೋಬರ್ 3ರಂದು ನ್ಯೂಸ್‍ಕ್ಲಿಕ್‌ನ ಪ್ರಧಾನ ಸಂಪಾದಕರು ಮತ್ತು ಆಡಳಿತಾಧಿಕಾರಿಗಳನ್ನು ಬಂಧಿಸಿದರೂ ದಿಲ್ಲಿ ಪೊಲಿಸ್ ಎಫ್‍ಐಆರ್ ಪ್ರತಿಯನ್ನು ಕೊಡಲು ನಿರಾಕರಿಸಿತ್ತು. ನ್ಯಾಯಾಲಯದ ಆದೇಶದ ನಂತರವೇ ಬೆಳಕಿಗೆ ಬಂದಿರುವ ಎಫ್‍ಐಆರ್ ಇದು ಎಂಬುದನ್ನು ಗಮನಿಸಬೇಕು. ನ್ಯೂಸ್‍ಕ್ಲಿಕ್ ಇದರಲ್ಲಿನ ಆರೋಪಗಳು ಬೋಗಸ್ ಎಂದಿತು. ಸಂಯುಕ್ತ ಕಿಸಾನ್ ಮೋರ್ಚ ರೈತರ ಬಗ್ಗೆ ಎಷ್ಟೊಂದು ದೊಡ್ಡ ಸುಳ್ಳು ಹೇಳಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿತು. ಮತ್ತು ವರ್ಲ್ಡ್ ವೈಡ್ ಮೀಡಿಯ ಹೋಲ್ಡಿಂಗ್ಸ್‌ನ ಮ್ಯಾನೇಜರ್ ತಮ್ಮ ಸಂಸ್ಥೆಯ ಮೇಲಿನ ಆರೋಪವನ್ನು ತಳ್ಳಿ ಹಾಕುತ್ತ “ಈಗ ನಡೆಯುತ್ತಿರುವ ದಮನವನ್ನು ನೋಡಿದರೆ ಭಾರತೀಯ ಕಾನೂನನ್ನು ಎಚ್ಚರಿಕೆಯಿಂದ ಅನುಸರಿಸುವ ವಿದೇಶಿ ಹೂಡಿಕೆದಾರರಿಗೆ ಭಾರತವು ಸುರಕ್ಷಿತ ಸ್ಥಳವಾಗಿದೆಯೇ ಎಂಬ ಪ್ರಶ್ನೆ ಏಳುತ್ತದೆ” ಎಂದಿದ್ದರು.
ನೆವಿಲ್ ರಾಯ್ ಸಿಂಘಂ ಅಕ್ಟೋಬರ್ 17ರಂದು ನೀಡಿದ ತನ್ನ ಹೇಳಿಕೆಯಲ್ಲಿ ತಾನು ಚೀನೀ ಸರಕಾರದ ಪ್ರಚಾರ ವಿಭಾಗದ ವತಿಯಿಂದ ಜಗತ್ತಿನಾದ್ಯಂತ ಚೀನಾದ ಪರವಾದ ವಿಚಾರಗಳನ್ನು ಪಸರಿಸಲು ಚೀನೀ ಸರಕಾರದ ಒಂದು ನಿಧಿನೀಡಿಕೆಯ ಜಾಲವನ್ನು ನಡೆಸುತ್ತಿದ್ದೇನೆ ಎಂಬ ಆರೋಪವನ್ನು ಖಡಾಖಂಡಿತವಾಗಿ ತಿರಸ್ಕರಿಸಿದ್ದಾರೆ. ಅದು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ ಲೇಖನದಲ್ಲಿನ ತಪ್ಪು ಮಾಹಿತಿಗಳಿಂದ ದಿಲ್ಲಿ ಪೊಲಿಸ್ ಪ್ರಭಾವಿತವಾಗಿದೆ ಎಂಬುದನ್ನು ಬಲವಾಗಿ ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ
ದಿಲ್ಲಿ ಪೊಲಿಸ್ ಎಫ್‍ಐಆರ್‌ನಲ್ಲಿ ಈ ಆರೋಪಕ್ಕೆ ಆಧಾರವಾಗಿರುವ ನ್ಯೂಯಾರ್ಕ್ ಟೈಮ್ಸ್ ಲೇಖನವನ್ನು ತನ್ನ ವಿರುದ್ಧದ ಆರೋಪ ಹೊರಿಸಿ “ತಪ್ಪು ದಾರಿಗೆಳೆಯುವ ಕೊಂಕು ಮಾತುಗಳೊಂದಿಗೆ ತುಂಬಿದ ಗುರಿಯೇಟಿನ ತುಣುಕು”, ಪತ್ರಿಕಾ ಸ್ವಾತಂತ್ರ್ಯದ ತತ್ವಕ್ಕೆ ಬಗೆದಿರುವ ದೊಡ್ಡ ಅಪಚಾರ ಎಂದು ಅವರು ವರ್ಣಿಸಿದ್ದಾರೆ. ತಾನು ಜುಲೈ 22, 2023 ರಂದು, ಅವರ ಆರೋಪಗಳನ್ನು ಖಡಾಖಂಡಿತವಾಗಿ ನಿರಾಕರಿಸುತ್ತ ಅವುಗಳ ಬಗ್ಗೆ ಸಲ್ಲಿಸಿದ ನಿಜ ಸಂಗತಿಗಳನ್ನು ಪ್ರಕಟಿಸದಿರಲು ನ್ಯೂಯಾರ್ಕ್ ಟೈಮ್ಸ್ ಉದ್ದೇಶ ಪೂರ್ವಕವಾಗಿಯೇ ನಿರ್ಧರಿಸಿತು ಎಂದು ಅವರು ಹೇಳಿದ್ದಾರೆ.
“ಎಫ್‌ಐಆರ್ ದಾವೆ ಮಾಡಿರುವಂತೆ ಮತ್ತು ನ್ಯೂಯಾರ್ಕ್ ಟೈಮ್ಸ್ ಲೇಖನ ಸೂಚಿಸುವಂತೆ ನಾನು ಚೀನಾ ಸರ್ಕಾರ ಅಥವಾ ಚೀನಾದ ಕಮ್ಯುನಿಸ್ಟ್ ಪಕ್ಷದ ಯಾವುದೇ ಪ್ರಚಾರ ಇಲಾಖೆ ಅಥವಾ ವಿಭಾಗಕ್ಕಾಗಿ ಕೆಲಸ ಮಾಡುವುದಿಲ್ಲ, ಅವರ ಸೂಚನೆಗಳನ್ನು ತೆಗೆದುಕೊಳ್ಳುವುದಿಲ್ಲ ಅಥವಾ ಹಣವನ್ನು ಸ್ವೀಕರಿಸುವುದಿಲ್ಲ. ವಾಸ್ತವವಾಗಿ, ನಾನು ಜಗತ್ತಿನ ಯಾವುದೇ ಸರ್ಕಾರ ಅಥವಾ ರಾಜಕೀಯ ಪಕ್ಷದಿಂದ ಆದೇಶವನ್ನು ತೆಗೆದುಕೊಳ್ಳುವುದಿಲ್ಲ” ಎಂದು ಸಿಂಘಂ ತಮ್ಮ ಹೇಳಿಕೆಯಲ್ಲಿ ಸಾರಿದ್ದಾರೆ.
ಎಫ್‍ಐಆರ್‌ನಲ್ಲಿ ತನ್ನನ್ನು ಚೀನೀ ಕಂಪನಿಗಳಾದ ಶಿಯೊಮಿ ಮತ್ತು ವಿವೊದೊಂದಿಗೆ ತಳುಕು ಹಾಕಿರುವುದನ್ನು ನೋಡಿ ಆಘಾತವಾಗಿದೆ ಎಂದಿರುವ ಅವರು “ನನಗೆ ಭಾರತದಲ್ಲಿ ಅವರ ಚಟುವಟಿಕೆಗಳ ಬಗ್ಗೇ ಏನೂ ತಿಳಿದಿಲ್ಲ, ಅವರೊಂಧಿಗೆ ಎಂದೂ ಯಾವ ಸಂಪರ್ಕವನ್ನೂ ಹೊಂದಿರಲಿಲ್ಲ ಅಥವ ನೇರವಾಗಿಯೋ ಪರೋಕ್ಷವಾಗಿಯೋ ನಿಧಿ ಪಡೆದಿಲ್ಲ, ಈ ಕಂಪನಿಗಳ ಪರವಾಗಿ ಕೆಲಸ ಮಾಡಿಯೂ ಇಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸ್ವತಂತ್ರ ಹಾಗೂ ನಿರ್ಭೀತ ಧ್ವನಿಗಳನ್ನು ಅಡಗಿಸುವ ಪ್ರಯತ್ನ – ನ್ಯೂಸ್‌ಕ್ಲಿಕ್ ಆರೋಪ
ತಮ್ಮ ಮುಕ್ತ ತಂತ್ರಾಂಶ ನಕಾಶೆ ಪರಿಯೋಜನೆಯು ಭಾರತದ ಪ್ರಾದೇಶಿಕ ಸಮಗ್ರತೆಯನ್ನು ದುರ್ಬಲಗೊಳಿಸಲು ಪ್ರಯತ್ನಿಸಿದೆ ಎಂಬ ಆರೋಪವನ್ನು ಅವರು ನಿರಾಕರಿಸಿದ್ದಾರೆ.
ನ್ಯೂಯಾರ್ಕ್ ಟೈಮ್ಸ್‌ನ ‘ತಪ್ಪುದಾರಿಗೆಳೆಯುವ’ ಪ್ರಯತ್ನ ಏಕೆ?
“ನನ್ನ ಹೆಸರು ನೆವಿಲ್ಲೆ ರಾಯ್ ಸಿಂಘಂ. ನಾನು 25 ವರ್ಷಗಳ ಕಾಲ ಥಾಟ್‌ವರ್ಕ್ಸ್ ಇಂಕ್. ಎಂಬ ಐಟಿ ಕಂಪನಿಯನ್ನು ಸ್ಥಾಪಿಸಿ ಮುನ್ನಡೆಸಿದ್ದೇನೆ ಮತ್ತು ಅದನ್ನು 2017 ರಲ್ಲಿ ಮಾರಾಟ ಮಾಡಿದೆ. ನಾನು ಹುಟ್ಟಿನಿಂದಲೂ ಕೇವಲ ಯುಎಸ್ ಪ್ರಜೆಯಾಗಿದ್ದೇನೆ ಮತ್ತು ಉಳಿದಿದ್ದೇನೆ. ನಾನು ಪ್ರಸ್ತುತ ಶಾಂಘೈ (ಚೀನಾ)ನಲ್ಲಿ ವಾಸಿಸುತ್ತಿದ್ದೇನೆ” ಎಂದು ಆರಂಭವಾಗುವ ಈ ಹೇಳಿಕೆ ದಿಲ್ಲಿ ಪೊಲಿಸ್‍ನ ಎಫ್‍ಐಆರ್‌ನಲ್ಲಿ ಬಳಸಿರುವ ಭಾಷೆಯನ್ನು ನೋಡಿದರೆ, ಅದು ನ್ಯೂಯಾರ್ಕ್ ಟೈಮ್ಸ್ ಪ್ರಕಟಿಸಿದ ಲೇಖನದಲ್ಲಿನ ತಪ್ಪು ಮಾಹಿತಿಗಳಿಂದ ಪ್ರಭಾವಿತವಾಗಿದೆ ಎಂಬುದನ್ನು ಬಲವಾಗಿ ಸೂಚಿಸುತ್ತದೆ ಎಂದು ಹೇಳಿದೆ.
ನ್ಯೂಯಾರ್ಕ್ ಟೈಮ್ಸ್‌ನ ಲೇಖನ ಪ್ರಕಟವಾದ 12 ದಿನಗಳ ನಂತರ ದಿಲ್ಲಿ ಪೊಲಿಸ್ ಗುಪ್ರವಾಗಿ ತಯಾರಿಸಿದ, ನ್ಯೂಸ್‍ಕ್ಲಿಕ್‍ನ ಇಬ್ಬರ ಬಂಧನದ ನಂತರವೇ ಸಾರ್ವಜನಿಕ ಅವಗಾಹನೆಗೆ ದೊರೆತಿರುವ ಈ ಎಫ್‍ಐಆರ್ ಮಾನಹಾನಿಕರ ಆರೋಪಗಳು ಮತ್ತು ವಾಸ್ತವ ಕುರಿತ ದೋಷಗಳಿಂದ ಕೂಡಿದ್ದು ಸುಮಾರು 100 ಪತ್ರಕರ್ತರ ವಿಚಾರಣೆಗೆ ಕಾರಣವಾಯಿತು. “ಅಲಿಪ್ತ ಚಳವಳಿಯಲ್ಲಿ ಭಾಗವಹಿಸಿದ ಮತ್ತು ಅದರ ಇತಿಹಾಸಕಾರರಾಗಿದ್ದ ನನ್ನ ತಂದೆ ಆರ್ಚಿಬಾಲ್ಡ್ ಡಬ್ಲ್ಯೂ. ಸಿಂಘಮ್ (1932-1991) ಅವರ ಪೂರ್ವಜರ ನೆಲೆಯಾದ ಶ್ರೀಲಂಕಾಕ್ಕೆ ಹತ್ತಿರವಿರುವ ದೇಶವಾದ ಭಾರತದಲ್ಲಿ ಇದು ನಡೆಯುತ್ತಿದೆ ಎಂದು ನನಗೆ ನಿರಾಶೆಯಾಗಿದೆ.
ನಾನು 1964 ರಲ್ಲಿ 11 ನೇ ವಯಸ್ಸಿನಲ್ಲಿ ಮುಂಬೈಗೆ ನನ್ನ ಮೊದಲ ಭೇಟಿಯಿಂದ ಹಿಡಿದು ಭಾರತೀಯ ಸಾಫ್ಟ್‌ವೇರ್ ಉದ್ಯಮದಲ್ಲಿ ಕಳೆದಿರುವ ವರ್ಷಗಳವರೆಗೆ ಈ ದೇಶ ಮತ್ತು ಅದರ ಜನರೊಂದಿಗೆ ದೀರ್ಘಕಾಲದ ಸಂಬಂಧವನ್ನು ಹೊಂದಿರುವ, ಭಾರತವನ್ನು ತುಂಬಾ ಪ್ರೀತಿಸುವ ವ್ಯಕ್ತಿಯಾಗಿ ನಾನು ಇದನ್ನು ಬರೆಯುತ್ತಿದ್ದೇನೆ” ಎಂದು ಅವರು ಹೇಳಿರುವ ಸಂಗತಿಗಳು, ನ್ಯೂಯಾರ್ಕ್ ಟೈಮ್ಸ್ ಉದ್ದೇಶಪೂರ್ವಕವಾಗಿಯೇ ಅವರು ಕೊಟ್ಟ ಸ್ಪಷ್ಟೀಕರಣಗಳನ್ನು ಏಕೆ ಪ್ರಕಟಿಸಲಿಲ್ಲ, ಅವರನ್ನೇಕೆ ಚೀನಾದೊಂದಿಗೆ, ಅಲ್ಲಿಯ ಕಮ್ಯುನಿಸ್ಟ್ ಪಕ್ಷದೊಂದಿಗೆ ತಳುಕು ಹಾಕಲು, ಹಾಗೂ ಭಾರತದಲ್ಲಿ ನ್ಯೂಸ್‍ಕ್ಲಿಕ್‌ನ ಮೇಲೆ ಆರೋಪ ಹೊರಿಸಲು ಬಳಸಲಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ.
“ಸಂಪತ್ತಿನ ಸೃಷ್ಟಿ ಸಾಮೂಹಿಕವಾದದ್ದು”
ವರ್ಲ್ಡ್‍ವೈಡ್ ಮೀಡಿಯ ಹೋಲ್ಡಿಂಗ್ಸ್‌ನ ವ್ಯವಸ್ಥಾಪಕರಾದ ಜೆಸನ್ ಫೆಚರ್ ನೀಡಿರುವ ಹೇಳಿಕೆ ನ್ಯುಸ್‍ಕ್ಲಿಕ್‍ಗೆ ನೀಡಿರುವ ಹಣದ ಮೂಲಗಳನ್ನು ಕುರಿತ ಆರೋಪಗಳಿಗೆ ಉತ್ತರ ನೀಡಿದೆ ಎಂದಿರುವ ಅವರು ತನಗೆ ಆ ಹಣ ಎಲ್ಲಿಂದ ಬಂತು, ಮತ್ತು ಅದನ್ನು ಏಕೆ ನ್ಯೂಸ್ ಕ್ಲಿಕ್‍ನಲ್ಲಿ ತೊಡಗಿಸಿದೆ ಎಂಬುದಕ್ಕೆ ವಿವರಣೆ ಕೊಡುತ್ತ ಹೀಗೆ ಹೇಳಿದ್ದಾರೆ- “2017ರಲ್ಲಿ ಥಾಟ್ ವರ್ಕ್ಸ್‍ನ್ನು ಒಂದು ಜಾಗತಿಕ ಖಾಸಗಿ ಇಕ್ವಿಟಿ ಸಂಸ್ಥೆಯಾದ ಅಪಕ್ಸ್ ಪಾರ್ಟ್ ನರ್ಸ್ ಗೆ ಮಾರಾಟ ಮಾಡಲಾಯಿತು. ಬಹುಸಂಖ್ಯೆಯ ಶೇರುದಾರನಾಗಿ ನಾನು ಈ ಮಾರಾಟದಿಂದ ಬಹಳಷ್ಟು ಹಣವನ್ನು ಪಡೆದಿದ್ದೇನೆ. ಇದರಲ್ಲಿ ಒಂದು ಗಮನಾರ್ಹ ಭಾಗವನ್ನು ಯುಎಸ್ ಚಾರಿಟಿಗಳಿಗೆ ಕೊಡುಗೆಯಾಗಿ ನೀಡಿದ್ದೇನೆ. ನಾನು ಅತ್ಯಂತ ಹೆಚ್ಚು ಹಣಕಾಸು ಸವಲತ್ತು ಹೊಂದಿರುವವನು ಎಂಬ ಅರಿವು ನನಗೆ ಚೆನ್ನಾಗಿಯೇ ಇರುವುದರಿಂಧಾಗಿ ನನ್ನ ಬಹಪಾಲು ವೈಯಕ್ತಿಕ ಸಂಪತ್ತನ್ನು ಲಾಭೇತರ ಮತ್ತು ಜಗತ್ತಿನ ಬಡವರ ಹಿತಗಳಿಗಾಗಿ ಕೊಡಲು ನಿರ್ಧರಿಸಿದೆ”
ತನ್ನ ರಾಜಕೀಯ ನಂಬಿಕೆಗಳ ಋಜುತ್ವ ಮತ್ತು ಪಾರದರ್ಶಕತೆ ಹಲವು ದಶಕಗಳದ್ದು ಎಂದಿರುವ ಅವರು “ನನ್ನ ತಲೆಮಾರಿನ ಇತರ ಹಲವರಂತೆ , ಕೆಲವೇ ಜನರಲ್ಲಿ ಸಂಪತ್ತು, ಪ್ರತಿಯಾಗಿ ಕೋಟ್ಯಂತರ ಜನಗಳಿಗೆ ಸಂಕಟಗಳ ತಾರತಮ್ಯವನ್ನು ಒಪ್ಪಿಕೊಳ್ಳುವುದು ನನಗೆ ಸಾಧ್ಯವಿರಲಿಲ್ಲ. ಆರಂಭದಿಂದಲೇ ನಾನು, ಪ್ರತಿಯೊಬ್ಬರೂ, ಯಾವುದೇ ರೀತಿಯ ವಿಶೇಷ ಸವಲತ್ತಿನೊಂದಿಗೆ ಹುಟ್ಟಿದವರು ಕೂಡ ತಮ್ಮ ಬದುಕಿನ ಒಂದು ಭಾಗವನ್ನಾದರೂ ಜನಸಾಮಾನ್ಯರ ಘನತೆಯನ್ನು ಆಧರಿಸಿದ ಜಗತ್ತನ್ನು ಕಟ್ಟುವಲ್ಲಿ ಕಳೆಯಬೇಕು ಎಂದು ನಂಬಿರುವನು.ಸಮಾಜದ ಸಂಪತ್ತು ಸಾಮೂಹಿಕವಾಗಿ ಸೃಷ್ಟಿಯಾಗುವಂತದ್ದು. ಮಾರಾಟದಿಂದ ನನಗೆ ದೊಡ್ ಡಮೊತ್ತ ಲಭಿಸಿರುವುದರಿಂದ , ನಾನು ಈ ಹಣದ ‘ಟ್ರಸ್ಟಿ’ ಎಮದು ನನ್ನು ಪರಿಗಣಿಸಬೇಕು ಎಂಬುದು ನನ್ನ ವೈಯಕ್ತಿಕ ನಂಬಿಕೆ. ನನ್ನ ಕೆಲಸವೆಂದರೆ ಅದು ಜಗತ್ತಿನ ಬಡವರು ಮತ್ತು ದುಡಿಯುವ ಜನರ ಹಿತಸಾಧನೆಗೆ ಪ್ರಯೋಜನವಾಗುವಂತೆ ಖಾತ್ರಿಪಡಿಸುವುದು , ಮತ್ತು ಹಾಗೆ ಮಾಡುವಾಗ ಪ್ರಚಾರ ಬಯಸದಿರುವುದು”
ಇದನ್ನೂ ಓದಿ: “ಮಾಧ್ಯಮ ಸ್ವಾತಂತ್ರ್ಯ ಉಳಿಸಿ, ಪತ್ರಕರತ್ರನ್ನು ರಕ್ಷಿಸಿ” ರಾಷ್ಟ್ರಪತಿಗೆ ಪತ್ರ
ಈಗ ಶಾಂಘಾಯ್‍ನಲ್ಲಿರುವುದೇಕೆ?
ಜಗತ್ತಿನ 60ಕ್ಕೂ ಹೆಚ್ಚು ದೇಶಗಳಲ್ಲಿ ಸಂಚರಿಸಿ ಯುಎಸ್ ಅಲ್ಲದೆ ಜಮೈಕ, ಭಾರತ, ಚೀನಾ, ಇಂಗ್ಲೆಂಡ್, ಬ್ರಝಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ವಾಸವಿದ್ದ ನೆವಿಲ್ ರಾಯ್ ಸಿಂಘಂ ಸದ್ಯಕ್ಕೆ ಶಾಂಘಾಯ್‍ನಲ್ಲಿ ನೆಲೆಸಿರುವ ಬಗ್ಗೆ, ತನ್ನ ಪ್ರಸಕ್ತ ಕೆಲಸಕಾರ್ಯಗಳ ಬಗ್ಗೆ ಕೊಂಕು ಮಾತುಗಳನ್ನು ಹರಡಿಸಲಾಗುತ್ತಿದೆ ಎನ್ನುತ್ತ, ಈ ಬಗ್ಗೆ ತನ್ನ ಹೇಳಿಕೆಯಲ್ಲಿ ಹೀಗೆ ಸ್ಪಷ್ಟಗೊಳಿಸಿದ್ದಾರೆ:
“ ಪ್ರಪಂಚದ ಬಡತನವನ್ನು ವ್ಯವಸ್ಥಿತವಾಗಿ ಮತ್ತು ಶಾಶ್ವತವಾಗಿ ತೊಡೆದುಹಾಕಲು ಸಮರ್ಪಿತವಾಗಿರುವ ಯೋಜನೆಗಳಿಗೆ ಸಹಾಯ ಮಾಡುವುದು ನನ್ನ ಪರೋಪಕಾರಿ ಗುರಿಯ ಮೂಲ ಅಂಶವಾಗಿದೆ, ಇದರಲ್ಲಿ ಹಸಿವು ಪ್ರಮುಖ ಪಾತ್ರ ವಹಿಸುತ್ತದೆ. ರೈತ ಸಹಕಾರ ಸಂಘಗಳೊಂದಿಗೆ ಕೆಲಸ ಮಾಡುವಾಗ, ರೈತರು ಜಗತ್ತನ್ನು ಪೋಷಿಸುವ ಆಹಾರದ ಮೂಲ ಉತ್ಪಾದಕರಾಗಿದ್ದರೂ, ಜಾಗತಿಕ ದಕ್ಷಿಣದ ಹೆಚ್ಚಿನ ಭಾಗಗಳಲ್ಲಿ ಅನೇಕ ರೈತರು ಮತ್ತು ಅವರ ಕುಟುಂಬಗಳು ಹೆಚ್ಚಾಗಿ ಹಸಿವಿನಿಂದ ಬಳಲುತ್ತಿದ್ದಾರೆ ಎಂಬುದು ಸ್ಪಷ್ಟವಾಯಿತು. ಒಟ್ಟು ವಿಶ್ವ ಆಹಾರ ಸರಪಳಿಯಲ್ಲಿ ಮೂಲ ಉತ್ಪಾದಕರಿಗೆ ಸಮಾನಾತ್ಮಕವಾಗಿ ಮರು ನಿರ್ದೇಶಿಸಬಹುದಾದ ಭಾಗವನ್ನು ಹೇಗೆ ಬದಲಾಯಿಸುವುದು ಎಂಬುದು ಒಂದು ಪ್ರಮುಖ ಪ್ರಶ್ನೆಯಾಗಿದೆ. ಇದಕ್ಕೆ ಗ್ರಾಮೀಣ ಜೀವನದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನು ಪರಿಗಣಿಸುವ, ಆದರೆ ಗ್ರಾಮೀಣ ಜೀವನವನ್ನು ತೊಡೆದುಹಾಕುವುದಕ್ಕೆ ನೆಪವಾಗದಿರುವ ಸಮಗ್ರ ವಿಧಾನದ ಅಗತ್ಯವಿದೆ.
ಚೀನಾ ಸಂಪೂರ್ಣ ಬಡತನವನ್ನು ತೊಡೆದುಹಾಕಲು ಮತ್ತು ಗ್ರಾಮೀಣ ಪುನರುಜ್ಜೀವನವನ್ನು ಬೆಳೆಸಲು ಗಮನ ನೀಡುತ್ತಿರುವ ದೊಡ್ಡ ದೇಶವಾಗಿದೆ. ಇದು ಆಹಾರ ಉತ್ಪನ್ನಗಳ ದೊಡ್ಡ ಆಮದುದಾರನೂ ಆಗಿದೆ. ನನ್ನ ಸಂಚಿತ ವ್ಯಾಪಾರ ಜ್ಞಾನದಿಂದಾಗಿ, ನಾನು ಇಲ್ಲಿ ನನ್ನ ಸಮಯವನ್ನು ಜಾಗತಿಕ ದಕ್ಷಿಣದ ಸಹಕಾರಿಗಳಿಗೆ, ವಿಶೇಷವಾಗಿ ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾದವುಗಳಿಗೆ, ಉತ್ತಮ ಮತ್ತು ನ್ಯಾಯೋಚಿತ ಬೆಲೆಗಳನ್ನು ಸಾಧಿಸಲು, ಸಹಕಾರಿಗಳ ತಾಂತ್ರಿಕ ಸಾಮರ್ಥ್ಯಗಳನ್ನು ಹೆಚ್ಚಿಸಲು ಮತ್ತು ವೈಜ್ಞಾನಿಕ ಹಾಗೂ ಕೃಷಿ ಸಂಬಂಧಿ ವಿನಿಮಯವನ್ನು ಉತ್ತೇಜಿಸಲು ಮೀಸಲಿಟ್ಟಿದ್ದೇನೆ.
ಜಾಗತಿಕ ದಕ್ಷಿಣದ ಅಭಿವೃದ್ಧಿಗೆ ಇರುವ ಮಾರ್ಗ ಒಂದೇ ಎಂಬ ಭ್ರಮೆಯೆನೂ ನನಗಿಲ್ಲ. ಜಾಗತಿಕ ದಕ್ಷಿಣದಲ್ಲಿರುವ ಎಲ್ಲಾ ದೇಶಗಳು ಪರಸ್ಪರ ಕಲಿಯಬಹುದು ಎಂದು ನಾನು ನಂಬುತ್ತೇನೆ”.
ವಿಡಿಯೋ ನೋಡಿ: “ನಮ್ಮ ಹೆಸರಿನಲ್ಲಿ ಪ್ಯಾಲೆಸ್ತೀನಿಯನ್ನರ ನರಮೇಧ ಮಾಡಬೇಡಿ” Janashakthi Media