ನವದೆಹಲಿ: ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕವು 530ಕ್ಕೆ ತಲುಪುತ್ತಿದ್ದಂತೆ, ದೆಹಲಿಯಲ್ಲಿ ಗಾಳಿಯು ಉಸಿರಾಡಲು ಅಪಾಯಕಾರಿ ಆಗುತ್ತಿದೆ, ಆರೋಗ್ಯ ತಜ್ಞರು ಮತ್ತು ಪರಿಸರ ಕಾರ್ಯಕರ್ತರು ತೀವ್ರವಾದ ಕಳವಳ ವ್ಯಕ್ತಪಡಿಸಿದ್ದಾರೆ.
ದೆಹಲಿಯ ಪ್ರದೇಶವು ದೀಪಾವಳಿಯ ನಂತರದ ತೀವ್ರತರ ವಾಯುಮಾಲಿನ್ಯದಿಂದ ಪರಿಸ್ಥಿತಿ ಬಿಗಡಾಯಿಸಿದೆ. ಇಂದು ಸತತ ಎರಡನೇ ದಿನ ದೆಹಲಿ ಮತ್ತು ಹತ್ತಿರದ ನಗರಗಳಲ್ಲಿ ವಿಷಕಾರಿ ಹೊಗೆ ದಟ್ಟಣೆಯಿಂದಾಗಿ ಗಂಭೀರ ಸ್ವರೂಪದಲ್ಲಿದೆ.
ನಿರ್ಬಂಧಗಳ ನಡುವೆಯೂ ದೀಪಾವಳಿ ಹಿನ್ನೆಲೆಯಲ್ಲಿ ವಿಪರೀತವಾಗಿ ಪಟಾಕಿಗಳನ್ನು ಸಿಡಿಸಿದ ಪರಿಣಾಮ, ದೆಹಲಿಯ ಗಾಳಿಯ ಗುಣಮಟ್ಟ ಗುರುವಾರ ಕಳಪೆಯಾಗಿತ್ತು. ಕಳೆದ ಐದು ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ವಾಯುಮಾಲಿನ್ಯ ಅಧಿಕವಾಗಿತ್ತು.
ಭಾರತೀಯ ಹವಾಮಾನ ಇಲಾಖೆಯ ಉಪ ಪ್ರಧಾನ ವ್ಯವಸ್ಥಾಪಕ ಆರ್‌ಕೆ ಜೆನಮಣಿ ಅವರ ಪ್ರಕಾರ, ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ ಮಟ್ಟವು 550 ರ ಗಡಿಯನ್ನು ದಾಟಿದೆ, ಇದು ತೀವ್ರ ಸ್ಥಿತಿಗೆ ಹೋಗುತ್ತದೆ. ರಸ್ತೆಗಳು ಸರಿಯಾಗಿ ಕಾಣಿಸುವುದಿಲ್ಲ. ಅದಾಗ್ಯೂ, ವಾಯು ಗುಣಮಟ್ಟ ಸೂಚ್ಯಂಕ ಮಟ್ಟ ಮುಂದಿನ 24 ಗಂಟೆಗಳಲ್ಲಿ ಸುಧಾರಿಸಲಿದೆ. ಮುಂದಿನ 10 ದಿನಗಳಲ್ಲಿ ದೆಹಲಿಯಲ್ಲಿ ಮಳೆಯಾಗುವುದಿಲ್ಲ ಎಂದು ಹೇಳಿದ್ದಾರೆ.
ಸರ್ ಗಂಗಾರಾಮ್ ಆಸ್ಪತ್ರೆಯ ಹೃದ್ರೋಗ ಶಾಸ್ತ್ರದ ಪ್ರಾಧ್ಯಾಪಕ ಡಾ ಅರುಣ್ ಮೊಹಂತಿ “ಇಂತಹ ಗಾಳಿಯು ಜನರ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಹೃದಯ ಸಂಬಂಧಿ ಮತ್ತು ಇತರ ಹೃದಯ ಕಾಯಿಲೆ ಇರುವವರಿಗೆ ಇನ್ನಷ್ಟು ತೊಂದರೆ ನೀಡುತ್ತದೆʼʼ ಎಂದರು.
ಐಎಲ್‌ಡಿ, ಸಿಒಪಿಡಿಯಿಂದ ಬಳಲುತ್ತಿರುವ ರೋಗಿಗಳು ಸಹ ಅಪಾಯದ ವಲಯದಲ್ಲಿದ್ದಾರೆ. ಇದು ಆಘಾತಕಾರಿ ಆದರೆ ಸತ್ಯವೆಂದರೆ ಶೇಕಡಾ 10 ರಿಂದ 15 ರಷ್ಟು ಮಕ್ಕಳು ಆಸ್ತಮಾ, ಅಲರ್ಜಿಕ್ ಬ್ರಾಂಕೈಟಿಸ್‌ನಿಂದ ಬಳಲುತ್ತಿದ್ದಾರೆ. ಕೋವಿಡ್ -19ನಿಂದ ಚೇತರಿಸಿಕೊಂಡ ಜನರಿಗೆ ಶ್ವಾಸಕೋಶ ಮತ್ತಷ್ಟು ಸೂಕ್ಷ್ಮವಾಗಿರುತ್ತದೆ ಎಂದು ಡಾ ಅರುಣ್ ಮೊಹಂತಿ ಹೇಳುತ್ತಾರೆ.
ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಳವಾದ ಹಿನ್ನೆಲೆ, ವಾಯುಮಾಲಿನ್ಯದಿಂದ ಕೊರೊನಾ ಹೆಚ್ಚಾಗಬಹುದು ಎಂದು ದೆಹಲಿ ಏಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳಿಕೆ ನೀಡಿದ್ದಾರೆ. ಮಾಲಿನ್ಯದ ಗಾಳಿಯಲ್ಲಿ ಹೆಚ್ಚು ಸಮಯ ವೈರಸ್ ಇರುತ್ತೆ. ಇಂತಹ ಗಾಳಿ ಸೇವನೆಯಿಂದ ಜನರು ಸೋಂಕಿಗೆ ತುತ್ತಾಗುತ್ತಾರೆ. ಹೃದಯ, ಕಿಡ್ನಿ ಸಮಸ್ಯೆ ಇರುವವರಿಗೆ ತೊಂದರೆ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ(ಸಿಪಿಸಿಬಿ) ‘ಸಮೀರ್ ಆ್ಯಪ್’ನ ಅಂಕಿ–ಅಂಶಗಳಂತೆ, ಶನಿವಾರ ಬೆಳಿಗ್ಗೆ 8ಗಂಟೆ ವರೆಗಿನ ಮಾಹಿತಿ ಪ್ರಕಾರ ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 449ರಷ್ಟು ದಾಖಲಾಗಿದೆ. ಶುಕ್ರವಾರ ಈ ಪ್ರಮಾಣ 462ರಷ್ಟಿತ್ತು.
ದೆಹಲಿ ಪಕ್ಕದ ಫರಿದಾಬಾದ್ನಲ್ಲಿ ವಾಯುಮಾಪಕದ ದಾಖಲೆಯಲ್ಲಿ ವಾಯು ಗುಣಮಟ್ಟ 469ಕ್ಕೆ ಕುಸಿತ ಕಂಡಿದೆ. ಗ್ರೇಟರ್ ನೋಯ್ಡಾದಲ್ಲಿ 464, ಗಾಜಿಯಾಬಾದ್ನಲ್ಲಿ 470, ಗುರುಗ್ರಾಮದಲ್ಲಿ 472, ನೋಯ್ಡಾದಲ್ಲಿ 475ಕ್ಕೆ ವಾಯುಗುಣಮಟ್ಟ ಕುಸಿತವಾಗಿದೆ.
ನ್ಯಾಯಾಲಯ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸಿದ ನಿಯಮಗಳ ಸಂಪೂರ್ಣ ಉಲ್ಲಂಘನೆಯಿಂದಾಗಿ ಪರಿಸ್ಥಿತಿ ಹದಗೆಟ್ಟಿತು, ಜನರು ಹೆಚ್ಚಿನ ಸಂಖ್ಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿ ದೆಹಲಿ ಮತ್ತು ಎನ್‌ಸಿಆರ್‌ನಲ್ಲಿ ಪಟಾಕಿ ಸಿಡಿಸುತ್ತಾರೆ, ಇದರಿಂದ ವಾಯುಮಾಲಿನ್ಯ ಉಂಟಾಗುತ್ತದೆ ಎಂದು ಪರಿಸರ ತಜ್ಞ ಮನು ಸಿಂಗ್ ಹೇಳುತ್ತಾರೆ. ನಿಷೇಧಿತ ಪಟಾಕಿಗಳನ್ನು ಸಿಡಿಸಿದ ಪರಿಣಾಮ ದೆಹಲಿಯಲ್ಲಿ 50ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.