ನವದೆಹಲಿ: ಬ್ರಾಹ್ಮಣರೇ ಭಾರತ ಬಿಟ್ಟು ತೊಲಗಿ, ಬ್ರಾಹ್ಮಣರೇ ಕ್ಯಾಂಪಸ್ ತೊರೆಯಿರಿ ಎನ್ನುವ ಆಕ್ಷೇಪಾರ್ಹ ಬರಹಗಳು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್‌ಯು)ದ ಗೋಡೆಗಳ ಮೇಲೆ ರಾರಾಜಿಸುತ್ತಿವೆ. ಸ್ಕೂಲ್ ಆಫ್ ಇಂಟರ್‌ನ್ಯಾಷನಲ್ ಸ್ಟಡೀಸ್– 2 ರ ಕಟ್ಟಡ ಗೋಡೆಗಳಲ್ಲಿ ಕಿಡಿಗೇಡಿಗಳು ಬ್ರಾಹ್ಮಣ ವಿರೋಧಿ ಬರಹಗಳನ್ನು ಬರೆದಿದ್ದಾರೆ. ಬ್ರಾಹ್ಮಣ ಹಾಗೂ ಬನಿಯಾ ವಿರುದ್ಧ ಟೀಕೆ ಮಾಡುವ ರೀತಿಯಲ್ಲಿ ಬರಹಗಳನ್ನು ಬರೆಯಲಾಗಿದೆ.
ಎರಡು ಸಮುದಾಯಗಳ ವಿರುದ್ಧ ಬರಹಗಳು ಬರೆಯಲಾಗಿದ್ದು, ಈ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ‘ಬ್ರಾಹ್ಮಣರೇ ಕ್ಯಾಂಪಸ್ ತೊರೆಯಿರಿ‘, ‘ಬ್ರಾಹ್ಮಣರೇ ಭಾರತ ಬಿಟ್ಟು ತೊಲಗಿ‘, ‘ಬ್ರಾಹ್ಮಣರೇ, ಬನಿಯಾಗಳೇ ನಿಮಗಾಗಿ ನಾವು ಬರುತ್ತಿದ್ದೇವೆ, ಸೇಡು ತೀರಿಸಿಕೊಳ್ಳುತ್ತೇವೆ‘ ಎಂದು ವಿವಿದ ಬರಹಗಳನ್ನು ಬರೆಯಲಾಗಿದೆ.
ಜೆಎನ್‌ಯು ಕ್ಯಾಂಪಸ್ ನ ಗೋಡೆಗಳ ಮೇಲೆ ಬ್ರಾಹ್ಮಣ ವಿರೋಧಿ ಅವಹೇಳನಕಾರಿ ಬರಹಗಳು ಕಂಡುಬಂದಿದ್ದು, ಅಧ್ಯಾಪಕರ ಕೊಠಡಿಗಳು ಹಾಗೂ ಅಂತಾರಾಷ್ಟ್ರೀಯ ಅಧ್ಯಯನ ಶಾಲೆ (ಎಸ್‌ಐಎಸ್) ಕೊಠಡಿಗಳ ಗೋಡೆಗಳ ಮೇಲೂ ಈ ರೀತಿಯ ಬರಹಗಳು ಬರೆಯಲಾಗಿದೆ ಎನ್ನಲಾಗಿದೆ. ‘ಶಾಖೆಗಳಿಗೆ ಮರಳಿ ಹೋಗಿ‘ ಎಂದು ಬ್ರಾಹ್ಮಣ ಪ್ರಾಧ್ಯಾಪಕರ ಕೊಠಡಿಯಲ್ಲಿ ಬರೆಯಲಾಗಿದೆ.
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವವಿದ್ಯಾಲಯವು ಘಟನೆಯ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ನಿಕಾಯದ ಡೀನ್ ಹಾಗೂ ಕುಂದುಕೊರತೆ ಸಮಿತಿಗೆ ಆದೇಶ ನೀಡಲಾಗಿದೆ.
ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ಜೆಎನ್‌ಯು ರಿಜಿಸ್ಟ್ರಾರ್, ಜೆಎನ್‌ಯು ವಿವಿಯು ಏಕತೆ, ಸಮಗ್ರತೆ ಹಾಗೂ ಎಲ್ಲರ ಒಳಗೊಳ್ಳುವಿಕೆಯ ಪರವಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಜೆಎನ್‌ಯು ವಿವಿ ಕ್ಯಾಂಪಸ್ ಒಳಗೆ ಯಾವುದೇ ರೀತಿಯ ಹಿಂಸೆಗೆ ಉಪ ಕುಲಪತಿಗಳು ಅವಕಾಶ ನೀಡೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೀಗ ಘಟನೆ ಕುರಿತು ತನಿಖೆ ಆರಂಭವಾಗಿದ್ದು, ಈ ಕೃತ್ಯ ಎಸಗಿದವರು ಯಾರೆಂಬುದರ ಪತ್ತೆ ಕಾರ್ಯ ಶುರುವಾಗಿದೆ.
ಘಟನೆ ಕುರಿತಂತೆ ಪ್ರಕಟಣೆ ಹೊರಡಿಸಿರುವ ಜೆಎನ್‌ಯು ಉಪ ಕುಲಪತಿ ಪ್ರೊ. ಶಾಂತಿಶ್ರೀ ಡಿ. ಪಂಡಿತ್, ಬ್ರಾಹ್ಮಣ ವಿರೋಧಿ ಬರಹಗಳನ್ನು ಬರೆದಿರುವ ಕಿಡಿಗೇಡಿಗಳ ಕೃತ್ಯವನ್ನು ಖಂಡಿಸಿದ್ಧಾರೆ. ಈ ಸಂಬಂಧ ಜೆಎನ್‌ಯು ರಿಜಿಸ್ಟ್ರಾರ್ ನೋಟಿಸು ನೀಡಿದ್ದು, ಜೆಎನ್‌ಯು ಎಲ್ಲರಿಗೂ ಸೇರಿದ್ದು. ಹೀಗಾಗಿ, ಈ ರೀತಿಯ ಕೃತ್ಯಗಳನ್ನು ಸಹಿಸೋದಕ್ಕೆ ಸಾಧ್ಯವಿಲ್ಲ. ಎಂದು ಎಚ್ಚರಿಸಿದ್ದಾರೆ. ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಈ ಕೃತ್ಯವನ್ನು ಬಲವಾಗಿ ಖಂಡಿಸಿದ್ದು, ಈ ರೀತಿಯ ಕೃತ್ಯಗಳು ವಿವಿ ಕ್ಯಾಂಪಸ್ ಆವರಣದಲ್ಲಿ ನಡೆಯೋದಕ್ಕೆ ಬಿಡೋದಿಲ್ಲ ಎಂದಿದೆ.