ದಿಲ್ಲಿ ಗಡಿಗಳಲ್ಲಿ ನೂರು ದಿನಗಳು – ನಡೆದಿದೆ ಒಂದು ಅನನ್ಯ ಹೋರಾಟ

ಸಂಸದೀಯ ನಿಯಮಗಳಿಗೆ ಮತ್ತು ಸಂವಿಧಾನಕ್ಕೆ ವಿರುದ್ಧವಾಗಿ ರೈತ-ವಿರೋಧಿ ಕಾಯ್ದೆಗಳ ಹೇರಿಕೆ ಮತ್ತು ಅವುಗಳ ಸಂವಿಧಾನಾತ್ಮಕ ಸಿಂಧುತ್ವವನ್ನು ಪರಾಮರ್ಶೆಗೆ ಒಳಪಡಿಸಲು ನ್ಯಾಯಾಂಗದ ವಿಳಂಬ ಇವನ್ನು ಬೀದಿಗಳಲ್ಲಿ ಎದುರಿಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿ ಮಾಡಿತು. 250ಕ್ಕೂ ಹೆಚ್ಚು ರೈತ ಸಂಘಟನೆಗಳ ವೇದಿಕೆಯಾದ ಎ.ಐ.ಕೆ.ಎಸ್.ಸಿ.ಸಿ. ಕರೆಯಂತೆ ನವೆಂಬರ್ 26, 2020 ರಂದು ದೆಹಲಿ ಚಲೋದಿಂದ ಆರಂಭವಾದ ಹೋರಾಟ ಈಗ 500ಕ್ಕೂ ಹೆಚ್ಚು ರೈತ ಸಂಘಟನೆಗಳ ವೇದಿಕೆಯಾದ ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದಲ್ಲಿ ಭಾರತದ ಎಲ್ಲಾ ವಿಭಾಗಗಳ ರೈತರನ್ನು ಮಾತ್ರವಲ್ಲ, ಎಲ್ಲ ಪ್ರಜಾಪ್ರಭುತ್ವವಾದಿ ಜನವಿಭಾಗಗಳನ್ನು ಆಕರ್ಷಿಸುತ್ತಿರುವ ಹಾಗೂ ದೇಶದಾದ್ಯಂತ ಚಳುವಳಿಗಿಳಿಸುವ ಒಂದು ಸ್ಪೂರ್ತಿಯ ಕೇಂದ್ರವಾಗಿ ರೂಪುಗೊಂಡಿದೆ.

ಟಿ.ಯಶವಂತ

ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧದ ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಹೋರಾಟ ಫೆಬ್ರುವರಿ 26ರಂದು ಮೂರು ತಿಂಗಳುಗಳನ್ನು ಪೂರೈಸಿತು, ಮಾರ್ಚ್ 6ರಂದು ನೂರು ದಿನಗಳನ್ನು ದಾಟಿದೆ.

ಇಷ್ಟು ದೊಡ್ಡ ಸಂಖ್ಯೆಯಲ್ಲಿ, ಇಷ್ಟು ದೀರ್ಘಕಾಲದ ವರೆಗೂ ನಡೆಯುತ್ತಿರುವ ರೈತ ಹೋರಾಟ ಸ್ವಾತಂತ್ರ‍್ಯ ನಂತರದ ಭಾರತದಲ್ಲಿ ಇದುವರೆಗೂ ನಡೆದಿರಲಿಲ್ಲ. ದೀರ್ಘ ಮತ್ತು ವಿಶಾಲ ಹೋರಾಟದ ಕಾರಣಕ್ಕಾಗಿ ಈ ಭಾರತದ ರೈತ ಹೋರಾಟವನ್ನು ವಿಶ್ವದಲ್ಲೇ ಅನನ್ಯ ಹಾಗೂ ಅಪರೂಪದ್ದು ಎಂದು ಗುರುತಿಸಲಾಗುತ್ತಿದೆ.

ಸರ್ಕಾರ ನಡೆಸಿದ ಎಲ್ಲಾ ರೀತಿಯ ಗರಿಷ್ಠ ಪ್ರಮಾಣದ ದೌರ್ಜನ್ಯ ವನ್ನು ಎದುರಿಸಿ ರೈತ ಹೋರಾಟ ನಡೆಯುತ್ತಿರುವುದನ್ನು ಗಮನಿಸುತ್ತಿರುವಂತೆಯೇ, ಚಳುವಳಿಗಳ ಬೇಡಿಕೆಗಳಾದ ಕೃಷಿ ಕಾಯಿದೆ ರದ್ದು, ವಿದ್ಯುತ್ ಮಸೂದೆ 2020 ವಾಪಸ್ಸಾತಿ, ರೈತರ ಉತ್ಪನ್ನಗಳಿಗೆ ಖಾತರಿ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ರಕ್ಷಣೆ ಯನ್ನು ಒಪ್ಪಲು ಸರ್ಕಾರದ ನಿರಾಕರಣೆಯ ಮೋದಿ ಸರ್ಕಾರದ ಮೊಂಡುತನವನ್ನು ಇಡೀ ಜಗತ್ತು ಗಮನಿಸುತ್ತಿದೆ.

ಸಮಸ್ತ ರೈತಾಪಿಗಳ ಹೋರಾಟ

500 ಕ್ಕೂ ಹೆಚ್ಚು ರೈತ ಸಂಘಟನೆಗಳನ್ನು ಒಳಗೊಂಡ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ನಡೆಯುತ್ತಿರುವ ಮೋದಿ ಸರ್ಕಾರದ ಎಲ್ಲ ಅಪಪ್ರಚಾರ,ದಾಳಿಗಳನ್ನು ಹಿಮ್ಮೆಟ್ಟಿಸಿ ಮುನ್ನಡೆಯುತ್ತಿದೆ. ಅದು ಮೊದಲ ಸುತ್ತಿನ ಮಾತುಕತೆಗಳಲ್ಲಿ ಸರಕಾರದ ಪ್ರಸ್ತಾವಗಳಿಗೆ ಪ್ರತಿಯಾಗಿ ರೂಪಿಸಿದ “ಸರ್ಕಾರ್ ಕೀ ಅಸ್ಲಿ ಮಜ್ಬೂರಿ, ಅಂಬಾನಿ, ಅದಾನಿ ಔರ್ ಜಮಾಖೋರಿ”(ಸರಕಾರದ ನಿಜವಾದ ಅಸಹಾಯಕಕತೆ ಎಂದರೆ ಅಂಬಾನಿ, ಅದಾನಿ ಮತ್ತು ದಾಸ್ತಾನುಕೋರತನ) ಎಂಬ ಘೋಷಣೆ ಈ ಹೋರಾಟದ ಸಾರವನ್ನು ಬಿಂಬಿಸುತ್ತದೆ. ಈ ಮೂಲಕ ಇದು ಭಾರತದ ಎಲ್ಲಾ ವಿಭಾಗಗಳ ರೈತರನ್ನು ಆಕರ್ಷಿಸುತ್ತಿರುವ ಹಾಗೂ ದೇಶದಾದ್ಯಂತ ಚಳುವಳಿಗಿಳಿಸುವ ಒಂದು ಸ್ಪೂರ್ತಿಯ ಕೇಂದ್ರವಾಗಿ ರೂಪುಗೊಂಡಿದೆ.

ಪಂಜಾಬ್ ಹಾಗೂ ಹರ್ಯಾಣದಲ್ಲಿ ಮಾತ್ರವೇ ಅಲ್ಲದೇ ಉತ್ತರ ಪ್ರದೇಶ, ರಾಜಾಸ್ಥಾನ ಮುಂತಾದ ರಾಜ್ಯಗಳಲ್ಲೂ ಕೂಡ ದೆಹಲಿ ಹೋರಾಟ ಬೆಂಬಲಿಸುವ ಸಂಯುಕ್ತ ಕಿಸಾನ್ ಮೋರ್ಚಾ ಕರೆಗೆ ಲಕ್ಷಾಂತರ ರೈತರು ಸೇರುತ್ತಿದ್ದಾರೆ.ಇದರಿಂದ ಧೃತಿಗೆಟ್ಟಿರುವ ನರೇಂದ್ರ ಮೋದಿ ಸಂಸತ್ತಿನಲ್ಲೇ ‘ಆಂದೋಲನ ಜೀವಿಗಳು’ ಹಾಗೂ ವಿದೇಶಿ ವಿಧ್ವಂಸಕ ಸಿದ್ದಾಂತ (ಎಫ್‌ಡಿಐ) ಎಂದು ತಮ್ಮ ಫ್ಯಾಸಿಸ್ಟ್ ತೆರನ ಅಸಹನೆಯನ್ನು ಹೊರ ಹಾಕಿದ್ದಾರೆ. ಖಾಸಗಿ ವಲಯದ ಟೀಕೆ ಬೇಡ ಎಂದೂ ಹೇಳಿದ್ದಾರೆ!

ಮೂರು ಸುಗ್ರೀವಾಜ್ಞೆಗಳು ಹೊರಬರುತ್ತಿದ್ದಂತೆಯೇ ಆರಂಭವಾಗಿರುವ ಈ ಹೋರಾಟ ಇಷ್ಟು ದೀರ್ಘವಾಗಿ ನಡೆಯುತ್ತಿರುವುದು ರೈತರು ಎಷ್ಟು ಕಷ್ಟದಲ್ಲಿದ್ದಾರೆ, ಬೇಸಾಯದ ವೆಚ್ಚ ಕೂಡ ಪಡೆಯಲಾರದೇ ಎಷ್ಟು ಸಂಕಷ್ಟವನ್ನು ಎದುರಿಸುತ್ತಿದ್ದಾರೆ, ಕೃಷಿ ಬಿಕ್ಕಟ್ಟಿನ ಕಾರಣದಿಂದ ಎಷ್ಟು ಅಪಾರ ಯಾತನೆ ಅನುಭವಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ.

ಸ್ವಾತಂತ್ರ‍್ಯ ನಂತರದ ಆರಂಭದ ವರ್ಷಗಳಲ್ಲಿ ಅನುಸರಿಸಿದ ಸರ್ಕಾರದ ಧೋರಣೆಗಳು ಕೃಷಿಯಲ್ಲಿ ಸಾರ್ವಜನಿಕ ಹೂಡಿಕೆಯನ್ನು ನಿರಂತರವಾಗಿ ಹೆಚ್ಚಿಸುತ್ತಾ ಹಸಿರು ಕ್ರಾಂತಿಯ ಸಂದರ್ಭದಲ್ಲಿ ಉತ್ಪಾದನೆ ಹಾಗೂ ಉತ್ಪಾದಕತೆ ಯ ಹೆಚ್ಚಳದ ಗುರಿ ಮುಟ್ಟುವಲ್ಲಿ ಸಫಲವಾದವು.ಆದರೆ ಅದೇ ಸಂದರ್ಭದಲ್ಲಿ ಅರ್ಥಪೂರ್ಣ ಭೂಸುಧಾರಣೆ ಯಂತಹ ಕ್ರಮಗಳು ಆಗದೇ ಇದ್ದುದರಿಂದ ಇದರ ಫಲ ಬಹಳ ದೊಡ್ಡ ಸಂಖ್ಯೆಯ ರೈತರಿಗೆ ಸಿಗಲಿಲ್ಲ. ಇಂತಹ ಕೃಷಿ ಬಿಕ್ಕಟ್ಟಿನ ಪರಿಸ್ಥಿತಿಯ ರೈತ ಜೀವನದ ಮೇಲೆ 1990 ರ ದಶಕದಲ್ಲಿ ಅಂತರಾಷ್ಟ್ರೀಯ ಹಣಕಾಸು ನಿರ್ದೇಶಿತ ನವ ಉದಾರೀಕರಣ ಆರ್ಥಿಕ ಧೋರಣೆಗಳನ್ನು ಹೇರಲಾಯಿತು. ಇದು ಈ ಕೃಷಿ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಿಸಿ ರೈತ ಆತ್ಮಹತ್ಯೆ-ಹತಾಶ ವಲಸೆಗಳನ್ನು ಕಾಣುವಂತಾಯಿತು.

ದೇಶದ ಜಿಡಿಪಿ ಯಲ್ಲಿ ಶೇ 14 ರಷ್ಟು ಇರುವ ಕೃಷಿ ಕ್ಷೇತ್ರ ದ ಮೇಲೆ ನಮ್ಮ ಒಟ್ಟು ಜನಸಂಖ್ಯೆಯ ಸುಮಾರು ಶೇ 60 ರಷ್ಟು ಜನರು ಅವಲಂಬಿತರಾಗಿದ್ದಾರೆ ಎನ್ನುವುದೇ ಕೃಷಿ ಬಿಕ್ಕಟ್ಟಿನ ಶೋಚನೀಯ ದುಸ್ಥಿತಿಯನ್ನು ವಿವರಿಸುತ್ತದೆ. ಸರ್ಕಾರ ಹೇಳುವಂತೆ ಈ ಹೋರಾಟ ಕೇವಲ ಶ್ರೀಮಂತ ರೈತರು ನಡೆಸುತ್ತಿರುವ ಹೋರಾಟ ಅಲ್ಲ. ಶ್ರೀಮಂತ ರೈತರೂ ಕೂಡ ಗಣನೀಯವಾಗಿ ಭಾಗವಹಿಸಿರುವ ಇಡೀ ರೈತಾಪಿ ಸಮುದಾಯದ ಒಂದು ವರ್ಗ ಹೋರಾಟ. ಈ ಹೋರಾಟದ ಹಿಂದೆ ಇರುವ ಪ್ರೇರಕ ಶಕ್ತಿ ನರೇಂದ್ರ ಮೋದಿ ಹೇಳುತ್ತಿರುವಂತೆ ವಿದೇಶಿ ವಿಧ್ವಂಸಕ ಸಿದ್ಧಾಂತ ಅಲ್ಲ; ಬದಲಾಗಿ ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲುö್ಯಟಿಒ) ಒಪ್ಪಂದಗಳಿAದಾದ ಉದಾರೀಕರಣ ಧೋರಣೆಗಳು ಉಂಟು ಮಾಡಿದ ಇಡೀ ಗ್ರಾಮೀಣ ಜೀವನವನ್ನೇ ದಿವಾಳಿಗೆ ನೂಕಿರುವ ಅಸಹನೀಯ ಜೀವನ ಮತ್ತು ಕೃಷಿ ಪರಿಸ್ಥಿತಿ.

ಕೃಷಿ ಕಾಯ್ದೆಗಳ ಗುರಿ ಏನು ?

2008 ರಿಂದ ಇಡೀ ಜಗತ್ತು ಒಂದು ಬಹುದೊಡ್ಡ ಆರ್ಥಿಕ ಬಿಕ್ಕಟ್ಟಿನಲ್ಲಿ ಇದೆ. ಭಾರತದಂತಹ ಅಭಿವೃದ್ಧಿ ಶೀಲ ದೇಶಗಳ ಮೇಲೆ ಆರ್ಥಿಕ ಬಿಕ್ಕಟ್ಟು ಬಹಳ ತೀವ್ರವಾದ ದುಷ್ಪರಿಣಾಮಗಳನ್ನು ಉಂಟು ಮಾಡುತ್ತಿದೆ.ಇಂತಹ ಒಂದು ಜಾಗತಿಕ ಸನ್ನಿವೇಶದಲ್ಲಿ ಭಾರತದ ದುಡಿಯುವ ಜನತೆಯ ಹಿತ ಕಾಪಾಡುವ, ಅವರ ಉದ್ಯೋಗ ಮತ್ತು ಜೀವನ ರಕ್ಷಿಸುವ ಬೇಡಿಕೆ ಕೇಂದ್ರಿತ ಆರ್ಥಿಕ ಚೇತರಿಕೆ ಕ್ರಮಗಳನ್ನು ಕೈಗೊಳ್ಳುವ ಬದಲು ಕೇವಲ ಕಾರ್ಪೊರೇಟ್ ಹಿತಗಳನ್ನು ರಕ್ಷಿಸುವ ಹೂಡಿಕೆ ಕೇಂದ್ರಿತ ಆರ್ಥಿಕ ಚೇತರಿಕೆ ಕ್ರಮಗಳನ್ನು ಮೋದಿ ಸರ್ಕಾರ ಅನುಸರಿಸುತ್ತಿದೆ. ಇದರ ಪರಿಣಾಮವಾಗಿ ಈಗ ಎಲ್ಲೆಡೆ ‘ಕರೋನಾ ವೈರಸ್ ‘ ಗಿಂತ ‘ಅಸಮಾನತೆ ವೈರಸ್’ ಎಂಬುದು ಬಹಳ ಭೀಕರವಾಗಿದೆ ಎಂದೇ ವರ್ಣಿಸಲಾಗುತ್ತಿದೆ.

2008 ರ ಮೊದಲು ಖಾಸಗಿ ಕಾರ್ಪೊರೇಟ್ ಹೂಡಿಕೆ ಜಿಡಿಪಿ ಯ 6.2% ನಿಂದ 16.8% ವರೆಗೆ ಏರಿಕೆ ಆಗಿತ್ತು. 2008 ರ ನಂತರದ ಕೇವಲ 5 ವರ್ಷದಲ್ಲಿ ಹೂಡಿಕೆ ನಿಂತಲ್ಲೇ ನಿಂತು ಗಿರಕಿ ಸುತ್ತುತ್ತಿದೆ. ಒಟ್ಟಾರೆ ಬೇಡಿಕೆಯಲ್ಲಿ ಆದ ಕುಸಿತವು ಹೂಡಿಕೆಯನ್ನು ನಿಧಾನಗೊಳಿಸಿದೆ. ಖಾಸಗಿ ಕಾರ್ಪೊರೇಟ್ ಹೂಡಿಕೆ 2015-16 ರಲ್ಲಿ ಜಿಡಿಪಿ ಯ 11.6% ಇದ್ದುದ್ದು 2018-19 ರಲ್ಲಿ 10.3% ಕ್ಕೆ ಕುಸಿದಿದೆ.ಕೋವಿಡ್ ಗಿಂತ ಮೊದಲೇ ಮತ್ತಷ್ಟು ಕುಸಿಯುವುದನ್ನು ತಡೆಯುವ ಆರ್ಥಿಕ ಪುನಶ್ಚೇತನ ಕ್ರಮಗಳನ್ನು ಅನುಸರಿಸಲೇಬೇಕಾದ ಪರಿಸ್ಥಿತಿ ಇತ್ತು.

ಕೋವಿಡ್ ನ ಸಂದರ್ಭದಲ್ಲಿ ಅಗತ್ಯ ಪರಿಹಾರ ಮತ್ತು ಉದ್ಯೋಗ ಉಳಿಸುವ ಆರ್ಥಿಕ ಚೇತರಿಕೆಯ ಕ್ರಮಗಳಿಲ್ಲದೇ ಈ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ. ಒಂದು ಕಡೆ ಕಾರ್ಪೊರೇಟ್ ಗಳಿಗೆ ಬೃಹತ್ ಪ್ರಮಾಣದಲ್ಲಿ ನೀಡುತ್ತಿರುವ ತೆರಿಗೆ ವಿನಾಯಿತಿ ಹಾಗೂ ಹಣಕಾಸು ಬೆಂಬಲ ಆರ್ಥಿಕತೆಯನ್ನು ನುಚ್ಚು ನೂರು ಮಾಡಿದ್ದರೆ, ಇನ್ನೊಂದು ಕಡೆ ತೆರಿಗೆ ಸಂಗ್ರಹದ ಗುರಿ ತಲುಪುವಲ್ಲಿ ಕೂಡ ಗಣನೀಯ ವೈಫಲ್ಯ ಕಾಣುತ್ತಿದೆ. ಹಾಗಾಗಿಯೇ ಖಾಸಗಿ ಕಾರ್ಪೊರೇಟ್ ಹೂಡಿಕೆ ಉತ್ತೇಜಿಸುವ ಮೋದಿ ‘ ಮಂತ್ರದAಡ’ ಕೆಲಸ ಮಾಡುತ್ತಿಲ್ಲ.ಇಂತಹ ಸನ್ನಿವೇಶದ ಹಿನ್ನೆಲೆಯಲ್ಲಿ ದೊಡ್ಡ ಬಂಡವಾಳದಾರ ಕಾರ್ಪೊರೇಟ್ ಹಿತಾಸಕ್ತಿ ಕಾಯ್ದುಕೊಳ್ಳಲು ಸಾರ್ವಜನಿಕ ಸ್ವತ್ತು ಗಳನ್ನೇ ಹಸ್ತಾಂತರ ಮಾಡುತ್ತಿದೆ.

ಕರೋನ ಪರಿಸ್ಥಿತಿ ಯನ್ನು ಕಾರ್ಪೊರೇಟ್ ಪರವಾದ ಧೋರಣೆ ಅನುಸರಿಸಲು ಸುಸಂದರ್ಭ ಎಂಬಂತೆ ಬಳಸಿಕೊಳ್ಳಲು ಸರ್ಕಾರ ಟೊಂಕ ಕಟ್ಟಿ ನಿಂತಿದೆ. ಲಾಕ್ ಡೌನ್‌ನಿಂದಾದ ಆರೋಗ್ಯ, ಆರ್ಥಿಕ ದುಸ್ಥಿತಿಯನ್ನು ಪರಿಹರಿಸಲು ಕೆಲಸ ಮಾಡಬೇಕಿದ್ದ ಸರ್ಕಾರ ಶ್ರಮಿಕರ ಮತ್ತು ಜನತೆಯ ಮಾನವ ಹಕ್ಕುಗಳ ಮೇಲೆ ಆಕ್ರಮಣ ನಡೆಸುತ್ತಿದೆ.

ಈ ಪ್ರಯತ್ನದ ಭಾಗವಾಗಿಯೇ ಲಾಭದ ದುರಾಸೆಯ ಕೃಷಿ ಕಾರ್ಪೊರೇಟ್ ಸಂಸ್ಥೆಗಳಿಗೆ ರೈತ ಆರ್ಥಿಕತೆಯನ್ನು ಇಡಿಯಾಗಿ ಹಸ್ತಾಂತರಿಸಲು ನಿಂತಿರುವುದು. ಬೇಡಿಕೆಯ ಅಭಾವದಿಂದಾಗಿ ಇತರ ರಂಗಗಳಲ್ಲಿ ಹೂಡಿಕೆಗಳಿಗೆ ಇಲ್ಲದ ಅವಕಾಶ ಆಹಾರ ಆರ್ಥಿಕತೆಯಲ್ಲಿ ಕಾರ್ಪೊರೇಟ್‌ಗಳಿಗೆ ಕಾಣುತ್ತಿದೆ. ಏಕೆಂದರೆ ಇಲ್ಲಿ ಬೇರೆ ವಲಯಗಳಿಗೆ ಹೋಲಿಸಿದರೆ ಬೇಡಿಕೆ ಎಂಬುದು ಅನಿವಾರ್ಯ.

ಮೂರು ಕೃಷಿ ಕಾಯ್ದೆಗಳ ರದ್ದತಿ ಹಾಗೂ ಕನಿಷ್ಠ ಬೆಂಬಲ ಬೆಲೆ ಮತ್ತು ಸರಕಾರದಿಂದ ಖರೀದಿಯೆ ಶಾಸನಬದ್ಧ ಖಾತರಿಗೆ ನಿರಾಕರಿಸುತ್ತಿರುವಲ್ಲಿ ಸರ್ಕಾರದ ವರ್ಗ ಪಕ್ಷಪಾತ ಬಹಳ ಸ್ಪಷ್ಟವಾಗಿ ಕಾಣುತ್ತಿದೆ. ಎಪಿಎಂಸಿಗಳನ್ನು ಕ್ರಮೇಣ ಇಲ್ಲವಾಗಿಸುವುದು, ಕಾಂಟ್ರಾಕ್ಟ್ ಬೇಸಾಯದ ಮೂಲಕ ಬೆಳೆಗಳು, ಅವುಗಳ ಪ್ರಮಾಣ ಮತ್ತು ಗುಣಮಟ್ಟಗಳನ್ನು ಕಾರ್ಪೊರೇಟ್‌ಗಳ ಮರ್ಜಿಗೆ ಒಳಪಡಿಸಿ ಭೂಮಿಯ ಒಡೆತನವನ್ನು ನಾಮಮಾತ್ರಗೊಳಿಸುವುದು, ಅಗತ್ಯ ಸರಕುಗಳ ಕಾಯ್ದೆಯನ್ನು ತಿದ್ದುಪಡಿ ಮಾಡಿ ದಾಸ್ತಾನುಗಳ ಮೇಲಿನ ನಿಯಂತ್ರಣಗಳನ್ನು ತೆಗೆದು ಹಾಕಿ ಆಹಾರವನ್ನು ಲಾಭಕೋರತನಕ್ಕೆ ಒಳಪಡಿಸುವುದು ಇವುಗಳಲ್ಲಿ ಇದು ಸ್ಪಷ್ಟವಾಗಿ ಕಾಣುತ್ತದೆ. ಹಾಗಾಗಿಯೇ ಈ ಚಾರಿತ್ರಿಕ ರೈತ ಹೋರಾಟ ಕೇವಲ ರೈತಾಪಿ ಕೃಷಿಯ ರಕ್ಷಣೆಗೆ ಮಾತ್ರ ಎಂದು ತಿಳಿದರೆ ತಪ್ಪಾಗುತ್ತದೆ. ಇದು ಇಡೀ ದೇಶದ ಆಹಾರ ಭದ್ರತೆಯ ಹಕ್ಕನ್ನು ರಕ್ಷಿಸಲು ಕೂಡ ಎಂಬುದನ್ನು ಮರೆಯುವಂತಿಲ್ಲ.

ಘೋರ ಪರಿಣಾಮಗಳು

ಈ ಕೃಷಿ ಕಾಯ್ದೆಗಳು ಈಗಾಗಲೇ ತಮ್ಮ ಘೋರ ಪರಿಣಾಮಗಳನ್ನು ಹೊರ ಹಾಕುತ್ತಿವೆ .ಕರ್ನಾಟಕದ ಎಲ್ಲಾ ಎಪಿಎಂಸಿ ಗಳು ವಹಿವಾಟು ಇಲ್ಲದೇ ತಮ್ಮ ಆದಾಯದಲ್ಲಿ ಶೇ 50 ರಿಂದ ಶೇ 80 ರಷ್ಟು ಕುಸಿತ ಅನುಭವಿಸಿರುವ ಹಾಗೂ ಸಿಬ್ಬಂದಿಗಳನ್ನು ಶೇ 50 ಕ್ಕಿಂತ ಹೆಚ್ಚು ಕಡಿತಗೊಳಿಸುತ್ತಿರುವ ವರದಿಗಳು ಬರಲಾರಂಬಿಸಿವೆ.ಯಾವುದೇ ಸ್ಪರ್ಧಾತ್ಮಕ ಹರಾಜು ಪದ್ಧತಿ, ದಾಸ್ತಾನು ಸೌಲಭ್ಯ, ಹತಾಶ ಮಾರಾಟದಿಂದ ರಕ್ಷಣೆ ಇವ್ಯಾವುದು ಇಲ್ಲದ ಖಾಸಗಿ ಮಾರುಕಟ್ಟೆಗಳು ತಲೆ ಎತ್ತಲು ತಯಾರಿ ನಡೆಸುತ್ತಿವೆ. ಹಾಗಾಗಿಯೇ ಈ ರೈತ ಚಳವಳಿ ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ಮಾತ್ರ ಮಾತಾಡದೇ ಈ ಕಾಯ್ದೆಗಳ ಫಲಾನುಭವಿಗಳಾದ ಅದಾನಿ -ಅಂಬಾನಿಯಂತಹ ಕಾರ್ಪೊರೇಟ್ ದೈತ್ಯರ ವಿರುದ್ದವು ಧ್ವನಿ ಎತ್ತಿದೆ.

ಬೆಂಬಲ ಬೆಲೆಯಲ್ಲಿ ಖಾತರಿ ಖರೀದಿ ಎನ್ನುವುದು ಸಾರ್ವಜನಿಕ ಪಡಿತರ ವ್ಯವಸ್ಥೆ (ಪಿಡಿಎಸ್) ಉಳಿವಿಗೆ ಅತ್ಯಂತ ಅನಿವಾರ್ಯದ ಅಗತ್ಯ. ಇದು ಒಂದೇ ನಾಣ್ಯದ ಎರಡು ಮುಖ. ಬೆಂಬಲ ಬೆಲೆಯಲ್ಲಿ ಖಾತರಿ ಖರೀದಿ ಪಡಿತರ ವಿತರಣಾ ವ್ಯವಸ್ಥೆಗೆ ಬೇಡಿಕೆಯನ್ನು ಸಹ ತಂದುಕೊಡುತ್ತದೆ. ಬೇಡಿಕೆ ಪೂರೈಸಬೇಕಾದರೆ ದಾಸ್ತಾನು ಮತ್ತು ಪೂರೈಕೆ ಸಾಮಾರ್ಥ್ಯ ಮತ್ತು ಜಾಲವನ್ನು ವಿಸ್ತರಿಸಬೇಕಾದ ಅಗತ್ಯ ಕೂಡ ಉಂಟು ಮಾಡುತ್ತದೆ.

ಕೃಷಿ ಲಾಗುವಾಡುಗಳಾದ ಬೀಜ, ನೀರಾವರಿ, ವಿದ್ಯುತ್, ಡಿಸೇಲ್, ರಸಗೊಬ್ಬರ, ಕೀಟನಾಶಕ ಇತ್ಯಾದಿಗಳನ್ನು ಕಾರ್ಪೊರೇಟ್ ಕಂಪನಿಗಳ ಹಿಡಿತಕ್ಕೆ ವಹಿಸಿರುವ ಕಾರಣದಿಂದ ಬೇಸಾಯ ಅತ್ಯಂತ ದುಬಾರಿಯಾಗಿ ಪರಿಣಮಿಸಿದೆ. ಇದರಿಂದಾಗಿಯೇ ರೈತ ತಾನು ಕೃಷಿಯಲ್ಲಿ ಉಳಿದುಕೊಳ್ಳಬೇಕಾದರೆ ಬೇಸಾಯಕ್ಕೆ ಮಾಡಿರುವ ವೆಚ್ಚ ವನ್ನು ಮರಳಿ ಪಡೆಯಲೇಬೇಕಾದ ಅನಿವಾರ್ಯತೆ ಯನ್ನು ಸೃಷ್ಟಿಸಿದೆ. ಈ ಕಾರಣಕ್ಕಾಗಿಯೇ ರೈತಾಪಿ ಕೃಷಿಯನ್ನು ಉಳಿಸಲು ಅಗತ್ಯವಾದ ಸ್ವಾಮಿನಾಥನ್ ಆಯೋಗ ಶಿಪಾರಸ್ಸಾದ ಸಮಗ್ರ ಉತ್ಪಾದನಾ ವೆಚ್ಚಕ್ಕೆ ಶೇಕಡಾ ಐವತ್ತು ಲಾಭಾಂಶ ಸೇರಿಸಿ (ಸಿ2+50%) ನಿಗದಿಪಡಿಸಿದ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಗೆ ಖಾತರಿ ನೀಡಬೇಕು ಎಂಬ ಬೇಡಿಕೆಯನ್ನು ಬಲವಾಗಿ ಪ್ರತಿಪಾದಿಸುತ್ತಿರುವುದು .ಆದರೆ ಸರ್ಕಾರಗಳು ದಾಸ್ತಾನು ಮತ್ತು ಪೂರೈಕೆ ಜಾಲವನ್ನು ಖಾಸಗಿ ಕಂಪನಿಗಳಿಗೆ ವಹಿಸುತ್ತಿವೆ. ಕೃಷಿ ಉತ್ಪನ್ನಗಳ ಖರೀದಿ ಬೇಡಿಕೆಗೆ ನಿರುತ್ಸಾಹ ಹಾಗೂ ನಿರಾಸಕ್ತಿಯ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿವೆ.

ಹಾಗಾಗಿಯೇ ಪಡಿತರ ಪಡೆಯಲು ಅತ್ಯಂತ ಅಸಹ್ಯ,ಹಾಸ್ಯಾಸ್ಪದ ಮಾನದಂಡಗಳಗಳನ್ನು ಜಾರಿ ಮಾಡಲು ಪ್ರಯತ್ನಿಸುತ್ತಿವೆ.ಈ ಮೂಲಕ ಆದಷ್ಟೂ ಜನರನ್ನು ಅದ್ಯತಾ ಕುಟುಂಬಗಳ ಪಟ್ಟಿಯಿಂದ ಹೊರ ಹಾಕಿ,ಅನಿವಾರ್ಯವಾಗಿ ಉಳಿದು ಕೊಂಡ ಫಲಾನುಭವಿಗಳನ್ನು ಗ್ಯಾಸ್ ಸಬ್ಸಿಡಿ ವಿಷಯದಲ್ಲಿ ಆದಂತೆ ನೇರ ನಗದು ವರ್ಗಾವಣೆ ಮೂಲಕ ಆಕರ್ಷಿಸಿ ಪಡಿತರ ವ್ಯವಸ್ಥೆ ಸೇರಿದಂತೆ ಐಸಿಡಿಎಸ್, ಶಾಲಾ ಬಿಸಿಯೂಟ ಯೋಜನೆಗಳನ್ನು ನಿರ್ಮೂಲನೆ ಮಾಡಲಾಗುತ್ತಿದೆ.

ರೈತ ಒಗ್ಗಟ್ಟು ಬೆಳೆದದ್ದು ಹೇಗೆ?

ದೆಹಲಿ ರೈತ ಹೋರಾಟಕ್ಕೆ ಇಷ್ಟು ದೊಡ್ಡ ಸಂಖ್ಯೆಯ ಜನ ಹೇಗೆ ಬಂದರು ಎನ್ನುವುದು ಕೂಡ ಈಗ ಚರ್ಚೆಯಾಗುತ್ತಿರುವ ವಿಷಯ. ಈ ಒಗ್ಗಟ್ಟನ್ನು ನೀವು ಕಾಣಬೇಕಾದರೆ ರೈತರ ಒಪ್ಪಿಗೆ ಇಲ್ಲದೇ ಭೂಮಿ ಸ್ವಾಧೀನಕ್ಕೆ ತೆಗೆದುಕೊಳ್ಳುವ ಭೂಸ್ವಾದೀನ ಸುಗ್ರೀವಾಜ್ಞೆ ರದ್ದು ಮಾಡಿಸಿಕೊಂಡ 2016 ರ ಚಳುವಳಿಯನ್ನು ನೆನಪಿಸಿಕೊಳ್ಳಬೇಕು.

ಈ ಸುಗ್ರಿವಾಜ್ಞೆಯನ್ನು ಶತಾಯಗತಾಯ ಜಾರಿ ಮಾಡಲೇಬೇಕೆಂದು ಹಲವು ಬಾರಿ ವಿಸ್ತರಿಸಲಾಗಿತ್ತು. ಭೂಮಿ ಅಧಿಕಾರ್ ಆಂದೋಲನದ ಮೂಲಕ ಒಗ್ಗಟ್ಟಿನ ಚಳವಳಿ ಮುಂದೆ ಇದೇ ಮೋದಿ ಸರ್ಕಾರ ಸೋಲಬೇಕಾಯಿತು.

ನವೆಂಬರ್ 2016 ರ ನೋಟು ರದ್ದು ಮುಂತಾದ ಮೋದಿ ಸರ್ಕಾರದ ಕ್ರಮಗಳಿಂದ ಕೃಷಿ ಉತ್ಪನ್ನಗಳ ಬೆಲೆ ಕುಸಿಯಿತು. ಕೃಷಿ ಉತ್ಪನ್ನಗಳ ಖರೀದಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಗೆ ಹಾಗೂ ಸಾಲ ಬಾಧೆ ಯಿಂದ ನರಳುತ್ತಿರುವ ರೈತಾಪಿ ಸಮುದಾಯವನ್ನು ಋಣಮುಕ್ತಗೊಳಿಸಲು ಒಂದು ಬಲವಾದ ಚಳವಳಿ ನಡೆಸಲು 2017 ರಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ ) ಅಸ್ತಿತ್ವಕ್ಕೆ ಬಂತು. ಇದೇ ಎಐಕೆಎಸ್‌ಸಿಸಿ ನೇತೃತ್ವದಲ್ಲಿ ಜೂನ್ 5 ,2020 ರ ಈ ಮೂರು ಸುಗ್ರಿವಾಜ್ಞೆಗಳನ್ನು ವಿರೋಧಿಸಿ ನಿರಂತರವಾಗಿ ಹಲವು ಹಂತಗಳ ಹೋರಾಟಗಳು ನಡೆದಿದ್ದು.

ರಾಜ್ಯಪಟ್ಟಿಯಲ್ಲಿ ಬರುವ ಕೃಷಿ ವಿಷಯದ ಮೇಲೆ ಕಾನೂನು ಮಾಡುವ ಅಧಿಕಾರ ಇಲ್ಲದೇ ಇದ್ದರೂ ಸಂವಿಧಾನ ವಿರೋಧಿಯಾದ ಶಾಸನ ಅಂಗೀಕರಿಸಿದ್ದು, ರಾಜ್ಯಸಭೆಯಲ್ಲಿ ಬಹುಮತ ಇಲ್ಲದೇ ಇದ್ದರೂ ಮತ ವಿಭಜನೆಯ ಅವಕಾಶ ನಿರಾಕರಿಸಿ ಸಂಸದೀಯ ನಿಯಮಗಳಿಗೆ ವಿರುದ್ಧವಾಗಿ ಶಾಸನ ಅಂಗೀಕರಿಸಿದ್ದು, ಲೋಕಸಭೆಯಲ್ಲಿ ಚರ್ಚೆಗೆ ಅವಕಾಶ ನೀಡದೇ ಇದ್ದದ್ದು, ಇವೆಲ್ಲವಕ್ಕೂ ಮೇಲಾಗಿ ಈ ಶಾಸನಗಳ ಸಂವಿಧಾನಾತ್ಮಕ ಸಿಂಧುತ್ವವನ್ನು ಪರಾಮರ್ಶೆಗೆ ಒಳಪಡಿಸಲು ನ್ಯಾಯಾಂಗ ನಿರಾಕರಿಸಿದ್ದು ಈ ರೈತ ವಿರೋಧಿ ಕಾನೂನುಗಳನ್ನು ಬೀದಿಯಲ್ಲಿ ಎದುರಿಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿ ಮಾಡಿತು. ಅದ್ದರಿಂದಲೇ 250 ಕ್ಕೂ ಹೆಚ್ಚು ಸಂಘಟನೆಗಳ ಎಐಕೆಎಸ್‌ಸಿಸಿ ನವೆಂಬರ್ 26, 2020 ರಂದು ದೆಹಲಿ ಚಲೋ ನಡೆಸುವಂತೆ ಕರೆ ನೀಡಿದ್ದು.

ಈಗ ಹೋರಾಟದ ಕಣದಲ್ಲೇ ಕೃಷಿ ಕಾಯ್ದೆಗಳ ವಿರುದ್ಧ ಜನಾಕ್ರೋಶ ಮತ್ತಷ್ಟು ಬೆಳೆದು 500 ಕ್ಕೂ ಹೆಚ್ಚು ಸಂಘಟನೆಗಳ ಸಂಯುಕ್ತ ಕಿಸಾನ್ ಮೋರ್ಚಾ (ಎಸ್.ಕೆ.ಎಂ.) ರೂಪುಗೊಂಡಿದೆ. ಹಿರಿಯ ಸಿಪಿಐ(ಎಂ) ಮುಖಂಡರಾದ ನೀಲೋತ್ಪಲ ಬಸು ಹೇಳುವಂತೆ ಈ ಸಂಘಟನೆಯಲ್ಲಿನ ಪ್ರಜಾಸತ್ತಾತ್ಮಕ ಮತ್ತು ಸಮಾಲೋಚನಾ ಕಾರ್ಯವಿಧಾನದಿಂದಾಗಿ ಇದು ಪ್ರಸಕ್ತ ಸನ್ನಿವೇಶದಲ್ಲಿ ರೈತಾಪಿಗಳ ನಡುವೆ ಇರುವ ಪ್ರಾದೇಶಿಕ, ರಾಜಕೀಯ ಮತ್ತು ಸೈದ್ಧಾಂತಿಕ ವೈವಿಧ್ಯತೆಗಳನ್ನು ಬಿಂಬಿಸುವ ಒಂದು ವಿಶಾಲ ರೈತ ಮಹಾಒಕ್ಕೂಟವಾಗಿ ಬೆಳೆದಿದೆ (Kisan Movement: Exploring the Class Underpinnings, People’s Democracy, ಫೆಬ್ರವರಿ 21) , ಕೃಷಿ ಕಾಯ್ದೆಗಳ ರದ್ದತಿ ಮಾತ್ರವೇ ಅಲ್ಲ, ಆ ನಂತರದ ಇಡೀ ದೇಶದ ಆರ್ಥಿಕತೆಯ ಬೆನ್ನೆಲುಬಾದ ರೈತಾಪಿ ಆರ್ಥಿಕತೆಯನ್ನು ಬಲಪಡಿಸಲು ಅಗತ್ಯವಾದ ಪರ್ಯಾಯ ಕೃಷಿ ಧೋರಣೆಗಾಗಿ ಸ್ಪಷ್ಟವಾದ ಗುರಿ ಉದ್ದೇಶಗಳ ಕಡೆಗೆ ಸಾಗುತ್ತಿದೆ.

(ಮೇಲಿನ ಎಲ್ಲ ಫೋಟೋಗಳು : ಹೆಚ್‍.ಆರ್.ನವೀನ್‍ ಕುಮಾರ್)

Donate Janashakthi Media

Leave a Reply

Your email address will not be published. Required fields are marked *