ಹೊಸದಿಲ್ಲಿ: ಚಾಕೋಲೇಟ್ ಹಾಗೂ ಕ್ಯಾಂಡಿಯ ಆಮೀಷವೊಡ್ಡಿ ಮಕ್ಕಳನ್ನು ನಿರ್ಜನ ಪ್ರದೇಶಗಳಿಗೆ ಕರೆದೊಯ್ದು 30 ಮಕ್ಕಳ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದಿದ್ದ ಪಾಪಿಯೊಬ್ಬನನ್ನು ಇಲ್ಲಿನ ರೋಹಿಣಿ ನ್ಯಾಯಾಲಯ ದೋಷಿ ಎಂದು ಘೋಷಿಸಿದೆ.
ಆರೋಪಿ ರವೀಂದರ್ ಕುಮಾರ್ ಎಂಬಾತ ಸುಮಾರು 30 ಮಕ್ಕಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದಾಗಿ ತಪ್ಪೋಪ್ಪಿಕೊಂಡಿರುವುದರಿಂದ ನ್ಯಾಯಾಲಯ ಆತನನ್ನು ದೋಷಿ ಎಂದು ಘೋಷಿಸಿದೆ.
ಅಮಾಯಕ ಮಕ್ಕಳ ಮೇಲೆ ನಿರ್ದಯಿಯಾಗಿ ನಡೆದುಕೊಂಡ ಪಾಪಿಗೆ ಶಿಕ್ಷೆಯಾಗಿರುವುದು ಅಮಾಯಕ ಮಕ್ಕಳ ಆತ್ಮಕ್ಕೆ ಶಾಂತಿ ಸಿಕ್ಕಂತೆ ಆಗಿದೆ ಎಂದು ಆರೋಪಿಯನ್ನು ಬಂಧಿಸಿದ್ದ ಅಂದಿನ ಡಿಸಿಪಿ ಇಂದಿನ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕ್ರಮ್‍ಜಿತ್‍ಸಿಂಗ್ ಅಭಿಪ್ರಾಯಪಟ್ಟಿದ್ದು, ಇದರಿಂದ ನ್ಯಾಯ ವ್ಯವಸ್ಥೆಯಲ್ಲಿ ನಮ್ಮ ನಂಬಿಕೆಯನ್ನು ಹೆಚ್ಚಿಸಿದೆ ಎಂದಿದ್ದಾರೆ.
ಆರೋಪಿ ಉತ್ತರ ಪ್ರದೇಶದ ಕಾಸ್ಗಂಜ್ ಮೂಲದವನು. ಅವರು ದೆಹಲಿ-ಎನ್‍ಸಿಆರ್ ಮತ್ತು ಪಶ್ಚಿಮ ಉತ್ತರ ಪ್ರದೇಶದ ಪ್ರದೇಶಗಳಲ್ಲಿ ಅಪರಾಧಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಯು ಮದ್ಯ ಮತ್ತು ಮಾದಕ ವ್ಯಸನಿಯಾಗಿದ್ದು, ಅಮಲೇರಿದ ಸ್ಥಿತಿಯಲ್ಲಿ ಮಕ್ಕಳಿಗೆ ಸಿಹಿ ತಿನಿಸಿ ಆಮಿಷವೊಡ್ಡಿ ಅತ್ಯಾಚಾರ ಮಾಡುತ್ತಿದ್ದ. ಒಂದು ವೇಳೆ ಮಕ್ಕಳು ವಿರೋಧ ವ್ಯಕ್ತ ಪಡಿಸಿದರೇ, ಮಕ್ಕಳನ್ನು ಕೊಂದು ಶವದ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.