ದಿಲ್ಲಿಯ ಲೇಡಿ ಶ್ರೀರಾಮ್ (ಎಲ್‌ಎಸ್‌ಆರ್) ಮಹಿಳಾ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಐಶ್ವರ್ಯಾ ರೆಡ್ಡಿ ನವಂಬರ್ 2ರಂದು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ದೇಶವನ್ನು ಮತ್ತೊಮ್ಮೆ ತಲ್ಲಣಗೊಳಿಸಿದೆ. ಇದರ ವಿರುದ್ಧ ದಿಲ್ಲಿಯಲ್ಲಿ ನವಂಬರ್ 9ರಂದು ವಿದ್ಯಾರ್ಥಿಗಳ, ಮಹಿಳೆಯರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕೆಗೆ ನ್ಯಾಯ ಸಲ್ಲುವಂತಾಗಬೇಕು ಎಂದು ಆಗ್ರಹಿಸಿವೆ.
ಐಶ್ವರ್ಯಾ ಒಬ್ಬ ಪ್ರತಿಭಾವಂತ ವಿದ್ಯಾರ್ಥಿನಿ. ರಾಜ್ಯದ ಬೋರ್ಡ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರಿಂದ ದಿಲ್ಲಿಯ ಪ್ರತಿಷ್ಠಿತ ಲೇಡಿ ಶ್ರೀರಾಮ ಕಾಲೇಜಿನಲ್ಲಿ ಗಣಿತಶಾಸ್ತ್ರ-ಬಿ.ಎ. ಯಲ್ಲಿ ಪ್ರವೇಶ ಪಡೆದಿದ್ದಳು. ಅಲ್ಲಿ ತನ್ನ ಪ್ರತಿಭೆಯಿಂದಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯದ ಪ್ರತಿಷ್ಠಿತ ಇನ್ಸ್ಪಾಯರ್ ಸ್ಕಾಲರ್‌ಶಿಪ್‌ಗೆ ಆಯ್ಕೆಯಾಗಿದ್ದಳು. ಆದರೆ ಒಂದು ವರ್ಷಕ್ಕೂ ಹೆಚ್ಚು ಅವಧಿಯ ಸ್ಕಾಲರ್‌ಶಿಪ್ ಮೊತ್ತ ಆಕೆಗೆ ಸಿಕ್ಕಿಲ್ಲ. ಅಯೋಜಿತ ಲಾಕ್‌ಡೌನ್ ಉಂಟು ಮಾಡಿದ ಬಿಕ್ಕಟ್ಟು ಆಕೆಯ ಬಲಿ ತೆಗೆದುಕೊಂಡಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾರ್ಚ್ ತಿಂಗಳ ನಂತರ ಮಂತ್ರಾಲಯ ಸ್ಕಾಲರ್‌ಶಿಪ್ ಹಣವನ್ನು ಬಿಡುಗಡೆ ಮಾಡುವುದನ್ನು ನಿಲ್ಲಿಸಿದ್ದರಿಂದ ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಎಂತಹ ಭೀಕರ ಆರ್ಥಿಕ ಸಂಕಟಗಳನ್ನು ಎದುರಿಸಬೇಕಾಗಿ ಬಂದಿದೆ ಎಂಬುದಕ್ಕೆ ಇದೊಂದು ಉದಾಹರಣೆ ಎಂದು ಅವರು ಹೇಳುತ್ತಿದ್ದಾರೆ.
ಲಾಕ್‍ಡೌನ್ ನಂತರ ಕಾಲೇಜಿನ ಹಾಸ್ಟೆಲ್ ನಲ್ಲಿ ಇರಲೂ ಅವಕಾಶವಿಲ್ಲದ್ದರಿಂದಾಗಿ ಊರಿಗೆ ಮರಳಲೇಬೇಕಾಗಿ ಬಂದ,ಆನ್‍ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ಐಶ್ವರ್ಯಾ ‘ನನ್ನಿಂದಾಗಿ ನನ್ನ ಕುಟುಂಬ ಆನೇಕ ಆರ್ಥಿಕ ಕಷ್ಟಗಳನ್ನು ಅನುಭವಿಸುತ್ತಿದೆ. ನಾನು ನನ್ನ ಕುಟುಂಬಕ್ಕೊಂದು ಹೊರೆಯಾಗಿದ್ದೇನೆ. ನನ್ನ ಶಿಕ್ಷಣವೂ ಹೊರೆಯಾಗಿದೆ. ನನಗೆ ಕಲಿಯಲು ಸಾಧ್ಯವಿಲ್ಲದಿದ್ದರೆ, ಬದುಕಲು ಸಾಧ್ಯವಿಲ್ಲ’ ಎಂದು ಚೀಟಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಳು ಎಂದು ವರದಿಯಾಗಿದೆ.
ಐಶ್ವರ್ಯಾಳ ಆತ್ಮಹತ್ಯೆ ಬಡ ಹಿನ್ನೆಲೆಯಿಂದ ಬಂದಿರುವ ಇನ್ನೊಬ್ಬ ಪ್ರತಿಭಾವಂತ ವಿದ್ಯಾರ್ಥಿಯ ಸಾಂಸ್ಥಿಕ ಕೊಲೆ ಎಂದು ಎಸ್. ಎಫ್.ಐ. ತನ್ನ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ಎಲ್.ಎಸ್.ಆರ್. ಕಾಲೇಜು ಸಂಘದ ಕರೆಗೆ ಓಗೊಟ್ಟ ವಿದ್ಯಾರ್ಥಿ ಸಂಘಟನೆಗಳು ಮತ್ತು ಮಹಿಳಾ ಸಂಘಟನೆಗಳು ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯದ ಕಚೇರಿ ಎದುರು ಪ್ರತಿಭಟನೆ ನಡೆಸಿ ಈ ಇಲಾಖೆಯ ಮಂತ್ರಿ ಡಾ.ಹರ್ಷವರ್ಧನ್ ಅವರು ಈ ಆತ್ಮಹತ್ಯೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹ ಪಡಿಸಿದ್ದಾರೆ.
“ಕಾಲೇಜು ಆಡಳಿತದ ಗಮನಕ್ಕೆ ವಿದ್ಯಾರ್ಥಿಗಳ ಆರ್ಥಿಕ ಮತ್ತು ಮಾನಸಿಕ ಆರೋಗ್ಯ ಹದಗೆಡುತ್ತಿದೆ ಎಂಬುದನ್ನು ಸತತವಾಗಿ ತಂದರೂ ಸಕಾರಾತ್ಮಕ ಕ್ರಮವನ್ನೇನೂ ಕೈಗೊಳ್ಳಲಿಲ್ಲ” ಎಂದು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತ ಎಲ್.ಎಸ್.ಆರ್. ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಉನ್ನಿಮಯ ಹೇಳಿದರು.
ಸರಕಾರ ಲಾಕ್‌ಡೌನ್ ಆದಂದಿನಿಂದ ವಿದ್ಯಾರ್ಥಿವೇತನಗಳನ್ನು ಬಿಡುಗಡೆ ಮಾಡಿಲ್ಲ. ಇದರಿಂದಾದ ಹಣಕಾಸು ಒತ್ತಡಗಳಿಂದಾಗಿಯೇ ಐಶ್ವರ್ಯಾ ಆತ್ಮಹತ್ಯೆ ಮಾಡಿಕೊಂಡಳು ಎಂದು ಜೆ.ಎನ್.ಯು. ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಆಯಿಷೆ ಘೋಷ್ ಹೇಳಿದರು.
ಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಎಸ್‌ಎಫ್‌ಐ ದಿಲ್ಲಿ ರಾಜ್ಯ ಜಂಟಿ ಕಾರ್ಯದಶಿ ಮೋನಿಕಾ ಶ್ರೀಸಾಯಿ ಆಗ್ರಹಿಸಿದರು.
ಉನ್ನಿಮಯ ಮತ್ತು ಮೋನಿಕಾ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಒಂದು ಮನವಿ ಪತ್ರ ಸಲ್ಲಿಸಿ ವಿದ್ಯಾರ್ಥಿಗಳ ಕಡೆಯಿಂದ ಈ ಕೆಳಗಿನ ಬೇಡಿಕೆಗಳನ್ನು ಮುಂದಿಟ್ಟರು:
* ಮಂತ್ರಿ ಹರ್ಷವರ್ಧನ್ ಈ ಘಟನೆಯ ಹೊಣೆ ಹೊತ್ತು ನೈತಿಕ ಆಧಾರದಲ್ಲಿ ಕೂಡಲೇ ರಾಜೀನಾಮೆ ನೀಡಬೇಕು.
* ಮಂತ್ರಾಲಯದ ನಿರ್ಲಕ್ಷ್ಯಕ್ಕೆ, ಸ್ಕಾಲರ್‌ಶಿಪ್ ಮೊತ್ತದ ಬಾಕಿಗೆ ಪ್ರತಿಯಾಗಿ ಐಶ್ವರ್ಯಾಳ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಒದಗಿಸಬೇಕು.
* ಎಲ್ಲ ಸ್ಕಾಲರ್‌ಶಿಪ್ ಮೊತ್ತಗಳನ್ನು ತಕ್ಷಣವೇ ಬಿಡುಗಡೆ ಮಾಡಬೆಕು.
* ಅಂಚಿಗೆ ತಳ್ಳಲ್ಪಟ್ಟ ವಿಭಾಗಗಳಿಂದ ಬರುತ್ತಿರುವ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆಯ ಪ್ರಮಾಣ ಹೆಚ್ಚುತ್ತಿದೆ. ಸರಕಾರ ಕೂಡಲೇ ವಿದ್ಯಾರ್ಥಿ ಸಮುದಾಯವನ್ನು ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
“ಶಾಲೆ, ಕಾಲೇಜ್ ಮತ್ತು ವಿ.ವಿ. ಶುಲ್ಕಗಳು ಹೆಚ್ಚಿರುವುದು ಒಂದು ಪ್ರಮುಖ ಸಮಸ್ಯೆ. ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ಗಳ ಅಗತ್ಯ ಎಷ್ಟಿದೆ ಎಂಬುದಕ್ಕೆ ಇದು ಇತ್ತೀಚಿನ ಉದಾಹರಣೆಯಷ್ಟೆ. ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ನಿಧಿಗಳನ್ನು ಕೊಡುವಲ್ಲಿ ಸರಕಾರದ ವಿಳಂಬ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಮೇಲೆ ಅಪಾರ ಒತ್ತಡಗಳನ್ನು ಹೇರುತ್ತಿವೆ” ಎಂದು ಎನ್‌ಎಸ್‌ಯುಐ ರಾಷ್ಟ್ರೀಯ ಕಾರ್ಯದರ್ಶಿ ಲೋಕೇಶ್ ಚುಗ್ ಟಿಪ್ಪಣಿ ಮಾಡಿದ್ದಾರೆ.
ಈ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತಿರುವ ಎಲ್ಲ ಶಕ್ತಿಗಳೊಂದಿಗೆ ತಾನೂ ನಿಲ್ಲುವುದಾಗಿ ಹೇಳಿರುವ ಎ.ಐ.ಎಸ್.ಎ, ನಿಲ್ಲಿಸಿರುವ ಎಲ್ಲ ಸ್ಕಾಲರ್‌ಶಿಪ್‌ಗಳನ್ನು ತಕ್ಷಣವೇ ಪಾವತಿ ಮಾಡಬೇಕು ಎಂದು ಆಗ್ರಹಿಸಿದೆ.
ಇದು ಯುವ ವಿದ್ಯಾರ್ಥಿನಿಯೊಬ್ಬಳ ಕೊಲೆ– ಮಹಿಳಾ ಸಂಘಟನೆ ಖಂಡನೆ
ಈ ಸಂದರ್ಭದಲ್ಲಿ ರೋಹಿತ್ ವೆಮುಲಾ ನೆನಪಾಗುತ್ತಿದೆಯೇ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲ್ಯುಎ) ತನ್ನ ಹೇಳಿಕೆಯಲ್ಲಿ ಖೇದದಿಂದ ಕೇಳಿದೆ.
ತೆಲಂಗಾಣದ ಸಾಮಾನ್ಯ ಹಿನ್ನೆಲೆಯ ಕುಟಂಬವೊಂದಕ್ಕೆ ತಮ್ಮ ಮಗಳನ್ನು ದಿಲ್ಲಿಯಲ್ಲಿ ಉನ್ನತ ಶಿಕ್ಷಣಕ್ಕೆ ಕಳುಹಿಸುವುದೇ ಒಂದು ಸವಾಲು. ಅದು ಅವರ ಕಟುಂಬದ ಮೇಲೆ ಎಂತಹ ಹಣಕಾಸು ಹೊರೆ ಹಾಕಿತೆಂದರೆ, ಅವರು ತಮ್ಮ ಮನೆಯನ್ನೇ ಒತ್ತೆಯಿಡಬೇಕಾಗಿ ಬಂತು. ಲಾಕ್‌ಡೌನ್ ನೆಪ ಮಾಡಿ ವಿದ್ಯಾರ್ಥಿವೇತನಗಳನ್ನು ನಿಲ್ಲಿಸಿದ ಸರಕಾರ ಅವರ ಶುಲ್ಕಗಳ ಪಾವತಿಗೆ ವಿನಾಯ್ತಿ-ರಿಯಾಯ್ತಿಗಳನ್ನೇನೂ ಕೊಡಲಿಲ್ಲ.
ದೇಶದಲ್ಲಿ ಉನ್ನತ ಶಿಕ್ಷಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ಹೋರಾಟ ನಡೆಸಬೇಕಾಗಿ ಬಂದಿದೆ. ಅವರು ಕನಸು ಕಾಣುತ್ತಾರೆ, ಪರೀಕ್ಷೆಗಳಲ್ಲಿ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ, ಆದರೆ ಸರಕಾರ ಮತ್ತು ಆಡಳಿತದಿಂದ ಅವರಿಗೆ ಸಿಗುವುದು ಉಪೇಕ್ಷೆಯಷ್ಟೇ ಎಂದು ಎಐಡಿಡಬ್ಲ್ಯುಎ ಅಭಿಪ್ರಾಯ ಪಟ್ಟಿದೆ.
ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಹೆಣ್ಣು ಮಕ್ಕಳ ದಾಖಲಾತಿ ಅನುಪಾತ ಅತ್ಯಂತ ಕೆಳಮಟ್ಟದಲ್ಲಿರುವ ಈ ದೇಶದಲ್ಲಿ ಶಿಕ್ಷಣ ಪಡೆಯುವ ಕನಸಿನೊಂದಿಗೆ ಶ್ರಮಪಟ್ಟು ದಿಲ್ಲಿಗೆ ಬಂದ ಐಶ್ವರ್ಯಾಳನ್ನು ಸಾಯಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 , ಈ ಕಂದರವನ್ನು ಮತ್ತಷ್ಟು ಹೆಚ್ಚಿಸಲಿದೆ, ಹಣ ಇಲ್ಲದವರಿಗೆ ಶಿಕ್ಷಣ ಪಡೆಯುವ ಅರ್ಹತೆಯೇ ಇಲ್ಲದಂತೆ ಮಾಡುತ್ತಿದೆ.
ಪ್ರಸಕ್ತ ಬಿಜೆಪಿ ಕೇಂದ್ರ ಸರಕಾರ ಭಾರತೀಯ ವಿದ್ಯಾರ್ಥಿಗಳು ಮತ್ತು ನಾಗರಿಕರನ್ನು ಕುರಿತ ತನ್ನ ಎಲ್ಲ ನಡೆಗಳಲ್ಲೂ ಇಂತಹ ಕ್ರಿಮಿನಲ್ ವರ್ತನೆಯನ್ನು ತೋರುತ್ತಿದೆಯಷ್ಟೇ ಅಲ್ಲ, ನ್ಯಾಯ ಮತ್ತು ಸಮಾನತೆಯ ಎಲ್ಲ ನೀತಿಗಳನ್ನೂ ಕ್ಷಯಗೊಳಿಸಿದೆ.
ಇದು ಒಬ್ಬ ಯುವ ವಿದ್ಯಾರ್ಥಿನಿಯ ಕೊಲೆ ಎಂದು ಖಂಡಿಸಿರುವ ಎಐಡಿಡಬ್ಲ್ಯುಎ, ಬಾಕಿಯಿರುವ ಎಲ್ಲ ವಿದ್ಯಾರ್ಥಿವೇತನ ಮೊತ್ತವನ್ನೂ ಆಕೆಯ ಪಾಲಕರಿಗೆ ಕೊಡಬೇಕು ,ಜತೆಗೆ ಸೂಕ್ತ ಹೆಚ್ಚುವರಿ ಪರಿಹಾರವನ್ನೂ ಕೊಡಬೇಕು ಎಂದು ಆಗ್ರಹಿಸಿದೆ. ಎಲ್ಲ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ಗಳನ್ನು ತಕ್ಷಣವೇ ಪಾವತಿ ಮಾಡಬೆಕು, ಆಮೂಲಕ, ವಿಶೇಷವಾಗಿ ಈ ಕೊವಿಡ್ ದುರಿತ ಸಮಯದಲ್ಲಿ ಯಾವ ವಿದ್ಯಾರ್ಥಿಯೂ ಸಂಕಟಗಳನ್ನು ಅನುಭವಿಸದಂತೆ ಖಾತ್ರಿಪಡಿಸಬೇಕು ಎಂದು ಅದು ಆಗ್ರಹಿಸಿದೆ.